ಹಾಗೆ ಸುಮ್ಮನೆ
ಒಂದು ಕತೆ ಇದೆ. ರಾಮಾನುಜಾಚಾರ್ಯರ ಹೆಸರಿನಲ್ಲಿ...
ರಾಮಾನುಜಾಚಾರ್ಯರು ತಮ್ಮ ಗುರುಗಳ ಹತ್ತಿರ ಹಲವು ವರ್ಷಗಳು ಇದ್ದು ಅವರ ಸೇವೆ ಮಾಡಿ ಕೊನೆಗೆ ಒಂದು ದಿನ ಗೌಪ್ಯ ಮಂತ್ರವೊಂದರ ಉಪದೇಶ ಪಡೆದುಕೊಂಡರಂತೆ. ಮಂತ್ರೋಪದೇಶ ಮಾಡಿದ ಗುರುಗಳು " ಸರಿಯಾಗಿ ನೆನಪಿನಲ್ಲಿ ಇಡು, ಈ ಮಂತ್ರವನ್ನ ನೀನು ಎಂದಿಗೂ ಬಾಯಿಬಿಟ್ಟು ಹೇಳಬಾರದು. ಹೇಳಿದಾಗ ಇದನ್ನ ಯಾರಾದರೂ ಕೇಳಿಸಿಕೊಂಡುಬಿಟ್ಟರೆ ಅವರು ಸತ್ತಮೇಲೆ ನೇರ ಸ್ವರ್ಗಕ್ಕೆ ಹೋಗ್ತಾರೆ ನೀನು ಮಾತ್ರ ಸೀದಾ ನರಕಕ್ಕೆ ಹೋಗ್ತೀಯ" ಅಂತ ಹೇಳಿದರಂತೆ.
ಇದನ್ನ ಕೇಳಿಸಿಕೊಂಡ ರಾಮಾನುಜರು " ಗುರುಗಳೇ ಇದು ನಿಜವಾ?, ಇದನ್ನ ಕೇಳಿಸಿಕೊಂಡವರೆಲ್ಲ ನಿಜವಾಗಿ ನೇರವಾಗಿ ಸ್ವರ್ಗಕ್ಕೆ ಹೋಗ್ತಾರಾ !" ಅಂತ ಕೇಳಿದ್ರಂತೆ. ಅದಕ್ಕೆ ಗುರುಗಳು ಖಂಡಿತ ಹೌದು. ಅಂತ ಹೇಳಿದ್ದೇ ತಡ ಸೀದಾ ಶ್ರೀರಂಗಂ ನ ದೇವಸ್ಥಾನದ ದೊಡ್ಡ ಗೋಪುರ ಹತ್ತಿ ಅದರ ಮೇಲಿಂದ " ಓಂ ನಮೋ ನಾರಾಯಣಾಯ" ಅಂತ ಕೂಗಿ ಕೂಗಿ ಹೇಳೋಕೆ ಶುರು ಮಾಡಿದ್ರಂತೆ. ಗುರುಗಳಿಗೆ ಮತ್ತೆ ಅಲ್ಲಿದ್ದ ಉಳಿದ ಅರ್ಚಕರು ಇವರಿಗೆಲ್ಲ ಕೋಪ, ಆಶ್ಚರ್ಯ ಒಂದೇ ಸಲಕ್ಕೆ.
ರಾಮಾನುಜರು ಕೂಗೋ ಅಷ್ಟೂ ಕೂಗಿ ಸಮಾಧಾನ ಆದಮೇಲೆ ಕೆಳಗೆ ಇಳಿದು ಬಂದರಂತೆ. ಆಗ ಗುರುಗಳು " ಲೋ ಮೂರ್ಖ, ನಾನು ಮೊದಲೇ ಹೇಳಿಲ್ವಾ. ಇದನ್ನ ಯಾರಿಗೂ ಹೇಳಬಾರದು, ಹೇಳಿದರೆ ನೀನು ಸೀದಾ ನರಕಕ್ಕೆ ಹೋಗ್ತೀಯ. ಕೇಳುಸಿಕೊಂಡವರು ಸ್ವರ್ಗಕ್ಕೆ ಹೋಗ್ತಾರೆ ಅಂತ. ಎಂತ ಕೆಲಸ ಮಾಡಿಬಿಟ್ಟೆ ನೀನು" ಅಂತ ಬೈತಾ ಇದ್ದರಂತೆ.
ಆಗ ರಾಮಾನುಜರು "ಇಲ್ಲ ಗುರುಗಳೇ. ಈ ಮಂತ್ರ ಕೇಳಿಸಿಕೊಂಡವರೆಲ್ಲ ಸ್ವರ್ಗಕ್ಕೆ ಹೋಗುವುದು ನಿಜವೇ ಆದರೆ, ನಾನೊಬ್ಬ ಯಾಕೆ ನರಕಕ್ಕೆ ಹೋಗಬಾರದು. ಇಷ್ಟೊಂದು ಜನ ಸ್ವರ್ಗಕ್ಕೆ ಹೋಗುವುದಾದರೆ, ಅವರಿಗಾಗಿ ನಾನು ನರಕಕ್ಕೆ ಹೋಗುವುದಕ್ಕೆ ಸಿದ್ಧ" ಅಂದರಂತೆ. ಕೇಳಿಸಿಕೊಂಡ ಗುರುಗಳು ಸಹ ಅವನ ಕಾರುಣ್ಯಕ್ಕೆ, ದೊಡ್ಡತನಕ್ಕೆ ಸೋತುಹೋಗಿ ರಾಮಾನುಜರಿಗೆ ಶರಣು ಮಾಡಿದರಂತೆ.
ಇದೊಂದು ಕತೆ ಅಷ್ಟೇ ಇರಬಹುದು. ಆದರೆ ಇದು ನಮಗೆಲ್ಲ ಸ್ಪೂರ್ತಿ ಆಗುವ ಕತೆ. ಒಳ್ಳೆಯದನ್ನ ಮಾಡುವುದರಿಂದ ನರಕಕ್ಕೆ ಹೋಗಬೇಕಾಗುತ್ತೆ ಅಂತ ಆದರೆ, ನಾವು ಆಗಲೂ ಒಳ್ಳೆಯದನ್ನೇ ಮಾಡಬೇಕು. ಸ್ವರ್ಗದ ಆಸೆಗೆ ಒಳ್ಳೆಯ ಕೆಲಸ ಮಾಡುವುದು ಅಂದರೆ ಅದು ಸ್ವಾರ್ಥ ಅಲ್ವಾ ? ನಮ್ಮದು unconditional service ಆಗಿರಬೇಕು.
ಮತ್ತೆ ಒಳ್ಳೆಯದಕ್ಕೆ ಸ್ವರ್ಗ, ಕೆಟ್ಟದಕ್ಕೆ ನರಕ್ಕ ಅನ್ನುವುದಕ್ಕೆ ಇದು ವ್ಯಾಪಾರ ಅಲ್ಲವಲ್ಲ!.
*ಜಗತ್ತಿನ ನಿಯಾಮಕನ ತೊಡೆಯ ಮೇಲೆ ಆಡುವವರನ್ನ ಅವನ ನಿಯಮಗಳು ಬಂಧಿಸಲಾರವು*
Comments
Post a Comment