ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

 ಶರಣರ ಚಿಂತನ ಮಾಲಿಕೆ

ವಚನಗಳಲ್ಲಿ ಗುರು. 


(ಚಿತ್ರ ಕೃಪೆ : ಅಂತರ್ಜಾಲ)

೧೨ ನೇ ಶತಮಾನದಲ್ಲಿ ಪ್ರಾರಂಭವಾದ ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ಅತ್ಯಂತ ಪ್ರಮುಖ ಘಟ್ಟ. ಅಂದಿನಿಂದ ಇಂದಿನವರೆಗೂ ವಚನ ಸಾಹಿತ್ಯದ ಕುರಿತಾಗಿ ಹಲವು ಸಂಶೋಧನೆಗಳು ಹಾಗೂ ಸಂಶೋಧನೆಯ ಹೊಸ ಹಾದಿಗಳು ತೆರೆದುಕೊಳ್ಳುತ್ತಲೇ ಇವೆ. ಕನ್ನಡ ಸಾಹಿತ್ಯವನ್ನು ಕಠಿಣವಾದ ಮಾರ್ಗ ಶೈಲಿಯಿಂದ ಬಿಡಿಸಿ ಜನಸಾಮಾನ್ಯರಿಗೆ ಹತ್ತಿರವಾಗುವ ಹಾಗೆ ಮಾಡಿದ ಕೀರ್ತಿ ವಚನ ಸಾಹಿತ್ಯಕ್ಕೆ ಸಲ್ಲಬೇಕು.  ವಚನ ಸಾಹಿತ್ಯದ ಜನಪ್ರಿಯತೆಗೆ ಅದರ ಸರಳತೆ ಒಂದು ಕಾರಣವಾದರೆ ಅದರ ಅಗಾಧತೆ, ತೀಕ್ಷ್ಣ ವೈಚಾರಿಕತೆ, ಸಮಾನತೆ, ಹಾಗೂ ಸಮಕಾಲೀನತೆಯ ಗುಣ ಮತ್ತೊಂದು ಪ್ರಮುಖ ಕಾರಣವಾಗಿದೆ. ಕನ್ನಡ ಭಾಷೆಯು ಜಾಗತಿಕವಾಗಿ ಗುರುತಿಸಿಕೊಳ್ಳುವಲ್ಲಿಯೂ ವಚನ ಸಾಹಿತ್ಯದ ಪಾತ್ರ ಬಹುಮುಖ್ಯವಾದ್ದು. 

ವಚನ ಸಾಹಿತ್ಯವು ಮೂಲತಃ ಒಂದು ಚಳುವಳಿ, ಇದನ್ನು ಸಮಾಜೋಧ್ಧಾರ್ಮಿಕ ಚಳುವಳಿ ಎಂದು ವ್ಯಾಖ್ಯಾನಿಸಲಾಗಿದೆ. ಇದು ಒಂದು ಹೊಸ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸಾಧನಾ ಮಾರ್ಗವಾಗಿ ಪ್ರಾರಂಭವಾಗಿ ತನ್ನದೇ ಆದ ಹಲವು ಹೊಸ ಪರಿಭಾಷೆಗಳನ್ನು ಸೃಷ್ಠಿಸಿಕೊಂಡಿತು, ಅವುಗಳಲ್ಲಿ ಲಿಂಗಧಾರಣೆಯಂತಹ ಆಚರಣಾ, ಆರಾಧನಾ, ಆಧ್ಯಾತ್ಮಿಕ ಸಾದನಾ ವಿಧಾನಗಳು ಹಾಗೂ  ಕಾಯಕ, ಅನುಭಾವ, ಅಷ್ಟಾವರಣ, ಇಷ್ಟಲಿಂಗ, ಪಂಚಾಚಾರ, ಷಟ್ಸಲದ ಪರಿಕಲ್ಪನೆಗಳು ಮುಖ್ಯವಾದವು. ಇವುಗಳಲ್ಲಿ ಅಷ್ಟಾವರಣ ಬಹು ಮುಖ್ಯ, ಅವು  ʼಗುರುʼ ʼಲಿಂಗʼ ʼಜಂಗಮʼ ʼವಿಭೂತಿʼ ʼರುದ್ರಾಕ್ಷಿʼ ʼಮಂತ್ರʼ ʼಪಾದೋದಕʼ ಮತ್ತು ʼಪ್ರಸಾದʼ ಇವುಗಳು ಅತಿ ಹೆಚ್ಚು ಉಲ್ಲೇಖಗೊಳ್ಳುವ ಪರಿಭಾಷೆಗಳು. ಪ್ರಸ್ತುತ ಲೇಖನದಲ್ಲಿ ನಾವು ʼಗುರುʼ ಎಂಬುದನ್ನು ವಿವಿಧ ವಚನಕಾರರ ಹೇಗೆ ವ್ಯಾಖ್ಯಾನಿಸಿದ್ದಾರೆ ಎಂದು ಗಮನಿಸೋಣ.

ನಮ್ಮ ಭಾರತೀಯ ದರ್ಶನಗಳಲ್ಲಿ ʼಗುರುʼ ಎಂಬುದು ಬಹು ಚರ್ಚಿತವಾದ ಪರಿಭಾಷೆ.  ಮೂಲತಃ ಇದೊಂದು ಸಂಸ್ಕೃತದ ಪದ. ಇದರ ಅರ್ಥವನ್ನು ʼಗುʼ ಎಂದರೆ ಕತ್ತಲು ಹಾಗೂ ʼರುʼ ಎಂದರೆ ಧೂರಿಕರಿಸು ಗುರು ಅನ್ನುವುದಕ್ಕೆ ಭಾರವಾದ ಎಂಬ ಅರ್ಥವೂ ಇದ್ದು ʼಯಾರು ಜ್ಞಾನದಿಂದ ಭಾರವಾಗಿರುವನೋ ಅವನೇ ಗುರುʼ ಎಂಬ ಅರ್ಥವನ್ನು ಹೇಳಲಾಗಿದೆ. ಹಲವು ಧರ್ಮ, ದರ್ಶನ, ಮತ, ಪಂಥ, ಗಳನ್ನು ಮುಖ್ಯವಾಗಿ ವೈಧಿಕ, ಅವೈಧಿಕ ಧಾರೆಗಳ ಸೇರುವಿಕೆಯಿಂದ ನಮ್ಮ ಭಾರತೀಯ ಆಧ್ಯಾತ್ಮಿಕ ಪರಂಪರೆ   ಬಹುತ್ವದ ಪರಂಪರೆಯೆನಿಸಿಕೊಂಡಿದೆ. ಎಲ್ಲಾ ಭಾರತೀಯ ದರ್ಶನಗಳು ಹಲವು ವಿಚಾರಗಳಲ್ಲಿ ಒಂದಕ್ಕೊಂದು ವಿರುದ್ಧದ ನಿಲುವುಗಳನ್ನು ಹೊಂದಿದ್ದರು ಸಹಾ ಎಲ್ಲಾ ದರ್ಶನ, ಮತ, ಪಂಥ, ಧರ್ಮ ಹಾಗೂ ನಂಬಿಕೆಗಳಲ್ಲಿಯೂ ಗುರುವಿಲ್ಲದೇ ಭಾರತೀಯ ದರ್ಶನ ಪರಂಪರೆಯೇ ಇಲ್ಲ ಎಂದು ಹೇಳಬಹುದಾದ ಮಟ್ಟಿಗೆ ʼಗುರುʼ ತತ್ವ ಚಿಂತನೆಯನ್ನು  ನಾವು ಗುರುತಿಸಬಹುದು. 

ಭಾರತದಲ್ಲಿ ಹಲವಾರು ಗುರು ಪಂಥಗಳು ಇವೆ. ಸೂಫಿ ಪಂಥ, ದಾಸ, ತತ್ವಪದ ಪರಂಪರೆ. ಅಚಲ, ಆರೂಢ, ಅವಧೂತ ಸೇರಿದಂತೆ  ಹಲವಾರು ಪಂಥ, ಪರಂಪರೆ, ದರ್ಶನಗಳನ್ನು ನಾವು ಇಲ್ಲಿ ಕಾಣಬಹುದು. ಈ ಪರಂಪರೆಗಳಲ್ಲಿ ಕೆಲವು ಅವೈಧಿಕ ಪರಂಪರೆಗಳಾದರೂ ಸಹಾ ಗುರುವಿಗೆ ಇಲ್ಲಿ ಪ್ರಮುಖ ಸ್ಥಾನ. ಹಾಗೆ ನೋಡಿದರೆ ಇಲ್ಲಿನ ಕೆಲವು ಪಂಥಗಳು ದೇವರನ್ನು ಮಾನ್ಯ ಮಾಡುವುದಿಲ್ಲ, ಇವರ ಪಾಲಿಗೆ ಗುರುವೇ ದೇವರು. ಇಂತಹಾ ಪಂಥ, ಪರಂಪರೆಗಳಿಗೆ ವಚನ ಯುಗದ ಶರಣರನ್ನು ಹಾಗೂ ಆ ಕಾಲದ  ಸಾಹಿತ್ಯವನ್ನೇ ಮೂ ಎಂದು ಗುರುತಿಸುವರು. 

ಶರಣರು ತಮ್ಮ ವಚನಗಳ ಮೂಲಕ ಗುರುವಿನ ಮಹತ್ವವನ್ನು ಪರಿ ಪರಿಯಾಗಿ ವಿವರಿಸಿದ್ದಾರೆ. ಜೊತೆಗೆ ಗುರು ಹೇಗಿರಬೇಕು, ಹೇಗಿರಬಾರದು. ಗುರುವಿನ ನೈಜ ಲಕ್ಷಣಗಳೇನು?  ಎಂಬುದನ್ನು ವಿಮರ್ಶಾತ್ಮಕವಾಗಿ ಹಾಗೂ ವಿಡಂಬನಾತ್ಮಕವಾಗಿ ವಿವರಿಸುತ್ತಾರೆ. ಕಡೆಗೆ ಗುರುವಿನ ಸ್ವರೂಪವನ್ನು ವ್ಯಕ್ತಿಯಿಂದ ಅರಿವಿಗೆ ಪರಿವರ್ತಿಸುವುದು ಇಲ್ಲಿನ ವಿಶೇಷ.  ಮೊದಲಿಗೆ ಬಸವಣ್ಣನವರು ತಮ್ಮ ಒಂದು ವಚನದಲ್ಲಿ ʼʼಮಡಕೆಯ ಮಾಡುವಡೆ ಮಣ್ಣೆ ಮೊದಲು, … ..ಶಿವಪಥವನರಿವಡೆ ಗುರುಪಥವೆ ಮೊದಲು, ಕೂಡಲಸಂಗಮದೇವರನರಿವಡೆ   ಶರಣರ ಸಂಗವೇ ಮೊದಲು.”  ಎಂದು ಶಿವ ಪಥವನ್ನು ಅರಿಯಬೇಕಾದರೇ, ಗುರು ಪಥವನ್ನು ಮೊದಲು ಅರಿಯಬೇಕು ಆಗ ಮಾತ್ರ ಶಿವಪಥದ ಅರಿವು ನಮಗೆ ಸಿಗುವುದು ಎಂಬುದನ್ನು ವಿವರಿಸಿದ್ದಾರೆ.

 ಮತ್ತೊಂದು ವಚನದಲ್ಲಿ ಗುರು ವಚನದ ಮಹತ್ವವನ್ನು ವಿವರಿಸುತ್ತಾ “ಗುರು ವಚನವಲ್ಲದೆ ಲಿಂಗವೆಂದೆನಿಸದು………… ತಲೆಯಿಲ್ಲದ ಅಟ್ಟೆಗೆ ಪಟ್ಟವ ಕಟ್ಟುವ ಉಭಯ ಭ್ರಷ್ಟರ ಮೆಚ್ಚುವನೆ, ನಮ್ಮ ಕೂಡಲಸಂಗಮದೇವಾ ?” ಎಂಬ ಈ ವಚನದಲ್ಲಿ ಗುರುವಚನವಲ್ಲದೇ ಲಿಂಗ, ಜಂಗಮ, ನೇಮ, ಮುಂತಾದವು ಆಗುವುದಿಲ್ಲವೆಂದು ಹೇಳುತ್ತಲೇ ತಲೆಯಿಲ್ಲದ ಅಟ್ಟೆಗೆ ಪಟ್ಟವ ಕಟ್ಟುವ ಉಭಯ ಭ್ರಷ್ಟರು ಎಂಬ ವಾಕ್ಯದ ಮೂಲಕ ಗುರು ಹಾಗೂ ಶಿಷ್ಯರಿಬ್ಬರನ್ನು ನೀತಿ ತಪ್ಪಿದರೆ ಕೂಡಲಸಂಗಮದೇವರು ಮೆಚ್ಚುವುದಿಲ್ಲ ಎಂಬ ಎಚ್ಚರಿಕೆಯನ್ನು ಬಸವಣ್ಣನವರು ನೀಡುವರು.  ಮತ್ತೊಂದು ವಚನದಲ್ಲಿ  ʼʼಗುರು ಉಪದೇಶ ಮಂತ್ರವೈದ್ಯ”  ಎಂದು ಹೇಳುವರು.  ಹಾಗೇ ಬಸವಣ್ಣನವರು ತಮ್ಮ ʼʼಕೇಳಿರೆ ಕೇಳಿರೆ ಹಿರಿಯರು, ಗುರುವಿನ ಉಪದೇಶವನ್ನು;” ಎಂಬ ಮತ್ತೊಂದು ವಚನದಲ್ಲಿ “………….. ನಮ್ಮ ಕೂಡಲಸಂಗನ ಶರಣರ ಉಪದೇಶವ ಕೇಳಿದವರಿಗೆ ದುರಿತ ಪಾಪಂಗಳು ಬಿಟ್ಟು ಹೋಗಿ, ಮನ ನಿರುತರಾಗಿಪ್ಪರಾ ಲಿಂಗದಲ್ಲಿ.” ಎಂದು ಶರಣರ ಉಪದೇಶದ ಮಹತ್ವವನ್ನು ವಿವರಿಸುವರು. 

ಮತ್ತೊಂದು ವಚನದಲ್ಲಿ. “ಗುರು ಕಾರುಣ್ಯವೇ ಸದಾಚಾರ ಗುರು ಕಾರುಣ್ಯವೇ ಪ್ರಸಾದ ರುಚಿ ಮುಂದೆ ಗುರು ಹಿಂದೆ ಲಿಂಗ  ಕೂಡಲಸಂಗಮದೇವಾ.”  ಎಂದು ಗುರುವಿನ ಮಹತ್ವವನ್ನು ಹೇಳುತ್ತಾ ಮತ್ತೊಂದು ವಚನದಲ್ಲಿ “ಗುರುಲಿಂಗ ಜಂಗಮವ ನಂಬಿ ಕರೆದಡೆ, ಓ ಎಂಬ ಶಿವನು. ನಂಬದೆ ಕರೆದಡೆ ಓ ಎಂಬನೇ ಶಿವನು ?” ಎಂದು ಪ್ರಶ್ನೆಸುವುದರ ಮೂಲಕ ಗುರುವಿನ ಮೇಲೆ ನಂಬಿಕೆ ಇಲ್ಲದೆ ಹೋದರೆ, ಗುರು ಲಿಂಗ ಜಂಗಮಗಳಲ್ಲಿ ಸಂಪೂರ್ಣ ವಿಶ್ವಾಸವನ್ನಿಡದಿದ್ದರೆ  ಶಿವನು ನಮ್ಮ ಕರೆಗೆ ಸ್ಪಂದಿಸುವುದಿಲ್ಲ ಎಂದು ಹೇಳುವರು.

ಮುಂದೆ ಶರಣ ಅರಿವಿನ ಮಾರಿತಂದೆ ಅವರು ತಮ್ಮ ವಚನಗಳಲ್ಲಿ ಗುರುವಿನ ಮಹತ್ವವನ್ನು ವಿವರಿಸುತ್ತಾ  “ಗುರುವಾದಲ್ಲಿ ಭವಂ ನಾಸ್ತಿಯಾಗಬೇಕು……….”ಎನ್ನುವರು.  ಮತ್ತೊಂದು ಕಡೆ “ಗುರುಚರಪರದ ಇರವು ಹೇಗಿರಬೇಕೆಂದಡೆ :  ಉರಿಯನೊಳಕೊಂಡ ಕಲ್ಲಿನಂತಿರಬೇಕು, ತೈಲವನೊಳಕೊಂಡ ತಿಲದಂತಿರಬೇಕು ……….” ಉರಿಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಕಲ್ಲು ಹಾಗೂ ಎಣ್ಣೆಯನ್ನೊಳಕೊಂಡ ಎಳ್ಳಿನಂತೆ ಗುರುವು ಮೇಲ್ನೋಟಕ್ಕೆ ಕಾಣದೇ ಇದರೂ ಆಂತರ್ಯದಲ್ಲಿ ಉತ್ತಮ ಗುಣ ಹಾಗು ಆದರ್ಶಗಳನ್ನು ಒಳಗೊಂಡಿರಬೇಕೆಂದು ಹೇಳುವರು. ಮತ್ತೊಂದು ವಚನದಲ್ಲಿ ಗುರುವಿನ ಲಕ್ಷಣ ಮತ್ತು  ಇರವನ್ನು ವಿವರಿಸುತ್ತಾ. “ಗುರುಚರಮೂರ್ತಿ ಪೂಜಿಸಿಕೊಂಬಲ್ಲಿ ತಮ್ಮ ವಿವರವ ತಾವರಿಯಬೇಕು. ಹೆಣ್ಣು ಹೊನ್ನು ಮಣ್ಣು ಹೊರಗೆಂದು ಕೆಲವರಿಗೆ ಹೇಳಿ ಗನ್ನದಿಂದ ತಾವು ಗಳಿಸಿಕೂಡುವುದು, ಅದು ತಾನೆ ಅನ್ಯಾಯವಲ್ಲವೇ ?...........” ಹೀಗೆ ಗುರುವಿನ ನಡೆ ನುಡಿ ಒಂದೇ ಇರಬೇಕೆಂದು ವಿವರಿಸುವರು. ಮುಂದೆ  ನಿಜಗುರುವಿನ ಇರವು ಹೇಗಿರಬೇಕೆಂದಡೆ:  ನಿರ್ಮಲ ಸುಚಿತ್ತನಾಗಿ ತನ್ನ ಸೊಂಕುವ ಸುಖದುಃಖಗಳು ಬಂದಲ್ಲಿ ಆಗುಚೇಗೆಯನರಿಯದೆ, ಫಲವ ಹೊತ್ತ ತರುವುನಂತೆ, ಕೆಚ್ಚಲ ಕ್ಷೀರದಂತೆ,……” ಎಂದು ಹೇಳುವರು.  ಮತ್ತೊಂದು ಕಡೆ  “ಗುರುಶಿಷ್ಯನ ಇರವಿನ ಸ್ಥಲವೆಂತುಟೆಂದಡೆ: ಮಣಿ ದಾರವ ನುಂಗಿ ಸರವಾಗಿ ನಿಂದು ಕಾಣಿಸಿಕೊಂಡಂತಿರಬೇಕು……” “ಗುರುವಾದೊಡೂ ಮಲತ್ರಯದಾಸೆ ಉಳ್ಳನ್ನಕ್ಕ ಮಲದೇಹಿ. ಲಿಂಗವಾದಡೂ ಶಕ್ತಿ ಸಂಪುಟವುಳ್ಳನ್ನಕ್ಕ ಭವಕ್ಕೊಳಗು………….” ಹೀಗೆ ಗುರು ಶಿಷ್ಯನ ಸಂಬಂಧ, ಗುರುವಿನ ಮಹತ್ವ ಹಾಗೂ ಗುರುವಿನ   ಲಕ್ಷಣಗಳ ಬಗ್ಗೆ ಅರಿವಿನ ಮಾರಿ ತಂದೆ  ಹಲವು ಕಡೆ ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ.

ಮುಂದೆ ಆದಯ್ಯನವರು ತಮ್ಮ ವಚನದಲ್ಲಿ  “ಗುರುಕಾರುಣ್ಯ ವೇಧ್ಯವಾದ ಬಳಿಕ ಜನನ ಸೂತಕವಿಲ್ಲ, ಘನಲಿಂಗ ಸಂಗದಲ್ಲಿ ಮನವು ನಿವಾಸಿಯಾದ ಬಳಿಕ ಜಾತಿಸೂತಕವಿಲ್ಲ…………” ಗುರುಕಾರುಣ್ಯ ವೇದ್ಯವಾದ ಬಳಿಕ ಜನನ ಸೂತಕವು ತಪ್ಪಿ ಹೊಗುವುದು. ಹಾಗೂ “ಗುರುಲಿಂಗಜಂಗಮ ಒಂದಾದ ಕ್ರಿಯೆಯಲ್ಲಿ ನಿಂದ  ಪ್ರಕಾಶಂಗೆ ಆವ ಸಂದೇಹವಿಲ್ಲ……” ಗುರು ಲಿಂಗ ಜಂಗಮ ಒಂದಾದ ಕ್ರಿಯೆಯಲ್ಲಿ ಶಿಷ್ಯನ ಎಲ್ಲ ಸಂದೇಹಗಳು ತೀರಿ ಅವನ ಅರಿವೇ ಗುರುವಾಗುವ, ಶಿಷ್ಯನೇ  ಗುರುವಾಗುವ ಬಗೆಯನ್ನು ವಿವರಿಸಿರುವರು. ಮುಂದೆ ಮತ್ತೊಂದು ವಚನದಲ್ಲಿ “ಗುರುವಿನಂತರಂಗದೊಳಗೆ ಶಿಷ್ಯ, ಶಿಷ್ಯನಂತರಂಗದೊಳಗೆ ಗುರು,  ಈ ಗುರುಶಿಷ್ಯಸಂಬಂಧ ಶರೀರಪ್ರಾಣದಂತೆ ಭಿನ್ನವಿಲ್ಲದೆ, ಗುರುವೆಂಬ ಭಾವ ತೋರದಿರ್ದಡೆ ಆತ ಶಿಷ್ಯ. ಶಿಷ್ಯನೆಂಬ ಭಾವ ತೋರದಿರ್ದಡೆ ಆತ ಗುರು……….” ಹೀಗೆ  ಗುರು ಶಿಷ್ಯರ ಸಂಭಂದವನ್ನು ವಿವರಿಸುವರು. 

ಮುಂದುವರೆದು ಆದಯ್ಯನವರು “ಶ್ರೀ ಗುರುವಿನ ಶ್ರೀ ಚರಣದಲ್ಲಿ ಅರವತ್ತೆಂಟು ತೀರ್ಥಗಳು  ನೆಲೆಸಿಪ್ಪವಾಗಿ ಎಲ್ಲಾ ತೀರ್ಥಗಳಿಗೆಯೂ ಗುರುಪಾದತೀರ್ಥವೇ ಅಧಿಕ ನೋಡಾ……..” ಎಂದು ಗುರುವಿನ ಪಾದ ತೀರ್ಥದ ಮಹತ್ವವನ್ನು ಹೇಳುವರು. ಮುಂದೆ  “ಶ್ರೀ ಗುರುವಿನ ಕರುಣದಿಂದ ಪವಿತ್ರಗಾತ್ರನಾದೆ. ಅದೆಂತೆಂದಡೆ : ಪೂರ್ವ ಕರ್ಮದ ದುರ್ಲಿಖಿತವನೊರಸಿ ವಿಭೂತಿಯ ಪಟ್ಟವ ಕಟ್ಟಿದನಯ್ಯ ಶ್ರೀ ಗುರು. ಎನ್ನಂಗದಲ್ಲಿ ಶಿವಲಿಂಗವ ಹಿಂಗದಂತಿರಿಸಿ  ಭೂತಕಾಯವ ಬಿಡಿಸಿ ಲಿಂಗತನುವ ಮಾಡಿದನಯ್ಯ ಶ್ರೀ ಗುರು. ಕರ್ಣದಲ್ಲಿ ಪ್ರಣವಪಂಚಾಕ್ಷರವನೊರೆದು,  ಜಪಿಸಿ ಕಲಿಸಿ, ಮಂತ್ರರೂಪನ ಮಾಡಿದರಯ್ಯ ಶ್ರೀ ಗುರು. ಸಂಸಾರದ ಅಜ್ಞಾನಜಡವ ಕೆಡಿಸಿ ಶಿವಜ್ಞಾನಾನುಗ್ರಹವ ಮಾಡಿದ, ಆ ಶಿವಜ್ಞಾನವೆನ್ನ ಸರ್ವಕರ್ಮವನರುಹಿತ್ತು.” ಎಂದು ಹೇಳುತ್ತಾ ಗುರುವು ಹೇಗೆ ನಮ್ಮ ಪೂರ್ವ ಕರ್ಮದ ದುರ್ಲಿಖಿತವನ್ನು ಒರೆಸಿ, ವಿಭೂತಿ ಪಟ್ಟವನ್ನು ಹಣೆಗೆ ಕಟ್ಟಿ ಅಂಗದಲ್ಲಿ ಲಿಂಗವನು ಇರಿಸಿ, ಕಿವಿಯಲ್ಲಿ ಪಾವನ ಮಂತ್ರವನ್ನು ಇರಿಸಿ, ಸಂಸಾರದ ಅಜ್ಞಾನ ಜಡವನ್ನು ದೂರಮಾಡುವನು ಎಂದು ವಿವರಿಸಿರುವರು. 

ಮತ್ತೊಂದು ವಚನದಲ್ಲಿ ಶಿಷ್ಯನೇ ಗುರುವಾಗುವ ಬಗೆಯನ್ನು ಮುಂದಿನಂತೆ ವಿವರಿಸಿರುವರು. “ಶ್ರೀಗುರುಸೋಂಕಿದ ಶಿಷ್ಯ ತಾನಾ ಗುರುವಾಗದೆ ಮಾಣನು. ಅದೆಂತೆಂದಡೆ: ಜ್ಯೋತಿಯಿಂದಾದ ಜ್ಯೋತಿಯಂತೆ ಭ್ರಮರನಿಂದ ಕೀಟ ಭ್ರಮರನಾದಂತೆ ಶಿಷ್ಯನು ಗುರುವಿಗೆ ಭೇಧವಾಗಿರನು……. ಹೀಗೆ ಗುರು ಶಿಷ್ಯರಿಗೆ ಬೇಧವಿಲ್ಲದೆ ಶಿಷ್ಯನೇ ಗುರುವಾಗುವನೆಂದು ಹೇಳುವರು.  ಮುಂದೆ ಉರಿಲಿಂದಪೆದ್ದಿಗಳು ತಮ್ಮ ವಚನದಲ್ಲಿಯೂ ಗುರುಪ್ರಸಾದ ಸೋಂಕಿ ಸರ್ವಾಂಗವೂ ಗುರುವಾಗುವ ಭಗೆಯನ್ನು ವಿವರಿಸುವರು. “ಅಗ್ನಿ ಮುಟ್ಟಲು ತೃಣವಗ್ನಿಯಪ್ಪುದಯ್ಯ. ಗುರುಪ್ರಸಾದವಂಗವ ಸೋಂಕಿದಲ್ಲಿ ಸರ್ವಾಂಗ ಗುರುವಪ್ಪುದು ತಪ್ಪದಯ್ಯ…..” ಎಂದು ಹೇಳುವರು.

 ಮುಂದೆ ಅರುಹೇ ಗುರುವು ಎಂಬುದನ್ನು ಪ್ರತಿಪಾದಿಸುವ ರೀತಿಯಲ್ಲಿ  “ಅರುಹೆಂಬ ಗುರುವಿನ ಕೈಯಲ್ಲಿ, ವಿರತಿಯೆಂಬ ಶಿವದಾರಮಂ ಕೊಟ್ಟು, ಸುಮತಿಯೆಂಬ ಸಜ್ಜೆಯಂ ಪವಣಿಸಿ, ಸಮತೆಯೆಂಬ ಲಿಂಗಸಾಹಿತ್ಯವ ಬಿಜಯಂಗೈಸಿಕೊಂಡು………..” ಎಂದು ಹೇಳುವರು. ಮುಂದೆ “ಎನ್ನ ಸದ್ಗುರುವು ಮಾಡುವ ಗುರುತ್ವ ಉಪಮಾತೀತವಯ್ಯ , ಅದೆಂತೆಂದೆಡೆ : ಎನ್ನ ನೇತ್ರದಲ್ಲಿ ತನ್ನ ರೂಪ ತುಂಬಿ, ಎನ್ನ ನೇತ್ರವನು ಗುರುವು ಮಾಡಿದ” ಎನ್ನುವಲ್ಲಿ ಶಿಷ್ಯನ ಸರ್ವಾಂಗಗಳು ಸಹಾ ಗುರುವಾಗುವ ಪರಿಯನ್ನು ವಿವರಿಸಲಾಗಿದೆ.  “……………….. ಶರಣ ಮೂರ್ತಿ ಶ್ರೀ ಗುರು. ಶ್ರೀ ಗುರು ಲಿಂಗ ಜಂಗಮ ಒಂದೆಯಾಗಿ ಶ್ರೀಗುರುವೇ ಗುರು, ಉಳಿದದ್ದೆಲ್ಲಾ ಲಘು. ಪರಶಿವಲಿಂಗವೇ ಗುರು, ಉಳಿದವೆಲ್ಲವೂ ಲಘು. ಜಂಗಮವೇ ಗುರು ಉಳಿದವೆಲ್ಲವೂ ಲಘು. ಇದನರಿದು ಶ್ರೀಗುರುವನೇ ನಂಬುವುದು………..” ʼʼಗುರುತ್ವವುಳ್ಳ ಮಹದ್ಗುರುವನರಿಯದೆ ನಾನು ಗುರು ತಾನು ಗುರುವೆಂದು ನುಡಿವಿರಿ. ಧನದಲ್ಲಿ ಗುರುವೆ ? ........................... ದೇವದಾನವ ಮಾನವರೆಲ್ಲರು ನೀವೆಲ್ಲರು  ಆವ ಪರಿಯಲ್ಲಿ ಗುರು ಹೇಳಿರಣ್ಣಾ ? ಗುರುವಾರು ಲಘುವಾರೆಂದರಿಯಿರಿ, ಮನ ಬಂದಂತೆ ಕಡದುವುರಾಗಿ……………” ಎನ್ನುತ್ತಾ ಸಾಮಾನ್ಯರೆಲ್ಲರೂ ತಮ್ಮನ್ನು ತಾವು ಗುರು ಎಂದು ಹೇಳಿಕೊಳ್ಳುವುದನ್ನು ಪ್ರಶ್ನಿಸುತ್ತಾ ಗುರು ಯಾರು ಲಘು ಯಾರು ಎಂಬುದನ್ನು ಅರಿಯಬೇಕೆಂದು ಕರೆ ನೀಡುವರು.

ಮತ್ತೊಬ್ಬ ಶರಣ ಉಳಿಯಮೇಶ್ವರ ಚಿಕ್ಕಣ್ಣ ಎಂಬವರು  “ಗುರುವೇ ಪರಶಿವನು  ಪರಶಿವನೇ ಶರಣಭರಿತನಾಗಿ ಎಮ್ಮ ಶರಣರೇ ಗುರು.”  “ಬಸವಣ್ಣನೇ ಎನಗೆ ಗುರುಸ್ವರೂಪನಯ್ಯಾ, ಚೆನ್ನಬಸವಣ್ಣನೇ ಎನಗೆ ಲಿಂಗಸ್ವರೂಪನಯ್ಯಾ,…….. “ ಎಂದು ತಮ್ಮ ವನಚದಲ್ಲಿ ಪರಶಿವನಿಗೂ ಗುರುವಿಗೂ ಅಭೇಧವನ್ನು ಹೇಳುತ್ತಾ ಬಸವ, ಚನ್ನಬಸವಣ್ಣನವರನ್ನೇ ತನ್ನ ಗುರುವೆಂದು ಹೇಳುವರು.

ಚೆನ್ನಬಸವಣ್ಣನವರು ʼʼ…………..ಗುರುವೆನ್ನ ತನುವ ಬೆರೆಸಿದ ಕಾರಣ, ಗುರುವಿನ ತನುವ ನಾ ಬೆರಸಿದ ಕಾರಣ, ಗುರು ಶುದ್ಧನಾದನಯ್ಯ………… ಈ ಮೂವರು ತಮ್ಮ ತಾವಾಗಲಾರರು ಎನ್ನ ಮುಟ್ಟಿ ಶುದ್ಧವಾದರು ಕಾಣಾ, ಕೂಡಲ ಚೆನ್ನಸಂಗಮದೇವಾ. ಎಂದು ಹೇಳುತ್ತಾ ಗುರುವಿಂದ ಶಷ್ಯನು, ಶಿಷ್ಯನಿಂದ ಗುರುವು ಶುದ್ಧವಾಗುವ ಬಗೆಯನ್ನು ವಿವರಿಸುವರು. ಮುಂದೆ “ಶಿಷ್ಯನ ಪೂರ್ವಾಶ್ರಮವ ಗುರು ಕೇಳಿದನೆಂಬರು, ಆ ನುಡಿಯ ಕೇಳಲಾಗದು…..” ಎಂಬಲ್ಲಿ ಗುರು ಶಿಷ್ಯನ ಪೂರ್ವಾಶ್ರಮವನ್ನು ವಿಚಾರಿಸುವ ಎಂದರೆ ಅವನ ಜಾತಿ ಕುಲಗಳ ವಿಚಾರಿಸಿದ ನಂತರ ಅವನನ್ನು ಶಿಷ್ಯನನ್ನಾಗಿಸಿಕೊಳ್ಳುವುದನ್ನು ವಿರೋಧಿಸಿದ್ದಾರೆ. ಹಾಗೆ  ಗುರುವಿನ ಮಹತ್ವವನ್ನು ಮುಂದಿನಂತೆ ವಿವರಿಸಿರುವರು “ಗುರುವೆ ಸದಾಶಿವ ಗುರುವೆ ಮಹಾಮಹಿಮ, ಗುರುವೆ ಅಕಲ್ಪಿತ ನಿತ್ಯ ನಿರಯವ……”ಎಂದು ಹೇಳಿರುವರು.

ಮುಂದೆ ಸಿದ್ದರಾಮರು ತಮ್ಮ ವಚನದಲ್ಲಿ ಗುರುವಿನ ಮಹಿಮೆಯನ್ನು ಹೇಳುತ್ತಾ “ಗುರುವಾಕ್ಯದಿಂದ ವೀರಸೇನಂಗೆ ರಣಭೂಮಿ ಕಂಪಿಸಿತು…………ಗುರುವಾಕ್ಯದಿಂದ ಪ್ರಮಥರ ಮನೆಯಲ್ಲಿ ಪರಮಾತ್ಮ ಸಂಚರಿಸಿದನು………..ಇದು ಕಾರಣ ಗುರುವೇ ಘನವೆಂದರಿ…..” ಎಂದು ಹೇಳುವರು. ಮತ್ತೊಬ್ಬ ವಚನಕಾರ್ತಿ  ಅಮುಗೆರಾಯಮ್ಮನವರು “ಗುರುವೆಂಬೆನೆ ಗುರುವು ನರನು; ಲಿಂಗವೆಂಬೆನೆ ಲಿಂಗವು ಕಲ್ಲು;…..” ಎನ್ನುವರು. ಇದೇ ರೀತಿಯ ಮತ್ತೊಂದು ವಚನದಲ್ಲಿ  ಅಂಬಿಗರ ಚೌಡಯ್ಯ ನವರು  “ಗುರುವೆಂಬೆನೆ ಹಲಬರ ಮಗ, ಲಿಂಗವೆಂಬೆನೆ ಕಲುಕುಟಿಗನ ಮಗ……….. ಈ ಸುವನರಿಯಲು ಇಲ್ಲ ಬಿಡಲು ಇಲ್ಲ  ತನ್ನೊಳಗೆ ನೊಡೆಂನಂಬಿಗರ ಚವುಡಯ್ಯ “ ಹಲಬರ ಮಗನನ್ನು  ಮತ್ತು ನರನಾದವನನ್ನು ಗುರು ಎಂದು ಕಲ್ಲಾದ  ಹಾಗೂ ಕಲ್ಲುಕುಟಿಗನಿಂದ ಬಂದ ಲಿಂಗವನ್ನು ದೇವರೆಂದು ಹೇಗೆ ಕರೆಯಬೇಕು ಎಂಬ ಪ್ರಶ್ನೆ ಇಲ್ಲಿದೆ. ಇಲ್ಲಿ ಗುರು ಹಾಗೂ ಲಿಂಗಗಳು ನಮ್ಮ ಸಾಮಾನ್ಯ ಗ್ರಹಿಕೆಗೆ ಮೀರಿದ, ಪರಮ ಶಿವ ಸ್ವರೂಪಿಯಾದ ಹಾಗೂ ಪ್ರಜ್ಞೆಯೇ ಗುರುವಾಗುವ ಪರಿಯ ಹಿನ್ನೆಲೆಯಲ್ಲಿ ಈ ವನಚದ ನಿರೂಪಣೆ ಇರುವುದನ್ನು ಗುರುತಿಸಬಹುದು.

  ಮುಂದೆ ನುಲಿಯ ಚಂದಯ್ಯ ತನ್ನ ವಚನ “ಗುರುವಾದೊಡೂ ಕಾಯಕದಿಂದವೆ ಜೀವನ್ಮುಕ್ತಿ ಲಿಂಗವಾದೊಡೂ ಕಾಯಕದಿಂದವೇ ಜೀವನ್ಮುಕ್ತಿ…………..” ಎಂದು ಹಾಗೇ  ಆಯ್ದಕ್ಕಿ ಮಾರಯ್ಯ “ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು,………..ಕಾಯಕವೇ ಕೈಲಾಸವಾದ ಕಾರಣ, ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗೆ.” ಎಂಬ ವಚನಗಳಲ್ಲಿ ಗುರುವಿಗಿಂತ ಕಾಯಕವೇ ಶ್ರೇಷ್ಠ , ಗುರುವಾದರೂ ಕಾಯಕ ಮಾಡಿಯೇ ಜೀವನ್ಮುಕ್ತಿಯನ್ನು ಪಡೆಯಬೇಕೆಂದು ಹೇಳುವರು. 

ಮತ್ತೊಂದು ಕಡೆ ಉರಿಲಿಂಗ ಪೆದ್ದಿಗಳವರು  ಗುರುವಿನ ವರ್ತನೆ ಹೇಗಿರಬೇಕೆಂಬುದನ್ನು ಕುರಿತು ʼʼಶ್ರೀ ಗುರು ಲಘುವರ್ತನದಲ್ಲಿ ವರ್ತಿಸಿದಡೆ ಆಗದು ಆಚಾರ. ಶ್ರೀ ಗುರು ಲಿಂಗ ಜಂಗಮ ಪ್ರಸಾದವನು ತಾನೆ ಲಘು ಮಾಡಿ ಲಘವಾದನಯ್ಯ………” ಗುರುವಿನ ವರ್ತನೆ ಯಾವಾಗಲೂ ಗುರು ವಾಗಿ ಅಂದರೆ ಘನವಾಗಿಯೇ ಇರಬೇಕೆಂದು ಅದರ ಜೊತೆಗೆ ಲಿಂಗ ಜಂಗಮಗಳನ್ನು ಗುರು ತನ್ನಂತೆಯೇ ಗೌರವದಿಂದ ಕಾಣಬೇಕೆಂದು ತಮ್ಮ ಈ ವಚನದಲ್ಲಿ ಹೇಳಿರುವರು. ಅಂಭಿಗರ ಚೌಡಯ್ಯನವರು ಸಹಾ ಗುರುವಿನ ವರ್ತನೆ ಹೇಗಿರಬೇಕು ಎಂಬುದನ್ನು “ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು  ಅಕ್ಕಿ ಕಣಕವ ತೆಗೆದುಕೊಂಡು ಹೋಗುವ ಗುರುವಿನ ಕಂಡರೆ ಕೆಡವಿ ಮೂಗನೆ ಕೊಯ್ದು  ಇಟ್ಟಂಗಿ ಕಲ್ಲಲ್ಲೆ ತಿಕ್ಕಿ ಸಾಸಿವೆಯ ಹಿಟ್ಟನೆ ತಳಿದು ಮೇಲೆ ಲಿಂಬೆಯ ಹುಳಿಯನೆ ಹಿಂಡಿ ಪಡುವಣ ಗಾಳಿಗೆ ಹಿಡಿ ಎಂದಾತನಂಬಿಗರ ಚೌಡಯ್ಯ” ಎಂಬ ತಮ್ಮ ವಚನದ ಮೂಲಕ ಖಾರವಾಗಿ ಪ್ರತಿಕ್ರಿಯಿಸುವ ಪ್ರಯತ್ನ ಮಾಡಿರುವರು.

ಅಲ್ಲಮ ಪ್ರಭುಗಳ ಒಂದು ವಚನ “ಹೊಟ್ಟೆಯ ಮೇಲೆ ಕಟ್ಟೊಗರದ ಮೂಟೆಯ ಕಟ್ಟಿದಡೇನು ……ಅಂಗದ ಮೇಲೆ ಲಿಂಗ ಸಾಯುತವಾದಡೇನು ?,……. ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ, ಆ ಕಲ್ಲು ಲಿಂಗವೇ ? ಆ ಮೆಳೆ ಭಕ್ತನೇ ? ಇಟ್ಟಾತ ಗುರುವೆ ? ಇಂತಪ್ಪವರ ಕಂಡಡೆ ನಾಚುವೆನಯ್ಯ ಗುಹೇಶ್ವರ” ಎಂಬ ತಮ್ಮ ವಚನದಲ್ಲಿ ಯಂತ್ರಿಕ ಗುರು ಶಿಷ್ಯ ಸಂಭಂಧಗಳು ಹಾಗೂ ಯಾಂತ್ರಿಕ ಆಚರಣೆಗಳನ್ನು ಖಂಡಿಸಿರುವುದನ್ನು ನೊಡಬಹುದು. ಹೀಗೆ ಹಲವಾರು ವಚನಕಾರರು ತಮ್ಮ ವಚನಗಳ ಮೂಲಕ ಗುರುವಿನ ಇರವು, ಮಹತ್ವ, ಹಾಗೂ ಗುಣ ಲಕ್ಷಣಗಳನ್ನು ಹೇಳುತ್ತಾ, ತಮಗೆ ಸರಿಕಾಣದ ಆಚರಣೆಗಳನ್ನು ನಿರ್ಬಿಡೆಯಿಂದ ಖಂಡಿಸಿರುವುದನ್ನು ನಾವು ಮೇಲಿನ ಉದಾಹರಣೆಗಳ ಮೂಲಕ ಗಮನಿಸಬಹುದಾಗಿದೆ. 

ವಚನಕಾರರ ಮುಂದುವರೆದ ಪರಂಪರೆಯಾಗಿ ಬಂದ ಇತರೆ ಹಲವು ಸಾಧನಾ, ಅನುಭಾವಿಕ ಪರಂಪರೆಗಳಲ್ಲಿಯೂ ಸಹಾ ಗುರುವಿನ ಕುರಿತಾದ ವಿಮರ್ಶೆ, ವಿವರಗಳು ಹಾಗೂ ಹೆಚ್ಚಾಗಿ ಗುರುವಿನ ಆರಾಧನೆ ಆಚರಣೆಯಲ್ಲಿರುವುದನ್ನು ನಾವು ನೋಡಬಹುದು. ನಮ್ಮ ಹಲವಾರು ಸಮಾಜ ಸುಧಾರಕರನ್ನು ಸಹಾ ನಾವು ಗುರುಗಳೆಂದು ಗುರುತಿಸುವೆವು. ಇದು ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿಯೂ ಗುರು ಶಿಷ್ಯ ಪರಂಪರೆಗೆ ಬಹಳಾ ಮಹತ್ವ ಇರುವುದನ್ನು ನಾವು ಗುರುತಿಸಬಹುದು. ಆದರೆ ವಚನ ಸಾಹಿತ್ಯ ಉಳಿದೆಲ್ಲಾ ಪರಂಪರೆ, ಆಚರಣೆ ನಂಬಿಕೆಗಳಗಿಂತ ಭಿನ್ನವಾದ ನಿಲುವು ಹಾಗೂ ಮಹತ್ವವನ್ನು ಗುರುವಿಗೆ ಕೊಟ್ಟಿರುವುದು ವಿಶೇಷ.  

ಕೇವಲ ಗುರುವಿನ ಮಹತ್ವವನು ವಿವರಿಸಿ, ಹೊಗಳುವುದಷ್ಟೇ ಅಲ್ಲ , ಗುರು ಎಂದು ಎನಿಸಿಕೊಂಡವರು ಹೇಗಿರಬೇಕು, ಹೇಗಿರಬಾರದು, ಅವರ ಲಕ್ಷಣಗಳು, ಕಾರ್ಯಗಳು, ಹಾಗೂ ಗುರು ಎನಿಸಿಕೊಳ್ಳಲು ಇರಬೇಕಾದ ಅರ್ಹತೆಗಳನ್ನು ವಿವರಿಸುವುದರಿಂದ ಹಿಡಿದು, ನಮ್ಮ ಅರಿವೆ ಗುರುವಾಗುವ, ಗುರುವೇ ದೇವರಾಗುವ, ನಮ್ಮ ಪ್ರಜ್ಞೆಯೇ ದೇವರಾಗುವ ಹಂತಕ್ಕೆ ʼಗುರುʼವಿನ ʼಗುರು ತತ್ವʼದ ವ್ಯಾಖ್ಯಾನವನ್ನು ವಚನಕಾರರು ಮಾಡಿರುವುದು ವಿಶೇಷ. ಗುರು ಎನಿಸಿಕೊಂಡವರು ಮಾಡುವ ತಪ್ಪುಗಳನ್ನು ಸಹಾ ನಿರ್ಭಿಡೆಯಿಂದ ವಿವರಿಸುವ, ಪ್ರಶ್ನಿಸುವ ಕೆಲಸವನ್ನು ವಚನಕಾರರು ಮಾಡಿರುವರು. 

ಇಲ್ಲಿ ವಚನಗಳಲ್ಲಿ ಗುರುವಿನ ಕುರಿತಾಗಿ ಉಲ್ಲೇಖವಾಗಿರುವ ಪ್ರಮುಖ ವಚನಗಳನ್ನು ವಿವರಣೆಯೊಂದಿಗೆ ವಿವರಿಸುವ ಪ್ರಯತ್ನ ಮಾಡಲಾಗಿದ್ದು, ನಿರ್ದಿಷ್ಟಗೊಳಿಸಿರುವ ಪುಟಗಳ, ಸಮಯಾವಕಾಶದ ಹಾಗೂ ಲೇಖಕನ ಅಧ್ಯಯನದ ವ್ಯಾಪ್ತಿಯಲ್ಲಿ ಈ ಲೇಖನ ರಚನೆಯಾಗಿದ್ದು, ಕೇವಲ ಒಂದಷ್ಟು ವಚನಗಳನ್ನು ಆಯ್ಕೆ ಮಾಡಿ ಉಲ್ಲೇಖಿಸುವಲ್ಲಿಗೆ ಇದು ಮಿತಿಗೊಂಡಿದೆ. ಹಲವಾರು ಮುಖ್ಯ ವಚನಗಳು ಬಿಟ್ಟುಹೊಗಿರುವುದು ಹಾಗೂ ಹಲವು ವಚನಗಳಿಗೆ ವಿವರಣೆ ವಿಶ್ಲೇಷಣೆಯನ್ನು ಹೆಚ್ಚಾಗಿ ನೀಡಲು ಸಾಧ್ಯವಾಗದೇ ಇರುವುದು ಸಹಾ ಈ ಲೇಖನದ ಮಿತಿಯಾಗಿದೆ ಎಂಬುದನ್ನು ಅತ್ಯಂತ ವಿನಮ್ರವಾಗಿ ಓದುಗ ಮಹಾಶಯರಲ್ಲಿ ನಿವೇದಿಸುವೆ.

ಗ್ರಂಥ ಋಣ :

೧) ಕಲ್ಬುರ್ಗಿ, ಎಂ.ಎಂ. ಸಂಕೀರ್ಣ ವಚನ ಸಂಪುಟ, ಸಮಗ್ರ ವಚನ ಸಂ.- ೬ , ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ -೨೦೦೦.

೨) ಡಾ. ರಾಜೂರ ವೀರಣ್ಣ. ಶಿವಶರಣೆಯರ ವಚನ ಸಂಪುಟ, ಸಮಗ್ರ ವಚನ ಸಂಪುಟ – ೫, ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರ – ೨೦೦೧

೩) ಡಾ. ವಿದ್ಯಾಶಂಕರ್, ಎಸ್. ಸಿದ್ಧರಾಮೇಶ್ವರ ವಚನ ಸಂಪುಟ, ಸಮಗ್ರ ವಚನ ಸಂಪುಟ – ೪, ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರ – ೨೦೦೧

೪) ಡಾ. ಮಲ್ಲಾಪುರ, ಬಿ.ವ್ಹಿ. ಚೆನ್ನಬಸವಣ್ಣನವರ ವಚನ ಸಂಪುಟ, ಸಮಗ್ರ ವಚನ ಸಂಪುಟ – ೪, ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರ – ೨೦೦೧

೫) ಡಾ. ಕಲ್ಬುರ್ಗಿ, ಎಂ.ಎಂ. ಬಸವಣ್ಣನವರ ವಚನ ಸಂಪುಟ. ಸಮಗ್ರ ವಚನ ಸಂಪುಟ – ೪, ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರ – ೨೦೦೧.

೬) ನಾಗಭೂಷಣಸ್ವಾಮಿ, ಓ.ಎಲ್.(ಸಂ.) ವಚನ ಸಾವಿರ. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. – ೨೦೦೪.

೭) ಮರುಳಸಿದ್ದಪ್ಪ, ಕೆ. ಮತ್ತು ನಾಗರಾಜ, ಕಿ.ರಂ.(ಸಂ.). ವಚನ ಕಮ್ಮಟ. ಬೆಂಗಳೂರು: ಸಪ್ನ ಬುಕ್‌ ಹೌಸ್-೨೦೧೭.

೮) ಅಂತರ್ಜಾಲ ಮಾಹಿತಿ.


- ವರುಣ್‌ ರಾಜ್‌ ಜೀ

ಸಂಶೋಧನಾರ್ಥಿ, 

ಡಾ ಡಿ ವಿ ಜಿ ಕನ್ನಡ ಅಧ್ಯಯನ ಕೇಂದ್ರ.

ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು. – ೫೭೨೧೦೩

# ೯೪೪೮೨೪೧೪೫೦.

Comments

Popular posts from this blog

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.