ನಮ್ಮ
ಸಮಾಜವನ್ನು
ಲಿಂಗಾಧಾರಿತ ತಾರತಮ್ಯ, ಲಿಂಗಾಧಾರಿತ ದ್ವೇಷ, ಲಿಂಗ ಅಸಮಾನತೆಗಳು ಅತಿ ಹೆಚ್ಚಾಗಿ ವ್ಯಾಪಿಸಿಕೊಂಡಿವೆ.
ಬಲೆಯಲ್ಲಿ ಸಿಕ್ಕ
ಪಕ್ಷಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಬಲೆ ಹೆಚ್ಚು ಹೆಚ್ಚು ಬಿಗಿಯಾಗುವಂತೆ ಈ ಲಿಂಗತಾರತಮ್ಯ,
ಲಿಂಗಾಧಾರಿತ ದ್ವೇಷ ಮುಂತಾದವುಗಳಿಂದ ನಾವು ಬಿಡಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಇವು ಮತ್ತಷ್ಟು ಸಂಕೀರ್ಣವಾಗುವುದನ್ನು
ಗುರುತಿಸಬಹುದು.
ನಮ್ಮ
ಸಮಾಜ ಪಿತೃಪ್ರಧಾನತೆಯ
ಪುರುಷ ಕೇಂದ್ರಿತ ಸಮಾಜ. ಎಲ್ಲವನ್ನು ಪುರುಷನ ದೃಷ್ಠಿಯಿಂದಲೇ ಅಳೆದು ತೂಗಿ ನೋಡುವ ವಾಡಿಕೆ ನಮ್ಮಲಿದೆ.
ಇದಕ್ಕೆ ಸ್ತ್ರೀ ಪುರುಷರಾಧಿಯಾಗಿ ಯಾರು ಹೊರತಲ್ಲ. ಸ್ತ್ರೀಯರ ಸ್ಥಾನ ನಮ್ಮಲ್ಲಿ ಎರಡನೇ ದರ್ಜೆಯದಾಗಿದೆ.
ನಮ್ಮ ಸಂವಿಧಾನ ಸಮಾನತೆಯ, ಸ್ವಾತಂತ್ರ್ಯದ ಆಶಯದ ಮೇಲೆ ರಚನೆಯಾಗಿದ್ದರೂ ಸಹಾ ಸ್ತ್ರೀಯ ಸ್ಥಾನಮಾನ
ಇಂದಿಗೂ ಸುಧಾರಿಸಿಲ್ಲ. ಇದಕ್ಕೆ ಕಾರಣ ಮೇಲೆ ಚರ್ಚಿಸಿದಂತೆ ಬಹಳಾ ಸಂಕೀರ್ಣ ವ್ಯಾಪ್ತಿಯಲ್ಲಿ ನಮ್ಮ
ಸಮಾಜವನ್ನು ಆವರಿಸಿರುವ ಈ ಪುರುಷ ಪ್ರಧಾನ ಚಿಂತನೆ. ತಮಗೆ ಅರಿವಿದ್ದೋ ಇಲ್ಲದೆಯೋ ಪ್ರತಿಯೊಬ್ಬರೂ
ಈ ಪುರುಷ ಪ್ರಧಾನತೆಯನ್ನು, ಪುರುಷ ಕೇಂದ್ರಿತ ಚಿಂತನೆಯನ್ನುಒಂದಲ್ಲ ಒಂದು ರೀತಿಯಲ್ಲಿ ಅನುಸರಿಸುತ್ತಲೇ
ಇದ್ದಾರೆ ಮಾತ್ರವಲ್ಲ ಅದರಿಂದ ಆಗುವ ಸಮಸ್ಯೆ ಮತ್ತು ಅಪಾಯಗಳನ್ನು ಸಹಾ ಸ್ತ್ರೀ ಪುರುಷ ಭೇದವಿಲ್ಲದೇ
ಎಲ್ಲರೂ ಎದುರಿಸುತ್ತಿದ್ದಾರೆ.
ಇಂದು
ನಾವು ಸ್ತ್ರೀ ಪುರುಷ ಎಂಬ ಎರಡೇ ಪರಿಭಾಷೆಗಳನ್ನು ಇಟ್ಟುಕೊಂಡು ಲಿಂಗ ಸಂವೇದನೆಯ ಚರ್ಚೆಯನ್ನು ಮಾಡಿದರೆ ನಮ್ಮ ಚರ್ಚೆ ಅಪೂರ್ಣವಾಗುತ್ತದೆ.
ನಮ್ಮ ಸಮಾಜದಲ್ಲಿ ಅಥವಾ ಪ್ರಕೃತಿಯಲ್ಲಿ ಹುಟ್ಟುವ ಮಗುವಿನ ದೈಹಿಕ ರಚನೆಯ ಆಧಾರದಲ್ಲಿ
ಗಂಡು ಹೆಣ್ಣು ಎಂಬ ಎರಡು ಲಿಂಗಗಳನ್ನು ಗುರುತಿಸಿಕೊಂಡಿದಾಗ್ಯೂ ಆ ಮಗು ಬೆಳೆದಂತೆ ಅದರ ಲೈಂಗಿಕತೆ
ಬದಲಾಗುವ ಅಥವಾ ನಿರ್ಧಿಷ್ಠಗೊಳ್ಳುವುದನ್ನು ಕಾಣಬಹುದು. ತಮ್ಮನ್ನು ತಾವು ಸ್ತ್ರೀಯಾಗಿ, ಪುರುಷನಾಗಿ
ಪರಿವರ್ತಿತ ಲಿಂಗಿಗಳಾಗಿ ಗುರುತಿಸಿಕೊಳ್ಳುವವರು ಇದ್ದಾರೆ. ನಮ್ಮ ಸಂವಿಧಾನವು ಎಲ್ಲರಿಗೂ ಸಮಾನವಾದ
ಜೀವಿಸುವ ಹಕ್ಕನ್ನು ಕೊಟ್ಟಿದೆ. ಹಲವಾರು ಜನ ತಾವು ತಮ್ಮನ್ನು 'ಗೇ'ಗಳೆಂದು, 'ಲೆಸ್ಬಿಯನ್',ಗಳೆಂದು,
'ಪರಿವರ್ತಿತ ಲಿಂಗಿ'ಗಳೆಂದು, ಇತ್ಯಾದಿಯಾಗಿ ಗುರುತಿಸಿಕೊಳ್ಳುವುದನ್ನು ನಾವು ಗಮನಿಸಬಹುದು. ಅಂದರೆ
ಗಂಡಾಗಿ / ಹೆಣ್ಣಾಗಿ ಹುಟ್ಟಿದವರು ಮುಂದೆ ತಾವೇ ಸ್ವತಃ ತಮ್ಮ ಲಿಂಗತ್ವವನ್ನು ನಿರ್ಧಾರ
ಮಾಡಬಹುದು.
ಉದಾ : ಗಂಡಾಗಿ(ಗಂಡಿನ ಅಂಗ ರಚನೆಗಳೊಂದಿಗೆ) ಹುಟ್ಟಿ ಮುಂದೆ ತಾನು ತನ್ನ ಲಿಂಗ ಪರಿವರ್ತಿಸಿಕೊಂಡು
ತನ್ನನ್ನು ತಾನು ಹೆಣ್ಣಾಗಿ ಅಥವಾ ಪರಿವರ್ತಿತ ಲಿಂಗಿ(TRANS GENDER) ಆಗಿ ಗುರುತಿಸಿಕೊಳ್ಳಬಹುದು,
ಹೆಣ್ಣಾಗಿ ಹುಟ್ಟಿದವರು ಸಹಾ ಅದೇ ರೀತಿ ತಾವು ತಮ್ಮನ್ನು ಹೆಣ್ಣಾಗಿ/ಗಂಡಾಗಿ, ಅಥವಾ ಪರಿವರ್ತಿತ ಗಂಡಾಗಿ
ಗುರುತಿಸಿಕೊಳ್ಳುವುದು ಇತ್ಯಾದಿ. ಇದರಿಂದ ನಮಗೆ ಸಿದ್ಧವಾಗುವುದೇನೆಂದರೆ, ಹಲವು ಮುಖಗಳ ಲೈಂಗಿಕತೆ
ನಮ್ಮ ಪ್ರಕೃತಿಯಲ್ಲಿ ಸಹಜವಾಗಿಯೇ ಇದೆ ಇದನ್ನು ವ್ಯಕ್ತಿ ತನ್ನ ಇಚ್ಚೆಯ/ಭಾವನೆಯ ಅನುಸಾರ ತಾನೇ ಸ್ವತಃ ನಿರ್ಧರಿಸುವನೇ ಹೊರತು ಸಮಾಜವಲ್ಲ ಎಂಬುದು.
ನಮ್ಮಲ್ಲಿ ಸಲೈಂಗಿಕತೆ
(homosexuality) ಅನಾದಿಕಾಲದಿಂದಲೂ ಇದೆ. ಇದು ನಮ್ಮ ಪ್ರಕೃತಿಯ ಸಹಜ ವಿಧ್ಯಮಾನ. ಕೇವಲ ಮಾನವರಲ್ಲಷ್ಟೇ
ಅಲ್ಲದೇ ಪ್ರಾಣಿ ಪಕ್ಷಿ ಪ್ರಭೇದಗಳಲ್ಲಿಯೋ ಸಹಾ ಸಲಿಂಗ ರತಿಯನ್ನು ಇದೆ. ಇದು ಸಂಪೂರ್ಣ ಪಾಕೃತಿಕ
(Natural) ಕ್ರಿಯೆ. ಇದು ಒಂದು ಕಾಯಿಲೆ ಆಗಲಿ, ಔಷಧ ಅಥವಾ ಇನ್ನಿತರ ಮಾರ್ಗಗಳಿಂದ ಬದಲಾಯಿಸಬಹುದಾದ
ಸಮಸ್ಯೆ ಆಗಲಿ ಅಲ್ಲ.
ಮೇಲೆ ಚರ್ಚಿಸಿದಂತೆ ವಿವಿಧ ಲೈಂಗಿಕತೆಯ ಜನರು ನಮ್ಮ ನಡುವಿನಲ್ಲಿ
ಇದ್ದು ತಮ್ಮ ಲೈಂಗಿಕತೆಯನ್ನು ತಾವು ಧೈರ್ಯವಾಗಿ/ಮುಕ್ತವಾಗಿ
ವ್ಯಕ್ತಪಡಿಸಲಾರದೆ ಮಾನಸಿಕ ತೊಳಲಾಟಕ್ಕೆ ಸಿಕ್ಕಿಕೊಂಡು ಹಿಂಸೆ ಅನುಭವಿಸುತಿದ್ದಾರೆ. ನಮ್ಮ ಸಮಾಜವು
ವಿವಾಹ, ಕುಟುಂಬ, ಸಂಸಾರ, ವಂಶವೃದ್ಧಿ ಯಂತಹಾ ಪಿತೃಪ್ರಧಾನತೆಯ ಹಾಗೂ ಅಧಿಕಾರ ಸಂಬಂಧಿ ಆಶಯಗಳ ಹಿನ್ನೆಲೆಯಲ್ಲಿ
ರೂಪುಗೊಂಡಿರುವುದರಿಂದ ಗಂಡು ಹೆಣ್ಣು ಅಲ್ಲದೇ ಬೇರೆ ಯಾವ ಲಿಂಗ, ಲಿಂಗತ್ವವನ್ನು ಈ ವ್ಯವಸ್ಥೆ ಮಾನ್ಯ
ಮಾಡುವುದಿಲ್ಲ. ಇದು ಬಹಳಾ ಅಪಾಯಕಾರಿಯಾದ ಮತ್ತು ಅನಾರೋಗ್ಯಕಾರಿಯಾದ ನಡವಳಿಕೆಯಾಗಿದೆ.
ಇಂತಹಾ ಭಿನ್ನ ಲೈಂಗಿಕತೆಯನ್ನು ದೊಡ್ಡ ಅವಮಾನಕರವಾದ ವಿಷಯ
ಎಂದು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಳ್ಳುವ ಪೋಷಕರು ತಮ್ಮ ಮಕ್ಕಳಲ್ಲಿ ಇಂತಹಾ ಯಾವುದಾದರೂ
ಲಕ್ಷಣ ಕಂಡು ಬಂದರೆ ತಕ್ಷಣ ಹೆಚ್ಚಿನ ಜನರನ್ನು ಮನೆಯಿಂದ ಹೊರಹಾಕಿ ಬಿಡುವರು. ಇನ್ನು ಹೀಗೆ ಮನೆಯಿಂದ
ಹೊರದೂಡಲ್ಪಟ್ಡು ಅನಾಥರಾಗುವ ಇವರು ಜೀವನ ನಿರ್ವಹಣೆಗೆ ಅನಿವಾರ್ಯವಾಗಿ ಬೀದಿಗಳಲ್ಲಿ ಬಿಕ್ಷೆ ಬೇಡುವ,
ಲೈಂಗಿಕ ವೃತ್ತಿಯಲ್ಲಿ ತೊಡಗಿಕೊಳ್ಳುವ ಕೆಲಸಗಳನ್ನು ಮಾಡಬೇಕಾಗುತ್ತದೆ. ಇಂತಹವರು ಸಮಾಜದಲ್ಲಿ ಬಹುದೊಡ್ಡ
ಹಿಂಸೆ, ಅವಮಾನ , ಅತ್ಯಾಚಾರ, ನಿಂದನೆಗಳಿಗೆ ಒಳಗಾಗಬೇಕಾಗುತ್ತದೆ.
ಈ ರೀತಿ ಒಂದು ಸಮುದಾಯ ಅಥವಾ ಒಂದು ಭಿನ್ನ ಲೈಂಗಿಕತೆಯನ್ನು
ಸಮಾಜ ಒಪ್ಪದಿರುವ ಅಥವಾ ತಿರಸ್ಕಾರದಿಂದ ಕಾಣುವ, ಅವಮಾನಿಸುವ ಅವರಿಗೆ ಸಿಗಬೇಕಾದ ಹಕ್ಕುಗಳಿಂದ, ಸೌಲಭ್ಯಗಳಿಂದ,
ಘನತೆಯ ಬದುಕಿನಿಂದ ಅವರನ್ನು ವಂಚಿಸುವುದು ಮುಂತಾದ ನಡವಳಿಕೆಗಳು ತಪ್ಪು. ಇದನ್ನು ನಮ್ಮ ಸಂವಿಧಾನ
ಸ್ಪಷ್ಟವಾಗಿ ವಿವರಿಸುತ್ತದೆ. ಅದಾಗ್ಯೂ ಇಂತಹಾ ಆಚರಣೆಗಳು ನಮ್ಮಲ್ಲಿ ಇಂದಿಗೂ ಉಳಿದುಕೊಂಡು ಬಂದಿದ್ದು
ನಾವು ಇದರ ಕುರಿತು ಜರೂರಾಗಿ ಚಿಂತಿಸಬೇಕಾಗಿದೆ.
ಸಮಾಜದ ಈ ಚಿಂತನಾ ವಿಧಾನ ಭಾವಿಪೀಳಿಗೆಯ
ಯುವಜನರನ್ನು ಪ್ರಭಾವಿಸುತ್ತದೆ ಮತ್ತು ಸಮಾಜದ ನಂಬಿಕೆ/ಆಚರಣೆಗಳಿಗೆ ಅನುಗುಣವಾಗಿ ಅವರ ಚಿಂತನಾಕ್ರಮವನ್ನು
ರೂಪಿಸುತ್ತದೆ. ಹೀಗೆ ಪ್ರಭಾವಿಸಬೇಕೆಂಬುದು ಒಂದು ಉದ್ದೇಶಪೂರ್ವಕ ಕ್ರಿಯೆ ಆಗಿರುವುದನ್ನು ನಾವು ಗಮನಿಸಬೇಕು.
ಈ ಕಾರಣಕ್ಕಾಗಿಯೇ ಮಕ್ಕಳು, ಯುವಜನರು ತಮ್ಮ ಮನಸಿನಲ್ಲಿ ಇಂತಹಾ ಭಿನ್ನ ಲೈಂಗಿಕತೆಯ ಜನರ ಕುರಿತು ಹಲವು
ಪೂರ್ವಾಗ್ರಹಗಳನ್ನು ಹೊಂದಿರುತ್ತಾರೆ ಅಥವಾ ಹೀಗೆ ಪೂರ್ವಾಗ್ರಹದ ನಂಬಿಕೆಗಳನ್ನು ಸೃಷ್ಠಿಸುವ ಮತ್ತು
ಅವುಗಳನ್ನು ಪೋಷಣೆ ಮಾಡುವ ಕೆಲಸವನ್ನು ಕೆಲವು ಸಾಮಾಜಿಕ/ಸಮಾಜ ಘಾತಕ ಶಕ್ತಿಗಳು ನಿರಂತರವಾಗಿ ಮಾಡುತ್ತಿರುತ್ತವೆ.
ಇವುಗಳ ಪ್ರಭಾವದಿಂದ ನಾವು ಹೊರಬರಬೇಕಾದರೆ ನಮಗೆ ಸತ್ಯದ ಅರಿವಾಗಬೇಕು. ಅದು ಸಾಧ್ಯವಾಗುವುದು ನಮ್ಮ
ಅನುಭವಗಳ ಮೂಲಕ ಅಂದರೆ ಭಿನ್ನ ಲೈಂಗಿಕತೆಯ ವ್ಯಕ್ತಿಗಳ ಜೊತೆಗೆ ನಾವು ಸ್ನೇಹ ಸಾಧಿಸುವ ಅವರ ಒಡನಾಟದಲ್ಲಿರುವುದರಿಂದ.
ನನ್ನ ಜೀವನದಲ್ಲಿ ನನಗೆ ದೊರೆತ
ಇಂತಹಾ ಕೆಲವು ಅನುಭವಗಳು ಈ ಹಿಂದೆ ನನ್ನಲ್ಲಿ ಮನೆಮಾಡಿದ್ದ ಹಲವು ಪೂರ್ವಾಗ್ರಹಗಳನ್ನು ಮೀರಿ ಭಿನ್ನ
ಲೈಂಗಿಕತೆಯನ್ನು ಸಹಜ ಎಂದು ಒಪ್ಪಿಕೊಂಡು ಅಂತಹವರನ್ನು ಎಲ್ಲರಂತೆ ಸಮಾನವಾಗಿ ಗೌರವಿಸುವಂತೆ ನನ್ನ
ಮನಸ್ಥತಿಯನ್ನು ರೂಪಿಸಿದವು. ಅವುಗಳಲ್ಲಿ ಪ್ರಮುಖವಾದ ೩ ಘಟನೆಗಳನ್ನು ಮುಂದೆ ನಿರೂಪಿಸುವೆ.
ಘಟನೆ : ೧, ಬೆಂಗಳೂರಿನಿಂದ
ಮಂಡ್ಯಕ್ಕೆ ನನ್ನ ಒಬ್ಬ ಕಿರಿಯ ಸ್ನೇಹಿತನ ಜೊತೆ ಟ್ರೈನ್ ನಲ್ಲಿ ಹೊಗುವ ಸಂಧರ್ಭ ಕಡಿಮೆ ಬೆಲೆಯ ಟಿಕೇಟಿನ ಪ್ಯಾಸೆಂಜರ್ ಗಾಡಿ ಜನರಿಂದ ತುಂಬಿ
ಕುಳಿತುಕೊಳ್ಳುವುದಿರಲಿ ನಿಂತುಕೊಳ್ಳುವುದಕ್ಕೂ ಸ್ಥಳವಿಲ್ಲದಷ್ಟು ಭರ್ತಿಯಾಗಿತ್ತು. ಜನರ ಮಾತು, ಗದ್ದಲ,
ಗಲಾಟೆ ಇವುಗಳ ನಡುವೆಯೂ ಜೋರಾದ ಚಪ್ಪಾಳೆಯ ಧ್ವನಿ ನಮಗೆ ಸ್ಪಷ್ಟವಾಗಿ ಕೇಳುತ್ತಿತ್ತು. ಈ ದ್ವನಿ ನಮ್ಮ
ಕಡೆಗೆ ಬರುತ್ತಿರುವುದನ್ನು ಗ್ರಹಿಸಿದ ನನ್ನ ಸ್ನೇಹಿತ ಭಯದಿಂದ ನಿದ್ರೆ ಮಾಡುವವನಂತೆ ನಟಿಸುತ್ತಾ
ನನ್ನ ಭುಜದ ಮೇಲೆ ಒರಗಿಕೊಂಡ. ಈಕಡೆ “ ಏ, ಮಾಮಾ ಕಾಸು ಕೊಡು” ಅಂತಾ ಒಬ್ಬ ಗಡಸು ದ್ವನಿಯ ಹೆಂಗಸು
ನಮ್ಮ ಮುಂದಿನ ಸೀಟಿನ ಬಳಿ ಬಂದು ನಿಂತಾಗ ನಾನು ಭಯದಿಂದ ಸಿಡುಕು ಮುಖ ಮಾಡಿಕೊಂಡು ಹಣ ಇಲ್ಲ ಎಂದೆ.
ಆಕೆ ನನ್ನ ಮೂತಿಗೆ ತಿವಿದು ಮುಂದೆ ಹೋಗಿ ಬಿಟ್ಟರು. ನನಗೆ ಅದು ದೊಡ್ಡ ಅವಮಾನ ಅನಿಸಿತು. ಆದರೂ ಸುಮ್ಮನಿದ್ದೆ.
ಇಂತಹದ್ದೇ
೩-೪ ಪ್ರಸಂಗಗಳನ್ನು ಎದುರಿಸಿದ ನಂತರ ಪ್ರತಿ ಸಲ ರೈಲಿಗೆ ಹೋಗುವಾಗ ೫-೧೦ ರೂಪಯಿಗಳನ್ನು ಹೆಚ್ಚಾಗಿ
ತಂದು ಕೈಯಲ್ಲಿಯೇ ಹಿಡಿದು ಕುಳಿತಿರುವುದು ಅವರು ಬಂದು ಹಣ ಕೇಳುವ ಮೊದಲೇ ಅವರ ಕೈಗೆ ಹಣ ಕೊಟ್ಟು ತಲೆ
ಬಗ್ಗಿಸಿ ಕೊಳಿತುಬಿಡುವುದು ನಮಗೆ ಅಭ್ಯಾಸವಾಯಿತು. ಹಣ ಪಡೆದ ಕೆಲವರು ಸುಮ್ಮನೆ ಹೋದರೆ ಮತ್ತೆ ಕೆಲವರು
ತಲೆ ಸವರಿ, ೧ ರೂಪಾಯಿಯನ್ನು ಆಶಿರ್ವಾದ ರೂಪದಲ್ಲಿ ವಾಪಸ್ಸು ಕೊಟ್ಟು ಹೋಗುತ್ತಿದ್ದರು. ಅವರು ವಾಪಸ್ಸು
ನೀಡುವ ಕಾಸು ಅದೃಷ್ಠದ್ದು ಎಂಬ ನಂಬಿಕೆ ಇದದ್ದರಿಂದ ಹಣ ಪಡೆದು ಸುಮ್ಮನಾಗುತ್ತಿದ್ದೆವು. ಮುಂದೆ ಮುಂದೆ
ನಮ್ಮ ಬಳಿ ಹಣ ಇಲ್ಲದಿದ್ದರೆ ಒಂದು ಸ್ಮೈಲ್ ಮಾಡಿ ಈವತ್ತು ಕಾಸು ಇಲ್ಲ ಅಂದರೆ ಅವರು ಮುಂದೆ ಹೋಗಿ
ಬಿಡುತ್ತಿದ್ದರು.
ಹೀಗೆ
ಕಾಸಿಗಾಗಿ ಬರುವವರು ಯಾರು ? ಎಂಬುದು ನಮಗೆ ಬಹಳ ಕುತೂಹಲದ
ವಿಷಯ. ಯಾರನ್ನಾದರೂ ಇವರ ಬಗ್ಗೆ ಕೇಳಿದರೆ, “ಹುಷಾರಾಗಿರಿ ಅವರು ನಿಮ್ಮನ್ನು ಕಿಡ್ನೆಪ್ ಮಾಡಿ ಬಿಡ್ತಾರೆ.
ನಿಮ್ಮನ್ನು ಸಹಾ ಅವರ ಹಾಗೇ ಮಾಡಿಬಿಡ್ತಾರೆ” ಎಂದು ಹೇಳಿ ಸುಮ್ಮನಾಗುತ್ತಿದ್ದರು. ನಾವು ಪ್ರಾರಂಭದಲ್ಲಿ
ರೈಲಿನಲ್ಲಿ ಚಪ್ಪಾಳೆ ಶಬ್ದ ಕೇಳಿದ ತಕ್ಷಣವೇ ಭಯ ಪಡುತ್ತಿದ್ದದ್ದು ಇದೇ ಕಾರಣಕ್ಕೆ. ಆದರೆ ಈ ಭಯ ಹೆಚ್ಚು
ದಿನ ಇರಲಿಲ್ಲ.
ಮುಂದೆ ನಮ್ಮ ಊರಿಗೆ ಇಂತಹಾ
ಹೆಂಗಸರು (ಟ್ರಾನ್ಸ ಜೆಂಡರ್) ನಮ್ಮ ಜೊತೆ ಸ್ನೇಹ ಬೆಳೆಸಿ ನಮ್ಮ ಅಂಗಡಿಗೆ ಬಂದು ಚಿಲ್ಲರೆ ಕೊಟ್ಟು
ಮಾತಾಡಿಕೊಂಡು ಹೋಗುತ್ತಿದ್ದರು. ಅವರಿಂದ ಎಂದಿಗೂ ನಾವು ಸಮಸ್ಯೆಯನ್ನಾಗಲಿ ಮುಜುಗರವನ್ನಾಗಲಿ ಎದುರಿಸುವಂತೆ
ಆಗಿರಲಿಲ್ಲ. ಆದರೆ ಬೇರೆ ಅಂಗಡಿ ಮಾಲಿಕನೊಬ್ಬ ಅವರನ್ನು ಅನಾವಶ್ಯಕವಾಗಿ ನಿಂದಿಸಿ ಬೈದು ಮುಂದೆ ಅವರು
ಇಲ್ಲಿಗೆ ಬರದಂತೆ ಮಾಡಿಬಿಟ್ಟ.
ಘಟನೆ : ೨, ಗಣೇಶ ಅಂತ ನನ್ನ
ಒಬ್ಬ ಸ್ನೇಹಿತ. ನಮ್ಮ ಊರಿನವನೇ. ನಮ್ಮದೇ ತರಗತಿಯವನು ಕೂಡಾ. ನಾವಿಬ್ಬರೂ ಒಂದೇ ಬೆಂಚಿನಲ್ಲಿ ಕುಳಿತು
ಪಾಠ ಕೇಳುತ್ತಿದ್ದವರು. ಗಣೇಶ ಮೊದಲಿನಿಂದಲೂ ಸಹಾ ಬಹಳಾ ಸಂಕೋಚದ ಸ್ವಭಾವದವನಾಗಿದ್ದ. ಆದರೆ ಬರಬರುತ್ತಾ
ಅವನ ಸಂಕೋಚ ಮತ್ತೂ ಹೆಚ್ಚಾಗುವುದಕ್ಕೆ ಪ್ರಾರಂಭವಾಗಿದಲ್ಲದೇ ಅವನ ಮಾತು ನಡಿಗೆ ಎಲ್ಲವೂ ನಮಗೆ ವಿಚತ್ರ
ಎನಿಸುವುದಕ್ಕೆ ಪ್ರಾರಂಬಿಸಿತ್ತು. ಮನೆಯಲ್ಲಿ ಕಸ ಗುಡಿಸುವ, ಅಡುಗೆ ಮಾಡುವ ಇತ್ಯಾದಿ ಕೆಲಸಗಳನ್ನೆಲ್ಲಾ
ಅವನು ಬಹಳಾ ಆಸಕ್ತಿಯಿಂದ ನಿರ್ವಹಿಸುತ್ತಿದ್ದ. ಆದರೆ ಶಾಲೆಯಲ್ಲಿ ಯಾವಾಗಲೂ ಮಂಕಾಗಿಯೇ ಇರುತ್ತಿದ್ದ.
ನಾವು ಸಹಾ ಅವನ ಈಗೀಗ ಮೊದಲಿನಂತೆ ಅವನ ಜೊತೆ ಸಲುಗೆಯಿಂದ ಇರಲು ಸಾಧ್ಯವಾಗುತ್ತಿರಲಿಲ್ಲ. ೮ ನೇ ತರಗತಿಯಲ್ಲಿ
ನಾನು ಆ ಶಾಲೆಯನ್ನು ಬಿಟ್ಟು ಮಂಡ್ಯದ ವಸತಿ ಶಾಲೆಯೊಂದಕ್ಕೆ ಸೇರಿದೆ. ರೈಲಿನಲ್ಲಿ ನಮಗೆ ಎದುರಾಗುತ್ತಿದ್ದ
ಚಪ್ಪಾಳೆ ತಟ್ಟುವವರನ್ನು ಕಂಡಾಗಲೆಲ್ಲಾ ನನಗೆ ಗಣೇಶನ ನೆನಪಾಗುತ್ತಿತ್ತು. ಮುಂದಿನ ೩ ವರ್ಷ ನಾನು
ಅವನನ್ನು ನೋಡಲಾಗಲಿಲ್ಲ.

ನಾನು
೧೦ ನೇ ತರಗತಿ ಓದಿ ಊರಿಗೆ ವಾಪಸ್ಸಾದ ಮೇಲೆ ಒಂದು ದಿನ ಗಣೇಶನೇ ನನ್ನನ್ನು ಹುಡುಕಿಕೊಂಡು ನಮ್ಮ ಮನೆಗೆ
ಬಂದಿದ್ದ. ಅವನ ಮಾತು ಚಲನೆ ನಡಿಗೆ ಎಲ್ಲವೂ ನನಗೆ ರೈಲಿನಲ್ಲಿ ಎದುರಾಗುತ್ತಿದ್ದ ಚಪ್ಪಾಳೆ ತಟ್ಟುವ
ಆ ಗಡಸು ದ್ವನಿಯವರನ್ನೇ ನೆನಪಿಸುತ್ತಿದ್ದವು. ನಮಗೆ ರೈಲಿನಲ್ಲಿ ಅವರ ಬಗ್ಗೆ ಸಲುಗೆ ಇದ್ದ ಕಾರಣ ಹಾಗೂ
ಗಣೇಶ ನಮ್ಮ ಬಾಲ್ಯಸ್ನೇಹಿತನು ಆದ ಕಾರಣ ನನಗೆ ಅವನ ಬಗೆ ಯಾವುದೇ ಭಯ ಅಥವಾ ಬೇಸರದ ಭಾವನೆ ಉಂಟಾಗಲಿಲ್ಲ.
ಮುಂದೆ ಅವನು ನಮ್ಮ ಮನೆಗೆ ಬರುವುದು ಹೋಗುವುದು. ನಾನು ಸಮಯ ಸಿಕ್ಕಾಗ ಅವನನ್ನು ಬೇಟಿ ಮಾಡುವುದು ನಡೆದೇ
ಇತ್ತು. ಹೀಗೆ ಇರುವಾಗ ನಮ್ಮ ಕೆಲವು ಸ್ನೇಹಿತರು ನಾನು ಗಣೇಶನ ಜೋತೆ ಸ್ನೇಹದಿಂದಿರುವುದನ್ನು ಕಂಡಿದ್ದರು.
ಅವರಲ್ಲಿ ಒಬ್ಬ “ನೀನು ಯಾಕೆ ಅವನ ಜೊತೆ ಓಡಾಡುವುದು, ಅವರ
ಮನೆಗೆಲ್ಲಾ ಹೋಗ್ತೀಯಾ! ಅವನು ಸರಿಯಿಲ್ಲ. ಅವರ ಅಮ್ಮನು ಸರಿಯಿಲ್ಲ. ಅವರು ದುಡ್ಡಿಗೋಸ್ಕರ ಏನು ಬೇಕಾದರೂ
ಮಾಡ್ತಾರೆ. ನೀನು ಹುಷಾರಾಗಿರು. ಎಸ್ ಎಲ್ ಸಿ ನಲ್ಲಿ ಏಡ್ಸ ಬಗ್ಗೆ ಪಾಠ ಕೇಳಿಲ್ವಾ ನೀನು ?. ನೊಡಿದವರು
ನಿನ್ನನು ಸಹಾ ಅವರ ತರಾನೇ ಅಂದುಕೊಂಡುಬಿಡ್ತಾರೆ. ನೊಡ್ಕೋ, ಇನ್ನ ಸ್ವಲ್ಪ ದಿನ ಅಷ್ಟೇ ಅವನು ಇಲ್ಲಿ
ಇರಲ್ಲ, ಕೋಜ ಅವರ ಜೊತೆ ಹೊರಟು ಹೋಗ್ತಾನೆ, ನೀನು ಅವನ ಜೊತೆ ಇದ್ದರೆ ನಿನ್ನನು ಕರಕೊಂಡು ಹೋಗಿಬಿಡ್ತಾನೆ“
ಎಂದು ಹೇಳಿ ನಗುತ್ತಾ ಹೊರಟು ಹೋದ. ಅವನ ಮಾತು, ನಗು, ಅವನ ಮುಖದಲ್ಲಿದ್ದ ಒಂದು ರೀತಿಯ ಕುಹಕ ಅವನು
ಏಡ್ಸ ಬಗ್ಗೆ ಹೇಳಿದ್ದು ಇವುಗಳಿಂದ ನನಗೆ ವಿಷಯ ಏನು ಎಂಬುದು ಅರ್ಥವಾಗದಿದ್ದರು ಭಯವಾಗಿದಂತೂ ನಿಜ.
ಅಲ್ಲಿಂದ ಮುಂದೆ ನಾನು ಗಣೇಶನ ಮನೆಗೆ ಹೋಗುವುದನ್ನು ನಿಲ್ಲಿಸಿದೆ. ನಂತರ ನಾನು ಮುಂದಿನ ವಿದ್ಯಾಭ್ಯಾಸಕ್ಕಾಗಿ
ಮತ್ತೊಂದು ಊರಿನ ವಸತಿ ಶಾಲೆಗೆ ಸೇರಿದರಿಂದ ಗಣೇಶನ ಸಂಪರ್ಕ ಮತ್ತೆ ತಪ್ಪಿ ಹೋಗಿತ್ತು.
ಆಗಾಗ ಗಣೇಶ ನನಗೆ ನೆನಪಾಗುತ್ತಿದ್ದ, ನೆನಪಾದಾಗಲೆಲ್ಲಾ ನನ್ನ
ಸ್ನೇಹಿತ ಹೇಳಿದಂತೆ ಗಣೇಶ ಮನೆ ಬಿಟ್ಟು ಹೋಗಿಬಿಟ್ಟಿರಬಹುದು. ಮತ್ತೆ ಅವನನ್ನು ನೋಡಲು ಸಾಧ್ಯವಾಗುವುದಿಲ್ಲ
ಎಂದು ಭಾವಿಸಿಕೊಂಡು. ಅವನು ರೈಲಿನಲ್ಲಿ ಕಾಸು ಕೇಳುತ್ತಿರುವ ಹಾಗೆ ಕಲ್ಪಿಸಿಕೊಳ್ಳುತ್ತಿದ್ದೆ. ಆದರೆ
ನನ್ನ ಊಹೆ ನಿಜವಾಗಿರಲಿಲ್ಲ. ೪ ವರ್ಷಗಳ ನಂತರ ನಾನು ಅವನನ್ನು ಪುನಃ ಕಂಡಾಗ ಅವನು ಬಿ. ಕಾಂ. ಮೂರನೇ ವರ್ಷ ಅಧ್ಯಯನ ಮಾಡುತ್ತಿದ್ದ.
ಅದೇ ಪ್ರೀತಿ ತುಂಬಿದ ಕಣ್ಣುಗಳು, ಮುಗ್ಧ ಮುಖ, ಗಡುಸಾದ ಧ್ವನಿ ಯಾವುದೇ ಬದಲಾವಣೆ ಇರಲಿಲ್ಲ. ಅವನಿಗೆ
ಡಿಗ್ರಿ ಆದಮೇಲೆ ಎಂ.ಕಾಂ. ಮಾಡುವ ಆಸೆ ಇತ್ತಾದರೂ
ಮುಂದೆ ಓದಲಾಗಲಿಲ್ಲ. ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ ಅವರ ಅಕ್ಕನಿಗೆ ಮದುವೆ ಮಾಡಿದ. ಅಪ್ಪ ಅಮ್ಮನನ್ನು
ನೋಡಿಕೊಂಡು ಕೆಲಸ ಮಾಡಿಕೊಂಡು ಸಣ್ಣ ಪುಟ್ಟ ಟೀಕೆ ಅವಮಾನಗಳನ್ನು ಎದುರಿಸಿಕೊಂಡು ಇರುವುದರಲ್ಲಿ ಆರಾಮಾಗೇ
ಇದ್ದಾನೆ.
ಘಟನೆ : ೩, ನನ್ನ ಹತ್ತನೆಯ
ತರಗತಿ ಓದಿನ ನಂತರ ನನ್ನ ತಲೆ ನೋವಿನ ಪರಿಹಾರಕ್ಕಾಗಿ ಹಾಗೂ ಆಸಕ್ತಿಯ ಕಾರಣದಿಂದ ಧ್ಯಾನ, ಪ್ರಾಣಾಯಾಮ,
ಕೌನ್ಸಲಿಂಗ್, ಸ್ವಯಂ ಸಮ್ಮೋಹಿನಿ, ರೇಖಿ, ಪ್ರಾಣಿಕ್ ಹೀಲಿಂಗ್ ಮುಂತಾದ ಪರ್ಯಾಯ ಚಿಕಿತ್ಸೆಗಳನ್ನು
ಕಲಿಯುತಿದ್ದೆ. ಒಮ್ಮೆ ಆಸ್ಪತ್ರೆಯೊಂದರಲ್ಲಿ ರುಕ್ಮಿಣಿ ಎಂಬ ಒಬ್ಬ ಹೆಂಗಸಿನ ಪರಿಚಯವಾಗಿ, ನಾನು ಪರ್ಯಾಯ
ಚಿಕಿತ್ಸೆಗಳನ್ನು ಕಲಿತಿದ್ದು ಅದರಿಂದ ಎಲ್ಲಾ ತರದ ಕಾಯಿಲೆಗಳನ್ನು ವಾಸಿ ಮಾಡಬಹುದು ಎಂದು ಜಂಬದಿಂದ
ಹೇಳಿದೆ. ಇದಾದ ಕೆಲವು ದಿನಗಳ ನಂತರ ಆಕೆ ನನ್ನನ್ನು ಸಂಪರ್ಕಿಸಿ ಧ್ಯಾನ ಕಲಿಯಲು ನಮ್ಮ ಮನೆಗೆ ಬರುವುದಕ್ಕೆ
ಪ್ರಾರಂಭಿಸಿದರು. ನನಗೆ ಒಬ್ಬರು ಪೇಷೆಂಟ್ ಸಿಕ್ಕಿದ್ದಾರೆ ಇವರಿಗೆ ನಾನು ಕಲಿತಿರುವುದನ್ನೆಲ್ಲಾ
ಕಲಿಸಿ ಇವರ ಕಾಯಿಲೆ ವಾಸಿ ಮಾಡಬೇಕೆಂದು ಬಹಳಾ ಆಸಕ್ತಿಯಿಂದ ಅವರ ಕಷ್ಟಗಳನ್ನ ಕೇಳುತ್ತಿದ್ದಾಗ ಒಂದು
ದಿನ ಆಕೆ “ನನಗೆ ನನ್ನ ಗಂಡ ಅಂದರೆ ಇಷ್ಟ ಇಲ್ಲ. ನನಗೆ ಯಾವ ಗಂಡಸರ ಬಗ್ಗೆನೂ ಆಸೆ ಇಲ್ಲ. ನನಗೆ ಹೆಂಗಸರು
ಅಂದರೆ ಆಸೆ ಅಷ್ಟೇ, ನೀವು ಹೇಗಾದರೂ ಮಾಡಿ ನನ್ನ ಗಂಡ ನನ್ನ ಬಿಟ್ಟು ಹೋಗೂ ಹಾಗೆ ಮಾಡಿ, ಕಾಸು ಎಷ್ಟಾದರೂ
ಆಗಲಿ, ನಾನು ಹೊಂದಿಸಿ ಕೊಡ್ತೀನಿ” ಎಂದು ಹೇಳಿದಳು. ಇದು ನನಗೆ ಬಹಳ ವಿಚಿತ್ರ ಅನಿಸಿತು. ಹೆಂಗಸರ
ಮಾತ್ರ ಆಸೆ ಇರುವುದು ಅಂದರೇನು ಅನ್ನುವುದೇ ನನಗೆ ಅರ್ಥ ಆಗಲಿಲ್ಲ. ಅವರು ಮುಂದಿನ ಸಲ ಬಂದಾಗ “ಇದೊಂದ
ಸಮಸ್ಯೆ ಏನು ಅಲ್ಲ. ನಿಮ್ಮ ತರ ಬೇರೆ ಬೇರೆ ದೇಶಗಳಲ್ಲಿ ಕೂಡಾ ಬಹಳಾ ಜನ ಇದ್ದಾರೆ. ನೀವು ಏನು ಯೋಚನೆ
ಮಾಡಬೇಡಿ. ನೀವು ನಿಮ್ಮ ಗಂಡನನ್ನ ಒಂದು ಸಲ ಕರೆದುಕೊಂಡು ಬನ್ನಿ ಅಂತ ಹೇಳಿ ಅವರ ಗಂಡನಿಗೆ “ನೀವು
ನಿಮ್ಮ ಮನೆಯವರ ಬಗ್ಗೆ ಜಾಸ್ತಿ ಗಮನ ಕೊಡ್ತಾ ಇಲ್ಲ, ಹಾಗಾಗಿ ಅವರು ಮಾನಸಿಕವಾಗಿ ತುಂಬಾ ಕುಗ್ಗಿದ್ದಾರೆ.
ನೀವು ಅವರನ್ನ ಚನ್ನಾಗಿ ನೊಡಿಕೊಳ್ಳಬೇಕು ಅಂತ ಹೇಳಿದೆ. ಮುಂದೆ ರುಕ್ಮಿಣಿಯವರಿಗೆ ನನಗೆ ತಿಳಿದವರೊಬ್ಬರ ಮೂಲಕ ಕೌನ್ಸಲಿಂಗ್
ಕೊಡಿಸಿದೆ. ಈಗ ರುಕ್ಮಿಣಿ ಅವರ ಗಂಡ ಮಕ್ಕಳ ಜೊತೆ ಆರಾಮವಾಗಿದ್ದಾರೆ. ಅವರ ಮಾನಸಿಕ ಭಾವನೆಗಳಲ್ಲಿ
ಬದಲಾವಣೆಗಳು ಆಗಿಲ್ಲದಿದ್ದರೂ ಸಹಾ ತನ್ನ ಮನೆ ವಾತಾವರಣಕ್ಕೆ ಹೊಂದಿಕೊಂಡು ಹೋಗುವುದನ್ನು ಅಭ್ಯಾಸ
ಮಾಡಿಕೊಂದಿದ್ದರಿಂದ ರುಕ್ಮಿಣಿ ಆರಾಮವಾಗಿರಲು ಸಾಧ್ಯವಾಗಿದೆ.
ಈ ಘಟನೆಗಳ ಮೂಲಕ ಭಿನ್ನ ಲೈಂಗಿಕತೆಯ
ಜನರ ಕಷ್ಟಗಳು, ಅವರು ಎದುರಿಸುತ್ತಿರುವ ಸಮಸ್ಯೆಗಳು, ಅವರ ಜೀವನ ಪ್ರೀತಿ, ಸಮಾಜ ಅವರನ್ನು ಗೌರವದಿಂದ,
ಸ್ನೇಹ ಭಾವದಿಂದ ನೋಡಬೇಕೆಂಬ ಹಂಬಲ, ಭಿನ್ನ ಲೈಂಗಿಕತೆಯ ಜನರು ಅನುಭವಿಸುವ ಮಾನಸಿಕ ತಳಮಳ, ಅವರ ಅಸಹಾಯಕತೆ,
ಅವರಲ್ಲಿ ಅಡಗಿರುವ ಮಾನವೀಯತೆ, ಬದುಕುವ ಅದಮ್ಯ ಛಲ ಮುಂತಾದವುಗಳನ್ನು ನಾನು ಸ್ವಲ್ಪ ಮಟ್ಟಿಗೆ ಗುರುತಿಸಲು ಗುರುತಿಸಲು ಸಾಧ್ಯವಾಗಿದೆ. ಗಣೇಶ ನಂತೆ, ರುಕ್ಮಿಣಿಯಂತೆ
ಹಲವರು ನಮ್ಮ ನಡುವೆಯೇ ಜೀವಿಸುತ್ತಿರುವರು. ಮೊದಲ ಘಟನೆಯಲ್ಲಿ ಬರುವಂತಹಾ ಮಂಗಳ ಮುಖಿಯರು ಹಲವಾರು
ಜನ ನಮ್ಮ ನಡುವೆ ಇದ್ದಾರೆ. ಇಂತಹವರನ್ನು ಗೌರವದಿಂದ ಪ್ರೀತಿಯಿಂದ ಕಾಣುವುದು ನಮ್ಮ ಕರ್ತವ್ಯ ಎಂಬುದು
ಹಾಗೂ ಇಂತಹಾ ಬಿನ್ನ ಲೈಂಗಿಕತೆ ಸಾಮಾನ್ಯದಲ್ಲಿ ಸಾಮಾನ್ಯ ಮತ್ತು ಸಹಜವಾದ್ದು ಎಂಬುದು ನನಗೆ ಈ ವ್ಯಕ್ತಿಗಳ
ಸಂಪರ್ಕದಿಂದಾಗಿ ತಿಳಿದಿದೆ. ಓದುಗರು ಇಂತಹಾ ಯಾವುದಾದರೂ ಒಂದು ಅಂಶವನ್ನು ಗ್ರಹಿಸಿ ಅವರ ಮನಸ್ಥಿತಿಯನ್ನು
ಬದಲಿಸಿಕೊಳ್ಳುವಲ್ಲಿ ಈ ಬರಹ ನೆರವಾಗಬಹುದೆಂಬ ನಂಬಿಕೆಯಿಂದ ಈ ಚರ್ಚೆಯನ್ನಿಲ್ಲಿಗೆ ಸಮಾಪ್ತಿ ಮಾಡುವೆ.
- ವರುಣ್ ರಾಜ್ ಜೀ. ಸಂಶೋಧನಾರ್ಥಿ,
ಕನ್ನಡ
ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ. ತುಮಕೂರು.
ದೂರವಾಣಿ
: 9448241450
ಮಿಂಚಂಚೆ
: maharishivarunrajji@gmail.com
Comments
Post a Comment