ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.
ಕೋಲಾರ ಜಿಲ್ಲಾ ಪರಿಸರದಲ್ಲಿ ವಚನ, ಕೀರ್ತನ, ತತ್ವಪದ ಮುಂತಾದ ಅನುಭಾವಿ ಸಾಹಿತ್ಯ ಪರಂಪರೆ ಹಾಗೂ ಅಚಲ, ಆರೂಢ, ಅವಧೂತ, ಸೂಫಿ, ದಾಸ ಮುಂತಾದ ಅನುಭಾವಿ ಆಧ್ಯಾತ್ಮ ಪರಂಪರೆಗಳು ಇವೆ. ಪ್ರತಿಯೊಂದು ಊರಿನಲ್ಲೂ ಜನರೆಲ್ಲ ಜಾತಿ, ಮತ, ಭೇದಗಳನ್ನು ಮರೆತು ಒಂದಾಗಿ ಸೇರಿ ತತ್ವಪದಗಳನ್ನು ಭಜನೆಯ ಹಾಡಿ, ವಿಚಾರಕ್ಕೆ ಹಾಕುವ, ಚರ್ಚಿಸಿ ವಿವರಿಸಿಕ್ಕೊಳ್ಳುವುದನ್ನು ನೊಡಬಹುದಾಗಿದೆ. ಇಂತಹಾ ತತ್ವಪದಕಾರರ ಪರಂಪರೆ ಅವಿಭಜಿತ ಕೋಲಾರ ಜಿಲ್ಲೆಯಾದ್ಯಂತ ಹರಡಿದ್ದು ಜಿಲ್ಲೆಯ ಕೆಲವು ತತ್ವಪದಕಾರರನ್ನು ಅವರ ಕಾಲ ಕೃತಿ ಹಾಗೂ ವಿಚಾರಗಳೊಂದಿಗೆ ಪರಿಚಯಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗುವುದು.
ಕೈವಾರ ಯೋಗಿನಾರೇಯಣಪ್ಪ(ತಾತಯ್ಯ)ನವರು.
೧೭೨೬ ರಲ್ಲಿ ಬಲಿಜ ಜನಾಂಗಕ್ಕೆ ಸೇರಿದ ಮುದ್ದಮ್ಮ ಕೊಂಡಪ್ಪ ದಂಪತಿಗಳ ಮಗನಾಗಿ ಹುಟ್ಟಿದ ಯೋಗಿನಾರೇಯಣರ ಜನ್ಮನಾಮ ನಾರಾಣಪ್ಪ. ತಂದೆ ತಾಯಿ ದೈವಭಕ್ತರು. ನಾರಾಣಪ್ಪನ ತಂದೆ ಬಳೆ ವ್ಯಾಪಾರಿಗಳು. ಅವರ ದುಡಿಮೆಯಲ್ಲೇ ಸಂತೃಪ್ತ ಜೀವನ ಕಂಡವರು. ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡ ಹುಡುಗ ನಾರಾಣಪ್ಪ ಅಮರನಾರಾಯಣ ದೇವಸ್ಥಾನದ ಅರ್ಚಕರ ಆಶ್ರಯಲ್ಲಿ ಬೆಳೆದನು. ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ಲದೇ ಯಾವಾಗಲೂ ಆಧ್ಯಾತ್ಮ ಚಿಂತನ - ಮಂಥನಗಳಲ್ಲಿ ಮಗ್ನನಾಗಿರುತ್ತಿದ್ದನು. ಸಾಕು ತಂದೆ ತಾಯಿಗಳು ಹೇಳುತ್ತಿದ್ದ ಪುರಾಣಗಳು, ಪುಣ್ಯಪುರುಷರ ಕಥೆಗಳಿಂದ ಸ್ಫೂರ್ತಿಪಡೆದ ನಾರಾಣಪ್ಪನಿಗೆ ಐಹಿಕ ವಿಷಯಗಳ ಕುರಿತು ಹೆಚ್ಚು ಆಸಕ್ತಿ ಇರಲಿಲ್ಲ.
ಊರಿನ ಕೂಲಿಮಠದಲ್ಲಿ ಸಂಸ್ಕೃತ, ಕನ್ನಡ, ತೆಲುಗು ಭಾಷೆಗಳನ್ನು ಕಲಿತು ಪಾರಂಗತನಾಗಿ ಪ್ರೌಢ ವಯಸ್ಕನಾದಾಗ, ಹಿರಿಯರು ಮುಂದೆ ನಿಂತು ನಾರೇಣಪ್ಪನ ಸೋದರತ್ತೆಯ ಮಗಳಾದ ಮುನಿಯಮ್ಮನನ್ನು ಕೊಟ್ಟು ವಿವಾಹ ನೆರವೇರಿಸಿ ಗೃಹಸ್ಥಾಶ್ರಮ ಸ್ವೀಕಾರ ಮಾಡಿಸಿದ್ದರು. ಈ ದಂಪತಿಗಳಿಗೆ ಮುದ್ದಮ, ಪೆದ್ದಕೊಂಡಪ್ಪ, ಚಿಕ್ಕಕೊಂಡಪ್ಪ ಎಂಬ ಮೂವರು ಮಕ್ಕಳಾದರು. ಸಂಸಾರ ದೊಡ್ಡದಾಗಿ ಜೀವನ ನಿರ್ವಹಣೆ ಕಷ್ಟವಾಯಿತು. ನರೇಣಪ್ಪ ದುಡಿಮೆಯಲ್ಲಿ ಆಸಕ್ತಿ ತಾಳದೇ ಸದಾ ಕಾಲ ದೇವರ ಧ್ಯಾನ ಮಾಡುತ್ತ ಕುಳಿತಿರುತ್ತಿದ್ದ. ಹೀಗಾದರೇ ಹೊಟ್ಟೆ ತುಂಬುವುದಾದರೂ ಹೇಗೆ? ಹೆಂಡತಿ ಮುನಿಯಮ್ಮ ಬಳೆ ಮಲಾರ ಕೈಗಿತ್ತು ವ್ಯಾಪಾರಕ್ಕೆ ಹೋಗಿ ದಿನಕ್ಕಿಷ್ಟು ತರಲೇ ಬೇಕೆಂದು ನಾರೇಣಪ್ಪನಿಗೆ ತಾಕೀತು ಮಾಡುತ್ತಿದ್ದಳು.
ಅದೊಂದು ದಿನ ನಾರಾಣಪ್ಪ ಬಳೆ ಮಲಾರ ಹೆಗಲಿಗೇರಿಸಿ ಮೂಗೊಳಿ ವೆಂಕಟಗಿರಿ ಕಣಿವೆಯಲ್ಲಿ ಸಾಗುತ್ತಿರುವಾಗ ದಿವ್ಯ ತೇಜಸ್ಸಿನ ಪ್ರಖರತೆಯಲ್ಲಿ ಸ್ವಾಮಿಗಳೊಬ್ಬರಿಂದ ʼಓಂ ನಮೋ ನಾರಾಯಣಾಯʼ ಎಂಬ ಅಷ್ಟ ಬೀಜಾಕ್ಷರಿ ಮಂತ್ರೋಪದೇಶ ದೊರೆಯಿತು. ಬಾಯಲ್ಲಿ ಬೆಣಚು ಕಲ್ಲು ಇಟ್ಟುಕೊಂಡು ಅದು ಕಲ್ಲು ಸಕ್ಕರೆಯಾಗುವವರೆಗೂ ಈ ಮಂತ್ರವನ್ನು ಜಪಿಸು ನೀನು ಶ್ರೀಹರಿಯ ಕೃಪಾಕಟಾಕ್ಷದಿಂದ ದೈವಾಂಶಸಂಭೂತನಾಗಿ ಯೋಗಸಿದ್ಧಿ ಹೊಂದುವೆ ಎಂದು ಉಪದೇಶ ನೀಡಿದ ಪರದೇಶಿ ಸ್ವಾಮಿಗಳು ಹರಸಿದ್ದರು. ಮುಂದೆ ತಪಸ್ಸಿಗೆ ಪ್ರಶಸ್ತವೆನಿಸಿದ ನರಸಿಂಹ ಗುಹೆಯಲ್ಲಿ ಕುಳಿತು ಬೀಜಾಕ್ಷರಿ ಮಂತ್ರ ಜಪಿಸುತ್ತಾ ಮೂರು ವರುಷಗಳ ಕಠಿಣ ತಪಸ್ಸನ್ನು ಆಚರಿಸಿದ ಫಲವಾಗಿ ಬೆಣಚು ಕಲ್ಲು ಸಕ್ಕರೆಯಾಯಿತಂತೆ.
ಕೈವಾರ ತಾತಯ್ಯ ೧೧೦ ವರುಷಗಳಷ್ಟು ಸುದೀರ್ಘ ಕಾಲ (೧೭೨೬-೧೮೩೬) ಬಾಳಿದವರು. ಇವರು ಕನ್ನಡ ದಲ್ಲಿ ೧೮ ಕೀರ್ತನೆಗಳನ್ನು ಮತ್ತು ತೆಲುಗಿನಲ್ಲಿ ಕಾಲಜ್ಞಾನ, ನಾದಬ್ರಹ್ಮಾ ನಂದ ನಾರಾಯಣ ಕವಿ ಶತಕ, ತಾರಕ ಬ್ರಹ್ಮಾನಂದ ದ್ವಯಕಂದ ಶತಕ, ಬ್ರಹ್ಮಾಂಡಪುರೀ ಶತಕ, ಅಮರ ನಾರೇಯಣ ಶತಕ, ವಿಮಲಾತ್ಮ ನಾರೇಯಣ ಕವಿ ಶತಕ, ಮುಂತಾದ ಕೃತಿಗಳು ಸೇರಿದಂತೆ ಹಲವಾರು ತತ್ವಪದಗಳನ್ನು ರಚಿಸಿದ್ದಾರೆ. ಶ್ರೀ ಕೈವಾರ ಯೋಗಿ ನಾರೇಣಪ್ಪನವರು ಹೆಸರಿನಲ್ಲಿ ಹಲವರು ಜೀವನ ಚರಿತ್ರೆ, ಮಹಾತ್ಮೆಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಶ್ರೀ ಕೈವಾರ ನಾರಾಯಣಪ್ಪ ನವರು ಜೀವಂತ ಸಮಾಧಿಯ ನಂತರ ಅವರ ಶಿಷ್ಯನಾದ ಮುತ್ತಯ್ಯನು ಹಾಗೂ ಅವನ ಶಿಷ್ಯ ಪರಂಪರೆಯವರು ಮಠವನ್ನು ನಡೆಸಿಕೊಂಡು ಬಂದಿದ್ದು ಇಂದಿಗೂ ಸಹಾ ಕೈವಾರ ಒಂದು ಪ್ರಸಿದ್ಧ ದಾರ್ಮಿಕ ಹಾಗೂ ಯಾತ್ರಾ ಸ್ಥಳವಾಗಿದೆ.
ಕೈವಾರ ನಾರೇಣಪ್ಪನವರು ತತ್ವಪದ ಸಾಹಿತ್ಯ ಚರಿತ್ರೆಯಲ್ಲಿ ಶಿಶುನಾಳ ಶರೀಫರಿಗಿಂತ ಹಿಂದಿನವರಾಗಿದ್ದು, ಇವರನ್ನು ಚಂದ್ರಶೇಖರ ನಂಗಲಿಯವರು ʼಮೊದಲ ದ್ವಿಭಾಷಾ ತತ್ವಪದಕಾರರೆಂದುʼ, ಲಕ್ಷ್ಮೀಪತಿ ಕೋಲಾರ ಅವರು ʼವಸಾಹತುಶಾಹಿಯ ಆರ್ಥಿಕ ಸೂಕ್ಷ್ಮಗಳಿಗೆ ಪ್ರತಿಕ್ರಿಯಿಸಿದವರೆಂದುʼ ಸ. ರಘುನಾಥ ಅವರು ʼಅದ್ವೈತದ ದೀವಟಿಗೆ ಹಿಡಿದ ಯೋಗಿʼ ಎಂದು ಕರೆದಿರುವರು.
ಗಟ್ಟ ಹಳ್ಳಿ ಪರಮಹಂಸ ಆಂಜಿನಪ್ಪ ಸ್ವಾಮಿಗಳು
ತಮಿಳುನಾಡಿನ ಹೊಸೂರು ತಾಲೂಕಿನ ಶೀಕನಪಲ್ಲಿ ಗ್ರಾಮಮದಲ್ಲಿ ಶ್ರೀ ಗವಿಯಪ್ಪ ಕಾಳಮಾಂಬ ದಂಪತಿಗಳ ಮೂರನೇ ಮಗನಾಗಿ ಶ್ರೀ ಆಂಜಿನಪ್ಪಸ್ವಾಮಿಗಳು ೧೮೬೯ ರಲ್ಲಿ ಜನಿಸಿದರು. ತಂದೆ ತಾಯಿಗಳು ಮಕ್ಕಳಿಗಾಗಿ ಹಲವು ವ್ರತ ಉಪವಾಸಗಳನ್ನು ಮಾಡಿ, ಚಿಕಿತ್ಸೆ ಪಡೆದು ನಂತರ ಮಕ್ಕಳನ್ನು ಪಡೆದ್ದಿದರು. ಮಕ್ಕಳು ಜನಿಸಿದ ಕೆಲವು ಕಾಲದಲ್ಲಿಯೇ ತಂದೆ ಗವಿಯಪ್ಪ ನವರು ನಿಧನ ಹೊಂದಲು ತಾಯಿ ಹೊಟ್ಟೆ ಪಾಡಿಗಾಗಿ ಮಕ್ಕಳನ್ನು ಕರೆದುಕೊಂಡು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅರಕೆರೆ ಗ್ರಾಮಕ್ಕೆ ಬಂದು ಕೂಲಿ ನಾಲಿ ಮಾಡುತ್ತಾ ಜೀವನ ನಡೆಸುತ್ತಿದರು. ಮಗನಾದ ಆಂಜಿನಪ್ಪ ಮಾತ್ರ ಹತ್ತಿರದ ಚೌಡಮ್ಮನ ಗುಡಿಯಲ್ಲಿ ಧ್ಯಾನಾಸಕ್ತನಾಗಿ ಕೂರುವುದು ಅಥವಾ ತುಳಸಿ ಗಿಡಗಳಿಗೆ ನೀರು ಹಾಕುವುದು ಇಷ್ಟರಲ್ಲಿಯೇ ಕಾಲ ಕಳೆಯುತ್ತಿದ.
ಮುಂದೆ ತಾಯಿಯ ಮಾತಿಗೆ ಮಣಿದು ಪರಿಚಿತರೊಬ್ಬರ ಮನೆಯಲ್ಲಿ ಊಳಿಗಕ್ಕೆ ನಿಂತ ಆಂಜಿನಪ್ಪನವರು ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಾ, ಧನ ಮೇಯಿಸುತ್ತಾ, ಊಟ ಮಾಡಿ ರಾತ್ರಿ ಸಮಯದಲ್ಲಿ ಧ್ಯಾನ ಮಾಡುತ್ತಾ ತನಗೆ ವರವಾಗಿ ಸಿಕ್ಕ ಪುಸ್ತಕದಲ್ಲಿ ತನ್ನ ಅನುಭವಗಳನ್ನು ಕೀರ್ತನೆ, ತ್ರಿಪದಿಗಳ ರೂಪದಲ್ಲಿ ದಾಖಲಿಸುತ್ತಾ, ತನ್ನ ಇಷ್ಟ ದೈವ ಆಂಜಿನೇಯ ಸ್ವಾಮಿಯ ಧ್ಯಾನ, ಸ್ಮರಣೆಗಳಲ್ಲಿ ಕಾಲ ಕಳೆಯುತ್ತಿರಲು ತನ್ನ ೨೦ ನೇ ವಯಸ್ಸಿನಲ್ಲಿ ತನ್ನ ಪೊಷಕನಾದ ವೆಂಕಟಪ್ಪನವರ 10 ವರ್ಷ ವಯಸ್ಸಿನ ಮಗಳಾದ ಪಂಪಮ್ಮನೊಂದಿಗೆ ಆಂಜಿನಪ್ಪನವರನ್ನು ವಿವಾಹ ಮಾಡಿಕೊಂಡರು.
ಆಂಜಿನಪ್ಪ ನವರು ತಮ್ಮ 35 ನೇ ವಯಸ್ಸಿನಲ್ಲಿ ಅಂದರೇ 11-10-1903 ರಂದು ತಮ್ಮ ಕಾರಣಗುರು ರಾಮಕೃಷ್ಣಾರ್ಯರನ್ನು ಭೇಟಿಯಾಗಿ ʼಐಕ್ಯಸಂಧಾನಯೋಗʼ ಎಂಬ ಯೋಗ ವಿಧಾನವನ್ನು ಗುರುವಿನಿಂದ ಕಲಿತು ಆ ಯೋಗ ಸಾಧನೆಯ ಫಲವಾಗಿ ಹಲವಾರು ಪವಾಡಗಳನ್ನು ಮೆರೆದು ಗಟ್ಟಹಳ್ಳಿಯಲ್ಲಿ ಆಶ್ರಮ ನಿರ್ಮಿಸಿ ಜನರ ಕಷ್ಟ ಸುಖಗಳನ್ನು ಪರಿಹರಿಸುತ್ತಾ 107 ವರ್ಷಗಳ ತುಂಬು ಜೀವನವನ್ನು ನಡೆಸಿ 1971 ನೇ ಇಸ್ವೀ ಏಪ್ರಿಲ್ 30 ರಂದು ಶುಕ್ರವಾರ ಇಹಲೋಕವನ್ನು ತ್ಯಜಿಸಿದರು.
ಶ್ರೀ ಪರಮಹಂಸ ಗಟ್ಟಹಳ್ಳಿ ಆಂಜಿನಪ್ಪ ಸ್ವಾಮಿಗಳವರು “ಅನುಭವ ವೇದಾಂತ ರತ್ನಾವಳಿ” ಎಂಬ ತತ್ವಪದಗಳ ಸಂಕಲನ ಗ್ರಂಥವನ್ನು ರಚಿಸಿದ್ದಾರೆ. “ಮೇಲೆ ಮಂಟಪದಲ್ಲಿ ನೋಡಣ್ಣ” “ಊರು ದೇವರ ಮಾಡಬೇಕಣ್ಣಾ“ ಸೇರಿದಂತೆ ಹಲವು ಪ್ರಸಿದ್ದ ಕೀರ್ತನೆಗಳನ್ನು ಈ ಸಂಕಲನ ಒಳಗೊಂಡಿದೆ. ಇದರ ಜೊತೆಗೆ ಆಂಜಿನಪ್ಪ ಸ್ವಾಮಿಗಳವರು ಕಾಲಜ್ಞಾನ ಶತಕ, ಪರಮಾತ್ಮ ಕವಿ ಶತಕ, ಮುಂತಾದ ಕೃತಿಗಳನ್ನು “ನಿರ್ಮಲಾತ್ಮ“ ಎಂಬ ಅಂಕಿತದಲ್ಲಿ ರಚಿಸಿದ್ದಾರೆ. ಇಂದಿಗೂ ಶ್ರೀ ಗಟ್ಟಹಳ್ಳಿ ಆಂಜಿನಪ್ಪ ನವರ ಕಾರ್ಯ ಕ್ಷೇತ್ರ ಅವರ ಪವಾಡ ಹಾಗೂ ವೈರಾಗ್ಯ ಭೂಮಿ ಆದ ಗಟ್ಟಹಳ್ಳಿ ಆಂಜಿನಪ್ಪ ಸ್ವಾಮಿಗಳ ಮಠ ಒಂದು ಪ್ರಸಿದ್ದ ಯಾತ್ರಾ ಸ್ಥಳವಾಗಿದೆ.
ತಾವರಕೆರೆ ವೀರದಾಸಮ್ಮ.
ಕೋಲಾರ ಜಿಲ್ಲೆಯ ತಾವರಕೆರೆಯ ವೀರದಾಸಮ್ಮ ಕನ್ನಡದ ಅಪರೂಪದ ತತ್ವಪದಕಾರ್ತಿ. ಈಕೆ ಕೈವಾರ ನಾರೇಣಪ್ಪನ ಶಿಷ್ಯರಾದ ರಾಮಾವಧೂತರ ಶಿಷ್ಯಳು. ವೀರದಾಸಮ್ಮನ 40 ಕ್ಕೂ ಹೆಚ್ಚು ತತ್ವಪದಗಳು ದೊರೆತಿವೆ. ಇವಳ ಕಾಲ ಕ್ರಿಶ 1890 ರಿಂದ 1940 ರವರೆಗೆ ಎಂದು ಅಂದಾಜಿಸಲಾಗಿದೆ. ವಿವಾಹವಾದ ಗಂಡನನ್ನು ತೊರೆದು ತವರನ್ನು ಬಿಟ್ಟು ಸಾಧು ಸಂಘದಲ್ಲಿ ಆಧ್ಯಾತ್ಮಿಕ ಜೀವನವನ್ನು ನಡೆಸುವಳು. ವೀಳ್ಯದ ಎಲೆಯ ವ್ಯಾಪಾರ ಮಾಡುವುದು ಈಕೆಯ ಕಾಯಕ. ಮುಂದೆ ರಾಮಾವಧೂತರಿಂದ ದೀಕ್ಷೆ ಪಡೆದು ಆಧ್ಯಾತ್ಮಿಕ ಸಾಧನೆ ನಡೆಸುವಳು. ಈಕೆಯ ಕೆಲವು ತತ್ವಪದಗಳು ಗುರು – ಶಿಷ್ಯ, ಅಣ್ಣ – ತಂಗಿಯರ ಸಂವಾದದ ರೂಪದಲ್ಲಿವೆ. ಗುರು ಭಕ್ತಯೇ ಈಕೆಯ ತತ್ವಪದಗಳ ಮುಖ್ಯ ವಿಷಯ. ವೀರದಾಸಮ್ಮನ ಕುರಿತು ಹೆಚ್ಚಿನ ವಿವರಗಳು ದೊರೆತಿಲ್ಲವಾದರೂ ಸಹಾ ಆಕೆಯ ಹೆಸರಿನಲ್ಲಿ ಹಲವು ಐತಿಹ್ಯಗಳು ಇವೆ.
ವೀರದಾಸಮ್ಮನ ತತ್ವಪದಗಳನ್ನು ಕುರಿತು ಮೀನಾಕ್ಷಿ ಬಾಳಿ ಯವರು ಮುಂದಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಶಿವಯೋಗ ಮಾರ್ಗದ ಅನುಸಂಧಾನದಲ್ಲಿ ಗುರು ಕರುಣೆ ಬಹಳ ಮುಖ್ಯ. ವ್ಯಕ್ತಿ ನೆಲೆಯಿಂದ ಪ್ರಾರಂಭವಾಗುವ ಗುರುಮಾರ್ಗ ಕ್ರಮಿಸುತ್ತ ವ್ಯಕ್ತಿ ಲಯವಾಗಿ ಅರಿವೇ ಗುರುವಾಗಿ, ಅರಿವು ಬೆರಗಾಗಿ, ಬೆರಗು ನಿಬ್ಬೆರಗಾಗುವ ಪರಿಯನ್ನು ವೀರದಾಸಮ್ಮ ವಿವರಿಸುತ್ತಾಳೆ. ಒಂದು ಹಂತದಲ್ಲಿ ಗುರುಶಿಷ್ಯರಿಬ್ಬರು ಏಕವಾಗಿ ಅನ್ವಯವಾಗುವ ಗಮ್ಮತ್ತನ್ನು ಇವಳಷ್ಟು ಆಪ್ತವಾಗಿ ವಿವರಿಸುವ ತತ್ವಪದಕಾರ್ತಿ ಇನ್ನೊಬ್ಬಳಿಲ್ಲ. ಬಹುತೇಕ ಪದಗಳು ಗುರುವಿನ ಸ್ಮರಣೆಯಿಂದಲೇ ಪ್ರಾರಂಭವಾಗುತ್ತಲೆ ಮುಂದುವರಿದಂತೆ ದಾಸ್ಯ, ಸಖ್ಯ ಭಾವವು ಹಿಂದೆ ಬಿದ್ದು ಸ್ವಸ್ವರೂಪದಲ್ಲಿ ವಿರಮಿಸುತ್ತದೆ.”೧
ಕೃಷ್ಣಂನಕೊತ್ತೂರು ಶ್ರೀ ವೆಂಕಟದಾಸರು
ಶ್ರೀ ವೆಂಕಟದಾಸರು ಅವಿಭಜಿತ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ವ್ಯಾಪ್ತಿಯ ಕೃಷ್ಣಂಕೊತ್ತೂರು ಗ್ರಾಮದವರು. ಯಾದವ ವಂಶದ ದೂಡ್ಡ ವೇಮ್ಮನಗೌಡ ಪಟೇಲ್ ವೃತ್ತಿಯನ್ನು ಹಾಗೂ ಚಿಕ್ಕವೇಮನಗೌಡ ವ್ಯವಸಾಯ ವೃತ್ತಿಯನ್ನು ಮಾಡಿಕೊಂಡು ಇರಲು ಹಲವು ಕಾಲದ ನಂತರವೂ ಇಬ್ಬರಿಗೂ ಸಂತಾನವಿಲ್ಲದೇ ತಿರುಪತಿ ತಿಮ್ಮಪನಿಗೆ ಹರಕೆ ಮಾಡಿಕೊಂಡುದ್ದರ ಫಲವಾಗಿ ಮುನಿಯಮಾಂಬ ಹಾಗೂ ವೇಮನಗೌಡರ ಮಗನಾಗಿ ವೆಂಕಟದಾಸು ರವರು ಜನಿಸಿದರಂತೆ.
ತಿರುಪತಿ ತಿಮ್ಮಪನ ಕೃಪೆಯಿಂದ ಜನಿಸಿದ ಕಾರಣ ವೆಂಕಟರಾಯನೆಂದು ಮಗುವಿಗೆ ತಂದೆ ತಾಯಿಗಳು ನಾಮಕರಣ ಮಾಡುವರು. ಮಗುವನ್ನು ಅತ್ಯಂತ ಪ್ರೀತಿಯಿಂದ ಸಾಕಿ ಬೆಳೆಸಿದರು. ಮುಂದೆ ಕಾರಣಾಂತರಗಳಿಂದ ವಿದ್ಯೆ ಅಪೂರ್ಣವಾಗಲು ತಂದೆ ತಾಯಿಗಳು ಮಗನ ವಿವಾಹಕ್ಕಾಗಿ ಪ್ರಯತ್ನ ಶುರು ಮಾಡುತ್ತಾರೆ. ಈ ಮಧ್ಯ ವೆಂಕಟದಾಸರು ಗೀತವಾಣಿ ಎಂಬ ಪುಸ್ತಕವನ್ನು ದೊಡ್ಡ ವೆಂಕಟಪ್ಪ ಎನ್ನುವವರಿಂದ ಪಡೆದು ಅದನ್ನು ಓದಿ ಕೆಲವು ಸಂದೇಹಗಳ ನಿವಾರಣೆಗೆ ಆ ಪುಸ್ತಕದ ಲೇಖಕರಾದ ಶಂಕರಾನಂದ ಭಾರತಿ ಸ್ವಾಮಿಗಳನ್ನು ಹುಡುಕುತ್ತಾ ಕಾಳಹಸ್ತಿಗೆ ಹೋಗಿ ಅವರ ಸಂದೇಹಗಳನ್ನು ಪರಿಹರಿಸಿಕೊಂಡು ಮುಂದೆ ಕಾರಣಾಂತರಗಳಿಂದ ಅಲ್ಲಿ ಆಧಾತ್ಮಿಕ ಸಾಧನೆ ಸಾಧ್ಯವಾಗದೇ ಇದ್ದಾಗ ಸ್ನೇಹಿತರಾದ ದೊಡ್ಡವೆಂಕಟಪ್ಪ ನವರ ಸಲಹೆಯ ಮೇರೆಗೆ ದೇವನಹಳ್ಳಿಯ ಬಳಿ ತಮ್ಮ ಗುರುಗಳನ್ನು ಸಂಧಿಸಿ ಅವರಿಂದ ಒಂದು ಶ್ರಾವಣ ಮಾಸದ ಶನಿವಾರ ರಾತ್ರಿ ಅಚಲ ದೀಕ್ಷೆ ಪಡೆಯುವರು.
ನಂತರದಲ್ಲಿ ಮುತ್ಸಂದ್ರದ ಪಾಪಮಾಂಭ ಹಾಗೂ ವೆಂಕಟೇಗೌಡನ ಪುತ್ರಿ ಮುನಿಯಮ್ಮನನ್ನು ವಿವಾಹ ಮಾಡಿಕೊಂಡು ಮುಂದೆ ತಮ್ಮ ಗುರುಗಳ ಆಜ್ಞೇಯ ಮೇರೆಗೆ ಕ್ರಿಷ್ಣಂನಕೊತ್ತೂರು ಗ್ರಾಮದಲ್ಲಿ ಹಲವು ಭಕ್ತರ ಸಹಕಾರದಿಂದ ಒಂದು ಆಶ್ರಮವನ್ನು ಕಟ್ಟಿಕೊಂಡು ಗುರುಗಳಿಂದ ಸಾಂಖ್ಯ, ತಾರಕ, ಅಮನಸ್ಕ, ಸಚ್ಚಿತಾನಂದ, ಪರಿಪೂರ್ಣ ಅಚಲ ಭಾವಗಳ ದೀಕ್ಷೆ ಪಡೆದರು. ನಂತರ ೫-೧೦-೧೯೮೮ ರಲ್ಲಿ ಗುರುಗಳು ಪರಮ ಪದವಿಯನ್ನೇರಲು ಮುಂದೆ ವೆಂಕಟದಾಸು ರವರು ಗುರು ಮಾರ್ಗವನ್ನು ಮುಂದುವರೆಸಿಕೊಂಡು ಬಂದರು. ಇಂದಿಗೂ ಕೃಷ್ಣಂಕೋತ್ತೂರು ಗ್ರಾಮದ ಆಶ್ರಮ ವೆಂಕಟದಾಸು ರವರ ಸಾಧನೆಯ ದ್ಯೂತಕವಾಗಿ ನಮ್ಮ ಮುಂದಿದೆ.
ವೆಂಕಟದಾಸು ರವರು “ಅನುಭವ ಸಾರ“ ಎಂಬ ಕೃತಿಯನ್ನು ರಚಿಸಿದ್ದು, ಇದು ಅವರ ಆತ್ಮಕತೆ, ಕೆಲವು ಅಚಲ ತಾತ್ವಿಕ ವಿಚಾರಗಳು, ಸೇರಿದಂತೆ ಅವರೇ ರಚಿಸಿರುವ 32 ತೆಲುಗು ತತ್ವಪದಗಳನ್ನು ಒಳಗೊಂಡಿದೆ. ಇದರೊಂದಿಗೆ ಹಲವು ಬಿಡಿ ಕೀರ್ತನೆಗಳನ್ನು ಹಾಗೂ ಕಂದಗಳನ್ನು ಇವರು ರಚಿಸಿದ್ದಾರೆ.
ಈ ಲೇಖನದ ಪುಟ ಮಿತಿ ಮತ್ತು ಮಾಹಿತಿ ಲಭ್ಯತೆಯ ಹಿನ್ನೆಲೆಯಲ್ಲಿ ಮೇಲೆನ ತತ್ವಪದಕಾರರ ವಿವರಗಳನ್ನು ಇಲ್ಲಿ ಚರ್ಚಿಸಿದ್ದು, ಜಿಲ್ಲೆಯಲ್ಲಿ ಇವರಷ್ಠೇ ಅಲ್ಲದೇ ಬೇರಿಕಿ ಬುಟ್ಟಪ್ಪ, ಪೂಲಪಾರ್ಯ, ರಾಮಾವಧೂತ, ಮುತ್ತಯ್ಯ, ರಂಗಾರ್ಯ, ಮುನಿಯಾರ್ಯ ಸೀತಾರಾಮಾರ್ಯ, ಭಾಲಾವಧೂತ ಬಚ್ಚಪ್ಪ ಸ್ವಾಮಿಗಳು, ಮುನಿಶಾಮಯ್ಯಸ್ವಾಮಿಗಳು, ಕೆ.ಹೊಸೂರು ವೆಂಕಟರಾಯ ಸ್ವಾಮಿ, ಶ್ರೀ ಮುನಿಯಪ್ಪಸ್ವಾಮಿಗಳು, ವೆಂಕಟಗಿರಿ ಸ್ವಾಮಿಗಳು, ಅಗಸರ ರಾಮಯ್ಯ, ಲಕ್ಕೂರು ಕೃಷ್ಣಾವಧೂತರು, ಮಿಣಕನಗುರ್ಕಿ ಕೊಂಡಾರ್ಯರು, ಗುಟ್ಟುಗಾ ಶಾಲ್ಯಮು, ದೊಡ್ಡಿ ದಕ್ಷಿಣಾಮೂರ್ತಿ, ಮಿಣಕನಗುರ್ಕಿ ನಾಗಾರ್ಯ, ದೊಡ್ಡಿ ವೆಂಕಟಗಿರಿಯಪ್ಪ, ತ್ಯಾವನಹಳ್ಳಿ ವೆಂಕಟಪ್ಪಾವಧೂತರು, ಯಡ್ಡಹಳ್ಳಿ ಮುನಿದಾಸಪ್ಪ, ಕೃಷ್ಣಾನಂದ ಸ್ವಾಮಿಗಳು, ಯಡ್ಡಹಳ್ಳಿ ನಾರಾಯಣಮ್ಮ ಮುಂತಾದ ತತ್ವಪದ ಪರಂಪರೆಯ ಸಾಧಕರು, ತತ್ವಪದಕಾರರು ಹಾಗೂ ತತ್ವಪದ ಗಾಯಕರು ಎಲೆ ಮರೆಯ ಕಾಯಿಗಳಂತೆ ಇಂದಿಗೂ ಸಹಾ ತತ್ವಪದ ಪರಂಪರೆಯನ್ನು ಜೀವಂತವಾಗಿಡುವ ಕೆಲಸವನ್ನು ಮಾಡುತ್ತಿರುವುದನ್ನು ಗಮನಿಸಬಹುದು.
ಕೊನೆ ಟಿಪ್ಪಣಿ : ೧) ತತ್ವಪದ ಮತ್ತು ಮಹಿಳೆ : ೨೦೧೯ ಪುಟ ೧೦೫.
ಗ್ರಂಥ ಋಣ:
೧) ಆದಿಶಂಕರ್, ಕೆ. ಕೋಲಾರ ಜಿಲ್ಲಾ ಗ್ಯಾಜೆಟಿಯರ್. ಬೆಂಗಳೂರು: ಕರ್ನಾಟಕ ಸರ್ಕಾರ, 1968.
೨) ಒಕ್ಕುಂದ, ಎಂ.ಡಿ. ಊರೊಳಗಿಷ್ಟು ಉತ್ಪಾತವೇನೋ. ಬೆಂಗಳೂರು: ಸಮಾಜ ವಿಜ್ಞಾನ ಅಧ್ಯಾಯನ ಸಂಸ್ಥೆ, ೨೦೧೬.
೩) ಕೈಪು, ಲಕ್ಮೀನರಸಿಂಹ ಶಾಸ್ತ್ರೀ. ಕೈವಾರ ತಾತಯ್ಯನವರ ಜೀವನ ಚರಿತ್ರೆ. ಕೈವಾರ: ಶ್ರೀ ಯೋಗಿ ನಾರೇಯಣ ಆಶ್ರಮ, 2007.
೪) ಗಟ್ಟಿಹಳ್ಳಿ, ಆಂಜಿನಪ್ಪಸ್ವಾಮಿ. ನಿರ್ಮಲಾತ್ಮ ಕವಿ ಶತಕಂ. ಗಟ್ಟಿಹಳ್ಳಿ : ಶ್ರೀ ಪರಮಹಂಸ ಆಂಜಿನಪ್ಪ ಸ್ವಾಮಿ ಟ್ರಸ್ಟ, 1992.
೫) ತರೀಕೆರೆ ರಹಮತ್. ಕರ್ನಾಟಕ ಗುರುಪಂಥ. ಹಂಪಿ : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೨೦೨೦.
೬) ಪದ್ಮಾಲಯ, ನಾಗರಾಜ್. ಗುರುಮಾರ್ಗ. ಕೋಲಾರ : ಆದಿಮ ಪ್ರಕಾಶನ, 2018.
೭) ಪರಮಹಂಸ ಆಂಜಿನಪ್ಪ ಸ್ವಾಮಿ(ಸಂಗ್ರಹ). ಗಟ್ಟಿಹಳ್ಳಿ : ಶ್ರೀ ಪರಮಹಂಸ ಆಂಜಿನಪ್ಪ ಸ್ವಾಮಿ ಟ್ರಸ್ಟ್, 1992.
೮) ಬಾಳಿ ಮೀನಾಕ್ಷಿ. ತತ್ವಪದ ಮತ್ತು ಮಹಿಳೆ. ಗದಗ : ಲಡಾಯಿ ಪ್ರಕಾಶನ, ೨೦೧೯.
೯) ವೆಂಕಟದಾಸು. ಅನುಭವಸಾರಂ(ತೆಲುಗು). ಕೃಷ್ಣಂಕೋತ್ತೂರು: ಅಚಲಾಶ್ರಮ, 1995.
೧೦) ಶ್ರೀ ಅಮರ ನಾರೇಯಣ ವೇದಾಂತ ಸಾರಾವಳಿ(ಕೀರ್ತನೆಗಳು). ಕೈವಾರ : ಶ್ರಿ ಯೋಗಿ ನಾರೇಯಣ ಯತೀಂದ್ರರ ಆಶ್ರಮ ಟ್ರಸ್ಟ, 1998.
- ವರುಣ್ ರಾಜ್ ಜೀ,
ಸಂಶೋಧನಾರ್ಥಿ,
ಡಾ. ಡಿ.ವಿ.ಜಿ ಕನ್ನಡ ಅಧ್ಯಯನ ಕೇಂದ್ರ.
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.
# ೯೪೪೮೨೪೧೪೫೦. ಮಿಂಚಂಚೆ : maharishivarunrajji@gmail.com
Comments
Post a Comment