ʼಬುದ್ಧ ಕಾಣದ ನಗೆʼ ಒಂದು ಅವಲೋಕನ

ʼಬುದ್ಧ ಕಾಣದ ನಗೆʼ ಒಂದು ಅವಲೋಕನ ರಾಜು ಕವಿ ಎಸ್ ಸೂಲೇನಹಳ್ಳಿಯವರು ತಮ್ಮ ಕೃತಿಗೆ ಕೊಟ್ಟಿರುವ 'ಬುದ್ಧ ಕಾಣದ ನಗೆ' ಎಂಬ ಶೀರ್ಷಿಕೆಯೇ ಬಹಳ ಆಕರ್ಷಕವಾಗಿದೆ. ಮೊದಲ ಕವಿತೆಯಲ್ಲಿಯೇ ಕವಿಗಳು ಬುದ್ದಿವಂತಿಕೆ ಮತ್ತು ಹೃದಯಸಂಪನ್ನತೆಯ ಕುರಿತು ಹೇಳುತ್ತಾ ನಾವು ಹೃದಯ ಸಂಪನ್ನರಾಗೋಣ ಎಂದು ಕರೆ ಕೊಡುವರು. ಹೃದಯ ಸಂಪನ್ನರ ಕೊರತೆಯನ್ನು ಎದುರಿಸುತ್ತಿರುವ ಸಮಾಜಕ್ಕೆ ಅದರಲ್ಲಿಯೋ ಸಮಕಾಲೀನ ಕರೋನಾ ಸಂಕಷ್ಟದ ಸಂದರ್ಭದಲ್ಲಿ ಈ ಸಂದೇಶ ಬಹಳಾ ಮುಖ್ಯವಾದದಾಗಿದೆ. ಪದಬಳಕೆ, ಪ್ರಾಸ, ಮುಕ್ತಛಂದ್ಸಿನ ಬಳಕೆಯ ದೃಷ್ಠಿಯಿಂದ ಇಲ್ಲಿನ ಕವಿತೆಗಳು ಉತ್ತಮವಾಗಿ ಹೆಣೆಯಲ್ಪಟ್ಟಿವೆ. ಇಲ್ಲಿನ ಹಲವು ಕವಿತೆಗಳು ರಾಗ ಸಂಯೋಜನೆ ಮಾಡಿ ಹಾಡಬಹುದಾದ ಉತ್ತಮ ಭಾವಗೀತೆಗಳ ದಾಟಿಯಲ್ಲಿ ಬಂದಿರುವುದು ವಿಶೇಷ. ಶ್ರಾವಣ ಮಾಸ ಎಂಬ ಕವಿತೆಯಲ್ಲಿ ಕವಿ ತಮ್ಮ ಶಬ್ದ ಚಮತ್ಕಾರಗಳಿಂದ ಓದುಗನ‌ ಕಣ್ಣ ಮುಂದೆ ಶ್ರಾವಣ ಮಾಸದ ಪ್ರಾಕೃತಿಕ ಸೌಂದರ್ಯ ವೈಭವದ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಇದು ಪ್ರಕೃತಿಯ ಎಲ್ಲ ವೈಚಿತ್ರ ವಿಶೇಷತೆಗಳನ್ನು ಚಿತ್ರಿಸುವ ಬಹುತ್ವದ ನೆಲೆಯ ಕವಿತೆಯಾಗಿದೆ. ಹೇಗೆ ಪ್ರಕೃತಿ ತನ್ನ ವೈವಿಧ್ಯತೆಯಿಂದ ಮೈತುಂಬಿರುವುದೊ ಅದೇ ರೀತಿ ಈ ಕವಿತೆ, ಈ ಸಂಕಲನವು ಸಹಾ ಹಲವು ಅನುಭವಗಳು ಹಾಗೂ ಸಂವೇದನೆಗಳಿಂದ ಮೈತುಂಬಿಕೊಂಡಿದೆ. ಪ್ರೀತಿಯ ಅಭಿವ್ಯಕ್ತಿ ಮತ್ತು ಪ್ರಕೃತಿಯ ವರ್ಣನೆಯಿಂದ ಪ್ರಾರಂಭವಾಗುವ ಕೃತಿ ಮುಂದುವರೆದಂತೆ ತೀರ ಗಂಭೀರವಾದ ಚರ್ಚೆಯ, ಗಹನವಾದ ವಿಚಾರದ ಕಡೆಗೆ ಓದುಗನ ಗಮನವನ್ನು ಸೆಳೆಯುವ ಪ್ರಯತ್ನವನ್ನು 'ಸಮಾನತೆ' ಎಂಬ ಪದ್ಯದ ಮೂಲಕ ಮಾಡುತ್ತದೆ. ಸಮಾನತೆ ಕವಿತೆಯು ೩ ಭಾಗಗಳನ್ನು ಹೊಂದಿದ್ದು ಪ್ರತಿಯೊಂದು ಭಾಗವು ಸಮಾನತೆಯ ಚರ್ಚೆಯನ್ನು ವಿವಿಧ ಆಯಾಮಗಳಲ್ಲಿ ಮಂಡಿಸುವುದು. ಮೊದಲ ಭಾಗದಲ್ಲಿ ಸಿರಿವಂತನೊಂದಿಗೆ ಬಡವನು, ಬುದ್ಧಿವಂತನೊಂದಿಗೆ ದಡ್ಡನು, ಸುರೂಪಿಯೊಂದಿಗೆ ಕುರೂಪಿಯು ಎಲ್ಲರೂ ಸಮಾನವಾದ ಮಾನ್ಯತೆ ಪಡೆಯಲು ತಿಣುಕಾಡುತ್ತಲೇ ಇರುತ್ತಾರೆ. ಈ ತಿಣುಕಾಟದಲ್ಲಿ ಅವರ ಆಯುಷ್ಯವೆಲ್ಲ ಮುಗಿದೇ ಹೋಗುವುದು. ಸಮಾನತೆ ಎಂಬುದು ಹೀಗೆ ತಿಣುಕಾಡುವುದರಿಂದ ಸಾಧ್ಯವಾಗುವುದಿಲ್ಲ. ಎಂಬುದನ್ನು ವಿವರಿಸುತ್ತಾ ಎರಡನೇ ಭಾಗದಲ್ಲಿ ಜಗತ್ತಿನ ಪ್ರಾಕೃತಿಕ‌ ನಿಯಮವನ್ನು ಬಹಳಾ ಸೊಗಸಾಗಿ ಸರಳವಾಗಿ ಕವಿ ವಿವರಿಸುತ್ತಾರೆ.. ನಮ್ಮ ಪ್ರಕೃತಿಯಲ್ಲಿ ಯಾವುದೂ ಸಹಾ ಒಂದಕ್ಕೆ ಒಂದು ಸಮಾನವಲ್ಲ ಅವುಗಳಿಗೆ ಅವುಗಳದ್ದೇ ಆದ ವೈವಿಧ್ಯತೆ, ವೈಶಿಷ್ಟ್ಯತೆ ಮತ್ತು ನಮ್ಮ ಜೀವ ಸರಪಳಿಯಲ್ಲಿ ಅವುಗಳಿಗೆ ಅವುಗಳದ್ದೇ ಆದ ಪ್ರಾಮುಖ್ಯತೆ ಇದೆ. ಪ್ರಕೃತಿ ಬಹುತ್ವದಿಂದ ಕೂಡಿದೆ, ಹಾಗೂ ಪ್ರಕೃತಿಯ ವ್ಯವಹಾರಗಳು ಒಂದನ್ನೊಂದು ಅವಲಂಬಿಸಿದೆ. ಇಲ್ಲಿ ಸಮಾನತೆ ಎಂಬುದು ಇಲ್ಲ ಆದರೆ ಎಲ್ಲವೂ ಅವುಗಳ ಸ್ಥಾನದಲ್ಲಿ ಮುಖ್ಯವಾದವೇ. ಡಿಫರೆಂಟ್‌ ಬಟ್‌ ಈಕ್ವೆಲ್‌ ಎಂಬಂತೆ. ಈ ಕವಿತೆಯಲ್ಲಿ ಸಮಾನತೆ ಎಂಬ ಪದವನ್ನು ಏಕತೆ ಎಂಬ ಅರ್ಥದಲ್ಲಿ ಬಳಸಿದಂತೆ ಪರಿಭಾವಿಸಿದರೆ, ಏಕತೆ ಮತ್ತು ಬಹುತ್ವಗಳ ಚರ್ಚೆಯನ್ನು ಕವಿ ಇಲ್ಲಿ ಪ್ರಸ್ತುತ ಪಡಿಸುತ್ತಿರುವುದು ನಮಗೆ ತಿಳಿಯುತ್ತದೆ. ಮಾನವನು ಈ ಪ್ರಾಕೃತಿಕ ಸತ್ಯವನ್ನು ಹಾಗೇ ತಮಗಿರುವ ಮಹತ್ವವನ್ನು ಅರಿಯದೆ ನಾವು ಮತ್ತೊಬ್ಬರೊಂದಿಗೆ ಸಮಾನಾಗಿ ಬೆಳೆಯಬೇಕೆಂಬ ತಿಣುಕಾದಲ್ಲಿಯೇ ಜೀವನ‌ ಮಗಿಸಿಬಿಡುತ್ತಾರೆ ಎಂದು ಹೇಳುತ್ತಾ ಮೂರನೇ ಭಾಗದಲ್ಲಿ, ಕವಿ ದೃಷ್ಠಿ ಹಿಂದಿನ‌ ಎರಡು ಪದ್ಯಗಳಿಗಿಂತ ಭಿನ್ನವಾಗುತ್ತದೆ. ಸಮಾನತೆ ಯೆಂಬುದು ಆತ್ಮದಲ್ಲಿ ಮೊದಲು ಬರಬೇಕು ಎಂಬುದನ್ನು ಹೇಳುತ್ತಾರೆ. ಮಾನವ ನಿರ್ಮಿತವಾಗಿ ಅಸಮಾನತೆಗಳ ವಿರುದ್ಧದ ಬಂಡಾಯದ ದ್ವನಿಯಾಗಿ ಈ ಮೂರನೇ ಭಾಗ ಕಾಣಿಸುತ್ತದೆ. ಇದನ್ನೇ ನಾವು ಬಹುತ್ವ ಎನ್ನುವುದು. ಕವಿ ಒಂದು ವಿಚಾರವನ್ನು ಹಲವು ಆಯಾಮಗಳಲ್ಲಿ ಹೇಗೆ ಓದುಗನಿಗೆ ಬಹಳ ಸರಳವಾಗಿ ಕಾಣಿಸಬಹುದು ಎಂಬುದಕ್ಕೆ ಈ ಪದ್ಯ ಒಂದು ಉದಾಹರಣೆ. ಮುಂದೆ ʼಸುಜ್ಞಾನ – ಅಜ್ಞಾನʼ ಎಂಬ ಕವಿತೆಯಲ್ಲಿ 'ಅಜ್ಞಾನಿಗಳ ಕೂಡೆ ಅಖಿಳ ಸ್ನೇಹಗಳಿಗಿಂತ ಸುಜ್ಞಾನಿಗಳ ಕೂಡೆ ಜಗಳವೇ ಲೇಸು' ಎಂಬು ನುಡಿಯನ್ನು ನೆನಪಿಸುವಂತೆ ಕವಿ ಸುಜ್ಞಾನಿಗಳ ಸಂಗದ ಮಹತ್ವವನ್ನು ವಿವರಿಸಿರುವರು. ಹಾಗೂ ʼಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಯಾವುದು ಇಲ್ಲʼ ಎಂಬ ಸಂದೇಶವನ್ನು ಇಲ್ಲಿ ನೀಡಿರುವರು. ಮುಂದೆ ಈ ಜ್ಞಾನ ಕೇವಲ ಬುದ್ದಿವಂತಿಕೆಯಿಂದ ಕೂಡಿದ್ದರೆ ಸಾಲದು ಅದು ಹೃದಯವಂತಿಕೆಯಿಂದ ಕೂಡಿರಬೇಕು ಆಗ ಮಾತ್ರ ಅದರ ಸಾರ್ಥಕತೆ ಎಂಬುದನ್ನು ʼಬುದ್ಧಿವಂತಿಕೆ – ಹೃದಯವಂತಿಕೆʼ ಎಂಬ ಪದ್ಯದಲ್ಲಿ ವಿವರಿಸಿರುವರು. ಇಲ್ಲಿ ಬುದ್ಧಿವಂತನಿಗೂ ಹೃದಯವಂತನಿಗೂ ಇರುವ ವ್ಯತ್ಯಾಸ, ಹೃದಯವಂತಿಕೆಯ ಮಹತ್ವವನ್ನು ಕವಿ ಬಹಳಾ ಸೊಗಸಾಗಿ ವಿವರಿಸಿದ್ದಾರೆ. ನಮ್ಮ ಸಮಾಜದಲ್ಲಿ ಬುದ್ಧಿವಂತರು ಹೆಚ್ಚಾಗುತ್ತಾ ಇದ್ದಾರೆ. ಆದರೆ ಹೃದಯವಂತರ ಸಂಖ್ಯೆ ಬಹಳ ಕಡಿಮೆ ಆಗಿದೆ. ನಿಜದಲ್ಲಿ ಈ ಬುದ್ದಿವಂತಿಕೆ ಹಾಗೂ ಹೃದಯವಂತಿಕೆ ಬೇರೆ ಬೇರೆ ಅಲ್ಲ ಇವೆರಡು ಒಂದೇ ಮನಸ್ಸಿನಲ್ಲಿ ನೆಲೆಸಿರುತ್ತವೆ. ನಮ್ಮ ಹೃದಯದ ಮಾತಿನಂತೆ ನಮ್ಮ ಬುದ್ಧಿವಂತಿಕೆಯನ್ನು ಬಳಸಿದಾಗ ಮಾತ್ರ ಅದಕ್ಕೆ ಸಾರ್ಥಕತೆ ಎಂಬುದನ್ನು ಈ ಪದ್ಯ ದ್ವನಿಸುತ್ತದೆ. ಮುಂದೆ 'ಜಗತ್ತಿನ ಎದೆಯಲ್ಲಿ ಪ್ರೀತಿ ಅಧ್ಯಾಯ ಬರೆಯುತ್ತೇವೆಂಬ ಮೊಂಡು ಹಟ ಬೇಡ ಗೆಳತಿ ಇದು ಬಾಯಲ್ಲಿ ಪ್ರೀತಿ ಬಗುಲಲ್ಲಿ ಬಾಕು ಇಟ್ಟುಕೊಂಡವರ ಜಮಾನ' ಈ ಪದ್ಯದಲ್ಲಿ ಸಮಾಜಕ್ಕೆ ಎದುರು‌ ನಿಲ್ಲಲಾರದ, ಒಂದು ವೇಳೆ ಎದುರು ನಿಂತರೆ ಏನಾಗಬಹುದೆಂಬ ಸ್ಪಷ್ಟ ಅರಿವಿರುವ, ತಮ್ಮ ಪ್ರೀತಿಯನ್ನು‌ ತ್ಯಾಗವೂ ಮಾಡಲಾರದ ಸಂಧಿಗ್ದತೆಯಲ್ಲಿ ಸಿಲುಕಿರುವ ಇಬ್ಬರು ಪ್ರೇಮಿಗಳ ಅಂತರಂಗದ ತುಮುಲಗಳನ್ನು ಕವಿ ಓದುಗರ ಮುಂದೆ ಇರಿಸಿದ್ದಾರೆ. ಧರ್ಮದ, ಜಾತಿಯ, ಅಂತಸ್ಥಿನ ಹಾಗೂ ಬೇರೆ ಬೇರೆ ಕಾರಣಗಳಿಂದ ಪ್ರೇಮಿಗಳನ್ನು ಅಗಲಿಸುವ, ಪ್ರಾಣ ತೆಗೆಯುವ ಪ್ರಕರಣಗಳು ಹೆಚ್ಚುತ್ತಲೇ ಇರುವ ಪ್ರಸ್ತುತ ಸಂಧರ್ಭದ ಸಮಾಜದ ಕಣ್ಣು ತೆರೆಸುವ ಪ್ರಯತ್ನ ಈ ಕವಿತೆಯಲ್ಲಿದೆ. ಇಂತಹಾ ಪ್ರೇಮಿಗಳ ವೇದನೆಯನ್ನು, ಏಕಾಂಗಿತನವನ್ನು ವಿವರಿಸುವ ಪ್ರಯತ್ನ ಇಲ್ಲಿ ವ್ಯಕ್ತವಾಗಿದೆ. ಹಳ್ಳಿಗಾಡಿನಲ್ಲಿ ಬೆಳೆದ ಕವಿಗಳಿಗೆ ಅವರ ಊರಿನಲ್ಲಿ ಬೆಳೆಯುತ್ತಿದ್ದ ಸೀತಾಪಲ ಹಣ್ಣಿನ ಕುರಿತು ಒಂದು ಕವಿತೆ ಬರೆದಿದ್ದಾರೆ. ಈ ಕವಿತೆ ಮೇಲ್ನೋಟಕ್ಕೆ ಒಂದು ಸರಳ ಪದ್ಯದಂತೆ ಅನಿಸಿದರೂ ಸಹಾ ಇದರ ಅಂತರಾಳದಲ್ಲಿ ಬದಲಾಗುತ್ತಿರುವ ಕೃಷಿ ಪದ್ದತಿ, ರಾಸಾಯನಿಕಗಳ ಅಧಿಕ ಬಳಕೆ, ಹಾಗೂ ಹೃಬ್ರಿಡ್ ತಳಿಗಳ ಅಭಿವೃದ್ದಿಯಂತಹಾ ಪ್ರಕೃತಿ ವಿರೋಧಿ ಚಟುವಟಿಕೆಗಳ ವಿರುದ್ಧದ ಕೂಗು ಈ ಕವಿತೆಯಲ್ಲಿ ಅಡಗಿದಂತೆ ತೋರುತ್ತದೆ. ಯಾವುದೇ ರಸಗೊಬ್ಬರ ರಾಸಾಯನಿಕಗಳಿಲ್ಲದೇ ಕಂಡಕಂಡಲ್ಲಿ ಬೆಳೆದು, ಕಾಡಿನ ನೂರಾರು ಪಕ್ಷಿ, ಪ್ರಾಣಿ, ಕೀಟಗಳಿಗೆ ಆಹಾರ ಒದಗಿಸುತ್ತಿದ್ದ ಜೇನಿನಷ್ಟೇ ರುಚಿಕರವಾಗಿರುತ್ತಿದ್ದ ಸೀತಾಫಲದಂತಹಾ ಹಲವಾರು‌ ಕಾಡಿನ ಹಣ್ಣುಗಳು ಮಾನವನ ದುರಾಸೆ ಹಾಗೂ ಅತಿಯಾದ ಪರಿಸರ ಹಾನಿಯ ಕಾರಣದಿಂದ ಇಂದು ನೋಡಲು ಸಹಾ ಇಲ್ಲದೇ ಹೋಗಿರುವುದನ್ನು ನಾವು ಇಲ್ಲಿ ನೆನೆಯಬಹುದು. ಮುಂದೆ ಹುಣ್ಣಿಮೆಯ ರಾತ್ರಿಯ ಚಂದ್ರನ ನಕ್ಷತ್ರಗಳ ಸೌಂದರ್ಯವನ್ನು ಹೇಳುತ್ತಾ ಪ್ರಾರಂಭವಾಗುವ 'ಬೆಳದಿಂಗಳು' ಕವಿತೆ ಎರಡನೇ ಭಾಗದಲ್ಲಿ ಮಗುವನ್ನು ಸಂತೈಸುವ ತಾಯಿ, ಹಾಗೂ ಹಾಳು ಗುಡಿಗಳಲ್ಲಿ ಮಲಗಿರುವ ಒಪ್ಪೊತ್ತಿನ ಊಟಕ್ಕು ಇಲ್ಲದ ಬಡ ಜನರ ಬದುಕನ್ನು ಚಿತ್ರಿಸುತ್ತದೆ. ನಾವು ಚಂದ್ರನನ್ನು ಕಾಣುವಾಗ ನಮ್ಮಲ್ಲಿ ಸೌಂದರ್ಯಾನುಭವವನ್ನು ಪಡೆಯುವ ಉತ್ಕಟತೆ ಇರುತ್ತದೆ. ಅದೇ ರಾತ್ರಿಯ ಅದೇ ಚಂದ್ರನ ನೆರಳಿನಲ್ಲಿ ಮೈ‌ ನಡುಗುವ ಚಳಿಯಲಿ ಊಟಕ್ಕೂ ಇಲ್ಲದ ಹಲವು ಸಂಸಾರಗಳು ಮಲಗಿರುವುದು ನಮ್ಮ‌ ಗಮನಕ್ಕೆ ಬರುವುದಿಲ್ಲ. ಇಲ್ಲಿ ಕವಿ ಚಂದ್ರನ ನೆರಳಿನಲ್ಲಿ ನಡೆಯುವ ಎರಡು ರೀತಿಯ ವ್ಯಾಪಾರಗಳನ್ನು ಚಂದ್ರನ ಕಣ್ಣಿಂದ ನೋಡಿದ ಹಾಗೇ ಈ ಕವಿತೆಯಲ್ಲಿ ಜೋಡಿಸಿ ಓದುಗರಿಗೆ ಹೇಳುವ ಪ್ರಯತ್ನ ಮಾಡಿರುವರು. ಮುಂದೆ ಗುರುವಿನ ಅಳಲು ಪದ್ಯದಲ್ಲಿ ಮಗುವಿಗೆ ಮೊದಲ ಗುರುವಾದ ತಾಯಿ, ಹಾಗೂ ಅಕ್ಷರ ಕಲಿಸಿದ ಶಿಕ್ಷಕ ಇವರಿಬ್ಬರನ್ನು ಇಂದಿನ ಯುವ ಪೀಳಿಗೆ ಮರೆತು, ಅವರನ್ನು‌ ಲಕ್ಷಿಸದೇ ಮುಂದೆ ಗುರಿ ಇಲ್ಲದೇ ಹಿಂದೆ ಗುರು ಇಲ್ಲದೇ ಇಡೀ ಲೋಕವೇ ನಶ್ವರವಾಗುವ ಅಂತ್ಯ ಕಾಣುವ ದಿಕ್ಕಿಗೆ ಸಾಗುತ್ತಿರುವುದನ್ನು‌ ಚಿತ್ರಿಸುವರು. 'ಗುರುವೇ ನಮಃ' ಎಂಬಲ್ಲಿಂದ ಇಂದು 'ಗುರುವೇನ್ ಮಹಾ' ಎಂಬಲ್ಲಿಗೆ ನಮ್ಮ ಜನಜೀವನ ಋಣಾತ್ಮಕವಾಗಿ ಬದಲಾಗಿರುವ ಸನ್ನಿವೇಷವನ್ನು‌ ಕವಿ ಇಲ್ಲಿ ವಿವರಿಸಿರುವರು. ವಿನಾಕಾರಣ ದ್ವೇಷ, ನಿಂದನೆ, ಅವಮಾನ, ಅತಿ ಆಸೆ, ದ್ರೋಹ, ವಂಚನೆ, ಅನೈತಿಕತೆ ಅಸೂಯೆಗಳನ್ನು ಕಂಡು ಬೆಸತ್ತ ಕವಿ ಈ ಜಗತ್ತೇ ಅಯೋಮಯವಾಗಿದೆಯಲ್ಲ ಎಂದು ದೇವರಲ್ಲಿ ಮೊರೆಯಿಡುವ ಪ್ರಯತ್ನ 'ಯಾರು ಬಲ್ಲರು? ಜಗದ ನಿಯಮ' ಎಂಬ ಕವಿತೆಯಲ್ಲಿದೆ. 'ಬುದ್ಧ ಕಾಣದ ನಗೆ' ಕವಿತೆಯಲ್ಲಿ ಬುದ್ಧನ ಜಿವನವನ್ನು ಸಂಕ್ಷಿಪ್ತವಾಗಿ ಹೇಳುವ ರಾಜುರವರು ಬುದ್ಧನಿಗೆ ಜ್ಞಾನ ಸಿಕ್ಕಿತು ಆದರೆ ಅವನ ಪ್ರಜೆಗಳ ಮುಖದಲ್ಲಿ ನಗು ಮಾತ್ರ ಕಾಣಲೇ ಇಲ್ಲ. ಎಂದರೆ ಅಂದಿನಿಂದ ಇಂದಿನವರೆಗೆ ಇಲ್ಲದವರ ಕಷ್ಟಗಳು ತೀರುವ ದಾರಿಯೇ ಸಿಗಲಿಲ್ಲ ಎಂಬುದನ್ನು‌ ಕವಿ ಇಲ್ಲಿ ದುಃಖದಿಂದ ಹೇಳುವ ಪ್ರಯತ್ನ ಮಾಡಿದ್ದಾರೆ. ಇನ್ನು‌ 'ಹಣತೆ' ಮತ್ತು 'ದೀಪ' ಎಂಬ ಕವಿತೆಗಳ ಮೂಲಕ ದೀಪ ಗುಡಿಯ ದೇವರಿಗಲ್ಲ ಬದಲಾಗಿ ಕತ್ತಲು ಕವಿದಿರುವ ನೊಂದ ಹೃದಯಗಳಿಗೆ ಸಾಂತ್ವನ ಹಾಗೂ ಪ್ರೀತಿ, ವಾತ್ಸಲ್ಯದ ದೀಪ ಹಚ್ಚಬೇಕೆಂಬ ಆಶಯ ವ್ಯಕ್ತವಾಗಿದೆ. ಹೀಗೆ ಮಾನ್ಯ ರಾಜು ಸೂಲೇನಹಳ್ಳಿ ಅವರ ಕವನ ಸಂಕಲನ 'ಬುದ್ಧ ಕಾಣದ ನಗೆ' ವೈವಿಧ್ಯಮಯವಾದ ಕಲ್ಪನಾ ಚಿತ್ರಣಗಳನ್ನು, ಕವಿಯ ಅನುಭವ - ಅನುಭಾವ ಜಗತ್ತನ್ನು, ಮಾನಸಿಕ ತುಮುಲಗಳನ್ನು, ಬದಲಾಗುತ್ತಿರುವ ಪ್ರಕೃತಿ, ಮಾನವೀಯ ಸಂಬಂಧಗಳ ಕುರಿತಾದ ಆಳವಾದ ದುಖಃವನ್ನು, ವೈಚಾರಿಕ ಹಾಗೂ ಬಂಡಾಯದ ಎಳೆಯನ್ನು ನಿಸ್ವಾರ್ಥ ಪ್ರೇಮಿಯೊಬ್ಬನ‌ ಮನಸಿನ ನೋವುಗಳನ್ನು ತನ್ನ ಅಂತರಂಗದಲ್ಲಿ ಹೊತ್ತು ಹಲವು ವೈವಿಧ್ಯತೆ, ವಿಶಿಷ್ಟತೆ ಹಾಗೂ ಸೂಕ್ಷ್ಮ ಸಂವೇದನೆಗಳಿಂದ ಕೂಡಿದ್ದು ಸಹೃದಯರ ಮನಸ್ಸನ್ನು‌ ಒಂದೇ ಓದಿಗೆ ಗೆಲ್ಲುವ ಶಕ್ತಿಯನ್ನು ಈ ಕೃತಿ ಹೊಂದಿದೆ. ಇಂತಹಾ ಕೃತಿ‌ರತ್ನವನ್ನು ಕೊಟ್ಟ ಕವಿಗಳಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಾ, ಸಹೃದಯರು ಕೃತಿಯನ್ನು ಕೊಂಡು ಓದಿ ಪ್ರೋತ್ಸಾಹಿಸಬೇಕೆಂದು ವಿನಂತಿಸುವೆ. ನಮಸ್ಕಾರ. ಪ್ರತಿಗಳಿಗಾಗಿ ಸಂಪರ್ಕಿಸಿ : 9741566313 - ವರುಣ್ ರಾಜ್ ಜಿ.

Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.