ಅಪ್ರಮೇಯ ಸಂಕಲನದ ಕುರಿತು

ಅಪ್ರಮೇಯ ಪದದ ಅರ್ಥ ಅಳತೆಗೆ ಸಿಗದಿರುವುದು, ಸರ್ವವ್ಯಾಪ್ತಿಯಾದದ್ದು ಎಂದು. ಹೆಸರಿಗೆ ತಕ್ಕಹಾಗೆ ಇಲ್ಲಿನ ಹಲವು ಅಭಾಬಿಗಳು ಸರ್ವವ್ಯಾಪ್ತಿತ್ವ ಮತ್ತು ಸರ್ವಕಾಲಿಕ ಪ್ರಸ್ತುತತೆಯನ್ನು ಪಡೆದಿರುವ ಅಬಾಬಿಗಳಾಗಿವೆ. ತೆಲುಗಿನ ಯೋಗಿ ವೇಮನರು ʼನಿಕ್ಕಮೈನ ಮಂಚಿ ನೀಲಮೊಕಟಿ ಚಾಲು………………ಚಾಟು ಪದ್ಯಮೊಕಟಿ ಚಾಲದಾ ….. ವೇಮʼ ಎಂದು ತಮ್ಮ ಒಂದು ಪದ್ಯದಲ್ಲಿ ಹೇಳುವರು. ಇದರ ಅರ್ಥ ಒಂದು ಶ್ರೇಷ್ಠವಾದ ನೀಲಮಣಿಯ ಹಾಗೆ ʼಚಾಟುʼ ಪದ್ಯವು ಶ್ರೇಷ್ಠ ಎಂದು. ʼಚಾಟುʼ ಪದ್ಯವೆಂದರೆ ಹೆಚ್ಚಿನ ಛಂಧೋನಿಯಮಗಳಿಗೆ ಒಳಪಡದ ಬಾಯಿಂದ ಬಾಯಿಗೆ ಹರಿದು ಬರಬಹುದಾದ ಕವಿಯ ಅನುಭೂತಿಯಿಂದ ರಚನೆಗೊಂಡ ಪದ್ಯ. ವೇಮನ ಶತಕ, ಸರ್ವಜ್ಞನ ವಚನಗಳು ಈ ರೀತಿಯವೆ. ಇದೇ ಸಾಲಿನಲ್ಲಿ ನಿಲ್ಲಬಲ್ಲ ಘನತೆ ಅಬಾಬಿಗಳಿಗಿದೆ. ಅಪ್ರಮೇಯ ಕೃತಿಯ ʼಕಿತ್ತಲೆ ಹಣ್ಣಿನ ಬುಟ್ಟಿಯಲ್ಲಿ ಅಕ್ಷರಗಳು ನನಸಾಗಿವೆ ಪ್ರಾಮಾಣಿಕ ಕರ್ಮಫಲ ನೈನಾ ಮನಸ್ಸಿದ್ದರೆ ಅಸಾಧ್ಯವೇನಿಲ್ಲʼ ಎಂಬ ಒಂದು ಅಬಾಬಿಯನ್ನು ಓದಿದ ತಕ್ಷಣ ನಮಗೆ ಮಾನ್ಯ ಹರೆಕಳ ಹಾಜಬ್ಬ ನವರು ನೆನಪಾಗುವರು. ಇವರ ಕತೆಯನ್ನು ಸಾಧನೆಯನ್ನು, ಅವರ ಪ್ರಾಮಾಣಿಕ ಪ್ರಯತ್ನ, ಸಾಧಿಸಬೇಕೆಂಬ ಛಲ, ಪಡೆದ ಯಶಸ್ಸು ಎಲ್ಲವನ್ನು ಹಿಡಿದಿಡುವಲ್ಲಿ ಈ ಅಬಾಬಿಯ ಸಾಲುಗಳು ಯಶಸ್ವಿಯಾಗಿವೆ. ಮಾನ್ಯ ಹರೆಕಳ ಹಾಜಬ್ಬನವರಿಗೆ ಅರ್ಪಿಸಲ್ಪಟ್ಟಿರುವುದು ʼಅಪ್ರಮೇಯʼ ಕೃತಿಯ ಮತ್ತೊಂದು ವಿಶೇಷತೆ. ಮತ್ತೊಂದು ಅಬಾಬಿ ʼಧರ್ಮದ ಹೆಸರಿನಲ್ಲಿ ನರಮೇಧ ನಡೆಯುತ್ತಿದೆ ಬಂದೂಕುಗಳೇ ಉಳಿದಾವು ಕೊನೆಗೆ ರವಿ ಹಿಂಸೆ ಯಾವ ಧರ್ಮದ ಸಾರ?ʼ ಧರ್ಮದ ಮೂಲ ಸತ್ವವನ್ನ ಮರೆತಿರುವ ಇಂದಿನ ಕಾಲದ ಧರ್ಮದ ಹೆಸರಿನ ಹೊಡೆದಾಟಗಳನ್ನು ಗಮನದಲ್ಲಿಟ್ಟುಕೊಂಡು ನಿಜವಾದ ಧರ್ಮ ಅಂದರೆ ಹೊಡೆದಾಡುವುದಲ್ಲ, ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ, ʼಅಹಿಂಸೆಯೇ ಪರಮ ಧರ್ಮʼ ಎಂಬುದನ್ನು ಈ ಅಬಾಬಿ ಅರ್ಥಪೂರ್ಣವಾಗಿ ಧ್ವನಿಸುತ್ತದೆ. ಮತ್ತೊಂದು ಅಬಾಬಿ ʼಸಮುದ್ರವನ್ನೇ ದಾಟಬಹುದು ಕಾಲುಗಳೇ ಒದ್ದೆಯಾಗದಂತೆ ಕಂಗಳು ಒದ್ದೆಯಾಗದೆ ಜೀವನ ದಾಟಲಾಗದು ದನು ಜೀವನ ಕಷ್ಟ ನಷ್ಟಗಳ ಆಗರʼ ಎಂಬುದು ಮಾನವನ ಜೀವನ ಸಾರವನ್ನು, ಭವಶರಧಿಯನ್ನು ದಾಟಬೇಕಾದರೆ ಕಷ್ಟ ನಷ್ಟಗಳನ್ನು ಸಹಿಸಲೇಬೇಕು ಎಂಬುದನ್ನು ಸರಳವಾಗಿ ವಿವರಿಸಿದೆ. ಹೀಗೆ ಲಿಂಗ ಸಮಾನತೆ, ಪ್ರಕೃತಿ ಪ್ರೇಮ, ನೈತಿಕತೆ, ಕನ್ನಡ ಪ್ರೀತಿ, ಬಡವನ ಬವಣೆ, ಅಕ್ಷರಸ್ಥರ ಅಜ್ಞಾನ, ಅತ್ಯಾಚಾರ, ಭ್ರಷ್ಟಾಚಾರ, ಸಮಾನತೆ, ಸರ್ವಜನ ಪ್ರೀತಿ, ವಿವೇಕ, ಸ್ವಾತಂತ್ರ್ಯ, ಮಾನವೀಯ ಮೌಲ್ಯಗಳು, ಪ್ರೀತಿ, ಸಾವು, ಬದುಕು, ಸತ್ಯದ ಮಾರ್ಗ, ಕಾಯಕದ ಮಹತ್ವ, ರಾಜಕೀಯ, ಮುಂತಾದವುಗಳನ್ನು ಹೊಸ ರೀತಿಯಲ್ಲಿ ವಿಶ್ಲೇಷಿಸುವ, ವಿವರಿಸುವ, ಅವಶ್ಯವಿರುವ ವಿಚಾರಗಳನ್ನು ಪ್ರತಿಪಾದಿಸುವಂತಹ ಹಲವಾರು ಅಬಾಬಿಗಳನ್ನೊಳಗೊಂಡ ʼಅಪ್ರಮೇಯʼ ನಿಜಕ್ಕೂ ಅಪ್ರಮೇಯವೂ ಅದ್ವಿತೀಯವೂ ಆದ ಕೃತಿಯಾಗಿದೆ. ಕೃತಿಯ ಕೆಲವು ಅಬಾಬಿಗಳಲ್ಲಿ ಬರುವ ʼಸಮಾನತೆಯನ್ನು ಸದಾ ಪಾಲಿಸುʼ, ʼಪ್ರೀತಿ ಪ್ರೇಮಗಳೇ ಅಲ್ಲವೇ ಸರ್ವ ಧರ್ಮಗಳ ಸಾರʼ, ʼಧರ್ಮವೆಂದರೆ ಬದುಕಿನ ತಿರುಳುʼ, ʼದಾನ ಧರ್ಮದಲ್ಲೂ ಸ್ವಾರ್ಥವಡಗಿದೆʼ, ʼಕಂಬನಿಯು ನೋವು ನಲಿವಿನ ಸಂಗಮʼ, ʼದೀಪದಂತೆ ಬೆಳಕಾಗು ಅನ್ಯರ ಬಾಳಿಗೆʼ, ʼಯೋಗ್ಯತೆ ಇದ್ದರೆ ಯೋಗವು ಬರುವುದುʼ, ʼಕಾಯಕವೇ ನಿನ್ನ ಉತ್ತರವಾಗಲಿʼ, ʼಸಮರಸದಿ ಬದುಕಿ ಸ್ವರ್ಗ ಕಾಣುʼ, ʼಗೆಲ್ಲುವ ವಿಶ್ವಾಸ ಎಂದು ಬತ್ತದೆ ಇರಲಿʼ, ʼಅಹಮಿಕೆಯ ಕೋಟೆಗೆ ಉಳಿಗಾಲವಿದೆಯೇʼ, ʼಭ್ರೂಣ ಹತ್ಯೆಪಾಪವಲ್ಲವೇ?ʼ ʼಭವಸಾಗರ ಕಷ್ಟನಷ್ಟಗಳ ಆಗರʼ, ʼಅಟ್ಟಹಾಸದಿಂದ ಅವನತಿ ನಿಶ್ಚಿತʼ, ಮುಂತಾದ ಒಂದು ರೀತಿಯ ನೀತಿವಾಕ್ಯಗಳನ್ನು ಹೋಲುವ ಕೊನೆ ಸಾಲುಗಳು ಮನಸ್ಸಿಗೆ ನಾಟುವಂತವು. ಹೀಗೆ ಕೊನೆಯ ಸಾಲಿನಲ್ಲಿ ಒಂದು ಸಂದೇಶ, ಒಟ್ಟು ಅಬಾಬಿಯ ದೃಷ್ಠಿ, ಬರಹಗಾರನ ಯೋಚನೆಯನ್ನು ತಿಳಿಸುವುದು ಅಬಾಬಿ ಸಾಹಿತ್ಯ ಪ್ರಕಾರದ ವಿಶೇಷವೂ ಹೌದು. ಇಂತಹ ಮಹತ್ವದ ಸಾಹಿತ್ಯ ಪ್ರಕಾರವಾದ ಅಬಾಬಿಗಳು ಕನ್ನಡದಲ್ಲಿ ಮತ್ತಷ್ಟು ಹೆಚ್ಚಿ ಜನಮನಗಳನ್ನು ತಣಿಸಲಿ ಎಂದು ಆಶಿಸುವೆ. ನಮಸ್ಕಾರಗಳು. - ವರುಣ್‌ ರಾಜ್‌ ಜಿ. ಸಂಪಾದಕರು, ವಿಚಾರ ಮಂಟಪ ಜಾಲ ಪತ್ರಿಕೆ. # ೯೪೪೮೨೪೧೪೫೦

Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.