ನಾಡು ನುಡಿ ಕಟ್ಟಿದವರು ಪುಸ್ತಕ ಸರಣಿ - ಶ್ರೀ ವೀರೇಂದ್ರ ಪಾಟೀಲ್.

ನಾಡು ನುಡಿ ಕಟ್ಟಿದವರು ಪುಸ್ತಕ ಸರಣಿ ಶ್ರೀ ವೀರೇಂದ್ರ ಪಾಟೀಲ್ (ಜೀವನ ಮತ್ತು ಸಾಧನೆ) ನಾಡು ಕಂಡ ಶ್ರೇಷ್ಠ ರಾಜಕಾರಣಿ, ಚತುರ ಸಂಸದೀಯ ಪಟು, ಧೀಮಂತ ನಾಯಕ, ಕರ್ನಾಟಕದ ಹೆಮ್ಮೆ ಶ್ರೀ ವೀರೇಂದ್ರ ಪಾಟೀಲರು ತಮ್ಮ ಜೀವನವನ್ನು ನಾಡು ನುಡಿ ರಕ್ಷಣೆಗಾಗಿ, ರೈತ – ಕಾರ್ಮಿಕರ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟವರು. ಪಕ್ಷ ಸಂಘಟನೆಯ ಜೊತೆ ಜೊತೆಗೆ ತಮ್ಮನ್ನು ನಂಬಿ ಆಯ್ಕೆ ಮಾಡಿದ ಜನರ ಕುರಿತು ಸದಾ ಚಿಂತಿಸುತ್ತಾ ಅವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದವರು. ಇವರ ಕಾಲದಲ್ಲಿ ನಾಡಿನ ಹಲವು ನೀರಾವರಿ ಯೋಜನೆಗಳು, ಕಾರ್ಖಾನೆಗಳು ಪ್ರಾರಂಭವಾದದ್ದು ಪಾಟೀಲರ ದೂರದೃಷ್ಠಿತ್ವಕ್ಕೆ ಒಂದು ಉದಾಹರಣೆ. ತಮ್ಮ ಸ್ವಪ್ರಯತ್ನ, ಪ್ರತಿಭೆ, ನಿಷ್ಠಾವಂತಿಕೆ, ನಿಷ್ಠುರತೆ, ಪ್ರಾಮಾಣಿಕತೆ, ಶುದ್ಧತೆ, ಸಜ್ಜನಿಕೆ, ವಿಚಾರಪರತೆ, ನಿಸ್ವಾರ್ಥ, ಜನಪರ ಚಿಂತನೆ, ಸದ್ಗುಣ, ಜನೊಪಯೋಗಿ, ಜನ ಕಲ್ಯಾಣ ಗುಣ ಮತ್ತು ಕಾರ್ಯಗಳಿಂದಾಗಿ ಶ್ರೀ ವೀರೇಂದ್ರ ಪಾಟೀಲರ ಹೆಸರು ಕರ್ನಾಟಕ ಮತ್ತು ರಾಷ್ಟ್ರದ ರಾಜಕೀಯ ಇತಿಹಾಸ ಚಿರಸ್ಥಾಯಿಯಾಗಿ ಉಳಿದಿದೆ. ಇಂತಹ ಧೀಮಂತ ನಾಯಕರ ವೈಯಕ್ತಿಕ ಬದುಕು, ಸೇವೆ, ಸಾಧನೆ ಇತ್ಯಾದಿಗಳನ್ನು ಹಾಗೂ ಮಾನ್ಯರು ನಾಡು - ನುಡಿಗೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುವುದು ಈ ಲೇಖನದ ಉದ್ದೇಶ. ಶ್ರೀ ವೀರೇಂದ್ರ ಪಾಟೀಲರು ರಾಜ್ಯದ ಹೈದರಾಬಾದ್‌ ಕರ್ನಾಟಕ ಪ್ರಾಂತ್ಯದ ಚಿಂಚೋಳಿ ತಾಲೂಕಿನ ಹೂಡದಳ್ಳಿ ಎಂಬ ಗ್ರಾಮದ ಶ್ರೀ ಬಸಪ್ಪಾ ಮತ್ತು ಚೆನ್ನಮ್ಮರ ೩ ನೇ ಸಂತಾನವಾಗಿ ಫೆಬ್ರವರಿ ೨೮ ೧೯೨೪ ರಂದು ಜನಿಸಿದರು. ಇವರಿಗೆ ಒಬ್ಬ ಸಹೋದರ ಮತ್ತು ಇಬ್ಬರು ಸಹೋದರಿಯರು. ತಮ್ಮ ೮ ನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಪಾಟೀಲರು ಮುಂದೆ ತಮ್ಮ ಅಣ್ಣ ಹಾಗೂ ಸಹೋದರ ಸಂಬಂಧಿ ಭೀಮಶೆಟ್ಟಿ ಪಾಟೀಲರ ಆಶ್ರಯದಲ್ಲಿ ಬೆಳೆಯುವರು. ಚಿಂಚೋಳಿ ಗ್ರಾಮದಲ್ಲಿ ತಂದೆಯವರಾದ ಬಸಪ್ಪನವರೇ ಪ್ರಾರಂಭಿಸಿದ್ದ ನ್ಯಾಷನಲ್‌ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ಪಾಟೀಲರು ಮುಂದೆ ಕಲಬುರ್ಗಿ ಮತ್ತು ಹೈದರಾಬಾದಿನಲ್ಲಿ ಮೆಟ್ರಿಕ್‌ ಪಾಸು ಮಾಡಿದರು. ನಂತರ ಉಸ್ಮಾನಿಯಾ ವಿಶ್ವವಿದ್ಯಾಲಯಲ್ಲಿ ಅರ್ಥಶಾಸ್ತ್ರ ಬಿ.ಎ. ಮತ್ತು ಎಲ್.ಎಲ್.ಬಿ. ಪಾಸ್ ಮಾಡಿ ತಮ್ಮ ಊರಿಗೆ ಮರಳಿ ಬಂದು ವಕೀಲಿ ವತ್ತಿಯನ್ನು ಪ್ರಾರಂಭಿಸಿದರು. ಪಾಟೀಲರು ದೊಡ್ಡ ಜಮೀನ್ದಾರರಾದ ಮಿರಿಮಾನದ ಗೌಡರ ವಿರುದ್ಧ ಟೆನೆಂಟ್‌ ಕಕ್ಷಿದಾರನ ಕಡೆ ವಾದ ಮಾಡಿ ತಮ್ಮ ಮೊದಲ ಪ್ರಕರಣವನ್ನು ಗೆಲ್ಲುವರು. ಇದರಿಂದ ಊರಿನಲ್ಲಿ ವೀರೇಂದ್ರ ಪಾಟೀಲರಿಗೆ ಹೆಚ್ಚು ಗೌರವ ಸಿಗುವುದರೊಂದಿಗೆ ಇವರ ವೃತ್ತಿ ಜೀವನವು ಸುಗಮವಾಯಿತು. ಮುಂದೆ ಚಿಂಚೋಳಿಯ ಒಬ್ಬ ಪ್ರಸಿದ್ಧ ವಕೀಲರಾಗಿ ಹೆಸರು ಪಡೆದ ಪಾಟೀಲರು ಸುಮಾರು 2 ವರ್ಷಗಳ ಕಾಲ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಮಾಡಿದರು. ಮುಂದೆ 1952 ರಲ್ಲಿ ಸ್ನೇಹಿತರಾದ ಚಂದ್ರಶೇಖರ ಪಾಟೀಲರ ಒತ್ತಾಯದ ಮೇರೆಗೆ ಮೊದಲ ಬಾರಿಗೆ ವೀರೇಂದ್ರ ಪಾಟೀಲರು ಆಳಂದದಿಂದ ಹೈದರಾಬಾದ್‌ ಅಸೆಂಬ್ಲಿಗೆ ಆಯ್ಕೆಯಾಗುವರು. ಮುಂದೆ ರಾಜಕೀಯ ಮತ್ತು ವಕೀಲಿ ವೃತ್ತಿಗಳನ್ನು ಜೊತೆ ಜೊತೆಯಾಗಿ ಸಾಗಿಸಿಕೊಂಡು 5 ವರ್ಷಗಳನ್ನು ಕಳೆದ ವೀರೇಂದ್ರ ಪಾಟೀಲರು ನಂತರದಲ್ಲಿ ವಕೀಲಿ ವೃತ್ತಿಯನ್ನು ತೊರೆದು ರಾಜಕೀಯದಲ್ಲಿ ತಮ್ಮನ್ನು ತಾವು ಸಂಪೂರ್ಣ ಸಕ್ರಿಯವಾಗಿ ತೊಡಗಿಸಿಕೊಂಡರು. ಪಾಟೀಲರ ರಾಜಕೀಯ ಪ್ರವೇಶ ಒತ್ತಾಯ ಪೂರ್ವಕವೇ ಆಗಿತ್ತು. ವಕೀಲನಾಗಿ ಹೆಸರು ಗಳಿಸುತ್ತಿದ್ದ ವೀರೇಂದ್ರ ಪಾಟೀಲರು ಎಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುವರೋ ಎಂಬ ಭಯದಿಂದ ಕಾಂಗ್ರೆಸ್‌ ಪಕ್ಷವು ಚಂದ್ರಶೇಖರ ಪಾಟೀಲರ ಮೂಲಕ ಒತ್ತಾಯ ಹಾಕಿಸಿ ವೀರೇಂದ್ರ ಪಾಟೀಲರನ್ನು ಚುನಾವಣೆಗೆ ನಿಲ್ಲಿಸಿದ್ದರಂತೆ. ಆಳಂದ ತಮ್ಮ ಸ್ವಂತ ಕ್ಷೇತ್ರವಲ್ಲದ ಕಾರಣ ಪ್ರಾರಂಭದ ಚುನಾವಣಾ ಪ್ರಚಾರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗದೆ ಹೋದರು ಸಹಾ ಇವರ ವಿನಯವಂತಿಕೆ, ಪಕ್ಷನಿಷ್ಠೆ ಮತ್ತು ಚಂದ್ರಶೇಖರ ಪಾಟೀಲರ ಪ್ರಭಾವದಿಂದ ಪಾಟೀಲರು ಅಸೆಂಬ್ಲಿಗೆ ಆಯ್ಕೆ ಆಗುವರು. ಹೀಗೆ ಶ್ರೀ ವೀರೇಂದ್ರ ಪಾಟೀಲರು ೧೯೫೦ ರಲ್ಲಿ ಆಳಂದ ವಿಧಾನ ಸಭಾ ಕ್ಷೇತ್ರದಿಂದ ಪ್ರಥಮ ಭಾರಿಗೆ ಸ್ಪರ್ಧಿಸಿ ಆಯ್ಕೆಗೊಳ್ಳುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು. ಮುಂದೆ ಹೈದರಾಬಾದ್‌ ಅಸೆಂಬ್ಲಿಯಲ್ಲಿ ಉರ್ದು ಭಾಷೆಯನ್ನು ಚೆನ್ನಾಗಿ ಬಲ್ಲ ಪಾಟೀಲರು ಪ್ರತಿಯೊಂದು ಮಸೂದೆ ಚರ್ಚೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದ ಕಾರಣ ಇವರಿಗೆ ಕಾಂಗ್ರೆಸ್‌ ಪಕ್ಷದ ಹೈದರಾಬಾದ್‌ ಪ್ರದೇಶ ಕಾಂಗ್ರೆಸ್‌ ಕಮಿಟಿಯ ಪ್ರಧಾನ ಕಾರ್ಯದರ್ಶಿಯ ಸ್ಥಾನ ದೊರೆಯುತ್ತದೆ. ಮುಂದೆ, 1957 ರಲ್ಲಿ ನಡೆದ ಚುನಾವಣೆಯಲ್ಲಿ ವೀರೇಂದ್ರ ಪಾಟೀಲರು ತಮ್ಮ ಸ್ವಂತ ಕ್ಷೇತ್ರವಾದ ಚಿಂಚೋಳಿಯಿಂದ ಸ್ಪರ್ಧಿಸುವರು. ಕುದುರೆಯ ಮೇಲೆ ಮತ ಪ್ರಚಾರ ಕೈಗೊಂಡು ಜನರ ಮನಸನ್ನು ಗೆದ್ದು ಚುನಾವಣೆಯಲ್ಲಿ ವಿಜಯಗಳಿಸಿದರು. ಮತ್ತು ಎಸ್‌. ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಗೃಹ ಕೈಗಾರಿಕೆ ಮತ್ತು ಗ್ರಾಮೀಣ ಕೈಗಾರಿಕೆ ಖಾತೆಯ ಉಪಸಚಿವರಾಗಿ ಕಾರ್ಯ ನಿರ್ವಹಿಸಿದರು. ಮತ್ತು ಮುಂದೆ 1961 ರಲ್ಲಿ ಅಬಕಾರಿ ಮತ್ತು ಗ್ರಾಮೀಣ ಕೈಗಾರಿಕೆಯ ಸಚಿವರಾದರು. 1962 ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಿದ ವೀರೇಂದ್ರ ಪಾಟೀಲರು ಗೆಲುವು ಸಾಧಿಸಿ ಎಸ್. ಆರ್. ಕಂಠಿಯವರ ಸಚಿವ ಸಂಪುಟದಲ್ಲಿ ಲೋಕೊಪಯೋಗಿ, ನೀರಾವರಿ, ವಿದ್ಯುತ್‌, ಮತ್ತು ಸಾರಿಗೆ ಖಾತೆಗಳನ್ನು ನಿರ್ವಹಿಸಿದರು. ಮುಂದೆ ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾದಾಗ ವೀರೇಂದ್ರ ಪಾಟೀಲರು ರಸ್ತೆ, ಕಟ್ಟಡ ನಿರ್ಮಾಣ, ನೀರಾವರಿ ಮತ್ತು ವಿದ್ಯುತ್‌ ಖಾತೆಗಳನ್ನು ನಿಭಾಯಿಸಿ ಉತ್ತಮವಾದ ಕೀರ್ತಿ ಪಡೆದರು. ಶ್ರೀ ವೀರೇಂದ್ರ ಪಾಟೀಲರು ಸಚಿವರಾಗಿದ್ದ ಈ 6 ವರ್ಷಗಳ ಅವಧಿಯಲ್ಲಿ ಸಾಕಷ್ಟು ಜನೋಪಯೋಗಿ ಕಾರ್ಯಗಳನ್ನು ನಿರ್ವಹಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಇಲಾಖೆಯ ಕೆಲಸಗಳಿಗೆ ಸಂಬಂಧಿಸಿ ರಾಜ್ಯಾದ್ಯಂತ ಪ್ರವಾಸಮಾಡಿ ಖುದ್ದು ಪರಿಶೀಲನೆ ಮಾಡುತ್ತಿದ್ದರು. ಈ ಅವಧಿಯಲ್ಲಿ ಮುಖ್ಯವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಿದರು. ಮತ್ತು ತಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದಲ್ಲದೇ ಹಲವು ಮಹತ್ವದ ಯೋಜನೆಗಳನ್ನು ಪ್ರಾರಂಭಿಸಿದರು. ಶರಾವತಿ ಯೋಜನೆಯನ್ನು ಆರಂಭಿಸಿ ವಿದ್ಯುತ್‌ ಉತ್ಪಾದನೆಯನ್ನು ವಿಪರೀತವಾಗಿ ಹೆಚ್ಚಿಸಿದರು. ಇದರಿಂದಾಗಿ ಅಕ್ಕಪಕ್ಕದ ರಾಜ್ಯಗಳಿಗೆ ವಿದ್ಯುತ್‌ ಮಾರಾಟ ಮಾಡುವಂತಾಗಿತ್ತು. ಈ ಅವಧಿಯಲ್ಲಿ ಹಲವು ಹೊಸ ಕಾರ್ಖಾನೆಗಳನ್ನು ಸಹ ಪ್ರಾರಂಭಿಸಿ ಅವರಿಗೆ ಕಡಿಮೆ ಬೆಲೆಗೆ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿತ್ತು. ಮುಂದೆ 1968 ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಗಳಾಗಿದ್ದ ಅವಧಿಯಲ್ಲಿ ಎಸ್. ನಿಜಲಿಂಗಪ್ಪನವರು ಕಾಂಗ್ರೆಸ್‌ ಅಧ್ಯಕ್ಷರಾಗಿ ರಾಜ್ಯದ ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ಸಲ್ಲಿಸಿದಾಗ ಶ್ರೀ ವೀರೇಂದ್ರ ಪಾಟೀಲರು ಪ್ರಥಮ ಭಾರಿಗೆ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಳ್ಳುವರು. ನೀರಾವರಿ ಸೌಕರ್ಯ, ವಿದ್ಯುತ್‌ ಉತ್ಪಾದನೆ ಹೆಚ್ಚಳ, ಕಾಳಿ ನದಿ ಪವರ್‌ ಕಾರ್ಪುರೇಷನ್‌ ಸ್ಥಾಪನೆ, ಮತ್ತು ಕಾಳಿ ನದಿ ಯೋಜನೆಯ ಆರಂಭ, ಕಾವೇರಿ, ಕೃಷ್ಣ, ಘಟ್ಟಪ್ರಭಾ, ಭೀಮಾ, ತುಂಗಭದ್ರಾ ಮುಂತಾದ ಹಲವು ನೀರಾವರಿ ಯೋಜನೆಗಳ ರೂಪಿಸುವಿಕೆ, ಕಬಿನಿ, ಹೇಮಾವತಿ, ಹಾರಂಗಿ ಮುಂತಾದ ಯೋಜನೆಗಳ ಮುಂದುವರಿಕೆ ಮತ್ತು ಹಲವು ಹೊಸ ಉದ್ದಿಮೆಗಳು ಸ್ಥಾಪನೆ ಮುಂತಾದವು ಈ ಅವಧಿಯಲ್ಲಿ ಪಾಟೀಲರು ಮಾಡಿದ ಸಾಧನೆಗಳಾಗಿವೆ. ಮುಂದೆ ನಡೆದ ರಾಜಕೀಯ ಬದಲಾವಣೆಗಳ ಪರಿಣಾಮವಾಗಿ 1971 ರಲ್ಲಿ ಪಾಟೀಲರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕಾಯಿತು. 1972 ರಲ್ಲಿ ಸಂಸ್ಥಾ ಕಾಂಗ್ರೆಸ್‌ನ ಮೂಲಕ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿ ದೆಹಲಿಗೆ ಹೋದ ಪಾಟೀಲರು 1972 ರಿಂದ 1978 ರವರೆಗೂ ಇದೆ ಸ್ಥಾನದಲ್ಲಿ ಮುಂದುವರೆದರು. ನಂತರ 1978ರ ಸಾರ್ವತ್ರಿಕ ಚುನಾವಣೆಯಲ್ಲಿ ಮುರಾರ್ಜಿ ದೇಸಾಯಿ, ಜಾರ್ಜ್‌ ಫರ್ನಾಂಡಿಸ್‌ ಮುಂತಾದವರ ಒತ್ತಡದಿಂದಾಗಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಶ್ರೀಮತಿ ಇಂದಿರಾ ಗಾಂಧಿಯವರ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡ ಪಾಟೀಲರು ಮುಂದೆ ಸಂಸ್ಥಾ ಕಾಂಗ್ರೆಸ್‌ ನಿಂದ ಬೇರೆಯಾಗಿ ಇಂದಿರಾ ಗಾಂಧಿಯವರ ಆಹ್ವಾನದ ಮೇರೆಗೆ ಪುನಃ ಕಾಂಗ್ರೆಸ್‌ ಪಕ್ಷಕ್ಕೆ ಸೇರುವರು. 1980 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರ ಗುಲಬರ್ಗಾದಿಂದ ಸ್ಪರ್ಧಿಸುವ ಬದಲಾಗಿ ಎಸ್. ಎನ್‌. ಮೆಳ್ಳಿಗೇರಿಯವರ ಒತ್ತಾಯದ ಮೇರೆಗೆ ಬಾಗಲಕೋಟೆಯಿಂದ ಸ್ಪರ್ಧಿಸಿ ಹೆಚ್ಚಿನ ಬಹುಮತದಿಂದ ಆಯ್ಕೆಯಾದ ಪಾಟೀಲರು ಅದೇ ಇಂದಿರಾ ಗಾಂಧಿಯವರ ಸಚಿವ ಸಂಪುಟದಲ್ಲಿ ಪೆಟ್ರೋಲಿಯಂ, ಫರ್ಟಿಲೈಜರ್‌ ಮತ್ತು ಕೆಮಿಕಲ್‌ ಖಾತೆಗಳ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವರು. ಆಗ ಕ್ರೂಡ್‌ ಆಯಿಲ್‌ನ ಅಭಾವವಿದ್ದ ಕಾರಣ ಅದನ್ನು ನೀಗಿಸಲು ಪಾಟೀಲರು ಸಾಕಷ್ಟು ಶ್ರಮಿಸಿದರು. ಆದರೆ ಇದೇ ಖಾತೆಯಲ್ಲಿ ಪಾಟೀಲರು ಹೆಚ್ಚು ಕಾಲ ಉಳಿಯಲಿಲ್ಲ. ಪೆಟ್ರೋಲಿಯಂ, ಫರ್ಟಿಲೈಜರ್‌ ಮತ್ತು ಕೆಮಿಕಲ್‌ ಖಾತೆಗಳ ನಂತರ ಹಡಗು ಮತ್ತು ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಪಾಟೀಲರು ಎರಡು ವರ್ಷ ಇದೇ ಖಾತೆಯಲ್ಲಿ ಮುಂದುವರೆದದಲ್ಲದೇ ಅತ್ಯಂತ ಪ್ರಾಮಾಣಿಕವಾಗಿ ಈ ಜವಾಬ್ದಾರಿಯನ್ನು ನಿರ್ವಹಿಸಿದರು. ಇದರ ನಂತರ ಪಾಟೀಲರು ಕಾರ್ಮಿಕ ಸಚಿವರಾಗಿ ಮುಂದೆ ಇಂದಿರಾ ಗಾಂಧಿಯವರ ಹತ್ಯೆಯ ನಂತರ 1985 ಸೆಪ್ಟೆಂಬರ್‌ ವರೆಗೆ ರಾಜೀವ್‌ ಗಾಂಧಿಯವರ ಸಂಪುಟದಲ್ಲಿ ಕಾರ್ಮಿಕ, ಹಡಗು ಮುಂತಾದ ಖಾತೆಗಳನ್ನು ನಿಭಾಯಿಸಿದರು. 1985ರ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಕಳೆದುಕೊಂಡು ಜನತಾ ಪಕ್ಷದ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾದಾಗ ವೀರೇಂದ್ರ ಪಾಟೀಲರು ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ನೇಮಕವಾಗಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷವು 224 ರಲ್ಲಿ 179 ಸ್ಥಾನಗಳನ್ನು ಗೆಲ್ಲುವಂತೆ ಮಾಡಿದರು. ಮತ್ತು ಎರಡನೇ ಭಾರಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವರು. ಮುಖ್ಯಮಂತ್ರಿಗಳಾಗಿ ತಮ್ಮ ಎರಡನೇ ಅವಧಿಯಲ್ಲಿ ಶ್ರೀ ವೀರೇಂದ್ರ ಪಾಟೀಲರು ಆರ್ಥಿಕ ಸಮಸ್ಯೆಗಳ ನಿವಾರಣೆಗೆ ಸಾಕಷ್ಟು ಶ್ರಮಿಸಿದರು. ಸಂಪನ್ಮೂಲ ಅಭಿವೃದ್ಧಿ ಮತ್ತು ಆ ಮೂಲಕ ಆರ್ಥಿಕ ಸುಧಾರಣೆಗೆ ಹೆಚ್ಚು ಪ್ರೋತ್ಸಾಹವಿತ್ತರು. ಮಾರಾಟ, ಅಬಕಾರಿ ತೆರಿಗೆಗಳ ಮೂಲಕ ಸರ್ಕಾರಕ್ಕೆ ಹೆಚ್ಚು ಆಧಾಯ ಬರುವಂತೆ ಮಾಡಿದರು. ಇಷ್ಟೇ ಅಲ್ಲದೇ, ಬ್ರಷ್ಠಾಚಾರ ತಡೆಗಟ್ಟಲು ʼಎಫಿಷಿಯನ್ಸಿ ಆಡಿಟ್‌ ಬ್ಯೂರೋʼ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಅನ್ಯಾಯ, ಭ್ರಷ್ಟಾಚಾರ, ಅದಕ್ಷತೆ, ಅಪ್ರಮಾಣಿಕತೆಗಳನ್ನು ಗುರುತಿಸಿ ದಂಡಿಸುವ ಕೆಲಸವನ್ನು ಮಾಡುವ ಮೂಲಕ ವೀರೇಂದ್ರ ಪಾಟೀಲರು ಜನರ ಮೆಚ್ಚುಗೆಗೆ ಪಾತ್ರರಾದರು. ವೀರೇಂದ್ರ ಪಾಟೀಲರು ತಮ್ಮ ಜೀವಿತಾವಧಿಯಲ್ಲಿ ಸಂಸದರಾಗಿ, ಶಾಸಕರಾಗಿ ರಾಷ್ಟ್ರ ಮತ್ತು ರಾಜ್ಯಕ್ಕೆ ಅಪಾರ ಕೊಡುಗೆಯನ್ನಿತ್ತಿರುವರು. ಸಂಸದರಾಗಿ ಶಾಸಕರಾಗಿ ಸಚಿವರಾಗಿ ಮತ್ತು ಎರಡು ಭಾರಿ ರಾಜ್ಯದ ಮುಖ್ಯಮಂತ್ರಿಗಳಾಗಿ ಇವರು ಮಾಡಿದ ಸಾಧನೆ, ಸಲ್ಲಿಸಿರುವ ಸೇವೆ ಅಪಾರವಾದದ್ದು, ಇಷ್ಟೆಲ್ಲಾ ಕಾರ್ಯಭಾರದ ನಡುವೆಯು ತಮ್ಮನ್ನು ಆಯ್ಕೆ ಮಾಡಿ ಗೆಲ್ಲಿಸಿದ ಕ್ಷೇತ್ರದ ಜನತೆಗೆ ಮತು ಕ್ಷೇತ್ರದ ಅಭಿವೃದ್ಧಿಗೂ ಸಹ ಪಾಟೀಲರು ಸಾಕಷ್ಟು ಶ್ರಮಿಸಿರುವರು. ಪ್ರಮುಖವಾಗಿ, 1957 ರಲ್ಲಿ ಲೋಕೋಪಯೋಗಿ ಸಚಿವರಾಗಿ ಕಲಬುರ್ಗಿ ಯಿಂದ ಬೆಂಗಳೂರಿಗೆ ನೇರ ರಸ್ತೆಯನ್ನು ನಿರ್ಮಿಸಿದ್ದರು ಮತ್ತು ಕಲ್ಬುರ್ಗಿ ಪ್ರದೇಶದಲ್ಲಿ ಹರಿಯುವ ನೀರನ್ನು ಕೃಷಿ ಬಳಕೆಗೆ ಅನುಕೂಲವಾಗುವಂತಹ ವಿವಿಧ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದರು. ಮುಂದೆ ಅಮರ್ಜಾ ನೀರಾವರಿ ಯೋಜನೆ, ಬೆಣ್ಣೆತೊರೆ, ಗಂಡೋರಿ ನಾಲಾ, ಭೀಮ ಏತ ನೀರಾವರಿ, ಭೀಮಾ ಹರಿನೀರಾವರಿ, ಮುಲ್ಲ ಮಾರಿ ಕೆಳದಂಡೆ ಯೋಜನೆ, ಕಾರಂಜಿ, ಚುಳಕಿ ನಾಲಾ, ಮಸ್ಕಿ ನಾಲಾ, ಹಿರೇಹಳ್ಳಿ ಯೋಜನೆ ಮುಂತಾದ 21 ನೀರಾವರಿ ಯೋಜನೆಗಳನ್ನು ಪಾಟೀಲರ ಅವಧಿಯಲ್ಲಿ ಪ್ರಾರಂಭಿಸಲಾಯಿತು. 1980 ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಪಾಟೀಲರು ಶ್ರಮಿಸಿದ್ದರು. ನಕ್ಸಲ್‌ ಪೀಡಿತ ಪ್ರದೇಶಗಳಾಗಿದ್ದ ಪಾವಗಡ ಮತ್ತು ಚಿಂಚೋಳಿಗಳಲ್ಲಿ ನಕ್ಸಲಿಯರು ಹಿಂಸಾತ್ಮಕ ಚಟುವಟಿಕೆಗಳನ್ನು ಪ್ರಾರಂಭಿಸಿದಾಗ ಪಾಟೀಲರು ನಕ್ಸಲರ ಈ ಹಿಂಸಾತ್ಮಕ ಚಟುವಟಿಕೆಗಳ ತಡೆಗೆ ಮತ್ತು ಈ ಪ್ರದೇಶಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದರು. ಮತ್ತು ʼಗಡಿ ಪ್ರದೇಶ ಅಭಿವೃದ್ಧ ಯೋಜನೆʼಯನ್ನು ಪ್ರಾರಂಭಿಸಿ ಗಡಿ ಪ್ರದೇಶಗಳ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮವಹಿಸಿದ್ದರು. “ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ”ಯನ್ನು ಸ್ಥಾಪಿಸಿ ಆ ಮೂಲಕ ಸಮಸ್ತ ಹೈದರಾಬಾದ್‌ ಕರ್ನಾಟಕವನ್ನು ಅಭಿವೃದ್ಧಿಗೊಳಿಸಲು ಪಾಟೀಲರು ಶ್ರಮಿಸಿದರು. ಲಿಕ್ಕರ್‌ ಲಾಭಿ, ತೆರಿಗೆ ಸೋರಿಕೆ, ಅಧಿಕಾರಿಗಳ ಭ್ರಷ್ಟಾಚಾರಗಳನ್ನು ಸಮರ್ಥವಾಗಿ ತಡೆದು, ಸಂಪನ್ಮೂಲಗಳನ್ನು ಕ್ರೂಡೀಕರಿಸುವ ಮೂಲಕ ಸರ್ಕಾರವನ್ನು ಆರ್ಥಿಕವಾಗಿ ಸದೃಡಗೊಳಿಸಿದ ಪಾಟೀಲರು ರಾಜ್ಯದ ಅಭಿವೃದ್ಧಿಗಾಗಿ ಹಲವು ಹೊಸ ಯೋಜನೆಗಳ ಅನುಷ್ಠಾನಕ್ಕೆ ಮುಂದಾದರು. ಅಧಿಕಾರ ಇದ್ದಾಗಲೂ ಅಧಿಕಾರ ಕಳೆದುಕೊಂಡಾಗಲೂ ತಮ್ಮನ್ನು ನಂಬಿದ ಜನರಿಗೆ ಮತ್ತು ಪಕ್ಷಕ್ಕೆ ನಿಷ್ಠರಾಗಿ ತಮ್ಮ ಸರ್ವಸ್ವವನ್ನು ಜನರಿಗಾಗಿ ಮುಡಿಪಾಗಿಟ್ಟ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡರು. ಶ್ರೀ ವೀರೇಂದ್ರ ಪಾಟೀಲರು ತಮ್ಮ ಕ್ಷೇತ್ರದ ಮತ್ತು ರಾಜ್ಯದ ಅಭಿವೃದ್ಧಿಗಾಗಿ ತಮ್ಮ ಅಳಿಯ ಡಾ. ಬಿ.ಜಿ. ಜವಳಿಯವರನ್ನು ಲೋಕಸಭೆಗೆ ಮತ್ತು ತಮ್ಮ ಪುತ್ರ ಶ್ರೀ ಕೈಲಾಸನಾಥರನ್ನು ವಿಧಾನ ಸಭೆಗೆ ತಮ್ಮ ಉತ್ತರಾಧಿಕಾರಿಗಳಾಗಿ ಜನರಿಂದ ಆಯ್ಕೆಯಾಗುವಂತೆ ಮಾಡಿದರು. ಪಾಟೀಲರು ಮುಖ್ಯಮಂತ್ರಿಗಳಾಗಿದ್ದ ತಮ್ಮ ಎರಡನೇ ಅವಧಿಯಲ್ಲಿ ಪಾರ್ಶವಾಯುವಿಗೆ ತುತ್ತಾಗಿ ಆಸ್ಪತ್ರೆ ಸೇರಬೇಕಾಯಿತು ಮತ್ತು ಆಗ ನಡೆದ ಕೆಲವು ರಾಜಕೀಯ ಭಿನ್ನಾಟಗಳ ಪರಿಣಾಮವಾಗಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಕ್ಷೇತ್ರದ ಮತ್ತು ರಾಜ್ಯದ ಜನತೆಯ ಸಮಗ್ರ ಅಭಿವೃದ್ಧಿಗಾಗಿ ಕನಸು ಕಂಡು ಅದಕ್ಕಾಗಿ ಶ್ರಮಿಸಿದ ಶ್ರೀ ವೀರೇಂದ್ರ ಪಾಟೀಲರು ಅದ್ವಿತೀಯ ವ್ಯಕ್ತಿತ್ವದವರು ಮತ್ತು ಯಾವುದೇ ವಿವಾದಗಳಿಲ್ಲದೇ ಸಂಭಾವಿತರಾಗಿ ಬದುಕಿಬಾಳಿದ ನಾಡು ಕಂಡ ಶ್ರೇಷ್ಠ ರಾಜಕಾರಣಿಗಳು. ಇಂತಹ ಮಹನೀಯರು ತಮ್ಮ ನೇರ ನುಡಿ, ಪಾರದರ್ಶಕ ವ್ಯಕ್ತಿತ್ವದಿಂದಾಗಿ ಜನರ ಮನಸ್ಸನ್ನು ಗೆಲ್ಲುವುದರೊಂದಿಗೆ ಪಕ್ಷದ ಒಳಗೆ ಹಾಗೂ ಹೊರಗೆ ಸಾಕಷ್ಟು ವೈರುಧ್ಯಗಳನ್ನು ಎದುರಿಸಬೇಕಾಯಿತು ಮತ್ತು ಈ ವಿರೋಧಿ ಶಕ್ತಿಗಳ ಸಂಚಿನ ಕಾರಣದಿಂದಾಗಿ ಹಲವು ಭಾರಿ ಅಧಿಕಾರ ಕಳೆದುಕೊಂಡಿದ್ದಲ್ಲದೆ ಕೊನೆ ಕೊನೆಗೆ ರಾಜಕೀಯದಿಂದ ಮೂಲೆ ಗುಂಪಾಗಿದ್ದು ದುರಂತ. ಪಾಟೀಲರು ಪಾರ್ಶವಾಯು ಕಾಯಿಲೆಗೆ ತುತ್ತಾದಾಗ ಇದೇ ಕಾರಣಕ್ಕೆ ಅವರನ್ನು ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ಕೊಡುವಂತೆ ಒತ್ತಾಯಿಸಿಲಾಯಿತು ಮತ್ತು ಕ್ಷುಲ್ಲಕ ಕಾರಣದಿಂದ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಇತ್ತೀಚೆಗೆ ಶ್ರೀ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಪ್ರಾದೇಶಿಕ ಆಕಾಂಕ್ಷೆ ಮತ್ತು ಒಕ್ಕೂಟ ವ್ಯವಸ್ಥೆಯ ಮಹತ್ವವನ್ನು ವಿವರಿಸುತ್ತಾ ಪಾಟೀಲರನ್ನು ಒತ್ತಾಯ ಪೂರ್ವಕವಾಗಿ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿದ ಕಾಂಗ್ರೆಸ್‌ ಪಕ್ಷದ ಇಬ್ಬಗೆಯ ನೀತಿಯನ್ನು ಖಂಡಿಸಿದನ್ನು ಇಲ್ಲಿ ನೆನೆಯಬಹುದು. ಇದಕ್ಕೆ ಹಿಂದೆಯೂ ಹಲವು ಭಾರಿ ಪಾಟೀಲರಿಗೆ ಕೊಟ್ಟ ಖಾತೆಯನ್ನು ಕಿತ್ತುಕೊಂಡು ಬೇರೆ ಖಾತೆ ಕೊಡುವುದು, ಸಂಸ್ಥಾ ಕಾಂಗ್ರೆಸ್‌ ನಲ್ಲಿದ್ದಾಗಲೂ ಒತ್ತಾಯಪೂರ್ವಕವಾಗಿ ಇಂದಿರಾ ಗಾಂಧಿಯವರ ವಿರುದ್ಧ ನಿಲ್ಲಿಸಿ ಮುಜುಗರಕ್ಕೊಳಪಡುವಂತೆ ಮಾಡಿದ್ದು, ಪಾಟೀಲರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಕೈಗೊಂಡ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರವು ಹಣ ಬಿಡುಗಡೆ ಮಾಡದೇ ಹೊದದ್ದು, ಕೇಂದ್ರ ಕಾರ್ಮಿಕ ಸಚಿವರಾಗಿದ್ದಾಗ ವಿನಾಕಾರಣ ಸಚಿವ ಸ್ಥಾನ ಕಿತ್ತುಕೊಂಡದ್ದು ಇಂತಹಾ ಹಲವು ಸಂಚು ಹಾಗೂ ಮುಜುಗರಗಳನ್ನು ಪಾಟೀಲರು ತಮ್ಮವರಿಂದ ಹಾಗೂ ತಮ್ಮ ಪಕ್ಷದವರಿಂದ ಎದುರಿಸಬೇಕಾಗಿತ್ತು. ಇದೇ ಸಂಚಿನ ಮುಂದಿವರೆದ ಭಾಗವಾಗಿ ಪಾಟೀಲರು ಕೊನೆಗೆ ಪಕ್ಷದ ಸಾಮಾನ್ಯ ಸದಸ್ಯತ್ವದಿಂದಲೂ ಉಚ್ಚಾಟಿಸಲ್ಪಟ್ಟರು. ಇದಾದ ನಂತರದ 6 ವರ್ಷಗಳು ಅಧಿಕಾರದಿಂದ ಸಂಪೂರ್ಣವಾಗಿ ದೂರ ಉಳಿದ ಪಾಟೀಲರು ದಿನಾಂಕ 14 ಮಾರ್ಚ್‌ 1997 ರಂದು ತಮ್ಮ ಇಹ ಲೋಕದ ಯಾತ್ರೆಯನ್ನು ಮುಗಿಸಿ ಜನಮಾನಸದಲ್ಲಿ ಅಜರಾಮರರಾದರು. ಗ್ರಂಥ ಋಣ : ೧. ಅಂತರ್ಮುಖಿ ಜಾತಿ ರಾಜಕಾರಣಿ ವೀರೇಂದ್ರ ಪಾಟೀಲ್‌, (ಲೇಖನ) – ಜೆ.ಎಸ್. ನಾರಾಯಣ ರಾವ್‌, ಓನ್‌ ಇಂಡಿಯಾ ಕನ್ನಡ. ಕಾಮ್‌, ಜುಲೈ 29. 2008. ೨. ಪ್ರತಿಭಾವಂತ ಸಂಸದೀಯ ಪಟುಗಳ ಬದುಕು ಬರಹ ಮಾಲಿಕೆ, ಶ್ರೀ ವೀರೇಂದ್ರ ಪಾಟೀಲ್‌, ಸಂಶೋಧನಾ ಮತ್ತು ಉಲ್ಲೇಖನಾ ಶಾಖೆ, ಕರ್ನಾಟಕ ವಿಧಾನಸಭೆ ಸಚಿವಾಲಯ, ಬೆಂಗಳೂರು : ೧೯೯೧. ೩. ಅಂತರ್ಜಾಲ ಮಾಹಿತಿ. - ವರುಣ್‌ ರಾಜ್‌ ಜಿ. ಸಂಶೋಧಕರು ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು. # ೯೪೪೮೨೪೧೪೫೦ ಮಿಂಚಂಚೆ : maharishivarunrajji@gmail.com

Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.