ಸರ್ವಜ್ಞನ ತ್ರಿಪದಿಗಳಲ್ಲಿ ಗುರುವಿನ ಪರಿಕಲ್ಪನೆ ; ಒಂದು ಅವಲೋಕನ - ವರುಣ್ ರಾಜ್ ಜಿ.
ಸರ್ವಜ್ಞನ ತ್ರಿಪದಿಗಳಲ್ಲಿ ಗುರುವಿನ ಪರಿಕಲ್ಪನೆ ; ಒಂದು ಅವಲೋಕನ
- ವರುಣ್ ರಾಜ್ ಜಿ.
ಸರ್ವಜ್ಞನಿಗೆ ಪುಷ್ಟದತ್ತ, ದೇವಸಾಲೆ, ವರರುಚಿ ಮುಂತಾದ ಹೆಸರುಗಳು ಇವೆ. ತ್ರಿಪದಿ ಬ್ರಹ್ಮ, ತ್ರಿಪದಿ ಚಕ್ರವರ್ತಿ, ಕಾಲುದಾರಿಯ ಸಂತ, ಚಾರಣ ಕವಿ, ಆಶು ಕವಿ, ಜನಪದ ಕವಿ, ವಿಪ್ಲವಮೂರ್ತಿ ಮುಂತಾಗಿ ಸರ್ವಜ್ಞನನ್ನು ಕರೆದು ಗೌರವಿಸಿರುವರು. ಸರ್ವಜ್ಞನ ಕಾಲ 16 ನೇ ಶತಮಾನದ ಆದಿಭಾಗ. ಕರ್ನಾಟಕದ ಹಿರೇಕೆರೂರು ತಾಲೂಕಿನ ಅಂಬಲೂರು ಸರ್ವಜ್ಞನ ಹುಟ್ಟೂರು. ಸರ್ವಜ್ಞನ ಅಂಕಿತದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ತ್ರಿಪದಿಗಳು ದೊರೆತಿದ್ದು ಇವುಗಳಲ್ಲಿ ಹಲವು ಕಾಲಾಂತರದಲ್ಲಿ ಬೇರೆಯವರಿಂದ ಸೇರಿಸಲ್ಪಟ್ಟವೆಂದು ಊಹಿಸಲಾಗಿದೆ. ಇಂದಿಗೂ ಸರ್ವಜ್ಞನ ಹೆಸರು ಅವನ ಹಿನ್ನೆಲೆ ಇತ್ಯಾದಿಗಳ ಕುರಿತ ಹಲವು ಗೊಂದಲಗಳು ಇವೆಯಾದರೂ ವಯಸ್ಸಾದ ಹಿರಿಯರು ಮಧ್ಯವಯಸ್ಕರು ಹಾಗೂ ಮಕ್ಕಳಿಗೂ ಸರ್ವಜ್ಞ ಚಿರಪರಿಚಿತ. ಇಂದಿಗೂ ಕನ್ನಡ ನಾಡಿನ, ನಾಡಿನವರ ಹೃದಯ ಮತ್ತು ಮನಸ್ಸುಗಳಲ್ಲಿ ತನ್ನ ಸಹಸ್ರಾರು ತ್ರಿಪದಿಗಳ ಮೂಲಕ ಸರ್ವಜ್ಞನು ಜೀವಿಸಿಯೇ ಇದ್ದಾನೆ.
ಸರ್ವಜ್ಞನ, “ಕರೆಯದೆ ಬರುವವನ ಬರೆಯದೆ ಓದುವವನ ಬರಿಗಾಲಲಿ ನಡೆವನ ಕರೆದು ಕೆರೆದಲ್ಲಿ ಹೊಡೆಯೆಂದ ಸರ್ವಜ್ಞ”, “ಚಿತ್ತವಿಲ್ಲದೆ ಗುಡಿಯ ಸುತ್ತಿದೆಡೆ ಫಲವೇನು? ಎತ್ತು ಗಾಣವನು ತಾನೊತ್ತು ನಿತ್ಯವೂ ಸುತ್ತಿಬಂದಂತೆ ಸರ್ವಜ್ಞ”, “ವಿದ್ಯೆ ಹೇಳದ ತಂದೆ ಬುದ್ಧಿ ಹೇಳದ ಗುರುವು ಬಿದ್ದಿರಲು ಬಂದು ನೋಡದ ತಾಯಿ ಶುದ್ಧ ವೈರಿಗಳು ಸರ್ವಜ್ಞ” “ವಿದ್ಯೆ ಯುಳ್ಳವನ ಮುಖವು ಮುದ್ದುಬರುವಂತಿಕ್ಕು ವಿದ್ಯೆಯಿಲ್ಲದವನ ಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ಞ”, “ಸಾಲವನು ಕೊಂಬಾಗ ಹಾಲೋಗರುಂಡಂತೆ ಸಾಲಿಗರು ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ”, “ಬೆಚ್ಚನೆಯ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಚೆಯನರಿವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ” ಇತ್ಯಾದಿ ಇತ್ಯಾದಿ ಪದ್ಯಗಳು ಇಂದಿಗೂ ಜನರ ನಾಲಿಗೆಯಲ್ಲಿ ನಲಿದಾಡುವ, ಮಾತಿನಲ್ಲಿ ಅಗಾಗ ಸುಳಿದಾಡುವಂತಹವಾಗಿವೆ. ʼಆಡು ಮುಟ್ಟದ ಸೊಪ್ಪಿಲ ಸರ್ವಜ್ಞ ಹೇಳದ ವಿಷಯವಿಲ್ಲʼ ಎಂಬ ಮಾತೆ ಇದೆ. ಸರ್ವಜ್ಞ ತಾನು ಕಂಡ, ಉಂಡ, ಅನುಭವಿಸಿದ ಎಲ್ಲಾ ಪ್ರಾಪಂಚಿಕ ಕ್ರಿಯೆ, ವ್ಯವಹಾರ – ವ್ಯಾಪಾರಗಳನ್ನು ಯಾವುದೇ ಭಯವಿಲ್ಲದೇ, ಪಕ್ಷಪಾತವಿಲ್ಲದೇ, ನಿರ್ಭಿಡೆಯಿಂದ ವಿಮರ್ಶೆಗೊಳಪಡಿಸಿದ್ದಾನೆ.
ತನ್ನ ಅನುಭವಗಳ ಅಭಿವ್ಯಕ್ತಿಗೆ ಸರ್ವಜ್ಞ ಆಯ್ದುಕೊಂಡ ಮಾಧ್ಯಮ ತ್ರಿಪದಿ ಸಾಹಿತ್ಯ ಪ್ರಕಾರ. ಇದು ಜನಪದರಿಗೆ ಈಗಾಗಲೇ ಚಿರಪರಿಚಿತವಿದ್ದರಿಂದ ಸಾಮಾನ್ಯ ಜನರಿಗಾಗಿ, ಸಾಮಾನ್ಯ ಜನರ ನಡುವೆ, ಸಾಮಾನ್ಯನಾಗಿ, ನೊಂದವರ ಪರವಾಗಿ ಸರ್ವಜ್ಞ ತನ್ನ ಅಭಿವ್ಯಕ್ತಿಯನ್ನು ದಾಖಲಿಸಿದ್ದಾನೆ. ಸರ್ವಜ್ಞನ ಮೇಲೆ ವಚನ ಸಾಹಿತ್ಯದ ಅತಿದೊಡ್ಡ ಪ್ರಭಾವವಿದ್ದದ್ದು ನಮಗೆ ತಿಳಿದೇ ಇದೆ. ಅನುಭವ ಮಂಟಪದಲ್ಲಿ ಸರ್ವರಿಗೂ ಸಮಾನವಾದ ಅನುಭಾವದ ಅಭಿವ್ಯಕ್ತಿಯ ಅವಕಾಶ ದೊರೆಯುತ್ತಿತು. ಇದರ ಪ್ರೇರಣೆಯಿಂದ ಸರ್ವಜ್ಞ ತಾನು ಸುತ್ತಿ ಬಂದ ಪ್ರದೇಶದಲ್ಲೆಲ್ಲ ತನ್ನ ಅನುಭವವನ್ನು ಹಂಚುವ ಕೆಲಸವನ್ನು ಮಾಡಿರುವನು. ಸರ್ವಜ್ಞನ ಹೆಸರಿನಲ್ಲಿ ಕೆಲವು ದುರುದ್ದೇಶ ಪೂರಿತ ತ್ರಿಪದಿಗಳು ರಚನೆಯಾಗಿರುವುದನ್ನು ನಾವು ಈಗಾಗಲೇ ತಿಳಿದಿರುವೆವು. ಆದರೂ ಒಂದು ರೀತಿಯಲ್ಲಿ ಸರ್ವಜ್ಞನ ಹೆಸರು ಮತ್ತು ಅವನ ಪ್ರೇರಣೆಯಿಂದ ಅವನ ಅನುಭಾವ ಹಂಚಿಕೊಂಡವರು, ಅವನ ಮೂಲಕ ಜ್ಞಾನದ ಬೆಳಕನ್ನು ಕಂಡ ಜನಪದರು ಅವನದ್ದೇ ಅಂಕಿತದಲ್ಲಿ ತ್ರಿಪದಿಗಳನ್ನು ರಚಿಸಿ ಪ್ರಚಾರಕ್ಕೆ ತಂದಿರಬಹುದೆಂಬುದನ್ನು ನಾವು ಊಹಿಸಬಹುದು. ಇದಕ್ಕೆ ಪೂರಕವಾಗಿ ಜಿ.ಎಸ್. ಶಿವರುದ್ರಪ್ಪನವರು ಸರ್ವಜ್ಞ ಎಂಬುದು ಒಂದು ಕಾವ್ಯ ಪದ್ಧತಿಗೆ ಇಟ್ಟ ಹೆಸರು ಎಂಬ ಮಾತನ್ನು ನೆನೆಯಬಹುದು.
ಕನ್ನಡದ ಸರ್ವಜ್ಞ ತೆಲುಗಿನ ವೇಮನ್ನ ತಮಿಳಿನ ತಿರುವಳ್ಳುವರ್ ಮರಾಠಿಯ ತುಕಾರಾಂ ಹಿಂದಿಯ ಕಬೀರ್‍ದಾಸ್ ಮುಂತಾದವರನ್ನು ನೀತಿ ಬೋಧಕ ಕವಿಗಳು ಎಂದು ಒಂದು ಸಾಲಿನಲ್ಲಿರಿಸಿ ನೋಡುವುದು ರೂಢಿ. ನೀತಿ ಬೋಧನೆಯೇ ಇವರ ರಚನೆಗಳ ಮುಖ್ಯ ಆಶಯವಾಗಿರುವುದು ಇದಕ್ಕೆ ಕಾರಣ. ಇವರ ರಚನೆಗಳನ್ನು ಕನ್ನಡದಲ್ಲಿ ವಚನಗಳೆಂದು, ತ್ರಿಪದಿಗಳೆಂದು, ತೆಲುಗಿನಲ್ಲಿ ಪದ್ಯಮುಲು, ಚಾಟು ಪದ್ಯಮುಲು, ಶತಕಮು ಎಂದು, ತಮಿಳಿನಲ್ಲಿ ಕುರುಳ್ ಎಂದು ಕರೆಯುವರು. ನೀತಿ ಬೋಧನೆಯ ಜೊತೆ ಜೊತೆಗೆ ತತ್ತ್ವಬೋಧನೆಯೂ ಇವರ ರಚನೆಗಳ ಪ್ರಮುಖ ಆಶಯವಾಗಿದ್ದು, ಇವರನ್ನು ತತ್ತ್ವಕವಿಗಳೆಂದೂ ಕರೆಯಬಹುದು. ತೆಲುಗಿನ ಅಧ್ಯಯನಕಾರರು ವೇಮನ್ನರನ್ನು ತತ್ತ್ವಕವಿಯಾಗಿಯೇ ಗುರುತಿಸಿರುವರು.
ಭಾರತೀಯ ದರ್ಶನಗಳಲ್ಲಿ ಗುರುವಿಗೆ ಬಹಳ ಮಹತ್ವದ ಸ್ಥಾನವಿದೆ. ಗುರುವನ್ನು ವೈದಿಕ - ಶ್ರಮಣ ಪರಂಪರೆಗಳು ವಿಧವಿಧವಾಗಿ ಕೀರ್ತಿಸುವುದನ್ನು, ಗುರುವಿನ ಮಹಿಮೆಯನ್ನು ಕೊಂಡಾಡುವುದನ್ನು ಕಾಣಬಹುದು. ಪ್ರಾಚೀನ ಚಾರ್ವಾಕ, ಆಜೀವಿಕರಿಂದ ಮೊದಲ್ಗೊಂಡು ಅದ್ವೈತ, ವಿಶಿμÁ್ಟದ್ವೈಗಳ ವರೆಗಿನ ಹಲವು ದರ್ಶನಗಳಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಮತ್ತು ಗುರುವಿಂದಲೇ ಈ ದರ್ಶನ ಪರಂಪರೆಗಳು, ಜ್ಞಾನ ಪರಂಪರೆಗಳು ತಲೆಮಾರಿನಿಂದ ತಲೆಮಾರಿಗೆ ಹರಿದು ಬರುವುದು ಸಾಧ್ಯವಾಗಿದೆ. ತಾಯಿಯೇ ಮೊದಲ ಗುರು ಎಂಬ ಮಾತಿದೆ. ತಾಯಿಯಿಂದ ಮೊದಲಾಗುವ ಕಲಿಯುವ ಅರಿಯುವ ಪ್ರಕ್ರಿಯೆಗೆ ಕೊನೆ ಇರುವುದಿಲ್ಲ. ಹೀಗೆ ಪ್ರಕೃತಿಯ ಶಿಶುವಾದ ಮಾನವನ ವಿಕಾಸ ಮತ್ತು ಅಭ್ಯುಧಯಕ್ಕೆ ಗುರುವೇ ಕಾರಣ. ಪಶು, ಪಕ್ಷಿ, ನಿಸರ್ಗ, ಅಂತರಾತ್ಮ ಯಾವುದಾದರೂ ನಮಗೆ ಗುರುವಾಗಬಹುದು, ಗುರುವಾಗಿ ನಮ್ಮನ್ನು ಗುರಿ ಮುಟ್ಟಿಸಬಹುದು.
ಇಂತಹ ಗುರುವಿನ ಪರಿಕಲ್ಪನೆ ಸರ್ವಜ್ಞನ ವಚನಗಳಲ್ಲಿ ಹೇಗೆ ರೂಪುಗೊಂಡಿದೆ ಎನ್ನುವುದು ಆಸಕ್ತಿದಾಯಕ ವಿಷಯ. ಸರ್ವಜ್ಞನು ತನ್ನ ತಂದೆ ತಾಯಿಗಳನ್ನು ತೊರೆದು ವಿರಾಗಿಯಾಗಿದ್ದವನು. ಇವನ ಗುರುಗಳು ಯಾರು ಎಂಬುದು ತಿಳಿದುಬಂದಿಲ್ಲ. ಆದರೆ ಖಂಡಿತ ಸರ್ವಜ್ಞನಿಗೆ ಗುರು ಇದ್ದಿರಲೇ ಬೇಕು. ಮಾನವ ಸ್ವರೂಪದಲ್ಲಿ, ಪ್ರಕೃತಿಯ ರೂಪದಲ್ಲಿ ಹಾಗೂ ಅಂತರಾಳದ ಅರಿವಿನ ರೂಪದಲ್ಲಿ ಗುರುತು ತೋರಿದ ಗುರುವನ್ನು ಕುರಿತಾಗಿ ಸರ್ವಜ್ಞ ಸಾಕಷ್ಟು ತ್ರಿಪದಿಗಳನ್ನು ಬರೆದಿರುವನು. ಸರ್ವಜ್ಞನಲ್ಲಿ ಗುರುವನ್ನು ಬಹು ವಿಧವಾಗಿ ಗುರುತಿಸುವ ಪ್ರಯತ್ನವಿದೆ. ಕೆಲವು ವಚನಗಳನ್ನು ಗಮನಿಸುವುದಾದರೆ,
“ಗುರುಪಾದ ಸೇವೆ ದೊರೆಕೊಂಡಿತಾದಡೆ ಪಿರಿದಪ್ಪ ಪಾಪ ಪರಿವುದು ಕರ್ಪುರದ ಗಿರಿಯು ಬೆಂದಂತೆ ಸರ್ವಜ್ಞ” ಎಂಬ ತ್ರಿಪದಿಯಲ್ಲಿ ಗುರುಪಾದ ಸೇವೆಯ ಮಹತ್ವವನ್ನು ಹೇಳಲಾಗಿದೆ. ಗುರುವಿನ ಪಾದ ಸೇವೆ ಮಾಡುವ ಅವಕಾಶ ಪಡೆದವನ ಪಾಪಗಳೆಲ್ಲವೂ ಕರ್ಪೂರದಂತೆ ಸುಟ್ಟು ಹೋಗುವವು ಎಂಬುದು ಈ ತ್ರಿಪದಿಯ ಅರ್ಥ. ಶರಣಾಗತ, ಸಖ್ಯ, ಮೊದಲಾದ ನೆಲೆಗಳಲ್ಲಿ ಗುರು – ಶಿಷ್ಯ ಪರಂಪರೆಯ ಸಾಧಕರು ಗುರುವನ್ನು ಕಂಡು ವರ್ಣಿಸಿರುವರು. ಈ ಪದ್ಯವು ಗುರುವಿಗೆ ಶರಣಾಗುವುದನ್ನೇ ವಿವರಿಸುತ್ತದೆ. ಮುಂದುವರೆದು “ಹರ ತನ್ನೊಳಗಿರ್ದು ಗುರು ತೋರದೇ ತಿಳಿವುದೇ ಮರದೊಳಗಗ್ನಿ ಯಿರುತಿರ್ದು ತನ್ನ ತಾ ನರಿಯದೇಕೆಂದ ಸರ್ವಜ್ಞ” ಎಂಬ ಪದ್ಯವು ಮರದೊಳಗೆ ಅಗ್ನಿ ಇದ್ದರೂ ಸಹಾ ಅದನ್ನು ಮರವು ಅರಿಯದೇ ಇರುವ ಹಾಗೆ ನಮಗೆ ನಮ್ಮಲ್ಲಿಯೇ ಇರುವ ಹರನನ್ನು ಗುರು ಬಂದು ತೋರುವ ವರೆಗೂ ಕಾಣಲಾಗುವುದಿಲ್ಲ. ಹರನನ್ನು ಗುರುವಿನ ಮೂಲಕವೇ ಕಂಡುಕೊಳ್ಳಲು ಸಾಧ್ಯ ಎಂಬುದು ಈ ವಚನದ ಅರ್ಥ.
ಮುಂದುವರೆದು ಗುರುವಿನ ವಿಸ್ತರದ ಪರಿಯನ್ನು ವಿವರಿಸುತ್ತಾ “ಗುರುವಿನ ವಿಸ್ತರದ ಪರಿಯ ನಾನೇನೆಂಬೆ ಮರೆವು ಬ್ರಹ್ಮಾಂಡದೊಳಹೊರಗನವಬೆಳೆಗೆ ಪರಿಪೂರ್ಣನಿಪ್ಪ ಸರ್ವಜ್ಞ” ಎಂಬ ವಚನದಲ್ಲಿ ಗುರುವನ್ನು ಗುರುತತ್ತ್ವವನ್ನು ಬ್ರಾಹ್ಮಾಂಡದ ಒಳಗೂ ಹೊರಗೂ ವಿಸ್ತರಿಸಿರುವ ಅನಂತ, ಅಪರಿಮಿತ ತತ್ತ್ವವಾಗಿ, ಶಕ್ತಿಯಾಗಿ ಸರ್ವಜ್ಞ ಗುರುತಿಸುವನು. ಮತ್ತು ಹೀಗೆ ವ್ಯಾಪಿಸಿರುವ ಪರಿಪೂರ್ಣನಾದ ಗುರುವು ಎಲ್ಲವೂ ತಾನೇ ಆಗಿ, ಆದಿ ಮಧ್ಯ ಅಂತ್ಯ ರಹಿತನಾಗಿ, ಜಗದಗಲ ಮುಗಿಲಗಲ ವ್ಯಾಪಿಸಿ ವಿಸ್ತರಿಸಿಕೊಂಡಿರುವನೆಂದು ಸರ್ವಜ್ಞ ವಿವರಿಸುವನು.
ಇದರ ಮುಂದುವರೆದ ಭಾಗವಾಗಿ ಮತ್ತೊಂದು ಪದ್ಯದಲ್ಲಿ ಗುರುವಿಂದಲೇ ಸರ್ವವೂ, ಗುರುವಿಂದಲೇ ಸರ್ವರೂ ಆಗಿ ಕಡೆಗೆ ಗುರುವೇ ದೈವವೂ ಆಗುವ ಬಗೆಯನ್ನು “ಗುರುವಿಂದ ದೈವಗಳು ಗುರುವಿಂದ ಬಂಧುಗಳು ಗುರುವಿಂದಲೇ ಸಕಲ ಪುಣ್ಯಂಗಳು ಲೋಕಕ್ಕೆ ಗುರುವೀಗ ದೈವ ಸರ್ವಜ್ಞ” ಎಂದು ಗುರುವಿನ ಮಹತ್ತಿಕೆಯನ್ನು, ಗುರುವನ್ನು ಶಿಷ್ಯನು ಮತ್ತು ಲೋಕವು ಪರಿಭಾವಿಸಬೇಕಾದ ಬಗೆಯನ್ನು ಸರ್ವಜ್ಞ ವಿವರಿಸುವನು.
ಮುಂದುವರೆದು ಗುರುವಿನ ಸಾನಿಧ್ಯ, ಉಪದೇಶ ದೊರೆಯದೇ ಹೋದವರ ಸ್ಥಿತಿ ಹೇಗಿರಬಹುದು ಎಂಬುದಕ್ಕೆ ಸರ್ವಜ್ಞ “ಬಳ್ಳಿ ಕುರುಡರು ಸೇರಿ ಹಳ್ಳವನು ಬಿದ್ದಂತೆ ಒಳ್ಳೆಯ ಗುರುವಿನುಪದೇಶ ಇಲ್ಲದವಗೆಲ್ಲಿಯ ಮುಕ್ತಿ ಸರ್ವಜ್ಞ” ಎಂಬ ಪದ್ಯದ ಮೂಲಕ ಕುರುಡರು ಕೈ ಕೈ ಹಿಡಿದುಕೊಂಡು ಹೋಗಿ ಹಳ್ಳಕ್ಕೆ ಬಿದ್ದ ಹಾಗೆ ಗುರುವಿನ ಮಾರ್ಗದರ್ಶನವಿಲ್ಲದವರಿಗೆ ಎಂದೆಂದಿಗೂ ಮುಕ್ತಿ ಅಥವಾ ಬಿಡುಗಡೆ ಇಲ್ಲ. ಮುಕ್ತಿಗೆ ಗುರುವೇ ಮೂಲ. ಗುರುವಿಲ್ಲದ ವಿದ್ಯೆ ಕುರುಡು ವಿದ್ಯೆ ಅದು ನಮಗೆ ಮುಕ್ತಿಯನ್ನು, ಬಿಡುಗಡೆಯನ್ನು ಎಂದಿಗೂ ನೀಡಲಾರದು ಎಂದು ಸರ್ವಜ್ಞ ಹೇಳುವರು.
ಮುಂದುವರೆದು ಗುರುವನ್ನು ಕಡೆಗಣಿಸುವ, ಗುರುವಿನ ಮಹಿಮೆಯನ್ನು ಅಲ್ಲಗೆಳೆಯುವವರನ್ನು ಅಥವಾ ಗುರುವಿನ ಮಹಿಮೆಯನ್ನು ತಿಳಿಯದವರನ್ನು ಕಂಡು ಸರ್ವಜ್ಞನು “ಗುರುವ ನರನೆಂದವಗೆ ಹರನ ಶಿಲೆಯೆಂದವಗೆ ಗುರುಪ್ರಸಾದವನೆಂಜಲೆಂದವಗೆ ನರಕ ತಪ್ಪುವುದೆ ಸರ್ವಜ್ಞ” ಗುರುವನ್ನು ಮಾನವನೆಂದು, ಶಿವನನ್ನು ಶಿಲೆಯೆಂದು ಮತ್ತು ಪ್ರಸಾದವನ್ನು ಎಂಜಲೆಂದು ಭಾವಿಸುವವರಿಗೆ ನರಕ ತಪ್ಪದು. ಗುರುವು ನರರೂಪದಲ್ಲಿ ಇರುವನು ಆದರೆ ಅವನು ನರನಲ್ಲ, ನರರೂಪದಲ್ಲಿರುವ ದೈವವೇ ಗುರು. ಅದೇ ರೀತಿ ಶಿವನ ಶಿಲೆಯಾಗಿರುವನು ಆದರೆ ಅವನು ಶಿಲೆಯಲ್ಲ. ಮತ್ತು ಶಿವನಿಗೆ ಅರ್ಪಿಸಿದ ಪ್ರಸಾದ ಅದು ಎಂಜಲಲ್ಲ ಅದನ್ನು ಎಂಜಲೆಂದವನಿಗೆ ನರಕ ತಪ್ಪುವುದಿಲ್ಲ ಎಂದು ಸರ್ವಜ್ಞ ಹೇಳುವನು. ನರನಾದ ಗುರುವನ್ನು ಸಾಕ್ಷಾತ್ ದೈವವೆಂದು ನಂಬುತ್ತಾ ಅವನ ಪಾದ ಸೇವೆ ಮಾಡಬೇಕೆಂದು ಮತ್ತು ಗುರು ಪ್ರಸಾದವನ್ನು ಎಂಜಲೆನ್ನದೆ ಪ್ರೀತಿಯಿಂದ ಸ್ವೀಕರಿಸಬೇಕೆಂಬುದನ್ನು ಸರ್ವಜ್ಞ ಸೂಚಿಸುವನು.
ಮುಂದುವರೆದು “ನಂಬು ಪರಶಿವನೆಂದು ನಂಬು ಗುರು ಚರಣವನು ನಂಬಲಗಸ್ಯ ಕುಡಿದನು ಶರಧಿಯನು ನಂಬು ಗುರುಪದವ ಸರ್ವಜ್ಞ” ಎಂಬ ತ್ರಿಪದಿಯಲ್ಲಿ ಗುರುವನ್ನು ಪರಶಿವನೆಂದು ಭಾವಿಸಿ ಗುರು ಚರಣವನ್ನು ಅಚಲವಾದ ಭಕ್ತಿಯಿಂದ ನಂಬಬೇಕೆಂದು, ಹಿಂದೆ ಅಗಸ್ತ್ಯನನ್ನು ತನ್ನನ್ನು ನಂಬಿದ್ದರಿಂದ ಸಮುದ್ರವನ್ನೇ ನುಂಗಿ ರಾಕ್ಷಸರಿಂದ ದೇವತೆಗಳನ್ನು ರಕ್ಷಿಸಿದನು ಎಂಬುದನ್ನು ಅಚಲ ನಂಬಿಕೆಗೆ ನಿದರ್ಶನವಾಗಿ ಹೇಳುತ್ತಾ ಗುರುವನ್ನು ನಂಬುವುದರ ಮಹತ್ವವನ್ನು ಸರ್ವಜ್ಞ ವಿಷದಪಡಿಸುವನು.
“ಗುರುವಿಂಗೆ ದೈವಕ್ಕೆ ಹಿರಿದು ಅಂತರವುಂಟು ಗುರುತೋರ್ವ ದೈವದೆಡೆಯನು, ದೈವ ತಾ ಗುರುವ ತೋರುವದೆ? ಸರ್ವಜ್ಞ” ಗುರುವೇ ದೇವರು ಎಂದು ಹಿಂದಿನ ಪದ್ಯವೊಂದರ ಸಂದರ್ಭದಲ್ಲಿ ಚರ್ಚಿಸಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಗುರುವು ದೇವರಿಗಿಂತ ದೊಡ್ಡವನು. ಗುರುವನ್ನು ದೇವರು ತೋರಿಸಲಾರನು, ಆದರೆ ಗುರುವು ದೇವರನ್ನು ತೋರಿಸುವ ಕಾರಣ ಗುರುವು ದೇವರಿಗಿಂತ ದೊಡ್ಡವನು ಎಂದು ಸರ್ವಜ್ಞ ಇಲ್ಲಿ ಹೇಳುವನು. “ಕಲ್ಲು ಕಲ್ಲೆಂದರೆ ಕಲ್ಲಲ್ಲಿಹುದೆ ದೈವ ಕಲ್ಲಲ್ಲಿ ಕಲೆಯ ನಿಲ್ಲಿಸಿದ ಗುರುವಿನ ಸೊಲ್ಲಲ್ಲೇ ದೈವ ಸರ್ವಜ್ಞ” ಎಂಬ ಮತ್ತೊಂದು ಪದ್ಯ ಶಿಲೆಯ ರೂಪದಲ್ಲಿ ದೇವರು ಇಲ್ಲ, ಆ ಕಲ್ಲಿನಲ್ಲಿ ದೈವವನ್ನು ನಿಲ್ಲಿಸಿದ ಅಥವಾ ಆ ಕಲ್ಲನ್ನು ದೇವರು ಎಂದು ಹೇಳಿದ ಗುರುವಿನ ಮಾತಿನಲ್ಲಿಯೇ ದೈವವು ಇದೆ. ಕಾರಣ ಗುರುವಿನ ಮಾತು ಎಂದರೆ ಮಾತು ಅದು ಕಲ್ಲನ್ನು ದೇವರಾಗಿಸಬಲ್ಲದು ಎಂಬುದನ್ನು ಸರ್ವಜ್ಞ ವಿವರಿಸುವನು.
“ಗುರು ವಚನ ಉಪದೇಶ ಗುರು ವಚನವೇ ಭಕ್ತಿ ಗುರುವಚನ ಮೋಕ್ಷ ಪರಮಾರ್ಥ ಇವು ತಾನೆ ಪರಮಪದ ಕಾಣಾ ಸರ್ವಜ್ಞ” ಎಂಬ ಮತ್ತೊಂದು ವಚನವಿದೆ. ಇದು ಬಸವಣ್ಣನ ಶರಣ ನಿದ್ರೆಗೈದಡೆ ಜಪ ಕಾಣಿರೋ, ಶರಣ ನಡೆದುದೇ ಪಾವನ ಕಾಣಿರೋ, ಶರಣ ನುಡಿದುದೆ ಶಿವತತ್ತ್ವಕಾಣಿರೋ, ಕೂಡಲಸಂಗನ ಶರಣರ ಕಾಯವೇ ಕೈಲಾಸ ಕಾಣಿರೋ ಗುರು ವಚನವೇ ಉಪದೇಶವು ಗುರು ವಚನವೇ ಭಕ್ತಿ ಎಂಬ ವಚನವನ್ನು ನೆನಪಿಸುವುದು. ಇಲ್ಲಿ ಗುರುವಿನ ಮಾತುಗಳೆಲ್ಲವೂ ಮಂತ್ರೋಪದೇಶವಾಗಿ, ಗುರುವಿನ ಮಾತುಗಳೆಲ್ಲವೂ ಶುದ್ಧ ಭಕ್ತಿಯ ಮಾದರಿಗಳಾಗಿ ಗುರುವಿನ ಮಾತುಗಳೆಲ್ಲವೂ ಮೋಕ್ಷ ಮತ್ತು ಪರಮಾರ್ಥದ ಹಾದಿಗೆ ಬೆಳಕಾಗಿ ಕಾಣುವ ಪರಿಯನ್ನು ಸರ್ವಜ್ಞ ವಿವರಿಸಿರುವನು.
ಮುಂದುವರೆದು “ಬಂಧುಗಳು ಆದವರು ಬಂದುಂಡು ಹೋಗುವರು ಬಂಧನವ ಕಳಿಯಲರಿಯರಾ ಗುರುವಿಗಿಂತ ಬಂಧುವುಂಟೆ ಸರ್ವಜ್ಞ” ಎಂಬ ಪದ್ಯದಲ್ಲಿ ಲೋಕದ ಬಂಧುಗಳು ಬಂದು ಉಂಡು ಹೋಗುವರು ಆದರೆ ಅವರಿಂದ ಯಾವುದೇ ರೀತಿಯ ಬಂಧನಗಳನ್ನು ಕಳಿಯಲು ಸಾಧ್ಯವಿಲ್ಲ. ಗುರುವು ಬಂಧನಗಳನ್ನು ಕಳೆದು ನಮ್ಮನ್ನು ಮುಕ್ತಿಮಾರ್ಗಕ್ಕೆ ಕರೆದೊಯ್ಯುವನಾದರಿಂದ ಗುರುವೇ ಅತ್ಯಂತ ದೊಡ್ಡ ಬಂಧುವಾಗಿದ್ದಾನೆ ಎಂಬುದನ್ನು ಸರ್ವಜ್ಞ ವಿವರಿಸುವನು.
ಗುರುವಿನ ಮಾತು ಅದು ಸಾಕ್ಷಾತ್ ದೈವದ ಮಾತೇ ಆಗಿದೆ “ಮಾತೆಗಿಂ ಮಿಗಿಲಿಲ್ಲ ಶಾಸ್ತ್ರದಿಂ ಹಿರಿದಿಲ್ಲ ಜ್ಯೋತಿಯಿಂ ಬೆಳಗು ಬೇರಿಲ್ಲ ಗುರುವಿನಾ ಮಾತಿಗೆದುರಿಲ್ಲ ಸರ್ವಜ್ಞ” ತಾಯಿಗಿಂತಲೂ ಮಿಗಿಲಾದವರು ಇಲ್ಲ, ಶಾಸ್ತ್ರಕ್ಕಿಂತ ಹಿರಿದಾದದ್ದು ಇಲ್ಲ ಮತ್ತು ಕತ್ತಲಿನಲ್ಲಿ ಜ್ಯೋತಿಗಿಂತ ಮಿಗಿಲಾದದ್ದು ಇಲ್ಲ ಹಾಗು ಗುರುವಿನ ಮಾತಿಗೆ ಎದುರಿಲ್ಲ ಮತ್ತು ಅದು ನಿರ್ಣಾಯಕವಾದದ್ದು, ಹರಿಹರ ಬ್ರಹ್ಮರೂ ಗುರುವಿನ ಮಾತಿಗೆ ಕಟ್ಟುಬೀಳುವರು ಎಂಬುದನ್ನು ಸರ್ವಜ್ಞ ವಿವರಿಸುವರು.
ಇμÁ್ಟದರೂ ಶಿಷ್ಯನಾದವನು ಯೋಗ್ಯನಾಗಿರಬೇಕು, ವಿಷಯವಾಸನೆಯಲ್ಲಿ ಮುಳುಗಿ ಹೋದವನಾಗಿರಬಾರದು. ಇಂತಹಾ ಅಚಲ ವಿಶ್ವಾಸವಿಲ್ಲದ, ಕಪಟ ಮನೋಭಾವದ, ಶಿಷ್ಯನಿಗೆ ಉಪದೇಶ ನೀಡುವುದು ವ್ಯರ್ಥ ಮತ್ತು ಅದು ಗುರುವಿನ ಘನತೆಯನ್ನು ಸಹ ಹಾಳುಮಾಡುವುದು ಎಂಬುದನ್ನು “ಹಸಿಯ ಸಮಿದಿಯ ತಂದು ಹೊಸೆದರುಂಟೆ ಕಿಚ್ಚು ವಿಷಯಂಗಳ್ಳ ಮನುಜಂಗೆ ಗುರು ಕರಣ ವಶವರ್ತಿಯಹುದೆ ಸರ್ವಜ್ಞ” ಎಂಬ ತ್ರಿಪದಿಯಲ್ಲಿ ವಿವರಿಸುವ ಪ್ರಯತ್ನ ಮಾಡುವರು. ಇದೇ ಅರ್ಥದ ಮತ್ತೊಂದು ತ್ರಿಪದಿ “ಶ್ವಾನ ತೆಂಗಿನಕಾಯ ತಾನು ಮೆಲ್ಲಬಲ್ಲುದೆ ಹೀನಮನದವನಿಗುಪದೇಶವಿತ್ತಡೆ ಹಾನಿ ಕಾಣಯ್ಯ ಸರ್ವಜ್ಞ” ಇದರಲ್ಲಿ ಹೇಗೆ ಶ್ವಾನವು ತೆಂಗಿನಕಾಯಿಯನ್ನು ಬಿಡಿಸಿಕೊಂಡು ತಾನು ತಿನ್ನಲಾರದೋ ಅದೇ ರೀತಿಯಲ್ಲಿ ಹೀನ ಮಾನವನಿಗೆ, ಗುಣ ಹೀನನಿಗೆ ಉಪದೇಶ ಕೊಟ್ಟರೆ ಅದರಿಂದ ಹಾನಿಯೇ ಹೊರತು ಉಪಯೋಗವಿಲ್ಲ ಎಂದು ವಿವರಿಸುವರು.
ಮುಂದುವರೆದು “ವಿದ್ಯೆ ಕಲಿಸದ ತಂದೆ ಬುದ್ಧಿ ಹೇಳದ ಗುರುವು ಬಿದ್ದಿರಲು ಬಂದು ನೋಡದ ತಾಯಿ ಶುದ್ಧ ವೈರಿಗಳು ಸರ್ವಜ್ಞ” ಎಂಬ ಗುರುವಿನ ತಂದೆಯ ಮತ್ತು ತಾಯಿಯ ಗುಣವು ಹೇಗಿರಬೇಕೆಂದು ವಿವರಿಸುವ ಈ ತ್ರಿಪದಿ ಬಹಳ ಮಹತ್ವದ್ದಾಗಿದೆ. ಗುರುವು ತನ್ನ ಶಿಷ್ಯನಿಗೆ ಬುದ್ಧಿ ಹೇಳಬೇಕು ಎಂಬ ಪ್ರಯೋಗ ಇಲ್ಲಿ ವಿಶೇಷವಾಗಿದೆ. ಇದನ್ನು ತಂದೆಯಾದವನು ಮಗನಿಗೆ ವಿಧವಿಧವಾದ ವಿದ್ಯಗಳನ್ನು ಕಲಿಸಬೇಕೆಂದು ಮತ್ತು ಗುರುವು ಅವನಿಗೆ ಆ ವಿದ್ಯೆಗಳನ್ನು ಬಳಸುವ ವಿವೇಕವನ್ನು ಬುದ್ಧಿಯನ್ನು ಕಲಿಸುವನೆಂದು ಅರ್ಥೈಸಿಕೊಳ್ಳಬಹುದು. ಇದರ ಜೊತೆ ಜೊತೆಗೆ ಹಿಂದಿನ ಕೆಲವು ತ್ರಿಪದಿಗಳ ಉದಾಹರಣೆಗಳಲ್ಲಿ ವ್ಯಕ್ತವಾದಂತೆ ಗುರುವು ತಂದೆಯೂ ತಾಯಿಯೂ ಎಲ್ಲವೂ ಆಗಿರುವ ಕಾರಣದಿಂದ ಶಿಷ್ಯನಿಗೆ ವಿದ್ಯೆ ಕಲಿಸುವ, ಬುದ್ಧಿ ಹೇಳುವ ಮತ್ತು ಕಷ್ಟದಲ್ಲಿ ನೋವಿನಲ್ಲಿ ಇದ್ದಾಗ ಅವನನ್ನು ಕಾಪಾಡುವ ಕೆಲಸವನ್ನು ಗುರು ಮಾಡುವನು ಎಂಬುದನ್ನು ಸೂಚ್ಯವಾಗಿ ಈ ತ್ರಿಪದಿಯಲ್ಲಿ ವಿವರಿಸುತ್ತಿರಬಹುದು ಎನಿಸುತ್ತದೆ.
ಮುಂದುವರೆದು “ಅಕ್ಕರವು ಲೇಖಕ್ಕೆ ತರ್ಕ ತಾ ವಾದಕ್ಕೆ ಮಿಕ್ಕ ಓದುಗಳು ತಿರುಪೆಗೆ ಮೋಕ್ಷಕ್ಕೆರಡಕ್ಕರವೆ ಸಾಕು ಸರ್ವಜ್ಞ” ಎಂಬ ವಚನದಲ್ಲಿ ಬರಿಯ ಅಕ್ಷರರೂಪವಾದ ಲೌಕಿಕ ಓದುಗಳನ್ನು ಮತ್ತು ವಾದಕ್ಕೆ ಮೂಲವಾದ ತರ್ಕವನ್ನು ನಿರಾಕರಿಸುತ್ತಾ ಮೋಕ್ಷಕ್ಕೆ ಗುರು ಎಂಬ ಎರಡಕ್ಷರವೇ ಸಾಕು ಎಂದು ಸರ್ವಜ್ಞನು ಹೇಳುವನು. ಇಲ್ಲಿ ಜ್ಞಾನಕ್ಕಿಂತಲೂ ಭಕ್ತಿಗೆ ಸರ್ವಜ್ಞ ಹೆಚ್ಚು ಮಹತ್ವಕೊಡುವನು.
ಮುಂದುವರೆದು “ಉರಿಯುಂಡ ಕರ್ಪುರವು ಸರಕು ಮಾರುವುದುಂಟೆ, ಗುರು ಕರುಣದಿಂದ ನಿಜದೊಳಗೆ ಬರೆದಾತ ನರಕ ಕೊಡುವನೆ ಸರ್ವಜ್ಞ” ಎಂಬ ತ್ರಿಪದಿಯಲ್ಲಿ ಗುರುವಿನ ಉಪದೇಶವನ್ನು, ಗುರುವಿನ ಕಾರುಣ್ಯವನ್ನು ಪಡೆದವನು ಎಂದಿಗೂ ನರಕಕ್ಕೆ ಓಡುವುದಿಲ್ಲ. ಗುರು ಕಾರುಣ್ಯವೇ ಮೋಕ್ಷ ಎಂಬುದನ್ನು ಈ ತ್ರಿಪದಿ ವಿವರಿಸುತ್ತದೆ. ಇದೇ ಅರ್ಥದ ಮತ್ತೊಂದು “ಬೆಟ್ಟ ಕರ್ಪುರವುರಿದು ಬೊಟ್ಟಿಡಲು ಬೂದಿಲ್ಲ ನೆಟ್ಟನಾ ಗುರುವಿಗೆರಗಿದರೆ ಕರ್ಮ ತಾ ಸುಟ್ಟು ಹೋಗುವುದು ಸರ್ವಜ್ಞ” ಎಂಬ ವಚನವೂ ಕರ್ಪೂರದ ಬೆಟ್ಟ ಉರಿದು ಬೊಟ್ಟಿಡುವಷ್ಟು ಸಹ ಬೂದಿ ಉಳಿಯದ ಹಾಗೆ ಗುರುವಿಗೆರಗಿದ ಶಿಷ್ಯನ ಅಥವ ಭಕ್ತನ ಕರ್ಮಗಳೆಲ್ಲವೂ ಸುಟ್ಟು ಇಲ್ಲವಾಗುವವು ಎಂದು ವಿವರಿಸಲಾಗಿದೆ. ಮತು ಇಷ್ಟು ಮಹತ್ವವಾದ ಗುರುವಿನ ಉಪದೇಶವನ್ನು ಭಕ್ತಿಯಿಲ್ಲದ ಶಿಷ್ಯನಿಗೆ, ಅಪಾತ್ರನಿಗೆ ನೀಡಿದರೆ ಅದು ಭತ್ತಿಹೋದ ಕೆರೆಯಲ್ಲಿ ರಾಜಾನ್ನವನ್ನು ಬಿತ್ತಿ ಬೆಳೆಯುವ ಪ್ರಯತ್ನದಂತೆ ಎಂಬುದನ್ನು “ಭಕ್ತಿಯಿಲ್ಲದ ಶಿಷ್ಯ ಗೊತ್ತುಗೆಕೊಟ್ಟುಪದೇಶ ಬತ್ತಿದಾ ಕೆರೆಯಲ್ಲಿ ರಾಜಾನ್ನ ಬಿತ್ತಿ ಬೆಳೆದಂತೆ ಸರ್ವಜ್ಞ” ಎಂಬ ತ್ರಿಪದಿಯಲ್ಲಿ ವಿವರಿಸುವರು.
ಹೀಗೆ ಗುರುವನ್ನು ವಿವಿಧ ಮುಖಗಳಲ್ಲಿ ಕಾಣಿಸುವ, ಗುರುವಿನ ಮಹತ್ವ, ಗುರುತತ್ತ್ವದ ವ್ಯಾಪ್ತಿ, ವಿವಿಧ ನೆಲೆಗಳಲ್ಲಿ ಗುರುವಿನ ನಿರ್ವಚನೆ, ಗುರು ಮತ್ತು ಗುರು ತತ್ತ್ವದ ಆಳ ವಿಸ್ತಾರಗಳು, ಗುರು ಎಂಬ ಎರಡಕ್ಷರಗಳ ಮಹತ್ವ, ಗುರುವಿನ ವಚನ, ಗುರುವಿನ ಕರುಣೆಗಳ ಮಹತ್ವ ಮತ್ತು ಗುರುವಿಲ್ಲದ, ಗುರು ಕೃಪೆಯಿಲ್ಲದ ಓದಿನ, ಜ್ಞಾನದ ನಿರರ್ಥಕತೆಯನ್ನು ವಿವರವಾಗಿ ಸರಳವಾಗಿ ವಿಶಿಷ್ಟವಾಗಿ ತನ್ನ ಹಲವು ತ್ರಿಪದಿಗಳ ಮೂಲಕ ವಿವರಿಸುವ ಕಾರ್ಯವನ್ನು ಸರ್ವಜ್ಞ ಮಾಡಿರುವುದನ್ನು ಗಮನಿಸಬಹುದು.
ಗ್ರಂಥ ಋಣ :
1) ಉತ್ತಂಗಿ ಚನ್ನಪ್ಪ, ಸರ್ವಜ್ಞ ವಚನಗಳು, 1957, ಬಾಸೆಲ್ ಮಿಷನ್, ದಾರವಾಡ.
2) ಕೃಷ್ಣಶಾಸ್ತ್ರಿ ಎ.ಆರ್., ಸರ್ವಜ್ಞ ಕವಿ, 1941, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
3) ಬಡಿಗೇರ್ ವೀರೇಶ(ಸಂ), ಸರ್ವಜ್ಞನ ಸಾಹಿತ್ಯ ಕುರಿತ ಅಧ್ಯಯನಗಳು, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.
4) ಶಿವಮೂರ್ತಿಶಾಸ್ತ್ರಿ ಬಿ., ಸರ್ವಜ್ಞ ಮೂರ್ತಿ(ಕವಿ- ಕಾವ್ಯ- ವಿಮರ್ಶೆ), 1950, ವಿದ್ಯಾರ್ಥಿ ಪ್ರಕಟನ ಮಂದಿರ, ಬೆಂಗಳೂರು.
- ವರುಣ್ ರಾಜ್ ಜಿ.
ಸಂಶೋಧಕರು,
ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾಲಯ, ತುಮಕೂರು. - 572103
# 9448241450
mಚಿhಚಿಡಿishivಚಿಡಿuಟಿಡಿಚಿರಿರಿi@gmಚಿiಟ.ಛಿom
Comments
Post a Comment