ಅವಧೂತ ತತ್ತ್ವಕವಿಗಳ ಬದುಕು - ಬರಹಗಳಲ್ಲಿ ಸಾಮಾಜಿಕ ಸಾಮರಸ್ಯ - ವರುಣ್‌ ರಾಜ್‌ ಜಿ

ಅವಧೂತ ತತ್ತ್ವಕವಿಗಳ ಬದುಕು - ಬರಹಗಳಲ್ಲಿ ಸಾಮಾಜಿಕ ಸಾಮರಸ್ಯ ಅವಧೂತ ಎಂದರೆ ಎಲ್ಲವನ್ನೂ ತೊರೆದವನು, ಬೈರಾಗಿ, ವೈರಾಗ್ಯಶಾಲಿ ಮುಂತಾದ ಅರ್ಥಗಳು ಇವೆ. ಆಸೆಗಳನ್ನು ಬಿಟ್ಟಿರುವುದು, ಎಂದೆಂದಿಗೂ ಶುಚಿಯಾಗಿರುವುದು, ಸದಾ ಆನಂದದಲ್ಲಿಯೇ ಇರುವುದು, ಎಲ್ಲ ಪೂರ್ವ ವಾಸನೆಗಳನ್ನು ಕಳೆದುಕೊಂಡಿರುವುದು, ವಚನದಲ್ಲಿ ಉದ್ವೇಗವಾಗಲಿ, ದೋಷವಾಗಲಿ, ಗೊಂದಲವಾಗಲಿ ಇಲ್ಲದಿರುವಿಕೆ, ವಾಸ್ತವದಲ್ಲಿ ಜೀವಿಸುವಿಕೆ, ಧೂಳಿನಿಂದ ಮುಚಲ್ಪಟ್ಟ ದೇಹ, ತೊಳೆಯಲ್ಪಟ್ಟ ಮನಸ್ಸು, ಧ್ಯಾನ – ಯೋಗ ನಿರಸನ, ತತ್ತ್ವಚಿಂತನೆ, ಅಹಂಕಾರ ಮತ್ತು ಅಹಂಗಳ ನಿವೃತ್ತಿ ಇವೇ ಮೊದಲಾದವನ್ನು ಅವಧೂತರ ಲಕ್ಷಣಗಳಾಗಿ ಹೇಳುವರು. ಇದೇ ಲಕ್ಷಣಗಳನ್ನು ನಾವು ಬಹುತೇಕ ಎಲ್ಲ ಪರಂಪರೆಗಳಲ್ಲಿ ಬರುವ ಆಧ್ಯಾತ್ಮ ಸಾಧನೆಯ ಉನ್ನತ ಹಂತವನ್ನು ದಾಟಿದ ಸಂತರಲ್ಲಿ ಗುರುತಿಸಬಹುದಾಗಿದೆ. ಶಿವನಿಂದ ಮೊದಲುಗೊಂಡು ದತ್ತಾತ್ರೇಯ, ಶಿರಡಿಯ ಸಾಯಿ ಬಾಬಾ, ಅವಧೂತ ಕಾಶಿನಾಯನ, ಯೋಗಿ ವೇಮನ, ಕವಿ ಸರ್ವಜ್ಞ, ಚಿದಾನಂದಾವಧೂತ, ಸಿದ್ಧಾರೂಡರು, ಶಿಶುನಾಳ ಶರೀಫರು, ಕೈವಾರ ನಾರಣಪ್ಪನವರು, ಶ್ರೀ ವೀರಬ್ರಹ್ಮಯ್ಯನವರು, ವೆಂಕಾವಧೂತೆ, ಹನುಮಾವಧೂತೆ, ರಾಮಾವಧೂತರು, ತಾವರೆಕೆರೆ ವೀರದಾಸಮ್ಮ, ಸೇರಿದಂತೆ ಹಲವಾರು ಸಿದ್ಧರನ್ನು ಸಾಧಕರನ್ನು ಈ ಪಟ್ಟಿಯಲ್ಲಿ ಹೆಸರಿಸಬಹುದು. ಯೋಗಿ ವೇಮನ್ನ ಅಚಲಿಗನೂ, ಕವಿ ಸರ್ವಜ್ಞ ಶೈವನು, ಕೈವಾರ ನಾರಣಪ್ಪ ಯೋಗಿ, ಶಿಶುನಾಳ ಶರೀಫರು ಸೂಫಿ ಪ್ರಭಾವದ ಸಾಧಕರು ಹೀಗೆ ವಿವಿಧ ಪಂಥಗಳಲ್ಲಿ ಇವರನ್ನೆಲ್ಲಾ ಗುರುತಿಸಲ್ಪಟ್ಟಿದ್ದರೂ ಇವರಲ್ಲಿ ಅವಧೂತದ ಲಕ್ಷಣಗಳು ಸಾಮಾನ್ಯವಾಗಿವೆ. ಅವಧೂತ ಎನ್ನುವುದನ್ನು ಒಂದು ಪ್ರತ್ಯೇಕ ಆಧ್ಯಾತ್ಮಿಕ ಸಾಧನಾ ಪಂಥವಾಗಿ ಅಧ್ಯಯನ ಮಾಡಿರುವುದು ಇದೆ. ಆದರೆ ಅವಧೂತ ಎನ್ನುವುದನ್ನು ಒಂದು ಪ್ರತ್ಯೇಕ ಸಾಧನಾ ಪಂಥ ಎನ್ನುವುದಕ್ಕಿಂತ ಪ್ರತಿಯೊಬ್ಬ ಆಧ್ಯಾತ್ಮಿಕ ಸಾಧಕನ ಒಂದು ಉನ್ನತ ಸಾಧನಾ ಹಂತ ಎಂದು ಹೇಳುವುದು ಉಚಿತವಾದದ್ದು ಎನಿಸುತ್ತದೆ. ಇವರನ್ನು ತತ್ತ್ವ ಕವಿಗಳು ಮತ್ತು ತತ್ತ್ವ ಸಾಧಕರು ಎಂಬ ಹೆಸರಿನಿಂದಲೂ ಗುರುತಿಸಬಹುದು. ಅವಧೂತದ ಹಂತವನ್ನು ತಲುಪಿದ ಸಾಧಕನು ಗುರು – ಶಿಷ್ಯ, ದೇವ – ಮಾನವ, ಆತ್ಮ – ಪರಮಾತ್ಮ, ಸ್ವರ್ಗ – ನರಕ, ಸುಖ – ದುಃಖ, ಪಾಪ – ಪುಣ್ಯ, ಧರ್ಮ – ಅಧರ್ಮ, ವಿದ್ಯೆ – ಅವಿದ್ಯೆ, ಒಳಿತು – ಕೆಡುಕು, ಸರಿ – ತಪ್ಪು ಮುಂತಾದವನೆಲ್ಲಾ ಮೀರಿ, ಎಲ್ಲವನ್ನು ಝಾಡಿಸಿ ಬಿಸಾಡಿ, ಎಲ್ಲದರಿಂದ ಬಿಡುಗಡೆ ಪಡೆದಿರುತ್ತಾನೆ. ಪ್ರಸ್ತುತ ಲೇನದಲ್ಲಿ ವೀರಬ್ರಹ್ಮಯ್ಯ ಸ್ವಾಮಿಗಳು, ಶಿಶುನಾಳ ಶರೀಫರು, ಕವಿ ಸರ್ವಜ್ಞ ಮತ್ತು ಕೈವಾರ ನಾರೇಣಪ್ಪನವರನ್ನು ಅವರು ತಲುಪಿದ್ದ ಆಧ್ಯಾತ್ಮಿಕ ಸಾಧನೆಯ ಮೇರು ಹಂತವಾದ ಅವಧೂತತ್ವದ ನೆಲೆಯಲ್ಲಿ ಇವರನ್ನು ಅವಧೂತ ತತ್ತ್ವಕವಿಗಳಾಗಿ ಗುರುತಿಸಿ, ಅವಧೂತ ಎಂಬುದನ್ನು ವಿಶಾಲ ವ್ಯಾಪ್ತಿಯಲ್ಲಿ ನೋಡಬಹುದಾದ ಪ್ರಯತ್ನವಾಗಿ ಇವರ ಬದುಕು ಮತ್ತು ಬರಹಗಳಲ್ಲಿ ವ್ಯಕ್ತವಾಗಿರುವ ಸಾಮಾಜಿಕ ಸಾಮರಸ್ಯವನ್ನು ಜಾತಿಯ, ಧಾರ್ಮಿಕ ಮತ್ತು ಆಚರಣೆಗಳ ನೆಲೆಗಳಲ್ಲಿ ಅಧ್ಯಯನಕ್ಕೆ ಒಳಪಡಿಸುವ ಪ್ರಯತ್ನ ಮಾಡಲಾಗುವುದು. ಭಾರತೀಯ ಶ್ರಮಣ ದರ್ಶನಗಳಲ್ಲಿ ಬೌದ್ಧ, ಸಿದ್ಧ, ಸೂಫಿ, ನಾಥ, ಸಂತಾಲ, ಕಾಪಾಲಿಕ, ಆರೂಢ, ಅಚಲ ಮುಂತಾದ ಪರಂಪರೆಗಳು ಇವೆ. ಇವುಗಳ ತತ್ತ್ವ, ನಂಬಿಕೆ, ಆಚರಣೆಗಳಲ್ಲಿ ಹಲವು ಸಾಮ್ಯ ಮತ್ತು ವೈರುಧ್ಯಗಳನ್ನು ಗುರುತಿಸಬಹುದು. ಸಮಾನತೆಯ ತತ್ತ್ವ, ಸಾಮಾಜಿಕ/ಸಾಂಸ್ಕøತಿಕ ಯಜಮಾನ್ಯಕ್ಕೆ ಪ್ರತಿರೋಧ, ಕಾಯಕ ನಿμÉ್ಠ, ಗುರುವಿಗೆ ಪ್ರಾಮುಖ್ಯತೆ, ಜನಪರವಾದ ಚಿಂತನೆ, ಮಾಯೆ, ಪ್ರಪಂಚ, ಮುಕ್ತಿ, ಆತ್ಮ – ಪರಮಾತ್ಮಗಳ ಕುರಿತ ಚಿಂತನೆ ಇವನ್ನು ಎಲ್ಲ ಪಂಥಗಳಲ್ಲೂ ಗುರುತಿಸಬಹುದು. ಕಾಲಕಾಲಕ್ಕೆ ಈ ಎಲ್ಲಾ ಪರಂಪರೆಯ ಸಂತರು ಸಿದ್ಧರು ತಮ್ಮ ನಡೆ – ನುಡಿಯಲ್ಲಿ, ಬದುಕು – ಬರಹಗಳಲ್ಲಿ ಸಾಮಾಜಿಕ ಸಾಮರಸ್ಯವನ್ನು ಒಂದು ಪ್ರಮುಖವಾದ ಲೌಕಿಕ ತತ್ತ್ವವಾಗಿ ಪ್ರತಿಪಾದಿಸಿದ್ದಾರೆ. ಸಾಮಾಜಿಕ ಸಾಮರಸ್ಯವೆಂದರೆ ಸಮಾಜದ ಎಲ್ಲ ಧರ್ಮ, ಜಾತಿ, ಮತ, ಪಂಥ, ಲಿಂಗದ ವ್ಯಕ್ತಿಗಳು ಪರಸ್ಪರರನ್ನು ಮತ್ತು ಅವರ ನಂಬಿಕೆ ಆಚರಣೆಗಳನ್ನು ಗೌರವಿಸುತ್ತ, ನಮಗೆ ಮೆಚ್ಚುಗೆಯಾಗುವ ವಿಚಾರಗಳನ್ನು ಪ್ರಶಂಶಿಸುತ್ತಾ, ಸಾಧ್ಯವಾದಷ್ಟು ಅನುಸರಿಸುತ್ತಾ, ಎಲ್ಲಾ ಧರ್ಮಗಳ ಸಾರ ಒಂದೇ ಎಂಬ ಬ್ರಹ್ಮ ಸತ್ಯವನ್ನು ಅರಿತು ಸಮಾಜದಲ್ಲಿ ಶಾಂತಿ, ನೆಮ್ಮದಿಗಳಿಂದ ಪರಸ್ಪರರ ಸಹಭಾಹಿತ್ವದಲ್ಲಿ ಬಾಳುವುದೇ ಆಗಿದೆ. ಧರ್ಮ, ರಾಜಕೀಯ, ಸ್ವಾರ್ಥ, ಸ್ವಜನಹಿತ, ಅಸಹಿಷ್ಣುತೆಗಳು ಪ್ರಬಲವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಇಂತಹಾ ಸಾಮಾಜಿಕ ಸಾಮರಸ್ಯದ ಮಹಾ ಸಂದೇಶವನ್ನು ತಮ್ಮ ಬರಹಗಳಲ್ಲಿ ಮತ್ತ ಅದಕ್ಕಿಂತ ಹೆಚ್ಚಾಗಿ ತಮ್ಮ ನಡೆಯಲ್ಲಿ ಆಚರಣೆಗೆ ತಂದಿದ್ದ ಅವಧೂತ ತತ್ತ್ವಸಾಧಕ ಸಂತರ ಜೀವನ ಮತ್ತು ಜೀವನಾನುಭವಗಳು ನಮಗೆ ಅತ್ಯಂತ ಪ್ರಮುಖ ಮತ್ತು ಪ್ರಸ್ತುತವಾಗುತ್ತವೆ. ತತ್ತ್ವಕವಿಗಳ ಕಾಲವನ್ನು ಹದಿನಾರರಿಂದ ಹತ್ತೊಂಬತ್ತರ ಶತಮಾನಗಳ ನಡುವೆ ಎಂದು ಗುರುತಿಸಬಹುದು. ಅದಕ್ಕೂ ಮೊದಲು ಅಥವ ನಂತರದಲ್ಲಿ ಯಾವೊಬ್ಬ ಅವಧೂತರೂ ಅಥವಾ ತತ್ತ್ವಸಾಧಕರು ಇರಲಿಲ್ಲವೆಂದಲ್ಲ. ಬದಲಾಗಿ ಈ ಕಾಲದಲ್ಲಿ ನಮಗೆ ಹೆಚ್ಚು ತತ್ತ್ವಸಾಧಕರು ಜೀವಿಸಿದ್ದ ವಿವರಗಳು ಮತ್ತು ಅವರು ಬರೆದ ತತ್ತ್ವಗಳು ಸಿಗುವುದರಿಂದ ಈ ಕಾಲವನ್ನು ತತ್ತ್ವಸಾಧಕ ಸಂತರ ಸುಗ್ಗಿ ಕಾಲವೆಂದು ಹೇಳಬಹುದು. ಇದೇ ಕಾಲಘಟ್ಟದಲ್ಲಿ ಪೆÇೀರ್ಚುಗೀಸರ ಆಗಮನ, ಇಸ್ಲಾಂ ಪ್ರಭುತ್ವಗಳ ಸ್ಥಾಪನೆ, ಯುದ್ಧಗಳು, ಹೊಸ ತೆರಿಗೆಗಳ ಜಾರಿ, ಬ್ರಿಟೀಷರ ಆಗಮನ, ವಸಾಹತ್ತುಗಳ ಸ್ಥಾಪನೆ, ದೇವರು ಮತ್ತು ಧಾರ್ಮಿಕ ನಂಬಿಕೆಗಳು ಸಡಿಲಿಕೆ, ದೇವಾಲಯಗಳು ಮತ್ತು ಮಠ ಮಾನ್ಯಗಳ ಸಾಂಸ್ಥೀಕರಣ, ಅತೀವ ಬರ, ಸಾಂಕ್ರಾಮಿಕ ರೋಗಗಳು ಮುಂತಾದ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಸ್ಥಿತ್ಯಂತರಗಳು ಈ ನೆಲದಲ್ಲಿ ಸಂಭವಿಸುತ್ತಿದ್ದವು ಮತ್ತು ಈ ಕಾಲದಲ್ಲಿ ಹೊಸದಾಗಿ ಆಗಮಿಸಿದ ಇಸ್ಲಾಂ ಹಾಗೂ ಕ್ರೈಸ್ತ ಮತಗಳ ಹಾಗೂ ಅತಿ ಹೆಚ್ಚು ಬಿಗಿಗೊಂಡ ಇಲ್ಲಿನ ಜಾತಿ ವ್ಯವಸ್ಥೆಯ ಕಾರಣದಿಂದಾಗಿ ಸಮಾಜದಲ್ಲಿ ಜಾತಿ, ಮತ, ಕೋಮು ಕಲಹಗಳು ಮತ್ತು ಮನಸ್ತಾಪಗಳು ಆಗಾಗ ಉಂಟಾಗತೊಡಗಿದವು. ಇಂತಹ ಪ್ರಕ್ಷುಬ್ದ ವಾತಾವರಣದಲ್ಲಿ ತತ್ತ್ವಸಾಧಕ ಸಂತರು ಜನರಿಗೆ ಸಾಂತ್ವನವನ್ನು ಹೇಳುತ್ತಾ, ಮತ ಸಾಮರಸ್ಯವನ್ನು ಕಾಯ್ದಿಟ್ಟುಕೊಳ್ಳುವಂತೆ ಉಪದೇಶಗಳನ್ನು ನೀಡುತ್ತಾ ಬಂದರು. ಬದಲಾದ ಕಾಲಕ್ಕೆ ಹೊಂದಿಕೊಂಡು ಜನರು ಬದುಕಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಾಗ ಇಂತಹ ಬದಲಾವಣೆಗಳಿಗೆ ಪೂರಕವಾದ ನೈತಿಕ ಬೆಂಬಲವನ್ನು ಕೊಡುವ ಕೆಲಸವನ್ನು ಇವರು ಮಾಡಿದರು. ಮತ್ತು ಹಲವರು ಸಂತರು ಈ ಕಾಲದಲ್ಲಿ ಕಾಲಜ್ಞಾನವನ್ನು ಹೇಳುವ ಮೂಲಕ ಮುಂದೆ ಬಹಳ ಒಳ್ಳೆಯ ಕಾಲ ಬರಲಿದೆ. ಹೆದರಬೇಡಿ ಎಂದು ಜನರಿಗೆ ದೈರ್ಯ ತುಂಬುವ ಜೊತೆ ಜೊತೆಗೆ ಮುಂದೆ ಆಗಬಹುದಾದ ಅನಾಹುತಗಳನ್ನು ಮುಂದಾಗಿಯೇ ತಿಳಿಸಿ ಇದಕ್ಕೆಲ್ಲ ಸಿದ್ಧವಿರಬೇಕೆಂದು ಜನರನ್ನು ಎಚ್ಚರಿಸುವ ಕೆಲಸ ಮಾಡತೊಡಗಿದರು. ಶ್ರೀ ವೀರಬ್ರಹ್ಮಯ್ಯನವರು ಬ್ರಿಟೀಷರು ಭಾರತ ಬಿಟ್ಟು ಹೋಗಲಿರುವರು ಎಂದು, ಕೈವಾರ ನಾರೇಣಪ್ಪನವರು ಮುಂದೆ ಒಬ್ಬ ಅತ್ಯುತ್ತಮನಾದ ದೊರೆ ಬಂದು ದೇಶ ಸುಭಿಕ್ಷವಾಗುವುದೆಂದು ಹೇಳುವ ಘಟನೆಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಇವು ಜನರಲ್ಲಿ ಬದುಕಿನ ಬರವಸೆಯನ್ನು, ಅಶಾವಾದವನ್ನು ಉಕ್ಕಿಸಬಲ್ಲ ಬರಹಗಳಾಗಿದ್ದವು ಎಂಬುದರಲ್ಲಿ ಸಂಶಯವಿಲ್ಲ. ಆ ಕಾಲದ ಹದಗೆಟ್ಟಿರಬಹುದಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಒಬ್ಬರ ಜೊತೆಗೊಬ್ಬರು ಸಾಮರಸ್ಯ ಕಾಯ್ದುಕೊಂಡು ಬದುಕುವುದರ ಅನಿವಾರ್ಯತೆಯನ್ನು ಮನಗಂಡಿದ್ದ ಸಂತರು ಜಾತಿ ಸಾಮರಸ್ಯ ಮತ್ತು ಮತ ಧರ್ಮ ಸಾಮರಸ್ಯಗಳಿಗೆ ಹೆಚ್ಚು ಒತ್ತು ನೀಡಿದರು. ಶಿರಡಿ ಸಾಯಿಬಾಬಾರ ಜೀವನವೆಲ್ಲಾ ಮತ ಸಾಮರಸ್ಯದ ಮಹತ್ವವನ್ನು ಸಾರುವ ಪಯಣವೇ ಆಗಿದೆ. ಹಿಂದು ಮತ್ತು ಇಸ್ಲಾಂ ಆಚರಣೆಗಳನ್ನು ಒಟ್ಟಾಗಿ ಆಚರಿಸುವ, ರಾಮನವಮಿ ಮತ್ತು ಉರುಸ್ ಅಚರಣೆಗಳನ್ನು ಒಟ್ಟಾಗಿ ನಿರ್ವಹಿಸುವ, ಇತ್ಯಾದಿ ಮಹತ್ವದ ಕಾರ್ಯಗಳು ಮಹರಾಷ್ಟ್ರ ಸೇರಿದಂತೆ ಇತರೆ ಅಕ್ಕಪಕ್ಕದ ರಾಜ್ಯಗಳಲ್ಲೂ ಸಾಯಿಬಾಬಾರ ಮೂಲಕ ಪ್ರಚಾರಕ್ಕೆ ಬಂದಿತು. ಶ್ರೀ ವೀರಬ್ರಹ್ಮಯ್ಯನವರು ತಮ್ಮ ಕಾಲಜ್ಞಾನದಿಂದ ವಿಶ್ವಪ್ರಸಿದ್ಧಿ ಪಡೆದಿರುವ ಸಾಧಕರು. ಇವರು ಕರ್ನಾಟಕದ ಪಾಪಾಗ್ನಿ ಮಠದಲ್ಲಿ ತಮ್ಮ ಬಾಲ್ಯವನ್ನು ಕಳೆದು ನಂತರ ದೇಶ ಪರ್ಯಟನೆ ಮಾಡುತ್ತಾ ಜನರಲ್ಲಿ ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ಮಾಡಿದರು. ಇವರು ಇಸ್ಲಾಂ ಧರ್ಮದ ಸೈಯದ್ ಎಂಬ ಯುವಕನೊಬ್ಬನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸಿದ್ದರು. ವಿಷಯ ನವಾಬ ದೊರೆಗಳವರೆಗೂ ಹೋದಾಗ ವೀರಬ್ರಹ್ಮಯ್ಯನವರು ದೊರೆಗಳನ್ನು ಸಹಾ ತಮ್ಮ ಉಪದೇಶದ ಮೂಲಕ ಪರಿವರ್ತಿಸಿ ಅವರಿಗೂ ಮತ ಸಾಮರಸ್ಯದ ಪಾಠ ಹೇಳುವರು. ಇದರಿಂದ ಪರಿವರ್ತಿತನಾದ ನವಾಬನು ಸ್ವತಃ ವೀರಬ್ರಹ್ಮಯ್ಯನವರ ಶಿಷ್ಯನಾಗುವುದರ ಬಗ್ಗೆ ವೀರಬ್ರಹ್ಮೇಂದ್ರ ಸ್ವಾಮಿಗಳ ಕುರಿತಾದ ಐತಿಹ್ಯಗಳಲ್ಲಿ ಉಲ್ಲೇಖವಿದೆ. ಈ ಸೈಯದ್ ಎಂಬ ಶಿಷ್ಯ ಸಿದ್ಧಯ್ಯನಾಗಿ ವೀರಬ್ರಹ್ಮಯ್ಯನವರ ಶಿಷ್ಯಪರಂಪರೆಯನ್ನು ಉಜ್ವಲಗೊಳಿಸಿ ಮನೆಮಾತಾಗಿರುವರು. ಇದರ ಜೊತೆಗೆ ವೀರಬ್ರಹ್ಮೇಂದ್ರ ಸ್ವಾಮಿಗಳು ಕಕ್ಕಯ್ಯ ನೆಂಬ ಅಸ್ಪೃಶ್ಯನೊಬ್ಬನ ಮನೆಯನ್ನು ಪ್ರವೇಶಿಸಿ ಸಮಾನತೆಯನ್ನು ಸಾರುವರು. ಪಂಚಮನೆಂದು ನಿನ್ನನ್ನು ಕೀಳಾಗಿ ಕಾಣುವರೆಂದು ವ್ಯಥೆ ಪಡಬೇಡ, ಹೀಗೆ ನಿನ್ನನ್ನು ನಿಂದಿಸಿದ ಜನರೇ ನಿನ್ನನ್ನು ಹೊಗಳುವ, ಗೌರವಿಸುವ ಕಾಲ ಮುಂದೆ ಬರಲಿದೆ. ಆದಿಯಲ್ಲಿ ಕುಲ ಮತಗಳು, ಅವನು - ಇವನು ಎಂಬ ಬೇಧಗಳಿರಲಿಲ್ಲ. ಆತ್ಮಕ್ಕೆ ಅಸ್ಪೃಶ್ಯತೆ ಎಂಬುದಿಲ್ಲ. ಜಗತ್ತನ್ನು ಬೆಳಗುವ ಸೂರ್ಯ ಚಂದ್ರರು, ಅಗ್ನಿದೇವನು, ತಂಪಾದ ಗಾಳಿ ಇವು ನಿನ್ನನ್ನು ಅಸಮಾನವಾಗಿ ಕಾಣುತ್ತವೆಯೇ?, ದೇವರುಗಳಿಗೆ ಇಲ್ಲದ ಸಮಸ್ಯೆ ಈ ಮಾನವರಿಗೆ ಏಕೆ? ಎಂದು ಕಕ್ಕಯ್ಯನಿಗೆ ದೈರ್ಯ ಹೇಳುವರು. ಮುಂದೆ ಕಾಲ ಬದಲಾಗಲಿದೆ. ಎಲ್ಲರ ಬದುಕುಗಳು ಸುಧಾರಿಸಲಿವೆ ಮತ್ತು ಅಧಿಕಾರ ಸ್ಥಾನವನ್ನು ಪಡೆಯುವ ಅವಕಾಶವು ನಿಮಗೆ ಸಿಗುವುದು ಎಂದು ವೀರಬ್ರಹ್ಮಯ್ಯನವರು ಕಾಲಜ್ಞಾನವನ್ನು ನುಡಿದಿರುವರು. ‘ಏಮಂಡಿ ಪಂಡಿತುಲಾರ’ ಎಂಬ ಒಂದು ಪದದಲ್ಲಿ “ಗುಣದಿಂದಲೇ ವರ್ಣ ಎಂಬ ಗೀತೆಯ ವಾಕ್ಯವ ಕೇಳಿಲ್ಲವೇ?, ಆ ಸತ್ಯವು ನಿಮ್ಮ ಕಿವಿಯ ಮೇಲೆ ಬೀಳಲಿಲ್ಲವೇ?, ಸರ್ವಮತಗಳ ಸಾರವಿದೆಯೆಂಬ ವಿಷಯವು ನಿಮ್ಮ ಅರಿವಿಗೆ ಬರಲಿಲ್ಲವೇ?ʼʼ ಕುಲಗಳ ಮತಗಳ ಬೇಧವ ತಂದು ಸಮಾಜವ ವಿಭಾಗ ಮಾಡಿದಿರಿ, ಸಮಾನತೆಯನ್ನು ಕೊಂದಿರಿ, ಅಸ್ಪೃಶ್ಯತೆ ಅಸ್ಪೃಶ್ಯತೆ ಎನ್ನುತ್ತಾ ಮಾನವರನ್ನು ದೂರ ಇಟ್ಟಿರಿ ಎಂದು ಪಂಡಿತರನ್ನು ಪ್ರಶ್ನಿಸುವರು. ಹೀಗೆ ವೀರಬ್ರಹ್ಮಯ್ಯನವರು ಪ್ರಾಪಂಚಿಕ ವ್ಯವಹಾರಗಳನ್ನು ಸಮತೋಲನದಲ್ಲಿಡುವ, ತುಳಿತಕ್ಕೆ ಒಳಗಾದವರಿಗೆ ದೈರ್ಯ ಹೇಳುವ, ಜಾತಿ ಮತ್ತು ಮತ ಸಾಮರಸ್ಯಗಳನ್ನು ಪ್ರತಿಪಾದಿಸುತ್ತಾ ಸ್ವತಃ ಅನುಸರಿಸುತ್ತಾ ತಮ್ಮ ಉತ್ತರಾಧಿಕಾರಿಯಾಗಿ ಒಬ್ಬ ಇಸ್ಲಾಂ ಧರ್ಮದ ಸಿದ್ದಯ್ಯನನ್ನು ನೇಮಿಸುವ ಮೂಲಕ ಮಾದರಿ ಎನಿಸಿಕೊಂಡಿರು. ಮುಂದೆ ಸಿದ್ದಯ್ಯನವರು ಸಹಾ ಸಿದ್ದಯ್ಯ ಸ್ವಾಮಿಗಳಾಗಿ ಜಾತಿ ಮತ ಸಾಮರಸ್ಯಗಳನ್ನು ಪ್ರತಿಪಾದಿಸುತ್ತಾ ಸರ್ವಧರ್ಮ ಸಮನ್ವಯದ ಪ್ರತೀಕವಾಗಿ ಬಾಳುವರು. ಕನ್ನಡದ ಶಿಶುನಾಳ ಶರೀಫರ ವಿಚಾರ ಚರ್ಚಿಸುವುದಾದರೆ, ಕನ್ನಡದ ಎರಡನೇ ಘಟ್ಟದ ತತ್ತ್ವಪದ ಪರಂಪರೆಯಲ್ಲಿ ಶಿಶುನಾಳ ಶರೀಫರದ್ದು ಒಂದು ಪ್ರಮುಖ ಹೆಸರು. ಇವರನ್ನು ಶಿಶುನಾಳ ಶರೀಫ, ಶಿಶುನಾಳ ಶಿವಯೋಗಿ, ಶರೀಪಜ್ಜ, ಶಿಶುನಾಳ ಶರೀಫ ಶಿವಯೋಗಿಗಳು ಮುಂತಾದ ಹೆಸರುಗಳಿಂದ ಕರೆಯುವರು. ಇವರು ಮೂಲತಃ ಇಸ್ಲಾಂ ಧರ್ಮಕ್ಕೆ ಸೇರಿದವರು. ಇವರ ಗುರುಗಳು ಗುರು ಗೋವಿಂದ ಭಟ್ಟರು. ಗುರುಗಳು ಬ್ರಾಹ್ಮಣರಾದರೆ ಶಿಷ್ಯ ಇಸ್ಲಾಂ ಧರ್ಮದವರು. ಹಿಂದು ಮುಸ್ಲೀಂ ಮೂಲಭೂತವಾದಿಗಳಿಂದ ಬಂದ ವಿರೋಧವನ್ನು ಎದುರಿಸಿ, ಗೆದ್ದು ಗುರುವಿನ ಮಾರ್ಗದರ್ಶನದಲ್ಲಿ ಶಿಶುನಾಳ ಶರೀಫರು ತಮ್ಮ ಜೀವನವನ್ನು ಸವೆಸಿದರು. ʼಭೋಧ ಒಂದೆ ಬ್ರಹ್ಮಾನಾದ ಒಂದೇ ಸಾಧನ ಮಾಡುವ ಹಾದಿ ಒಂದೆ, ಆದಿಪದವೊಂದೆ, ಬಿಂದು ಒಂದೇ, ನಿಜಾನಂದ ಒಂದೆ, ತಂದೆ ಗೋವಿಂದ ಸದ್ಗುರುವಿಂದೆʼ ಎಂಬ ಅದ್ವೈತ ಸಿದ್ದಾಂತದ ಮೂಲಕ ಮತ, ಧರ್ಮ, ಜಾತಿ, ಲಿಂಗ ಸಾಮರಸ್ಯವನ್ನು ಪ್ರತಿಪಾದಿಸುವ ಕೆಲಸವನ್ನು ಶಿಶುನಾಳ ಶರೀಫರು ಮಾಡುವರು. ಶಿಶುನಾಳ ಶರೀಫರ ಮತ್ತೊಂದು ಪದ ʼಹಾಕಿದ ಜನಿವಾರʼ ಇರದಲ್ಲಿ ಇಸ್ಲಾಂ ಧರ್ಮದ ಶಿಶುನಾಳ ಶರೀಫರು ಜನಿವಾರ ತೊಡುವ ಪ್ರಸಂಗವಿದೆ. ಚಿದಾನಂದಾವಧೂತರು ತಮ್ಮ ಒಂದು ತತ್ತ್ವಪದದಲ್ಲಿ ʼಮಾಡಿದನೆನ್ನ ಫಕೀರನ – ಸದ್ಗುರು ಮಾಡಿದನೆನ್ನ ಫಕೀರನ. . . . . ಭೂಪ ಚಿದಾನಂದ ಫಕೀರನಾಗಿ ತಿರುಗೆಂದಪ್ಪಣೆ ಕೊಟ್ಟ ಗುರುʼ ಎಂದು ಹಾಡುವರು. ಈ ಎರಡು ಉಲ್ಲೇಖಗಳು ಮತ ಧರ್ಮ ಸಾಮರಸ್ಯವನ್ನೇ ಒತ್ತಿ ಹೇಳುತಿವೆ ಎಂಬುದು ನಮಗೆ ಸುಲಭವಾಗಿ ತಿಳಿಯುವುದು. ಸರ್ವಜ್ಞ ತಾನು ಶೈವ ಧರ್ಮದವನಾದರೂ ತನ್ನ ತ್ರಿಪದಿಗಳಲ್ಲಿ ಜೈನ ಧರ್ಮವನ್ನು ಬಹುವಾಗಿ ಪ್ರಶಂಶಿಸಿರುವನು. ʼಕೊಲ್ಲುವ ಧರ್ಮವನೊಯ್ದು ಒಲಯೊಳಗಿಕ್ಕುವಾ ಕೊಲಲಾಗದೆಂಬ ಜೈನನ ಮತವೆನ್ನ ತಲೆಯ ಮೇಲಿರಲಿ ಸರ್ವಜ್ಞʼ ಎಂದು ಹೇಳುವನು. ಅಲ್ಲದೇ ʼಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ ಜಾತಿ ವಿಜಾತಿ ಎನಬೇಡ, ಆ ದೇವನೊಲಿದಾತನೆ ಜಾತ ಸರ್ವಜ್ಞʼ, ʼ..ಜಾತಿಯಲಿ ಜಾತಿಯೆನಬೇಡ, ಶಿವನೊಲಿದಾತನೆ ಜಾತ ಸರ್ವಜ್ಞʼ ಮುಂತಾದ ತ್ರಿಪದಿಗಳಲ್ಲಿ ಜಾತಿ ಬೇಧವನ್ನು ವಿರೋಧಿಸುವ ಮೂಲಕ ಸರ್ವಜ್ಞ ಸಾಮಾಜಿಕ ಸಾಮರಸ್ಯಕ್ಕೆ ಕರೆಕೊಡುವನು. ಮುಂದುವರೆದು ಕೈವಾರ ನಾರೇಣಪ್ಪನವರು ತಾವು ಮಂತ್ರಸಿದ್ಧಿ ಪಡೆದ ನಂತರ ತಮ್ಮ ಗುಹೆಯ ಬಳಿ ಆಡುತ್ತಿದ್ದ ಮುಸಲ್ಮಾನ ಮಕ್ಕಳಿಗೂ ಸೇರಿದಂತೆ ಎಲ್ಲರಿಗೂ ಸಹ ಬೆಣಚು ಕಲ್ಲುಗಳನ್ನು ಮಂತ್ರಿಸಿ ಕಲ್ಲುಸಕ್ಕರೆ ಮಾಡಿ ಕೊಡುತ್ತಿದ್ದರಂತೆ. ಮತ್ತು ಮುಂದೆ ಒಂದು ದಿನ ಒಬ್ಬ ಮುಸಲ್ಮಾನ ಹುಡುಗನು ನಾರೇಣಪ್ಪನವರ ಕುಟೀರದ ಮುಂದಿನ ಮರದ ಮೇಲೆ ಒಂದು ಮಣ್ಣಿನ ಗರುಡ ಪಕ್ಷಿಯನ್ನು ಮಾಡಿಟ್ಟು ಕಾಯುತ್ತಿದ್ದಾಗ, ನಾರೇಣಪ್ಪನವರು ಎಂದಿನಂತೆ ಎದ್ದು ಬಂದು ಅದಕ್ಕೆ ನಮಸ್ಕಾರ ಮಾಡಲು ಆ ಮಣ್ಣಿನ ಗರುಡ ಹಾರಿಹೋಯಿತಂತೆ. ಹೀಗೆ ಕೈವಾರ ನಾರೇಣಪ್ಪನವರು ಆ ಮುಸ್ಲೀಂ ಹುಡುಗರನ್ನು ಅನುಗ್ರಹಿಸುವರು. ಇದೇ ರೀತಿ ತಮ್ಮ ಜೀವನದಲ್ಲಿ ಮತ ಧರ್ಮ ಜಾತಿಗಳ ಬೇಧವಿಲ್ಲದೆ ಎಲ್ಲರನ್ನು ಅನುಗ್ರಹಿಸುವ ಕೆಲಸ ಮಾಡುತ್ತಿದ್ದರು ಎಂದು ನಾರೇಣಪ್ಪನವರ ಜೀವನ ಚಿರಿತ್ರೆಯಲ್ಲಿ ನಿರೂಪಿಸಲಾಗಿದೆ. ತಮ್ಮ ಬರಹಗಳಲ್ಲಿಯೂ ಕೈವಾರ ನಾರೇಣಪ್ಪನವರು ವೇದಾರ್ಥವನ್ನರಿತರೆ ಆಚಾರವೇಕೆ ?, ವೇದಾರ್ಥವನರಿತರೆ ಬೇಧವೇಕೆ? ವೇದಾರ್ಥವನ್ನರಿತರೆ ಸರ್ವವೂ ಒಂದೇ ನಾದ ಬ್ರಹ್ಮಾನಂದ ನಾರೇಯಣ ಕವಿ, ಕರ್ನಾಟಕವೆಲ್ಲ ಬೆರಕೆ ಸೊಪ್ಪಿನ ಕಟ್ಟು…….. ಅಲ್ಲಾನ ಮತವೊಂದೆ ಸ್ಥಿರವಾಗಿ ನಿಂತಿದೆ ನಾದ ಬ್ರಹ್ಮಾನಂದ ನಾರೇಯಣ, ಮುಂತಾದ ಪದ್ಯಗಳ ಮೂಲಕ ಸಮಾನತೆಯನ್ನು ಸಾಮಾಜಿಕ ಸಾಮರಸ್ಯವನ್ನು ಹೇಳುವ ಪ್ರಯತ್ನ ಮಾಡಿರುವರು. ಹೀಗೆ ವೀರಬ್ರಹ್ಮೇಂದ್ರ ಸ್ವಾಮಿಗಳು, ಶಿಶುನಾಳ ಶರೀಫರು ಸರ್ವಜ್ಞ ಮತ್ತು ಕೈವಾರ ನಾರೇಣಪ್ಪ ಮುಂತಾದ ತತ್ತ್ವಕವಿಗಳು ಜೀವಿಸಿದ್ದ ಕಾಲ ಮತ್ತು ಆಕಾಲದಲ್ಲಿ ಸ್ಥಿತ್ಯಂತರಗಳ ಹಿನ್ನೆಲೆಯಲ್ಲಿ ಇವರು ಸಾಮಾಜಿಕ ಸಾಮರಸ್ಯಕ್ಕೆ ಅದರಲ್ಲಿಯೂ ಮುಖ್ಯವಾಗಿ ಜಾತಿ, ಮತ, ಧರ್ಮ ಸಾಮರಸ್ಯಕ್ಕೆ ಹೆಚ್ಚು ಒತ್ತು ನೀಡಿದ್ದು, ಇದು ಅವರ ಬದುಕು ಬರಹಗಳಲ್ಲಿ ಹೇಗೆ ವ್ಯಕ್ತವಾಗಿದೆ ಎಂಬುದರ ಒಂದು ಸಣ್ಣ ಅವಲೋಕನವನ್ನು ಈ ಲೇಖನದಲ್ಲಿ ಮಾಡಲಾಗಿದೆ ಮತ್ತು ಹೆಚ್ಚು ವಿಶ್ಲೇಷಣೆಗೆ ಅವಕಾಶವಾಗದೇ ಇರುವುದು ಈ ಲೇಖನದ ಮಿತಿಯಾಗಿದೆ. ಅವಧೂತ ಎಂಬುದನ್ನು ಒಂದು ಪ್ರತ್ಯೇಕ ಸಾಧನಾ ಪಂಥವಾಗಿ ಅಲ್ಲದೇ ಅದನ್ನೊಂದು ಆಧ್ಯಾತ್ಮ ಸಾಧನೆಯ ಉನ್ನತ ಹಂತವಾಗಿ ನೋಡಬೇಕೆಂಬ ಉದ್ದೇಶದಿಂದ ಪ್ರಸ್ತುತ ಲೇಖನದಲ್ಲಿ ಅವಧೂತ ಎಂದು ಗುರುತಿಸಿಕೊಳ್ಳದ ಆದರೆ ಅವಧೂತದ ಸಕಲ ಲಕ್ಷಣಗಳನ್ನು ಮೈಗೂಡಿಸಿಕೊಂಡಿರುವ ತತ್ತ್ವಕವಿಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗಿದೆ. ಗ್ರಂಥ ಋಣ : 1. ಉತ್ತಂಗಿ ಚನ್ನಪ್ಪ, ಸರ್ವಜ್ಞ ವಚನಗಳು, 1957, ಬಾಸೆಲ್ ಮಿಷನ್, ದಾರವಾಡ. 2. ಎಂ. ರಾಮಕೃಷ್ಣರೆಡ್ಡಿ ಆಚಾರ್ಯ, ಪೆÇೀತಲೂರಿ ವೀರಬ್ರಹ್ಮಂ(ವಿಮರ್ಶಾ ವ್ಯಾಖ್ಯಾಲು), 2019, ಸಿ.ಪಿ.ಬ್ರೌನ್ ಭಾμÁ ಪರಿಶೋಧನ ಕೇಂದ್ರಂ, ಯೋಗಿ ವೇಮನ ವಿಶ್ವವಿದ್ಯಾಲಯಂ, ಕಡಪ. 3. ಗುಬ್ಬಣ್ಣವರ, ಶಿವಾನಂದ(ಸಂ.), 1985, ಶಿಶುನಾಳ ಶರೀಫರ ಗೀತೆಗಳು, ಕ. ಮತ್ತು ಸಂ. ನಿ. ಬೆಂಗಳೂರು. 4. ಜಿ. ಶಿವಾರೆಡ್ಡಿ ಆಚಾರ್ಯ(ಸಂ), ವೇಮನ ಪದ್ಯಾಲು, 2007, ರೆಡ್ಡಿ ಸೇವಾ ಸಮಿತಿ, ಕಡಪ. 5. ಲಿಂಗರಾಜು(ಸಂ.), 2005, ಗುರು ಕೊಟ್ಟ ಕಾಮಧೇನು, ಸಿವಿಜಿ ಪಬ್ಲಿಕೇಶನ್ಸ್ ಬೆಂಗಳೂರು. 6. ಶಾಂತರಸ(ಸಂ.), 2000, ತತ್ವಪದಗಳು ಪ್ರಾತಿನಿಧಿಕ ಸಂಕಲನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು. 7. ಶ್ರೀ ಯೋಗಿ ನಾರೇಯಣ ಆಶ್ರಮ(ಸಂ), 1982, ಕಾಲಜ್ಞಾನ ಮತ್ತು ನಾದ ಬ್ರಹ್ಮಾನಂದ ನಾರೇಯಣ ಕವಿ ಶತಕ, ಶ್ರೀ ಯೋಗಿ ನಾರೇಯಣ ಆಶ್ರಮ ಟ್ರಸ್ಟ್ ಕೈವಾರ. - ವರುಣ್ ರಾಜ್ ಜಿ. ಸಂಶೋಧಕರು, ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ ತುಮಕೂರು ವಿಶ್ವವಿದ್ಯಾಲಯ, ತುಮಕೂರು. - 572103 # 9448241450 mಚಿhಚಿಡಿishivಚಿಡಿuಟಿಡಿಚಿರಿರಿi@gmಚಿiಟ.ಛಿom

Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.