ರಾಘವಾಂಕನ ಹರಿಶ್ಚಂದ್ರ ಚಾರಿತ್ರ್ಯ; ಒಂದು ಮರು ಓದು. - ಶ್ರೀ ವರುಣ್ ರಾಜ್ ಜೀ.

ರಾಘವಾಂಕನ ಹರಿಶ್ಚಂದ್ರ ಚಾರಿತ್ರ್ಯ; ಒಂದು ಮರು ಓದು. - ಶ್ರೀ ವರುಣ್ ರಾಜ್ ಜೀ.
ಆಧುನಿಕ ಪೂರ್ವ ಸಾಹಿತ್ಯದ ಅತ್ಯಂತ ಮಹತ್ವದ ಕೃತಿಯಾಗಿ ಹರಿಶ್ಚಂದ್ರ ಚಾರಿತ್ರ್ಯವು ನಮ್ಮ ಗಮನ ಸೆಳೆಯುತ್ತದೆ. ಈ ಕಾವ್ಯವನ್ನು ಮರು ಓದಿಗೆ ಮರು ವಿಮರ್ಶೆಗೆ ಒಳಪಡಿಸುವ ಜರೂರು ಎಂದೆಂದಿಗೂ ಇದ್ದೆ ಇರುತ್ತದೆ. ರಾಘವಾಂಕನ ಹರಿಶ್ಚಂದ್ರ ಚಾರಿತ್ರ್ಯವು ಮೇಲ್ನೋಟಕ್ಕೆ ಒಂದು ಪುರಾಣ ಕಾವ್ಯವಾಗಿದ್ದರೂ, ಸೂಕ್ಷ್ಮವಾಗಿ ಅವಲೋಕಿಸಿದರೆ ಪುರಾಣಕ್ಕಿಂತಲೂ ಮಿಗಿಲಾದದನ್ನು, ಮಹತ್ವವಾದದನ್ನು ಇಲ್ಲಿ ಗುರುತಿಸಬಹುದು. ಈ ಕೃತಿಯ ರಚನೆಯ ಕಾಲ, ರಚನೆಗೆ ಒದಗಿಬಂದಿರಬಹುದಾದ ಪ್ರೇರಣೆಗಳು, ಆ ಕಾಲದ ಧಾರ್ಮಿಕ ಮತ್ತು ರಾಜಕೀಯ ಒತ್ತಡಗಳು ಮತ್ತು ಇವನ್ನು ಕೃತಿ ನಿಭಾಯಿಸುವ ರೀತಿ ಇವುಗಳನ್ನೆಲ್ಲ ಹಿನ್ನೆಲೆಯಾಗಿಟ್ಟುಕೊಂಡು ಗಮನಿಸಿದಾಗ ನಮಗೆ ಈ ಮಾತು ಮತ್ತಷ್ಟು ಸ್ಪಷ್ಟವಾಗುತ್ತದೆ. ರಾಘವಾಂಕ ಒಬ್ಬ ಜನಪರ ಕವಿ. ಜನ ಬದುಕಬೇಕೆಂದು ಕಾವ್ಯರಚಿಸಿರುವೆ ಎಂದು ಹೇಳಿಕೊಳ್ಳುವಲ್ಲಿ ಅವನ ಜನಪರ ಚಿಂತನೆ ನಮಗೆ ಸ್ಪಷ್ಟವಾಗುತ್ತದೆ. ಆದರೆ, ತನ್ನ ಕೃತಿಗೆ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಹಿಡಿದು ಅದರ ನಿರೂಪಣೆಯ ವಿವಿಧ ಹಂತಗಳಲ್ಲಿ ಕವಿ ಹಲವು ರೀತಿಯ ಇಕ್ಕಟ್ಟುಗಳಿಗೆ ಸಿಲುಕಿರುವುದನ್ನು ನಾವು ಸ್ವಲ್ಪ ಸೂಕ್ಷ್ಮ ಅವಲೋಕನದಿಂದ ಅರಿಯಬಹುದು. ರಾಘವಾಂಕ ಒಂದು ಹಂತದವರೆಗೆ ಈ ಇಕಟ್ಟುಗಳನ್ನು ಮೀರಿದ್ದಾನೆ ಮತ್ತು ಕೆಲವು ಕಡೆ ಅವನ್ನು ಮೀರಲಾಗದೆ ಸೋತಿದ್ದಾನೆ. ಇವುಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಪ್ರಯತ್ನವೇ ಈ ಲೇಖನ. ವಿಷಯಕ್ಕೆ ಬರುವುದಾದರೆ, ಮುಖ್ಯವಾಗಿ ಹರಿಶ್ಚಂದ್ರ ಚಾರಿತ್ರ್ಯದಲ್ಲಿ ಗಾನರಾಣಿಯರ ಪ್ರಸಂಗ, ವೀರಬಾಹುಕನ ಪ್ರಸಂಗ ಮತ್ತು ಕೊನೆಯ ವಿಶ್ವನಾಥಸಾಕ್ಷಾತ್ಕಾರ ಈ ಮೂರು ಮುಖ್ಯವಾದ ಸನ್ನಿವೇಷಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಕೆಲವು ಪ್ರಮುಖ ವಿಚಾರಗಳನ್ನು ಚರ್ಚೆಗೆ ಒಳಪಡಿಸಬಹುದು. ವರ್ಣ ಪದ್ಧತಿ, ಹೊಲೆತನದ ಪ್ರಶ್ನೆ, ಮೇಲು - ಕೀಳು, ಸತ್ಯ – ಅಸತ್ಯದಂತಹಾ ವಿಚಾರಗಳು ರಾಘವಾಂಕನಲ್ಲಿ ಪದೇ ಪದೇ ವೈರುಧ್ಯಾತ್ಮಕವಾಗಿ, ಸಂಘರ್ಷಾತ್ಮಕವಾಗಿ ಮುಖಾಮುಖಿಯಾಗುವುದನ್ನು ಕಾಣುತ್ತೇವೆ. ವಚನ ಸಾಹಿತ್ಯದ ಬಹುದೊಡ್ಡ ಪ್ರಭಾವ ಹರಿಹರ, ರಾಘವಾಂಕ ಸೇರಿದಂತೆ ಈ ಕಾಲದ ಹಲವು ಕವಿಗಳ ಮೇಲೆ ಇದದ್ದು ನಮಗೆಲ್ಲಾ ತಿಳಿದಿರುವ ವಿಚಾರವೇ. ಈ ಹಿನ್ನೆಲೆಯಲ್ಲಿ ವಚನ ಸಾಹಿತ್ಯದ ಮೌಲ್ಯಗಳಾದ ಸ್ತ್ರೀ ಸಮಾನತೆ, ಜಾತಿ ಸಮಾನತೆ, ವರ್ಣ ಸಮಾನತೆಗಳು ಮುನ್ನೆಲೆಗೆ ಬಂದಿದ್ದರ ಮುಂದುವರೆದ ಭಾಗವಾಗಿಯೂ ಈ ಕೃತಿಯನ್ನು ನಾವು ವಿಶ್ಲೇಷಿಸಬಹುದು. ಹರಿಶ್ಚಂದ್ರ ಚಾರಿತ್ರ್ಯದ ಪಾತ್ರ ಚಿತ್ರಣ, ಸಂದರ್ಭ ಚಿತ್ರಣ, ಸಂಭಾಷಣೆ, ಭಾಷಾ ಬಳಕೆ ಹೀಗೆ ಹಲವು ಕಡೆ ವಚನ ಸಾಹಿತ್ಯದ ಪ್ರಭಾವವಿದೆ. ಆದರೆ ಈ ಮಾತನ್ನು ಕೃತಿಯ ಎಲ್ಲ ಸನ್ನಿವೇಷಗಳಲ್ಲೂ ಹೇಳಲಾಗುವುದಿಲ್ಲ. ಕೇವಲ ವಚನ ಸಾಹಿತ್ಯ ಪ್ರೇರಣೆಯ ಹಿನ್ನೆಲೆಯಲ್ಲಿ ಈ ಕೃತಿಯನ್ನು ಅವಲೋಕಿಸುವವರಿಗೆ ಕೃತಿಯ ಕೆಲವು ಸನ್ನಿವೇಷಗಳಂತೂ ತೀರ ವೈರುದ್ಯಾತ್ಮಕವಾಗಿ ಕಾಣುವವು. ಕೆಲವು ಪ್ರಮುಖ ನಿದರ್ಶನಗಳ ಮೂಲಕ ಈ ಮಾತನ್ನು ಮತ್ತಷ್ಟು ಸ್ಪಷ್ಟಪಡಿಸಬಹುದು. ವಚನಕಾರರು ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ……ನೀನೊಮ್ಮೆ ಒಡಲುಗೊಂಡು ನೋಡಾ ಎಂದು ಪ್ರಶ್ನಿಸುವ ಮೂಲಕ ಒಡಲುಗೊಂಡವನು ಹುಸಿಯಾಡುವುದು ಸಹಜ, ಸಾಮಾನ್ಯ ಎಂದು ಸಾಧಿಸುತ್ತಾರೆ. ಆದರೆ, ರಾಘವಾಂಕನ ಕೃತಿ ಇದಕ್ಕೆ ತದ್ವಿರುದ್ಧ. ಇನ್ನು ಒಂದು ನಿದರ್ಶನವನ್ನು ಗಮನಿಸಬಹುದು. ವಚನ ಸಾಹಿತ್ಯದ ಆಳದಲ್ಲಿ ಜಾತಿ, ವರ್ಣಗಳ ಸ್ಪಷ್ಟವಾದ ನಿರಾಕರಣೆಯ ದನಿ ಇದೆ. ಆದರೆ ರಾಘವಾಂಕನ ಪ್ರತಿಭೆ ಜಾತಿ ಅಥವಾ ವರ್ಣವನ್ನು ಎಲ್ಲಿಯೂ ಸ್ಪಷ್ಟವಾಗಿ ನಿರಾಕರಿಸದೇ ಅವುಗಳ ಮರು ವ್ಯಾಖ್ಯಾನಕ್ಕೆ ಸೀಮಿತವಾಗಿ ನಿಂತುಬಿಡುತ್ತದೆ. ಹರಿಶ್ಚಂದ್ರ ಚಾರಿತ್ರ್ಯದ ಅಧ್ಯಯನದ ಮಾಡುವಾಗ ಈ ವಿಚಾರದ ಸ್ಪಷ್ಟ ಅರಿವಿನಿಂದಲೇ ಮುಂದುವರೆಯಬೇಕು ಎನಿಸುತ್ತದೆ. ಹರಿಶ್ಚಂದ್ರ ಕಾವ್ಯವನ್ನು ವಚನ ಸಾಹಿತ್ಯದ ನಂತರದ ಕಾಲಘಟ್ಟದ ಕೃತಿಯಾಗಿ ನೋಡುವುದರಿಂದ ನಮಗೆ ಈ ಸಮಸ್ಯೆ ಎದುರಾಗುತ್ತದೆ. ಒಂದು ವೇಳೆ ಇದು ವಚನ ಸಾಹಿತ್ಯದ ಕಾಲಘಟ್ಟಕ್ಕೂ ಹಿಂದಿನ ಕೃತಿಯಾಗಿದ್ದಿದ್ದರೆ ನಮಗೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲವೇನೋ. ಈ ಕೃತಿ ತಳೆಯುವ ನಿಲುವುಗಳು ಒಂದು ಹಂತದಲ್ಲಿ ಕ್ರಾಂತಿಕಾರಕವಾಗಿದ್ದರೂ, ಸಮಾಜ ಸುಧಾರಣಾ ಹಿನ್ನೆಲೆಯ ಬಹುದೊಡ್ಡ ಕ್ರಾಂತಿಯಾದ ವಚನ ಸಾಹಿತ್ಯದ ಮುಂದೆ ಇವು ಮಂಕಾಗಿಹೋಗುತ್ತವೆ. ಇನ್ನು ರಾಘವಾಂಕನು ಜಾತಿ, ವರ್ಣ ಇತ್ಯಾದಿಗಳ ಗೊಡವೆಗೆ ತಲೆಹಾಕದೇ, ಕೇವಲ ಹರಿಶ್ಚಂದ್ರರಾಯನ ಸತ್ಯವನ್ನು, ಅವನ ಸತ್ಯದ ಮಹಿಮೆಯನ್ನು ಜಗತ್ತಿಗೆ ಮತ್ತೊಮ್ಮೆ ಹೊಸರೂಪದಲ್ಲಿ ಹೇಳಹೊರಟಿದ್ದಾನೆ ಎಂದು ಭಾವಿಸುವುದು ಸಹ ಕಷ್ಟವೇ. ಏಕೆಂದರೇ, ಈ ಹಿಂದೆ ಹರಿಶ್ಚಂದ್ರನು ವರುಣನಿಗೆ ಮಾತು ಕೊಟ್ಟು ವಚನ ಬ್ರಷ್ಟನಾಗಿದ್ದ ವಿವರವನ್ನು ರಾಘವಾಂಕ ಪ್ರಾರಂಭದಲ್ಲಿಯೇ ವಿಶ್ವಾಮಿತ್ರನಿಂದ ಹೇಳಿಸುತ್ತಾನೆ. ಮತ್ತು ತಾನು ಮಾಡಿದ ತಪ್ಪಿಗಾಗಿ ಹರಿಶ್ಚಂದ್ರ ಪ್ರಾಯಶ್ಚಿತ ಪಡುವ ಚಿತ್ರಣವನ್ನು ತರುತ್ತಾನೆ. ಅವನು ಮಾಡಿದ ತಪ್ಪು ಏನು ಎಂಬುದನ್ನು ರಾಘವಾಂಕ ಬಹು ಮಾರ್ಮಿಕವಾಗಿ ಹರಿಶ್ಚಂದ್ರನಿಂದಲೇ ಹೇಳಿಸುತ್ತಾನೆ. ನುಡುಯಲರಿಯದೆ ಸಕಲರಾಜ್ಯಮಂ ಹೋಗಾಡಿ ಕಡೆಗಧಿಕ ಋಣಿಯಾಗಿ………….. ಕುಲಾಚಾರಮಂ ಬಿಟ್ಟು ಜಗಕೆ ನಗೆಗೆಡೆಯಾದ ಪಾತಕ ಹರಿಶ್ಚಂದ್ರನವನನೇನೆಂದು…. ಇದೇ ಅವನ ತಪ್ಪು. ಯಾವುದೆಂದರೆ, ನುಡಿಯಲು ಅರಿಯದೇ ಸಕಲರಾಜ್ಯವನ್ನು ಕಳೆದುಕೊಂಡು ಈ ಪರಿಸ್ಥಿತಿಗೆ ಬಂದಿರುವುದು. ಇದೇ ರೀತಿಯ ಪ್ರಾಯಶ್ಚಿತದ ಚಿತ್ರಣ ಕೃತಿಯ ಕೊನೆ ಭಾಗದಲ್ಲಿ ಸಾಕ್ಷಾತ್‌ ಪರಶಿವನೇ ಹರಿಶ್ಚಂದ್ರನ ಮುಂದೆ ಪ್ರತ್ಯಕ್ಷನಾದಾಗಲೂ ಬರುತ್ತದೆ. ನೆನೆದು ಚಂಡಾಲಕಿಂಕರನಾಗಿ ಹೊಲವೇಷವನು ಹೊತ್ತು……………. ಘನಪತಿವ್ರತೆಯಪ್ಪ ನಿಜಸತಿಯ ಕೊಂದ ನೀಚನು ಮೂರ್ಖನಾನೆನ್ನ…… ಎಂಬುದಾಗಿ ಹರಿಶ್ಚಂದ್ರ ಹೇಳಿಕೊಳ್ಳುವನು. ಇಲ್ಲಿ ತಾನು ಮಾಡಿದ ಕಾರ್ಯದ ಕುರಿತು ಹರಿಶ್ಚಂದ್ರನಿಗೆ ಪಶ್ಚಾತಾಪ ವ್ಯಕ್ತವಾಗಿದೆ. ಅವನು ಸತ್ಯವನ್ನು ಉಳಿಸಿಕೊಳ್ಳುವ ಕಾರಣದಿಂದಲೇ ಇಷ್ಟೆಲ್ಲವನ್ನು ಮಾಡಿದನಾಗಿ ಅವನ ಈ ಪ್ರಾಯಶ್ಚಿತ ಈ ಸತ್ಯವನ್ನು ಉಳಿಸಿಕೊಳ್ಳಬೇಕೆಂಬ ಹಠಕ್ಕೂ ಸಂಬಂಧಿಸುತ್ತದೆ ಎಂದು ನಾವು ನಂಬಬಹುದು. ಒಟ್ಟಿನಲ್ಲಿ ಹರಿಶ್ಚಂದ್ರನನ್ನು ಸತ್ಯದ ಸಾಕಾರಮೂರ್ತಿ ಎಂದು ಬಿಂಬಿಸುವಲ್ಲಿಯೂ ಕೆಲವು ಗೊಂದಲಗಳು ಇವೆ. ಕೃತಿಯ ಉಳಿದ ಕೆಲವು ಸನ್ನಿವೇಶಗಳಲ್ಲೂ ಈ ಗೊಂದಲ ಮುಂದುವರಿಯುತ್ತದೆ. ಗಾನರಾಣಿಯರ ಪ್ರಸಂಗವನ್ನು ಗಮನಿಸುವುದಾದರೆ, ಹಿಂದೆ ಕೆಲವು ಕಥೆಗಳಲ್ಲಿ ವರ್ಣಾಶ್ರಮ ಪದ್ಧತಿಯ ನಂಬಿಕೆಗೆ ಅನುಗುಣವಾಗಿ ಹೊಲತಿಯರಾದ ಗಾನರಾಣಿಯರು ವಿಶ್ವಾಮಿತ್ರನ ಕಾಲ ಧೂಳಿನಿಂದ ಜನಿಸುವ ಚಿತ್ರಣವಿದೆ. ಆದರೆ ಇಲ್ಲಿ ರಾಘವಾಂಕನು ಸಿಕ್ಕಿದನಲಾ ಭೂಪನಿಂದು ನಾನಾಯ್ತು ತಾನಾಯ್ತು ಕೆಡಿಸದೆ ಮಾಣೆನೆಂದು ಗರ್ಜಿಸುವ ಕೌಶಿಕನ ಹೋಂಕಾರದಿಂದೊಗೆದರಿಬ್ಬರು ಸತಿಯರು ಎಂದು ಹೇಳುವ ಮೂಲಕ ಗಾನರಾಣಿಯರು ವಿಶ್ವಾಮಿತ್ರನ ಕೋಪದ ಹೊಂಕಾರದಿಂದ ಜನಿಸುವರೆಂದು ವಿವರಿಸುತ್ತಾನೆ. ಮುಂದುವರೆದು ಮುನಿಗೆ ಹೊಲೆಯಾವುದತಿಕೋಪ ಬದ್ಧದ್ವೇಷವನಿಮಿತ್ತ ವೈರವದರಿಂದ ಹುಟ್ಟಿದರಾಗಿ ವನಿತೆಯರು ಕಡೆಗೆ ಹೊಲತಿಯರಾಗಿ… ಎಂದು ಹೇಳುತ್ತಾ ಹೊಲೆತನಕ್ಕೆ ಒಂದು ಹೊಸ ವ್ಯಾಖ್ಯಾನವನ್ನು ರಾಘವಾಂಕ ನೀಡುತ್ತಾನೆ. ಅಂದರೆ, ರಾಘವಾಂಕನ ಪ್ರಕಾರ ಗಾನರಾಣಿಯರು ಹೊಲತಿಯರಾಗಲು ಕಾರಣ ಅವರು ವಿಶ್ವಾಮಿತ್ರನ ಅತಿಕೋಪ, ಬದ್ಧದ್ವೇಷ ಮತ್ತು ಅನಿಮಿತ ವೈರತ್ವಗಳಿಂದ ಜನಿಸಿದ್ದೆ ಹೊರತು ಬೇರೇನೂ ಅಲ್ಲ. ಹೀಗೆ ಹೇಳುವ ಮೂಲಕ ಬ್ರಹ್ಮನ ತಲೆಯಿಂದ ಬ್ರಾಹ್ಮಣರು, ಬುಜಗಳಿಂದ ಕ್ಷತ್ರಿಯರು, ತೊಡೆಗಳಿಂದ ವೈಶ್ಯರು ಹಾಗೂ ಪಾದಗಳಿಂದ ಶೂದ್ರರು ಜನಿಸಿದರೆಂಬ ನಂಬಿಕೆಯನ್ನು ರಾಘವಾಂಕನು ನಿರಾಕರಿಸುತ್ತಾನೆ. ಆದರೆ ಅವನ ನಿರಾಕರಣೆ ಅಥವಾ ಪ್ರತಿಭಟನೆ ಆಗಲೇ ಚರ್ಚಿಸಿದಂತೆ ಕೇವಲ ಹೊಲೆತನವನ್ನು ಮರುವ್ಯಾಖ್ಯಾನಿಸುವಲ್ಲಿಗೆ ನಿಲ್ಲುತ್ತದೆ. ಹರಿಹರನು ಮಾದಾರ ಚೆನ್ನಯ್ಯನ ರಗಳೆಯಲ್ಲಿ, ಹೊಲೆಯನಾದ ಚನ್ನಯ್ಯನ ಭಕ್ತಿಗೆ ಮೆಚ್ಚಿದ ಶಿವನು ಚೆನ್ನಯ್ಯನ ಮನೆಯ ಅಂಬಲಿಯನ್ನು ಊಟ ಮಾಡಿದ್ದನ್ನು ವರ್ಣಿಸುತ್ತಾ ಸನ್ನುತಾಗಮನಿಕರ ತಲ್ಲಣಂಗೊಳೆ ತನ್ನ ಜಿಹ್ವೆಯೊಳು ಸವಿದು ಪನ್ನಗಧರಗಿತ್ತ ಚೆನ್ನಯ್ಯನೆನ್ನಯ್ಯನೆಂಬೆ ಎನ್ನುವನು. ಇಲ್ಲಿ ಶಿವ ಚನ್ನಯ್ಯನ ಮನೆಯಲ್ಲಿ ಉಂಡಕಾರಣ ಸನ್ನುತ ಆಗಮಗಳೆಲ್ಲವೂ ತಲ್ಲಣಿಸುತ್ತವೆ. ಆದರೆ, ಈ ತಲ್ಲಣ ರಾಘವಾಂಕನಲ್ಲಿ ಇಲ್ಲ. ಪುರಾಣವೆಂಬುದು ಪುಂಡರ ಗೋಷ್ಠಿ, ನಮ್ಮ ವಚನದೊಂದು ಪಾರಾಯಣಕ್ಕೆ ವ್ಯಾಸನದೊಂದು ಪುರಾಣ ಸಮಬಾರದಯ್ಯ, ಮುಂತಾದ ವಚನಗಳಲ್ಲಿ ವ್ಯಕ್ತವಾಗಿರುವ ದಿಟ್ಟ ಪ್ರತಿಭಟನೆಯೂ ರಾಘವಾಂಕನಲ್ಲಿ ಇಲ್ಲ. ಗಾನ ರಾಣಿಯರು ಹರಿಶ್ಚಂದ್ರನನ್ನು ಉದ್ದೇಶಿಸಿ ಎತ್ತುವ ಕೆಲವು ಪ್ರಶ್ನೆಗಳು ಬಹಳ ತಾತ್ವಿಕವಾದವು. ಗಾನರಾಣಿಯರು ಎತ್ತುವ ಪ್ರಶ್ನೆಗಳನ್ನು ಗಮನಿಸಿ - ಬಡತನದ ಹೊತ್ತಾನೆದೊರಕಿ ಫಲವೇನು?, ನೀರಡಸಿರ್ದ ಹೊತ್ತಾಜ್ಯದೊರಕಿ ಫಲವೇನು?, ರುಜೆಯಡಸಿ ಕೆಡೆದಿಹ ಹೊತ್ತು ರಂಭೆ ದೊರಕೊಂಡಲ್ಲಿ ಫಲವೇನು? ಎಂದು ಹರಿಶ್ಚಂದ್ರನ ಸರ್ವಾಭರಣಗಳ ನಿಶ್ಪ್ರಯೋಜಕತೆಯನ್ನು ವ್ಯಂಗ್ಯ ಮಾಡುತ್ತಾ, ಕೊನೆಗೆ ಉಪಾಯದಿಂದ ಹರಿಶ್ಚಂದ್ರನನ್ನು ಸಿಲುಕಿಸುವ ಯೋಚನೆಯಲ್ಲಿ …….…ಈ ಪೊತ್ತಿನ ಸುಡುಸುಡನೆ ಸುಡುವ ಬಿರುಬಿಸಿಲ ಸೆಕೆಯುಸುರ ಬಿಸಿ ಹೊಡೆದುದುರುಹೊತ್ತಿ ಬಾಯ್ಬತ್ತಿ ಡಗೆ ಸುತ್ತಿ ಸಾವಡಸುತಿದೆ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜ… ಎಂಬುದಾಗಿ ರಾಜನ ಮುತ್ತಿನ ಸತ್ತಿಗೆಯನ್ನೇ ಬೇಡುವರು. ತನ್ನ ರಾಜತ್ವದ ಚಿಹ್ನೆಯಾದ ಸತ್ತಿಗೆಯನ್ನು ಗಾನರಾಣಿಯರು ಬೇಡಿದ್ದು ಹರಿಶ್ಚಂದ್ರನಿಗೆ ಸಹಿಸಲಾಗುವುದಿಲ್ಲ. ಆದರೆ, ಸಾಮಾನ್ಯರಾದ ಹೊಲತಿಯರು ರಾಜನನ್ನು ಪ್ರಶ್ನೆಮಾಡುವ, ರಾಜಲಾಂಛನವನ್ನು ಅಂದರೆ ಅಧಿಕಾರವನ್ನು ಬೇಡುವುದು ಬಹಳ ಮಹತ್ವದ ಬೆಳವಣಿಗೆ. ಏಕೆಂದರೆ, ಇದು ಒಂದು ರೀತಿಯಲ್ಲಿ ಈವತ್ತಿನ ಪ್ರಜಾಪ್ರಭುತ್ವದ ಕಲ್ಪನೆಗೆ ಸಮವಾದ ಆಲೋಚನೆ. ಗಾನರಾಣಿಯರ ಪ್ರಶ್ನೆ, ವ್ಯಂಗ್ಯ ಹಾಗೂ ಹರಿಶ್ಚಂದ್ರನನ್ನು ಪೇಚಿಗೆ ಸಿಲುಕಿಸುವ ಪ್ರಯತ್ನ ಅಲ್ಲಿಗೆ ನಿಲ್ಲದೇ ಇನ್ನು ಮುಂದುವರಿಯುತ್ತದೆ. ಅದು ಬಹಳ ನಾಟಕೀಯವಾಗಿ. ಪಾವನಕ್ಷೀರಮಂ ಕೊಡುವ ಕೆಚ್ಚಲ ಮಾಂಸವಾವಲೇಸಿನಿದ್ದುಳ್ಳ ಮಧುವನೊಸೆದೀವ ನೊಳವಾವ ಲೇಸು?…. ಕೇಳ್‌ ಭಾವಿಸುವೊಡಿಂದೆಮ್ಮ ರೂಪುಜವ್ವನವಿರಲು ಕುಲದಮಾತೇಕೆ ಎಂದು ಹೇಳುವ ಗಾನರಾಣಿಯರು, ಕುಲದ ಕಡೆಗಿನ ಗಮನವನ್ನು ಬಿಟ್ಟು ತಮ್ಮ ರೂಪು – ಯವ್ವನ್ನಗಳನ್ನು ನೋಡುವಂತೆ ಹರಿಶ್ಚಂದ್ರನನ್ನು ಪ್ರೇರೇಪಿಸುತ್ತಾರೆ. ಈ ರೀತಿಯ ಕುಲದ ನಿರಾಕರಣೆಯ ಪ್ರಶ್ನೆ ಕುಲಂ ಕುಲಮಲ್ತು, ಚಲಂ ಕುಲಂ, ಗುಣಂ ಕುಲಂ, ಅಭಿಮಾನಮೊಂದೆ ಕುಲಂ, ಅಣ್ಮು ಕುಲಂ ಎಂಬುದಾಗಿಯೂ ಪಂಪ ಮುಂತಾದ ಕವಿಗಳಲ್ಲಿಯೂ, ವಚನಕಾರರಲ್ಲಿಯೂ ಮುಂದೆ ಬರುವ ದಾಸರಲ್ಲಿ, ತತ್ತ್ವಪದಕಾರರಲ್ಲಿಯೂ ಇದೆ. ಆದರೆ, ರಾಘವಾಂಕನು ಈ ಚಿತ್ರಣವನ್ನು ಕೊಡುತ್ತಿರುವ ಸಂದರ್ಭ ಮತ್ತು ಈ ಮಾತನ್ನು ಹೇಳುತ್ತಿರುವ ಗಾನರಾಣಿಯರ ಹಿನ್ನೆಲೆಯನ್ನು ಕಣ್ಣ ಮುಂದೆ ತಂದುಕೊಂಡಾಗ ಈ ಪ್ರತಿಭಟನೆ ಅಥವಾ ಪ್ರಶ್ನೆಯ ತೀವ್ರತೆ ಕಡಿಮೆಯಾದಂತೆ ಭಾಸವಾಗುತ್ತದೆ. ಏಕೆಂದರೆ, ರಾಘವಾಂಕನ ಪ್ರಕಾರ ಗಾನರಾಣಿಯರು ಹರಿಶ್ಚಂದ್ರನಲ್ಲಿಗೆ ಬಂದಿರುವುದು ಕುತಂತ್ರದಿಂದ ಅವನನ್ನು ಮರುಳು ಮಾಡಲು, ಹೀಗಾಗಿ ಕುತಂತ್ರದ ಉದ್ದೇಶದಿಂದ ಅವರು ಕೇಳುವ ಪ್ರಶ್ನೆಗಳಿಗೆ ಅಷ್ಟು ಮಹತ್ವ ಅಥವಾ ತೀವ್ರತೆ ಇರುತ್ತದೆಯೇ? ಗಾನರಾಣಿಯರ ದೃಷ್ಠಿ ಸಾಮಾಜಿಕ ಸಮಸ್ಯೆಗಳ ಅಥವಾ ಕುಲದ ಪ್ರಶ್ನೆಯ ವಿಮರ್ಶೆಗಿಂತಲೂ ಹೆಚ್ಚು ಹರಿಶ್ಚಂದ್ರನನ್ನು ಮೋಸಗೊಳಿಸುವ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸಿಕೊಂಡಂತೆ ಭಾಸವಾಗುತ್ತದೆಯಲ್ಲವೇ? ಈ ಹಿನ್ನೆಲೆಯಲ್ಲಿ ಗಾನರಾಣಿಯರ ಪ್ರಶ್ನೆಗಿಂತಲೂ ಮುಂದೆ ಬರುವ ವೀರಬಾಹುಕನ ಪ್ರಶ್ನೆಗಳು ತೀವ್ರವಾದ ಪ್ರತಿಭಟನೆಯ ಪ್ರಶ್ನೆಗಳಾಗಿ ನಮ್ಮನ್ನು ಕಾಡುತ್ತವೆ. ಏಕೆಂದರೇ, ವೀರಬಾಹುಕನು ನೇರವಾಗಿ ಹರಿಶ್ಚಂದ್ರನನ್ನು ಮರುಳು ಮಾಡುವ ಉದ್ದೇಶವನ್ನು ಹೊಂದಿದವನಲ್ಲ. ಅಥವಾ ಗಾನರಾಣಿಯರಷ್ಟು ತೀವ್ರವಾದ ಕುತಂತ್ರ ಇವನಲ್ಲಿ ಇರಲಿಲ್ಲ ಎನಿಸುತ್ತದೆ. ವೀರಬಾಹುಕನ ಪ್ರಸಂಗಕ್ಕೆ ಬರುವ ಮೊದಲು, ಗಾನರಾಣಿಯರೊಂದಿಗಿನ ಹರಿಶ್ಚಂದ್ರನ ಸಂಭಾಷಣೆಯನ್ನು ಮುಂದುವರೆದು ಸ್ವಲ್ಪ ಸೂಕ್ಷ್ಮವಾಗಿ ಅವಲೋಕಿಸಬಹುದು. ಹಾಡನೊಲಿದಾಲಿಸಿದ ಕಿವಿಗೆ ಹೊಲೆಯಿಲ್ಲಮಾತಾಡಿ ಹೊಗಳಿದ ಬಾಯ್ಗೆ ಹೊಲೆಯಿಲ್ಲ ರೂಪನೆರೆನೋಡಿದ ವಿಲೋಚನಕ್ಕೆ ಹೊಲೆಯಿಲ್ಲ……….ಸೋಂಕಿಂಗೆ ಹೊಲೆಯುಂಟಾಯ್ತೆ ಕೂಡಿರ್ದ ಪಂಚೇಂದ್ರಿಯಂಗಳೊಳು ನಾಲ್ಕಧಮವೊಂದಧಿಕವೇ? ಎಂದು ಗಾನರಾಣಿಯರು ಕೇಳಿದಾಗ ಹರಿಶ್ಚಂದ್ರನು ಕೆಂಡವನು ಮುಟ್ಟಿದಡೆ ಬೇವಂತೆ, ಕೇಳ್ದಡಂ, ಕಂಡು ವಾಸಿಸಿದಡಂ ಬೆಂದವೇ? ಎಂದು ಕೇಳುವನು. ಇದರ ಅರ್ಥ, ಕೆಂಡವನ್ನು ಮುಟ್ಟಿದರೆ ಮಾತ್ರ ಸುಡುವುದು ಅದು ಬಿಟ್ಟು ನೋಡಿದರೇ, ಮೂಸಿದರೇ, ಕೇಳಿದರೇ ಸುಡುವುದೇ? ಎಂದು. ಇದು ಹರಿಶ್ಚಂದ್ರನ ತರ್ಕ. ಈ ತರ್ಕವನ್ನು ಗಾನರಾಣಿಯರು ತಮ್ಮ ಪ್ರತಿಭಟನೆಯ ಮೂಲಕ ನಿರಾಕರಿಸುತ್ತಾರೆ. ಹೊಲೆತನವನ್ನು ಕೆಂಡಕ್ಕೆ ಹೊಲಿಸುವ ಹರಿಶ್ಚಂದ್ರನ ಮಾತನ್ನು ಸ್ವಲ್ಪ ಹೀಗೂ ಅಥೈಸಿಕೊಳ್ಳಬಹುದು. -ಹರಿಶ್ಚಂದ್ರನ ಪ್ರಕಾರ ಹೊಲೆತನ ಕೆಂಡದಂತೆ, ಬೆಂಕಿಯಂತೆ, ಬೆಂಕಿಯನ್ನು ಪವಿತ್ರವಾದದ್ದು ಎಂದೂ ಗುರುತಿಸುವರು. ಈ ಹಿನ್ನೆಲೆಯಲ್ಲಿ ಮುಟ್ಟಬಾರದ್ದು ಎಂದರೇ ಅದು ಹೊಲೆಯಲ್ಲ ಅದು ಪವಿತ್ರವಾದದ್ದು ಸಹ ಆಗಿದೆ ಅಥವಾ ಆಗಿರಬಹುದು- ಎಂದು. ಇನ್ನು ರಾಜನನ್ನು/ಪ್ರಭುತ್ವವನ್ನು ಗಾನರಾಣಿಯರು ಪ್ರಶ್ನೆ ಮಾಡುವ ಚಿತ್ರಣ ಬಹಳ ವಿಶೇಷವಾದದ್ದು. ನಿಜದಿಂ ಭೂಪರೆಂಬರವಿವೇಕಿಗಳ್, ಓಲಗಿಸಿ ಬಾಳ್ವುದು ಕಷ್ಟಂ ಇಳಾಧಿನಾಥರಂ ಎಂದು ಪಂಪನು, ಆನೀ ಬಿಜ್ಜಳಂಗಂಜುವೆನೇ ಎಂದು ಬಸವಣ್ಣನು ಕೇಳುವ ಪ್ರಶ್ನೆಗಳು ಸಹ ಈ ಬಗೆಯವೇ ಆದರೇ, ಇಲ್ಲಿನ ವಿಶೇಷ ಏನೆಂದರೆ, ಇಲ್ಲಿ ಪ್ರಶ್ನಿಸುತ್ತಿರುವವರು ಕವಿಗಳು, ರಾಜಪರಿವಾರದವರು ಅಲ್ಲ ಬದಲಾಗಿ ಸಾಮಾನ್ಯ ಹೊಲತಿಯರು. ಮುಂದುವರೆದು ವೀರಬಾಹುಕನ ಪ್ರಸಂಗಕ್ಕೆ ಬರುವುದಾದರೆ, ಹರಿಶ್ಚಂದ್ರನು ಹಣವುಳ್ಳವರು ಯಾರಾದರೂ ಕೊಂಡುಕೊಳ್ಳಬಹುದು ಎಂದು ತನ್ನನ್ನು ತಾನು ಮಾರಾಟಕ್ಕೆ ಇಟ್ಟುಕೊಂಡಾಗ ಅವನನ್ನು ಕೊಳ್ಳಲು ಬಂದ ಅನಾಮಿಕನು ಕೊಡುವಾತನಾರು ಬೆಲೆಯೇನು ಮಾರಿಸಿಕೊಂಬ ಪೊಡವೀಶನೆಂಬನಾರೋ ವೀರಬಾಹುಕ ಕೇಳ್ದಡೆ ಕೊಂಬನೀಗಳೆ ಎಂದಾಗ ಹರಿಶ್ಚಂದ್ರನು ಬೆರಗಾಗಿ, ಸೊರ್ಯವಂಶದಲಿ ಹುಟ್ಟಿ ಮೃಡಮೂರ್ತಿ ವಾಸಿಷ್ಠಮುನಿಯ ಕಾರುಣ್ಯಮಂ ಪಡೆದೆನ್ನನೀ ಹೊಲೆಯನಿರಿಸಿಕೊಂಡಪೆನೆಂದು ನುಡಿವ ಬಲುಹಂ ನೋಡು ನೋಡೆಂದು ಕೋಪಿಸಿಕೊಳ್ಳುವನು. ಅಂದರೆ ತನ್ನನ್ನು ಯಾರಾದರೂ ಉತ್ತಮಕುಲದವರು ಮಾತ್ರ ಕೊಂಡುಕೊಳ್ಳಬೇಕೆಂಬುದು ಹರಿಶ್ಚಂದ್ರನ ನಿರೀಕ್ಷೆ. ಆದರೆ, ತನ್ನ ಮಕ್ಕಳನ್ನು ಹೊಲೆಯರೆಂದು ಅವಮಾನಿಸಿದ ಹರಿಶ್ಚಂದ್ರನನ್ನು ಹೊಲೆಯರ ಸೇವೆ ಮಾಡುವಂತೆ ಮಾಡಿ ಸೇಡು ತೀರಿಸಿಕೊಳ್ಳಬೇಕೆಂದು ಪ್ರತಿಜ್ಞೆ ಮಾಡಿದ್ದ ವಿಶ್ವಾಮಿತ್ರನ ಕಾರಣವಾಗಿ ಹರಿಶ್ಚಂದ್ರನ ನಿರೀಕ್ಷೆ ಸಫಲವಾಗುವುದಿಲ್ಲ. ವೀರಬಾಹುಕನು ಬಂದು ಹರಿಶ್ಚಂದ್ರನನ್ನು ತನ್ನ ಮಾತುಗಳಿಂದ ಕಟ್ಟಿಹಾಕುವನು. …..ಕೀಳಮೇಲಂ ನೋಡದೇ ಕೀಳಾರು ಮೇಲಾರು ಹದುಳಿಪ್ಪ ನಾನು ಚಾಂಡಾಳನೋ ಹುಸಿಯ ಹೊಲೆಯಂ ಹೊರುವ ನೀನು ಚಾಂಡಾಳನೋ ಎಂಬ ವೀರಬಾಹುಕನ ಪ್ರಶ್ನೆಗಳು ಮೇಲೆ ಹೇಳಿದಂತೆ ಮತ್ತೆ ಹುಸಿನುಡಿಯುವುದೇ ಹೊಲೆತನ ಎನ್ನುವ ಮೂಲಕ ಹೊಲೆತನದ ಮರುವ್ಯಾಖ್ಯಾನವನ್ನು ಮಾಡುವುದಷ್ಟೇ ಅಲ್ಲದೇ, ಹರಿಶ್ಚಂದ್ರನನ್ನು ಬಹಳ ಮಾರ್ಮಿಕವಾಗಿ ಚುಚ್ಚುವ ಪ್ರಯತ್ನವನ್ನು ಮಾಡುತ್ತವೆ. ಇದರಿಂದ ಹರಿಶ್ಚಂದ್ರ ಮರುಮಾತನಾಡದೇ ವೀರಬಾಹುಕನಿಗೆ ತನ್ನನ್ನು ತಾನು ಮಾರಿಕೊಳ್ಳಬೇಕಾಗುತ್ತದೆ. ಹಿಂದೆ ಚರ್ಚಿಸಿದಂತೆ, ಹರಿಶ್ಚಂದ್ರನ ಸತ್ಯಸಂಧತೆಗೆ ಮೆಚ್ಚಿ ಶಿವನು ಪ್ರತ್ಯಕ್ಷನಾದಾಗ ಹರಿಶ್ಚಂದ್ರನು ತನ್ನ ತಪ್ಪಿಗಾಗಿ ಪಶ್ಚಾತ್ತಾಪ ಪಡುತ್ತಾನೆ. ಶಿವನು ಘನ ಸತ್ಯವೇ ಜೀವವೆಂದಿರ್ದ ನಿನ್ನ ಹೊಲೆಯನ ಸೇವೆ ಗುರುಸೇವೆ ಹೊತ್ತ ಹೊಲೆವೇಷ ಪಾವನಪುಣ್ಯ ವೇಷ ಸುಡುಗಾಡ ರಕ್ಷಿಸಿದಿರವು ತಾ ಯಜ್ಞರಕ್ಷೆಯಿರವು …….. ಮುಂತಾಗಿ ಹೇಳುತ್ತಾ ಹೊಲೆತನದ ಲಕ್ಷಣಗಳನ್ನೆಲ್ಲಾ ಗುರುಸೇವೆಗೆ ಯಜ್ಙರಕ್ಷೆಗೆ ಸಮ ಎಂದು ಹೇಳಿ ಹರಿಶ್ಚಂದ್ರನಿಗೆ ಸಮಾಧಾನ ಮಾಡುವನು. ಶಿವನು ಸಹ ಹೊಲೆತನದ ಕುರಿತು ಹೇಳುತ್ತಾ, ಅತಿ ಹುಸಿವ ಯತಿ ಹೊಲೆಯ ಹುಸಿಹದಿಹ ಹೊಲೆಯನುನ್ನತಯತಿವರನು ಹುಸಿದುಮಾಡುವ ಮಹಾಯಜ್ಙ ಶತವೆಯ್ದೆ ಪಂಚಪಾತಕ…. ಎನ್ನುವನು. ಶಿವನ ಈ ಮಾತುಗಳು ಒಂದು ವಿಧದಲ್ಲಿ ಹೊಲೆತನದ ಕುರಿತ ಅಧಿಕೃತ ಹೇಳಿಕೆಗಳು ಎಂದು ಭಾವಿಸಿಕೊಳ್ಳಬಹುದು. ಅದೇ ಸಂದರ್ಭದಲ್ಲಿ ಈ ಮಾತುಗಳು ಹರಿಶ್ವಂದ್ರನನ್ನು ಸಮಾಧಾನಪಡಿಸಲು ಹೇಳಿದವು ಎಂಬುದನ್ನು ಸಹ ನಾವು ಮರೆಯಬಾರದು. ಹೀಗೆ ರಾಘವಾಂಕನ ಹರಿಶ್ಚಂದ್ರ ಚಾರಿತ್ರ್ಯವನ್ನು ಒಂದು ಆಯಾಮದಲ್ಲಿ, ಗಾನರಾಣಿಯರ ಹುಟ್ಟಿನ ಸಂಬಂಧದ ಹೊಲೆತನದ ಚರ್ಚೆ, ಗಾನರಾಣಿಯರ ಮೂಲಕ ಪ್ರಭುತ್ವ ವಿರೋಧಿ ನಿಲುವುಗಳ ಮಂಡನೆ, ಪ್ರಜಾಪ್ರಭುತ್ವದ ಚಿಂತನೆ, ವೀರಬಾಹುಕನ ಪ್ರಸಂಗದ ಹೊಲೆತನದ ಚರ್ಚೆ, ಮುಂದೆ ಶಿವಮುಖವಾಗಿ ರಾಘವಾಂಕನು ಹೊಲೆತನವೆಂದರೇನೆಂದು ಹೇಳಿಸುವುದು, ಹೊಲೆತನವನ್ನು ಪವಿತ್ರವೆಂದು ಪರಿಗಣಿಸಲ್ಪಡುವ ಕೆಂಡಕ್ಕೆ ಹೊಲಿಸುವುದು, ಕಡೆಗೆ ಹರಿಶ್ಚಂದ್ರನ ಶಿವ ಸಾಕ್ಷಾತ್ಕಾರಕ್ಕೆ ಹೊಲೆತನವೇ ಮಾರ್ಗವಾಗುವುದನ್ನು ನಾವು ಗಮನಿಸಬಹುದು. ಇದಕ್ಕೆ ಇನ್ನೊಂದು ಆಯಾಮವೂ ಇದೆ. ಅದು ಇದಕ್ಕೆ ವ್ಯತಿರಿಕ್ತವಾದದ್ದು. ಹೇಗೆಂದರೇ, ಕೃತಿಯ ಕೊನೆಯ ಅಧ್ಯಾಯದಲ್ಲಿ ಇಷ್ಟೂ ಕತೆಯೂ ಸುಳ್ಳು ಎಂಬಂತಹ ನಿರೂಪಣೆ ಬರುತ್ತದೆ. ಗಾನರಾಣಿಯರು, ಹರಿಶ್ಚಂದ್ರನು ಹೊಲೆಯನ ಸೇವೆ ಮಾಡಿದ್ದು, ಹರಿಶ್ಚಂದ್ರನು ಸ್ಮಶಾನವನ್ನು ಕಾಯ್ದದ್ದು ಇವೆಲ್ಲವೂ ಸುಳ್ಳು ಎಂದಾಗುತ್ತದೆ. ಯಾವ ಸಮಾನತೆಯ, ಕ್ರಾಂತಿಕಾರಕತೆಯ ಹಿನ್ನೆಲೆಯಲ್ಲಿ ಇದುವರೆಗೂ ಕಾವ್ಯವನ್ನು ಅಧ್ಯಯನ ಮಾಡಲಾಗಿತ್ತೋ ಅದೆಲ್ಲ ಇಲ್ಲಿ ತಲೆಕೆಳಗಾಗುತ್ತದೆ. ಈ ಎರಡೂ ಆಯಾಮಗಳ ಸರಿ – ತಪ್ಪುಗಳ ಈಚೆ - ಆಚೆಗೆ ಹರಿಶ್ಚಂದ್ರ ಚಾರಿತ್ರ್ಯವನ್ನು ಮರು ಓದಿಗೆ ಒಳಪಡಿಸುವ ಸಾಧ್ಯತೆಗಳು ನಮ್ಮ ಮುಂದಿವೆ. ಗ್ರಂಥ ಋಣ: ೧) ನುಗಡೋಣಿ ಅಮರೇಶ. ಹರಿಶ್ಚಂದ್ರ ಚಾರಿತ್ರ ಸಾಂಸ್ಕೃತಿಕ ಮುಖಾಮುಖಿ. ಹಂಪಿ: ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ. ೨೦೧೪. ೨) ಶ್ರೀಕಂಠಯ್ಯ ಬಿ.ಎಂ. ಹರಿಶ್ಚಂದ್ರ ಕಾವ್ಯ ಸಂಗ್ರಹ : ಮೈಸೂರು : ಪ್ರಸಾರಾಂಗ ಮೈಸೂರು ವಿ. ವಿ. ೩) ಶರ್ಮಾ, ಎನ್‌ ರಂಗನಾಥ. ರಾಘವಾಂಕನ ಹರಿಶ್ಚಂದ್ರ ಚರಿತೆ(ಗದ್ಯಾನುವಾದ). ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌. ೧೯೭೨. ವರುಣ್‌ ರಾಜ್‌ ಜಿ. ಸಂಶೋಧನಾರ್ಥಿ ಡಾ. ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು - ೫೭೨೧೦೩ # ೯೪೪೮೨೪೧೪೫೦

Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.