ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಗುರು ; ಒಂದು ಅವಲೋಕನ (ಪರಿಷ್ಕೃತ ಪ್ರಕಟಣೆಗಾಗಿ)

ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಗುರು ; ಒಂದು ಅವಲೋಕನ (ಪರಿಷ್ಕೃತ ಪ್ರಕಟಣೆಗಾಗಿ)
ಹಲವು ಧರ್ಮ, ಮತ, ಪಂಥಗಳು ಹಾಗೂ ಬಹಳ ಶ್ರೀಮಂತವಾದ ಹಾಗೂ ಪ್ರಾಚೀನವಾದ ಆಧ್ಯಾತ್ಮಿಕ ಪರಂಪರೆ ಭಾರತದಲ್ಲಿದೆ. ಈ ಆಧ್ಯಾತ್ಮಿಕತೆ  ತಲೆಮಾರಿನಿಂದ ತಲೆಮಾರಿಗೆ  ಹರಿದು ಬಂದಿರುವುದು ಗುರು – ಶಿಷ್ಯ ಪರಂಪರೆಯ ಮೂಲಕ. ಈ ಕಾರಣದಿಂದ ಇಲ್ಲಿನ ಆಧ್ಯಾತ್ಮಿಕ ಪರಂಪರೆಯಲ್ಲಿ ʼಗುರುʼವಿಗೆ ಹೆಚ್ಚು ಮಾನ್ಯತೆ ಹಾಗೂ ಮಹತ್ವ ನೀಡಲಾಗಿದೆ. 
ಯಾವುದೇ ಧರ್ಮ, ಅಥವಾ ಪಂಥದ ಜ್ಞಾನ ಹಾಗೂ ಸಿದ್ಧಾಂತವು ಮುಂದಿನ ಪೀಳಿಗೆಗೆ ಒಬ್ಬರಿಂದ ಒಬ್ಬರಿಗೆ ಹರಿದು ಬರುತ್ತದೆ. ಈ ಜ್ಞಾನದ ಹರಿವಿನಲ್ಲಿ ಗುರುವಿನ ಪಾತ್ರ ಅತ್ಯಂತ ಮಹತ್ವದ್ದು. ತಾನು ಕೇವಲ ಒಂದು ಸಿದ್ಧಾಂತವನ್ನು ಅಥವಾ ಜ್ಞಾನವನ್ನು ತಲುಪಿಸುವ ಮಾಧ್ಯಮವಾಗಿ ಮಾತ್ರ ಕಾರ್ಯ ನಿರ್ವಹಿಸದೇ, ಆ ಜ್ಷಾನವನ್ನು ಕಾಲಕಾಲಕ್ಕೆ ಪರಿಷ್ಕರಿಸಿ, ಪಕ್ವಗೊಳಿಸುತ್ತಾ ಮುಂದಿನ ತಲೆಮಾರುಗಳಿಗೆ ದಾಟಿಸುವ ಮಹತ್ತರವಾದ ಕಾರ್ಯವನ್ನು ಗುರು ಕೈಗೊಳ್ಳುವನು. 
 ʼಗುರುʼ ಎಂದರೆ ಉಪಾಧ್ಯಾಯ, ಪುರೋಹಿತ, ಹಿರಿಯ, ಬೃಹಸ್ಪತಿ, ಮಠದ ಅಧಿಪತಿ, ಘನವಾದ, ಭಾರವಾದ ಆಚಾರ್ಯ, ಪ್ರಭಾವಿ ವ್ಯಕ್ತಿತ್ವದ, ಸಮೃದ್ಧ ವ್ಯಕ್ತಿತ್ವದ, ಜ್ಞಾನದಿಂದ ಆವೃತ್ತವಾಗಿರುವ, ಭಾರವಾದ, ಘನವಾದ ಇತ್ಯಾದಿ ಅರ್ಥಗಳನ್ನು ಹೇಳಬಹುದು. ʼಅದ್ವಯಾ ತಾರಕಾʼ ಎಂಬ ಉಪನಿಷತ್ತು ʼಗುರುʼಪದೋತ್ಪತ್ತಿಯನ್ನು “ಗುಕಾರೋಂಧಕಾರತ್ವಾತ್‌ ರುಕಾರೋ ತನ್ನಿವಾರಕಃ” ಎಂದು ವಿವರಿಸಿದೆ. ಇದರ ಅರ್ಥ ʼಗುʼಅಂದರೆ ʼಅಂಧಕಾರʼ, ಹಾಗೂ ʼರುʼ ಅಂದರೆ ʼನಾಶಪಡಿಸುವʼ ಅರ್ಥಾತ್ ʼಆತ್ಮಾಂದಕಾರವನ್ನು ಆಧ್ಯಾತ್ಮಿಕ ಬೆಳಕಿನಿಂದ ತೊಲಗಿಸುವ ವ್ಯಕ್ತಿಯೇ ಗುರು” ಎಂದು. ʼಗುರು ಗೀತಾʼ ದಲ್ಲಿ ʼಗುಣಗಳನ್ನು ಅತಿಶಯಿಸುವ ಪ್ರವೃತ್ತಿಯನ್ನು ಅನುಗ್ರಹಿಸುವನು ಗುರುʼ ಎಂಬ ಅರ್ಥದಲ್ಲಿ ʼಗುರುʼ ಪದೋತ್ಪತ್ತಿಯನ್ನು ವಿವರಿಸುತ್ತದೆ. 
ಗುರು ಪರಂಪರೆಯ ಮೂಲವನ್ನು ಹುಡುಕುವುದು ಕಷ್ಟದ ಕೆಲಸ. ಋಷಿ ಮೂಲವನ್ನು ನದಿ ಮೂಲವನ್ನು ಹುಡುಕಬಾರದೆಂಬ ಮಾತು ಈ ಹಿನ್ನೆಲೆಯಲ್ಲಿಯೇ ಬಂದಿರಬಹುದು. ಮೇಲೆ ಚರ್ಚಿಸಿರುವಂತೆ ಭಾರತದಲ್ಲಿ ಹಲವಾರು ವಿಭಿನ್ನ ದರ್ಶನ, ಧಾರೆಗಳು ಅದರಲ್ಲಿ ಮತ್ತಷ್ಟು ಒಳಪಂಥಗಳು ಇವೆ. ಹಾಗೂ ಇವೆಲ್ಲವುಗಳಿಗೂ ತಮ್ಮದೇ ಆದ ತತ್ವ, ನಂಬಿಕೆ, ಆಚರಣೆಗಳಿವೆ ಮತ್ತು ಇವನ್ನು ಅನುಸರಿಸುವ ತಲೆಮಾರಿನಿಂದ ತಲೆಮಾರಿಗೆ ತಲುಪಿಸುವ ಗುರು- ಶಿಷ್ಯ ಪರಂಪರೆಯು ಇದೆ. 
ಪ್ರಾಚೀನ ತತ್ವಜ್ಞಾನಿಯಾದ ಸಾಕ್ರೆಟೀಸನಿಂದಲೂ ಗುರು ಪರಂಪರೆಯನ್ನು ಗುರುತಿಸಬಹುದು. ಸಾಕ್ರೆಟೀಸನ ಶಿಷ್ಯ ಪ್ಲೇಟೋ, ಪ್ಲೇಟೋನ ಶಿಷ್ಯ ಅರಿಸ್ಟಾಟಲ್‌, ಅರಿಸ್ಟಾಟಲ್‌ ನ ಶಿಷ್ಯ ಅಲೆಗ್ಸ್ಯಾಂಡರ್‌ ಹೀಗೆ. ಜೀಸಸ್‌ ಕ್ರೈಸ್ತನಿಗೆ ೧೨ ಜನರ ಶಿಷ್ಯರು ಇದ್ದದ್ದು ಹಾಗೂ ಇವರ ಕ್ರೈಸ್ತನ ಸಂದೇಶವನ್ನು ಜನರಿಗೆ ತಲಿಪಿಸಿದ್ದು ನಮಗೆಲ್ಲಾ ತಿಳಿದಿರುವ ವಿಚಾರವೇ. ಇಂದಿಗೂ ʼಪೋಪ್‌ʼ ಎಂದು ಕರೆಯಲ್ಪಡುವ ಕ್ರೈಸ್ತ ಧರ್ಮಗುರುಗಳು ವ್ಯಾಟಿಕನ್‌ ನಗರದಲ್ಲಿ ಇರುವರು. ಇದಲ್ಲದೇ ಕ್ರೈಸ್ತ ಧರ್ಮದ ಚರ್ಚ್ಗಳಲ್ಲಿರುವ ಫಾದರ್ ಗಳು ಸಹಾ ಒಂದು ರೀತಿಯ ಗುರುಗಳೇ ಆಗಿದ್ದು ಅವರದೇ ಆದ ಗುರು ಶಿಷ್ಯ ಪರಂಪರೆ ಅಸ್ಥತ್ವದಲ್ಲಿದೆ. 
ಇನ್ನು ಜಗತ್ತಿನ ಎರಡನೇ ದೊಡ್ಡ ಧರ್ಮವೆಂದು ಹೇಳಲಾಗುವ ʼಇಸ್ಲಾಂʼ ಧರ್ಮದಲ್ಲಿಯೂ ಸಹಾ ಗುರು ಶಿಷ್ಯ ಪರಂಪರೆ ಇದೆ. ಸಿಖ್‌ ಧರ್ಮದಲ್ಲಿ ಗುರು ನಾನಕ್‌ ದೇವ, ಅಂಬಾದ್‌ ದೇವ, ಗುರು ಅಮರ್‌ ದಾಸ್, ಗುರು ರಾಮ್‌ ದಾಸ್‌, ಗುರು ಅರ್ಜುನ ದೇವ, ಮುಂದಾದ ಹತ್ತು ಜನ ಗುರು ಶಿಷ್ಯರ ಪರಂಪರೆಯನ್ನು ಗುರುತಿಸುವರು.  
ʼಸ್ಪಿರುಚುಯಲ್‌ ಮಾಸ್ಟರ್ʼ (ಆಧ್ಯಾತ್ಮಿಕ ಗುರು) ಎಂದು ಕರೆಯಲ್ಪಡುವ ಗುರುಗಳು ಮತ್ತು ಅವರ ಶಿಷ್ಯ ಪರಂಪರೆಯನ್ನು ಪಾಶ್ಚಾತ್ಯರಲ್ಲಿ ಗುರುತಿಸಬಹುದು. ಪ್ರಮುಖವಾಗಿ ಗುರು ಮೇ ಲಿಂಗ್‌, ಮಾಸ್ಟರ್‌ ಜೀ ಗಂಗ್‌ ಶಾ, ಮಾಸ್ಟರ್‌ ಮಿಕಾವೋ ಉಸೂಯಿ, ಮಾಸ್ಟರ್‌ ಚೋಆ ಕೋಕ್‌ ಸುಯಿ, ರೊಂಡಾ ಬೈನಿ ಮುಂತಾದ ಹಲವು ಆಧ್ಯಾತ್ಮಿಕ ಗುರುಗಳ ಪರಂಪರೆಯನ್ನು ಗುರುತಿಸಬಹುದು. ಭಾರತದವರೇ ಆದ‌ ವಿವೇಕಾನಂದರು, ರಮಣ ಮಹರ್ಷಿಗಳು, ಕಂಚಿಯ ಪರಮಾಚಾರ್ಯರು, ಶ್ರೀಧರ ಸ್ವಾಮಿಗಳು, ಪರಮಹಂಸ ಯೋಗಾನಂದ, ಸ್ವಾಮಿ ಶಿವಾನಂದ ಸರಸ್ವತಿ, ಸ್ವಾಮಿ ತಪೋವನ ಮಹಾರಾಜ್‌, ಸ್ವಾಮಿ ಚಿನ್ಮಯಾನಂದ ಸರಸ್ವತಿ, ಶ್ರೀ ಅರೋಬಿಂದು, ಶಿವ ಸುಭ್ರಮಣಿ ಸ್ವಾಮಿ, ಸ್ವಾಮಿ ರಾಮ, ದೀಪಕ್‌ ಚೋಪ್ರಾ, ಓಶೋ, ಶ್ರೀ ರವಿಶಂಕರ್‌, ಜಗ್ಗಿ ವಾಸುದೇವ್, ಮಾತಾ ಅಮೃತಾನಂದ ಮಯಿ, ಪ್ರಭಾಕರ್‌ ಗುರೂಜಿ, ಮುಂತಾದವರು ವಿದೇಶಗಳಲ್ಲಿಯೂ ಸಹಾ ಸ್ಪಿರುಚುಯಲ್‌ ಮಾಸ್ಟರ್‌ ಗಳಾಗಿ ತಮ್ಮ ಗುರು ಶಿಷ್ಯ ಪರಂಪರೆಯನ್ನು ವಿಸ್ತರಿಸಿರುವರು. ಭಾರತದಲ್ಲಿ ಚಾರ್ವಾಕ, ಆಜೀವಿಕ, ಮಕ್ಕಲೀ ಗೋಸಾಲ ಮುಂತಾದ ಅವೈದಿಕ ಗುರುಗಳು ಮತ್ತು ಅವರ ಶಿಷ್ಯಪರಂಪರೆ ಪ್ರಾಚೀನ ಕಾಲದಲ್ಲಿ ಇದುದ್ದನ್ನು ಗುರುತಿಸಲಾಗಿದೆ. ಭಾರತದಲ್ಲಿ ಪ್ರಮುಖವಾಗಿ ಚಾರ್ವಾಕ, ಬೌದ್ಧ, ಜೈನ, ಪಾಶುಪತ, ಶೈವ, ಪ್ರತ್ಯಾಭಿಜ್ಞ, ರಸೇಶ್ವರ, ವೈಶೇಷಿಕ, ನೈಯ್ಯಾಯಿಕ, ಜೈಮಿನಿ, ಪಾಣಿನಿ, ಸಾಂಖ್ಯೆ, ಯೋಗ, ಅದ್ವೈರ, ವಿಶಷ್ಟಾದ್ವೈತ, ಮತ್ತು ದ್ವೈತ ಎಂಬ ೧೬ ಮತ್ತೂ ಅದಕ್ಕೂ ಹೆಚ್ಚು ದರ್ಶನಗಳನ್ನು ಗುರುತಿಸಲಾಗಿದೆ. ಈ ಎಲ್ಲಾ ದರ್ಶನಗಳಲ್ಲಿಯೂ ಸಾಮಾನ್ಯವಾಗಿ ಗುರು ಶಿಷ್ಯ ಪರಂಪರೆಯ ಇದೆ. 
ಇನ್ನು ಶೈವ ಪಂಥದಲ್ಲಿ ಪ್ರಮುಖವಾಗಿ ೬೩ ಪುರಾತನರು ಬರುತ್ತಾರೆ. ಇವರನ್ನೇ ಅನುಸರಿಸಿ ಬಂದ ಅಲ್ಲಮನ ನೇತೃತ್ವದ ವಚನ ಸಾಹಿತ್ಯದ ಕಾಲಘಟ್ಟದಲ್ಲಿ ಗುರು ಪರಂಪರೆಗೆ ಮತ್ತಷ್ಟು ಮಹತ್ವ ಸಿಕ್ಕಿತು.. ವೀರಶೈವ ಮತ್ತು ಲಿಂಗಾಯುತ ದರ್ಶನಗಳಲ್ಲಿ ಗುರು ಲಿಂಗ ಜಂಗಮಗಳಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿತ್ತಲ್ಲದೇ ಹಲವಾರು ಜನ ವಚನಕಾರರು ಗುರುವಿನ ಮಹತ್ವವನ್ನು ತಮ್ಮ ವಚನಗಳ ಮೂಲಕ ವಿವರಿಸಿರುವುದನ್ನು ನೋಡಬಹುದು. ಅಲ್ಲಮನ ಶೂನ್ಯ ಸಿಂಹಾಸನ ಪೀಠದ ಶಿಷ್ಯ ಪರಂಪರೆಯಿಂದ ಬಂದ ಹಲವು ವೀರಶೈವ ಹಾಗೂ ಲಿಂಗಾಯುತ ಮಠಗಳು ಕರ್ನಾಟಕದಲ್ಲಿವೆ ಅದ್ವೈತ ಸಿದ್ದಾಂತದಲ್ಲಿ ಗುರುವಿನ ಮಹತ್ವವನ್ನು ಪರಿಪರಿಯಾಗಿ ವಿವರಿಸಿದ್ದು ಗುರುಶಿಷ್ಯ ಪರಂಪರೆಗೆ ಅದರಲ್ಲಿಯೂ ಗುರು ಪ್ರಧಾನವಾದ ಆಧ್ಯಾತ್ಮಿಕ ಪರಂಪರೆಗೆ ಅದ್ವೈತದ ಕೊಡುಗೆ ಬಹಳಷ್ಟಿದೆ. 
ಇನ್ನು ಜೈನ ಧರ್ಮದಲ್ಲಿ ಆದಿ ದೇವ ನನ್ನು ಮೊದಲುಗೊಂಡು ಮಹಾವೀರನ ವರೆಗೆ ೨೩ ಜನ ತೀರ್ಥಂಕರರ ಪರಂಪರೆ ಇದೆ. ಅದ್ವೈತ ಮತ ಪ್ರಚಾರಕರಾದ ಶಂಕರಾಚಾರ್ಯರನ್ನು ಆದಿ ಗುರು ಎಂದೇ ಕರೆಯುವರು. ಶಂಕರಾಚಾರ್ಯರಿಗೆ ಗೌಡ ಪಾದರು, ಗೋವಿಂದ ಭಗವತ್ಪಾದರಂತಹಾ ಗುರು ಪರಂಪರೆಯಿದ್ದರೆ ಹಸ್ತಮಲಕಾಚಾರ್ಯ, ತೋಟಕಾಚಾರ್ಯ, ಸುರೇಶ್ವರಾಚಾರ್ಯ, ಪದ್ಮಪಾದಾಚಾರ್ಯ, ಮೊದಲಾದ ಶಿಷ್ಯ ಪರಂಪರೆ ಇದಿತ್ತು. ಇನ್ನು ವಿಶಿಷ್ಟಾದ್ವೈತ ಮತ ಪ್ರಚಾರಕರಾದ ಶ್ರೀ ರಾಮಾನುಜಾಚಾರ್ಯರಿಗೆ ಯಾದವ ಪ್ರಕಾಶರು ಮತ್ತು ಯಮುನಾಚಾರ್ಯರೆಂಬ ಗುರುಗಳು ಹಾಗೂ, ಅಂಕ, ದ್ರಾವಿಡ, ಗುಹದೇವ, ಕಪರ್ದಿ, ಭಾರುಚಿ, ಬೋಧಯನ ಮೊದಲಾದ ಪೂರ್ವಾಚಾರ್ಯ ಪರಂಪರೆ ಹಾಗೂ ಶ್ರೀ ಪಿಳ್ಳೈ ಲೋಕಾಚಾರ್ಯ, ಹಾಗೂ ವೇದಾಂತ ದೇಶಿಕರಂತಹಾ ಶಿಷ್ಯರ ಪರಂಪರೆ ಇದುದ್ದನ್ನು ಗಮನಿಸಬಹುದು.  
ದ್ವೈತ ಮತ ಪ್ರಚಾರಕರಾದ ಮದ್ವಾಚಾರ್ಯರಿಗೆ ಪದ್ಮನಾಭ ತೀರ್ಥ, ನರಹರಿ ತೀರ್ಥ, ಸೇರಿದಂತೆ ಹಲವರ ಶಿಷ್ಯ ಪರಂಪರೆ ಇದ್ದು, ಇವರದ್ದೇ ಶಿಷ್ಯ ಪರಂಪರೆಯ ೮ ಮಠಗಳು ಉಡುಪಿಯಲ್ಲಿಯೂ ಉತ್ತರಾದಿ ಮಠ, ವ್ಯಾಸರಾಯರ ಮಠ, ರಾಘವೇಂದ್ರ ಮಠ ಮುಂತಾದ ಕೆಲವು ಮಠಗಳು ಮೂಲಕ ಮದ್ವಾಚಾರ್ಯರ ಶಿಷ್ಯ ಪರಂಪರೆ ದ್ವೈತ ಮತ ಪ್ರಸಾರದಲ್ಲಿ ತೊಡಗಿರುವುದನ್ನು ಗುರುತಿಸಬಹುದು. 
ಇದಲ್ಲದೇ ವೇದವನ್ನು ಸೃಷ್ಠಿಸಿದ ಬ್ರಹ್ಮ, ವೇದ ಪುರಾಣಗಳನ್ನು ಸಂಕಲಿಸಿದ ವ್ಯಾಸರನ್ನು ಗುರು ಎಂದು ಕರೆಯುವರು. ದಕ್ಷಿಣಾಮೂರ್ತಿ, ದೇವಗುರು ಬೃಹಸ್ಪತಿ, ರಾಕ್ಷಸ ಗುರು ಎನಿಸಿದ ಶುಕ್ಲಾಚಾರ್ಯ, ಅಗಸ್ತ್ಯ, ವಸಿಷ್ಠಿ ಮೊದಲಾದ ಸಪ್ತ ಋಷಿಗಳು, ಜಗದ್ಗುರು ಎನಿಸಿದ ಕೃಷ್ಣ, (ಕೃಷ್ಣಂ ವಂದೆ ಜಗದ್ಗುರುಂ), ಇವರನ್ನೆಲ್ಲಾ ಗುರು ಸ್ಥಾನದಲ್ಲಿ ನೋಡಲಾಗಿದೆ. ಕೃಷ್ಣನಿಗೆ ಸಾಂದೀಪನಿ, ರಾಮನಿಗೆ ವಸಿಷ್ಟ, ಮೊದಲದವರ ಗುರು ಪರಂಪರೆಯನ್ನು ಸಹಾ ಪುರಾಣಗಳಲ್ಲಿ ಗಮನಿಸಬಹುದು. 
ʼಆದಿ ಗುರುʼ ಎಂದೇ ಕರೆಯಲ್ಪಡುವ ಶಂಕರ ಭಗವತ್ಪಾದರು ʼಗುರು ಅಷ್ಟಕಂʼʼಗುರು ಸ್ತೂತ್ರಂʼ ʼಗುರು ಪಾಧುಕಾ ಸ್ತೂತ್ರʼಗಳನ್ನು ಗುರುವಿನ ಮಹಿಮೆಯನ್ನು ಸಾರುವ ಉದ್ದೇಶದಿಂದ ರಚಿಸಿದ್ದು, ದಕ್ಷಿಣಾಮೂರ್ತಿ ಸ್ತೂತ್ರ ಹಾಗೂ ʼʼಭಜ ಗೋವಿಂದʼʼ ಗೀತೆಯಲ್ಲಿಯೂ ಸಹಾ  ಗುರುವಿನ ಮಹತ್ವವನ್ನು ಗುರುವಿನ ಶಕ್ತಿಯನ್ನು ವಿವರಿಸಿದ್ದಾರೆ. “ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ/ ಗುರು ಸಾಕ್ಷಾತ್‌ ಪರಬ್ರಹ್ಮಃ ತಸ್ಮೈ ಶ್ರೀ ಗುರುವೇ ನಮಃ” ಎಂಬ ಶ್ಲೋಕವು ಶಂಕರಾಚಾರ್ಯರ ʼಅಖಂಡಮಂಲಾಕಾರಂʼ ಎಂದು ಪ್ರಾರಂಭವಾಗುವ ʼಗುರು ಸ್ತೂತ್ರ” ದಲ್ಲಿದೆ. ಇದೇ ಸೂತ್ರದಲ್ಲಿ ಗುರುವನ್ನು “ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ“ (ಅಜ್ಞಾನವೆಂಬ ಕತ್ತಲೆಯಿಂದ ಅಂಧನಾದವನ ಕಣ್ಣನ್ನು ಜ್ಞಾನವೆಂಬ ಅಂಜನ ಶಾಕೆಯಿಂದ ಬಿಡಿಸಿದ ಶ್ರೀ ಗುರುವಿಗೆ ನಮಸ್ಕಾರ), “ಸರ್ವಶ್ರುತಿ ಶಿರೋ ರತ್ನವಿರಾಜಿತಪದಾಂಬುಜಃ,  ವೇದಾಂತಾಂಬುಜ ಸೂರ್ಯೋಯಸ್ತಸ್ಮೈ ಶ್ರೀ ಗುರುವೇ ನಮಃ” (ಸರ್ವ ಶೃತಿಗಳಿಗೂ ಶಿರೋ ರತ್ನವೆನಿಸಿದ ವೇದಾಂತವೆಂಬ ಅಂಬುಜವನ್ನು ಅರಳಿಸುವ ಸೂರ್ಯನಾದ ಗುರುವಿಗೆ ನಮಸ್ಕಾರ), “ನ ಗುರೋರಧಿಕಂ ತತ್ವಂ ನ ಗುರೋರಧಿಕಂ ತಪಃ” (ಗುರುವಿಗಿಂತ ಹೆಚ್ಚಿನ ತತ್ವವೂ, ಗುರುವಿಗಿಂತ ಹೆಚ್ಚಿನ ತಪವು ಇಲ್ಲ ಮುಂತಾಗಿ ಗುರುವಿನ ಮಹತ್ವವನ್ನು, ಗುರುವಿನ ಆಧಿಕ್ಯವನ್ನು ಶಂಕರಾಚಾರ್ಯರು ವಿವರಿಸುವರು. 
“ಧ್ಯಾನ ಮೂಲಂ ಗುರುಮೂರ್ತಿಃ, ಪೂಜಾ ಮೂಲಂ ಗುರು ಪಾಂ, ಮಂತ್ರ ಮೂಲಂ ಗುರು ವಾಕ್ಯಂ, ಮೋಕ್ಷ ಮೂಲಂ ಗುರು ಕೃಪ” ೭ ಎಂಬ ವಾಕ್ಯವೂ ಸಹಾ ಧ್ಯಾನ, ಪೂಜೆ, ಮಂತ್ರ ಮತ್ತು ಮೋಕ್ಷಗಳಿಗೆಲ್ಲಾ ಗುರುವೇ ಮೂಲವೆಂದು ವಿವರಿಸುತ್ತದೆ.  ಪುರಂದರದಾಸರು “ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ಪರಿ ಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ” ಎಂದು ಗುರುವಿನ ಮಹತ್ವವನ್ನು ವಿವರಿಸಿರುವರು. ಇಲ್ಲಿ ಸಕಲ ಶಾಸ್ತ್ರಗಳನ್ನು ಓದಿದರೇನು? ತನಗೆ ವಿದ್ಯ ಕಲಿಸಿದ ಗುರುವಿಗೆ ವಿಧೇಯನಾಗಿರಬೇಕೆಂದು ಪುರಂದರದಾಸರು ಹೇಳುವರು.
“ಹರ ಮುನಿದರೆ ಗುರು ಕಾಯುವನು, ಗುರು ಮುನಿದರೆ ಹರನೂ ಕಾಯಲಾರ” ಎಂಬ ಮಾತು ಸಹಾ ಗುರುವಿನ ಮಹತ್ವವನ್ನು ಸಾರುತ್ತದೆ. ಬಸವಣ್ಣ, ಚನ್ನಬಸವಣ್ಣ ಮೊದಲಾದ ಶರಣರು ಸಹಾ ಗುರುವಿನ ಮಹತ್ವವನ್ನು ತಮ್ಮ ವಚನಗಳ ಮೂಲಕ ಪರಿ ಪರಿಯಾಗಿ ವಿವರಿಸಿರುವರು. ಬಸವಣ್ಣನರು “ಮಡಕೆಯ ಮಾಡುವೆಡೆ ಮಣ್ಣೇ ಮೊದಲು, ಶಿವ ಪಥವನರಿವೋಡೆ ಗುರು ಪಥವೆ ಮೊದಲು”, “ಗುರು ಕಾರುಣ್ಯವೇ ಸದಾಚಾರ ಗುರು ಕಾರುಣ್ಯವೇ ಪ್ರಸಾದ ರುಚಿ ಮುಂದೆ ಗುರು ಹಿಂದೆ ಲಿಂಗ” ಮುಂತಾದ ವಚನಗಳ ಮೂಲಕ ಗುರುವಿನ ಮಹತ್ವವನ್ನು ವಿವರಿಸಿರುವರು. 
ಶರಣ ಆದಯ್ಯನವರು “ಶ್ರೀ ಗುರುವಿನ ಶ್ರೀ ಚರಣದಲ್ಲಿ ಅರವತ್ತೆಂಟು ತೀರ್ಥಗಳು  ನೆಲೆಸಿಪ್ಪವಾಗಿ ಎಲ್ಲಾ ತೀರ್ಥಗಳಿಗೆಯೂ ಗುರುಪಾದತೀರ್ಥವೇ ಅಧಿಕ ನೋಡಾ……..” ಎಂದು ಗುರುವಿನ ಪಾದ ತೀರ್ಥದ ಮಹತ್ವವನ್ನು ಹೇಳುವರು. 
ಸಂತ ಕಬೀರ ದಾಸರು “ಇಡೀ ಭೂಮಿಯನ್ನು ಕಾಗದವನ್ನು ಮಾಡಿ, ಕಾಡಿನ ಮರಗಳನ್ನು ಲೇಖನಿಯನ್ನಾಗಿ ಮಾಡಿ, ಏಳು ಸಮುದ್ರದ ನೀರನ್ನು ಮಸಿಯನ್ನಾಗಿ ಮಾಡಿದರೂ ಗುರುವಿನ ಮಹಿಮೆಯನ್ನು ಬರೆಯಲು ಸಾಧ್ಯವಿಲ್ಲ” ಎನ್ನುವರು. ಹಾಗೇ ಗುರು ಹಾಗೂ ದೇವರು ಈ ಈರ್ವರೂ ಒಟ್ಟಿಗೆ ನಿನ್ನ ಮುಂದೆ ಬಂದರೆ ನೀನು ಯಾರಿಗೆ ಮೊದಲು ನಮಸ್ಕರಿಸುವೆ ಎಂಬ ಪ್ರಶ್ನೆಗೆ  ಕಬೀರರು ನಾನು ಮೊದಲು ಗುರುವಿಗೇ ನಮಸ್ಕರಿಸುವೆ ಎನ್ನುತ್ತಾರೆ. 
ರಾಮಕೃಷ್ಣ ಪರಮಹಂಸರು, ಗುರುವನ್ನು ಮಾನವರ ಪಾಪವನ್ನು ತೊಳೆಯುವ ಗಂಗಾನದಿಗೆ ಹೊಲಿಸುವರು. ಹಾಗೇ ಸಿಕ್ಕ ಸಿಕ್ಕವರೆಲ್ಲ ಗುರು ಅಗಲಾರರು, ಮರದ ದಿಮ್ಮಿ ತಾನೂ ತೇಲುತ್ತಾ, ಅನೇಕ ಜೀವ ಜಂತುಗಳನ್ನು ಹೊತ್ತುಕೊಂಡು ಹೋಗುವುದು. ಆದರೆ, ಚೆಂಡಿನ ಮೇಲೆ ಹತ್ತಿ ಕುಳಿತರೇ?, ಅದಕ್ಕಾಗಿಯೇ ಯುಗಯುಗದಲ್ಲಿಯೂ ಭಗವಂತನ ರೂಪವಾಗಿ ಸಚ್ಚಿದಾನಂದ ಸ್ವರೂಪನಾಗಿ ಹುಟ್ಟಿ ಬರುವ ಗುರುವನ್ನು ಆಶ್ರಯಿಸಬೇಕು ಎಂದು ಹೇಳುವರು. 
ಸರ್ವಜ್ಞ ತನ್ನ ವಚನಗಳಲ್ಲಿ “ಬಂಧುಗಳು ಆದವರು ಬಂದುಂಡು ಹೋಗುವರು, ಭಂಧನವ ಕಳೆಯಲರಿಯರು ಗುರುವಿಂದ, ಬಂಧುಗಳು ಉಂಟೆ ಸರ್ವಜ್ಞ”. “ತಂದೆಗೂ ಗುರುವಿಗೂ ಒಂದು ಅಂತರ ಉಂಟು, ತಂದೆ ತೋರುವನು ಸದ್ಗುರುವ ಗರುರಾಯ, ಬಂಧನವ ಕಳೆವ ಸರ್ವಜ್ಞ“.ಎಂದು ಗುರುವಿನ ವಿಶೇಷವನ್ನು ಬಹಳ ಸರಳವಾಗಿ ವಿವರಿಸಿರುವನು. ಕೈವಾರ ನಾರೇಣಪ್ಪನವರು ಒಂದು ತತ್ವಪದದಲ್ಲಿ, ಗುರುವುಪದೇಶವು ಆತ್ಮ ಪ್ರಕಾಶ, ಇದು ಭವಬಂಧಗಳನ್ನು ಕಳೆದು ಮೋಕ್ಷಕ್ಕೆ ದಾರಿ ತೋರಿಸಿತು ಎಂದು ಹಾಡಿರುವರು. ಹಾಗೆ ತೆಲುಗಿನಲ್ಲಿ “ಗುರುವುಲೇನಿ ವಿದ್ಯ ಗುಡ್ಡಿ ವಿದ್ಯ”( ಗುರುವಿಲ್ಲದ ವಿದ್ಯ ಕುರುಡು ವಿದ್ಯೆ) ಎಂಬ ಮಾತಿದೆ. 
ಹೀಗೆ ಭಾರತದಲ್ಲಿ ಹರಡಿರುವ ಕೆಲವು ಗುರು ಪರಂಪರೆಗಳು, ಗುರುವಿನ ಪದದ ಉತ್ಪತ್ತಿ, ಗುರುವಿನ ಮಹತ್ವ ಹಾಗೂ ಗುರು – ಶಿಷ್ಯ ಪರಂಪರೆಯ ಸೀಮಾತೀತವಾದ ಹರಹನ್ನು ಗುರುತಿಸಬಹುದಾಗಿದೆ. 
ಗ್ರಂಥ ಋಣ :
೧ - ಲಕ್ಷ್ಮೀಪತಿ ಕೋಲಾರ. “ದಕ್ಷಿಣ ದಂಡಾಜೀವಿಕ”, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು – ೨೦೧೫
೨ – ವಿಶ್ವಂಭರ ಗಣಪತಿ ವಿಠಲ ದಾಸರು. “ಸನಾತನ ಜ್ಞಾನ ದೀಪಿಕ”, ಬೆಂಗಳೂರು : ಸುಪ್ರಕಾಶಿನಿ ಪ್ರಕಾಶನ – ೨೦೧೨
೩ – ತರೀಕೆರೆ ರಹಮತ್‌. “ಕರ್ನಾಟಕದ ಸೂಫಿಗಳು”. ಬೆಂಗಳೂರು : ಅಭಿನವ  ೧೯೯೮. 
೪- ತರೀಕೆರೆ ರಹಮತ್. “ಕರ್ನಾಟಕ ಗುರುಪಂಥ” ಹಂಪಿ : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ – ೨೦೨೦.
೫ – “ಶ್ರೀ ಯೋಗಿ ನಾರೇಯಣ ಯತೀಂದ್ರರ ಕಾಲಜ್ಞಾನ” ಕೈವಾರ : ಶ್ರೀ ಯೋಗಿ ನಾರೇಯಣ ಟ್ರಸ್ಟ್‌ - ೧೯೮೨
೬ - ಕಲ್ಬುರ್ಗಿ, ಎಂ.ಎಂ. ಸಂಕೀರ್ಣ ವಚನ ಸಂಪುಟ, ಸಮಗ್ರ ವಚನ ಸಂ.- ೬ , ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ -೨೦೦೦.
೭ – ಪ್ರಜ್ಞಾ ಶಾಸ್ತ್ರಿ.(ಬರಹ). “ವೈಧಿಕ ಅವೈಧಿಕ ದರ್ಶನ” ಬೆಂಗಳೂರು : ಋತುಮಾನ – ೨೦೨೦.
೮ - ಕೃಷ್ಣಮೂರ್ತಿ, ಮ.ಸು. “ಉತ್ತರದ ಸಂತ ಪರಂಪರೆ”. ಮೈಸೂರು : ಪ್ರಸಾರಂಗ, ಮಾನಸಗಂಗೋತ್ರಿ – ೨೦೦೩
೯ –  ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದರು, ಎ.ಸಿ. ಶ್ರೀ ಕಂಠರಾವ್‌ ವಿದ್ಯಾಭೂಷಣ (ಅನು.). “ಆತ್ಮ ಸಾಕ್ಷಾತ್ಕಾರ ವಿಜ್ಞಾನ”. ಬೆಂಗಳೂರು : ಇಸ್ಕಾನ್‌—೧೯೮೬
೧೦ – ಪರಮಹಂಸ ಯೋಗಾನಂದ, “ಯೋಗಿಯ ಆತ್ಮಕಥೆ” ಕಲ್ಕತ್ತ : ಯೋಗದಾ ಸತ್ಸಂಗ ಸೋಸೈಟಿ – ೨೦೦೬.
- ವರುಣ್‌ ರಾಜ್‌ ಜೀ,
ಸಂಶೋಧನಾರ್ಥಿ, 
ಡಾ. ಡಿ.ವಿ.ಜಿ ಕನ್ನಡ ಅಧ್ಯಯನ ಕೇಂದ್ರ. 
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.
# ೯೪೪೮೨೪೧೪೫೦. ಮಿಂಚಂಚೆ : maharishivarunrajji@gmail.com

Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.