ಅಜ್ಞಾತ ಅಚಲ ತತ್ವಪದಕಾರ ವೆಂಕಟದಾಸು (ಲೇಖನ) - ವರುಣ್ ರಾಜ್ ಜೀ.
ಅಜ್ಞಾತ ಅಚಲ ತತ್ವಪದಕಾರ ವೆಂಕಟದಾಸು
(ವೆಂಕಟದಾಸರು ಗುರುಗಳಾದ ಶ್ರೀ ವೆಂಕಟಾರ್ಯ ಸ್ವಾಮಿಗಳು)
ಕೋಲಾರ ಜಿಲ್ಲೆಯು ಶ್ರೀ ಕೈವಾರ ನಾರೇಣಪ್ಪ, ಗಟ್ಟಿಹಳ್ಳಿ ಆಂಜಿನಪ್ಪ ಬೇರಿಕಿ ಬುಟ್ಟಪ್ಪ ಭೋವಿ ವೆಂಕಟಗಿರಿಯಪ್ಪ ಮುಂತಾದ ತತ್ವಪದಕಾರರ ಸಾಧನ ಕ್ಷೇತ್ರವಾಗಿದೆ. ಈ ಪರಂಪರೆಯಲ್ಲಿ ಹಲವರು ಸಾಧಕರು ಆಗಿಹೋಗಿದ್ದು ಬಹಳಷ್ಟು ಮಂದಿ ಇಂದಿಗೂ ಅಜ್ಞಾತರಾಗಿಯೇ ಇದ್ದಾರೆ. ಇಂತಹವರ ಸಾಲಿನಲ್ಲಿ ಒಬ್ಬರಾದ ಶ್ರೀ ವೆಂಕಟದಾಸು ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕೃಷ್ಣಂನಕೊತ್ತೂರು ಗ್ರಾಮದವರು. ಇದೇ ಗ್ರಾಮದಲ್ಲಿ ಆಶ್ರಮ ಸ್ಥಾಪಿಸಿ ಹಲವಾರು ಅಚಲ ಸಾಧಕರಿಗೆ ಗುರು ಹಾಗೂ ಮಾರ್ಗದರ್ಶಕರಾಗಿರುತ್ತಾರೆ. ಇವರು ಹಲವಾರು ತತ್ವಪದಗಳನ್ನು ತೆಲುಗು ಭಾಷೆಯಲ್ಲಿ ರಚಿಸಿದ್ದು ಅವರ ಶಿಷ್ಯ ಬಳಗದ ಹಲವು ಗಾಯಕರು ಇವರ ತತ್ವಪದಗಳನ್ನು ಹಾಡಿ ಮೆರೆಸುತ್ತಿದ್ದಾರೆ.
ಶ್ರೀ ವೆಂಕಟದಾಸುರವರು ಸ್ವತಃ ರಚಿಸಿರುವ ಕನ್ನಡ ಲಿಪಿಯ ತೆಲುಗು ಭಾಷೆಯ “ಅನುಭವಸಾರಂ” ಎಂಬ ಹೆಸರಿನ ಒಂದು ಕೃತಿಯನ್ನು ಆಧರಿಸಿ ೩ ಭಾಗಗಳಲ್ಲಿ ಈ ಲೇಖನವನ್ನು ರಚಿಸಲಾಗಿದೆ. ಶ್ರೀ ವೆಂಕಟದಾಸುರವರ ಜೀವನ ಮತ್ತು ಸಾಧನೆಯನ್ನು ಈ ಲೇಖನದ ಒಂದನೇ ಭಾಗದಲ್ಲಿ ಹಾಗೂ ಅವರ ಭೋಧನೆಗಳನ್ನು ವಿವರಿಸುವ ಪ್ರಯತ್ನವನ್ನು ಎರಡನೇ ಭಾಗದಲ್ಲಿ ಮತ್ತು ತತ್ವಪದಗಳನ್ನು ಪರಿಚಯಿಸುವ, ವಿಶ್ಲೇಷಿಸುವ ಪ್ರಯತ್ನವನ್ನು ಮೂರನೇ ಭಾಗದಲ್ಲಿ ಮಾಡಲಾಗಿದೆ.
ಭಾಗ - ೧
ಶಿಡ್ಲಘಟ್ಟ ತಾಲ್ಲೂಕಿನ ಕೃಷ್ಣಂನಕೊತ್ತೂರು ಎಂಬ ಗ್ರಾಮದಲ್ಲಿ ಯಾದವ ಜನಾಂಗಕ್ಕೆ ಸೇರಿದ ಶ್ರೀ ದೊಡ್ಡವೇಮನ್ನಗೌಡರು ಹಾಗೂ ಚಿಕ್ಕವೇಮನ್ನಗೌಡರು ಎಂಬ ಇಬ್ಬರು ಸಹೋದರರು ಇದ್ದರು. ಅವರಲ್ಲಿ ಚಿಕ್ಕವೇಮನ್ನಗೌಡರು ಹಾಗೂ ಮುನಿಯಾಂಬ ಎಂಬವರ ಪುತ್ರನಾಗಿ ಶ್ರೀ ವೆಂಕಟದಾಸರು ಜನಿಸುತ್ತಾರೆ. ಇವರ ನಿಜನಾಮ ವೆಂಕರಾಯುಡು. ಇವರ ವಿದ್ಯಾಭ್ಯಾಸ ಪೂರ್ಣವಾಗಿ ನಡೆಯದೇ ಇದ್ದರೂ ಸಹಾ ಅಲ್ಪ ಸ್ವಲ್ಪ ವಿದ್ಯೆ ಕಲಿತು, ತಂದೆ ಹಾಗೂ ದೊಡ್ಡಪ್ಪನವರ ವೃತ್ತಿಯಾದ ಪಟೇಲ ವೃತ್ತಿ ಹಾಗೂ ವ್ಯವಸಾಯವನ್ನು ಮುಂದುವರೆಸುತ್ತಾ, ನಾಟಕಗಳಲ್ಲಿ ನಟಿಸುತ್ತಾ ಕಾಲ ಕಳೆಯುತ್ತಿದ್ದಾಗ ಮನೆಯಲ್ಲಿ ವೆಂಕಟದಾಸರಿಗೆ ವಿವಾಹ ಮಾಡುವ ಯೋಚನೆ ಮೊದಲಾಯಿತು.
ಈ ಮಧ್ಯೆ ಕಾಳಹಸ್ತಿಯ ಶ್ರೀ ಶಂಕರಾನಂದ ಭಾರತೀ ಸ್ವಾಮಿಗಳನ್ನು ಭೇಟಿ ಮಾಡಿದಲ್ಲದೇ ಅವರಲ್ಲಿಯೇ ಸನ್ಯಾಸ ದೀಕ್ಷೆ ಪಡೆಯುವ ಹಂಬಲವನ್ನು ಹೊಂದಿದ್ದರು. ಇದಕ್ಕೆ ಮನೆಯವರು ಒಪ್ಪದೇ ಇದ್ದಾಗ, ತಮ್ಮ ಸ್ನೇಹಿತರಾದ ಶ್ರೀಮಾನ್ ವೆಂಕಟಪ್ಪನವರ ಸಲಹೆಯ ಮೇರೆಗೆ ದೇವನಹಳ್ಳಿಯ ಸಮೀಪದಲ್ಲಿದ್ದ ಅಚಲ ಸಾಧಕರಾದ ಶ್ರೀ ವೆಂಕಟಾರ್ಯ ಸ್ವಾಮಿಗಳ ಬಗ್ಗೆ ತಿಳಿದು ಅವರಲ್ಲಿ ದೀಕ್ಷೆಯನ್ನು ಪಡೆಯುತ್ತಾರೆ. ಅಷ್ಟರಲ್ಲಾಗಲೇ ಮುತ್ಸಂದ್ರದ ಪಾಪಮಾಂಬ ಹಾಗೂ ವೆಂಕಟೇಗೌಡರ ಪುತ್ರಿ ಮುನಿಯಮ್ಮ ಎಂಬವರೊಂದಿಗೆ ಇವರು ವಿವಾಹವು ನೆರವೇರಿರುತ್ತದೆ.
ಮುಂದೆ ೧೯೫೨ ರಲ್ಲಿ ತಮ್ಮ ಗುರುಗಳಾದ ಶ್ರೀ ವೆಂಕಟಾರ್ಯರ ಸಲಹೆ ಹಾಗೂ ಹಲವರ ಸಹಕಾರದಿಂದ ತಮ್ಮ ಗ್ರಾಮದಲ್ಲಿ ಒಂದು ಆಶ್ರಮವನ್ನು ಸ್ಥಾಪಿಸುತ್ತಾರೆ. ಇದರಿಂದ ವೇಮನ್ನಗೌಡರು ಹಾಗೂ ಮುನಿಯಾಂಬ ದಂಪತಿಗಳು ಮಗ ವೆಂಕಟರಾಯುಡು ಸನ್ಯಾಸಿ ಆಗುವನು ನಮ್ಮ ವಂಶ ನಾಶವಾಗುವುದೆಂಬ ಆತಂಕದಿಂದ ದೂರವಾಗಿ ನಮ್ಮ ಮಗ ನಮ್ಮ ವಂಶೋಧ್ಧಾರಕನೂ, ಒಳ್ಳೆಯ ಆಧ್ಯಾತ್ಮ ಸಾಧಕನೂ ಆದನೆಂದು ಸಂತೋಷ ಪಟ್ಟರು. ೧೯೬೪ ರಲ್ಲಿ ವೆಂಕಟದಾಸರ ತಂದೆಯವರು, ಮುಂದೆ ೧೯೮೮ ರಲ್ಲಿ ಗುರುಗಳಾದ ಶ್ರೀ ವೆಂಕಟಾರ್ಯರು ಮರಣವನ್ನಪ್ಪುವರು. ನಂತರದಲ್ಲಿ ಶ್ರೀ ವೆಂಕಟದಾಸರು ತಮ್ಮ ಆಶ್ರಮವನ್ನು ಇನಷ್ಟು ವಿಸ್ತರಿಸಿಕೊಂಡ ಅಪಾರ ಶಿಷ್ಯವೃಂದಕ್ಕೆ ಅಚಲ ಭೋಧನೆ ಮಾಡುತ್ತಾ ತಮ್ಮ ಜೀವಿತಕಾಲವನ್ನು ಕಳೆದರು. ಇಂದಿಗೂ ಇವರ ಶಿಷ್ಯರು ಅಚಲ ತತ್ವಪ್ರಸಾರದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದನ್ನು ಕಾಣಬಹುದು.
ಭಾಗ – ೨
ಮಾನವನ ಜೀವಿತ ಗಮ್ಯವನ್ನು ವಿವರಿಸುತ್ತಾ ಮಾನವನು ಹುಟ್ಟುವುದು ಏತಕ್ಕೆ? ಮತ್ತೆ ಹುಟ್ಟದೇ ಇರುವುದಕ್ಕೆ, ಸಾಯುವುದು ಏಕೆ? ಮತ್ತೇ ಸಾಯದೇ ಇರುವುದಕ್ಕೆ ಅರ್ಥಾತ್ ಜನನ ಮರಣಗಳ ಚಕ್ರದಿಂದ ವಿಮುಕ್ತರಾಗಲು ಎಂದು ವೆಂಕಟದಾಸರು ಹೇಳುವರು. ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನಿ ಜಠರೇ ಶಯನಂ ಎಂಬ ಶಂಕರಾಚಾರ್ಯರ ಮಾತಿನಂತೆ ಬಹು ದುಸ್ತಾರವಾದ ಈ ಪ್ರಾಪಂಚಿಕ ವ್ಯವಹಾರದಿಂದ ಮುಕ್ತರಾಗುವುದೇ ನಮ್ಮ ಜನ್ಮದ ಉದ್ದೇಶವೆಂದು ಹೇಳುವರು. ಅಷ್ಟೇ ಅಲ್ಲ ಮುಕ್ತಿ/ಸ್ವರ್ಗ ಎಲ್ಲರಿಗೂ ಬೇಕು ಆದರೇ ಸಾಯುವುದಕ್ಕೆ ಯಾರು ಸಿದ್ದರಿಲ್ಲ ಎಂಬ ಮಾತಿನಂತೆ, ಈ ಜನನ ಮರಣ ಚಕ್ರದಿಂದ ತಪ್ಪಿಸಿಕೊಳ್ಳುವ ಹಾದಿಯೇ ಮರಣ. ಇದಕ್ಕಾಗಿ ನಾವು ಅಳಬಾರದು. ಅಜ್ಞಾನಿಗಳು ಮಾತ್ರ ಸಾಯುವಾಗ ಅಳುವರು. ಜ್ಞಾನಿಗಳಾದವರು ಮರಣಕಾಲದಲ್ಲಿ ಅಂಜಬಾರದು ಅಳಬಾರದು ಎಂದು ವೆಂಕಟದಾಸರು ಹೇಳುವರು. ಇದು ಜೈನ ಧರ್ಮದ ಮರಣ ಮಹೋತ್ಸವವನ್ನು ನೆನಪಿಸುತ್ತೆ.
“ಈ ಮಾನವ ಜನ್ಮವು ಬಹಳ ಮಹತ್ವವಾದದೆಂದು ತಿಳಿಯಬೇಕು. ನಾನಾ ಕೋಟಿ ಜನ್ಮಗಳನ್ನು ಎತ್ತಿ ಕಡೆಗೆ ಈ ಮಾನವ ಜನ್ಮ ನಮಗೆ ಪ್ರಾಪ್ತವಾಗಿದೆ. ಈ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಸಾಂಸಾರವನ್ನು ಘೋರವೆಂದು ಭಾವಿಸಬಾರದು. ಈ ಜನ್ಮದ ಮಹತ್ವವನ್ನು ಅರಿಯದೇ, ಈ ಜಗತ್ತು ದುಃಖರೂಪವೆಂದು ಅಪಾರ್ಥಮಾಡಿಕೊಳ್ಳದೇ, ಜೀವನ ಯಾತ್ರೆಯಲ್ಲಿ ನಿರುತ್ಸಾಹಿಗಳಾಗದೇ, ಕರ್ತವ್ಯಪಾಲನೆಯನ್ನು ಮಾಡದೇ, ಈ ಜನ್ಮವನ್ನು ದುರುಪಯೋಗಪಡಿಸಿಕೊಳ್ಳಬಾರದು” ಹೀಗೆ ನಮ್ಮ ಜೀವನದ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡುತ್ತಾರೆ ವೆಂಕಟದಾಸರು.
ದುಃಖದ ಕುರಿತು ಮಾತನಾಡುತ್ತಾ, ಮನಸ್ಸು ಶುದ್ಧವಿಲ್ಲದವರಿಗೆ ಮಾತ್ರ ದುಃಖ. ಎಲ್ಲಾ ಇಂದ್ರಿಯಗಳು ತಮ್ಮ ಕೆಲಸವನ್ನು ತಾವು ನಿರ್ವಹಿಸುತ್ತವೆ. ಆದರೇ, ಈ ಇಂದ್ರಿಯಗಳೆಲ್ಲವೂ ನನ್ನವೇ ಎಂದು ಭಾವಿಸುವುದರಿಂದ ದುಃಖವು ಪ್ರಾಪ್ತವಾಗುತ್ತದೆ. ಹೇಗೆ ಮೀನು ನೀರಿನಲ್ಲಿಯೇ ಇದ್ದೂ ಸಹಾ ನೆನೆಯುವುದಿಲ್ಲವೂ, ತಾವರೆಯ ಎಲೆ ನೀರಿನಲ್ಲಿದ್ದೂ ಸಹಾ ನೀರನ್ನು ಹಿಡಿದುಕೊಳ್ಳುವುದಿಲ್ಲವೋ ಅದೇ ರೀತಿ ನಾವು ಈ ಪ್ರಪಂಚದಲ್ಲಿ ಬಾಳಬೇಕೆನ್ನುತ್ತಾರೆ. ʼʼನೀಟಿ ಮೀದಿ ಬುಗ್ಗ ನಿಲುಚುನಾ ಈ ತನುವು, ನಿನ್ನು ನೀವೇ ತೆಲಿಯವೇ ಮನಸಾ” ( ನೀರ ಮೇಲಿನ ಗುಳ್ಳೆ, ನಿಲ್ಲುವುದೇ, ಈ ದೇಹ, ನಿನ್ನ ನೀನು ತಿಳಿಯೇ ಮನಸೇ) ಎಂದು ಕೈವಾರ ನಾರೇಣಪ್ಪನವರು ಹೇಳಿರುವಂತೆ ನಾವು ಈ ಪ್ರಪಂಚದೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಕು. ಸಂಸಾರದಲ್ಲಿ ನಿರತರಾಗಿರಬೇಕು ಆದರೆ ಇದು ಶಾಶ್ವತವಲ್ಲ ಎಂಬುದರ ಬಗ್ಗೆ ಸದಾ ಎಚ್ಚರವಾಗಿರಬೇಕು ಎನ್ನುತ್ತಾರೆ ಶ್ರೀ ವೆಂಕಟದಾಸರು.
ʼಬ್ರಹ್ಮ ಸತ್ಯಂ ಜಗನ್ಮಿತ್ಯಂʼ ಎಂಬ ಶೃತಿ ವಾಕ್ಯದಂತೆ ಬ್ರಹ್ಮ ತತ್ವದಿಂದ ಕೂಡಿದ ಬೋಧನೆ ನಮಗೆ ಬೇಕಾಗಿದೆ. ಇಂತಹಾ ಬ್ರಹ್ಮತತ್ವದಿಂದ ಕೂಡಿದ ಮಹಾ ಬೋಧನೆ ಕೇವಲ ಸದ್ಗುರು ಮುಖೇನ ಹಾಗೂ ಸತ್ಪುರುಷರ ಸಹವಾಸದಿಂದ ಮಾತ್ರ ಲಭಿಸುವುದು. ಸಾಂಸಾರಿಯಾದ ಮಾನವನು ತತ್ವವನ್ನು ತಿಳಿಯದೇ, ಸದ್ಗುರುವಿನ ಸೇವೆ ಮಾಡದೇ ಧನ್ಯನಾಗಲಾರನು. ಲೋಕದ ವ್ಯವಹಾರಗಳು, ಸುಖ ದುಃಖಗಳು, ಲಾಭ ನಷ್ಟಗಳು, ಮಾನಾವಮಾನಗಳಲ್ಲಿ ಸಿಕ್ಕ ಪರಿತಪಿಸಬಾರದು. ಅತಿಯಾಸೆ ಅಹಂಕಾರ ಮಮಕಾರ ಇವುಗಳು ಅಜ್ಞಾನದಿಂದ ಬರುವಂತವು. ಸದ್ಗುರು ಬೋಧನೆಯಿಂದ ಹಾಗೂ ಅದರ ಆಚರಣೆಯ ಮೂಲಕ ಇಂತಹಾ ಅಜ್ಷಾನದಿಂದ ಬಿಡಿಸಿಕೊಳ್ಳಲು ಸಾಧ್ಯ. ನಮ್ಮ ನಡತೆ ಶುದ್ಧವಾಗಿರಬೇಕು. ಆಗ ಮಾತ್ರ ಧರ್ಮ ಶಕ್ತಿ ಹಾಗೂ ಆತ್ಮ ಶಕ್ತಿ ನಮ್ಮಲ್ಲಿ ಬೆಳಗುವುದು. ಅಂತರಂಗ ಶುದ್ಧವಾಗುವುದು. ಆತ್ಮ ಸಾಕ್ಷಾತ್ಕಾರ ಉಂಟಾಗುವುದು. ಅಜ್ಞಾನ ನಶಿಸುವುದು. ಆಸೆಯನ್ನು ಬಿಟ್ಟರೆ ಜಗತ್ತು ತೃಣಮಾತ್ರವಾಗಿ ತೋರುವುದು. ಆಗ ಮಾತ್ರ ಜಗದ್ವ್ಯಾಪಾರಗಳು ನಿಂತು ನಾವು ಬ್ರಹ್ಮಾನುಭವದ ಸುಖ ಪಡೆಯಲು ಸಾಧ್ಯ.
ವೈರಾಗ್ಯವೆಂದರೆ ಎಲ್ಲವನ್ನು ತ್ಯಜಿಸುವುದಲ್ಲ. ವೇದಾಂತ ವಿಚಾರದ ಮೂಲಕ ಸಕಲ ಭೋಗಗಳ ಕುರಿತು ಇಚ್ಚೆ ಇಲ್ಲದಿರುವ ಸ್ಥಿತಿ, ಪ್ರಪಂಚ ಅಸತ್ಯವೆಂದು ತಿಳಿಯುವುದು, ನಿರಾಶೆಯನ್ನು ಹೊಂದುವುದು. ನಿರಾಶೆಯಿಂದ ಮನಸ್ಸಿನ ಚಂಚಲ ದೂರಾಗುವುದು. ಆಗ ನಮಗೆ ಪರಮ ಶಾಂತಿ ದೊರೆಯುವುದು. ಇದು ನಮಗೆ ಅಸಾಧ್ಯವಾಗಿ ತೋರುವುದು ಇದಕ್ಕೆ ನಮ್ಮ ಮನಸ್ಸೇ ಕಾರಣ, ಆದರೆ ಪ್ರಯತ್ನದಿಂದ ಎಲ್ಲವೂ ಸಾಧ್ಯ. “ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ” ಎಂಬಂತೆ ಬಂಧನ ಹಾಗೂ ಮೋಕ್ಷಗಳೆಲ್ಲವಕ್ಕೂ ಮನಸ್ಸೇ ಕಾರಣ. ಈ ಒಂದು ಮನಸ್ಸಿನ ಮೇಲೆ ಹಿಡಿತ ಸಾಧಿಸಬೇಕು. ಈ ಮನಸ್ಸಿನ ವ್ಯಾಪಾರ ನಮ್ಮನ್ನು ಹಲವಾರು ಕಷ್ಟ, ನಷ್ಟ ಹಾಗೂ ದುಃಖಗಳಿಗೆ ಈಡು ಮಾಡುತ್ತದೆ. ಆದರೆ ಇದಕ್ಕೆ ನಾವು ಹೆದರಬಾರದು. ಈ ಎಲ್ಲಾ ಸಮಸ್ಯೆಗಳನ್ನು ಇಲ್ಲವಾಗಿಸುವ ಒಂದು ಶಕ್ತಿ ಇದೆ. ಅದೇ ಶ್ರೀ ಗುರು ರಾಜ ಮಂತ್ರ.
“ಗುರುಬ್ರಹ್ಮ, ಗುರು ವಿಷ್ಣು
ಗುರುದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮಃ
ತಸ್ಮೈ ಶ್ರೀ ಗುರುವೇ ನಮಃ”
ಈ ಮಂತ್ರವನ್ನು ಎಲ್ಲರೂ ನೆನಪಿನಲ್ಲಿಡಬೇಕು. ಸರ್ವರೂ ಬ್ರಹ್ಮ ಸೃಷ್ಠಿಕರ್ತನೆಂದೂ, ವಿಷ್ಣು ಸ್ಥಿತಿ ಕರ್ತನೆಂದು ಹಾಗೂ ಶಿವ ಲಯ ಕರ್ತನೆಂದೂ ಭಾವಿಸಿರುವರು. ಇದೇ ರೀತಿಯಲ್ಲಿ ಗುರುವು ಕರ್ಮ ಜೀವಿಗಳಿಗಲ್ಲಿ ಆಧ್ಯಾತ್ಮ ಬೀಜವನ್ನು ನೆಟ್ಟು ಕರ್ಮ ದೇಹವನ್ನು ಮಂತ್ರದೇಹವಾಗಿಯೂ ದಿವ್ಯ ದೇಹವಾಗಿಯೂ ಸೃಜಿಸುವನು. ಇದೇ ಸೃಷ್ಠಿ ಕಾರ್ಯ. ನಂತರ ಇಷ್ಟಕ್ಕೆ ಸುಮ್ಮನಾಗದೇ ಗುರುವು ಶಿಷ್ಯನನ್ನು ಅಜ್ಞಾನದಿಂದ ಕೂಡಿದ ಸಂಸಾರದಲ್ಲಿ ಸಿಲುಕಿಕೊಳ್ಳದಂತೆ ಸದಾ ಎಚ್ಚರಿಕೆ ವಹಿಸುವನು. ಇದೇ ಸ್ಥಿತಿ ಕಾರ್ಯ. ಮುಂದೆ ಶಿಷ್ಯನಿಗೆ ನೀನು ನಿಜವಾಗಿಯೂ ಪರಬ್ರಹ್ಮ ಸ್ವರೂಪನು ಎಂಬ ಅರಿವನ್ನು ಉಂಟು ಮಾಡಿ ಅವಿದ್ಯಯನ್ನು ನಶಿಸುವಂತೆ ಮಾಡಿ ಜೀವತ್ವವನ್ನು ಲಯ ಮಾಡಿ ಬ್ರಹ್ಮತ್ವವನ್ನು ಪ್ರಾಪ್ತಿಮಾಡುವನು. ಇದು ಲಯ ಕಾರ್ಯ. ಇನ್ನು ʼಗುರು ಸಾಕ್ಷಾತ್ ಪರಂ ಬ್ರಹ್ಮʼ ಎಂದರೆ ʼಬ್ರಹ್ಮ ವಿದ್ಯಬ್ರಂಹೈವ ಭವತಿʼ ಎಂಬಂತೆ ಬ್ರಹ್ಮತ್ವವನ್ನು ಗ್ರಹಿಸಿ ಬ್ರಹ್ಮ ಸ್ವರೂಪನಾದವನು ತನ್ನ ಶಿಷ್ಯರನ್ನು ಸಹಾ ಬ್ರಹ್ಮ ಸ್ವರೂಪರನ್ನಾಗಿಸುವನು. ಇಂತಹಾ ಸದ್ಗುರುವಿಗೆ ನಮೋ ನಮಃ ಇದೇ ಈ ದಿವ್ಯ ಮಂತ್ರದ ಗುಟ್ಟು ಹೀಗೆಂದು ಮಾನವ ಜನ್ಮದ ಗಮ್ಯ, ಮಾನವ ಜನ್ಮದ ಮಹತ್ವ, ಜಗತ್ತಿನ ಸ್ವರೂಪ, ಗುರು ತತ್ವ, ಗುರುವಿನ ಮಹಿಮೆ, ಗುರು ಬೋಧನೆಯ ಮಹತ್ವ, ಆತ್ಮ ಸಾಕ್ಷಾತ್ಕಾರ, ಪರಬ್ರಹ್ಮ ಸ್ವರೂಪ ಮತ್ತು ಬ್ರಹ್ಮಾನಂದದ ಪ್ರಾಪ್ತಿ ಮುಂತಾದವನ್ನು ಬಹಳಾ ಸರಳವಾಗಿ ವಿವರಿಸುವ ಪ್ರಯತ್ನ ಮಾಡುರುವರು.
ಭಾಗ – ೩
ಅಚಲ ತತ್ವವು ಗುರುವಿಗೆ ಅತಿ ಹೆಚ್ಚು ಮಾನ್ಯತೆಯನ್ನು ಕೊಡುವುದನ್ನು ನಾವು ಕಾಣಬಹುದು. ಗುರುವಿಂದಲೇ ಎಲ್ಲವೂ ಎಂಬುದು ಇವರ ನಿಲುವು. ಗುರುವೇ ಪ್ರತ್ಯಕ್ಷ ದೈವವೆಂದು ಇವರು ಭಾವಿಸುವರು ಮತ್ತು ಗುರುವಿಗೆ ಸರ್ವ ಸಮರ್ಪಣೆಯನ್ನು ಮಾಡಿಕೊಳ್ಳುವುದರಿಂದ ಮಾತ್ರ ಪರಮಾನಂದಾನುಭವ ಲಭಿಸುವುದು ಎಂಬುದು ಅಚಲರ ನಂಬಿಕೆ. ಶಂಕರಾಚಾರ್ಯರ, ಭಗವದ್ಗೀತೆಯ, ಭಾಗವತ ಪಂಥದ ಪ್ರಭಾವವು ತಮ್ಮ ಮೇಲಿರುವುದೆಂದು ಅಚಲ ಸಾಧಕರು ನಂಬಿದ್ದು ಅದರಂತೆ ಆಗಾಗ ಗೀತ ವಾಕ್ಯಗಳನ್ನು ತಮ್ಮ ಮಾತಿನಲ್ಲಿ ಬಳಸುವುದನ್ನು ಕಾಣಬಹುದು. ಮಾನವ ಜೀವನದ ಗಮ್ಯ ಏನು ಎಂಬುದಕ್ಕೆ ಉತ್ತರವಾಗಿ ಶ್ರೀ ವೆಂಕಟದಾಸರು ಜನನ ಮರಣಗಳ ಚಕ್ರದಿಂದ ಬಿಡುಗಡೆ ಹೊಂದುವುದು ಎಂದು ಸರಳವಾಗಿ ಉತ್ತರಿಸುವರು. ಅದೇ ರೀತಿ ಮಾನವ ಜನ್ಮ ಎಂಬುದು ಬಹಳ ಮಹತ್ವವಾದದ್ದು ಎಂಬುದನ್ನು ಸಹಾ ವಿವರಿಸುವರು. ಇಲ್ಲಿ ಜಗತ್ತು ದುಃಖ ರೂಪವಾದದೆಂಬ ಅರಿವು ನಮಗಿರಬೇಕೆಂದು ಬೋಧಿಸುತ್ತಾರೆ. ಆದರೆ ಸಂಸಾರ ತ್ಯಜಿಸುವಂತೆ ತಿಳಿಸುವುದಿಲ್ಲ. ಸಂಸಾರದಲ್ಲಿ ಇರುತಾ ಎಲ್ಲಾ ಕರ್ಮಗಳನ್ನು ಆಚರಣೆ ಮಾಡುತ್ತಾ ಜೊತೆ ಜೊತೆಗೆ ಇದಾವುದೂ ಶಾಶ್ವತವಲ್ಲ ಎಂಬುದನ್ನು ತಿಳಿದು ಅರಿತಿರಬೇಕೆಂದು ಹೇಳುವರು.
ಅಚಲ ಮಾರ್ಗದ ಸಾಧಕರು ಶಂಕರರ ʼಅದ್ವೈತʼ ವನ್ನು ಒಪ್ಪಿದಂತೆ ಕಂಡರೂ ಸಹಾ ಅವರ ಚಿಂತನೆ ʼಅದ್ವೈತʼ ಕ್ಕಿಂತ ಕೊಂಚ ಬಿನ್ನವಾದದ್ದಾಗಿದೆ. ಇಲ್ಲಿ ಪರಮಾತ್ಮನ ಅಂಶವಾದ ಜೀವನು ಮುಕ್ತಿಯ ಮೂಲಕ ಮತ್ತೆ ಪರಮಾತ್ಮನನ್ನು ಸೇರುವನೆಂಬ ನಂಬಿಕೆಯಿಲ್ಲ. ಬದಲಾಗಿ ಪರಮಾತ್ಮನು ಜೀವನು ಎಂದಿಗೂ ಅಭೇಧರಾಗಿಯೇ ಇರುವರು. ಆದರೆ ಸಾಧನೆಯ ಮೂಲಕ ನಾವು ಈ ಅರಿವನ್ನು ದಕ್ಕಿಸಿಕೊಂಡು ಪರಮಾನಂದಾನುಭವವನ್ನು ಹೊಂದಬೇಕೆಂಬುದು ಅಚಲ ಬೋಧನೆಯ ತಿರುಳು.
ಅಜ್ಞಾತರಾಗಿ ಉಳಿದಿದ್ದ ಅಚಲ ಸಾಧಕ ಶ್ರೀ ವೆಂಕಟದಾಸರನ್ನು ಅವರ ಬೋಧನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಉದ್ದೇಶ ಈ ಲೇಖನದ್ದು. ತೆಲುಗಿನಲ್ಲಿರುವ ಇವರ ಬೋಧನೆಗಳನ್ನು ಅನುವಾದ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಇವರ ಬೋಧನೆಗಳನ್ನು ವಿವರವಾಗಿ ವಿಶ್ಲೇಷಣೆ ಮಾಡಲು ಸಾಧ್ಯವಾಗದೇ ಇರುವುದು ಈ ಲೇಖನದ ಮಿತಿ.
ಗ್ರಂಥ ಋಣ :
೧) ವೆಂಕಟದಾಸು, “ಅನುಭವಸಾರಂ”, ಕ್ರಿಷ್ಣಂನಕೊತ್ತೂರು : ಅಚಲಾಶ್ರಮಂ -೧೯೯೫.
೨) ತರೀಕೆರೆ ರಹಮತ್. “ಕರ್ನಾಟಕ ಗುರುಪಂಥ”, ಹಂಪಿ : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ- ೨೦೨೦.
ವರುಣ್ ರಾಜ್ ಜೀ
ಸಂಶೋಧನಾರ್ಥಿ
ಡಾ. ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾಲಯ.
ತುಮಕೂರು.
ದೂ : 9448241450
E mail : maharishivarunrajji@gmail.com
Comments
Post a Comment