ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಒಂದು ಅವಲೋಕನ- ವರುಣ್‌ ರಾಜ್‌ ಜೀ.

 ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಒಂದು ಅವಲೋಕನ

- ವರುಣ್‌ ರಾಜ್‌ ಜೀ.


ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಾ ಬಂದಿದೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಹಿಂದೆ ಬಹಳ ವ್ಯವಸ್ಥಿತವಾದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಯೋಗ್ಯ ನಾಗರೀಕರನ್ನು ಸಿದ್ಧಪಡಿಸುವ, ವ್ಯವಹಾರ ಜ್ಞಾನ ಒದಗಿಸುವ, ಸಾಮಾನ್ಯ ಶಿಕ್ಷಣ ಹಾಗೂ ಗೀತ, ವಾದ್ಯ, ನೃತ್ಯ, ಮುಂತಾದ ೬೪ ಕಲೆಗಳನ್ನು ಕಲಿಸುವ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಮ್ಮ ಪ್ರಾಚೀನ ಕೃತಿಗಳಲಿ ಉಲ್ಲೇಖವಿದೆ. ಹಲವು ಕಸುಬುಗಳನ್ನು ಗುರುಮುಖದಿಂದ ಕಲಿಯುವ, ಕಲಿಸುವ ವ್ಯವಸ್ಥೆ ಭಾರತದಲ್ಲಿ ಇತ್ತು. ಉನ್ನತ ಶಿಕ್ಷಣಕ್ಕಾಗಿ ತಕ್ಷಶಿಲ, ನಳಂದ, ಹಾಗೂ ಕರ್ನಾಟಕದ ನಾಗಾವಿ, ಬಳ್ಳಿಗಾವೆ ಮುಂತಾದ ಕಡೆ ಪ್ರಾಚೀನ ವಿದ್ಯಾ ಕೇಂದ್ರಗಳು ಇದ್ದದರ ಕುರಿತು ನಮಗೆ ಶಾಸನಾಧಾರಗಳು ಸಿಗುತ್ತವೆ. 

ಭಾರತದಲ್ಲಿ ೧೯೮೬ ರಿಂದ ಚಾಲ್ತಿಯಲ್ಲಿದ ಶಿಕ್ಷಣ ನೀತಿಯ ಮಿತಿಗಳನ್ನು ವಿಸ್ತಾರಗೊಳಿಸುವ ಹಾಗೂ ಲೋಪದೋಷಗಳನ್ನು ಸರಿಪಡಿಸುವ ಉದ್ದೇಶದಿಂದ ತರಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಕೇಂದ್ರ ಕ್ಯಾಬಿನೆಟ್‌ ನಲ್ಲಿ ಅನುಮೋದನೆಗೊಂಡು ಹಲವಾರು ಪರ ವಿರೋಧ ಚರ್ಚೆಗಳಿಗೆ ಆ ಮೂಲಕ ಕೆಲವು ಗೊಂದಲಗಳಿಗೆ ಕಾರಣವಾಗಿದೆ. ಕರ್ನಾಟಕವು ಮೊದಲ ರಾಜ್ಯವಾಗಿ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕೆಂದಿರುವುದು ಹಲವರ ಕುತೂಹಲಕ್ಕೆ ಕಾರಣವಾಗಿದೆ.  ಈ ಹಿನ್ನೆಲೆಯಲ್ಲಿ ಕರ್ನಾಟಕದ ಹಾಗೂ ಒಟ್ಟು ಭಾರತದ ಶಿಕ್ಷಣ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಇತರೆ ಕ್ಷೇತ್ರಗಳ ಬದಲಾವಣೆಗಳಿಗೆ ಕಾರಣವಾಗಬಹುದೆಂಬ ಉದ್ದೇಶದಿಂದ ರೂಪಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರ ಒಂದು ಅವಲೋಕನವನ್ನು ಪ್ರಸ್ತುತ ಲೇಖನದಲ್ಲಿ ಮಾಡಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಬಿಡುಗಡೆಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಪುಸ್ತಿಕೆಯಲ್ಲಿ ಒಟ್ಟು ೪ ಭಾಗಗಳಲ್ಲಿ ಈ ನೀತಿಯನ್ನು ವಿವರಿಸಲಾಗಿದೆ. ಭಾಗ ೧ ರಲ್ಲಿ ಶಾಲಾ ಶಿಕ್ಷಣ, ಭಾಗ ೨ ರಲ್ಲಿ ಉನ್ನತ ಶಿಕ್ಷಣ ಹಾಗೂ ಭಾಗ ೩ ರಲ್ಲಿ ಆದ್ಯತೆ ನೀಡಬೇಕಾದ ಇತರ ಪ್ರಮುಖ ವಿಷಯಗಳ ಹಾಗೂ ಭಾಗ ೪ ರಲ್ಲಿ ಇವುಗಳನ್ನು ಸಾಧ್ಯವಾಗಿಸುವ ಬಗ್ಗೆಯ ಕುರಿತು ವಿಸ್ತಾರವಾದ ವಿವರಣೆಯಿದೆ. ಶಾಲಾ ಶಿಕ್ಷಣಕ್ಕೆ ಸಂಬಂಧಿಸಿ ಈಗ ಜಾರಿಯಲ್ಲಿರುವ ೧೦+೨ ವಿನ್ಯಾಸದ ಬದಲಾಗಿ ೫+೩+೩+೪ ಮಾದರಿಯ ಭೋಧನಾ ಮತ್ತು ಶಿಕ್ಷಣ ಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಮಗುವಿನ ಮೂರನೇ ವಯಸ್ಸಿನಿಂದ ಅಂಗನವಾಡಿ/  ಪ್ರೀಸ್ಕೂಲ್/ ಬಾಲವಾಟಿಕಾದ ಹಂತಗಳಲ್ಲಿಯೇ ಶಿಕ್ಷಣ ಪ್ರಾರಂಭವಾಗುತ್ತದೆ. ಇದನ್ನು ಫೌಂಡೇಶನ್‌ ಹಂತ ಎಂದು ಗುರಿತಿಸಲಾಗಿದೆ. ಈ ಹಂತದಲ್ಲಿ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸುವ ಅಧ್ಯಾಪಕರನ್ನು ಸಜ್ಜುಗೊಳಿಸುವ, ಅವರಿಗೆ ವಿಶೇಷ ತರಬೇತಿ ಒದಗಿಸುವುದು, ಮಕ್ಕಳಿಗೆ ಮಧ್ಯಾಹ್ನದ ಊಟ ಮತ್ತು ಬೆಳಗಿನ ಉಪಹಾರ ವ್ಯವಸ್ಥೆ ಒದಗಿಸುವುದ, ಮೂಲ ಸೌಕರ್ಯಗಳ ವ್ಯವಸ್ಥೆ ಮಾಡುವ,  ಆಟಗಳನ್ನು ಆಧರಿಸಿದ ಕಲಿಕೆಯ ಮೂಲಕ ಮಕ್ಕಳ ಸಂಜ್ಞಾತ್ಮಕ, ಭಾವಾತ್ಮಕ, ಮತ್ತು ಮನೋಚಲನ ಸಾಮರ್ಥ್ಯ ಮತ್ತು ಪ್ರಾರಂಭಿಕ ಸಾಕ್ಷರತೆ ಹಾಗೂ ಅಂಕಿಗಳ ಬಗೆಗಿನ ತಿಳುವಳಿಕೆಯನ್ನು ಅಭಿವೃದ್ಧಿ ಪಡಿಸುವ, ಹಾಗೂ ಶಾಲೆ ಬಿಟ್ಟು ಹೋಗುವ ಮಕ್ಕಳ ಸಂಖ್ಯೆ ಕಡಿಮೆ ಮಾಡಿ, ಎಲ್ಲಾ ಹಂತಗಳಲ್ಲೂ ಸಾರ್ವತ್ರಿಕ ಶಿಕ್ಷಣ ನೀಡುವ ಗುರಿಗಳನ್ನು ಹೊಂದಲಾಗಿದೆ. ಮುಂದಿನ ಹಂತವನ್ನು ಪ್ರಿಪರೇಟರಿ ಹಂತವೆಂದು ಗುರುತಿಸಲಾಗಿದೆ, ನಂತರದ್ದು ಮಾಧ್ಯಮಿಕ ಮತ್ತು ಸೆಕೆಂಡರಿ ಹಂತಗಳು.

 ಹೀಗೆ ಒಟ್ಟು ೪ ಹಂತಗಳಲ್ಲಿ ೧೮ ವರ್ಷ ವಯಸ್ಸಿನವರೆಗೆ ಶಿಕ್ಷಣವನ್ನು ನೀಡಲಾಗುವುದು.  ಇದರ ನಂತರ ಉನ್ನತ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ  ಕಡಿಮೆ ಗುಣಮಟ್ಟದ  ಪದವಿ ಹಾಗೂ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆ, ಸಂಶೋಧನೆಗೆ ಹೆಚ್ಚು ಆದ್ಯತೆ ಇಲ್ಲದಿರುವಿಕೆ, ಛಿಧ್ರವಾಗಿರುವ ಉನ್ನತ ಶಿಕ್ಷಣ ಪರಿಸರ ವ್ಯವಸ್ಥೆ, ಜ್ಞಾನಗ್ರಹಣದ ಕೌಶಲ ಮತ್ತು ಕಲಿಕಾ ಫಲಿತಾಂಶ ಅಭಿವೃದ್ಧಿಯ ಕಡೆಗೆ ಕಡಿಮೆ ಆದ್ಯತೆ, ಮುಂತಾದ ಸಮಸ್ಯೆಗಳ ಕುರಿತು ವಿವರಿಸುತ್ತಾ, ಈ ಸವಾಲುಗಳನ್ನು ಮೀರುವ ದೃಷ್ಠಿಯಿಂದ ಬಹುಶಿಸ್ತೀಯ ಪದವಿ ಪೂರ್ವ ಶಿಕ್ಷಣ, ಭೋದನಾ ವಿಭಾಗ ಮತ್ತು ಸಾಂಸ್ಥಿಕ ಸ್ವಾಯತ್ತತೆ, ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸುವ, ಮುಕ್ತ ದೂರ ಶಿಕ್ಷಣಕ್ಕೆ ಆದ್ಯತೆ ನೀಡುವ, ಹಿಂದುಳಿದ ವರ್ಗಗಳ ಶಿಕ್ಷಣಕ್ಕಾಗಿ ಸೂಕ್ತ ಸರ್ಕಾರಿ ನಿಧಿಗಳನ್ನು ಸ್ಥಾಪಿಸುವ, ಒಟ್ಟು ಉನ್ನತ ಶಿಕ್ಷಣ ಪ್ರವೇಶ ಅನುಪಾತವನ್ನು ಹೆಚ್ಚಿಸುವ, ತಂತ್ರಜ್ಞಾನ ಬಳಕೆಗೆ ಉತ್ತೇಜನ ನೀಡುವ ಹಲವು ಮಹತ್ವದ ಹೆಜ್ಜೆಗಳನ್ನು ಪ್ರಸ್ತಾಪಿಸಲಾಗಿದ್ದು ೨೦೪೦ರ ವೇಳೆಗೆ ಇದನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರುವ ಉದ್ದೇಶ ಹೊಂದಲಾಗಿದೆ.   

 ರಾಷ್ಟ್ರೀಯ ಶಿಕ್ಷಣ ನೀತಿಯ ೨೦೨೦ರ ಉದ್ದೇಶ, ಮತ್ತು ಗುರಿ.

ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರ ಮೂಲಕ 2040 ರ ವೇಳೆಗೆ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ. ಕಲಿಯುವವರ ಪಾಲಿಗೆ ಕಲಿಕೆ ಬಹಳ ಉಪಯುಕ್ತವಾಗುವ, ಚಾರಿತ್ರ್ಯವನ್ನು ನಿರ್ಮಾಣ ಮಾಡುವ, ಸನ್ಮಾರ್ಗ ಬೋಧಕವಾಗಿ, ಜ್ಞಾನದಾಹವನ್ನು ತೀರಿಸುವ, ಲಾಭಪ್ರದವಾದ ಉದ್ಯೋಗವನ್ನು ಒದಗಿಸುವ, ಹಾಗೂ ತಾರ್ಕಿಕವಾಗಿ, ಸಹಾನುಭೂತಿ ಸಂಪನ್ನವಾಗಿ, ಹಿತಕರವಾಗಿ ಹಾಗೂ ಸಮಗ್ರವಾಗಿರಬೇಕು, ಜೊತೆಗೆ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಅಭಿವೃದ್ಧಿಗೆ ಸಂಬಂದಿಸಿದ ಹಲವು ಬೇಡಿಕೆಗಳನ್ನು ಈಡಿರಿಸುವಂತದಾಗಿರಬೇಕೆಂದು ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಸೃಜನಾತ್ಮಕ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುವಂತಹದಾಗಿರಬೇಕು ಎಂಬ ಉದ್ದೇಶವನ್ನು ಈ ರಾಷ್ಟ್ರೀಯ ಶಿಕ್ಷಣ ನೀತಿ ಒಳಗೊಂಡಿದೆ.

 “ಪ್ರತಿಯೊಬ್ಬರಿಗೂ ಸಮಾವಿಷ್ಟವಾದ ಮತ್ತು ಸಮಾನವಾದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಹಾಗೂ ಜೀವನಪರ್ಯಂತ ಕಲಿಕೆಯ ಸದವಕಾಶಗಳನ್ನು ಖಾತರಿಯಾಗಿ ಒದಗಿಸಿಕೊಡುವ ಉದ್ದೇಶವನ್ನು ಸರ್ಕಾರ ಹೊಂದಿದ್ದು ಇದನ್ನು ಸ್ಥಾಪಿಸಲು ಇಡೀ ಶಿಕ್ಷಣ ವ್ಯವಸ್ಥೆಯನ್ನು ಮರುವಿನ್ಯಾಸ ಮಾಡಬೇಕಾಗಿದೆ” “ನಮ್ಮ ಶಿಕ್ಷಣ ವಿನ್ಯಾಸದ ಎಲ್ಲ ಮುಖಗಳನ್ನು ಪರಿಷ್ಕರಿಸುವ ಹಾಗೂ ಮರು ನಿರ್ಮಾಣ ಮಾಡುವ ಉದ್ದೇಶ ಈ ನೀತಿಯದಾಗಿದೆ”೧.  ಎಂದು  ವಿವರಿಸಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರಲ್ಲಿ ವಿದ್ಯಾರ್ಥಿಗಳ ಕುರಿತು ವಿವರಿಸುತ್ತಾ, ವಿದ್ಯಾರ್ಥಿಯ ವಾಸಸ್ಥಾನ ಯಾವುದೇ ಆಗಿರಲಿ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಆ ವಿದ್ಯಾರ್ಥಿಗೆ ಗುಣಾತ್ಮಕವಾದ ಶಿಕ್ಷಣವನ್ನು ಒದಗಿಸಿಕೊಡಬೇಕು. ಹಾಗೂ ಅಂಚಿನಲ್ಲಿ ಉಳಿದುಬಿಟ್ಟಿರುವ ಅವಕಾಶ ವಂಚಿತರ ಹಾಗೂ ಹೆಚ್ಚು ಪ್ರಾತಿನಿಧ್ಯ ಸೌಲಭ್ಯವಿಲ್ಲದ ಸಮುದಾಯಗಳನ್ನು ವಿಶೇಷವಾಗಿ ದೃಷ್ಠಿಯಲ್ಲಿರಿಸಿಕೊಳ್ಳಬೇಕೆಂದು ಹೇಳಲಾಗಿದೆ. ಯುವ ಜನಾಂಗಕ್ಕೆ ಭಾರತದ ಬಗ್ಗೆ ತಿಳುವಳಿಕೆ ಮೂಡಿಸುವ, ಸಾಮಾಜಿಕ ಸಾಂಸ್ಕೃತಿಕ, ತಂತ್ರಜ್ಞಾನಕ್ಕೆ ಸಂಬಂದಿಸಿದ, ಅನುಕರಣೀಯವಾದ ಕಲೆಗಳ, ಭಾಷೆಗಳ, ಜ್ಞಾನಪರಂಪರೆಗಳ ಕುರಿತು ಅರಿವು ಮೂಡಿಸುವ ಅವಶ್ಯಕತೆಯನ್ನು ಒತ್ತಿ ಹೇಳಲಾಗಿದ್ದು ಇದರ ಜೊತೆಗೆ ರಾಷ್ಟ್ರೀಯ ಹೆಮ್ಮೆ ಗೌರವಗಳ, ಆತ್ಮವಿಶ್ವಾಸ, ಆತ್ಮಜ್ಞಾನ, ಸಹಕಾರ ಮತ್ತು ಏಕತಾ ಭಾವನೆಗಳನ್ನು ರೂಢಿಸಲು ಯುವ ಜನಾಂಗಕ್ಕೆ ಒಂದು ಗಟ್ಟಿಯಾದ ಬುನಾದಿಯನ್ನು ಒದಗಿಸಬೇಕೆಂಬುದನ್ನು ಕೂಡಾ ಪ್ರಸ್ತಾಪಿಸಲಾಗಿದೆ. 

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ದೂರದರ್ಶಿತ್ವದ ಬಗ್ಗೆ ವಿವರಿಸುತ್ತಾ “ಭಾರತ ದೇಶವನ್ನು ಸುಸ್ಥಿರವಾಗಿ ಸಮನತಾ ಮನೋಧರ್ಮ ಹಾಗೂ ಸ್ಪಂದನಶೀಲ ಜ್ಞಾನಸಮಾಜವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಭಾರತೀಯ ಅಸ್ಮಿತೆಯ ಮೇಲೆ ಆಧಾರಗೊಂಡಿರುವ ಶಿಕ್ಷಣ ವ್ಯವಸ್ಥೆಯೊಂದನ್ನು ಸಾಕಾರಗೊಳಿಸುವುದು ಈ ರಾಷ್ಟ್ರೀಯ ನೀತಿಯ ಮಹಾನ್‌ ಉದ್ದೇಶವಾಗಿದೆ”೨  ಎಂದು ಹೇಳಲಾಗಿದೆ. ಪ್ರತಿಯೊಬ್ಬರಿಗೂ ಉನ್ನತ ಮಟ್ಟದ ಶಿಕ್ಷಣ ಸಿಗುವ ಹಾಗೆ ಮಾಡಬೇಕು ಹಾಗೂ ಆ ಮೂಲಕ ಭಾರತವನ್ನು  ಒಂದು ಮಹಾನ್‌ ಜ್ಞಾನ ಶಕ್ತಿಯಾಗಿ ಪರಿವರ್ತಿಸಿ, ಮಾನವ ಹಕ್ಕುಗಳು, ಸುಸ್ಥಿರ ಬೆಳವಣಿಗೆ, ಬದುಕಿನ ಮಟ್ಟ ಹಾಗೂ ವಿಶ್ವಕಲ್ಯಾಣ ಇವುಗಳಿಗೆ ನಾಂದಿಹಾಡುವ ಮೂಲಕ ಭಾರತೀಯರಲ್ಲಿ ವಿಶ್ವಪ್ರಜೆಯ ವರ್ಚಸನ್ನು ಮೂಡಿಸಬೇಕಾಗಿದೆ. ಎಂಬ ಹಲವು ಆದರ್ಶದ ಉದ್ದೇಶ ಮತ್ತು ಗುರಿಗಳನ್ನು ಈ ನೀತಿ ಹೊಂದಿದ್ದು ಈ ಗುರಿ ಸಾಧನೆಗಾಗಿ ಕೈಗೊಳ್ಳಬೇಕೆಂದು ಉದ್ದೇಶಿಸಲಾಗಿರುವ ಹಲವು ಕ್ರಮಗಳನ್ನು ಮುಂದೆ ಪ್ರಸ್ತಾಪಿಸಲಾಗಿದೆ.

  ವೃತ್ತಿಪರ ಶಿಕ್ಷಣ, ವಯಸ್ಕ ಶಿಕ್ಷಣ, ಭಾರತೀಯ ಭಾಷೆಗಳು, ಕಲೆ ಮತ್ತು ಸಂಸ್ಕೃತಿ, ತಂತ್ರಜ್ಞಾನ ಬಳಕೆ ಮತ್ತು ಸಂಯೋಜನೆ, ಆನ್‌ ಲೈನ್‌ ಮತ್ತು ಡಿಜಿಟಲ್‌ ಶಿಕ್ಷಣ, ಮುಂತಾದವುಗಳ ಕುರಿತು ವಿಶೇಷ ಆದ್ಯತೆಯನ್ನು ನೀಡಲು ಉದ್ದೇಶಿಸಲಾಗಿದೆ. ಈ ಉದ್ದೇಶಗಳನ್ನು ಸಾಧ್ಯವಾಗಿಸಲು ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿಯನ್ನು ಬಲಪಡಿಸುವುದು, ಸರ್ವರಿಗೂ ಕೈಗೆಟುಕಬಲ್ಲ ಗುಣಮಟ್ಟದ ಶಿಕ್ಷಣ ಒದಗಿಸುವಿಕೆ ಮುಂತಾದ ಯೋಜನೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ. 

ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ ಭಾದಕಗಳು.

ಸಾಧಕಗಳು.

- ಭಾರತ ಕೇಂದ್ರಿತ ಶಿಕ್ಷಣ ನೀತಿಯನ್ನು ರೂಪಿಸುವಿಕೆ.

- ಶಿಕ್ಷಣದಲ್ಲಿ ಬಹುಶಿಸ್ತೀಯ ಕಲಿಕೆಗೆ ಹಾಗೂ ಏಕರೂಪಿ ಪಠ್ಯಕ್ರಮಕ್ಕೆ ಪ್ರೋತ್ಸಾಹ

- ಉತ್ತಮ ಗುಣಮಟ್ಟದ ಸಂಶೋಧನೆಗೆ ಹಾಗೂ ಜೀವಿತಾವಧಿಕ ಕಲಿಕೆಗೆ ಆದ್ಯತೆ

- ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಮಹತ್ವ

- ಪರೀಕ್ಷಾಧಾರಿತ ಶಿಕ್ಷಣಕ್ಕೆ ಬದಲಾಗಿ ಪರಿಕಲ್ಪನಾ ತಿಳಯವಳಿಕೆಗೆ ಒತ್ತು.

- ಶಿಕ್ಷಣ ಸಂಸ್ಥೆಗಳ ಪುನರ್ನಿರ್ಮಾಣ ಹಾಗೂ ಸ್ಥಳೀಯ ಭಾಷೆಗಳಲ್ಲಿ ಭೋಧನಾ ವ್ಯವಸ್ಥೆ

- ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಹಾಗೂ ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆಯ ಸ್ಥಾಪನೆ

- ಕಡಿಮೆ ಧರದಲ್ಲಿ ಉಚ್ಚ ದರ್ಜೆಯ ಶಿಕ್ಷಣವನ್ನು ಒದಗಿಸುವುದು ಹಾಗೂ ವೃತ್ತಿ ಆಧಾರಿತ ಶಿಕ್ಷಣಕ್ಕೆ ಆದ್ಯತೆ

- ಸಮಗ್ರ ಮತ್ತು ಬಹುಶಿಸ್ತೀಯ ಶಿಕ್ಷಣ ವ್ಯವಸ್ಥೆಯ ಸ್ಥಾಪನೆ

- ಶಾಲೆಯಿಂದ ಹೊರಗುಳಿದಿರುವ ೨ ಕೋಟಿ ಮಕ್ಕಳನ್ನು ಮರಳಿ ಶಾಲೆಗೆ ತರುವುದು.

- ಭಾಷಾ ಹೇರಿಕೆಯನ್ನು ತಡೆಗಟ್ಟುವುದು ಮತ್ತು ಮುಕ್ತ ಶಾಲೆ ವ್ಯವಸ್ಥೆಗೆ ಪ್ರೋತ್ಸಾಹ

- ಮಾನಸಿಕ, ದೈಹಿಕ ಮತ್ತು ಬೌದ್ಧಿಕ ಪ್ರಗತಿಗೆ ಆದ್ಯತೆ.

- ಸರ್ಕಾರಿ ಶಾಲೆಗಳ ವಿಶ್ವಾಸಾರ್ಹತೆಯ ಮರುಸ್ಥಾಪನೆ

- ವಿಜ್ಞಾನ ಸೇರಿದಂತೆ ಎಲ್ಲಾ ವಿಷಯಗಳ ಪಠ್ಯಪುಸ್ತಕಗಳನ್ನು ಮಾತೃ ಭಾಷೆಯಲ್ಲಿಯೇ ಒದಗಿಸುವುದು.

- ಸಂಜ್ಞೆ ಭಾಷೆಯ ಬಳಕೆ ಮತ್ತು ಅಭಿವೃದ್ಧಿಗೆ ಪ್ರೋತ್ಸಾಹ

- ಹೆಚ್ಚು ಪ್ರಮಾಣದ ಅಧ್ಯಾಪಕರ ವರ್ಗಾವಣೆಯನ್ನು ತಡೆಯುವುದು. ಹಾಗೂ ಪರಿಣಿತ ಭೋಧಕರ ನೇಮಕ

- ಇತ್ಯಾದಿ.

ಭಾಧಕಗಳು,

- ಮಾತೃ ಭಾಷೆಯಲ್ಲಿ ಕಲಿಕಾ ಸಾಮಗ್ರಿ ಒದಗಿಸುವುದು ಕಷ್ಟಸಾಧ್ಯವಾದ ಕೆಲಸ.

- ಪದವಿ ಶಿಕ್ಷಣದಲ್ಲಿ ಒಂದು ಎರಡು ವರ್ಷಕ್ಕೆ ಕಾಲೇಜು ಬಿಡುವವರಿಗೆ ಡಿಪ್ಲೊಮೋ ಪ್ರಮಾಣ ಪತ್ರ ನೀಡುವುದು ಪರೋಕ್ಷವಾಗಿ ವಿದ್ಯಾರ್ಥಿಗಳನ್ನು ಕಾಲೇಜು ತೊರೆಯಲು ಪ್ರೋತ್ಸಾಹಿಸಬಹುದು.

- “ರಾಜ್ಯದ ಸಂಸ್ಕೃತಿಗೆ ಅನುಗುಣವಾಗಿ ಪಠ್ಯ ಮತ್ತು ಭೋಧನಾ ಕ್ರಮವನ್ನು ರೂಪಿಸಬೇಕಾಗುತ್ತದೆ. ಆದರೆ ನೂತನ ಶಿಕ್ಷಣ ನೀತಿಯು ಈ ಅಂಶಗಳನ್ನು ಪರಿಗಣಿಸದೆ ಏಕರೂಪದ ಶಿಕ್ಷಣ ಬೇಕು ಎಂದು ಹೇಳುತ್ತದೆ” ಎಂದು – ರಾಷ್ಟ್ರೀಯ ಶಕ್ಷಣ ನೀತಿ ಅಧ್ಯಯನ ಸಮಿತಿ, ಪಶ್ಚಿಮ ಬಂಗಾಳ. ಹೇಳಿರುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ.

- ಭಾಷಾ ಹೇರಿಕೆಯನ್ನು ನಿಲ್ಲಿಸುತ್ತೇವೆ ಎಂದು ಹೇಳುವುದರೊಂದಿಗೆ ತ್ರಿಭಾಷಾ ಸ್ತೂತ್ರವನ್ನು ಮುಂದುವರೆಸುವುದಾಗಿ ಹೇಳಿರುವುದು ಗೊಂದಲಕ್ಕೆ ಕಾರಣವಾಗಿದೆ.

- ಈ ಶಿಕ್ಷಣ ನೀತಿಯ ಸಂಪೂರ್ಣ ಆದರ್ಶವಾದ ಶಿಕ್ಷಣ ವ್ಯವಸ್ಥೆಯನ್ನು ಪ್ರತಿಪಾದಿಸುವುದಾದರೂ ಸಹಾ ವಾಸ್ತವತೆಗೆ ದೂರವಾಗಿದೆ ಎಂಬ ಆರೋಪವಿದೆ.

- ಈ ನೀತಿಯ ಸಂಪೂರ್ಣ ಜಾರಿಗೆ ೨೦ ವರ್ಷಗಳ ಕಾಲಾವಕಾಶವನ್ನು ನಿಗಧಿ ಮಾಡಲಾಗಿದೆ. ಮುಂದೆ ಉಂಟಾಗಬಹುದಾದ ಶೈಕ್ಷಣಿಕ ಬೇಡಿಕೆಗಳನ್ನು ಪೂರೈಸುವಲ್ಲಿ ಹಾಗೂ ಅದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲಗಳ ಕುರಿತು ಈ ನೀತಿ ಮೌನ ವಹಿಸಿದೆ.

ಹೀಗೆ ರಾಷ್ಟ್ರೀಯ ಶಿಕ್ಷಣ ನೀತಿ ಬಹಳಾ ಉದ್ದಾತ್ತವಾದ ಆದರ್ಶಗಳೊಂದಿಗೆ ಜಾರಿಯಾಗುತ್ತಿದ್ದೆ. ಈ ನೀತಿಯಲ್ಲಿ ನಮ್ಮ ರಾಷ್ಟ್ರದ ಶಿಕ್ಷಣ ಮಟ್ಟವನ್ನು ಸುದಾರಿಸಬಲ್ಲ, ಪರಿವರ್ತಿಸಬಲ್ಲ ಹಲವಾರು ಕ್ರಮಗಳನ್ನು ಪಟ್ಟಿಮಾಡಲಾಗಿದೆ. ಅವೆಲ್ಲ ಜಾರಿಯಾದ ಪಕ್ಷದಲ್ಲಿ ಈ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಯಶಸ್ವಿಯಾದ ಹಾಗೆ, ಅದಾಗ್ಯೂ ಈ ನೀತಿಯಲ್ಲಿ ಕೆಲವು ಗೊಂದಲಗಳು ಹಾಗೂ ನ್ಯೂನ್ಯತೆಗಳು ಹಾಗೆ ಉಳಿದಿರುವುದನ್ನು ನಾವು ನಿರ್ಲಕ್ಷಿಸುವಂತಿಲ್ಲ. ಇಂತಹಾ ನ್ಯೂನ್ಯತೆಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸುವ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಯಶಸ್ವಿಯಾಗಿ ಜಾರಿಯಾಗಲಿ ಎಂಬ ಸದಾಶಯ ಪ್ರತಿಯೊಬ್ಬರದ್ದು ಆಗಿದ್ದು ಈ ನಿಟ್ಟಿನಲ್ಲಿ  ಈಗಾಗಲೇ ಇದರ ಬಗ್ಗೆ ನಡೆದಿರುವ ಕೆಲವು ಚರ್ಚೆಗಳನ್ನು ಆಧರಿಸಿ ಪ್ರಸ್ತುತ ಲೇಖನದಲ್ಲಿ ಚರ್ಚಿಸಲಾಗಿದೆ.

ಕೊನೆ ಟಿಪ್ಪಣಿ :

 ೧ – ಪುಟ ೩, ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦, ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ. www.education.govt.in.  ೨ – ಪುಟ – ೭, ಅದೇ.

ಮಾಹಿತಿ ಋಣ :

ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦, ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ. www.education.govt.in.

ಪ್ರೊ ಕೆ. ಬಾಲವೀರಾರೆಡ್ಡಿ. “ವಿಶೇಷ ಲೇಖನ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೧”, ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಜಾಲತಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ. – ಜುಲೈ ೧, ೨೦೨೧. 

ಡಾ. ರಾಜೇಂದ್ರ ಪ್ರಸಾದ್‌, “ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦, ಅನುಕೂಲ, ಸವಾಲು, ಸಾಧ್ಯತೆಗಳು”, ಪ್ರತಿಧ್ವನಿ – ೦೧ ಸೆಪ್ಟೆಂಬರ್‌ ೨೦೨೦.

 ಡಾ ರೋಷನಿ‌ ಸಿಂಗ್, “ New Education Policy : Advantages & Disadvantages”, ಟೈಂಸ್‌ ಆಫ್‌ ಇಂಡಿಯಾ, - ಮೇ ೨೫, ೨೦೨೧.

“ಆಳ – ಅಗಲ ; ರಾಷ್ಟ್ರೀಯ ಶಿಕ್ಷಣ ನೀತಿ – ೨೦೨೦ ಕ್ಕೆ ೧ ವರ್ಷ- ಶಿಕ್ಷಣ ನೀತಿ ಜಾರಿಯ ಪಜೀತಿ” ಪ್ರಜಾವಾಣಿ, - ೨೯ ಜುಲೈ, ೨೦೨೧.

German Historical Institute London Blog, National Education policy 2020 : a discussion on education policy reform in india, ghil.hypotheses.org – 14 october 2020.

Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.