ಪ್ರಶ್ನೆ ಉತ್ತರಗಳು ( ಸಂದರ್ಶನ)

 

(ಚಿತ್ರ ಕೃಪೆ : ಅಂತರ್ಜಾಲ)

ಪ್ರಶ್ನೇ ೧) ಭಾರತದ  ಶಿಕ್ಷಣದಲ್ಲಿರುವ ಸವಾಲುಗಳು ಯಾವುವು ? ಈ ಸವಾಲುಗಳನ್ನು ಅಧ್ಯಾಪಕರಾಗಿ ನೀವು ಹೇಗೆ  ವಿಶ್ಲೇಶಿಸುವಿರಿ :

            ಭಾರತದ ಶಿಕ್ಷಣದಲ್ಲಿನ ಸವಾಲುಗಳನ್ನು ನೊಡುವುದಾದರೇ , ಒಂದು ಕಾಲಕ್ಕೆ ಶಿಕ್ಷಣವನ್ನು ಪಡೆಯುವುದೇ ಒಂದು ದೊಡ್ಡ ಸವಾಲಿನ ಕೆಲಸವಾಗಿತ್ತು . ಹಲವರ ಶ್ರಮ ,ಪರಿಶ್ರಮ ,ಹೋರಾಟದ ಫಲವಾಗಿ ನಾವೆಲ್ಲರೂ ಶಿಕ್ಷಣವನ್ನು ಪಡೆಯುವಂತಾಯಿತು .ಶಿಕ್ಷಣ ನಮ್ಮ ಬದುಕನ್ನು ಹಸನುಗೊಳ್ಳಿಸುವ ಕಾರ್ಯವನ್ನು ಸಹ ಮಾಡಿತು . ಪ್ರಾರಂಭದಲ್ಲಿ ವಸಾಹತ್ತು ಶಾಹಿ ಆಡಳಿತಗಾರರು ತಮ್ಮ ಕಂಪನಿಗಳ ಆಡಳಿತದಲ್ಲಿ ಸಣ್ಣಪುಟ್ಟ ಕೆಲಸಗಳಿಗೆ ನಿಯಮಿಸಿಕೊಳ್ಳುವ ಉದ್ದೇಶದಿಂದ ಶಿಕ್ಷಣವನ್ನು ಪ್ರಾರಂಭಿಸಿದರು , ಆದಾಗ್ಯು ಹಲವು ಕಾಲ ಭಾರತದ ಎಲ್ಲಾ ಸ್ತರದ ಜನರು ಸುಲಭವಾಗಿ ಶಿಕ್ಷಣಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕೆ ಬಡತನ , ಜಾತಿ ವ್ಯವಸ್ಥೆ  ಇತ್ಯಾದಿ ಕಾರಣಗಳನ್ನು ನೀಡಬಹುದು. ಆದರೇ ಭಾರತವು ವಸಾಹತುಶಾಹಿ ಆಡಳಿತದಿಂದ ಸ್ವತಂತ್ರ್ಯವನ್ನು ಪಡೆದ ಮೇಲು ಸಹಾ ಪರಿಸ್ಥಿತಿ ನಿರೀಕ್ಷಿತ ಮಟ್ಟದಲ್ಲಿ ಬದಲಾಗದೇ ಇರುವುದು ನಿಜಕ್ಕೂ ಚಿಂತಿಸಬೇಕಾದ ವಿಚಾರವೇ ಆಗಿದೆ .

 

ಇಂದಿಗೂ ಸಹಾ ಭಾರತದಲ್ಲಿ ಒಬ್ಬ ಸಾಮಾನ್ಯ ಮಗು ಶಿಕ್ಷಣವನ್ನು ಪಡೆದು ಉನ್ನತ ಶಿಕ್ಷಣಕ್ಕೆ ಬರುವುದು, ಮುಂದೆ ಉದ್ಯೋಗವನ್ನು ಗಿಟ್ಟಿಸಿಕೊಂಡು ಜೀವನ ಮಾಡುವುದು ಸುಲಭದ ಮಾತೇನು ಅಲ್ಲ .ಪ್ರತಿ ಹಂತದಲ್ಲಿಯು ಹಲವಾರು ಸವಾಲುಗಳನ್ನು ಎದುರಿಸುತ್ತಲೇ ಸಾಗಬೇಕಾಗಿದೆ. ಕಾಲ ಬದಲಾದಂತೆ ಭಾರತೀಯ ಶಿಕ್ಷಣದಲ್ಲಿನ ಸಮಸ್ಯೆಗಳು , ಸವಾಲುಗಳು ಹೆಚ್ಚುತ್ತಲೆ ಇರುವುದು ಒಂದು ಸೊಜಿಗದ ವಿಚಾರವೇ ಆಗಿದೆ . ಒಂದು ಕಾಲಕ್ಕೆ ಪದವಿ ಶಿಕ್ಷಣ ಪೂರೈಸಿದರೆ ಸಾಕ್ಕಿತ್ತು , ಯಾವುದಾದರೂ ಸರ್ಕಾರಿ ಕೆಲಸ ಸಿಕ್ಕಿಬಿಡುತ್ತಿತ್ತು . ಆದರೇ ಈಗ ಪರಿಸ್ಥಿತಿ ಬದಲಾಗಿದೆ , ಹಲವು ಜನ ಪದವೀಧರರು , ಸ್ನಾತಕೋತ್ತರ ಪದವೀಧರರು , ಸಹಾ ಉದ್ಯೋಗ ವಿಲ್ಲದೇ ಅಲೆಯುತ್ತಿರುವುದು ಸಾಮಾನ್ಯವಾಗಿದೆ.

 

ಭಾರತದ ಶಿಕ್ಷಣದಲ್ಲಿನ ಸವಾಲುಗಳನ್ನು ಮುಖ್ಯವಾಗಿ ನಾಲ್ಕು ರೀತಿಯಾಗಿ ವಿಂಗಡಿಸಿ ನೊಡಬಹುದು:

೧) ಶಿಕ್ಷಣವನ್ನು ಪಡೆಯುವಲ್ಲಿ  ಎದುರಾಗುವ ಸವಾಲುಗಳು.

೨) ಶಿಕ್ಷಣ ವನ್ನು ಪಡೆಯುವವರು ಎದುರಿಸುತ್ತಿರುವ ಸವಾಲುಗಳು.

೩) ಶಿಕ್ಷಣ ಪಡೆದ ನಂತರ  ಎದುರಿಸಬೇಕಾದ ಸವಾಲುಗಳು .

೪) ಸಾಮಾಜಿಕ ಪರಿಣಾಮಗಳು .

           

 ೧) ಶಿಕ್ಷಣವನ್ನು ಪಡೆಯುವಲ್ಲಿ ಎದುರಾಗುವ ಸವಾಲುಗಳನ್ನು ಗಮನಿಸುವುದಾದರೆ , ಈ ಮೊದಲೇ ಹೇಳಿದಂತೆ ಬಾರತೀಯ ಪರಿಸರದಲ್ಲಿ ಶಿಕ್ಷಣವನ್ನು ಪಡೆಯುವುದು ಇಂದಿಗೂ ಸಹ ಒಂದು ಸವಾಲಿನ ಕೆಲಸವೇ , ಕೆಲವು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದಾಗ ,ಈಗಿನ ಪರಿಸ್ಥಿತಿ ಹೆಚ್ಚು ಬದಲಾಗಿರುವುದು ನಿಜವಾದರೂ ಸಹಿತ  , ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ . ಅದಕ್ಕೆ ಪ್ರಮುಖ ಕಾರಣಗಳನ್ನು ನೊಡುವುದಾದರೇ . ಮೊದಲನೆಯದಾಗಿ , ಬಡತನ , ಬಡತನವು ಒಂದು ದೊಡ್ಡ ಸಮಸ್ಯೆಯಾಗಿ ಇಂದಿಗೂ ನಮ್ಮನು ಕಾಡುತ್ತಿದೆ. ಎಷ್ಟೋ ಜನ ನಿಲ್ಲಲು ನೆಲೆ ಯಿಲ್ಲದೇ ಅಲೆಮಾರಿಗಳಾಗಿ ಇಂದಿಗೂ ಅಲೆಯುವ ಪರಿಸ್ಥಿತಿಯನ್ನು ನೋಡಬಹುದಾಗಿದೆ. ಹೀಗಿರುವಾಗ ಅಂತಹವರು ಶಿಕ್ಷಣ ಪಡೆಯುವುದು ಅದು ಹೇಗೆ ಸಾಧ್ಯ  . ಇನ್ನು ಹಣದ ಆಸೆಗಾಗಿ ಮಕ್ಕಳನ್ನು ಕೂಲಿಗೆ ಕಳುಹಿಸುವುದು , ಶಾಲೆಯ ಖರ್ಚುಗಳಿಗೆ ಹಣ ಇಲ್ಲದೇ ಇರುವುದು , ಸರ್ಕಾರಿ ಶಾಲೆಗಳ ಸಮಸ್ಯೆಗಳು , ಅನಾರೋಗ್ಯ , ಮಕ್ಕಳನ್ನು ತನ್ನತ್ತ ಸೆಳೆಯಲಾರದ ಶಿಕ್ಷಣ ವ್ಯವಸ್ಥೆ , ಶಾಲೆಯ ಪರಕೀಯ ವಾತಾವರಣ ಹೀಗೆ ಇನ್ನೂ ಹಲವು ಸಮಸ್ಯೆಗಳನ್ನು ಗುರ್ತಿಸಬಹುದು.

 

 ೨) ಶಿಕ್ಷಣವನ್ನು ಪಡೆಯುತ್ತಿರುವವರು ಎದುರುಸುತ್ತಿರುವ ಸವಾಲುಗಳನ್ನು ನೊಡುವುದಾದರೇ , ಹಲವು ಕಷ್ಟಗಳನ್ನು ,ಸವಾಲುಗಳನ್ನು , ಎದುರಿಸಿ ಶಾಲೆ ಕಲಿಯಲು ಬಂದ ಮಕ್ಕಳು ಪ್ರಾರಂಭದಲ್ಲಿಯೇ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ , ಅದರಲ್ಲಿ ಪ್ರಮುಖವಾಗಿ ,ಸಾರಿಗೆ ವ್ಯವಸ್ಥೆಯ ಸಮಸ್ಯೆಗಳು , ಮೇಲ್ವರ್ಗದ ವಿದ್ಯಾರ್ಥಿಗಳೊಂದಿಗೆ ಹೊಂದಿ ಕೊಳ್ಳಲಾಗದಿರುವಿಕೆ ,ಪರಕೀಯ ವಾತಾವರಣ , ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗಳಿಂದ ಎದುರುಸುವ ಸಮಸ್ಯೆಗಳು , ಹೊಸ ಪಠ್ಯಕ್ರಮ , ಶಾಲೆಯ ವಾತಾವರಣ , ಮುಂತಾದವುಗಳೊಂದಿಗೆ ಹೊಂದೊಕೊಳ್ಳಲು ತುಂಬಾ ಕಷ್ಟಪಡಬೇಕಾಗುವುದಲ್ಲದೇ . ಹಲವು ಸಲ ತನ್ನನೇ ತಾನು ಕೇಳರಿಮೆಗೆ ಒಳಪಡಿಸಿಕೊಳ್ಳಬೇಕಾಗುತ್ತದೆ . ಅದರ ಜೊತೆಗೆ ಕೆಲವು ಪರಕೀಯ ಭಾಷೆಗಳನ್ನು ಬಲವಂತವಾಗಿ ಹೇರಿಕೆ ಮಾಡುವುದು . ಶಿಕ್ಷೆಗಳನ್ನು ವಿಧಿಸುವುದು ಇತ್ಯಾಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ . ಶಿಕ್ಷಣದ ಕ್ಷೇತ್ರದಲ್ಲಿಈಗೀಗ  ಸಾಕಷ್ಟು ಬದಲಾವಣೆಗಳು ಆಗಿತ್ತಿವೆ. ನಲಿ - ಕಲಿ  CCE , EDUTAINMENT ಮುಂತಾದ ಸುಧಾರಣ ಕ್ರಮಗಳು ಜಾರಿಯಲ್ಲಿದ್ದರೂ ಸಹಾ , ಅವು ಎಲ್ಲಾ ವಿದ್ಯಾರ್ಥಿಗಳಿಗೂ ತಲುಪುತಿಲ್ಲ ಎಂಬುದನ್ನು ನಾವು ಗುರುತಿಸಬೇಕಾಗಿದೆ .

 

೩) ಶಿಕ್ಷಣ ಪಡೆದ ನಂತರದ ಸವಾಲುಗಳು ಏನು ಎಂದು ನೊಡುವುದಾದರೇ , ಮುಖ್ಯವಾಗಿ ಶಿಕ್ಷಣದ ಉದ್ಧೇಶ ಜೀವನ ಮಟ್ಟದ ಸುಧಾರಣೆ , ಅದು ಒಳ್ಳೆಯ ಉದ್ಯೋಗದಿಂದ ಸಾಧ್ಯವಾಗುತ್ತದೆ . ಆದರೇ ನಮ್ಮ ಶಿಕ್ಷಣ ನಮಗೆ ಉದ್ಯೋಗ ಬರವಸೆಯನ್ನೇ ಕೊಡುತ್ತಿಲ್ಲ , ಹಿಂದೆ ಚರ್ಚೆಸಿದಂತೆ ಪದವೀದರರು , ಸ್ನಾತಕ ಪದವೀಧರರು ಸಹಾ ಉದ್ಯೋಗವಿಲ್ಲದೇ ಅಲೆಯುತ್ತಿದಾರೆ . ಇದು ಜನರನ್ನು ಶಿಕ್ಷಣದಿಂದ ವಿಮುಖರನ್ನಾಗಿಸುವ ಮತ್ತೊಂದು ಕಾರಣ ವಾಗಿದೆ , ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ “ಓದಿ ಓದಿ ನಮೂರಲ್ಲಿ ಒಬ್ಬ ಹುಚ್ಚ ಆಗಿಬಿಟ್ಟ “ ಅಂತಲೋ ಅಥವಾ “ ಸಧುವುಲನ್ನಿ ಚದಿವಿ ಚದಿವಿ ಚಚ್ಚಿಪೊಯೇದಿಂತೆಕಾನಿ…… “ ಎಂಬ ತತ್ವಪದದ ವಾಕ್ಯವನೋ ಆಗಾಗ ಹೇಳುವುದನ್ನೋ ಗಮನಿಸಬಹುದು . ಈ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವುಗಳ ಆಳದ ಧ್ವನಿ ಶಿಕ್ಷಣದ ಸಮಸ್ಯೆಗಳನ್ನೇ ವಿಡಂಬನಾತ್ಮಕವಾಗಿ ದ್ವನಿಸಿತ್ತಿದೆ ಎಂಬುದು ನಮಗೆ ಅರ್ಥವಾಗದೆ ಇರುವುದಿಲ್ಲ .  ಇನ್ನು ಶಿಕ್ಷಣ ಪಡೆದ ಯುವಕರು ತಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕ ಉದ್ಯೂಗವನ್ನೇ ಅರಸುತ್ತಿರುತ್ತಾರೆ ,ಕಡಿಮೆ ದರ್ಜೆಯ ಉದ್ಯೋಗ ಅವರ ವಿದ್ಯಾ ಘನತೆಗೆ ತಕ್ಕುದಲ್ಲ ಎಂಬುದು ಅವರ ಯೋಚನೆ , ಹೀಗೆ ಸಾಕಷ್ಟು ಕಷ್ಟಗಳನ್ನು ಸವಾಲುಗಳನ್ನು ಎದುರುಸಿ ಶಿಕ್ಷಣ ಪಡೆದ ಯುವಕರಿಗೆ ಕಡೆಗೆ ಸಿಗುವುದೇನು ಎಂಬುದನ್ನು ನಾವು ಅಲೋಚಿಸಬೇಕಾಗಿದೆ . ಹಾಗೆಂದು ಶಿಕ್ಷಣವನ್ನು ವಿರೋಧಿಸುವುದು ನನ್ನ ಉದ್ದೇಶ ಖಂಡಿತಾ ಅಲ್ಲ ಬದಲಾಗಿ , ಶಿಕ್ಷಣದಲ್ಲಿನ ಹಲವಾರು ಸಮಸ್ಯೆಗಳನ್ನು ನಿವಾರಿಸಬೇಕಾಗಿದೆ ಎಂಬುದನ್ನು ಒತ್ತು ಹೇಳುವುದಷ್ಟೇ ಇಲ್ಲಿನ ಉದೇಶವಾಗಿದೆ.

 

೪) ಸಾಮಾಜಿಕ ಪರಿಣಾಮಗಳು , ಭಾರತಕ್ಕೆ ಆಧುನಿಕ ಶಿಕ್ಷಣದ ಪ್ರವೇಷ ಹಲವು ಪಲ್ಲಟಗಳಿಗೆ ಕಾರಣವಾಗಿದ್ದು ನಿಜ ,ಅದರ ಒಟ್ಟೊಟ್ಟಿಗೆ ಅದು ಹಲವು ಹೊಸ ಸಮಸ್ಯೆಗಳಿಗೆ ಹಾಗೂ ಸಾಮಾಜಿಕ ಮೇಲು ಕೀಳುಗಳಿಗೆ ಕಾರಣವಾದುದನ್ನು ನಾವು ಗಮನಿಸಬಹುದು . ಪ್ರಮುಖವಾಗಿ ಶಿಕ್ಷ಼ಣ ಪಡೆದ ನಮ್ಮ ಮೊದಲ ತಲೆಮಾರಿನ ಯುವಕರು ಇಂಗ್ಲೀ಼ಷ್‌ ಶಿಕ್ಷಣ, ಪಾಶ್ಚಾತ್ಯರ ಅನುಕರಣೆ , ಮೊದಲಾದವುಗಳಿಗೆ ಸಿಲುಕಿ ತಮ್ಮ ಮೂಲ ನೆಲೆದ ಬಗ್ಗೆ ಕೀಳರಿಮೆಯನ್ನು ಬೆಳೆಸಿಕೊಂಡದನ್ನು ನಾವು ನೋಡಬಹುದು , ಅದೇ ರೀತಿ ಇಲ್ಲಿನ ಏಕರೂಪಿ ಶಕ್ಷಣ ವು ಇಲ್ಲಿನ ಬಹುತ್ವವನ್ನು ತುಳಿಯುವ , ನಿರಾಕರಿಸುವ ,ಅಥವಾ ಅಂಚಿಗೆ ತಳುವ ಕೆಲಸವನ್ನು ವ್ಯವಸ್ಥಿತವಾಗಿಯೇ ಮಾಡುತ್ತಿದೆ ಎಂಬುದನ್ನು ಮರೆಯುವಂತಿಲ್ಲ , ಅದರ ಜೋತೆ ಹಳ್ಳಿಯ ಯುವಕರು ನಗರಗಳತ್ತ ಮುಖ ಮಾಡುತ್ತಿರುವುದು , ಕೃಷಿಗೆ ವಿಮುಖವಾಗುತ್ತಿರುವುದು , ಅದೇ ರೀತಿ ವಿದೇಶಿ ವ್ಯಾಮೋಹ ವನ್ನು ಬೆಳೆಸಿಕೊಳ್ಳುತ್ತಿರುವುದು ತುಂಬಾ ಅನಾರೋಗ್ಯದ ಬೆಳವಣಿಗೆಯೆಂಬುದನ್ನು ನಾವು ಗಮನಿಸಬೇಕಾಗಿದೆ. ಹಲವು ಬುಡಕಟ್ಟುಗಳು , ಹಲವು ಪ್ರಾಚೀನ ಭಾಷೆಗಳು ನಶಿಸುತ್ತಿರುವುದು , ಆದುನಿಕತೆ ,ಅಭಿವೃಧ್ಧಿಯ ಹೆಸರಿನಲ್ಲಿ ಆಗುತ್ತಿರುವ ಪ್ರಕೃತಿ ನಾಶ ಮುಂತಾದವನ್ನು ನಾವು ಗಮನಿಸಬಹುದಾಗಿದೆ. ಹೀಗೆ ಹಲವು ಭಾಷೆ ಹಲವು ಉಪಸಂಸ್ಕ್ರತಿ ಗಳು ನಿರ್ಲಕ್ಷಕ್ಕೆ ಒಳಗಾಗುತ್ತಿರುವುದು ನಿಜಕ್ಕೂ ಚಿಂತಿಸುವ ವಿಷಯವೇ ಆಗಿದೆ. ಅದರ ಜೊತೆಗೆ ಹಲವು ಕಸುಭುಗಳ ಜನರು ಆಧುನಿಕ ಶಿಕ್ಷಣದ ಕಾರಣವಾಗಿ ತಮ್ಮ ಕಸುಬುಗಳನ್ನು ಕಳೆದುಕೊಳ್ಳುವುದನ್ನು ನಾವು ನೊಡಬಹುದಾಗಿದೆ.

            ಈ ರೀತಿಯ ಹಲವು ಸವಾಲುಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆ ಹಾಗೂ ಯುವ ಜನಾಂಗ  ಅನುಭವಿಸುತ್ತಿದ್ದು , ಈ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಕೆಲವು ಕ್ರಮಗಳ ಬಗ್ಗೆ ನೊಡುವುದಾದರೇ ,

ಈಗಾಗಲೇ ಜಾರಿಯಲ್ಲಿರುವ ಹಲವು ಶ್ಯಕ್ಷಣಿಕ ಸುಧಾರಣಾ ಕ್ರಮಗಳನ್ನು  ಮತಷ್ಟು ಪ್ರಭಾವಯುತವಾಗಿ ಜಾರಿಗೆ ತರುವುದು ,

ಮಕ್ಕಳನ್ನು ಶಾಲೆಕಡೆಗೆ ಆಕರ್ಷಿಸುವ ಯೋಜನೆಗಳನ್ನು ಹಮ್ಮಿಕೊಳ್ಳುವುದು .

ಪಠ್ಯಕ್ರಮ ಹಾಗೂ ಶಿಕ್ಷಣದ ವಿಚಾರದಲ್ಲಿ ಸ್ಥಳೀಯ ವಿಚಾರಗಳಿಗೆ ಆಧ್ಯತೆ ನೀಡುವುದು.

ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುವುದು .

ಏಕರೂಪಿ ಶಿಕ್ಷಣದ ಉದ್ದೇಶಗಳನ್ನು ಅವಶ್ಯಕತೆಗೆ ತಕ್ಕಷ್ಟು ಸಡಿಲಿಸುವುದು.

ಶಿಕ್ಷಣದಲ್ಲಿ “ಎಡುಟೈನ್‌ ಮೆಂಟ್‌ “ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು.

ಅಂಚಿಗೆ ಸರಿಸಲ್ಪಟ್ಟ ಸಮುದಾಯಗಳ , ಕಸುಬುಗಳಿಗೆ ಆದ್ಯತೆ ಹಾಗೂ ಮಾನ್ಯತೆ ಯನ್ನು ನೀಡುವುದು .

ಸಾರ್ವಜನಿಕ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು .

ಉಪ ಸಂಸ್ಕೃತಿಗಳ ಅಧ್ಯಾಯನಕ್ಕೆ ಒತ್ತು ನೀಡುವುದು .

ವೈಜ್ಞಾನಿಕ ಪಠ್ಯಕ್ರಮಕ್ಕೆ ಆದ್ಯತೆ.

ಕೃಷಿ ಆಧಾರಿತ ಶಿಕ್ಷಣಕ್ಕೆ ಆದ್ಯತೆ.

ಸ್ತ್ರೀ ಶಿಕ್ಷಣಕ್ಕೆ ಆದ್ಯತೆ .

ಶಿಕ್ಷಕರ ಕೊರತೆಯನ್ನು ನೀಗಿಸುವಿಕೆ.

ಸ್ಥಳೀಯ ಭಾಷೆಗಳ ಅಭಿವೃದ್ಧಿಗೆ ಆದ್ಯತೆ ,  ಶಿಕ್ಷಣದಲ್ಲಿ ಸ್ಥಳೀಯ ಭಾಷೆಯ ಕಡ್ಡಾಯಗೊಳಿಸುವಿಕೆ.

ಉದ್ಯೊಗ ಬರವಸೆಯನ್ನು ನೀಡುವುದು , ಉದ್ಯೋಗಗಳ ಸೃಷ್ಟಿಗೆ ಆದ್ಯತೆ.

ಶಿಕ್ಷಣವನ್ನು ಒಂದು ಉತ್ಪಾದನಾ ಚಟುವಟಿಕೆಯಾಗಿ ಭಾವಿಸಿ ಹೆಚ್ಚಿನ ಆದ್ಯತೆಯನ್ನು ನೀಡುವುದು . ಇತ್ಯಾದಿ

ಎಲ್ಲಕ್ಕಿಂತಲೂ ಹೆಚ್ಚಾಗಿ , ಸಧ್ಯದ ಪರಿಸ್ಥಿತಿಯಲ್ಲಿ ನಮ್ಮ ಸಾಮಾಜಿಕ ಪರಿಸರ ಹೆಚ್ಚು ಹೆಚ್ಚು ಕಲುಷಿತ ಗೊಳ್ಳುತ್ತಿದೆ , ಆರ್ಥಿಕವಾಗಿ , ಸಾಮಾಜಿಕವಾಗಿ , ಆರೋಗ್ಯದ ದೃಷ್ಟಿಯಲ್ಲಿ ನಾವು ಹಿಮ್ಮುಖ ಚಲನೆಯಲ್ಲಿರುವ ಸಂದರ್ಭದಲ್ಲಿ , ಮತ್ತೆ ಚೇತರಿಸಿಕೊಳ್ಳುವ ಹಾಗೂ ಮತ್ತೊಮ್ಮೆ ಸುಧಾರಣಾ ಪಥದತ್ತ ಮುನ್ನಡೆಯುವ  ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಸವಾಲು ಇಂದು ನಮ್ಮೆಲ್ಲರ ಮುಂದಿದೆ , ಆ ಸವಾಲನ್ನು ನಾವು ಮೇಲಿನ ಕ್ರಮಗಳ ಮೂಲಕ ಸೂಕ್ತವಾಗಿ ಎದುರುಸಬಹುದೆಂಬುದು ನನ್ನ ನಂಬಿಕೆ.

( ಒಬ್ಬ ಅದ್ಯಾಪಕನಾಗಿ ನಮ್ಮ ಶಿಕ್ಷಣ ಪದ್ದತಿಯ ಸವಾಲುಗಳನ್ನು ,ಅವುಗಳ ಹಿನ್ನೆಲೆ , ಮತ್ತು ಕೆಲವು ಸಮಸ್ಯೆಗಳು,  ಹಾಗೇ ಕೆಲವು ಮಾರ್ಗೊಪಾಯ ಕ್ರಮಗಳನ್ನು ನಾನು ಮೇಲಿನಂತೆ ವಿಶ್ಲೇ಼ಶಿಸುತ್ತೇನೆ)  

 

 

ಪ್ರಶ್ನೇ  ೨ ) ಉನ್ನತ ಶಿಕ್ಷಣದಲ್ಲಿರುವ ವಿದ್ಯಾರ್ಥಿ ಯುವ ಜನರಿಗಿರುವ ಸಮಸ್ಯೆಗಳೇನು ? ವಿಶ್ಲೇಶಿಸಿ:

             ನಮ್ಮ ಭಾರತದ ಸಾಮಾಜಿಕ ಪರಿಸ್ಥಿತಿ ಹಾಗೂ ಶೈಕ್ಷಣಿಕ ಪರಿಸ್ಥಿತಿಗಳ ಪರಿಣಾಮವಾಗಿ ನಮ್ಮಲ್ಲಿ ಉನ್ನತ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿರುವ ವಿಧ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ , ಅದರಲ್ಲಿಯೂ ಹಿಂದುಳಿದ ಸಮುದಾಯದ ಯುವಕರು , ಅದರಲ್ಲಿ ಹೆಚ್ಚಾಗಿ ಯುವತಿಯರು ಇಂದಿಗೂ ಸಹಾ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತಿಲ್ಲ.  ಇವೆಲ್ಲದರ ನಡುವೆ ಉನ್ನತ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳಿಗೆ ಹಲವಾರು ಸಮಸ್ಯೆಗಳು ಎದುರಗುತ್ತವೆ .ಮೊದಲನೆಯದಾಗಿ , ಉನ್ನತ ಶಿಕ್ಷಣಕ್ಕೆ ಬರುವ ಹೊತ್ತಿಗೆ ಬೇರೆ ಬೇರೆ ಕೆಲಸಗಳ ಕಡೆಗೆ ಆಕರ್ಷಿಸಲ್ಪಡುತ್ತಾರೆ . ಯಾರೋ ಕೆಲವರು ಅಲ್ಲಿ ಸಿಲುಕಿಕೊಳ್ಳದೇ , ಉನ್ನತ ಶಕ್ಷಣಕ್ಕೆ ಬರುತ್ತಾರೆ, ಅವರಿಗೆ ಪ್ರಾರಂಭದಲ್ಲಿಯೇ ಅಲ್ಲಿ ಹೊಂದಿಕೊಳ್ಳುವುದು ಸಮಸ್ಯೆ ಆಗುತ್ತದೆ. ಮುಂದೆ ಹೊಸ ಪಠ್ಯಕ್ರಮ , ಹೊಸ ವಾತಾವರಣ , ಸಾರಿಗೆ ವ್ಯವಸ್ಥೆ ಹೀಗೆ ಹಲವು ಸವಾಲುಗಳು ಅವರ ಮುಂದಿರುತ್ತವೆ .ಅವುಗಳನ್ನು ಪಟ್ಟಿ ಮಾಡುವುದಾದರೇ ,

ಸಾರಿಗೆ ವ್ಯವಸ್ಥೆಗಳು , ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ಸುಗಳನ್ನು ಹಿಡಿದು ಕಾಲೇಜಿಗೆ ಹೋಗುವುದು ಬಹು ದೊಡ್ಡ ಸಮಸ್ಯೆ ಆಗಿದೆ.

ಪಠ್ಯಕ್ರಮಕ್ಕೆ ಹೊಂದಿಕೊಳ್ಳುವ ಸಮಸ್ಯೆ: ಹಲವು ಭಾರಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಬಂದಾಗ ತಾವು ಹಿಂದೆಂದೂ ಕಾಣದ ಪಾಠಗಳನ್ನು ಕಲಿಯಬೇಕಾಗುತ್ತದೆ . ಹಾಗೂ ಅವುಗಳಿಗೆ ಹೊಂದಿಕೊಳ್ಳುವುದು ಬಂದು ಸವಾಲಿನ ಕೆಲಸವೇ ಆಗಿರುತ್ತೆ .

ಸೆಮಿಸ್ಟರ್‌ ಪರೀಕ್ಷೆಯಿಂದಾಗುವ ಸಮಸ್ಯೆಗಳು ( ಕಾಲಾವಕಾಶದ ವಿಚಾರದಲ್ಲಿ ): ಮೂರು ಮೂರೂ ತಿಂಗಳಿಗೊಮ್ಮೇ ಪರೀಕ್ಷೆಗಳು ಪುನರಾವರ್ತನೆ ಆಗುವುದರಿಂದ , ವಿದ್ಯಾರ್ಥಿಗಳಿಗೆ ಓದುವುದು ಪರೀಕ್ಷೆ ಬರೆಯುವುದು ಇಷ್ಟರಲ್ಲೇ ಸಮಯವೆಲ್ಲಾ ಕಳೆದು ಹೋಗಿ , ಪಠ್ಯೇತರ ಜ್ಞಾನಾರ್ಜನೆಗೆ ಅವಕಾಶವೇ ಇಲ್ಲದಂತಾಗುತ್ತದೆ .

ಮುಂದಿನ ಜೀವನಕ್ಕೆ ಬೇಕಾದ ಸೂಕ್ತ ತರಬೇತಿ ಬಹಳ ಸಲ ಸಿಗದೇ ಹೋಗಬಹುದು. ಸರ್ಕಾರಿ ಸಂಸ್ಥೆಗಳಲ್ಲಿ ,ಆಂಗ್ಲ ಭಾಷಾ ಶಿಕ್ಷಣ , ಗಣಕಯಂತ್ರ ತರಬೇತಿ ಸೇರಿದಂತೆ ಯಾವುದೇ ತರಬೇತಿ ಸಿಗುವುದಿಲ್ಲ

ಮುಂದೆ ಉದ್ಯೂಗಗಳನ್ನು ಪಡೆಯಬೇಕಾದರಿಂದ ಅದಕ್ಕಾಗಿ ತಯಾರಾಗುವ ಸವಾಲು;  ಸಂದರ್ಶನಗಳನ್ನು ಎದುರಿಸುವ , ಉತ್ತಮವಾಗಿ ಸಂವಹನ ನಡೆಸುವ , ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಯಾವುದೇ ತರಬೇತಿ ಇಲ್ಲಿ ಸಿಗದೇ ಇರುವುದರಿಂದ , ಮುಂದೆ ವಿದ್ಯಾರ್ಥಿಗಳು ಪರದಾಡಬೇಕಾಗುತ್ತದೆ

ಭೋಧನೆಗೆ ಸಂಭಂಧಿಸಿದ ಸಮಸ್ಯೆಗಳು ; ಸರಿಯಾದ ಅಧ್ಯಾಪಕರು ಇಂದಿಗೂ ಹಲವು ಕಾಲೇಜುಗಳಲ್ಲಿ ಇಲ್ಲದಿರುವುದು , ಮತ್ತೊಂದು ಸಮಸ್ಯೆ ,

ವಿಶ್ವವಿಧ್ಯಾಲಯದ ರಾಜಕೀಯಗಳಿಗೆ ವಿಧ್ಯಾರ್ಥಿಗಳು ಬಲಿಯಾಗುವಿಕೆ; ಕಾಲೇಜು ಹಾಗೂ ವಿಶ್ವವಿದ್ಯಾಲಯ ಗಳಲ್ಲಿ ವಿದ್ಯಾರ್ಥಿಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವುದನ್ನು ನಾವು ಕಾಣಬಹುದಾಗಿದೆ.ಇದರಿಂದ ತಪ್ಪಿಸಿಕೊಳ್ಳುವುದು ಸಹಾ ವಿದ್ಯಾರ್ಥಿಗಳಿಗೆ ಒಂದು ಸವಾಲಿನ ಕೆಲಸವೇ ಆಗಿದೆ.

ಸರ್ಕಾರದಿಂದ ಸೂಕ್ತ ಸಂಪನ್ಮೂಲಗಳು ಸಿಗದೇ ಹೋಗುವಿಕೆ; ಸರ್ಕಾರ ನೀಡಬೇಕಾದ ವಿದ್ಯಾರ್ಥಿ ನಿಲಯ , ಉಚಿತ ಬಸ್‌ ಪಾಸ್‌ , ವಿದ್ಯಾರ್ಥಿ ವೇತನಗಳು ಸರಿಯಾದ ಸಮಯಕ್ಕೆ ಸಿಗದೇ ಹೋಗುವುದು . ಅದರ ಜೊತೆ ಇಂದಿಗೂ ಸಹಾ ಹಲವು ಕಾಲೇಜುಗಳಲ್ಲಿ ಸೂಕ್ತ ಮೂಲಭೂತ ಸೌಕರ್ಯಗಳಿಲ್ಲದಿರುವುದನ್ನು ಕಾಣಬಹುದಾಗಿದೆ.

ಅವೈಜ್ಷಾನಿಕ ಪಠ್ಯಕ್ರಮ ; ಪಠ್ಯಕ್ರಮ ವಿದ್ಯಾರ್ಥಿ ಜೀವನವನ್ನು ರೂಪಿಸುವಲ್ಲಿ ಬಹು ಮುಖ್ಯ ಪಾತ್ರವನ್ನು ನಿರ್ವಹಿಸುತ್ತೆ , ಹಲವು ಸಲ ಇಂತಹಾ ಪಠ್ಯಕ್ರಮವೇ ಅವೈಜ್ಞಾನಿಕವಾಗಿದ್ದು , ತಮ್ಮ ಉದ್ದೇಶ ಸಾಪಲ್ಯದಲ್ಲಿ ಸೊಲುವುದನ್ನು ಕಾಣಬಹುದು .

ಖಾಸಗಿ ಸಂಸ್ಥೆಗಳ ಹಾವಳಿ; ಖಾಸಗಿ ಸಂಸ್ಥೆಗಳಲ್ಲಿ ಸಾವಿರಾರು ರೂಪಾಯಿಗಳ ಶುಲ್ಕ ನೀಡಲಾಗದೇ ಒಂದು ಕಡೆ ಪೂಷಕರು , ಕಂಗಾಲಾಗಿದ್ದರೇ , ಸರ್ಕಾರಿ ಶಾಲೆಗಳ ಅಧ್ಯಾಪಕರು ಇವರ ಲಾಭಿಗೆ ಮಣಿದು ಬೇರೆ ಬೇರೆ ವಾಮ ಮಾರ್ಗಗಳ ಮೂಲಕ ವಿದ್ಯಾರ್ಥಿಗಳಿಗೆ  ದ್ರೋಹ ಮಾಡುತ್ತಿರುವುದು ಮತ್ತೊಂದು ಸಮಸ್ಯೆ.

ಸರ್ಕಾರದ ಅನೀತಿಯ ನಿಲುವುಗಳು : ಇದಕ್ಕೆ ತಾಜಾ ಉದಾಹರಣೆಯೆಂಬಂತೆ ಇತ್ತೀಚೆಗೆ ಸರ್ಕಾರವು ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೆ ಸಂಭಂಧಿಸಿ ಏಕರೂಪಿ ಪಠ್ಯಕ್ರಮ ಜಾರಿಗೆ ತರುವುದಾಗಿ ಗೋಷಿಸಿರುವುದು , ಇಂತಹಾ ಅವೈಜ್ಞಾನಿಕ ಹಾಗೂ ಅನೀತಿಯ ನಿಲುವುಗಳಿಂದ ವಿದ್ಯಾರ್ಥಿಗಳು ಹಲವು ಸವಾಲುಗಳನ್ನು ಎದುರುಸಬೇಕಾಗುತ್ತೆ .ಇದೇ ರೀತಿ ಇನ್ನು ಹಲವಾರು  ಸವಾಲುಗಳನ್ನು ವಿದ್ಯಾರ್ಥಿಗಳು  ಎದುರಿಸಬೇಕಾಗುತ್ತಿದೆ.

 

ಪ್ರಶ್ನೇ  ೩)   ನಿಮ್ಮ ದೃಷ್ಟಿಯಲ್ಲಿ ಕಾಲೇಜು ಅಧ್ಯಾಪಕರು ಹೇಗಿರಬೇಕು ? ವಿವರಿಸಿ :

             ನನ್ನ ದೃಷ್ಟಿಯಲ್ಲಿ ಕಾಲೇಜು ಶಿಕ್ಷಣ ಒಬ್ಬ ವಿದ್ಯಾರ್ಥಿಯ ಜೀವನವನ್ನು ಸರ್ವತೋಮುಖವಾಗಿ ವಿಕಾಸ ಮಾಡುವಂತದ್ದಾಗಿರುತ್ತೆ . ಅದರಲ್ಲಿ ಕಾಲೇಜು ವಾತಾವರಣ , ಪಠ್ಯಕ್ರಮ ಹಾಗೂ ಕಾಲೇಜು ಅಧ್ಯಾಪಕರ ಪಾತ್ರ ಬಹಳ ಮಹತ್ವದಾಗಿದೆ. ಅದರಲ್ಲಿಯೂ  ಅಧ್ಯಾಪಕರ ನಡವಳಿಕೆ , ಅವರ ಚಿಂತನೆ , ಅವರ ಆಲೋಚನಾ ಕ್ರಮಗಳು , ಅವರ ವ್ಯಕ್ತಿತ್ವ, ಅವರ ಮಾತುಗಾರಿಕೆ , ಅವರ ಪಾಠದ ವೈಖರಿ ಎಲ್ಲವೂ ಸಹಾ ವಿದ್ಯಾರ್ಥಿಗಳ ಮೇಲೆ ಒಂದಿಲ್ಲಾ ಒಂದು ರೀತಿಯಲ್ಲಿ  ಪ್ರಭಾವ ಬೀರುತ್ತದೆ. ಹಾಗಾಗಿ ಅಧ್ಯಾಪಕರು ಈ ವಿಚಾರಗಳನ್ನು ಮನಗಂಡು , ವಿದ್ಯಾರ್ಥಿಗಳಿಗೆ ಕಲಿಸುವುದರೊಂದಿಗೆ ತಾವೂ ಸಹ ವಿದ್ಯಾರ್ಥಿಗಳ ಜೊತೆ ಸದಾ ಕಲಿಯುವವರಾಗಿರಬೇಕು. ಕಾಲೇಜು ಅಧ್ಯಾಪಕರ ಕೆಲವು ಗುಣ ಲಕ್ಷಣಗಳನ್ನು ಪಟ್ಟಿ ಮಾಡುವುದಾದರೆ,

ಉತ್ತಮ ಸಂವಹನ ಕೌಶಲ್ಯ

ವಿದ್ಯಾರ್ಥಿಗಳನ್ನು ಅರ್ಥಮಾಡಿಕೊಳ್ಳುವ ಗುಣ.

ಸಂಭಂಧಿಸಿದ ವಿಷಯದ ಬಗ್ಗೆ ಸಂಪೂರ್ಣ ಜ್ಞಾನ

ಸಾಮಾಜಿಕ ಸನ್ನಿವೇಷಗಳಿಗೆ ಸ್ಪಂಧಿಸುವ ಗುಣ

ಸಮಾಜವನ್ನು ವಿದ್ಯಾರ್ಥಿಗಳಿಗೆ ಅರ್ಥೈಸಿ ಹೇಳುವ ಗುಣ

ವಿದ್ಯಾರ್ಥಿ ಕೇಂದ್ರಿತ ಭೋಧನೆ

ವಿದ್ಯಾರ್ಥಿಗಳನ್ನು ಪಾಠ ಹಾಗೂ ಪಠೇತರ ಚಟುವಟಿಕೆಗಳಲ್ಲಿ ಬಾಗವಹಿಸಿವಂತೆ ಮಾಡುವ ಗುಣ

ಪಾಠಗಳನ್ನು ಜೀವನಕ್ಕೆ ಅಳವಡಿಸಿಕೋಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಗುಣ

ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂಧಿಸುವ ಗುಣ

ಸ್ನೇಹಿ ಮನೋಭಾವ

ಆದರ್ಶ ವ್ಯಕ್ತಿತ್ವ

ಉತ್ತಮ ನಡವಳಿಕೆ

ವಿಧ್ಯಾರ್ಥಿಗಳ ಭವಿಷ್ಯದ ಆಲೋಚನೆ

ಸದಾ ಕಾಲ ಉತ್ತಮ ಅದರ್ಶ ಅಧ್ಯಾಪಕನಾಗಬೇಕೆಂಬ ತುಡಿತ

ವಿದ್ಯಾರ್ಥಿಗಳನ್ನು ಗೌರವಯುತವಾಗಿ ಕಾಣುವ ಗುಣ

ವಿದ್ಯಾರ್ಥಿಗಳನ್ನು ಪ್ರೀತಿ ಹಾಗೂ ಸ್ನೇಹ ಭಾವನೆಯಿಂದ ಕಾಣುವ ಗುಣ

ವಿಧ್ಯಾರ್ಥಿಗಳನ್ನು ಅಧ್ಯಾಯನಕ್ಕೆ ಪ್ರೇರೇಪಿಸುವ ಗುಣ

ವಿದ್ಯಾರ್ಥಿಗಳ ಉತ್ತಮ ಗುಣಗಳನ್ನು ಮೆಚ್ಛುವ ಗುಣ

ಸತತ ಅಭ್ಯಾಸ ದ ಗುಣ

ಶಿಸ್ತಿನ ಜೀವನ

ಘನ ವ್ಯಕ್ತಿತ್ವ   ಮುಂತಾದ ಗುಣ ಲಕ್ಷಣಗಳನ್ನು ಹೊಂದಿರುವವರು ಉತ್ತಮ ಹಾಗೂ ಆದರ್ಶ ಕಾಲೇಜು ಅಧ್ಯಾಪಕರು ಎಂಬುದು ನನ್ನ ಅಭಿಪ್ರಾಯ

 

 

 

ಪ್ರಶ್ನೇ ೪ ) ಕೋರೊನಾದ ಸಂಧರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಎದುರಾಗಿರುವ ಸವಾಲುಗಳನ್ನು ಸರ್ಕಾರಗಳು ಸರಿಯಾಗಿ ನಿಭಾಯಿಸುತ್ತಿವೆಯೇ ? ನಿಮ್ಮ ಅಭಿಪ್ರಾಯವೇನು :

ಸರ್ಕಾರಗಳು ಕೋರೊನಾ ಸಂಧರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಎದುರಾಗಿರುವ ಸವಾಲುಗಳನ್ನು ನಿಭಾಯಿಸುತ್ತಿವೆ ಆದರೇ ಸೂಕ್ತವಾಗಿ ನಿಭಾಯಿಸುತ್ತಿವೆಯೇ ಎಂದರೇ ಇಲ್ಲ ಎಂಬುದೇ ನನ್ನ ಅಭಿಪ್ರಾಯ . ಕೋರೊನಾ ದ ಮುನ್ಸೂಚನೆ ಸಿಕ್ಕ ಹಲವು ದಿನಗಳ ನಂತರ ಭಾರತದಲ್ಲಿ ಲಾಕ್‌ ಡೌನ್‌ ಹೇರಲಾಯಿತು , ಅದೇ ಸಂಧರ್ಭದಲ್ಲಿ ಕೆಲವು ತರಗತಿಗಳ ಪಾಠಗಳು ಮುಗಿದು ಪರೀಕ್ಷೆಗಳು ಹತ್ತಿರವಾಗಿದ್ದರಿಂದಾಗಿ  ಪ್ರಾರಂಭದಲ್ಲಿ ಅಷ್ಟೇನು ಸಮಸ್ಯೆ ಅನಿಸದ್ದಿದ್ದರೂ ಸಹಾ , ಬರಬರುತ್ತಾ ಲಾಕ್‌ ಡೌನ್‌ ವಿಸ್ತರಣೆ ಆದಂತೆ , ಶಿಕ್ಷಣ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸಬೇಕಾಗಿ ಬಂದಿದೆ.  ಸರಕಾರಗಳು ಆನ್ಲೈನ್‌ ಕ್ಲಾಸ್‌ ಗಳನ್ನು  ಮಾಡಲು ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿರುವುದು ಬಿಟ್ಟರೇ ಅದಕ್ಕಿಂತ ಹೆಚ್ಚಿನದಾದದ್ದನೇನು ಮಾಡಿದಂತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ .

ಸರ್ಕಾರ ಪರಿಹಾರಗಳನ್ನು ಸೂಚಿಸುವುದಕ್ಕೆ ಬದಲಾಗಿ , ಜನರನ್ನು ಮತ್ತಷ್ಟು ಗೊಂದಲಕ್ಕೆ ಗುರಿ ಮಾಡಿರುವುದನ್ನು ೧೦ ನೇ ತರಗತಿಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವ ಹಾಗೂ ಕೆ ಸೆಟ್‌ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವ ಅದಕ್ಕಿಂತಾ ಹೆಚ್ಚಾಗಿ ಶಾಲಾ ಕಾಲೇಜುಗಳನ್ನು ತುರ್ತಾಗಿ ಕಾರ್ಯಾರಂಭ ಮಾಡುವ ನಿರ್ಧಾರಗಳನ್ನು ಪ್ರಕಟಿಸುವ ಹೇಳಿಕೆಗಳ ಮೂಲಕ ಗಮನಿಸಬಹುದಾಗಿದೆ .  ಸರ್ಕಾರ ವು ತಾನೇ ಸ್ವಯಂ ಗೊಂದಲದಲ್ಲಿರುವಂತೆ ಕಾಣುತ್ತದೆ . ಕೇಂದ್ರ ಸರ್ಕಾರ ದ ಹೇಳಿಕೆಗಳು , ರಾಜ್ಯ ಸರ್ಕಾರದ ಹೇಳಿಕೆಗಳು , ಸರ್ಕಾರದ ಮಂತ್ರಿಗಳ ಹೇಳಿಕೆಗಳು ಅವನ್ನು ಜನರಿಗೆ ತಿಳಿಸಬೇಕಾದ ಮಾಧ್ಯಮಗಳು ಎಲ್ಲರೂ ಸಹಾ ಎಲ್ಲೊ ಒಂದು ರೀತಿ ಬೇಜವಾಬ್ದಾರಿಯಿಂದ ನಡೆದುಕೋಳ್ಳುತ್ತಿರುವುದನ್ನು ನೋಡಬಹುದಾಗಿದೆ.  ಎಂಥಹಾ ಸಂಧರ್ಭದಲ್ಲಿ ಸರ್ಕಾರಗಳು ಸರಿಯಾದ ತಂತ್ರಜ್ಷಾನ ವ್ಯವಸ್ಥೆ ಮಾಡುವ , ಮಕ್ಕಳಿಗೆ ಮನೆಯಂದಲೇ ಶಿಕ್ಷಣ ನೀಡುವ ಕೆಲಸವನ್ನು ಮಾಡುತ್ತಾ , ಪೊಷಕರಿಗೆ  ಹಾಗೂ ವಿಧ್ಯಾರ್ಥಿಗಳಿಗೆ ದೈರ್ಯ ತುಂಬುವ ಕೆಲಸವನ್ನು ಮಾಡಬೇಕಾಗಿದೆ. ಆದರೆ ಅದಕ್ಕೆ ಬದಲಾಗಿ ಸರ್ಕಾರಗಳೇ ಜನರನ್ನು ಮತ್ತಷ್ಟು ಗೊಂದಲಗಳಿಗೆ ಒಳಗುಮಾಡುತ್ತಾ ,  ಚಪ್ಪಾಳೆ ತಟ್ಟುವ , ದೀಪ ಹಚ್ಚುವ ಮೌಢ್ಯಗಳನ್ನು ಹರಡುತ್ತಿರುವುದು ನೊವಿನ ಸಂಗತಿ ಆಗಿದೆ.

ಈ ಸಂಧರ್ಭದಲ್ಲಿ ಸರ್ಕಾರಗಳು ಒಂದು ವರ್ಷಕಾಲ ಶಾಲೆಗಳನ್ನು ತೆರೆಯದೇ , ಆದುನಿಕ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಮನೆಯಲ್ಲಿಯೇ ಶಿಕ್ಷಣ ನೀಡುವ ಕೆಲಸವನ್ನು ಮಾಡಬೇಕಾಗಿದೆ ಅದೇ ರೀತಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಬೇಕಾದ ಅನುಕೂಲಗಳನ್ನು ತಕ್ಷಣ ಮಾಡುವುದರ ಮೂಲಕ ಗ್ರಾಮೀಣ ವಿಧ್ಯಾರ್ಥಿಗಳಿಗೂ ಅನುಕೂಲ ಮಾಡಬೇಕಾಗಿದೆ.ಕೇರಳ ರಾಜ್ಯ ಹಾಗೂ ಸ್ಲೊವೇನಿಯಾ ದಂತಹಾ ರಾಷ್ಟ್ರ ಗಳನ್ನು ಮಾದರಿಯಾಗಿಟ್ಟು ಕೊಂಡು ಇನಷ್ಟು ಸುಧಾರಣಾ ಕ್ರಮಗಳನ್ನು ಜಾರಿ ಮಾಡಬೇಕಾಗಿದೆ.

 

Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.