ಕೈವಾರ ತಾತಯ್ಯನವರ ಕೃತಿಗಳಲ್ಲಿ ವೈಚಾರಿಕತೆ ಹಾಗೂ ಬಂಡಾಯ. - ವರುಣರಾಜ್‌ಜಿ

 


ಕೈವಾರ ತಾತಯ್ಯನವರ ಕೃತಿಗಳಲ್ಲಿ ವೈಚಾರಿಕತೆ ಹಾಗೂ ಬಂಡಾಯ.     

                                                                                               ವರುಣರಾಜ್‌ಜಿ

                                                                               ಸಹಾಯಕ ಪ್ರಾಧ್ಯಾಪಕರು       

                                                                                                       ಕೋಲಾರ.

ತತ್ವಪದ ಸಾಹಿತ್ಯ ನಮ್ಮ ನಾಡಿನ ಬಹು ಶ್ರೀಮಂತವಾದ ಸಾಹಿತ್ಯ ಪ್ರಕಾರವಾಗಿವೆ.  ನಮ್ಮ ತತ್ವಪದಕಾರರು ಸಮಾಜದ ಪ್ರತಿಯೊಂದು ವಿಚಾರವನ್ನು ಬಹು ವೈಚಾರಿಕ ಮನೋಭಾವನೆಯಿಂದ ಅಳೆದು ತೂಗಿ ನೋಡುತ್ತಾ ತಮಗೆ ಒಪ್ಪದ ವಿಚಾರಗಳನ್ನು ವಿಢಂಬನೆ ಮಾಡಿರುವುದನ್ನು ನೊಡಬಹುದು. ತತ್ವಪದಕಾರರು ಮೂಲತಃ ಭಂಡಾಯಗಾರರು. ಆಗಿನ ಕಾಲದ ಸಾಮಾಜಿಕ ಪಿಡುಗುಗಳನ್ನು, ಬ್ರಾಹ್ಮಣವಾದಿ ಆಚರಣೆಗಳನ್ನು, ಶೋಷಣೆ, ಪ್ರಭುತ್ವ, ದುರಾಡಳಿತ, ವಸಾಹತುಶಾಹಿ ವ್ಯವಸ್ಥೆಗಳ ವಿರುದ್ಧ ತತ್ವಪದಕಾರರು ಬಂಡಾಯವನ್ನು ವ್ಯಕ್ತಪಡಿಸಿದ್ದಾರೆ.  ಇಂತಹಾ ತತ್ವಪದಕಾರರಲ್ಲಿ ಶ್ರೀ ಕೈವಾರ ನಾರೇಣಪ್ಪನವರು ಪ್ರಮುಖರು.

            ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮದಲ್ಲಿ ೧೭೨೬ ರಲ್ಲಿ ಒಂದು ಬಲಿಜ ಜನಾಂಗದ ಕುಟುಂಬದಲ್ಲಿ ನಾರೇಣಪ್ಪನವರು ಜನಿಸಿದರು. ತೆಲುಗು ಹಾಗೂ ಕನ್ನಡ ದ್ವಿಭಾಷಾ ಪರಿಸರವಾದ ಕೋಲಾರ ಚಿಕ್ಕಬಳ್ಳಾಪುರ ಪ್ರಾಂತ್ಯದಲ್ಲಿ ಬೌದ್ಧ ಮಾಧ್ಯಮಿಕ ಮಾರ್ಗವಾದ ಅಚಲ ಗುರು ಪರಂಪರೆಯಲ್ಲಿ ಕೈವಾರ ನಾರೇಣಪ್ಪನವರು ಗುರುತಿಸಲ್ಪಟ್ಟಿದ್ದು, ಕನ್ನಡ ತೆಲುಗು ಭಾಷೆಗಳಲ್ಲಿ ಹಲವಾರು ತತ್ವಪದಗಳನ್ನು ಶತಕ ಕೃತಿಗಳನ್ನು ಕಾಲಜ್ಞಾನವನ್ನು ರಚಿಸಿದ್ದಾರೆ.

ಕೈವಾರ ತಾತಯ್ಯ ಎಂದು ಖ್ಯಾತರಾದ ಕೈವಾರ ನಾರೇಣಪ್ಪನವರು ತತ್ವಪದಗಳು ಅವರ ಕೃತಿಗಳ ಮೂಲಕ ಆಗಿನ ಕಾಲದ ಧಾರ್ಮಿಕ ಮೌಡ್ಯಗಳನ್ನು, ಅಸಮಾನತೆಯನ್ನು, ಅರಾಜಕತೆಯನ್ನು ವೈಚಾರಿಕ ದೃಷ್ಠಿಕೋನದಿಂದ ನೋಡಿ ಅವುಗಳ ವಿರುದ್ಧ ತಮ್ಮ ಬಂಡಾಯವನ್ನು ಪ್ರಕಟಿಸುವ ಕೆಲಸವನ್ನು ಮಾಡಿದ್ದಾರೆ. ಅವರ  ʼಆನಂದವೋ ನಿತ್ಯಾನಂದವೋʼ ಎಂಬ ಒಂದು ತೆಲುಗಿನ ಕೀರ್ತನೆಯಲ್ಲಿ ಅಲ್ಲಮ ಪ್ರಭುಗಳ   ʼವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ….ʼ ಎಂಬ ವಚನದಂತೆ  ʼಕಾಗೆಗಳ ವಿಧದಲ್ಲಿ ಕೂಗುಗಳು ಹಾಕುವರು ವೇದಗಳವು ಅವು ಯಾವೋ ತಿಳಿದಿಲ್ಲವೋʼ ಎಂದು ಹೇಳುತ್ತಾ ವೇದಪರಾಯಣವನ್ನು ಕಾಗೆಗಳ ಕೂಗಿಗೆ ಹೊಲಿಸುವುದನ್ನು ನೊಡಬಹುದು.

 ಮೇಲ್ನೋಟಕ್ಕೆ ಇದು ಕೆಲವರಿಗೆ ಸರಿಕಾಣದೇ ಹೊಗಬಹುದಾದರೂ ಸಹಾ, ವಿಚಾರ ಮಾಡಿ ನೊಡಿದರೇ,  ಅರ್ಥ ತಿಳಿಯದೇ ಮಾಡುವ ವೇದಪರಾಯಣವನ್ನು ಕೇಳುವವರಿಗೆ ಅದು ಬಹಳ ವಿಚಿತ್ರವಾಗಿ ಕೇಳುವುದು ಈ ಹೇಳಿಕೆಗೆ ಕಾರಣವಾಗಿರಬಹುದು. ತಮ್ಮನು ವೇದಗಳಿಂದ ದೂರ ಇರಿಸಿದ್ದ ಒಂದು ವ್ಯವಸ್ಥೆಯ ವಿರುದ್ಧ ತಮ್ಮ ಬಂಡಾಯವನ್ನು ಪ್ರಕಟಿಸುವುದು ಮತ್ತೊಂದು ಕಾರಣವಾಗಿಯೂ ಸಹಾ ಈ ಹೇಳಿಕೆಯನ್ನು ಗಮನಿಸಬಹುದು.

             ಅದೇ  ಕೀರ್ತನೆಯಲ್ಲಿ  ಮುಂದುವರೆದು ʼಕುಂಡದಲ್ಲಿ ಬೆಂಕಿ ಹತ್ತಿ ಉರಿಯೋವಾಗ ಬೆಂಕಿಯಲ್ಲಿ ತುಪ್ಪಹಾಕುವುದು ಏತಕ್ಕೆಯ್ಯಾʼ ಎಂದು ಪ್ರಶ್ನಿಸುವುದರ ಮೂಲಕ ಯಜ್ಞಯಾಗಾಧಿಗಳನ್ನು ಪ್ರಶ್ನಿಸುವ ಅಥವಾ ಅವುಗಳ ನಿಷ್ಪ್ರಯೋಜಕತೆಯನ್ನು ವಿವರಿಸುವ ಕೆಲಸವನ್ನು ನಾರೇಣಪ್ಪನವರು ಮಾಡುತ್ತಾರೆ.  ʼಭಕ್ತಪ್ರಿಯ ನಮ್ಮಕೂಡಲಸಂಗಮದೇವಾʼ ಎಂಬ ಬಸವಣ್ಣನವರ ಮಾತಿನಂತೆ ದೇವರು ಭಕ್ತಿಗೆ ಮಾತ್ರ ಒಲಿಯುವನೇ ಹೊರತು ಯಜ್ಞಯಾಗಾದಿಗಳಂತಹಾ ಆಡಂಬರದ ಭಕ್ತಿಗಲ್ಲಾ ಎಂಬುದು ತಾತಯ್ಯನವರ ಅಭಿಮತವಾಗಿದೆ.

ಮುಂದುವರೆದು ಅದೇ ಕೀರ್ತನೆಯಲ್ಲಿ ʼಗುದ ತೊಳೆಯುವ ಕೈಯಲ್ಲಿ ಸುಣ್ಣದ ಕಲ್ಲನು ತೀಡಿ ಪಟ್ಟಿ ನಾಮಗಳನ್ನು ಹಚ್ಚಿ ಫಲವೇನಯ್ಯಾʼ ಎಂದು ಪ್ರಶ್ನಿಸುತ್ತಾರೆ, ಎಡ ಗೈ ನಲ್ಲಿ ಸುಣ್ಣವನ್ನು ಬೆರೆಸಿಕೊಂಡು ನಾಮಗಳನ್ನು ಹಚ್ಚುವುದರಿಂದ ಏನೂ ಪ್ರಯೋಜನವಿಲ್ಲವೆಂದು ತಾತಯ್ಯನವರು ಹೇಳಿದ್ದಾರೆ. ನಾವು ದೇವರಿಗೆ ಹಚ್ಚುವ ನಾಮದ ವಿಚಾರವು ಸಹಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವುದನ್ನು ನೊಡಿದಾಗ, ತಾತಯ್ಯನವರ ಮಾತು ಹೆಚ್ಚು ಪ್ರಸ್ತುತವೆನಿಸಿತ್ತೆ. ಹಾಗೇ ನಾಮಗಳ ನಿಷ್ಪ್ರಯೋಜಕತೆಯ ಕುರಿತು ತಾತಯ್ಯನವರು ಚರ್ಚಿಸಿರುವುದು ವಿಶೇಷವಾಗಿದೆ.

ಮುಂದುವರೆದು ಅದೇ ಕೀರ್ತನೆಯಲ್ಲಿ ʼತರ್ಕ ಶಾಸ್ತ್ರವ ಕಲಿತು ತಾವೇ ಘನರೆಂಬರು, ತರ್ಕವು ನಾಯಿಗಳ ಕಿತ್ತಾಟವೋʼ ಎಂದು ತರ್ಕವಾದಿ ಪಂಡಿತರನ್ನು ಅವರ ವಾದವನ್ನು ನಾಯಿಗಳಿಗೂ ನಾಯಿಗಳ ಕಿತ್ತಾಟಕ್ಕೂ ಹೊಲಿಸುತ್ತಾ, ಅಂಥಹಾ ತರ್ಕವಾದಿ ಪಂಡಿತರನ್ನು ನೇರವಾಗಿ ತಿವಿಯುವ ಕೆಲಸವನ್ನು ಮಾಡುತ್ತಾರೆ.

ಹಾಗೇ ಮುಂದುವರೆದು ತಾತಯ್ಯನವರು ʼಲಿಂಗಪುರದ ಧಾರಿ, ಅರಿಯದೇ, ಲಿಂಗಾವ ಕಟ್ಟುವುದು ವ್ಯರ್ಥವಯ್ಯʼ ನಿಷ್ಟೆಯಿಲ್ಲದೆ ಲಿಂಗಧರಿಸುವುದರಿಂದ ಏನೂ ಪ್ರಯೊಜನವಿಲ್ಲ ಎಂಬುದನ್ನು ತಾತಯ್ಯನವರು ವಿವರಿಸುತ್ತಾರೆ. ಬಸವಣ್ಣನವರ ʼಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ, ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ, ಇದ್ದಡೇನೋ ಶಿವ ಶಿವ ಹೊದಡೇನೋ ಎಂಬ ವಚನವನ್ನು ಹಾಗೂ ಮಂಟೆಸ್ವಾಮಿರವರು ಕಲ್ಯಾಣ ಪಟ್ಟಣ ಪ್ರವೇಶಿಸುವ ಸಂಧರ್ಭದ ಕತೆಯನ್ನು ಇಲ್ಲಿ ನೆನೆಯಬಹುದು.

ಮುಂದವರೆದು ನೋಡಿದರೇ, ʼಮುಖ್ಯವು ಶೂದ್ರನು ಮೂರೂ ಲೋಕಗಳಲ್ಲಿ ಹೆಚ್ಚಿನವರೆಲ್ಲರೂ ಮುಖ್ಯರಲ್ಲʼ ಇಲ್ಲಿ ತಾತಯ್ಯನವರು ವರ್ಣಾಶ್ರಮ ಪದ್ಧತಿಯನ್ನು ವಿರೋಧಿಸಿ ಸಾಮಾಜಿಕ ಮೇಲು ಕೀಳುಗಳನ್ನು ಪ್ರಶ್ನಿಸುತ್ತಾ, ಸಾಮಾಜಿಕ ಚಟುವಟಿಕೆಗಳಾದ ಕೃಷಿ, ಪಶುಪಾಲನೆ, ಸ್ವಚ್ಛತೆ ಮುಂತಾದ ಕೆಲಸಗಳನ್ನೆಲ್ಲಾ ಹೆಚ್ಚು ಶೂದ್ರರೇ ಮಾಡುವುದರಿಂದ ಮೂರು ಲೋಕಗಳಲ್ಲಿಯೂ ಶೂದ್ರರೇ ಮುಖ್ಯರು ಎಂದು ತಾತಯ್ಯನವರು ಹೇಳುತ್ತಾ ದುಡಿಯುವ ವರ್ಗಗಳ ಘನತೆಯನ್ನು ಎತ್ತರಿಸುವ ಕೆಲಸವನ್ನು  ಮಾಡುತ್ತಾರೆ.

 ಮುಂದೆ, ಮೇಲಿನ ಹೇಳಿಕೆಗಳಿಗೆ ಪೂರಕವಾಗಿ ʼಬೇಡರ ಮನೆ ಊಟ ಮಾಡಿದ ನಂಜುಂಡ ಇದಷ್ಟು ಹೇಳಿದೆ ಇದ ಕೇಳಿರೋʼ ಎಂದು ಶಿವನು ಜಾತಿಗಾಗಲಿ ಆಡಂಭರಕ್ಕಾಗಲಿ ಒಲಿಯದೇ ಕೇವಲ ಭಕ್ತಿಗೆ ಒಲಿಯುವನೆಂದು ಬೇಡರ ಕಣ್ಣಪ್ಪನ ಪ್ರಸಂಗವನ್ನು ನೆನಪಿಸುವ ಮೂಲಕ ನಿರೂಪಿಸುತ್ತಾರೆ.

ಮತ್ತೊಂದು ತತ್ವಪದದಲ್ಲಿ ʼಯಾವ ಜಾತಿಯವರೋ ತಿಳಿಯೆವಯ್ಯ, ಸ್ತ್ರೀ ಪುರುಷ ಜಾತಿಗಳೆ ಸೃಷ್ಠಿಯಲ್ಲೆರಡು,  ಎಂದು ಹೇಳುತ್ತಾ ನಾವು ಯಾವ ಜಾತಿಯವರೆಂದು ಅರಿಯವು, ನಮಗೆ ಈ ಸೃಷ್ಟಿಯಲ್ಲಿ ತಿಳಿದಿರುವುದು ಸ್ತ್ರೀ ಪುರುಷ ಎಂಬ ಎರಡು ಜಾತಿಗಳು ಮಾತ್ರ ಎಂದು ಹೇಳುತ್ತಾ ಜಾತಿ ಪದ್ಧತಿಯನು ನಿರಾಕರಿಸುವುದನ್ನು ಇಲ್ಲಿ ಕಾಣಬಹುದು.

ಮುಂದೆ  ʼನಮ್ಮ ಜಾತಿ ಹೆಚ್ಚೆಂಬ ನಿಮ್ಮ ಜಾತಿ ಕೀಳೆಂಬ ತರ್ಕವಾದ ನಿಮ್ಮಗೆ ತಕ್ಕುದಲ್ಲʼ ಎನ್ನುತ್ತಾ ಯಾರು ಸಹಾ ನಾವು ಹೆಚ್ಚು ಉಳಿದವರು ಕೀಳು ಎಂದು ತಿಳಿಯಬಾರದು, ದೇವರ ಕಣ್ಣಿನಲ್ಲಿ ಎಲ್ಲರೂ ಸಮಾನರು ಎಂದು ತಾತಯ್ಯನವರು ಹೇಳುತ್ತಾರೆ. ತಾತಯ್ಯನವರು ತಮ್ಮ ʼನಾದ ಬ್ರಹ್ಮಾನಂದ ನಾರೇಯಣ ಕವಿ ಶತಕʼ ದಲ್ಲಿ  ʼಮೂತ್ರ ದ್ವಾರವ ದೂರಿ ಬಂದರು ಈ ನರರು  ಉತ್ತಮ ಕುಲದವರು ಯಾವು ಇಲ್ಲಿಲ್ಲ,   ಉತ್ತಮ ಕುಲವೆಂಬುದು ಉಚಿತವಾದುದಲ್ಲವೂ    ನಾದ ಬ್ರಹ್ಮಾನಂದ ನಾರೇಯಣ ಕವಿʼ ಎನ್ನುತ್ತಾ ಎಲ್ಲರೂ ಸಹಾ ತಾಯಿಯ ಮೂತ್ರ ದ್ವಾರದಿಂದಲೇ ಹೊರ ಬಂದವರೆಂಬುದನ್ನು  ಹೇಳುತ್ತಾ, ಯಾರೂ ಮೇಲು ಅಲ್ಲ ಯಾರೂ  ಕಡಿಮೆ ಅಲ್ಲ ಎಲ್ಲರೂ ಸಮಾನರು ಎನುತ್ತಾರೆ.

 ಮುಂದೇ ಅದೇ ಶತಕ ಕೃತಿಯಲ್ಲಿ ನಮ್ಮ ಸಾಮಾಜಿಕ ಪರಿಸ್ಥಿತಿಯನ್ನು ವಿಡಂಬಿಸುತ್ತಾ,  ʼಸೇಂದಿ ಮಡಿಕೆಯ ಬಳಿ ಸದ್ದು ಗದ್ದಲವಣ್ಣ  ಮೊಸರ ಮಡಿಕೆಯ ಬಳಿಯಲ್ಲಾರೂ ಇಲ್ಲ,  ಸೇಂದಿ ಮುಖ್ಯವಾಗಿ, ಮೊಸರು ಬೇಡವಾಯಿತು ನಾದ ಬ್ರಹ್ಮಾನಂದ ನಾರೇಯಣ ಕವಿʼ ಎಂದು ಹೇಳುತ್ತಾ   ಓಳ್ಳೆಯ ವಿಚಾರಗಳು ಹಾಗೂ ಓಳ್ಳೆಯ ವ್ಯಕ್ತಿಗಳಿಗೆ ಜನರು ಹೆಚ್ಚು ಬೆಲೆ ನೀಡುವುದಿಲ್ಲ  ಎಂಬುದನ್ನು ಈ ಪದ್ಯದಲ್ಲಿ ವ್ಯಕ್ತವಾಗಿದೆ.

 ಮೂರ್ತಿ ಪೂಜೆಯನ್ನು ಹೇಳುತ್ತ  ʼಸತ್ತ ಪಶುಗಳ ಚರ್ಮ  ವಿಧವಿಧ ನಾದ ಧ್ವನಿಗಳ ಮಾಡುವುದು  ದೇವ ಶಿಲೆಗಳು ನಾದಧ್ವನಿಗಳನ್ನು ಮಾಡವು  ನಾದ ಬ್ರಹ್ಮಾನಂದ ನಾರೇಯಣ ಕವಿ.   ಇಲ್ಲಿ  ಸತ್ತ ಪಶುಗಳ ಚರ್ಮವಾದರೂ ಸಹಾ ವಿವಿಧ ನಾದಗಳನ್ನು ಮಾಡುತ್ತದೆ, ಆದರೇ ದೇವರು ಎಂದು ಗುಡಿಯಲ್ಲಿ ಪೂಜಿಸುವ ಕಲ್ಲು ಒಂದು ಮಾತನ್ನು ಆಡುವುದಿಲ್ಲ ವೆಂದು ತಾತಯ್ಯನವರು ಮೂರ್ತಿಪೂಜೆಯನ್ನು ನಿರಾಕರಿಸುತ್ತಾರೆ.

            ಮುಂದೆ ಮತ್ತೊಂದು ಪದ್ಯದಲ್ಲಿ ಹೊಲೆಯನನ್ನು ಜನರು ಏಕೆ ನಿಂದಿಸುವರು ಹೊಲೆಯನ ಆತ್ಮ ಮಂದಿರದಲ್ಲಿಯೂ ಸಕಲ ದೇಹ ವಿಹಾರಿ ಸದ್ಗುರುವು ಇದ್ದಾನೆ ನಾದ ಬ್ರಹ್ಮಾನಂದ ನಾರಾಯಣ ಕವಿʼ ಎಂದು ಹೇಳಿದ್ದಾರೆ, ಹೊಲೆಯ ಹೊಲೆಯ ಎಂದು ಜನ ಹೊಲೆಯನನ್ನು ನಿಂದಿಸುತ್ತಾರೆ, ಆದರೇ ಹೊಲೆಯನ ಹೃದಯ ಮಂದಿರದಲ್ಲಿಯೂ ಸಹಾ ಸಕಲ ದೇಹಸಂಚಾರಿ ಆದ ದೇವನು ಗುರು ರೂಪನಾಗಿ ಇರುತ್ತಾನೆ. ಎಂದು ತಾತಯ್ಯನವರು ಹೇಳುತ್ತಾರೆ.  ಬಡವನ ದುರ್ಬಲನ ಹೃದಯದಲ್ಲಿರುವ ದೇವರನ್ನಲ್ಲದೇ ಬೇರೆ ದೈವವನ್ನು ನಾನು ಮಾನ್ಯ ಮಾಡುವುದಿಲ್ಲ, ಇಂತಹಾ ಧೀನ ದುರ್ಬಲರ ಸೇವೆಯ ಮೂಲಕ ಸತ್ಯ ಸ್ವರೂಪನಾದ ದೇವರನ್ನು ಪೂಜಿಸುತ್ತೇನೆ   ಎಂಬ ಮಹಾತ್ಮ ಗಾಂಧಿರವರ ಮಾತನ್ನು ಈ ಸಂಧರ್ಭದಲ್ಲಿ ನೆನೆಯಬಹುದು.

ಹಾಗೇ ಮುಂದೆ ತಾತಯ್ಯನವರು  ಮತ ಸಾಮರಸ್ಯದ ವಿಚಾರವನ್ನು ಹೇಳುತ್ತಾ ʼವಿಷ್ಣು ಮತದವರು ಹೀನರಾಗಿ ಹೋದರು  ಶಿವಮತದವರಿಗೆ ನಾಚಿಕೆ ಇಲ್ಲ ಯೋಗಮತದವರೇ ಹೆಚ್ಚಿನವರಾದರು ನಾದ ಬ್ರಹ್ಮಾನಂದ ನಾರಾಯಣ ಕವಿ ಎಂದಿದ್ದಾರೆ. ಇದರ ಅರ್ಥ ವಿಷ್ಣು ಮತದವರು ವಿಷ್ಣುವಿನ ಸರ್ವೋತ್ತಮ ವಾದವನ್ನು ಶಿವ ಮತ ದವರಾದರೂ ಶಿವನೋಬ್ಬನೇ  ಹೆಚ್ಚಿನವನೆಂದು ಹೇಳುತ್ತಾ ಮತ ಸಾಮರಸ್ಯವಿಲ್ಲದೇ ಕೆಟ್ಟರು.  ಆದರೇ, ಕಾಯಕ ಯೋಗಿಗಳು ತಮ್ಮಷ್ಟಕ್ಕೆ ತಾವಿದ್ದು ಶ್ರೇಷ್ಟರಾದರು ಎಂದು ತಾತಯ್ಯನವರು ಹೇಳಿದ್ದಾರೆ.

ಮುಂದುವರೆದು  ತಬ್ಬಲಿ ದೇವರಿಗೆ -ಅಬ್ಬರದ ಪೂಜಾರಿ  ವರನೀಡೊ ದೇವರು ಒಂದು ಇಲ್ಲ ತಮೊಳಗಿನ ದೇವರನು ತಾವು ಕಾಣಲಾರರಯ್ಯ  ನಾದ ಬ್ರಹ್ಮಾನಂದ- ನಾರಾಯಣ ಕವಿʼ ಎಂದಿದ್ದಾರೆ, ಇಲ್ಲಿ  ಗೊತ್ತು ಗುರಿಯಿಲ್ಲದ ದೈವಕ್ಕೆ, ವೇಶದಾರಿಯಾದ ಸುಳ್ಳು ಪೂಜಾರಿಯೊಬ್ಬ, ಇಂಥಹ ಎಷ್ಟೋ ದೇವರುಗಳು ಎಷ್ಟೋ ಮಂದಿ ಪೂಜಾರಿಗಳು ಕಂಡು ಬರುತ್ತಾರೆ, ಲೋಕದಲ್ಲಿ, ಆದರೇ ಇವರಲ್ಲಿ ವರವನ್ನು ಕೊಡುವ ದೇವರು ಒಬ್ಬರೂ ಇಲ್ಲ,ಜನರು ತಮ್ಮಲೇ ಅಡಗಿರುವ ಆ ದೇವರನ್ನು ತಾವು ಕಾಣಲಾರದಾಗಿದ್ದಾರೆ  ಎನ್ನುತ್ತಾರೆ ತಾತಯ್ಯನವರು.

ಮುಂದೆ ಮತ್ತೊಂದು ಪದ್ಯದಲ್ಲಿ ʼ ಹಿತವೆಂದು ಸಂಸಾರ ಹೀನವೃತ್ತಿಯ ನಂಬಿ  ವ್ಯೆಥೆ ಪಡುವುದಲ್ಲದೇ, ಸುಖವು ಇಲ್ಲ ಭಂಡ ಸಂಸಾರದಲ್ಲಿ ಭಾರತ ಕಥೆಯಾಯಿತೋ ನಾದಬ್ರಹ್ಮಾನಂದ ನಾರಾಯಣ ಕವಿ  ಎಂದು  ಭಂಡ ಸಂಸಾರದಿಂದ ಭಾರತ ಕಥಯಾಯಿತ ಎನ್ನುತ್ತಾ ಭಂಡ ಸಂಸಾರಿಗಳಿಂದ ಆದದ್ದು ಮಹಾ ಭಾರತ ಕತೆ ಎಂದು ಭಾರತ ಕತೆಯನ್ನು ತಾತಯ್ಯನವರು ವಿಡಂಬಿಸುವುದನ್ನು ನಾವು ನೊಡಬಹುದು. ಕೆ ಬಿ ಸಿದ್ಧಯ್ಯನವರ ಕೃತಿಯ ʼಭೂ ಸೂತಕದಲ್ಲಿ ಮಹಾಭಾರತ, ಸ್ತ್ರೀ ಸೂತಕದಲ್ಲಿ ರಾಮಾಯಣʼ ಎಂಬ ಮಾತನ್ನು ಇಲ್ಲಿ ನೆನೆಯಬಹುದು.

ಮತ್ತೊಂದು ಕೀರ್ತನೆಯಲ್ಲಿ ಈ ಊರವೂಳಗಿಷ್ಟು ಉತ್ಪಾತವೇನೋ  ದುರಿತ ಸಂಹರ ನಾರೇಯಣ ಹರಿಯೇ ವಿಶ್ವಾಸ ಘಾತಕನು ಇಲ್ಲಿರುವ ಶ್ಯಾನುಭೋಗ  ಕೆಟ್ಟ ಮುಂಡೆ ಗಂಡ ಗುರಿಕಾರನೊಎಂದು ಆ ಊರಿನ ಶ್ಯಾನುಭೋಗನನ್ನು ಅವನ್ನು ಮಾಡುತ್ತಿದ ಮೋಸದ ಕೆಲಸಗಳನ್ನು ಇಲ್ಲಿ ಕೈವಾರ ತಾತಯ್ಯನವರು ವಿವರಿಸಿದ್ದು, ಇದು ಆ ಊರಿನ ಶಾನುಭೋಗನ ವಿರುದ್ಧ ಕೀರ್ತನೆ ರಚಿಸಿ ಅವನ ವಿರುದ್ಧ ತಮ್ಮ ಬಂಡಾಯವನ್ನು ಈ ಕೀರ್ತನೆಯ ಮೂಲಕ ಪ್ರಕಟಿಸಿದ್ದಾರೆ.

ಮುಂದೆ, ʼದುರ್ಭೋಧೆ ಗುರುಗಳ ನಂಬಿ ತ್ರಿದಶರು ಕೆಟ್ಟರು ಕೋಲಾರ ಶೆಟ್ಟ, ಬಳ್ಳಾಪುರದ ದೊರೆಗಳು, ಅಲ್ಲದೇ ಸುಲ್ತಾನ ವಂಶವೇ ಹೋಯಿತೋ ನಾದ ಬ್ರಹ್ಮಾನಂದ ನಾರಾಯಣ ಕವಿʼ ಎಂದು ಗುರುಗಳು ಅಥವಾ ನಂಬಿದವರು  ಕೆಟ್ಟವರಿದ್ದರೇ, ಅಂತಹವರ ಭೋಧನೆಯನ್ನು ಕೇಳಿದವರು ಕೆಟ್ಟುಹೊಗುವರೆಂಬುದನ್ನು ಐತಿಹಾಸಕ ಸಂಧರ್ಭಗಳನ್ನು ಉಲ್ಲೇಖಿಸುತ್ತಾ ತಾತಯ್ಯನವರು ಹೇಳಿರುವುದು ತುಂಬಾ ವಿಶೇಷವಾಗಿದೆ.

 ಮುಂದೆ ವಸಾಹತುಶಾಹಿ ಆಡಳಿತ ಅವರ ಕುತಂತ್ರಗಳು ಮೊದಲಾದವನ್ನು ಮತ್ತೂಂದು ಕೀರ್ತನೆಯಲ್ಲಿ, ʼಹೊಸದೊಂದು ಮೀನು ಬಂದು ಕೆರೆಯ ನೀರನೆಲ್ಲಾ ಕುಡಿದು, ಬಟ್ಟಾ ಬಯಲು ಮಾಡಿತಲ್ಲೋ, ಎಂದು ಬ್ರಿಟೀಷರನ್ನೇ ಗುರಿಯಾಗಿಟ್ಟುಕೊಂಡು, ಅವರನ್ನು ಮೀನಿಗೆ ಹೋಲಿಸಿರುವುದನ್ನು ಕಾಣಬಹುದಾಗಿದೆ. ಪಂಜೆರವರ ʼನಾಗರ ಹಾವೇ ಹಾವೊಳು ಹೂವೆ ಬಾಗಿಲ ಬಿಲದಲ್ಲಿ ನಿನ್ನಯ್ಯ ಠಾವೇʼ ಎಂಬ ಪದ್ಯವನ್ನು ಇಲ್ಲಿ ನೆನೆಯಬಹುದು. 

ಬ್ರಿಟೀಷರು ಭಾರತವೆಂಬ ಕೆರೆಗೆ ಮೀನಿನ ಹಾಗೇ ಬಂದು ಇಲ್ಲಿನ ಸಂಪತ್ತೆಂಬ ನೀರನ್ನು ಎಲ್ಲಾ ಕುಡಿದು ಬಟ್ಟಾ ಬಯಲಾಗಿಸಿದರೆಂದು ಹೇಳಿದರು. ಬಹಳಷ್ಟು ತತ್ವಪದಕಾರರ ರಚನೆಗಳು ವಸಾಹತುಶಾಹಿ ಆಗಮನದ ಬಗ್ಗೆ ಮೌನವಹಿಸಿದಂತೆ ಮೇಲ್ನೋಟಕ್ಕೆ ಕಂಡರೂ ಸಹಾ  ಅವು ಕೈವಲ್ಯಾನುಭವಕ್ಕೆ ತೃಪ್ತಿ ಹೊಂದದೇ, ಆ ಕಾಲದ ರಾಜಕೀಯ ಕ್ಷೋಭೆಗಳನ್ನು ಸಹಾ ಅಲಲ್ಲಿ ಪ್ರಸ್ತಾಪಿಸಿ ಅವುಗಳನ್ನು ವಿರೋಧಿಸಿರುವುದನ್ನು ಗಮನಿಸಬಹುದು.

 ಪಶುಗಳ ಮೇವು ಗುತ್ತಿಗೆ, ಭೂಮಿ ಗುತ್ತಿಗೆ,  ಕಾಡು ಗುತ್ತಿಗೆ  ಸ್ತ್ರೀಯರು ಗುತ್ತಿಗೆ- ಗಿಡಗಳ ಗುತ್ತಿಗೆ   ಪಲವೃಕ್ಷಗಳು ಗುತ್ತಿಗೆ- ಹಣ್ಣು ಕಾಯಿ ಗುತ್ತಿಗೆ ಬಿಕ್ಷಕರೂ ಗುತ್ತಿಗೆ, ಬೀಡು ಗುತ್ತಿಗೆ……………..ʼ ಹೀಗೆ  ಆಳು ನೌಕರರು, ಸಾರಾಯಿ, ಹೊಲೆಯರ ಮಗ್ಗಗಳು, ದತ್ತಿ ಮಾನ್ಯಗಳು, ಚೌಳು ಮಣ್ಣು ಮತ್ತು ಎಣ್ಣೆಯವರೆಗೂ ಎಲ್ಲವೂ ಗುತ್ತಿಗೆಗೆ ಓಳಪಟ್ಟು ತೆರಿಗೆಯ ವ್ಯಾಪ್ತಿಗೆ ಬರುವುದೆಂಬುದು ಹೇಳುತ್ತಾ ಅವನು ವಿರೋಧಿಸಿದ್ದಾರೆ.

ʼಬೆಳೆ ಬೆಳೆದರು ಭರ ಬೆಳೆ ಒಣಗಿದರೂ ಬರ,  ಪ್ರಜೆಗಳೇಗೆ ಬದುಕುವರು ಪ್ರಾಪಂಚದಲ್ಲಿʼ  ʼಚೋರರಿಗೆ ಪಟ್ಟವಾಯಿತು ರಾಜನಾರು ಇಲ್ಲದೇ ಹೋಯಿತುʼ ʼವಿಪ್ರುರ ಪಾಲಾಯ್ತು   ನಗನ್ಯಾಣ್ಯಗಳುʼ  ಕಂದಾಯವಾಗಿ ವಸೂಲಾಗಬೇಕಿದ್ದ ಹಣವನ್ನು ಬ್ರಾಹ್ಮಣರೇ ಲಪಟಾಯಿಸಿ, ನಾಲ್ಕನೇ ಒಂದು ಭಾಗ ಮಾತ್ರ ಸರಕಾರಕ್ಕೆ ಸಂದಾಯವಾಗುವುದರಿಂದ ಅದು ಅಯೋಗ್ಯರ ದೊರೆತನವಾಗುತ್ತದೆಂದು ಮುಂತಾಗಿ ತಾತಯ್ಯನವರು ಹೇಳಿದ್ದಾರೆ.

ಕೈವಾರ ನಾರೇಣಪ್ಪನವರ ಕೃತಿಗಳಲ್ಲಿನ ಹಲವು ವೈಚಾರಿಕ ಹಾಗೂ ಭಂಡಾಯದ ವಿಚಾರಗಳಲ್ಲಿ  ಕೆಲವನ್ನು  ತೆಲುಗು ಕೀರ್ತನೆಗಳ ಭಾಷಾಂತರದ ಮೂಲಕ ಅರಿಯುವ ಒಂದು ಸಣ್ಣ ಪ್ರಯತ್ನವಾಗಿ ಈ ಮೇಲಿನ ವಿಚಾರಗಳನ್ನು ನೊಡಬಹುದಾಗಿದೆ.

ಗ್ರಂಥ ಋಣ :

)   ಶ್ರೀ ಯೋಗಿ ನಾರೇಯಣ ಯತೀಂದ್ರರು: ‘’ಕಾಲಜ್ಞಾನ ಮತ್ತು ನಾದ ಬ್ರಹ್ಮಾನಂದ ನಾರೇಯಣ ಕವಿ ಶತಕ’’ ;ಶ್ರೀ ಯೋಗಿ ನಾರೇಯಣ ಯತೀಂದ್ರರ ಆಶ್ರಮ ಟ್ರಸ್ಟ ಕೈವಾರ: 1982.

)  ಶ್ರೀ ಯೋಗಿ ನಾರೇಯಣ ಯತೀಂದ್ರರು: ‘’ಶ್ರೀ ಅಮರ ನಾರೇಯಣ ವೇದಾಂತ ಸಾರಾವಳಿ’’ (ಕೀರ್ತನೆಗಳು) ; ಶ್ರಿ ಯೋಗಿ ನಾರೇಯಣ ಯತೀಂದ್ರರ ಆಶ್ರಮ ಟ್ರಸ್ಟ- ಕೈವಾರ: 1998.

)  ಶ್ರೀ ಯೋಗಿ ನಾರೇಯಣ ಯತೀಂದ್ರರು: ‘’ಕಾಲಜ್ಞಾನ ಭವಿಷ್ಯವಾಣಿ’’ ;ಶ್ರೀ ಯೋಗಿ ನಾರೇಯಣ ಮಠ -ಕೈವಾರ :2013

           )  ಪದ್ಮಾಲಯ ನಾಗರಾಜ್ ‘’ಗುರುಮಾರ್ಗ’’(ಮರೆತ ದಾರಿಗಳ ಅಧ್ಯಯನ);ಆದಿಮ ಪ್ರಕಾಶನ, ಕೋಲಾರ :2018.

            ) ಅಂತರ್ಜಾಲ ಮೂಲ.      

 

 

Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.