ಒಂದು ಭಕ್ತಿಯ ಅನುಭವ
ಬೆಳ್ಳಿಗ್ಗೆ ನಮ್ಮ ದೂರದ ನೆಂಟಳಾದ ಆ ಮುದುಕಿಯನ್ನ ಕಂಡು ಮಾತಾಡಿದಾಗಿಂದ ಏನೋ ಒಂದು ರೀತಿ ತಳಮಳ, ಆತಂಕ, ಸಂತೋಷ, ಆಶ್ಚರ್ಯ ಎಲ್ಲವೂ ಒಟ್ಟೊಟ್ಟಿಗೆ ಆಗುತ್ತಾ ಇದೆ. ಕೆಲವು ತಿಂಗಳುಗಳ ಹಿಂದೆ ಮುದಿಕಿಯ ಅಳಿಯ ಸತ್ತ, ಈಗ ಕೆಲವು ದಿನಗಳ ಹಿಂದೆ ಆಕೆಯ ಮಗಳು ಕೂಡ ಸತ್ತಳು. ಅವಳ ಗಂಡ ಎಂದೋ ಸತ್ತಿದ್ದ. ಆದರೆ ಸ್ವಲ್ಪವೂ ಚಿಂತೆ, ಯೋಚನೆ, ಭಯ ಅವಳ ಮುಖದಲ್ಲಿ ಕಾಣಲಿಲ್ಲ. ತಾಳಲಾರದೇ ಹೇಳಿದೆ ! ಪಾಪ ಅಜ್ಜಿ ನೀನು, ತುಂಬಾ ಬೇಜಾರಾಗುತ್ತೆ ನಿನ್ನ ನೆನೆಸಿಕೊಂಡರೆ ಅಂದೆ. ಕಾಫಿ ಕುಡಿ ಅಜ್ಜಿ ಅಂದೆ. ಸುಮ್ಮನೇ ಇದ್ದಳು. 'ಲೆಸ್' ಆ ? ಅಂತ ಕೇಳಿದೆ. ಅರ್ಥ ಆಗದವಳ ಹಾಗೆ ಮುಖ ಮಾಡಿದಳು. ಸಕ್ಕರೆ , ಶುಗರ್, ಬಿಪಿ ಇದೆಯಾ ಅಂತ ಕೇಳಿದ ತಕ್ಷಣ, ಅಸಿಸಿ ಅವ್ಯಾವು ಇಲ್ಲ ನನಗೆ. ನಾನು ಚೆನ್ನಾಗೆ ಇದ್ದೀನಿ.. ಅಂತ ರೋಪ್ ಮಾಡುವವಳ ಹಾಗೆ ಜೋರು ದ್ವನಿಯಲ್ಲಿ ಹೇಳಿದಳು. ನೋಡಿ ಈ ಮುದುಕಿಗೆ ಎಷ್ಟು ಕೊಬ್ಬು ಅಂತ ಮನಸಿನಲ್ಲೇ ಅಂದುಕೊಂಡು, ಕಾಫಿ ತಂದು ಕೈಗೆ ಕೊಟ್ಟೆ. ಸ್ವಲ್ಪ ಕಾಫಿ ಗಂಟಲಿಗೆ ಇಳಿಸಿದವಳೇ, ಮೊನ್ನೆ ತೀರಿಹೋದ ನಮ್ಮ ತಾತನ ಬಗ್ಗೆ ವಿಚಾರಿಸುತ್ತಾ ಮಾತು ಪ್ರಾರಂಭಿಸಿದಳು. ಪಾಪ ಒಳ್ಳೇವುನು ನಿಮ್ಮ ತಾತ ಅದಕ್ಕೆ ನಮ್ಮಪ್ಪನು ಕರ್ಕಂಡ್ ಬಿಟ್ಟಿದ್ದು. ಒಗ್ಲಿ ಬಿಡು ವಯಸ್ಸಾಗಿತ್ತು ಜಾಸ್ತಿ ಕೊರಗದೀರ ಅವನ ಪಾದ ಸೇರಿದ. ಅಂತ ಸಂತೈಸುವ ದ್ವನಿಯಲ್ಲಿ ಹೇಳಿದಳು. ಹೌದು ಅಜ್ಜಿ ಆದರೂ ಬೇಜಾರು, ಯಾಕೋ ಈ ನಡುವೆ ಟೈಂ ಸರಿಯಿಲ್ಲ ಅಂದೆ. ಬಿಡೋ ಮಗನೆ, ನೀನ್ಯಾಕ್ ಅಳೋದು! ಮಕ್ಕಳ್ ಸತ್ತರೆ ಹುಟ್ಸದೋನ್ ಅಳ್ಬೇಕು. ನಾನು ನೀನು ಯಾಕ್ ಅಳೋದು, ನಾವೂ ಒಗೋದೇ ನಾಳೆ ಬೆಳ್ಳಿಗ್ಗೆ. ಏನಜ್ಜಿ ಅಂಗಂದರೆ?. ನಮ್ಮ ತಾತನವರ ಅಪ್ಪಾ ಯಾವಾಗೋ ಒಗ್ಬುಟ್ನಲ್ಲ ! ಅವನು ಎಲ್ಲಿ ಬಂದು ಅಳ್ತಾನೆ. ಅಂತ ಕೇಳಿದಕ್ಕೆ, ಅಯ್ಯೋ ಅವನಲ್ಲಪ್ಪ, ನಮ್ಮಪ್ಪನು ಪರಮಾತ್ಮನು ಅವನು ಅಳಬೇಕು, ಅವನ ಮಕ್ಕಳು ಸತ್ತರೆ, ಅವನ್ನು ಮಕ್ಕಳು ಕಷ್ಟ ಪಟ್ರೇ ಅವನು ಅಳ್ತಾನೆ. ನಾನು ನೀನು ಯಾಕೆ ಅಳಬೇಕು. ಅಂತ ಹೇಳಿ, ಬರ್ತೀನಪ್ಪಾ ಅಂತ ಅವರ ಅಣ್ಣನ ಮನೆ ಕಡೆ ಹೋದಳು. ಮುದುಕಿ ಏನೋ ಹೇಳಿ ಹೋದಳಲ್ಲ. ಪೂರ್ತಿ ಅರ್ಥ ಆಗದೇ ಹೋದರೂ ಏನೋ ವಿಶೇಷ ಅವಳ ಮಾತಿನಲ್ಲಿ ಇದ್ದದ್ದು ಮಾತ್ರ ಗೊತ್ತಾಯಿತು. ಹೀಗೆ ಮಧ್ಯಾಹ್ನದ ವರೆಗೂ ಅವಳ ಮಾತಿನ ಗುಂಗಿನಲ್ಲೇ ಕಳೆದೆ. ನಂತರ ಪುಸ್ತಕಗಳ ಸೆಲ್ಪ ಕಡೆ ಗಮನ ಹೋಯಿತು. ಇವನ್ನೆಲ್ಲಾ ದೂಳು ಉದರಿಸಿ ಇಡಬಹುದಿತ್ತಲ್ಲ ಅಂದುಕೊಂಡು ಒಂದೊಂದೆ ಪುಸ್ತಕ ಕ್ಲಿನ್ ಮಾಡುವುದಕ್ಕೆ ಶುರು ಮಾಡಿದೆ. ನಮ್ಮ ತಾತ ಜೋಪಟನವಾಗಿ ಇಟ್ಟಿದ ಭಗವದ್ಗೀತೆ ಪುಸ್ತಕವೂ ಆ ಪುಸ್ತಕಗಳ ಮಧ್ಯೆ ಇತ್ತು. ಒಂದೆರಡು ಪುಟ ತಿರುಗಿಸಿದೆ. ಹಾಗೇ ಮುಚ್ಚಿಟ್ಟು ಕೆಲಸ ಮುಂದುವರೆಸಿದೆ... ಏನೋ ಹೊಳೆದಂತಾಯಿತು. ಪುಸ್ತಕವನ್ನ ಮತ್ತೆ ತೆರೆದು ನೋಡಿದೆ. ೯ ವಿಧಧ ಭಕ್ತಿಯನ್ನ ವಿವರಿಸುವ ಪದ್ಯ ಅದು. "ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಂ" ಎಂಬ ಶ್ಲೋಕ ೨-೩ ಭಾರಿ ಓದಿದೆ. ಆ ಮುದಿಕಿಯ ಮಾತಿಗೆ ಈ ಶ್ಲೋಕ ಹೊಂದಾಣೆಕೆ ಆಗಬಹುದು ಅನಿಸಿತು. ಹಾಗೇ ಆ ಹುಚ್ಚು ಮುದುಕಿಯ ಮಾತಿಗೆಲ್ಲಾ ಇಷ್ಟು ಮಹತ್ವ ಕೊಡುವುದು ಬೇಕಾಗಿಲ್ಲ ಅನಿಸಿ, ಮತ್ತೆ ಕೆಲಸ ಮುಂದುವರೆಸಿದೆ. ರಾತ್ರಿ ಊಟಕ್ಕೆ ಕುಳಿತಾಗ ನಮ್ಮ ಅಮ್ಮನ ಬಳಿ ಆ ಮುದುಕಿ ವಿಚಾರ ಕೇಳಿದೆ. "ಪಾಪ ಒಳ್ಳೆಯವಳು. ಮಗಳು ಅಳಿಯ ಸತ್ತು ಈವಾಗ ಬಂದು ಅವರ ಅಣ್ಣನ ಮನೇಲಿ ಇದ್ದಾಳೆ. ಒಂದು ಕಾಲದಲ್ಲಿ ಚೆನ್ನಾಗಿ ಬದುಕಿದವಳು. ಮನೆಗೆ ಬಂದವರನ್ನ ಖಾಲಿ ಕಳ್ಸತಾ ಇರ್ಲಿಲ್ಲ ಪಾಪ" ಅಂದರು. ದೇವರ ಮೇಲೆ ಭಕ್ತಿ ಜಾಸ್ತಿ ಇರೋ ಹಾಗಿದೆ ಅಂತ ಕೇಳಿದೆ. ಓ ಯಾವುದೂ ಇಲ್ಲ. ಒಂದು ದಿನಾನೂ ದೇವಸ್ಥಾನಕ್ಕೆ ಒಗಿದ್ದು ಇಲ್ಲ ಆಯಮ್ಮ. ಮನೇಲಿ ದೀಪ ಅಂಟಿಸಿ ಪೂಜೆ ಮಾಡಿದ್ನು ನಾನು ನೋಡಿಲ್ಲ ಅಂದರು. ಮುಂದುವರೆದು ಏನೋ ಈ ನಡುವೆ ತಲೆ ಬೇರೆ ಸರಿ ಇಲ್ಲಂತೆ. ಅಂತ ಹೇಳಿ ಮಾತು ಮುಗಿಸಿದರು. ನಾನು ಆ ದಿನ ಊಟ ಮಾಡಿ ಮಲಗಿದೆ. ಒಂದೆರಡು ದಿನಗಳ ನಂತರ ಮತ್ತೆ ಆ ಮುದುಕಿ ನಮ್ಮಮನೆಗೆ ಬಂದಳು. ಕಾಫಿ ಕೊಟ್ಟು. ಏನಜ್ಜಿ ದೇವರು, ನಮ್ಮಪ್ಪ ಅಂತಾ ಇದೆ ಮೊನ್ನೆ. ನೀನು ಒಂದಿನಾನು ದೇವಸ್ಥಾನಕ್ಕೆ ಓಗಿಲ್ವಂತೆ, ಒಂದು ಪೂಜೆ ಮಾಡಿಲ್ವಂತೆ. ಅಂತ ಕೇಳಿದೆ. ದೇವಸ್ಥಾನಕ್ಕೆ ಓಗಕ್ಕ ದೇವರು ದೇವಸ್ಥಾನದಾಗ ಮಾತ್ರ ಇಲ್ಲಪ್ಪಾ, ನನ್ನೊಳ್ಗು, ನಿನ್ನೊಳ್ಗು, ಎಲ್ಲಾ ಕಡೆ ಅವ್ನೆ. ಹೂವ ಕಿತ್ತು, ಸಾಂಮಾಣ್ರಿ ಸುಟ್ಟು, ತೆಂಕಾಯಿ ಒಡ್ದು ಅವನ ಮೆಚ್ಸ್ ಬೇಕಾ ನಾವು. ನಾವು ಬದುಕೋದು ನೋಡಿ ಅವನು ಮೆಚ್ಚಬೇಕು. ಅವನ್ನ ಮೆಚ್ಚೋದೇನು? ಸುಳ್ಳು ಮೋಸ ಇಲ್ಲದೀರ ನಾನು ಬದುಕೋದು ನೋಡಿ, ಅವನೇ ಬಂದು ನನ್ನ ಮೆಚ್ಚಿಸಿ ಇಮಾನದಾಗ ಕರ್ಕೊಂಡ್ ಓಗ್ಬೇಕು. ಹೂವ ಪೂಜೆ ಇಂದ ಅವನ್ನ ಮೆಚ್ಚಸಕಾಗ್ತೈತಾ ? ಅದೆಲ್ಲಾ ನಾಟಕ ಅಷ್ಟೇ !. ಅಂದಳು. ನಮ್ಮ ಅಮ್ಮ ಹೇಳಿದ ಹಾಗೆ ಈ ಮುದುಕಿಗೆ ನಿಜವಾಗಿ ತಲೆ ಕೆಟ್ಟೈತೆ ಅಂದುಕೊಂಡು ಸುಮ್ಮನಾದೆ. ಮತ್ತೆ ಆ ಅಜ್ಜಿ ನಮ್ಮ ಕಡೆ ಬಂದಾಗ ನಾನು ಹೆಚ್ಚು ಮಾತಾಡುತ್ತಾ ಇರಲಿಲ್ಲ. ಅವಳೇ ಮಾತು ಪ್ರಾರಂಭ ಮಾಡಿದರೂ ಸಹಾ ನಾನು ಅಷ್ಟು ಆಸಕ್ತಿಯಿಂದ ಮಾತಾಡುತಾ ಇರಲಿಲ್ಲ. ಕೆಲವು ದಿನಗಳ ನಂತರ ನಾನು ಓದುವುದಕ್ಕೆ ಅಂತ ಹಾಸ್ಟಲ್ ಸೇರಿ ಬಿಟ್ಟೆ.
Comments
Post a Comment