ಐ ಟಿ ಪಾರ್‌ ಚೇಂಜ್‌ ಇವರ ಕುರಿತು ಒಂದು ಬರಹ

ಸಾಮಾಜಿಕ ಜಾಲತಾಣಗಳಲ್ಲಿ ಲಿಂಗಾಧಾರಿತ ದ್ವೇಷ ; ಒಂದು ನೋಟ.

            ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್‌, ವಾಟ್ಸಪ್‌, ಟ್ವಿಟರ್‌, ಟಿಕ್‌ ಟಾಕ್‌, ಇನ್ಸಟಾ‌ ಗ್ರಾಂ, ಯೂಟ್ಯೋಬ್‌, ಮುಂತಾದ ವೇದಿಕೆಗಳು ಹಿಂದೆಂದಿಗಿಂಲೂ ಈಗ ಹೆಚ್ಚು ಪ್ರಚಲಿತವಾಗುತ್ತಿವೆ. ಹೆಚ್ಚು ಹೆಚ್ಚು ಜನರು ತಮ್ಮ ಭಾವನೆಗಳ ಅಭಿವ್ಯಕ್ತಿಗೆ,  ತಮ್ಮ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು, ತಮ್ಮಲ್ಲಿ ಅಡಗಿರುವ ಕಲೆಯನ್ನು ಅಭಿವ್ಯಕ್ತಿಸಲು, ಮನರಂಜನೆಗೆ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಚಾರಗಳನ್ನು ತಿಳಿಯಲು ಹೀಗೆ ಹಲವು ಕಾರಣಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲಿಯೂ ಯುವಜನತೆ ಇಂತಹಾ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಸಕ್ರಿಯರಾಗಿದ್ದಾರೆ.

            ಇಂದು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಕ್ರಿಯಾಶೀಲ ಪಾಲ್ಗೊಳ್ಳುವಿಕೆ ಹೆಚ್ಚಿದ್ದು, ಇದ್ದೊಂದು ಉತ್ತಮ ಬೆಳವಣಿಗೆ ಆಗಿದೆ. ಬದಲಾಗುತ್ತಿರುವ ಸಮಾಜದಲ್ಲಿ ಹೆಣ್ಣು ತನ್ನನ್ನು ಬಂಧಿಸಿಟ್ಟಿರುವ ಎಲ್ಲಾ ಬಂಧನಗಳನ್ನು ಕಳಚಿಕೊಂಡು, ಎಲ್ಲಾ ಕ್ಷೇತ್ರಗಳಲ್ಲಿಯೂ ಸರಿಸಮಾನವಾದ ಸಾಧನೆಯನ್ನು ಮಾಡುತ್ತಿರುವುದನ್ನು ನಾವು ಕಾಣಬಹುದು. ಆದರೆ ಇದನ್ನು ಸಹಿಸದ ಪುರುಷ ಪ್ರಧಾನ ಸಮಾಜವು ಮತ್ತೆ ಹೆಣ್ಣನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ, ಹೆಣ್ಣಿನ ಮೇಲೆ ತನ್ನ ಅಧಿಕಾರ ಸಾಧಿಸುವ, ಸಾರ್ವಜನಿಕ ಸ್ಥಳದಿಂದ ಹೆಣ್ಣನ್ನು ದೂರ ಇಡುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಲೇ ಬರುತ್ತಿದೆ. 

ಈ ಪ್ರಯತ್ನದ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮಹಿಳೆಯರ, ಯುವತಿಯರ ಮೇಲೆ ಅನಾವಶ್ಯಕ ಹಾಗೂ ಉದ್ದೇಶಪೂರಿತವಾದ ದ್ವೇಷ ಹರಡುವ, ಅವರನ್ನು ಮುಜುಗರಕ್ಕೆ ಅವಮಾನಕ್ಕೆ ಈಡುಮಾಡುವ, ಮಹಿಳೆಯರ ವೈಯಕ್ತಿಕ ವಿಚಾರಗಳನ್ನು ದುರುಪಯೋಗ ಪಡಿಸಿಕೊಂಡು ಅದರಿಂದ ವಿಕೃತ ಆನಂದ ಪಡುವ, ತಾವು ಧರಿಸಿರುವ ಬಟ್ಟೆ , ಆಡುವ ಭಾಷೆ, ಇತ್ಯಾದಿಗಳನ್ನು ಅನವಶ್ಯಕವಾಗಿ ಟೀಕಿಸುವ, ಅಣಕಿಸುವ ಹೀಗೆ ತಮಗೆ ಸಾಧ್ಯವಾಗುವ ಎಲ್ಲಾ ರೀತಿಯ ದ್ವೇಷದ ಪ್ರಯೋಗಗಳನ್ನು ಮಹಿಳೆಯರ ಮೇಲೆ ಮಾಡುತ್ತಿದ್ದಾರೆ.

ಐ ಟಿ ಪಾರ್‌ ಚೇಂಜ್‌ ಸಂಸ್ಥೆಯವರು ಸಾಮಾಜಿಕ ಜಾಲತಾಣಗಳಲ್ಲಿ ಲಿಂಗಾಧಾರಿತ ಹೇಟ್‌, ಲಿಂಗಾಧಾರಿತ ದ್ವೇಷ ಹರಡುವಿಕೆ, ಮತ್ತು ಲಿಂಗತಾರತಮ್ಯಕ್ಕೆ ಸಂಭಂಧಿಸಿ ಯುವಕರಿಗೆ ತರಬೇತಿ ನೀಡುವ ಹಾಗೂ ಈ ವಿಚಾರಕ್ಕೆ ಸಂಭಂಧಿಸಿದ ಜನತೆಯ ಅಭಿಪ್ರಾಯಗಳನ್ನು ಸರ್ವೇ ಮೂಲಕ ಸಂಗ್ರಹಿಸಿ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಇಂತಹಾ ಲಿಂಗಾಧಾರಿತ ಹೇಟ್‌ ಹಾಗೂ ಲಿಂಗತಾರತಮ್ಯ ವನ್ನು ನಿರ್ಮೂಲನೆ ಮಾಡುವ, ಇದಕ್ಕೆ ವಿರುದ್ಧ ಪ್ರತಿಸ್ಪಂಧನೆ ನೀಡಲು ಯುವಕರನ್ನು ಅಣಿಗೊಳಿಸುವ ಹಾಗೂ ಅವರಿಗೆ ತರಬೇತಿ ನೀಡುವ ಕಾರ್ಯವನ್ನು ಮಾಡುತ್ತಿದ್ದು. ಇದು ಅತ್ಯಂತ ಅವಶ್ಯವೂ, ಜರೂರಿನ ಹಾಗೂ ಶ್ಲಾಘನೀಯ ಕಾರ್ಯವೂ ಆಗಿದೆ.

ಇಂತಹಾ ಸಂಶೋಧನೆಯಲ್ಲಿ ಒಂದು ಸಣ್ಣ ಭಾಗವಾದ ನಾನು, ಸುಮಾರು ಐದು ಆರು ವರ್ಷಗಳಿಂದಲೂ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್‌ ಮತ್ತು ಪೇಸ್ಬುಕ್‌ ಗಳಲ್ಲಿ ಸಕ್ರಿಯವಾಗಿದ್ದು, ಐ ಟಿ ಪಾರ್‌ ಚೇಂಜ್‌  ಸಂಶೋಧನೆಗೆ ಹಿನ್ನೆಲೆಯಾದ ತರಬೇತಿ ಕಾರ್ಯಾಗಾರದಲ್ಲಿ ನಾನು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಕೆಲವು ಲಿಂಗಾಧಾರಿತ ಹೇಟ್‌ ಗೆ ಸಂಭಂಧಿಸಿದ ಪ್ರಕರಣಗಳ ಬಗ್ಗೆ ತಿಳಿದುಕೊಂಡೆ, ಅದಕ್ಕೆ ಹಿಂದೆಯೇ ನಾನು ಇಂತಹಾ ಕೆಲವು ಪ್ರಕರಣಗಳನ್ನು ಗಮನಿಸಿದ್ದೆನಾದರೂ ನನಗೆ ಆಗ ಆ ಪ್ರಕರಣಗಳ ಹಿಂದಿನ ಮನಸ್ಥಿತಿಗಳು ಹಾಗೂ ಅವರ ಹುನ್ನಾರಗಳ ಬಗ್ಗೆ ತಿಳಿಯದೇ ಇದ್ದ ಕಾರಣದಿಂದಲೋ ಏನೋ ನಾನು ಅವನ್ನೆಲ್ಲಾ ಸಾಮಾನ್ಯ ಎಂಬ ರೀತಿಯಲ್ಲಿ ಅಥವಾ ಇದು ನನಗೆ ಸಂಭಂಧಿಸಿದಲ್ಲ ಎಂಬ ರೀತಿ ಇದ್ದು ಬಿಡುತ್ತಿದ್ದೆ. ಕೆಲವು ಪ್ರಕರಣಗಳು ನನಗೆ ತಪ್ಪು ಎಂದು ಎನಿಸಿದಾಗ ಅವನ್ನು ರಿಪೋರ್ಟ್‌  ಮಾಡಿ ಸುಮ್ಮನಿದ್ದು ಬಿಡುತ್ತಿದೆ.  

ನಮ್ಮ ಸಂಸ್ಥೆಯ ತರಬೇತಿ ಕಾರ್ಯಾಗಾರ ಪ್ರಾರಂಭವಾದ ಮೇಲೆ ನನಗೆ ಲಿಂಗತಾರತಮ್ಯ ಹಾಗೂ ಲಿಂಗಾಧಾರಿತ ಹೇಟ್‌ ನ ವ್ಯಾಖ್ಯಾನಗಳು ಹಾಗೂ ಅದರ ಸ್ವರೂಪ, ಹಿನ್ನೆಲೆ, ಕಾರಣಗಳನ್ನು ತಿಳಿದುಕೊಂಡು ನಂತರ ನನ್ನ ಫೇಸ್‌ ಬುಕ್‌ ಖಾತೆಯಲ್ಲಿ ಹಿಂದೆ ನಾನು ಕಂಡಂತಹಾ ಕೆಲವು ಲಿಂಗತಾರತಮ್ಯದ ಹಾಗೂ ಲಿಂಗಾಧಾರಿತ ಹೇಟ್‌ ನ ಸಂಧರ್ಭಗಳನ್ನು ನೆನಪಿಸಿಕೊಂಡು ಅವುಗಳ ಬೆನ್ನತಿ ಹೋದಾಗ ನನಗೆ ನೂರಾರು ಜನ ತಮ್ಮ ಫೇಸ್ಭುಕ್‌ ವಾಲ್ ಗಳಲ್ಲಿ ಹಾಗೂ ಹಲವಾರು ಜನ ತಮ್ಮ ಪೇಸ್‌ ಬುಕ್‌ ಪೇಜ್ಗಳಲ್ಲಿ ಜಸ್ಟ್‌ ಪಾರ್‌ ಫನ್‌ ಎಂಬ ತಲೆಬರಹದಲ್ಲಿ ಹಲವಾರು ಮಹಿಳೆಯರ ಬಗ್ಗೆ ಕೀಳಾಗಿ, ಅಶ್ಲೀಲವಾಗಿ ಬರೆದುಕೊಂಡಿರುವುದನ್ನು ಹಾಗೂ ಅದಕ್ಕೆ ಹಲವಾರು ಜನ ಪ್ರೋತ್ಸಾಹದಾಯವಾಗಿ ಕಮೆಂಟ್ಗಳನ್ನು ಹಾಕಿರುವುದನ್ನು ಗಮನಿಸಿದೆ.

ಈಗ ನನಗೆ ಈ ಎಲ್ಲಾ ಸಂಧರ್ಭಗಳಲ್ಲೂ ಸಹಾ ಲಿಂಗದ ಆಧಾರದಿಂದ ಮಹಿಳೆಯರನ್ನು ಉದ್ದೇಶಪೂರ್ವಕವಾಗಿಯೇ ಟಾರ್ಗೆಟ್‌ ಮಾಡುತ್ತಿದ್ದಾರೆ ಎಂಬುದು ಮನವರಿಕೆ ಆಯಿತು. ಹಾಗೂ ಮಹಿಳೆಯನ್ನು ಆಕೆಯ  ವಸ್ತ್ರ, ಭಾಷೆ, ನಡವಳಿಕೆ ಇತ್ಯಾದಿ ಕಾರಣಗಳನ್ನಿಟ್ಟುಕೊಂಡು ಅಣಕಿಸುವ ಆಕೆಯನ್ನು ಕೆಟ್ಟ ಭಾಷೆಯಲ್ಲಿ ನಿಂದಿಸುವುದನ್ನು ನಾನು ಗಮನಿಸಿದೆ ಹಾಗೂ ಇಂತಹಾ ದಾಳಿಗಳೆಲ್ಲಾ ಕೇವಲ ಆಕೆ ಹೆಣ್ಣಾಗಿರುವುದರಿಂದಲೇ ಹಾಗೂ ಆಕೆ ತನಗೆ ವಿಧಿಸಿರುವ ಕಟ್ಟುಪಾಡುಗಳನ್ನು ಮೀರಿ ಸಮಾನತೆಯನ್ನು ಹಾಗೂ ಸ್ವಾತಂತ್ರ್ಯವನ್ನು ಬಯಸುತ್ತಿರುವ ಕಾರಣದಿಂದಲೇ ಆಗುತ್ತಿವೆ ಎಂಬುದು ನನಗೆ ಸ್ಪಷ್ಟವಾಯಿತು.

ತಮ್ಮ ಈ ದಾಳಿಗಳಿಂದ ಮಹಿಳೆ ಹೆದರಿ ತಾನೂ ಯಾವುದೇ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ತಾನು ಗುರ್ತಿಸಿಕೊಳ್ಳದೇ, ತನ್ನ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳದೆ ಇಂತಹಾ ಸಾರ್ವಜನಿಕ ಸ್ಪೇಸ್‌ ನಿಂದ ದೂರ ಉಳಿಯುವ ಹಾಗೇ ಆಗಲಿ ಎಂಬುದೇ ಅವರ ಉದ್ದೇಶವೆಂಬುದನ್ನು ನಾನು ಅರಿತುಕೊಂಡೆ ಮತ್ತು ಅದು ಬಹಳ ಬಾಲಿಶವಾದ ಯೋಚನೆಯೆಂಬುದು ನನ್ನ ಅರಿವಿಗೆ ಬಂದಿತು.

ಇದಕ್ಕೆ ಹಿಂದೆ ನನ್ನ ಕೆಲವು ಮಹಿಳಾ ಸ್ನೇಹಿತರು ಅವರಿಗೆ ಆಗುತ್ತಿದ್ದ ಇಂತಹಾ ಕೆಲವು ಸಣ್ಣ ಮುಜುಗರದ ಸಂಧರ್ಭಗಳನ್ನು ನನ್ನ ಜೊತೆ ಹಂಚಿಕೊಂಡಾಗ ನಾನು ಅವರಿಗೆ ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ಕಡಿಮೆ ಮಾಡುವುದರ ಬಗ್ಗೆ ಹಾಗೂ ತಮ್ಮ ಭಾವಚಿತ್ರ ಪೋನ್‌ ನಂಬರ್‌ ಹಾಗೂ ಇತರೆ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದಂತೆ ಹಾಗೂ ಸಾಧ್ಯವಾದರೆ ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಲ್ಲಿಸಿ ಎಂದು ಸಲಹೆ ನೀಡುತ್ತಿದ್ದೆ. ನಾನು ನೀಡುತ್ತಿದ್ದ ಸಲಹೆ ನನಗೆ ಸಮಾಧಾನಕಾರವಾದ ಕ್ರಮವೆಂದು ಅನಿಸದೇ ಇದ್ದರೂ ಸಹಾ ನನಗೆ ಅದಕ್ಕಿಂತ ಉತ್ತಮವಾದ ಉಪಾಯವೇನು ಎಂಬುದು ತಿಳಿದಿರದ ಕಾರಣ, ಆ ರೀತಿಯ ಸಲಹೆಗಳನ್ನು ಕೊಡುತ್ತಿದ್ದೆ.

ನಮ್ಮ ಕಾರ್ಯಾಗಾರದಲ್ಲಿ ಹಾಜರಾದ ನಂತರ ನನಗೆ ಹಿಂದೆ ನಾನು ನೀಡಿದ್ದ ಸಲಹೆಗಳ ಬಗ್ಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನನಗೆ ಕಂಡು ಬಂದ ಕೆಲವು ಲಿಂಗತಾರತಮ್ಯದ ಸನ್ನಿವೇಷಗಳನ್ನು ಕಂಡು ಕಾಣದ ಹಾಗೇ ಸುಮ್ಮನಿದ್ದುದರ ಬಗ್ಗೆ ಮುಜುಗರವೆನಿಸಿತು. ಅಷ್ಟೇ ಅಲ್ಲದೇ ಅಂತಹಾ ಸಂಧರ್ಭಗಳಲ್ಲಿ ಒಬ್ಬ ಜವಾಬ್ದಾರಿಯುತ ನಾಗರೀಕನಾಗಿ ನಾನು ನನ್ನ ಜವಾಬ್ದಾರಿಯನ್ನ ಹೇಗೆ ನಿರ್ವಹಿಸಬೇಕೆಂಬುದನ್ನು ಅರಿತುಕೊಂಡೆ.

 ಯಾವುದೇ ಜಾಲತಾಣದಲ್ಲಿ ಲಿಂಗತಾರತಮ್ಯಕ್ಕೆ ಹಾಗೂ ಲಿಂಗಾಧಾರಿತ ದ್ವೇಷಕ್ಕೆ ಸಂಭಂಧಿಸಿದ ಚಟುವಟಿಕೆಗಳು ಕಂಡುಬಂದಲ್ಲಿ ನಾವು ತಕ್ಷಣ ಅವುಗಳನ್ನು ರಿಪೋರ್ಟ್‌ ಮಾಡುವುದು ಹಾಗೂ ಸಂಭಂಧಪಟ್ಟ ʼಹೇಟ್‌ ಸ್ಪೀಚ್‌ʼ ದ್ವೇಷದಿಂದ ಕೂಡಿದ ಬರಹಕ್ಕೆ ʼಕೌಂಟರ್‌ ಸ್ಪೀಚ್‌ʼ ಹೇಟ್‌ ಸ್ಪೀಚ್ ಗೆ ವಿರುದ್ಧವಾದ ಪ್ರತಿ ಹೇಳಿಕೆಯನ್ನು ದಾಖಲು ಮಾಡುವುದು ಇತ್ಯಾದಿಗಳನ್ನು ಮಾಡಬೇಕೆಂಬುದನ್ನು ಅರಿತುಕೊಂಡೆ ಹಾಗೂ ಅದನ್ನು ಆಚರಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ.

ಇಂತಹಾ ʼಹೇಟ್‌ ಸ್ಪೀಚ್‌ʼ ಎಂಬುದು ನಮಗೆ ಮೇಲ್ನೋಟಕ್ಕೆ ಸಾಮಾನ್ಯವಾಗಿ ಕಂಡರೂ ಸಹಾ ಇದರ ಹಿಂದೆ ದೊಡ್ಡ ಮಟ್ಟದ ಲಿಂಗತಾರತಮ್ಯದ, ಲಿಂಗಾಧಾರಿತ ದ್ವೇಷ ಇರುವುದನ್ನು ನಾವು ಅರಿಯಬೇಕಾಗಿದೆ. ʼಅತ್ಯಾಚಾರ ಸಂಸ್ಕೃತಿಯ ಪಿರಮಿಡ್‌ʼ ನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಚಟುವಟಿಕೆಗಳಾಗಿ ಇಂತಹಾ ಹೇಟ್‌ ಸ್ಪೀಚ್‌ ಚಟುವಟಿಕೆಗಳನ್ನು ಗುರುತಿಸಲಾಗಿದ್ದು, ಇಂತಹವನ್ನು ನಿರ್ಲಕ್ಷಿಸುವುದರ ಪರಿಣಾಮ ಕೊನೆಗೆ ಅತ್ಯಾಚಾರ ಹಾಗೂ ಕೊಲೆಗಳಿಗೆ ಪ್ರೇರಣೆ ನೀಡುತ್ತವೆ ಎಂಬುದನ್ನು ನಾವು ಅರಿಯಬೇಕಾಗಿದೆ.   

ನಮ್ಮ ಸಂಶೋಧನೆಯ ಭಾಗವಾದ ಸರ್ವೇ ಕಾರ್ಯಕ್ಕಾಗಿ ನಾವು ಕೆಲವು ಪ್ರಶ್ನೆಗಳನ್ನು ಹಾಕಿಕೊಂಡಿದ್ದು, ಈ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯಬಹುದಾದ ಕೆಲವು ಲಿಂಗಾಧಾರಿತ ದ್ವೇಷಕ್ಕೆ ಸಂಭಂಧಿಸಿದ ಚಟುವಟಿಕೆಗಳನ್ನು ಉದಾಹರಣೆಗಳಾಗಿ ನೀಡಿ ಅದಕ್ಕೆ ನೀವು ಯಾವ ರೀತಿ ಸ್ಪಂದಿಸುತ್ತೀರ ಎಂದು ಪ್ರಶ್ನೆಗಳನ್ನು ಕೇಳಲಾಗಿತ್ತು.

ಉದಾ : ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಮಹಿಳೆ – ಅವುಗಳಲ್ಲಿ ನಿಯಮಿತವಾಗಿ ಪೋಟೋಗಳನ್ನು, ವೀಡಿಯೋಗಳು ಇತ್ಯಾದಿಗಳನ್ನು ಪೋಸ್ಟ್‌ ಮಾಡುತ್ತಾರೆ, ಅವರು (ಮುಂದಿನ ಆಯ್ಕೆಗಳಲ್ಲಿ ನಿಮಗೆ ಸರಿ ಅನಿಸಿದ್ದನ್ನು ಆಯ್ಕೆ ಮಾಡಿ )

೧. ಅವರ ಅಪಾಯಕಾರಿ ನಡವಳಿಕೆ ತೋರಿಸುತ್ತಾರೆ ಏಕೆಂದರೆ ಮಹಿಳೆ ಇತರರನ್ನು ಆಕರ್ಷಿಸುವ ವೀಡಿಯೋಗಳನ್ನು ಹಾಕಬಾರದು.

೨. ಹೆಚ್ಚು ಸೆಲ್ಫಿಗಳನ್ನು ಪೋಸ್ಟ್‌ ಮಾಡಲ್ಲ ಅಂದರೆ ಆಕೆ ಗೌರವಾನ್ವಿತರು.

೩. ಅವರು ಸಾಮಾಜಿಕ ವಿಷಯಗಳ ಬಗ್ಗೆ ಹಂಚಿಕೊಳ್ಳುತ್ತಿದ್ದರೆ ಆಕೆ ಗೌರವಾನ್ವಿತರು.

೪. ಅವರು ಏನನ್ನಾದರೂ ಪೋಸ್ಟ್‌ ಮಾಡಲಿ ಅವರು ಗೌರವಾನ್ವಿತರು.

ಮುಂತಾದ ಪ್ರಶ್ನೆಗಳು.

ಇವೆಲ್ಲವೂ ಲಿಂಗಾಧಾರಿತ ದ್ವೇಷವನ್ನು ಅದರ ಕುರಿತಾದ ಜನರ ಅಭಿಪ್ರಾಯಗಳನ್ನು ಸಂಗ್ರಹಿಸುವ ಬಹು ಮುಖ್ಯವಾದ ಪ್ರಶ್ನೆಗಳೆಂದು ನಾನು ಅರಿತಿದ್ದೆ. ಆದರೆ ಅದನ್ನು ಕಂಡ ಕೆಲವರು ʼಈ ಪ್ರಶ್ನೆಗಳಿಗೂ ಲಿಂಗಾಧಾರಿತ ಹೇಟ್‌ ಗೂ ಯಾವ ರೀತಿ ಸಂಭಂಧವಿದೆ ?ʼ ಈ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ಲಿಂಗತಾರತಮ್ಯವನ್ನು ನಿವಾರಿಸಬಹುದೇ ?ʼ ಮುಂತಾದ ಪ್ರಶ್ನೆಗಳನ್ನು ಕೇಳಿದರು. ಅವರಿಗೆ ಮೇಲಿನ ವಿಚಾರಗಳನ್ನು ವಿವರಿಸಿ ಅರ್ಥಮಾಡಿಸಿದ ನಂತರ ಅವರಿಗೆಲ್ಲಾ ಈ ಸಂಶೋಧನೆಯ ಮಹತ್ವ ಅರ್ಥವಾಯಿತು. ಹಾಗೂ ಅವರು ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ.

 ಇಂತಹಾ ಸೂಕ್ಷ್ಮ ವಿಚಾರಗಳನ್ನು ಜನರಿಗೆ ಅದರಲ್ಲಿಯೂ ಯುವಜನತೆಗೆ ಕಲಿಸುವ , ಕೆಲವು ಪೂರ್ವಾಗ್ರಹ ಪೀಡಿತ ಷಡ್ಯಂತ್ರಗಳ ವಿರುದ್ಧ ನಿಂತು ಅವನ್ನು ಎದುರಿಸುವುದನ್ನು ಕಲಿಸಬೇಕಾದ ನಿಟ್ಟಿನಲ್ಲಿ, ಇಂತಹಾ ಸಂಶೋಧನೆಗಳು ನಡೆದು, ಹೆಚ್ಚು ಹೆಚ್ಚು ಜನರಿಗೆ ಇಂತಹಾ ತರಬೇತಿಗಳು ಸಿಗಬೇಕಾಗಿದೆ. ಹಲವಾರು ಜನ ಯುವತಿಯರು ಇಂತಹಾ ಲಿಂಗಾಧಾರಿತ ಹೇಟ್‌ ಗೆ ಹೆದರಿ ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್‌ ಗಳನ್ನು ನಿಷ್ಕ್ರಿಯಗೊಳಿಸಿಕೊಂಡು ಸುಮ್ಮನಾಗುತ್ತಿರುವರು. ಹಾಗೂ ಜನರು ಇಂತಹದನ್ನು  ಕಂಡು ಕಾಣದಂತೆ ಹೋಗುವರು. ಕೆಲವು ಬಾರಿ ಅವರಿಗೆ ಇಂತಹಾ ಸಂಧರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂಬುದು ತಿಳಿದಿರುವುದಿಲ್ಲ. ಇಂತಹಾ ಸಂಧರ್ಭಗಳಲ್ಲಿ ಅವನ್ನು ಎದುರಿಸುವ, ಮತ್ತು ಧೈರ್ಯವಾಗಿ ಪ್ರತಿಕ್ರಿಯುಸುವ ಹಾಗೇ ಮಾಡಬೇಕಾಗಿದೆ.

ಹೀಗೆ  ಐ ಟಿ ಪಾರ್‌ ಚೇಂಜ್‌ ಸಂಸ್ಥೆಯ ಸಂಶೋಧನೆಯ ಭಾಗವಾಗಿ ನಾನು ಕಲಿತ ಹೊಸ ವಿಷಯಗಳು, ನಾನು ನನ್ನ ಚಿಂತನೆಯಲ್ಲಿ ಮಾಡಿಕೊಂಡ ಮಾರ್ಪಾಟುಗಳು. ಮುಂತಾದ ನನ್ನ ಅನುಭವಗಳನ್ನು  ಓದುಗರೊಂದಿಗೆ ಹಂಚಿಕೊಳ್ಳುತ್ತಿರುವೆ. 

 

ಧನ್ಯವಾದಗಳು

 - ವರುಣ್‌ರಾಜ್‌ ಜೀ

 

 

 

  

Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.