ಕೈವಾರ ತಾತಯ್ಯ ನವರ ಕೃತಿಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಚಿಂತನೆಗಳು
ಕೈವಾರ
ತಾತಯ್ಯ ನವರ ಕೃತಿಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಚಿಂತನೆಗಳು.
ವಚನ ಸಾಹಿತ್ಯದ ಮುಂದುವರೆದ ಕಾಲಘಟ್ಟವಾಗಿ ನಾವು ತತ್ವಪದ ಸಾಹಿತ್ಯವನ್ನು
ಹಾಗೂ ಆ ಕಾಲದ ಅಮರ ಕಲ್ಯಾಣ ಕ್ರಾಂತಿಯನ್ನು ನೋಡುವುದಾದರೇ, ಹೇಗೆ ವಚನ ಸಾಹಿತ್ಯದಲ್ಲಿ ಆಗಿನ ಕಾಲದ ಸಾಮಾಜಿಕ ತಾರತಮ್ಯಗಳು ನಿರ್ಭಿಡೆಯಿಂದ ವ್ಯಕ್ತವಾದವೂ, ಹಾಗೂ ಸಾಮಾಜಿಕ ಬದಲಾವಣೆಗೆ ಆ ಮೂಲಕ ಸಮಾನತೆಯ
ಸ್ಥಾಪನೆಗೆ ಕಾರಣವಾಯಿತೋ, ಹಾಗೂ ಆಧ್ಯಾತ್ಮಿಕ ರಂಗ
ಹಾಗೂ ರಾಜಕೀಯ ರಂಗವನ್ನು ವಿಮರ್ಶಿಸುವ ಕೆಲಸ ನಡೆಯಿತೋ ಅದೇ ರೀತಿಯಲ್ಲಿ ತತ್ವಪದ ಸಾಹಿತ್ಯದಲ್ಲಿಯೂ
ಕೂಡಾ ಆಧ್ಯಾತ್ಮ ತತ್ವ ಗಳ ಜೊತೆ ಜೊತೆಯಲ್ಲಿಯೇ ಆ
ಕಾಲದ ರಾಜಕೀಯ ಮತ್ತು ಆರ್ಥಿಕ ಸನ್ನಿವೇಷಗಳನ್ನು, ರಾಜಕೀಯ ಮತ್ತು ಆರ್ಥಿಕ ಕಾರಣಗಳಿಗಾಗಿ ನಡೆಯುತ್ತಿದ
ಅರಾಜಕತೆಯನ್ನು, ದಬ್ಬಾಳಿಕೆ ದೌರ್ಜನ್ಯಗಳನ್ನು ತಮ್ಮ ಕೃತಿಗಳ ಮೂಲಕ ತತ್ವಪದಕಾರರು ವ್ಯಕ್ತ ಮಾಡಿರುವರು.
ಕರ್ನಾಟಕದ ತತ್ವಪದಕಾರರ ಪರಂಪರೆ ಬಹಳ ದೀರ್ಘವಾದದ್ದು, ನೆರೆಯ ಆಂಧ್ರ ಪ್ರದೇಶ,
ತಮಿಳುನಾಡು ಹಾಗೂ ಮಹಾರಾಷ್ಟ್ರಗಳಿಗೂ ಸಹಾ ನಮ್ಮ ತತ್ವಪದಕಾರರ, ವ್ಯಾಪ್ತಿ ಅಥವಾ ಪ್ರಭಾವ ಹಬ್ಬಿದೆ.
ಈ ಪರಂಪರೆಯಲ್ಲಿ ಬಹಳ ಪ್ರಮುಖರಾದವರು, ಕೈವಾರ ತಾತಯ್ಯನೆಂದೇ ಪ್ರಸಿದ್ಧವಾಗಿರುವ ಶ್ರೀ ಕೈವಾರ ಯೋಗಿ
ನಾರೇಣಪ್ಪನವರು. ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮವೇ ಇವರ ಕಾರ್ಯಕ್ಷೇತ್ರ,
ಕೈವಾರ ಗ್ರಾಮವು ಹಿಂದೆ ಏಕಚಕ್ರಪುರ ವೆಂಬ ಹೆಸರಿನಿಂದ ಬಹು ಪ್ರಸಿದ್ಧವಾದ ಸ್ಥಳವಾಗಿತ್ತೆಂದು ಇಲ್ಲಿನ
ಸ್ಥಳ ಪುರಾಣ ಹೇಳುತ್ತದೆ. ಕೈವಾರದಲ್ಲಿ ಭೀಮನಿಂದ ಬಕಾಸುರನ ವಧೆಯಾಯಿತೆಂದು, ಭೀಮ ಇಲ್ಲಿ ಒಂದು ಶಿವಾಲಯವನ್ನು
ನಿರ್ಮಿಸಿರುವನೆಂದು ಸಹಾ ಹೇಳಲಾಗುವುದು. ಅದಕ್ಕೆ ನಿದರ್ಶನವಾಗಿ ಕೈವಾರದಲ್ಲಿ ಭೀಮಲಿಂಗೇಶ್ವರ ದೇವಾಲಯವೂ
ಇದೆ.
ಇಂತಹಾ ಕೈವಾರ ಗ್ರಾಮದಲ್ಲಿ ಕೈವಾರ ನಾರೇಣಪ್ಪನವರು ತಮ್ಮ ತಪಸಿದ್ಧಿಯಿಂದ
ಹಲವಾರು ಪವಾಡಗಳನ್ನು ಮಾಡಿರುವರೆಂದು ಹೇಳಲಾಗುತ್ತದೆ. ಪ್ರಸ್ತುತ ಕೈವಾರ ನಾರೇಣಪ್ಪನವರನ್ನು ಒಬ್ಭ
ಪವಾಡ ಪರುಷನಾಗಿ ನೊಡುವುದಕ್ಕೆ ಬದಲಾಗಿ, ಅಕಾಲದ ಒಬ್ಬ ಬುದ್ಧಿಜೀವಿಯಾಗಿ, ಸಮಾಜ ಸುಧಾರಕನಾಗಿ ನೋಡಬೇಕಾದ
ಅವಶ್ಯಕತೆ ಹೆಚ್ಚಾಗಿದೆ. ಇಂತಹಾ ಪ್ರಯತ್ನಗಳನ್ನು
ಈಗಾಗಲೇ ಹಲವಾರು ಮಂದಿ ಚಿಂತಕರು ಹಾಗೂ ಸಂಶೋಧಕರು ಮಾಡುತ್ತಿದ್ದಾರೆ, ಅದರ ಒಂದು ಸಣ್ಣ ಪ್ರಯತ್ನ ಅಥವಾ
ಭಾಗವಾಗಿ ,ಕೈವಾರ ನಾರೇಣಪ್ಪನವರ ಕಾಲದಲ್ಲಿ ಇದ್ದ ರಾಜಕೀಯ ಹಾಗೂ ಆರ್ಥಿಕ ಸ್ಥಿತಿಗಳ ಕುರಿತು ಹಾಗೂ
ಒಬ್ಬ ಸಮಾಜಿಕ ನಾಯಕನಾಗಿ ನಾರೇಣಪ್ಪನವರು ಅವುಗಳನ್ನ ಎದುರುಗೊಂಡ ವಿಧವನ್ನು, ಆಗಿನ ಪರಿಸ್ಥಿತಿ ಕುರಿತು
ನಾರೇಣಪ್ಪನವರ ಚಿಂತನೆ ಅಥವಾ ದೃಷ್ಠಿಕೋನ ಏನು ಎಂಬುದನ್ನು ನಾರೇಣಪ್ಪನವರ ಕೃತಿಗಳ ಮೂಲಕ ಅರಿಯುವ ಕೆಲಸ ಅಥವಾ ಒಂದು ಯತ್ನವಾಗಿ ಪ್ರಸ್ತುತ
ಲೇಖನವನ್ನು ನೋಡಬಹುದಾಗಿದೆ.
ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮದಲ್ಲಿ ೧೭೨೬
ರಲ್ಲಿ ಒಂದು ಬಲಿಜ ಜನಾಂಗದ ಕುಟುಂಬದಲ್ಲಿ ನಾರೇಣಪ್ಪನವರು ಜನಿಸಿದರು. ತೆಲುಗು ಹಾಗೂ ಕನ್ನಡ ದ್ವಿಭಾಷಾ
ಪರಿಸರವಾದ ಕೋಲಾರ ಚಿಕ್ಕಬಳ್ಳಾಪುರ ಪ್ರಾಂತ್ಯದಲ್ಲಿ ಬೌದ್ಧ ಮಾಧ್ಯಮಿಕ ಮಾರ್ಗವಾದ ಅಚಲ ಗುರು ಪರಂಪರೆಯಲ್ಲಿ
ಕೈವಾರ ನಾರೇಣಪ್ಪನವರು ಗುರುತಿಸಲ್ಪಟ್ಟಿದ್ದು, ಕನ್ನಡ ತೆಲುಗು ಭಾಷೆಗಳಲ್ಲಿ ʼನಾದ ಬ್ರಹ್ಮಾನಂದ ನಾರೇಯಣ
ಕವಿ ಶತಕಮುʼ ʼಕಾಲಜ್ಞಾನ ಸೂಕ್ಷ್ಮ ಭೀಮಲಿಂಗ ಶತಕಮುʼ ʼವೇದಾಂತ ಸಾರಾವಳಿ –ಕೀರ್ತನಮುಲುʼ ತಾರಕ ಬ್ರಹ್ಮಾನಂದ
ದ್ವಯಕಂದ ಶತಕಮುʼ ಬ್ರಹ್ಮಾಂಡ ಪುರಿ ಶತಕಮುʼ ʼಅಮರ ನಾರೇಯಣ ಶತಕಮುʼ ʼಶ್ರೀ ವಿಮಲಾತ್ಮ ನಾರೇಯಣ ಕವಿ ಶತಕಮುʼ ಈ ಕೃತಿಗಳನ್ನು
ನಾರೇಣಪ್ಪನವರು ವಿವಿಧ ಅಂಕಿತಗಳಲ್ಲಿ ರಚಿಸಿರುವರು.
ಇವುಗಳಲ್ಲಿ ಮುಖ್ಯವಾಗಿ ʼವೇದಾಂತ ಸಾರಾವಳಿʼ ಹಾಗೂ ʼಭೀಮಲಿಂಗೇಶ್ವರ ಶತಕʼ
ಮತ್ತು ʼಪ್ರಚಂಡ ನಾರೇಯಣ ಕವಿ ಶತಕʼ ಗಳಲ್ಲಿ ತಾತಯ್ಯನವರು ಆಗಿನ ಕಾಲದ ರಾಜಕೀಯ ಹಾಗೂ ಆರ್ಥಿಕ ವಿಚಾರಗಳನ್ನು
ಬಹಳ ಚೆನ್ನಾಗಿ ವ್ಯಕ್ತಮಾಡಿರುವರು. ಆಗಿನ ಕಾಲದ ಐತಿಹಾಸಿಕ
ಮತ್ತು ಸಾಮಾಜಿಕ ಅಧ್ಯಾಯನಕ್ಕೆ ಈ ಭಾಗ ಅತ್ಯಂತ ಉಪಯುಕ್ತವಾದದ್ದಾಗಿದೆ. ಇಲ್ಲಿ ಕೇವಲ ಆಗಿನ ಕಾಲದ
ವಿವರಗಳನ್ನು ವ್ಯಕ್ತ ಮಾಡಿರುವುದು ಅಷ್ಟೇ ಅಲ್ಲದೇ ಅವುಗಳನ್ನು ವಿಢಂಬನಾತ್ಮಕವಾಗಿ ವಿವರಿಸಿರುವುದು
ವಿಶೇಷವಾಗಿದೆ.
ವೇದಾಂತ ಸಾರಾವಳಿ ಕೃತಿಯಲ್ಲಿ ನಾರೇಣಪ್ಪನವರು ʼಇಂತಗವೇಡಿನ ನೇರಮುಲೆಂಚಕ
ಮನ್ನಿಂಚಿ ನಾ ವಿನ್ನಪಂಬು ವಿನರಾದ…..ʼ ಎಂಬ ಒಂದು ತೆಲುಗು ಕೀರ್ತನೆಯಲ್ಲಿ ಸ್ವತಃ ತಮ್ಮ ಪರಿಸ್ಥಿತಿಯನ್ನು
ಲಕ್ಷ್ಮೀ ದೇವಿಗೆ ನಿವೇದಿಸುವ ಚಿತ್ರಣ ಇದೆ. ಇಲ್ಲಿ ʼಆದಾಯವು ಬರಲಿಲ್ಲ ,ಸಾಲ ತೀರಲಲ್ಲ. ……… ಎಲ್ಲಿ
ಹೊಗಲಿ ನಾನು ಯೋಚನೆ ತೀರಲು….. ಆದಾಯವನಾದರ ಕೊಡಬಾರದೇ ಎನಗ….ʼ ಎಂದು ಹೇಳುವರು. ಇಲ್ಲಿ ಒಬ್ಬ ಸಾಮಾನ್ಯ
ಮನುಷ್ಯನ ಪರಿಸ್ಥಿತಿ ಯಾವ ರೀತಿ ಇದ್ದಿತ್ತು, ಎಂಬುದನ್ನು ನಾವು ಗುರುತಿಸಬಹುದು. ಮುಂದೆ ʼಸದ್ಗುರುಡು
ಯಿಚ್ಚೆರಾ ಸಮನಿ ಧನಮುʼ ಎಂಬ ಮತ್ತೊಂದು ಕೀರ್ತನೆಯಲ್ಲಿ , ಹಣದ ಮಿತಿಗಳನ್ನು , ಹೇಳುತ್ತಾ… ನಾನು
ಅದಕ್ಕಿಂತ ಮೀರಿದ ಸವೆಯದ ಧನವನ್ನು ಸದ್ಗುರುವಿನಿಂದ ಪೆಡದೆನೆಂದು ನಾರೇಣಪ್ಪನವರು ಹೇಳುತ್ತಾರೆ. ಹಣದ ಮಿತಿಗಳ ಅರಿವಿದ್ದೂ ಸಹಾ ಅದಕ್ಕಾಗಿ ಹಾತೊರೆಯುವ, ಸಾಲಮಾಡಿ
ಅದರ ಸುಳಿಗೆ ಸಿಲುಕುತ್ತಿದ ಜನರ ಭಾವನೆಯನ್ನು ಹಿಡಿದಿಡಲುವಲ್ಲಿ ಈ ಸಾಲುಗಳು ಯಶಸ್ವಿಯಾಗಿವೆ.
ಮುಂದೆ ಮತ್ತೊಂದು ಸೀಸ ಪದ್ಯದಲ್ಲಿ ನಾರೇಣಪ್ಪನವರು , ಬರಗಾಲವನ್ನು , ಬರಗಾಲದಿಂದ
ಆಗುವ ಹಾನಿಗಳನ್ನು, ಕಷ್ಟ ನಷ್ಟಗಳನ್ನು ವಿವರಿಸಿದ್ದಾರೆ.
ʼಅಷ್ಟದಿಕ್ಪಾಲರು ನೀವೇಲ್ಲರೂ ಅಧ್ಯಕ್ಷರಾಗಿ, ಮಳೆಗೆ ಏಕೆ ವಕ್ಕರಿಸಿದಿರಿ, ತೃಣದಷ್ಟು ನೀರಿಲ್ಲದೇ
ಗೋವುಗಳು ಹಾಗೂ ಫಲವೃಕ್ಷಗಳೆಲ್ಲಾ ಬಳಲಿ ಒಣಗಿ ಹೋಗಿರುವವು,
ಕೆರೆ ಕುಂಟೆಗಳ ನೀರೆಲ್ಲಾ ಇಂಗಿಹೋಗಿ, ಜಲಚರ ಜೀವಿಗಳೆಲ್ಲಾ ಹೊರಗೆ ಬಂದಿರುವವು. ಬೆಟ್ಟಗುಟ್ಟಗಳು
ಬೇಗೆಯಿಂದ ಬಹು ಜೀವರಾಶಿಗಳಿಗೆ ಬಹಳಾ ತೊಂದರೆಯಾಗಿದೆ. ಮಳೆಬರದೇ ಇದ್ದರೇ ಈಗ ಬಹು ಕೇಡಾಗುವುದು ನಮಗೆ………ʼ ಈ ಪದ್ಯದಲ್ಲಿ ನಾರೇಣಪ್ಪನವರಂತಹಾ ಸಾಮಾಜಿಕ ನಾಯಕರು ಆಗಿನ
ಕಾಲದ ಬರಗಾಲವನ್ನು ಯಾವ ರೀತಿ ನೋಡುತ್ತಿದ್ದರು, ಪ್ರಾಣಿ ಪಕ್ಷಿಗಳು, ಗೋವುಗಳ ಬಗ್ಗೆ ಅವರಿಗಿದ್ದ
ಕಾಳಜಿ, ಮಳೆ ಇಲ್ಲದೇ ಅವು ಕಷ್ಟ ಪಡುತ್ತಿದ್ದಾಗ ನಾರೇಣಪ್ಪನವು ಅವುಗಳ ಬಗ್ಗೆ ಮರುಗುವುದು ಇಲ್ಲಿ
ನೋಡಬಹುದು.
ಮುಂದೆ ʼಕೈಯಲ್ಲಿ ಒಂದು ಕಾಸು ಕಟ್ಟಿರುವವನಲ್ಲ ಸತ್ಯ ಈ ಮಾತು ಸಂಶಯವೇನು
ಇಲ್ʼ ಮತ್ತು ʼಈ ಊರವೊಳಗಿಷ್ಟು ಉತ್ಪಾತವೇನೋ ದುರಿತ ಸಂಹರ ನಾರೇಯಣ ಹರಿಯೇ ʼ ಎಂಬ ಎರಡು ಕನ್ನಡದಲ್ಲಿಯೇ
ರಚಿತವಾಗಿರುವ ಕೀರ್ತನೆಗಳನ್ನು ನೋಡುವುದಾದರೇ, ʼಕೈಯಲ್ಲಿ ಒಂದು ಕಾಸು ಕಟ್ಟಿರುವವನಲ್ಲ ಸತ್ಯ ಈ ಮಾತು
ಸಂಶಯವೇನು ಇಲ್ಲ… ಹೊದ್ದಿರುವುದೇ ವಸ್ತ್ರ ವಮ್ಮಾನಕಾಳಿಲ್ಲ, ಮತ್ತೇನು ವ್ಯವಸಾಯ ಮಾಡಲಿಲ್ಲ, ಹಿಂದೆ ಮಾಡಿದ ಸಾಲ ಇನ್ನ ತೀರಿಸಲಿಲ್ಲ, ಬಹಳ ಲಾಭವು ಮುಂದೆ ಬರತಕ್ಕದಿಲ್ಲ.
ʼಎಂದು ಹೇಳುವರು, ಇಲ್ಲಿನ ಮನುಷ್ಯನ ಸ್ಥಿತಿ ಹೇಗಿದೆಯಂದರೇ, ಅವನು ಹೊದ್ದಿರುವುದು ಒಂದೇ ವಸ್ತ್ರ
ಅವನ ಬಳಿ ಇದೆ, ಕಾಳು ಕಡಿಗಳು ಇಲ್ಲ, ವ್ಯವಸಾಯವನ್ನು ಮಾಡುವ ಅವಕಾಶವಾಗಲಿಲ್ಲ. ಹಿಂದೆ ಪಡೆದ ಸಾಲವು ಇನ್ನಾ ತೀರಿಲ್ಲ, ಮುಂದೆ ಸಾಲ ತೀರಿಸಬಹುದು
ಎಂದುಕೊಂಡರೆ, ಬಹಳ ಲಾಭ ಯಾವುದು ಮುಂದೆ ಬರುವ ನಿರೀಕ್ಷೆ ಇಲ್ಲ. ಇಂತಹಾ ಪರಿಸ್ಥಿತಿಯಲ್ಲಿಯೇ ಆಗಿನ
ಬಡ ಜನರು ತಮ್ಮ ತಮ್ಮ ಜೀವನವನ್ನೆಲ್ಲಾ ಕಳೆಯುತ್ತಿದ್ದುದನ್ನು ಈ ಸಾಲುಗಳು ನಿರ್ದೇಶಿಸಿದರೆ ಮುಂದಿನ
ಕೀರ್ತನೆ ಇಂತಹಾ ಪರಿಸ್ಥತಿಗೆ ಏನು ಕಾರಣ ಎಂಬುದನ್ನು ವಿವರಿಸುವ ಪ್ರಯತ್ನ ಮಾಡುತ್ತದೆ.
ʼಈ ಊರವೊಳಗಿಷ್ಟು ಉತ್ಪಾತವೇನೋ ದುರಿತ ಸಂಹರ ನಾರೇಯಣ ಹರಿಯೇ, ವಿಶ್ವಾಸ
ಘಾತುಕನು ಇಲ್ಲಿರುವ ಶಾನುಭೋಗ ಕೆಟ್ಟಮುಂಡೇ ಗಂಡ ಗುರಿಕಾರನೋ ʼ ಎಂದು ಹೇಳುವರು ಈ ಕೀರ್ತನೆಯಲ್ಲಿ
ನಾರೇಣಪ್ಪನವರು ಆಗಿನ ಕಾಲದ ಶಾನುಭೋಗರು ಗ್ರಾಮದ ಜನರನ್ನು ವಂಚಿಸುತ್ತಾ ಆ ಮೂಲಕ ಅವರು ಬಡವರಾಗಿಯೇ
ಉಳಿಯಲು ಕಾರಣ ನಾಗಿದನೆಂದು ಗುರುತಿಸಿ ಅವನನ್ನು ವಿಶ್ವಾಸ ಘಾತುಕನೆಂದು ಕರೆದಿರುವರು.
ಮುಂದೆ ಮತ್ತೊಂದು ಕೀರ್ತನೆಯಲ್ಲಿ ನಾರೇಣಪ್ಪನವರು ಆ ಕಾಲದಲ್ಲಿ ಜನರು ಹಲವು
ರೋಗರುಜಿನಗಳಿಗೆ ತುತ್ತಾಗುತ್ತಿದ ಬಗ್ಗೆ ವಿವರಗಳನ್ನು ನೀಡಿರುವರು. ʼಈ ದೇಹದಲ್ಲಿ ವಿಪರೀತ ಜ್ವರ
ಹುಟ್ಟಿ, ಯಾವ ಔಷಧದಿಂದಲೂ ಗುಣವಾಗುತ್ತಿಲ್ಲ…. ಅಕ್ಕಿ ,ಬೇಳೆ, ಉಪ್ಪು ಹುಳಿ ಕಾರಗಳ ಕಡು ಪಥ್ಯದಿಂದಲೂ
ಈ ಜ್ವರವು ಹೊಗುತ್ತಿಲ್ಲ. ಬಾಯಲ್ಲವೂ ಹುಳಿ ಹುಳಿಯಾಗಿದೆ,
ಹುಳಿಯನ್ನು ಹೊಗಲಾಡಿಸಲು ಎಲೆ ಅಡಿಕೆ ಹೊಗೆಸೊಪ್ಪನ್ನು ಬಾಯಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಆದರೂ
ಜ್ವರವು ಹೋಗುತ್ತಿಲ್ಲ. ಜ್ವರದಿಂದ ಬಾಯಿ, ಕಣ್ಣು, ಮೂಗು ಎಲ್ಲವೂ ಕೆಟ್ಟಿವೆ…..ʼ ಇಲ್ಲಿ ನಾರೇಣಪ್ಪನವರ
ಕಾಲದಲ್ಲಿ ಉಂಟಾಗುತ್ತಿದ ರೋಗಗಳ ಬಗ್ಗೆಗಿನ ವಿವರ ಹಾಗೂ ಅದಕ್ಕೆ ಸಂಭಂಧಿಸಿ ಅವರು ಮಾಡುತ್ತಿದೆ ಪಥ್ಯ,
ಚಿಕಿತ್ಸೆಗಳ ವಿವರಗಳನ್ನು ನಾವು ನೋಡಬಹುದು.
ನಾರೇಣಪ್ಪನವರು ತಮ್ಮ ʼನಾದ ಬ್ರಹ್ಮಾನಂದ ನಾರೇಯಣ ಕವಿ ಶತಕದಲ್ಲಿ, ಹೇಗೆ
ಗುರುಗಳು ಮಂತ್ರಿಗಳು ಹಾಗೂ ಅಧಿಕಾರಿಗಳೂ ದುರಾಶೆಯಿಂದ ನಡೆದುಕೊಳ್ಳುವರು ಹಾಗೂ ಅದರಿಂದ ಹೇಗೆ ರಾಜವಂಶಗಳು
ನಿರ್ನಾಮವಾದವು ಎಂಬುದನ್ನು ಐತಿಹಾಸಿಕ ಉದಾಹರಣೆಗಳ ಮೂಲಕ ನಾರೇಣಪ್ಪನವರು ವಿವರಿಸಿದ್ದಾರೆ. ʼದುರ್ಭೋದೆಯ
ಗುರುಗಳನ್ನು ನಂಬಿ, ದೇವತೆಗಳು ಕೆಟ್ಟರು, ಕೋಲಾರದ ಶೆಟ್ಟರು, ಚಿಕ್ಕಬಳ್ಳಾಪುರದ ದೊರೆಗಳು ಅಷ್ಟೇ
ಅಲ್ಲದೇ, ಸುಲ್ತಾನ ವಂಶವೇ ಇಂತಹಾ ದುರ್ಭೋದೆಯ ಗುರುಗಳಿಂದ ಕೆಟ್ಟು ಹೋಯಿತುʼ ಎಂದು ನಾರೇಣಪ್ಪನವರು
ಹೇಳಿರುವರು. ಮುಂದೆ ಪ್ರಧಾನಿಗಳು, ಮುಖ್ಯ ಅಧಿಕಾರಿಗಳು, ದೊರೆಗಳ ಭಯವಿಲ್ಲದೇ, ಶಾನುಭೋಗರಾದಿಯಾಗಿ
ಎಲ್ಲಾ ಅಧಿಕಾರಿ ವರ್ಗದವರೂ ಸಹಾ ಲಂಚಕ್ಕೆ ಕೈ ಒಡ್ಡುವವರೇ ಆಗಿದ್ದಾರೆʼ ಮೇಲಿನ ಎರಡು ಪದ್ಯಗಳಲ್ಲಿ
ನಾರೇಣಪ್ಪ ನವರು ಆಗಿನ ಕಾಲದ ರಾಜಕೀಯ ಪಲ್ಲಟಗಳು, ಹಾಗೂ ಅವುಗಳಿಗೆ ಕಾರಣಗಳನ್ನು ಹಾಗೂ ಹೇಗೆ ರಾಜ
ಮಂತ್ರಿಗಳಿಂದ ಹಿಡಿದು, ಶಾನುಭೋಗರವರೆಗೆ ಎಲ್ಲರೂ ಲಂಚಕ್ಕೆ ಆಸೆ ಪಟ್ಟು ಜನರನ್ನು ಶೋಷಣೆಗೆ ಒಳಪಡಿಸುತ್ತಿದರೆಂಬುದನ್ನು
ಇಲ್ಲಿ ಕಾಣಬಹುದು.
ಮುಂದುವರೆದು ಆಗಿನ ಕಾಲದ ರೈತರ ಪರಿಸ್ಥಿತಿಯನ್ನು ವಿವರಿಸುವ ಒಂದು ಪದ್ಯದಲ್ಲಿ,
ನಾರೇಣಪ್ಪನವರು ʼಬೆಳೆ ಬೆಳೆದರೂ ಬರ, ಬೆಳೆ ಒಣಗಿದರೂ ಬರ, ಪ್ರಜೆಗಳು ಪ್ರಪಂಚದಲ್ಲಿ ಹೇಗೆ ಬದುಕುವರು…….ʼ
ಇಲ್ಲಿ ರೈತರು ಬೆಳೆಗಳನ್ನು ಬೆಳೆದರೆ ಅದಕ್ಕೆ ಆಸೆ ಪರರಾದ ರಾಜರು ವಿಧಿಸುವ ಸುಂಕ ಕಟ್ಟಲಾರದೇ ರೈತರೆಲ್ಲಾ
ಮತ್ತೆ ತಾವು ಬೆಳೆದ ಬೆಳೆಯನ್ನು ಕಳೆದುಕೊಂಡು ಏನು ಇಲ್ಲದೇ ಆಗುವರು. ಒಂದು ವೇಳೆ ಬೆಳೆ ಬೆಳೆಯದಿದ್ದರೇ
ಆಗಲೂ ಸಹಾ ರೈತರಿಗೆ ಕಷ್ಟ ತಪ್ಪಿದ್ದಲ್ಲ. ಹೀಗೆ ರೈತರು ಬೆಳೆ ಬೆಳೆದರೂ ಬೆಳೆಯದಿದ್ದರೂ ಅವರ ಕಷ್ಟ
ತಪ್ಪಿದಲ್ಲ ಎಂಬದನ್ನು ನಾರೇಣಪ್ಪನವರು ವಿವರಿಸುವರು.
ಮುಂದೆ ರಾಜರು ಅಥವಾ ಅಧಿಕಾರಿಗಳು ಹೇಗೆ ಬೇರೆ ಬೇರೆ ಸುಂಕಗಳನ್ನು ವಿಧಿಸಿ
,ಗುತ್ತಿಗೆ ಕ್ರಮಗಳನ್ನು ಜಾರಿಗೆ ತಂದು ಹೇಗೆ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಈಡು ಮಾಡುವೆರೆಂಬುದನ್ನು
ʼಪಶುಗಳ ಮೇವು ಗುತ್ತಿಗೆಗೆ, ಹಸಿರು ಹುಲ್ಲು ಗುತ್ತಿಗೆಗೆ, ಫಲವೃಕ್ಷಗಳು ಗುತ್ತಿಗೆಗೆ, ಹೀಗೆ ಭಕ್ಷಕರು, ಬೀಡು, ಹಣ್ಣುಗಳು, ಮಗ್ಗಗಳು, ಸೇವಕರು,
ಎಲ್ಲಕೂ ಹೊಸ ಹೊಸ ಸುಂಕಗಳು ಏರ್ಪಡುವವವೆಂದು ನಾರೇಣಪ್ಪನವರು ವಿವರಿಸುವರು.
ಮುಂದುವರೆದು ನಾರೇಣಪ್ಪನವರು ತಮ್ಮ ʼಕಾಲಜ್ಞಾನ ಸೂಕ್ಷ್ಮ ಭೀಮಲಿಂಗ ಶತಕʼದಲ್ಲಿ
ಕಾಲಜ್ಞಾನವನ್ನು ಹೇಳುತ್ತಾ, ಆ ಕಾಲದಲ್ಲಿ ಚಾಲ್ತಿಯಲ್ಲಿದ ವಿವಿಧ ರೀತಿಯ ನಾಣ್ಯಗಳು ಅವುಗಳ ಬೆಲೆ,
ಮಾರುಕಟ್ಟೆ ವಿಧಾನ, ಲೇವಾದೇವಿ ವ್ಯವಹಾರ, ಹಾಗೂ ಕೆಲವು ಅಳತೆ ಮಾಪನಗಳ ವಿವರಗಳನ್ನು ಉಲ್ಲೇಖಿಸಿರುವರು
ಇವು ಬಹಳ ಮಹತ್ವಪೂರ್ಣವಾದ ಉಲ್ಲೇಖಗಳಾಗಿದ್ದು, ಇವನ್ನು ಗಮನಿಸುವುದಾದರೇ, ʼಮುಂದೆ ಒಂದು ಖಂಡುಗಕ್ಕೆ
ಗುತ್ತಿಗೆಯು ನಾಲ್ಕನೇ ಒಂದು ಭಾಗವಾಗುವುದು, ರೈತರು ಕೊನೆಯ ನಾಲ್ಕನೇ ಒಂದು ಪಾಲನ್ನು ಗುತ್ತಿಗೆಗೆ
ನಿರ್ಣಯಿಸಿ ಪೂರ್ಣಫಲವನ್ನು ಅನುಭವಿಸುವರು. ʼಮುಂದೆ ಹೆಸರಿಗೆ ಬದಲಾಗಿ ಮುದ್ರೆಯ ಅಂಕಿತವುಳ್ಳ ಬಂಗಾರದ
ಹಾಗೂ ಬೆಳ್ಳಿಯ ನಾಣ್ಯಗಳು ಚಲಾವಣೆಗೆ ಬರುವವು, ರೂಪಾಯಿಯ ಕಾಲು ಬೆಲೆಯ ʼರೂಕʼ ಮತ್ತು ಪೂರ್ಣ ಬೆಲೆಯ
ʼವರಹʼ ಗಳು ಚಾಲ್ತಿಗೆ ಬರುವವು. ಚಕ್ರ ಸ್ಥಂಭ ದ ಚಿಹ್ನೆಯುಳ್ಳ ನಾಣ್ಯಗಳು ಚಲಾವಣೆಗೆ ಬರುವವು, ಹಾಗೂ
ʼರೂಕʼ ಆರಕ್ಕೆ ರೂಪಾಯಿ ಒಂದು ಆಗುತ್ತದೆʼ ಈ ಎರಡು ಹೇಳಿಕೆಗಳು ಆಗಿನ ಕಾಲದ ಸುಂಕದ ವಿವರಗಳನ್ನು ಹಾಗೂ
ನಾಣ್ಯಗಳು ಹಾಗೂ ಅವುಗಳ ಮೌಲ್ಯಗಳ ಬಗ್ಗೆ ವಿವರಿಸುವವು.
ಮುಂದಿನ ಪದ್ಯದಲ್ಲಿ ನಾರೇಣಪ್ಪನವರು ಲೇವಾದೇವಿ ಪದ್ಧತಿಗೆ ಸಂಬಂಧಿಸಿ ವಿವರಗಳನ್ನು
ಹೇಳುತ್ತಾ, ʼನೂರು ವರಹಗಳಿಗೆ ತಿಂಗಳ ಬಡ್ಡಿ (ಒಂದು ರೂಕ ವರಹದ ಕಾಲು ಬೆಲೆಯ ನಾಣ್ಯ) ,ಎಂದು ಹೇಳುವರು. ನಾರೇಣಪ್ಪನವರು ಈ ವಿವರಗಳನ್ನ ಕಾಲಜ್ಞಾನ
ಹೇಳುವ ಸಂಧರ್ಭದಲ್ಲಿ ಹೇಳಿದ್ದು, ಈ ವಿವರಗಳು ಹಿಂದೇ ಇದೇ ರೀತಿ ಇದ್ದವೆಂದು ಹೇಳಲು ಕಷ್ಟಸಾಧ್ಯ.
ಬಹುಷಃ ಮುಂದೆ ಇಂತಹಾ ಕಾಲ ಬರುವುದೆಂಬ ನಿರೀಕ್ಷೆಯಲ್ಲಿ ಹೇಳಿರಬಹುದು ಅಥವಾ ಅಂತಹಾ ಕಾಲ ಬಂದರೆ ಜನರು
ಸುಖ ನೆಮ್ಮದ್ಧಿಗಳಿಂದ ಇರುವರೆಂದು ನಾರೇಣಪ್ಪನವರು ಭಾವಿಸಿರಬಹುದು, ಅಥವಾ ಯಾವುದೋ ಒಂದು ಕಾಲಕ್ಕೆ
ಇಂತಹಾ ಪರಿಸ್ಥಿತಿ ಕೆಲವು ಕಾಲ ಬಂದು ಹೋಗಿರಲೂಬಹುದು, ಆದರೆ ಈ ಲೇಖನದಲ್ಲಿ ನಾವು ಆಗಿನ ಕಾಲದ ಅಳತೆ ಮಾಪನಗಳ ಉಲ್ಲೇಖಗಳನ್ನು
ಮಾತ್ರವೇ ಗಮನಿಸುತ್ತಿದ್ದೇವೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುಂದುವರೆಯಬೇಕಾಗಿದೆ.
ಮುಂದುವೆರೆದು ನಾರೇಣಪ್ಪನವರು ಆ ಕಾಲದಲ್ಲಿ ಸುಂಕ ವಸೂಲು ಮಾಡುತ್ತಿದ್ದ
ಗ್ರಾಮದ ರೆಡ್ಡಿ, ಪಟೇಲ, ಕರಣಿಕ, ತೋಟ ಮತ್ತು ತಳವಾರರು ಜನರಿಂದ ಸುಂಕ ವಸೂಲು ಮಾಡಿ ಅಧಿಕಾರಿಗಳಿಗೆ
ತಲುಪಿಸುತ್ತಿದ ವಿಚಾರವನ್ನು ಉಲ್ಲೇಖ ಮಾಡಿರುವರು, ,ಮುಂದು ವರೆದು ನಾರೇಯಣಪ್ಪ ಹೇಗೆ ರಾಜರು ಅಧಿಕಾರಿಗಳು
ರಾಜರನ್ನು ವಂಚಿಸುವರು ಮತ್ತು ರಾಜರಲ್ಲಿ ಧುರ್ಭುದ್ಧಿ ಹುಟ್ಟಿ ಅವರು ಅವಸಾನ ಹೊಂದುವರು ಎಂಬುದನ್ನು
ತಾತಯ್ಯನವರು ವಿವರಿಸುವರು.
ʼವಿಪ್ರರ ಪಾಲಾಯ್ತು, ಇರಸಾಲು ನಾಣ್ಯಗಳು, ಒಟ್ಟು ಶೇಖರಣೆಯಾದ ಸುಂಕದಲ್ಲಿ
ನಾಲ್ಕನೇ ಒಂದು ಪಾಲು ಮಾತ್ರ ಅರಮನೆಗೆ ಸೇರುವುದುʼ
ಇದನ್ನು ಕೇಳುವವರಿಲ್ಲದೇ ರಾಜರು ಸಹಾ ʼಕೇಡುಗಾಲಕ್ಕೆ
ಕೆಟ್ಟ ಯೋಚನೆಯೇ ಉಂಟಾಗುವುದು ಎಂಬಂತೆ ರಾಜರಿಗೂ ದುರ್ಭುದ್ಧಿ ಹುಟ್ಟಿ ಅವರೂ ಸಹಾ ಕೆಟ್ಟರು, ನಂತರದಲ್ಲಿ
ರಾಜ್ಯವು ʼಚೋರರ ಪಟ್ಟಣವಾಗುವುದು, ರಾಜನ್ಯಾರು ಇಲ್ಲದೇ ಹೊಯಿತು. ರಾಜ್ಯವು ಕೆಟ್ಟು ಕಳ್ಳರಿಂದ ಲೂಟಿಗೆ
ಒಳಗಾಯಿತುʼ ಎಂದು ನಾರೇಣಪ್ಪನವರು ಹೇಳಿರುವರು. ಈ
ಉಲ್ಲೇಖಗಳ್ಳೆಲ್ಲವೂ ಯಾವುದೋ ಒಂದು ರಾಜ ಮನೆತನದ ಅವಸಾನದ ಕತೆಯನ್ನು ಗಮನದಲ್ಲಿಟ್ಟುಕೊಂಡು ಹೇಳಿದಂತಿದೆ.
ಪ್ರಜೆಗಳ ಕಷ್ಟಗಳು, ರೈತ ಕಾರ್ಮಿಕರ ಕಷ್ಟಗಳು, ಹಾಗೂ ಆಗಿನ ಕಾಲದ ಆರ್ಥಿಕ
ಪದ್ಧತಿಗಳು, ಅಳತೆ ಮಾಪನ, ಸುಂಕ, ಇತ್ಯಾದಿ ಉಲ್ಲೇಖಗಳ ಜೊತೆಗೆ ನಾರೇಣಪ್ಪನವರು ಒಂದು ಆದರ್ಶ ರಾಜ್ಯದ
ಪರಿಕಲ್ಪನೆಯನ್ನು ತಮ್ಮ ಕಾಲಜ್ಞಾನ ಪದ್ಯಗಳ ಮೂಲಕ ನಮ್ಮ ಮುಂದಿಡುವ ಪ್ರಯತ್ನ ಮಾಡುವರು. ಒಟ್ಟು ಭೂಮಿಯ
ನಾಲ್ಕನೇ ಒಂದು ಪಾಲು ದನಗಳ ಮೇವಿಗೆ ಬಿಡುವ ಹುಲ್ಲುಗಾವಲಿಗೆ ಬಿಡುವುದು, ಅನ್ನ ಛತ್ರಗಳನ್ನು ಸ್ಥಾಪಿಸುವುದು
ಮುಂತಾದ ವಿವರಗಳನ್ನು ನಾರೇಣಪ್ಪನವರು ನೀಡುವರು.
ಮುಂದುವರೆದು, ಹತ್ತಿ, ಜವಳಿ, ಮತ್ತು ಒಡವೆಗಳ ಮೇಲೆ ಒಂದು ದುಡ್ಡು ಸುಂಕ
ಕೊಡಬೇಕು, ಅಡಕೆ ಒಂದು ಮೂಟೆಗೆ ಎಂಡನೇ ಒಂದು ಬೆಲೆಯ ನಾಣ್ಯ ʼಪರಕʼ ವನ್ನು ಸುಂಕವಾಗಿ ನೀಡಬೇಕು, ಉಪ್ಪಿನ
ಮೂಟೆಗೆ ಒಂದು ಶೇರು ಸುಂಕ ನೀಡಬೇಕು, ವೀಳ್ಯದೆಲೆಗೆ ಒಂದು ಮಕ್ಕರಿಗೆ ಅರ್ಧ ಕಟ್ಟಿನ ಸುಂಕ, ಇವನ್ನು
ಕೊಳ್ಳುವ ವರ್ತಕನು ಜನರಿಂದ ಪಡೆದು ನಗದನ್ನು ಸರ್ಕಾರಕ್ಕೆ ಸಲ್ಲಿಸುವುದು ಹಾಗೂ, ಧಾನ್ಯಗಳ ರೂಪದಲ್ಲಿ
ಬರುವ ಸುಂಕವನ್ನು ಸಂಪೂರ್ಣವಾಗಿ, ಧೀನ ದಲಿತರ, ಕಾರ್ಮಿಕರ, ರೈತರ, ಸೈನಿಕರ ಉಪಯೋಗಕ್ಕಾಗಿ ವಿನಿಯೋಗಿಸಬೇಕು.
ದಿಕ್ಕಿಲದೇ ತಿರುಗುವ ಧೀನ ದಲಿತರಿಗೆ ಅನ್ನ ಛತ್ರಗಳ ನಿರ್ಮಾಣ, ದೇವಾಲಯ,
ಮಸೀದಿ ಮುಂತಾದವುಗಳ ನಿರ್ಮಾಣ ಆ ಮೂಲಕ ಸರ್ವ ಧರ್ಮಗಳ ಪೋಷಣೆ ಮಾಡುವುದು, ಸಾರಾಯಿ ಹೆಂಡ ಭಂಗಿಗಳ ಮುಟ್ಟುಗೋಲು ಹಾಕಿಕೊಂಡು, ರಾಜ್ಯಪರಿಪಾಲನೆ
ಮಾಡಬೇಕೆಂದು ನಾರೇಣಪ್ಪನವರು ಹೇಳುವರು. ಮುಂದುವರೆದು ಒಬ್ಭ ಆದರ್ಶ ರಾಜನ ದಿನಚರಿ ಹೇಗಿರಬೇಕೆಂಬುದನ್ನು
ಸಹಾ ವಿವರಿಸಿದ್ದಾರೆ.
ಶ್ರೀ ಕೈವಾರ ನಾರೇಣಪ್ಪನವರ ಕೃತಿಗಳಲ್ಲಿ ರಾಜಕೀಯ ಮತ್ತು ಆರ್ಥಿಕ ಚಿಂತನೆಗಳು,
ಎಂಬ ವಿಷಯವನ್ನು ಆಯ್ಕೆ ಮಾಡಿಕೊಂಡು, ಆಗಿನ ಕಾಲದ ರಾಜಕೀಯ ಮತ್ತು ಆರ್ಥಿಕ ವಿವರಗಳನ್ನು ಕುರಿತು ಕೈವಾರ
ನಾರೇಣಪ್ಪನವರು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿರುವ ವಿಚಾರಗಳು ಆಯ್ಕೆ ಮಾಡಿಕೊಂಡು ವಿವರಿಸುವ
ಪ್ರಯತ್ನವನ್ನಿಲ್ಲಿ ಮಾಡಲಾಗಿದೆ. ಈ ಉಲ್ಲೇಖಗಳಿಗೆ ಪೂರಕವಾಗಿ ಸಾಕಷ್ಟು ಮಾಹಿತಿಯನ್ನು ಒದಗಿಸುವ ಸಾಧ್ಯತೆ
ಇದ್ದರೂ ಸಹಾ ಪುಟಗಳ ಮಿತಿಯನ್ನು ಗಮನದಲ್ಲಿರಿಸಿಕೊಂಡು, ಪೂರಕ ಮಾಹಿತಿಯನ್ನು ಕೈ ಬಿಟ್ಟು ತೆಲುಗಿನ ಹಲವು ಪದ್ಯ ಹಾಗೂ ಕೀರ್ತನೆಗಳನ್ನು ಕನ್ನಡಕ್ಕೆ
ಭಾಷಾಂತರಿಸಿಕೊಂಡು ವಿವರಿಸುವ ಒಂದು ಸಣ್ಣ ಪ್ರಯತ್ನವನ್ನಿಲ್ಲಿ
ಮಾಡಲಾಗಿದ್ದು, ಈ ಕುರಿತು ಮತ್ತಷ್ಟು ಅಧ್ಯಯನ ಇನ್ನು ಆಗಬೇಕಾಗಿದೆ.
ಗ್ರಂಥ ಋಣ :
೧) ಶ್ರೀ ಯೋಗಿ ನಾರೇಯಣ ಯತೀಂದ್ರರು: ‘’ಕಾಲಜ್ಞಾನ ಮತ್ತು ನಾದ ಬ್ರಹ್ಮಾನಂದ
ನಾರೇಯಣ ಕವಿ ಶತಕ’’ ;ಶ್ರೀ ಯೋಗಿ ನಾರೇಯಣ ಯತೀಂದ್ರರ ಆಶ್ರಮ ಟ್ರಸ್ಟ –ಕೈವಾರ: 1982.
೨) ಶ್ರೀ ಯೋಗಿ ನಾರೇಯಣ ಯತೀಂದ್ರರು: ‘’ಶ್ರೀ ಅಮರ ನಾರೇಯಣ
ವೇದಾಂತ ಸಾರಾವಳಿ’’ (ಕೀರ್ತನೆಗಳು) ; ಶ್ರಿ
ಯೋಗಿ ನಾರೇಯಣ ಯತೀಂದ್ರರ ಆಶ್ರಮ ಟ್ರಸ್ಟ- ಕೈವಾರ: 1998.
೩) ಶ್ರೀ ಯೋಗಿ ನಾರೇಯಣ ಯತೀಂದ್ರರು: ‘’ಕಾಲಜ್ಞಾನ – ಭವಿಷ್ಯವಾಣಿ’’ ;ಶ್ರೀ ಯೋಗಿ ನಾರೇಯಣ ಮಠ -ಕೈವಾರ :2013
೪) ಅಂತರ್ಜಾಲ ಮೂಲ.

Comments
Post a Comment