ಆಧುನಿಕ ಪೂರ್ವ ಸಾಹಿತ್ಯದಲ್ಲಿ ಪ್ರಭುತ್ವದ ಚಿಂತನೆ. - ವರುಣ್ ರಾಜ್ ಜೀ
ಆಧುನಿಕ
ಪೂರ್ವ ಸಾಹಿತ್ಯದಲ್ಲಿ ಪ್ರಭುತ್ವದ ಚಿಂತನೆ.
- ವರುಣ್‌ರಾಜ್ ಜಿ
(ಹಲವು
ನುಡಿಗಳ ನಡಿಗೆ ಕನ್ನಡ ಸಾಹಿತ್ಯ
ವಿಮರ್ಶೆಯ ತಾತ್ವಿಕ ಒಳನೊಟಗಳು ಎಂಬ
ಶೀರ್ಷಿಕೆಯಲ್ಲಿ ಐ ಎಸ್ ಬಿ ಎನ್ ನಂಬರ್ 978- 81 -945252- 4- 0 ನಲ್ಲಿ ಪ್ರಕಟವಾಗಿರುವ ಲೇಖನ
)
ಆದಿ
ಕವಿ ಪಂಪನಿಂದ ಹಿಡಿದು ಆಧುನಿಕ ಕನ್ನಡ ಸಾಹಿತ್ಯದ ಪ್ರಾರಂಭದವರೆಗೆ ಎಂದರೇ, ಕೆಂಪುನಾರಾಯಣ ,ಮುದ್ದಣ
ನ ವರೆಗಿನ ಸಾಹಿತ್ಯವನ್ನು ಒಟ್ಟಾಗಿ ಆಧುನಿಕ ಪೂರ್ವ ಕನ್ನಡ ಸಾಹಿತ್ಯವೆಂದು ಗುರ್ತಿಸುತ್ತೇವೆ. ಪ್ರಾಚೀನ ಚಂಪೂ ಅಥವಾ ಮಾರ್ಗ ಕವಿಗಳು ಎಂದು ಗುರ್ತಿಸಲಾಗುವ
ಪಂಪ ,ರನ್ನ , ಪೊನ್ನ , ಜನ್ನ, ನಾಗಚಂದ್ರ ಮೊದಲಾದವರು ನಂತರದ ದೇಸೀ ಯುಗವೆಂದು ಕರೆಸಿಕೊಳ್ಳುವ ಮಧ್ಯಕಾಲೀನ
ಸಾಹಿತ್ಯದಲ್ಲಿ ಬಹು ಮುಖ್ಯವಾಗಿ ಬಸವ ಅಲ್ಲಮ ಅಕ್ಕಮಹಾದೇವಿ ಮೊದಲಾದವರ ವಚನ ಸಾಹಿತ್ಯ, ತದನಂತರದಲ್ಲಿ
ವಚನ ಸಾಹಿತ್ಯದ ಪ್ರೆರಣೆಯ ರಾಘವಾಂಕ ,ಹರಿಹರ , ಚಾಮರಸರ ಸಾಹಿತ್ಯ ಅದರ ಮುಂದುವರೆದ ಭಾಗವಾಗಿ ಕುಮಾರವ್ಯಾಸ,
ಲಕ್ಷ್ಮೀಶ, ರತ್ನಾಕರವರ್ಣಿ, ದಾಸರು, ತತ್ವಪದ ಕಾರರು, ಹಾಗೇ ಸಂಚಿಯ ಹೊನ್ನಮ್ಮ, ಮುಂತಾದವರೆಲ್ಲರೂ
ಹಲವು ಬೇರೆ ಬೇರೆ ಕಾಲಘಟ್ಟದಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ.
ಈ ಒಂದೊಂದು ಕಾಲಘಟ್ಟದಲ್ಲಿಯೂ ಸಹಾ ವಿಶಿಷ್ಟ ಸಾಹಿತ್ಯ ಪ್ರಕಾರವನ್ನು
ರಚನೆಯಾದದನ್ನು ನಾವು ಗಮನಿಸಬಹುದಾಗಿದೆ, ಹಾಗೇ ಸಾಹಿತ್ಯದ ಛಂದಸ್ಸು, ಭಾಷೆ , ವಸ್ತು ,ವಿನ್ಯಾಸ
,ಶೈಲಿ ಎಲ್ಲದರಲ್ಲಿಯೂ ಕಾಲಕಾಲಕ್ಕೆ ಸಾಕಷ್ಟು ಬದಲಾವಣೆಗಳು ಆಗುತ್ತಿರುವುದನ್ನು ಸಹಾ ಇಲ್ಲಿ ನಾವು
ಗಮನಿಸಬಹುದು,ಉದಾಹರಣೆಗೆ ಪಂಪ ರನ್ನ ಮೊದಲಾದವರ ಕಾಲ ಮಾರ್ಗದ ಚಂಪೂ ಸಾಹಿತ್ಯದ ಕಾಲವಾದರೇ, ಮುಂದೆ
ಬಸವ ಅಲ್ಲಮರ ಕಾಲ ದೇಸೀ ವಚನ ಸಾಹಿತ್ಯದ ಯುಗ ವಾಯಿತು. ಹೀಗೆ ಮುಂದುವರೆದು ಬೇರೆ ಬೇರೆ ರೂಪಗಳಲ್ಲಿ
ಪರಿವರ್ತನೆ ಆದದನ್ನು ಗಮನಿಸಬಹುದು.
ಹೀಗೆ ಕಾಲದಿಂದ ಕಾಲಕ್ಕೆ ಸಾಹಿತ್ಯವು
ಬದಲಾಗುತ್ತಾ ಬಂದಿದೆ, ಆದರೆ ಪ್ರಭುತ್ವ ಎಂದರೇ, ರಾಜಕೀಯ
ಪ್ರಭುತ್ವ, ಧಾರ್ಮಿಕ ಪ್ರಭುತ್ವ , ಸಾಮಾಜಿಕ ಪ್ರಭುತ್ವ ಈ ಮೂರು ರೀತಿಯ ಪ್ರಭುತ್ವ ವಿರೋಧಿ ಚಿಂತನೆಯನ್ನು
ನಾವು ಪ್ರತಿಯೊಂದು ಕಾಲಘಟ್ಟದ ಕವಿಗಳಲಿಯೂ ಗುರುತಿಸಬಹುದಾಗಿದೆ. ಮೊದಲನೆಯದಾಗಿ, ಕವಿರಾಜಮಾರ್ಗವು
ಸಂಸ್ಕೃತ ಭಾಷಾ ಪ್ರಭುತ್ವವವನ್ನು ವಿರೋಧಿಸಿದಲ್ಲದೇ , “ವಸುಧಾವಲಯ ,ವಿಹೀನ,ವಿಶದ-ವಿಷಯ-ವಿಶೇಷಂ”
ಎಂಬ ಮಾತಿನ ಮೂಲಕ ಕರ್ನಾಟಕ ಹಾಗೂ ಕನ್ನಡವನ್ನು ಪ್ರಪಂಚದ ಜೊತೆಗಿಟ್ಟು ಗ್ರಹಿಸುವ ವಿ಼ಶಿಷ್ಟ ಕ್ರಮವನ್ನು
ಹೇಳುತ್ತದೆ. ಇಂದಿಗೂ ಸಹಾ ಕನ್ನಡದ , ಕನ್ನಡ ನಾಡಿನ ಭಹುತ್ವವನ್ನು ಹೇಳುವಾಗ ನಾವು ಈ ವಾಕ್ಯವನ್ನು
ಉದಹರಿಸುವುದನ್ನು ನೊಡಬಹುದಾಗಿದೆ.
ಆದಿ
ಕವಿ ಪಂಪನು ತಾನು ಅರಿಕೇಸರಿಯ ಆಶ್ರಯದಲ್ಲಿ ಇದವನು, ತನ್ನ ವಿಕ್ರಮಾರ್ಜುನ ವಿಜಯವನ್ನು ತನ್ನ ಆಶ್ರಯದಾತನಾದ
ಅರಿಕೇಸರಿಗೆ ತಗುಳ್ಚಿ ಹೇಳಿರುವನು, ಮೇಲ್ನೋಟಕ್ಕೆ ತನ್ನ ಆಶ್ರಯಧಾತನನ್ನು ಹೊಗಳಿ, ಅರ್ಜುನನಿಗೆ ಸಮೀಕರಿಸಿ
ಹೇಳಿರುವಂತೆ ಕಂಡಿದೆಯಾದರೂ ಸಹಾ, ಸೂಕ್ಷ್ಮವಾಗಿ ಗಮನಿಸಿದರೇ, ಪಂಪನು ತನ್ನ ಕಾವ್ಯದಲ್ಲಿ ಸಮಯ ಸಿಕ್ಕಾಗಲೆಲ್ಲಾ
ತನ್ನ ಮನದ ಅಂತಾರಾಳದಲ್ಲಿರುವ ಸ್ವಾತಂತ್ರ್ಯದ ಅಭಿಲಾಷೆಯನ್ನು ಪ್ರಭುತ್ವ ವಿರೋಧಿ ಚಿಂತನೆಗಳನ್ನು ಯಶಸ್ವಿಪೂರ್ಣವಾಗಿ ಅಭಿವ್ಯಕ್ತಿಸಿರುವುದನ್ನು
ಮುಂದಿನ ಉಲ್ಲೇಖಗಳ ಮೂಲಕ ತಿಳಿಯಬಹುದಾಗಿದೆ.
ಪಂಪನ
“ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೋಳ್ ವನವಾಸಿ ದೇಶದೊಳ್“ ಎಂಬ ವಾಕ್ಯವನ್ನು
ನಾವೆಲ್ಲರೂ ಕೇಳಿದ್ದೇವೆ, ಈ ವಾಕ್ಯದ ಅಂರಾಳದಲ್ಲಿ ಸ್ವಾತಂತ್ರ್ಯದ ಸಂಕೇತವಾದ ಮರಿದುಂಬಿ ಹಾಗೂ, ಕೊಗಿಲೆಯಾಗಿ
ಹುಟ್ಟಬೇಕೆಂಬುದನ್ನು ಪಂಪ ಹೇಳುವುದರ ಮೂಲಕ ರಾಜಾಶ್ರಯದಲ್ಲಿ ತನಗಿರುವ ಮಿತಿಗಳನ್ನು ನೆನೆದು ಅವುಗಳಿಂದ
ಸ್ವಾತಂತ್ರ್ಯವನ್ನು ಬಯಸುತ್ತಾನೆ. ಮುಂದುವರೆದು ʼಒಲಗಿಸಿಬಾಳ್ವುದು ಕಷ್ಟಂ ಇಳಾದಿನಾಥರಂʼ ಎಂದು ತಾನೂ
ರಾಜನನ್ನುಒಲಿಸಲು ಎಷ್ಟೇ ಪ್ರಯತ್ನಿಸಿದರೂ ಸಹಾ ,
ರಾಜನನ್ನು ಒಲಿಸಿಕೊಂಡು ಬಾಳುವುದು ಕಷ್ಟ ಎಂಬುದನ್ನು ಶಲ್ಯನ ಮೂಲಕ ಹೇಳಿಸಿರುವುದನ್ನು ನಾವು ಗುರುತಿಸಬಹುದು.
ಮುಂದುವರೆದು
ಪಂಪ ʼ ನಿಜದಿಂ ಭೂಪರೆಂಬರ್ ಅವಿವೇಕಿಗಳ್ ʼ ಎಂದು ಅಶ್ವತ್ಥಾಮನ ಮೂಲಕ ಹೇಳಿಸುವುದರ ಮೂಲಕ ಪ್ರಭುತ್ವದ
ವಿರುದ್ಧವಾದ ಆತನ ಆಕ್ರೊಶವನ್ನು ಹೊರಹಾಕಿದ್ದಾನೆ, ಸೊಕ್ಷ್ಮವಾಗಿ ಗಮನಿಸಿದಾಗ ಪಂಪನ ಈ ಮಾತುಗಳು ನಿಜವೇ
ಎಂಬುದು ನಮ್ಮ ಅರಿವಿಗೆ ಬರುವುದಲ್ಲದೇ, ಈಗಿನ ಪರಿಸ್ಥಿತಿಗೂ ಸಹಾ ಪಂಪನ ಮಾತುಗಳು ಅನ್ವಯವಾಗುವುದು
ವಿಶೇಷ. ಹಾಗೇ ಕರ್ಣನ ಸಂಧರ್ಭದಲ್ಲಿ ಪಂಪನು ಕುಲದ ಮಾತನ್ನು ಹೇಳುತ್ತಾ, ʼಕುಲಂ ಕುಲಮಲ್ತು ಚಲಂ ಕುಲಂ
ಗುಣಂ ಕುಲಂ ಅಭಿಮಾನಮೊಂದೆ ಕುಲಂ ಅಣ್ಮು ಕುಲಂʼ ಎಂದು
ಸ್ಪಷ್ಟವಾಗಿ ಸಾಮಾಜಿಕ ಪ್ರಭುತ್ವವನ್ನು ವಿರೋಧಿಸುವುದನ್ನು ಪಂಪನಲ್ಲಿ ಕಾಣಬಹುದಾಗಿದೆ.
ಮುಂದೆ
ಪಂಪನ ನಂತರದಲ್ಲಿ ರನ್ನನು ಈ ಪ್ರಭುತ್ವ ವಿರೋಧಿ ದೋರಣೆಯನ್ನು ಮತ್ತಷ್ಟು ತೀಕ್ಷ್ಣವಾಗಿ ಅಭಿವ್ಯಕ್ತಿಸಿರುವುದನ್ನು ನೊಡಬಹುದಾಗಿದೆ.
ಪ್ರಾರಂಭದಿಂದಲೂ ಯುದ್ಧವನ್ನು , ಸರ್ವಾಧಿಕಾರಿ ಪ್ರವೃತ್ತಿಯನ್ನು ವಿರೋಧಿಸುತ್ತಲೇ ಬರುವ ರನ್ನನ್ನು
ಕಡೆಯ ಭಾಗದಲ್ಲಿ ಮರುಳ್ಗಳ ಪ್ರಸಂಗದಲ್ಲಿ ದುರ್ಯೋಧನನ್ನು “ಬದ್ಧಮತ್ಸರದೋಳೆ ವೈರಮಂ ಪಡೆದು ಭೀಮನನಿಂತಿನಿತರ್ಕೆ
ತಂದ ನೀಂ ಮರುಳನೋ ನೋಳ್ಪಿಮಿರ್ವರ ಮರುಳ್ತನಮಂ ಫಣಿರಾಜಕೇತನಾ“ ಎಂದು ಹೇಳುವುದರ ಮೂಲಕ ಪ್ರಭುವಾದ ದುರ್ಯೋಧನನ್ನು
ಮರುಳನೆಂದು ಕರೆದು, ಬೀಮ ಸೇನಾಡಂಬರವನ್ನು ವರ್ಣಿಸುತ್ತಾ ಭೀಮನ ನಿಷ್ಕಾರುಣ ಬುದ್ಧಿಯನ್ನು ಅನಾವರಣಗೊಳಿಸುವುದರ
ಮೂಲಕ ತಾನೂ ಭೀಮನಿಗೆ ಹೋಲಿಸಿದ ತನ್ನ ಆಶ್ರಯದಾತನಾದ ಇರುವಬೆಡಂಗನನ್ನು ಅವನ ನಿಷ್ಕಾರಣತ್ವವನ್ನು ವಿವರಿಸಿ,
ವಿಡಂಬಿಸುವ ಪ್ರಯತ್ನ ಮಾಡಿದ್ದಾನೆ.
ಮುಂದೆ, ಮುಕುಟ ಭಂಗ ಪ್ರಸಂಗವನ್ನು
ಅತಿಯೆಂಬಂತೆ ರನ್ನ ವಿವರಿಸಿದ್ದಾನೆ, “ಭೀಮಸೇನನೊದೆದಂ ವಾಮಾಂಘ್ರಿಯಿಂ ರತ್ನಮಂಡಲರಶ್ಮೀಪ್ರಕಟಜ್ವಲನ್ಮಕುಟಮಂ
ಕೌರವ್ಯರಾಜೇದ್ರನಂ“ ಎಂದು ಹೇಳುವ ಮೂಲಕ ಪ್ರಭುತ್ವದ ರಾಜತ್ವದ ಚಿಹ್ನೆಯಾದ ದುರ್ಯೋಧನನ
ಮುಕುಟವನ್ನು ಭೀಮಸೇನನು ತನ್ನ ವಾಮಾಂಘ್ರಿ ಎಂದರೇ, ಎಡದ ಕಾಲಿಂದ ಒದೆಯುವುದರ ಮೂಲಕ ಪ್ರಭುತ್ವವನ್ನು
ಕಟುವಾಗಿ ವಿರೋಧಿಸುವುದನ್ನು ನಾವು ಕಾಣಬಹುದು.
ಗದ್ಧಾಯುದ್ಧದಲ್ಲಿ
ರನ್ನನು ಭೀಮನನ್ನು ನಾಯಕನಾಗಿ ಪರಿಭವಿಸಿದರೂ ಸಹಾ, ಎಲ್ಲೋ ಒಂದು ಕಡೆ ಭೀಮನಿಗಿಂತ ಹೆಚ್ಚು ಗಮನ ಧರ್ಮರಾಯನ
ಕಡೆಗೆ ಹಾಗೂ ಕರ್ಣನ ಕಡೆಗೆ ಇರುವುದನ್ನು ಕಾಣಬಹುದಾಗಿದೆ,
ಪಂಪ ಭಾರತದಲ್ಲಿಯೂ ಸಹಾ ಇದೇ ರೀತಿಯ ಚಿತ್ರಣ ಇದೆ.
ಎಲ್ಲೊ ಒಂದು ಕಡೆ ರಾಜನಿಗಿಂತ ಕರ್ಣನು ಹೆಚ್ಚಾಗಿ ಚರ್ಚೆಗೆ ಬರುವುದನ್ನು ಕಾಣಬಹುದಾಗಿದೆ,
ಕಡೆಯಲ್ಲಿ
ಸತ್ತವರ ಸಂಸ್ಕಾರ ವಿಧಿಯನ್ನು ಮಾಡುವ ಸಂಧರ್ಭದಲ್ಲಿ ಕರ್ಣನು ʼಎನ್ನ ಚೊಚ್ಚಿಲ ಮಗಂ ನಿಮ್ಮಗ್ರಜಂ ಕರ್ಣನಾನಿತಂ
ನಿಮ್ಮಯ್ಯ ಮೋಹದಿಂದುಸಿರದಿರ್ದೆಂ ಕೊಂದೆನಯ್ ಧರ್ಮಜಾʼ ಎಂದು ಕುಂತಿ ಕರ್ಣನ ನಿಜ ವೃತ್ತಾಂತವನ್ನು
ಹೇಳಲು ಕುಂತಿಯನ್ನುʼ ಪೊಲ್ಲದುಗೆಯ್ದಿರಿ ಯೆಂದು ಜಡಿದರ್ ಕುಂತೀಸುತ್ತರ್ʼ, ಆಗ ನಾರಾಯಣನು ʼಕ್ಷತ್ರಿಯಧರ್ಮಮಿಂತುಟೇವಲಂʼ
ಎಂದು ಕುಂತೀಸುತರನ್ನು ಸಮಾಧಾನ ಪಡಿಸುವುದನ್ನು ನಾವು ಗಮನಿಸಬಹುದಾಗಿದೆ. ಇಲ್ಲಿ ಕ್ಷತ್ರಿಯ ಧರ್ಮವೆಂದರೆ ಅದು ಹೀಗೆಯೇ, ಮೋಸ ಅನ್ಯಾಯ
ದಿಂದ ಕೂಡಿ ಅಧಿಕಾರಕ್ಕಾಗಿ ಏನು ಬೇಕಾದರೂ, ಮಾಡುವುದೇ ಕ್ಷತ್ರಿಯ ಧರ್ಮಂ ಎಂದು ನಾರಾಯಣ ಹೇಳುವುದು
ನೊಡಿದರೆ, ರನ್ನನು ಸೋಕ್ಷ್ಮವಾಗಿ ಪ್ರಭುತ್ವ, ಅಧಿಕಾರಗಳು ಮಾನವೀಯತೆ ಹಾಗೂ ಮಾನವೀಯ ಸಂಭಂಧಗಳನ್ನು
ಮೀರಿದವು, ಅವು ಮಾನವೀಯ ಸಂಭಂಧಗಳಿಗೆ ಯಾವುದೇ ರೀತಿಯ ಮಾನ್ಯತೆಯನ್ನು ಕೊಡುವುದಿಲ್ಲ. ಎಂದು ಹೇಳಿ
ಅವುಗಳನ್ನು ವಿರೋಧಿಸುವುದನ್ನು ಕಾಣಬಹುದಾಗಿದೆ.
ಮುಂದೆ ಜನ್ನನ ಯಶೋಧರ ಚರಿತೆಯನ್ನು ಗಮನಿಸಿದರೆ, ರಾಜನಾದ
ಯಶೋಧರನನ್ನು ನಿರಾಕರಿಸಿ ತನ್ನ ಮನಸಿಗೆ ಮೆಚ್ಚಿದ ಬದಗನನ್ನು ಮೆಚ್ಚಿ ಅವನನ್ನೇ ತನ್ನ ಪ್ರಿಯಕರನಾಗಿ
ಒಪ್ಪಿಕೊಂಡು ಉಳಿದ ಪುರುಷರನ್ನು ತನ್ನ ಸೋದರ ಸಮಾನರೆಂದ ಹೇಳುವಳು. ಈ ಮೂಲಕ ಜನ್ನನು ಸಾಮಾಜಿಕ ಪ್ರಭುತ್ವವನ್ನು ಅಮೃತಮತಿಯ ಪಾತ್ರದ ಮೂಲಕ ಸ್ಪಷ್ಟವಾಗಿ ವಿರೋಧಿಸಿರುವುದನ್ನು
ನೊಡಬಹುದಾಗಿದೆ.
ಮುಂದುವರೆದು
ವಚನ ಸಾಹಿತ್ಯವನ್ನು ಪರಾಮರ್ಶಿಸುವುದಾದರೇ, ವಚನ ಸಾಹಿತ್ಯ ರಾಜಾಶ್ರಯವನ್ನು ನಿರಾಕರಿಸಿ ಜನಾಶ್ರಯದಲ್ಲಿ
ಬೆಳೆದು ಬಂದ ಸಾಹಿತ್ಯ ಪ್ರಕಾರವಾಗಿದೆ. ಇಲ್ಲಿ ಹಲವಾರು ವಚನಕಾರರು ಸಾವಿರಾರು ವಚನಗಳನ್ನು ಬರೆದಿರುವುದನ್ನು
ಗಮನಿಸಬಹುದಾಗಿದ್ದು, ಈ ಎಲ್ಲಾ ವಚನಗಳು ಸಹಾ ಎಲ್ಲೋ ಒಂದು ಕಡೆ ಧಾರ್ಮಿಕ ಪ್ರಭುತ್ವ, ಸಾಮಾಜಿಕ ಪ್ರಭುತ್ವ
ಹಾಗೂ ರಾಜ ಪ್ರಭುತ್ವವನ್ನು ನಿರಾಕರಿಸುತ್ತಾ ಅದನ್ನು ವಿರೋಧಿಸುತ್ತಲೇ ಬಂದಿರುವುದನ್ನು ಗಮನಿಸಬಹುದಾಗಿದೆ.
ಬಸವಣ್ಣನು ʼನಿಮ್ಮ ಶರಣರ ಶ್ರೀಪಾದಕ್ಕೆನ್ನ
ಕೀಳಾಗಿರಿಸು ಮಹಾದಾನಿ ಕೂಡಲಸಂಗಮದೇವಾʼ ಎಂದು ʼಆಗಳೂ ನಿಮ್ಮ ನೆನೆವವರ ಮನೆಯಲು ಶ್ವಾನನಾಗಿರಿಸೆನ್ನ
ಕೂಡಲಸಂಗಮದೇವಾʼ ಎಂದು ನಿಜ ಶರಣರ ಕುರಿತಾದ ತಮ್ಮ ದೃಷ್ಟಿಕೋನವನ್ನು ವ್ಯಕ್ತಮಾಡಿದರೆ, ರಾಜ ಪ್ರಭುತ್ವವನ್ನು
ಬಸವಣ್ಣನವರು ʼಆನೀ ಬಿಜ್ಜಳಂಗಂಜುವೆನೆ ಅಯ್ಯಾ ನೀನು ಸರ್ವ ಜೀವದಯಾಪಾರಿಯಾದ ಕಾರಣ ನಿನಗಂಜುವೆನಲ್ಲದೇʼ
ಎಂದು ನೇರವಾಗಿ ರಾಜನಾದ ಬಿಜ್ಜಳನಿಗೆ ತಾನು ಅಂಜುವವನಲ್ಲವೆಂದು ಹೇಳುತ್ತಾರೆ. ಮುಂದುವರೆದು ʼಲೋಕವಿರೋಧಿ ಶರಣನಾರಿಗಂಜುವನಲ್ಲʼ ಎಂದು ಹೇಳುತ್ತಾರೆ.
ಅಕ್ಕ ಮಹಾದೇವಿಯೂ ಸಹಾ ರಾಜ ಕೌಶಿಕನನ್ನು ದಿಕ್ಕರಿಸಿ ತನ್ನ ಚೆನ್ನಮಲ್ಲಿಕಾರ್ಜುನನೇ ತನ್ನ ಗಂಡನೆಂದು
ಹೇಳುತ್ತಾಳೆ. ಮುಂದುವರೆದು ಅಲ್ಲಮ ಪ್ರಭುಗಳು ʼವೇದವೆಂಬುದು ಓದಿನ ಮಾತು ಶಾಸ್ತ್ರವೆಂಬುದು ಸಂತೆಯ
ಸುದ್ದಿ ಪುರಾಣ ವೆಂಬುದು ಪುಂಡರ ಗೋಷ್ಟಿ ತರ್ಕವೆಂಬುದು ತಗರ ಹೊರಟೆ ಭಕ್ತಿಯೆಂಬುದು ತೋರುಂಭ ಲಾಭ
ಗುಹೇಶ್ವರನೆಂಬುದು ಮೀರಿದ ಘನವುʼ ಎಂದು ಅಲ್ಲಮ ಪ್ರಭುಗಳು ತಮ್ಮ ವಚನದ ಮೂಲಕ ಸ್ಪಷ್ಟವಾಗಿ ಆ ಕಾಲದ
ಧಾರ್ಮಿಕ ಪ್ರಭುತ್ವವನ್ನು ನಿರಾಕರಿಸುವುದನ್ನು ನೊಡಬಹುದಾಗಿದೆ.
ಮುಂದೆ
ಆ ಕಾಲದ ಸಾಮಾಜಿಕ ಪ್ರಭುತ್ವವನ್ನು ಹಲವು ವಚನಕಾರರು ಹಲವು ರೀತಿಯಲ್ಲಿ ವಿರೋಧಿಸಿರುವುದನ್ನು ನೊಡಬಹುದಾಗಿದೆ.
ಬಸವಣ್ಣನವರು ʼಮೇಲಾಗಲೊಲ್ಲೆನು ಕೀಳಾಗಲೊಲ್ಲದೇ ,
ಕೀಳಿಂಗಲ್ಲದೆ ಹಯನು ಕರೆವುದೇ ,ಮೇಲಾಗಿ ನರಕದೊಳೊಲಾಡಲಾರೆನು…. ʼಎನ್ನುತ್ತಾರೆ. ಮುಂದುವರೆದು ಕುಲವೆಂದು ಹೋರಾಡುವ ಅಣ್ಣಗಳಿರಾ , ಕೇಳಿರೋ
, ಕುಲವೇ ಡೋಹರನ , ಕುಲವೇ ಮಾದಾರನ , ಕುಲವೇ ವ್ಯಾಸನ , ಕುಲವೇ ವಾಲ್ಮೀಕಿಯ … ಎಂದು ಸಿದ್ಧರಾಮರು
ಪ್ರಶ್ನಿಸುತ್ತಾರೆ.
ಶರಣೆ ಬೊಂತಾದೇವಿ ʼಊರೋಳಗೆ ಬ್ರಾಹ್ಮಣ ಬಯಲು ಊರ ಹೊರಗೆ ಹೊಲೆಯ
ಬಯಲೆಂದುಂಟೆ; ಎಂದು ಪ್ರಶ್ನಿಸುತ್ತಾಳೆ. ಮುಂದೆ ದಾಸೀಮಯ್ಯನವರು ʼಒಳಗೆ ಸುಳಿವಾತ್ಮ ಗಂಡೂ ಅಲ್ಲ ಹೆಣ್ಣೂ
ಅಲ್ಲ ರಾಮನಾಥʼ ಎಂದು ಹೇಳುತ್ತಾ ಸಾಮಾಜಿಕ ಸಮಾನತೆಯನ್ನು ಸಾರುವ ಕೆಲಸವನ್ನು ಮಾಡುವುದನ್ನು ಗಮನಿಸಬಹುದಾಗಿದೆ
.ಇನ್ನು ಆಯ್ದಕ್ಕಿ ಲಕ್ಕಮ್ಮನು ಆಸೆಯೆಂಬುದು ಅರಸಿಂಗಲ್ಲದೇ ಶಿವಭಕ್ತರಿಗುಂಟೆ ಅಯ್ಯಾ ಎಂದು ಪ್ರಶ್ನಿಸುತ್ತಾರೆ
ಮುಂದುವರೆದು , ಈಸಕ್ಕಿಯಾಸೆ ನಿಮಗ್ಯಾಕೆ ಎಂದು ಪ್ರಶ್ನಿಸುವುದರ ಮೂಲಕ ಆಸೆ ಪಡದಿರುವುದೇ ಶ್ರೇಷ್ಟ
ಎಂದು ಹೇಳುತಾಳೆ. ಹೀಗೆ ವಚನಕಾರರು ಆ ಕಾಲದ ಸಾಮಾಜಿಕ
ರಾಜಕೀಯ ಆರ್ಥಿಕ ಪ್ರಭುತ್ವವನ್ನು ನಿರಾಕರಿಸುವುದನ್ನು ಕಾಣಬಹುದಾಗಿದೆ.
ಇನ್ನು ಮುಂದುವರೆದು ನೊಡುವುದಾದರೇ
, ಮುಂದಿನ ಕವಿಗಳಾದ ಹರಿಹರ ರಾಘವಾಂಕರಲ್ಲಿ ಇಂತಹಾ ಪ್ರಭುತ್ವ ವಿರೋಧಿ ನಿಲುವುಗಳನ್ನು ಮತ್ತಷ್ಟು
ತೀಕ್ಷಣವಾಗಿ ಗುರುತಿಸಬಹುದಾಗಿದೆ. ಹರಿಹರ ತನ್ನ ಮಾದಾರ ಚೆನ್ನಯ್ಯನ ರಗಳೆಯಲ್ಲಿ ʼದೇವ ದೇವನೊಲ್ದನ
ಕುಲಂ ಸತ್ಕುಲಂ ಘನಮಹಿಮನೊಲ್ದ ಜಾತಿಯೆ ನಿರ್ಮಲಂ ಶರ್ವನೊಡನುಂಡ ನಿಮ್ಮಯ್ಯ ಜಾತಿಗಾಂ ಸರಿಯೆ ಸರ್ವಜ್ಞ
ನಿಮ್ಮ ಕೆರವಿಂಗೆನ್ನ ಶಿರ ಸರಿಯೇ ʼ ಎಂದು ಚೋಳ ರಾಜನ ಬಾಯಲ್ಲಿ ಹೇಳಿಸುತ್ತಾನೆ. ಹಾಗೇ ʼ…. ಕೇಳಾ
ಗಿರಿಜೆ ನೀನೆ ಎನ್ನ ಭಕ್ತನನೆಂಬೆ ಕೇಳಾ ಗಿರಿಜೆ ಬೇಡನೆಂದೆನ್ನ ಮುಂದೆಂದು… ಬೇಡನವನಿಂದ್ರ ರವಿ ಚಂದ್ರಾದಿ
ಪದವಿಯಂ ಬೇಡನವ……………. ಆತಂಗೆಯಾನುಮೆನಗಾತನೆ ಪರಮ ಬಂಧು ಎಂದು ಶಿವನು ಬೇಡರ ಕಣ್ಣಪ್ಪನ ಭಕ್ತಿಯನ್ನು
ಮೆಚ್ಚುವುದನ್ನು ಹಾಗೇ , ʼ ಪಾರ್ವನಗ್ಗವಣಿ ತಿಳಿಮನ ಕದಡು , ಪಾರ್ವನರ್ಚನೆ ಇನಿದು ಮನವತಿ ವಿಷಂ.
….ಬಾಯ ಮಂತ್ರ ಮನದ ಕ್ಷುದ್ರತಂತ್ರ ಎಂದು ಪಾರ್ವನ ಸ್ವಾರ್ಥದ ಭಕ್ತಿಯನ್ನು ತೆಗಳುವನು ಹೀಗೆ ಹರಿಹರನು
ಹಲವು ಹೊಸ ಕ್ರಾಂತಿಕಾರಕ ಚಿಂತನೆಗಳನ್ನು ಪ್ರಭುತ್ವ ವಿರೋಧಿಯಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿರುವುದನ್ನು
ನೊಡಬಹುದಾಗಿದೆ.
ಮುಂದೆ
ರಾಘವಾಂಕನು ತನ್ನ ಹರೀಶ್ಚಂದ್ರ ಕಾವ್ಯದಲ್ಲಿ ಗಾನರಾಣಿಯರ ಪ್ರಸಂಗ ಹಾಗೂ ವೀರಭಾಹುಕನ ಪ್ರಸಂಗದಲ್ಲಿಯೂ
ಸಹಾ ಇಂತಹಾ ಪ್ರಭುತ್ವ ವಿರೋಧಿ ಚಿಂತನೆಗಳನ್ನು ಅಭಿವ್ಯಕ್ತಿಸಿದ್ದಾನೆ. ಗಾನ ರಾಣಿಯರು ʼನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು
ಭೂಭುಜʼ ಎಂದು ಕೇಳುವುದು, ರಾಜ ಮರ್ಯಾದಾ ಲಾಂಛನವಾದ ಬೆಳ್ಗೋಡೆಯನ್ನು ಕೇಳುವ ಮೂಲಕ ಅವರು ಪ್ರಭುತ್ವವನ್ನು
ವಿರೋಧಿಸುವುದನ್ನು ನೊಡಬಹುದು. ಇಲ್ಲಿ ರಾಘವಾಂಕನು ಹೊಲೆತನದ ಪ್ರಶ್ನೆಯನ್ನು ತೆಗೆದುಕೊಂಡು ಸಾಮಾಜಿಕ
ಪ್ರಭುತ್ವವನ್ನು ತೀಕ್ಷ್ಣವಾಗಿ ವಿರೋಧಿಸುವುದನ್ನು ನೊಡಬಹುದಾಗಿದೆ. ಹಾಗೇ ರಾಘವಾಂಕನು ರಾಜ ಪ್ರಭುತ್ವವನ್ನು ವಿಶ್ವಾಮಿತ್ರನ ಪಾತ್ರದ
ಮೂಲಕ ತಿರಸ್ಕರಿಸಿ ಅವನನ್ನು ಹೊಲೆಯನಾಗಿ ಸುಡುಗಾಡು ಕಾಯುವ ಹಾಗೇ ಮಾಡುದನೇ ? ಎಂಬುದನ್ನು ಸಹಾ ಚಿಂತಿಸಬಹುದು.
ಇನ್ನು
ಮುಂದೆ ದಾಸರು ತತ್ವಪದ ಕಾರರು ಎಲ್ಲರೂ ರಾಜಾಶ್ರಯವನ್ನು ಧಿಕ್ಕರಿಸಿ ಪ್ರಭುತ್ವ ವಿರೋಧಿ ನಿಲುವುಗಳನ್ನು
ತಮ್ಮ ರಚನೆಗಳಲ್ಲಿ ಅಭಿವ್ಯಕ್ತಿಸಿರುವುದನ್ನು ಕಾಣಬಹುದಾಗಿದೆ. ಸಂಚಿಯ ಹೊನ್ನಮ್ಮನು ಸ್ತ್ರೀ ಮೌಲ್ಯಗಳನ್ನು
ಎತ್ತರಿಸುತ್ತಾ ಪುರುಷ ಪ್ರಧಾನತಾ ಪ್ರಭುತ್ವವನ್ನು ಪ್ರಶ್ನಿಸುವ ಕೆಲಸಮಾಡಿದನ್ನು ಗುರುತಿಸಬಹುದಾಗಿದೆ.
ಇದರ ಪ್ರಭಾವದಿಂದ ಮುಂದೆ ಆಧುನಿಕ ಯುಗದ ಸಾಹಿತ್ಯದಲ್ಲಿಯೂ ಸಹಾ ಇಂತಹಾ ಪ್ರಭುತ್ವ ವಿರೋಧಿ ನಿಲುವುಗಳು
ನಿರ್ಭಯವಾಗಿ ಅಭಿವ್ಯಕ್ತಿಗೊಂಡಿರುವುದನ್ನು ಕಾಣಬಹುದಾಗಿದೆ. ಹೀಗೆ ಆಧುನಿಕ ಪೂರ್ವ ಕನ್ನಡ ಸಾಹಿತ್ಯವು ಆರ್ಥಿಕ ಪ್ರಭುತ್ವ
, ಸಾಮಾಜಿಕ ಪ್ರಭುತ್ವ ಹಾಗೂ ಮುಖ್ಯವಾಗಿ ರಾಜಕೀಯ ಪ್ರಭುತ್ವವನ್ನು ವಿರೋಧಿಸುವ ನಿಲುವುಗಳನ್ನು ಕಾಲದಿಂದ
ಕಾಲಕ್ಕೆ ಕಾಲಕ್ಕೆ ತಕ್ಕಂತೆ ಅಭಿವ್ಯಕ್ತಿಸುತ್ತಾ ಬಂದಿರುವುದರ ಒಂದು ಪಕ್ಷಿ ನೊಟವನ್ನು ಇಲ್ಲಿ ಕಾಣಬಹುದಾಗಿದೆ.
ಗ್ರಂಥ ಋಣ:
೧) ಪಂಪ ಮಹಾ ಕವಿಯ ವಿಕ್ರಮಾರ್ಜುನ
ವಿಜಯ ;ಕನ್ನಡ ಪುಸ್ತಕ ಪ್ರಾಧಿಕಾರ ; ೨೦೧೦
೨)ರನ್ನ ಕವಿಯ ಗದ್ಧಾಯುದ್ಧ ಸಂಗ್ರಹ
;ಸಂ-ತಿ ನಂ ಶ್ರೀ ; ಕಾವ್ಯಾಲಯ ಪ್ರಕಾಶನ,ಮೈಸೂರು.-೧೯೪೯
೩)ಚಂಪೂ ಸಾಹಿತ್ಯ ; ಸಾಮಾನ್ಯನಿಗೆ
ಸಾಹಿತ್ಯ ಚರಿತ್ರೆ;ಸಂ-೪;ಪಿ ವಿ ನಾರಾಯಣ್;೧೯೭೫
೪) ಷಟ್ಪದಿ ಸಾಹಿತ್ಯ ; ಸಾಮಾನ್ಯನಿಗೆ
ಸಾಹಿತ್ಯ ಚರಿತ್ರೆʼ ಸಂ-೬; ಕೆ ಮರುಳಸಿದ್ಧಪ್ಪ ೧೯೭೫
೫) ವಚನ ಕಮ್ಮಟ ;ಕೆ ಮರುಳುಸಿದ್ದಪ್ಪ
(ಸಂ) ಸಪ್ನ ಬುಕ್ ಹೌಸ್ ;೨೦೧೭
೬)ವಚನ ಸಾಹಿತ್ಯ ಸಾಮಾನ್ಯನಿಗೆ
ಸಾಹಿತ್ಯ ಚರಿತ್ರೆ ; ಸಂ-೦೫ ; ಎಂ ಚಿದಾನಂದ ಮೂರ್ತಿ ೧೯೭೫
೭) ಅಂತರ್ಜಾಲ ಮಾಹಿತಿ. ( ದಿನಾಂಕ : ೦೧/೦೮/೨೦೨೦)

Comments
Post a Comment