ರಾಘವಾಂಕನ ಹರೀಶ್ಚಂದ್ರ ಕಾವ್ಯದಲ್ಲಿನ ಸಂಘರ್ಷದ ನೆಲೆಗಳು

 


(ಚಿತ್ರ ಕೃಪೆ : ಅಂತರ್ಜಾಲ )

ರಾಘವಾಂಕನ ಹರೀಶ್ಚಂದ್ರ ಕಾವ್ಯದಲ್ಲಿನ ಸಂಘರ್ಷದ ನೆಲೆಗಳು

ಆಧುನಿಕ ಪೂರ್ವ ಸಾಹಿತ್ಯದ ಬಹು ದೊಡ್ಡ ಕಾಣಿಕೆಯಾಗಿ ಹರೀಶ್ಚಂದ್ರ ಕಾವ್ಯವನ್ನು ನಾವು ನೋಡಬಹುದಾಗಿದೆ, ಈ ಕಾವ್ಯವನ್ನು ಮರು ಓದಿಗೆ ಮರು ವಿಮರ್ಶೆಗೆ ಒಳಪಡಿಸುವ ಜರೂರು ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ರಾಘವಾಂಕನ ಹರೀಶ್ಚಂದ್ರ ಕಾವ್ಯ ಮೇಲ್ನೊಟಕ್ಕೆ ಒಂದು ಪುರಾಣಕಾವ್ಯವಾಗಿದ್ದರೂ ಸಹಾ ಸೂಕ್ಷ್ಮವಾಗಿ ಅವಲೋಕಿಸಿದರೆ ಈ  ಕೃತಿಯಲ್ಲಿ ನಮಗೆ ಒಂದಷ್ಟು ಹೊಸ ಹೊಳಹುಗಳು  ಸಿಗುವವು, ಇವು ಹೊಸ ಚಿಂತನೆಗಳು ಅಲ್ಲವಾದರೂ ಸಹಾ ,ಅವನ್ನು ಪುನಃ ಕಟ್ಟಿಕೊಡುವ ದೃಷ್ಟಿಯಿಂದ ಇಲ್ಲಿ ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಲಾಗಿದೆ.

ಹರೀಶ್ಚಂದ್ರ ಕಾವ್ಯವು ಹಲವು ವಿಧಗಳಲ್ಲಿ , ಹಲವು ದೃಷ್ಟಿಕೋನಗಳಲ್ಲಿ ಮತ್ತೆ ಮತ್ತೆ ಓದಿಸಿಕೊಳ್ಳುವ ಕೃತಿ ಆಗಿದೆ. ಕೃತಿಕಾರ ರಾಘವಾಂಕನು ಆ ಕಾಲದ ಸಾಮಾಜಿಕ ರಾಜಕೀಯ ಸಂಘರ್ಷವನ್ನು ಬಹಳ ಅರ್ಥಪೂರ್ಣವಾಗಿ ಮಂಡಿಸುವ, ವಿಶ್ಲೇಶಿಸುವ, ಕೆಲಸವನ್ನು ಬಹಳ ಯಶಸ್ವೀಪೂರ್ಣವಾಗಿ ನಿರ್ವಹಿಸಿದ್ದಾನೆ.

ಮುಖ್ಯವಾಗಿ ಹರೀಶ್ಚಂದ್ರ ಕಾವ್ಯದ ಗಾನರಾಣಿಯರ ಪ್ರಸಂಗ, ನಂತರದಲ್ಲಿ ವೀರಬಾಹುಕನ ಪ್ರಸಂಗ ಹಾಗೇ ಕಡೆ ಭಾಗದ ಚಂದ್ರಮತಿ ಪ್ರಲಾಪ ಈ ಮೂರು ಘಟನೆಗಳ ಹಿನ್ನೆಲೆಯಲ್ಲಿ ನಾವು ಕೆಲವು ಸಂಘರ್ಷದ ಚಿತ್ರಣಗಳನ್ನು ಗುರ್ತಿಸಲು ಪ್ರಯತ್ನಿಸಬಹುದು. ಈ ಕೃತಿಯಲ್ಲಿ ವರ್ಣ ಪದ್ಧತಿ , ಹೊಲೆತನ ,ಮೇಲು ಕೀಳುಗಳ ಪ್ರಶ್ನೆಗಳು ಪದೇ ಪದೇ ಸಂಘರ್ಷಾತ್ಮಕಾಗಿ ಚರ್ಚೆಗೆ ಒಳಪಡುವುದನ್ನು ಕಾಣಬಹುದಾಗಿದೆ.

ವಚನ ಸಾಹಿತ್ಯದ ಬಹುದೊಡ್ಡ ಪ್ರಭಾವ ಹರಿಹರ, ರಾಘವಾಂಕ ಸೇರಿದಂತೆ ಈ ಕಾಲದ ಹಲವು ಕವಿಗಳ ಮೇಲಿದ್ದು ಈ ಹಿನ್ನೆಲೆಯಲ್ಲಿ ಸಾಹಿತ್ಯದಲ್ಲಿ ವಚನ ಸಾಹಿತ್ಯದ ಮೌಲ್ಯಗಳಾದ  ಸ್ತ್ರೀ ಸಮಾನತೆ , ಜಾತಿ ಸಮಾನತೆ ,ವರ್ಣ ಸಮಾನತೆಗಳು ಮುನ್ನೆಲೆಗೆ ಬಂದಿದ್ದರ ಮುಂದುವರೆದ ಭಾಗವಾಗಿ ಈ ಕೃತಿಯನ್ನು ನಾವು ವಿಶ್ಲೇಶಿಸಬದಾಗಿದೆ. ಹರೀಶ್ಚಂದ್ರ ಕಾವ್ಯದ ಪಾತ್ರ ಚಿತ್ರಣ, ಸಂಧರ್ಭ ಚಿತ್ರಣ, ಸಂಭಾಷಣೆ , ಭಾಷೆ ಎಲ್ಲ ಕಡೆ  ನಾವು ಈ ಪ್ರಭಾವವನ್ನು ಗುರುತಿಸಬಹುದಾಗಿದೆ.

ಮೊದಲನೆಯದಾಗಿ ನಾವು ಗಾನರಾಣಿಯರ ಪ್ರಸಂಗವನ್ನು ಗಮನಿಸಿದರೆ , ಹಿಂದೆ ಕೆಲವು ಕಥೆಗಳಲ್ಲಿ ವರ್ಣಾಶ್ರಮ ಪದ್ಧತಿಯ ನಂಬಿಕೆಗೆ ಅನುಗುಣವಾಗಿ ಹೊಲತಿಯರಾದ ಗಾನರಾಣಿಯರು ವಿಶ್ವಾಮಿತ್ರನ ಕಾಲ ಧೂಳಿನಿಂದ ಜನ್ಮಿಸುತ್ತಾರೆ. ಆದರೆ ರಾಘವಾಂಕನು “ …..ಸಿಕ್ಕಿದನಲ್ಲಾ ಭೂಪನಿಂದು ನಾನಾಯ್ತು ತಾನಾಯ್ತು ಕೆಡೆಸದೆ ಮಾಣಿನೆಂದು ಗರ್ಜಿಸುವ ಕೌಶಿಕನ ಹೋಂಕಾರದಿಂದೊಗೆದರಿಬ್ಬರು ಸತಿಯರು. “ ಎಂದು ಗಾನರಾಣಿಯರು ವಿಶ್ವಾಮಿತ್ರನ ಹೊಂಕಾರದಿಂದ ಜನಿಸುವರೆಂದು ವಿವರಿಸುತ್ತಾನೆ, ಹಾಗೇ ಮುಂದುವರೆದು“ ಮುನಿಗೆ ಹೊಲೆಯಾವುದತಿಕೋಪ ಬದ್ಧದ್ವೇಷವನಿಮಿತ ವೈರವದರಿಂದ ಹುಟ್ಟಿದರಾಗಿ ವನಿತೆಯರು ಕಡೆಗೆ ಹೊಲತಿಯರಾಗಿ….” ಎಂದು ಗಾನರಾಣಿಯರು ಹೊಲತಿಯರೆಂದು ಕರೆಸಿಕೊಳ್ಳಲು ಅವರು ವಿಶ್ವಾಮಿತ್ರನ ಅತಿಕೋಪ ,ಬ್ಧದ್ವೇಷ ಅನಿಮಿತ ವೈರಗಳಿಂದ  ಜನಿಸಿದ್ದೆ ಕಾರಣವೆಂದು ರಾಘವಾಂಕ ಹೇಳುತ್ತಾನೆ.

ಈ ಮೂಲಕ ಬ್ರಹ್ಮನ ತಲೆಯಿಂದ ಬ್ರಾಹ್ಮಣರು , ಬುಜಗಳಿಂದ ಕ್ಷತ್ರಿಯರು, ತೊಡೆಗಳಿಂದ ವೈಶ್ಯರು ಹಾಗೂ ಪಾದಗಳಿಂದ ಶೂದ್ರರು ಜನಿಸಿದರೆಂಬ ನಂಬಿಕೆಯನ್ನು, ಸಿದ್ಧಾಂತವನ್ನು ತಲೆ ಕೆಳಗು ಮಾಡುವುದನ್ನು ಇಲ್ಲಿ ನಾವು ಗುರುತಿಸಬಹುದು, ಹರಿಹರನು ಸಹ ತನ್ನ ಮಾದಾರ ಚೆನ್ನಯ್ಯನ ರಗಳೆಯಲ್ಲಿ ʼʼಸನ್ನುತಾಗಮನಿಕರ ತಲ್ಲಣಂಗೊಳೆ ತನ್ನ ಜಿಹ್ವೆಯೊಳು ಸವಿದು ಪನ್ನಗಧರಗಿತ್ತ ಚೆನ್ನಯ್ಯನೆನ್ನಯ್ಯನೆಂಬೆ“ ಎಂದು ಹೇಳುತ್ತಾನೆ. ಇದರ ಅರ್ಥ  ಶಿವನು ಚನ್ನಯ್ಯನ ಮನೆಯಲಿ ಊಟ ಮಾಡಿದ ಪರಿಣಾಮವಾಗಿ ಸನ್ನುತ ಆಗಮಗಳೆಲ್ಲವೂ ತಲ್ಲಣಿಸಿದವು ಎಂದು,  ಹಾಗೇ ಇದನ್ನು ʼಪುರಾಣವೆಂಬುದು ಪುಂಡರ ಗೋಷ್ಟಿ …..ʼʼ ʼʼನಮ್ಮ ವಚನದೊಂದು ಪರಾಯಣಕ್ಕೆ ವ್ಯಾಸನದೊಂದು ಪುರಾಣ ಸಮಭಾರದಯ್ಯ …ʼʼ ಮುಂತಾದ ವಚನಗಳ ಮೂಲಕ ವಚನಕಾರರು ಹಿಂದಿನ ನಂಬಿಕೆ ಅಥವಾ ಸಿದ್ಧಾಂತಗಳನ್ನು ಪ್ರಶ್ನೆ ಮಾಡುವ ಕೆಲಸವನ್ನು ಬೇರೆ ಬೇರೆ ಸಂಧರ್ಭಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಮಾಡಿರುವುದನ್ನು ನಾವು ಈ ಸಂಧರ್ಭದಲ್ಲಿ ಗಮನಿಸಬಹುದಾಗಿದೆ.

ಹಾಗೇ ಮುಂದುವರೆದು , ಗಾನ ರಾಣಿಯರು ಹರೀಶ್ಚಂದ್ರನನ್ನು ಉದ್ದೇಶಿಸಿ  ಕೆಲವು ತಾತ್ವಿಕ ಪ್ರಶ್ನೆಗಳನ್ನು ಕೇಳುತ್ತಾರೆ, ಅದೇನೆಂದರೆ, ಬಡತನದ ಹೊತ್ತಾನೆದೊರಕಿ ಫಲವೇನು? , ನೀರಡಸಿರ್ದ ಹೊತ್ತು ಆಜ್ಯದೊರಕಿ ಫಲವೇನು?. ರುಜೆಅಡಸಿ ಕೆಡದಿಹ ಹೊತ್ತು ರಂಭೆ ದೊರೆಕೊಂಡು ಫಲವೇನು ? ಹೀಗೆ ಮುಂದುವರೆದು ಮುಂದಿನ ಪದ್ಯದಲ್ಲಿ … ಈ ಪೊತ್ತಿನ ಸುಡುಸುಡನೆ ಸುಡುವ ಬಿರುಬಿಸಿಲು ಸೆಕೆಯುಸುರ ಬಿಸಿ ಹೊಡೆದುದುರುಹತ್ತಿ ಬಾಯ್‌ ಬತ್ತಿ ಡೆಹೆ ಸುತ್ತಿ ಸಾವಡಸುತ್ತಿದೆ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜ”  ಎಂದು ಕೇಳುವರು.

ಗಾನರಾಣಿಯರ ಸಂವಾದ ಮುಂದುವರೆದು ಪಾವನ ಕ್ಷೀರಮಂ ಕೊಡುವ ಕೆಚ್ಚಲ ಮಾಂಸವಾವ ಲೇಸು?, ಎನಿದ್ದುಳ್ಳ ಮಧುವನೊಸೆದೀವ ನೊಳವಾವ ಲೇಸು?…. ಭಾವಿಸುವಡಿಂದೆಮ್ಮ  ರೂಪುಜವ್ವನವಿರಲು ಕುಲದಮಾತೇಕೆಂದರು? ಹೀಗೆ ಕುಲದಮಾತು ಬೇಡವೆಂದು ಗಾನರಾಣಿಯರು ಕೇಳುವರು , ಇದೇ ಪ್ರಶ್ನೆ ಯನ್ನು ಹಿಂದೆ ಪಂಪನ ಕರ್ಣನು ”ಕುಲಂ ಕುಲಮಲ್ತು, ಚಲಂ ಕುಲಂ, ಗುಣಂ ಕುಲಂ,ಅಭಿಮಾನಮೊಂದೆ ಕುಲಂ, ಅಣ್ಮು ಕುಲಂ” ಎಂದು ,ರಾಘವಾಂಕನ ನಂತರ  ದಾಸರು “ಕುಲಕುಲವೆಂದು ಹೊಡೆದಾಡದಿರಿ” ಎಂದು ಮತ್ತೆ ಮತ್ತೆ ಇದೇ ಪ್ರಶ್ನೆಯನ್ನು ಮಾಡಿರುವುದನ್ನು ನಾವಿಲ್ಲಿ ನೆನೆಯಬಹುದು.

 ಆದರೆ ರಾಘವಾಂಕನ ಸೃಷ್ಟಿಯಲ್ಲಿ ಗಾನರಾಣಿಯರು ಪ್ರಶ್ನೆ ಮಾಡುವುದರ ಜೊತೆಗೆ ಇನ್ನು ಮುಂದುವರೆದು ಹರೀಶ್ಚಂದ್ರನ ಮುತ್ತಿನ ಸತ್ತಿಗೆಯನ್ನು ಬೇಡುವುದನ್ನು ಹಾಗೇ ಅವನನ್ನು ʼ ನೀನೆಮಗೆ ವಲ್ಲಭನಾಗಿ ಚಿತ್ತದುಮ್ಮಳಿಕೆಯ ಕಳಿ ಹರೀಶ್ಚಂದ್ರ ಭೂನಾಥ ʼ ಎಂದು ಬೇಡುವುದನ್ನುನೊಡಬಹುದು. ಇದರಿಂದ ಸಾಮಾನ್ಯವಾಗಿ ಗಾನರಾಣಿಯರು ಹೀಗೆ ಕೇಳುವುದು ತಪ್ಪಲ್ಲವೇ ? ಎಂಬ ಪ್ರಶ್ನೆ ನಮಗೆ ಬರಬಹುದು ಆದರೇ, ನಾವು ಈಗ ಯಾವ ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆ, ಅದನ್ನು ಹಲವು ವರ್ಷಗಳ ಹಿಂದೆ ರಾಘವಾಂಕನು  ರಾಜ ಲಾಂಛನವಾದ ಮುತ್ತಿನ  ಸತ್ತಿಗೆಯನ್ನು ಸಾಮಾನ್ಯರು ಬೇಡುವ ಸಂದರ್ಭ ಸೃಷ್ಠಿಯ ಮೂಲಕ ಪ್ರತಿಪಾದಿಸುವ ಅಥವಾ ಪ್ರಜಾಪ್ರಭುತ್ವದ ಅವಶ್ಯಕತೆಯನ್ನು ಹೇಳುವ ಪ್ರಯತ್ನವನ್ನು ನೋಡಬಹುದು.

ಸಂಭಾಷಣೆ ಮುಂದುವರೆದಂತೆ  ʼʼಹಾಡನೊಲಿದಾಲಿಸಿ ಕಿವಿಗೆ ಹೊಲೆಯಿಲ್ಲಮಾತಾಡಿ ನುಡಿಸಿದ ಬಾಯ್ಗೆ ಹೊಲೆಯಿಲ್ಲ ರೂಪ ನೆರೆನೋಡಿದ ವಿಲೋಚನಕ್ಕೆ………. ಕೂಡಿರ್ದ ಪಂಚೇಂದ್ರಿಯಂಗಳೊಳು ನಾಲ್ಕಧಮ ವೋಂದಧಿಕವೇ? ʼʼ ಎಂದು ಗಾನರಾಣಿಯರು ಕೇಳಲು ಹರೀಶ್ಚಂದ್ರನು “ ಕೆಂಡವನು ಮುಟ್ಟಿದಡೆ ಬೇವಂತೆ , ಕೇಳ್ದಡಂ, ಕಂಡು ವಾಸಿಸಿದಡಂ ಬೆಂದವೇ? ಎಂದು ಕೇಳುವನು .ಇದರ ಅರ್ಥ , ಗಾನರಾಣಿಯರು ನಮ್ಮ ಹಾಡನ್ನು ಆಲಿಸಿ ನಮ್ಮನ್ನು ಕಂಡು ,ನಮ್ಮನ್ನು ಹೊಗಳುವಾಗ ಇಲ್ಲದ ಹೊಲೆತನ ಮುಟ್ಟಿದರೇ ಬರುವುದೇ ಎಂದು ಕೇಳಲು ಹರೀಶ್ಚಂದ್ರನು ಕೆಂಡವನ್ನು ಮುಟ್ಟಿದರೆ ಮಾತ್ರ ಸುಡುವುದು ಅದು ಬಿಟ್ಟು ನೊಡಿದರೇ , ಮೂಸಿದರೇ , ಕೇಳಿದರೇ ಸುಡುವುದೇ ? ಎಂದು ಪ್ರಶ್ನಿಸುವನು. ಎಂದರೇ ಜಾತಿ ಅಥವಾ ಹೊಲೆತನವನ್ನು ಕೆಂಡಕ್ಕೆ ಹೊಲಿಸಿ ಹೇಳುವನು.

 ಕೆಂಡವನ್ನು  ಪವಿತ್ರವಾದ್ದು ಎಂದು ಭಾವುಸುವುದನ್ನು ನಾವು ಗಮನಿಸಬೇಕು. ಈ ಹಿನ್ನೆಲೆಯಲ್ಲಿ ಮುಟ್ಟಬಾರದ್ದು ಎಂದರೇ ಅದು ಹೊಲೆಯೆಂಬ ಅರ್ಥವಷ್ಟೇ ಅಲ್ಲ , ಅದು ಪವಿತ್ರವಾದ್ದು ಸಹಾ ಹೌದು ಎಂಬುದನ್ನು ಸೂಚ್ಯವಾಗಿ ಇಲ್ಲಿ ರಾಘವಾಂಕನು ಹೇಳಿರುವನು .ಇನ್ನು ರಾಜನನ್ನು ಪ್ರಶ್ನೆ ಮಾಡುವ, ಪ್ರಭುತ್ವವನ್ನು ಪ್ರಶ್ನೆ ಮಾಡುವ ಸಂದರ್ಭಗಳನ್ನು ನಾವು ಪಂಪನಲ್ಲಿ “ನಿಜದಿಂ ಭೂಪರೆಂಬರವಿವೇಕಿಗಳ್, “ಓಲಗಿಸಿ ಬಾಳ್ವುದು ಕಷ್ಟಂ ಇಳಾಧಿನಾಥರಂ” ,  ಮುಂತಾದ ಉಲ್ಲೇಖಗಳ ಮೂಲಕ, ಹಾಗೇ “ಆನೀ ಬಿಜ್ಜಳಂಗಂಜುವೆನೇ?” ಎಂಬ ಬಸವಣ್ಣನ ಮಾತಿನಿಂದ ಗುರ್ತಿಸಬಹುದಾಗಿದ್ದು, ಇದೇ ರೀತಿಯ  ಪ್ರಭುತ್ವವನ್ನು ಪ್ರಶ್ನೆ ಮಾಡುವ ಪರಂಪರೆಯ ಭಾಗವಾಗಿ , ವೈಚಾರಿಕತೆಯ ಭಾಗವಾಗಿ ಹರೀಶ್ಚಂದ್ರ ಕಾವ್ಯವು ಸಹಾ ಚಿತ್ರಿತಗೊಂಡಿದೆ.

ಮುಂದೆ ವೀರಭಾಹುಕನ ಪ್ರಸಂಗದಲ್ಲಿ ವಿಶ್ವಾಮಿತ್ರನು “ ಮಡದಿಯರನಿರಿಸಿಕೋ ಎಂದು ನಾಂ ಬೇಡಿಕೊಂಡಡೆ ಮಾರು ಹೊಲತಿಯರನೊಲ್ಲೆನೆಂಬಣ್ಣನಂ ಕಡೆಗನಾಮಿಕನ ಕಿಂಕರನಾಗಿ ಸುಡುಗಾಡ ಕಾವಂತೆ ಮಾಳ್ಪೆನೆಂದು” ತನ್ನಮಕ್ಕಳನ್ನು ಹೊಲೆಯರೆಂದು ನಿರಾಕರಿಸಿದ ತಪ್ಪಿಗಾಗಿ ಹರೀಶ್ಚಂದ್ರನು ಹೊಲೆಯನ ಕಿಂಕರನಾಗಿ ಸುಡುಗಾಡ ಕಾಯುವಂತೆ ಮಾಡಬೇಕೆಂದು ಯೊಚಿಸುವನು. ಮುಂದೆ ಅನಾಮಿಕನು ಬಂದು “ಕೊಡುವಾತನಾರು ಬೆಲೆಯೇನು ಮಾರಿಸಿಕೊಂಬ ಪೊಡವೀಷನೆಂಬನಾರೋ ವೀರಭಾಹುಕ ಕೇಳ್ದಡೆ ಕೊಂಬನೀಗಳೆ” ಎಂದಾಗ ಹರೀಶ್ಚಂದ್ರನು ಬೆರಗಾಗಿ, ಸೊರ್ಯವಂಶದಲ್ಲಿ ಹುಟ್ಟಿ ಮೃಡಮೂರ್ತಿ ವಾಸಿಸ್ಠ ಮುನಿಯ ಕಾರುಣ್ಯಮಂ ಪಡೆದೆನ್ನನೀ ಹೊಲೆಯ ಮಾರಿಗೊಂಡಪೆನೆಂದು” ಕೋಪಿಸಿಕೊಳ್ಳಲು   ವೀರಭಾಹುಕನು “ಕೀಳಮೇಲಂ ನೊಡದೇ ಕೀಳಾರು ಮೇಲಾರು ಹದುಳವಿಪ್ಪಾನು ಚಾಂಡಾಳನೋ ಹುಸಿಯ ಹೊಲೆಯಂ ಹೊರುವ ನೀನು ಚಾಂಡಾಳನೋ“ ಎಂದು ಹರಿಶ್ಚಂದ್ರನನ್ನು ಪ್ರಶ್ನೆಸುವಲ್ಲಿ ಮತ್ತೆ ಹೊಲೆತನವೆಂದರೇ ಹುಸಿನುಡಿಯುವುದು ಮಾತ್ರ ಎಂಬುದು ಪುನರುಚ್ಚಾರವಾಗುವುದು.

 ಮುಂದೇ ಕೃತಿಯ ಕಡೆ ಭಾಗದಲ್ಲಿ ಇದೇ ಮಾತನ್ನು ರಾಘವಾಂಕನು  ಶಿವನ ಭಾಯಿಂದಲೇ ಹೇಳಿಸುವುದನ್ನು ನೋಡಬಹುದು, ಹರೀಶ್ಚಂದ್ರನ ಸತ್ಯಸಂಧತೆಗೆ ಮೆಚ್ಚಿ ಶಿವನು ಪ್ರತ್ಯಕ್ಷನಾದಾಗ ಹರೀಶ್ಚಂದ್ರನು “ನೆನೆದು ಚಾಂಡಾಳಕಿಂಕರನಾಗಿ ಹೊಲೆವೇಷವನು ಹೊತ್ತು ಸುಡುಗಾಡ ಕಾದು ಶವಶಿರದಕ್ಕಿಯನು ಹೇಸದುಂಡು ಜೀವಿಸುತ ವರಪುತ್ರನಳಿದುದನು ಕಣ್ಣಾರೆ ಕಂಡು ಘನಪತಿವ್ರತೆಯಪ್ಪ ನಿಜಸತಿಯ ಕೊಂದ ನೀಚನು ಮೂರ್ಖನಾನೆನ್ನ…..” ಎಂದು ತಾನು ಇಷ್ಟುದಿನ ಮಾಡಿದ್ದು ತಪ್ಪಿನ ಕೆಲಸವೆಂದು ಅರಿವಾದವನಂತೆ ಮಾತಾಡುತ್ತಾನೆ. ಇದಕ್ಕೂ ಮುಂಚೆ ಚಂದ್ರಮತಿಯೊಂದಿಗೆ ಅದೇ ಸುಡುಗಾಡಿನಲ್ಲಿ “ನುಡಿಯಲರಿಯದೇ ಸಕಲರಾಜ್ಯಮಂ ಹೋಗಾಡಿ ಕಡೆಗಧಿಕ ಋಣಿಯಾಗಿ ನೆಲೆಗೆಟ್ಟು ಮಂತ್ರಿವರ ಸಡವಿಗುರಿಯಾಗಿ ಕೈವಿಡಿದ ಸತಿಪುತ್ರರಂ ಮಾರಿ ಸುಕ್ಷೇತ್ರದೊಳಗೆ ಕಡೆಗೆ ಚಾಂಡಾಳ ಕಿಂಕರನಾಗಿ ದೋಷಕ್ಕೆ ನಡುಗದೇ ಕುಲಾಚಾರಮಂ ಬಿಟ್ಟು ಜಗಕ್ಕೆ ನಗೆಗೆಡೆಯಾದ ಪಾತಕ ಹರೀಶ್ಚಂದ್ರನವನನೇ….” ಎಂಬುದಾಗಿ ತನ್ನ ಕಾರ್ಯಕ್ಕೆ ಪಾಶ್ಚಾತ್ತಾಪ ಪಡುವುದನ್ನು ನಾವು ನೊಡಬಹುದಾಗಿದೆ.

 ಇದಕ್ಕೆ ಉತ್ತರವೆಂಬಂತೆ ಶಿವನು  “ಘನ ಸತ್ಯವೇ ಜೀವವೆಂದಿರ್ದ ನಿನ್ನ ಹೊಲೆಯನ ಸೇವೆ ಗುರುಸೇವೆ ಹೊತ್ತ ಹೊಲೆವೇಷ ಪಾವನಪುಣ್ಯ ವೇಷ ಸುಡುಗಾಡ ರಕ್ಷಿಸುವಿರವು ತಾ ಯಜ್ಞರಕ್ಷೆಯಿರವು …….. ಮುಂತಾಗಿ ಹೇಳುತ್ತಾ ಹೊಲೆತನದ ಲಕ್ಷಣಗಳನ್ನೇಲ್ಲಾ ಗುರುಸೇವೆ ಗೆ ಯಜ್ಙರಕ್ಷೆಗೆ ಸಮ ಎಂದು ಹೇಳಿ ಹರೀಶ್ಚಂದ್ರನಿಗೆ ಸಮಾಧಾನ ಮಾಡುವನು. ಶಿವನು ಹೊಲೆತನವೆಂದರೇನೆಂಬುದನ್ನು ಹೇಳುತ್ತಾ  “ಅತಿ ಹುಸಿವ ಯತಿ ಹೊಲೆಯ ಹುಸಿಹದಿಹ ಹೊಲೆಯನುನ್ನತ ಯತಿವರನು, ಹುಸಿದುಮಾಡುವ ಮಹಾಯಜ್ಙ ಶತವೈದೆ ಪಂಚಪಾತಕವು” ಎನ್ನುವನು, ಹೀಗೆ ಹಲವು ಸಲ ಹಲವು ಸಂಧರ್ಭದಲ್ಲಿ ರಾಘವಾಂಕನು ಹೊಲೆತನದ ಪ್ರಶ್ನೆಯನ್ನು  ಪುನರುಚ್ಚರಿಸುವುದನ್ನು ನಾವು ಗಮನಿಸಬಹುದಾಗಿದೆ.

ಹೀಗೆ ರಾಘವಾಂಕನ ಹರೀಶ್ಚಂದ್ರ ಕಾವ್ಯದಲ್ಲಿ ಗಾನರಾಣಿಯರ ಹುಟ್ಟಿನ ಸಂಭಂಧದ ಚರ್ಚೆ , ಗಾನರಾಣಿಯರ ಮೂಲಕ ಪ್ರಭುತ್ವ ವಿರೋಧಿ ನಿಲುವುಗಳ ಮಂಡನೆ ಅದೇ ರೀತಿ ಪ್ರಜಾಪ್ರಭುತ್ವದ ಚಿಂತನೆ, ಹಾಗೇ ವೀರಭಾಹುಕನ ಪ್ರಸಂಗದ ಹೊಲೆತನದ ಚರ್ಚೆ, ಮುಂದೆ ಶಿವಮುಖವಾಗಿ ರಾಘವಾಂಕನು ಹೊಲೆತನವೆಂದರೇನೆಂದು ಹೇಳಿಸುವುದು, ಅದೇ ರೀತಿ ಹೊಲೆತನವನ್ನು ಪವಿತ್ರವೆಂದು ಪರಿಗಣಿಸಲ್ಪಡುವ ಕೆಂಡಕ್ಕೆ ಹೊಲಿಸುವುದು , ಅದೇ ರೀತಿ ದೇವತೆಗಳ, ಋಷಿಗಳ ಕಪಟ ಬುದ್ದಿಯ ಅನಾವರಣ ಮಾಡಿವುದು, ಕಡೆಗೆ ಹರೀಶ್ಚಂದ್ರನಲ್ಲಿ ತಾನು ಮಾಡಿದ ಕೆಲಸಕ್ಕಾಗಿ ಪಶ್ಚಾತ್ತಾಪ ವುಂಟಾಗುವಿಕೆ, ಇವುಗಳನ್ನು ಚಿತ್ರಿಸುತ್ತಾ,ಕಡೆಗೆ ಹರೀಶ್ಚಂದ್ರನ ಶಿವ ಸಾಕ್ಷಾತ್ಕಾರಕ್ಕೆ ಹೊಲೆತನವೇ ಮಾರ್ಗ ವಾಗುವುದನ್ನು ನಾವು ಇಲ್ಲಿ ನೊಡಬಹುದು. ಹೀಗೆ ಈ ಎಲ್ಲಾ ಸಂಧರ್ಭಗಳನ್ನು ಆ ಕಾಲದ ಧಾರ್ಮಿಕ ಸಂಘರ್ಷಗಳನ್ನು ಹಾಗೂ ವಚನ ಕ್ರಾಂತಿಯ ವೈಚಾರಿಕ ಪರಂಪರೆಯ ಮುಂದುವರೆದ ಭಾಗವಾಗಿ ನೊಡಬಹುದು.

ಗ್ರಂಥ ಋಣ :

೧) ಹರೀಶ್ಚಂದ್ರ ಕಾವ್ಯ ಸಂಗ್ರಹ : ಮೈಸೂರು ವಿ ವಿ ,ಕನ್ನಡ ಗ್ರಂಥಮಾಲೆ -೧: ಪ್ರ ಸಂ – ಬಿ ಎಂ ಶ್ರೀ .

೨) ರಾಘವಾಂಕನ ಹರೀಶ್ಚಂದ್ರ ಚರಿತೆ (ಗದ್ಯಾನುವಾದ) – ಎನ್‌ ರಂಗನಾಥ ಶರ್ಮಾ : ಕನ್ನಡ ಸಾಹಿತ್ಯ ಪರಿಷತ್‌ ;೧೯೭೨

೩)ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಸಂ:೫ :ವಚನ ಸಾಹಿತ್ಯ – ಎಂ ಚಿದಾನಂದ ಮೂರ್ತಿ :೧೯೭೫

೪) ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಸಂ:೬: ಷಟ್ಪದಿ ಸಾಹಿತ್ಯ –ಕೆ ಮರುಳಸಿದ್ಧಪ್ಪ;೧೯೭೫

೫) ಅಂತರ್ಜಾಲ ಮಾಹಿತಿ

( ವರುಣರಾಜ್‌ ಜಿ

ವಿದ್ಯಾರ್ಥಿ ಪಿ ಜಿ ಸೆಂಟರ್‌ ಕೋಲಾರ.

ಸಂ : 9448241450)

Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.