ಕೈವಾರ ನಾರೇಣಪ್ಪನವರ ಕಾಲಜ್ಞಾನ ಒಂದು ವಿಶ್ಲೇಷಣೆ - ವರುಣ್ರಾಜ್ ಜೀ.
ಕೈವಾರ
ನಾರೇಣಪ್ಪನವರ ಕಾಲಜ್ಞಾನ ಒಂದು ವಿಶ್ಲೇಷಣೆ
- ವರುಣ್ರಾಜ್ ಜೀ.
ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ
ತಾಲೂಕಿನ ಕೈವಾರ ಗ್ರಾಮದಲ್ಲಿ ೧೭೨೬ ರಲ್ಲಿ ಒಂದು ಬಲಿಜ ಜನಾಂಗದ ಕುಟುಂಬದಲ್ಲಿ ನಾರೇಣಪ್ಪನವರು
ಜನಿಸಿದರು. ತೆಲುಗು ಹಾಗೂ ಕನ್ನಡ
ದ್ವಿಭಾಷಾ ಪರಿಸರವಾದ ಕೋಲಾರ ಚಿಕ್ಕಬಳ್ಳಾಪುರ ಪ್ರಾಂತ್ಯದಲ್ಲಿ ಬೌದ್ಧ ಮಾಧ್ಯಮಿಕ ಮಾರ್ಗವಾದ ಅಚಲ
ಗುರು ಪರಂಪರೆಯಲ್ಲಿ ಕೈವಾರ ನಾರೇಣಪ್ಪನವರು ಗುರುತಿಸಲ್ಪಟ್ಟಿದ್ದಾರೆ. ಕೈವಾರ ತಾತಯ್ಯ ಎಂದು
ಪ್ರಸಿದ್ಧರಾಗಿರುವ ಇವರು ಕನ್ನಡ ತೆಲುಗು ಭಾಷೆಗಳಲ್ಲಿ ಹಲವಾರು ತತ್ವಪದಗಳನ್ನು ಶತಕ ಕೃತಿಗಳನ್ನುಹಾಗೂ
೨ ಕಾಲಜ್ಞಾನ ಕೃತಿಗಳನ್ನು ರಚಿಸಿದ್ದಾರೆ.
ಕೈವಾರ ನಾರೇಣಪ್ಪನವರು ರಚಿಸಿರುವ ಹಲವು
ಕೀರ್ತನೆಗಳು ಹಾಗೂ ಪದ್ಯಗಳು ಜನಮಾನಸದಲ್ಲಿ ಹೆಚ್ಚು ಹೆಚ್ಚು ಪ್ರಚಲಿತವಾಗಿವೆ. ಆದರೆ ಅವರ
ಕಾಲಜ್ಞಾನ ಪದ್ಯಗಳು ಅವರ ಕೀರ್ತನೆಗಳಷ್ಟು ಪ್ರಚಲಿತವಾಗಿಲ್ಲ. ಅದಕ್ಕೆ ಕಾರಣಗಳೆಂದರೇ, ಕಾಲಜ್ಞಾನ
ದಂತಹಾ ವಿಚಾರಗಳಲ್ಲಿ ಆಸಕ್ತಿಯುಳ್ಳವರು ತೆಲುಗಿನ ವೀರಬ್ರಹ್ಮಯ್ಯವನರ ಕಾಲಜ್ಞಾನವನ್ನು ಹೆಚ್ಚು
ಗಮನಿಸುವರು. ನಾರೇಣಪ್ಪನವರ ಕಾಲಜ್ಞಾನಕ್ಕೆ ಹೊಲಿಸಿದರೇ ಬ್ರಹ್ಮಯ್ಯನವರು ಹೇಳಿರುವ ಕಾಲಜ್ಞಾನ ಹೆಚ್ಚು ಪ್ರಚಲಿತವಾಗಿದೆ. ಅದಕ್ಕೆ ಕಾರಣ ವೀರ
ಬ್ರಹ್ಮಯ್ಯನವರು ಹಲವು ರಾಜಕೀಯ ಹಾಗೂ ಸಾಮಾಜಿಕ ವಿಚಾರಗಳು ಸೇರಿದಂತೆ ಮುಂದೆ ನಡೆಯಬಹುದಾದ ಹಲವು ಮಹತ್ತರ ಘಟನೆಗಳನ್ನು
ಹೇಳಿರುವುದು. ಇನ್ನು ನಾರೇಣಪ್ಪನವರನ್ನು ಗುರ್ತಿಸಲಾಗುವ ಅಚಲ ಗುರು ಪರಂಪರೆಯಲ್ಲಿ ಇಂತಹಾ ಕಾಲಜ್ಞಾನಗಳ ಬಗ್ಗೆ ಜನ ಹೆಚ್ಚು
ಆಸಕ್ತರಾಗದಿರುವುದು ನಾರೇಣಪ್ಪವನರ ಕಾಲಜ್ಞಾನವು
ಹೆಚ್ಚು ಜನರಿಗೆ ಹತ್ತಿರವಾಗದಿರುವುಕ್ಕೆ ಕಾರಣವಾಗಿರಬಹುದು.
ಕಾಲಜ್ಞಾನ ಎಂದ ಕೂಡಲೇ ಮೂಗು ಮುರಿಯುವ,
ಕಾಲಜ್ಞಾನ ಎಂಬುದು ಮೌಡ್ಯ ಎಂಬ ಭಾವನೆಯನ್ನು ಹೊಂದಿರುವವರು ಹೆಚ್ಚು, ಆದರೇ ನಾರೇಣಪ್ಪನವರ ಕಾಲಜ್ಞಾನ ಪದ್ಯಗಳನ್ನು ಓದಿದರೇ, ಅಲ್ಲಿನ ವಿಚಾರಗಳು ಅಮೂರ್ತವಾದ
ಯೋಗಿಕ ಶಕ್ತಿಗೆ ಬದಲಾಗಿ ಒಂದು ರೀತಿಯ ಗಾಢವಾದ ಸಾಮಾಜಿಕ ಅನುಭವದ ಫಲವಾಗಿ ಹೊರಹೊಮ್ಮಿದವೆಂಬುದು ನಮಗೆ ಸುಲಭವಾಗಿ
ಅರ್ಥವಾಗುತ್ತವೆ. ಕಾಲಜ್ಞಾನವೆಂಬ ಪದದ ಹಿಂದಿನ ಪೂರ್ವಾಗ್ರಹಗಳನ್ನು ಬದಿಗಿಟ್ಟು ನಾರಾಣಪ್ಪನವರು
ಚರ್ಚಿಸಿರುವ ವಿಚಾರಗಳನ್ನು ಸಮಾಜಿಕ ಅಧ್ಯಾಯನ, ರಾಜಕೀಯ ಹಾಗೂ ಸಾಮಾಜಿಕ ಸ್ಥಿತ್ಯಂತರಗಳು,
ಭವಿಷ್ಯದ ದಿನಗಳ ಬಗ್ಗೆ ನಮ್ಮ ಪೂರ್ವಿಕರು ಹೊಂದಿದ್ದ ಕಳಕಳಿ ಅಥವಾ ಕಳವಳಗಳ ಹಿನ್ನೆಲೆಯಲ್ಲಿ ಅರ್ಥ
ಮಾಡಿಕೊಳ್ಳುವ ಪ್ರಯತ್ನ ಈ ಲೇಖನದಲ್ಲಿ
ಮಾಡಲಾಗಿದೆ.
ನಾರೇಣಪ್ಪನವರ ಕಾಲಜ್ಞಾನದ ವಿಶ್ಲೇಷಣೆಗೆ
ಮೊದಲು ಕಾಲಜ್ಞಾನ ಎಂಬ ಪದದ ಅರ್ಥ ಮತ್ತು ಅದರ ಹಿನ್ನೆಲೆಯನ್ನು ಗಮನಿಸುವುದಾದರೇ, ಕಾಲಜ್ಞಾನ
ಪದವು ಯಾವುದೇ ಕಾಲವನ್ನು ಸೂಚಿಸುವುದಿಲ್ಲವಾದರೂ ಅತಿ ಹೆಚ್ಚಿನ ಸಂಧರ್ಭಗಳಲ್ಲಿ ಅದು ಭವಿಷ್ಯತ್
ಕಾಲವನ್ನು ಸೂಚಿಸುವ ಪದವಾಗಿಯೇ ಬಳಕೆಯಲ್ಲಿದೆ. ತ್ರಿಕಾಲ ಜ್ಞಾನಿಗಳಾಗಿ ಹಲವಾರು ಜನ
ಪ್ರಖ್ಯಾತರಾಗಿದ್ದರು, ಇವರಿಗೆ ಹಿಂದೆ ನಡೆದಿರುವುದರ, ಮುಂದೆ ನಡೆಯುವುದರ ಹಾಗೂ ಈಗ
ನಡೆಯುತ್ತಿರುವ ಎಲ್ಲಾ ವಿಚಾರಗಳು ಜ್ಞಾನವೂ ಇದೆಯೆಂದು ನಂಬಲಾಗಿದೆ. ಆದರೆ ಕಾಲಜ್ಞಾನ ರಚನೆಗೆ
ಸಂಭಂಧಿಸಿ ಕಾಲಜ್ಞಾನವನ್ನು ಬರೆಯುವವರು ಮುಂದೇ ನಡೆಯಲಿರುವುದನ್ನು ತಮ್ಮ ಯೋಗಿಕ ವಿದ್ಯೆಯಿಂದ
ಭವಿಷ್ಯದ ರೂಪದಲ್ಲಿ ಹೇಳುವರು ಎಂದು ನಂಬಲಾಗಿದೆ.
ಭಾರತವಲ್ಲದೇ ವಿಶ್ವದ ನಾನಾ ಕಡೆಗಳಲ್ಲಿ
ಕಾಲಜ್ಞಾನವನ್ನು ರಚನೆ ಮಾಡಿರುವರು. ಅವರಲ್ಲಿ ನಾಸ್ಟ್ರಾಡಾಮಸ್ ಪ್ರಮುಖನು ದಕ್ಷಿಣ ಪ್ರಾನ್ಸ್
ನ ಸೇಂಟ್ ರೆಮಿ ಡೆ ನಲ್ಲಿ ಜನಿಸಿದ ನಾಸ್ಟ್ರಾಡಾಮಸ್ ಎರಡು ಮಹಾಯುದ್ಧಗಳ ಬಗ್ಗೆ, ʻಹಿರೋಶಿಮಾ ಮತ್ತು ನಾಗಸಾಕಿಗಳ ಮೇಲೆ ನಡೆದ ಅಣುಬಾಂಬ್ ದಾಳಿಯ ಬಗ್ಗೆ ಸೇರಿದಂತೆ ಹಲವಾರು ಪ್ರಮುಖ ವಿಚಾರಗಳನ್ನು ತನ್ನ ನಾಲ್ಕು
ಸಾಲಿನ ಪದ್ಯಗಳಲ್ಲಿ ಬರೆದಿರುವನೆಂದು ಹೇಳಲಾಗುತ್ತದೆ. ಮತ್ತೊಬ್ಬ ವಿದೇಶಿ ಕಾಲಜ್ಞಾನಿ ಬಾಬಾ ವಂಗಾ ಈಕೆ ಮೆಸಿಡೋನಿಯಾ
ದವಳು, ತನ್ನ ಹನ್ನೆರಡನೇ ವಯಸ್ಸಿನಲ್ಲಿ ದೃಷ್ಠಿ ಕಳೆದುಕೊಂಡ ವಂಗಾ ಮುಂದೇ ಕಾಲಜ್ಞಾನ
ಭವಿಷ್ಯಗಳಿಗಾಗಿ ಹೆಚ್ಚು ಹೆಚ್ಚು ಪ್ರಸಿದ್ಧಿಗೆ ಬಂದವಳು. ಈಕೆ ಸಹಾ ಅಮೇರಿಕದ ವಿಶ್ವ ವಾಣಿಜ್ಯ
ಕೇಂದ್ರದ ಮೇಲೆ ನಡೆದ ದಾಳಿ ಸೇರಿದಂತೆ ಹಲವು ಆರ್ಥಿಕ ಸಂಕಷ್ಟಗಳ ಬಗ್ಗೆ ಮೊದಲೇ ಭವಿಷ್ಯ
ನುಡಿದಿದ್ದಳೆಂದು ಹೇಳಲಾಗುತ್ತದೆ. ಇನ್ನು ಆಂಧ್ರದ ವೀರ ಬ್ರಹ್ಮಯ್ಯನವರು ಮಹಾತ್ಮ ಗಾಂಧಿಯ ಜನನ
ಭಾರತದ ಸ್ವಾತಂತ್ರ್ಯ , ತಂತ್ರಜ್ಞಾನ ಅಭಿವೃದ್ಧಿ , ವಿಮಾನಗಳ ಆವಿಷ್ಕರಣೆ ಸೇರಿದಂತೆ ಕಲಿಯುಗದ
ಅಂತ್ಯದ ವಿಚಾರವನ್ನು ಸಹಾ ಭವಿಷ್ಯ ನುಡಿದ್ದಿದ್ದಾರೆಂದು ಹೇಳಲಾಗಿದೆ. ಹೀಗೆ ನೂರಾರು ಜನ
ಕಾಲಜ್ಞಾನಿಗಳು ಆಗಿ ಹೊಗಿರುವರು.
ಕೈವಾರ ನಾರೇಯಣಪ್ಪನವರು “ಕಾಲಜ್ಞಾನ
ಸೂಕ್ಷ್ಮ ಭೀಮಲಿಂಗ ಶತಕ” ವನ್ನು ನಕ್ಷತ್ರಮಾಲಾ ಎಂಬ ಪ್ರಕಾರದ ೨೭ ಸೀಸ ಪದ್ಯಗಳಲ್ಲಿ ʼʼಅಮರ
ನಾರೇಯಣುನಿ ಸಖ ಹರ ಮಹಾತ್ಮ ಅಧಿಕ ಭವಭಂಗ ಕೈವರಮು ಭೀಮಲಿಂಗʼʼ ಎಂಬ ಅಂಕಿತದಲ್ಲಿ ಹಾಗೂ “ಪ್ರಚಂಡ
ನಾರೇಯಣಕವಿ ಪದ್ಯಮುಲು” ಎಂಬ ಹೆಸರಿನ ಕೃತಿಯನ್ನು “ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ” ಎಂಬ
ಅಂಕಿತದಲ್ಲಿ ನಾಲ್ಕು ಸಾಲಿನ ಪದ್ಯಗಳಲ್ಲಿ ತೆಲುಗಿನಲ್ಲಿ
ಕಾಲಜ್ಞಾನವನ್ನು ರಚಿಸಿದ್ದು, ಇದು ತನ್ನ ಸ್ವರೂಪದಲ್ಲಿ ಮೇಲೆ ಹೇಳಲಾದ ವಿವಿಧ ರೀತಿಯ
ಕಾಲಜ್ಞಾನಗಳಿಗಿಂತ ಭಿನ್ನವಾಗಿದೆ. ಆಗಿನ ಕಾಲದ
ಜನರ ಬದುಕುಗಳನ್ನು ಬಹಳ ಹತ್ತಿರದಿಂದ ಗಮನಿಸಿದ ನಾರೇಣಪ್ಪನವರು ಮುಂದೆ ಏನ್ನೆಲ್ಲಾ
ಬದಲಾವಣೆಗಳಾಗಬಹುದು ಎಂಬುದನ್ನು ಊಹಿಸಿ ಅಥವಾ ಅವುಗಳನ್ನು ತಮ್ಮ ಅನುಭಾವದಿಂದ ಗ್ರಹಿಸಿ
ಕಾಲಜ್ಞಾನ ರೂಪದಲ್ಲಿ ನೀಡಿರುವರು. ಯಾರೂ ನಮ್ಮ
ಹಿರಿಯರೊಬ್ಬರು ನಮ್ಮ ನಡಾವಳಿಗಳನ್ನು ಕಂಡು ನಮಗೆ ಬುದ್ಧಿವಾದ ಹೇಳುವ ಅಥವಾ ಮುಂದೆ ಬರಲಿರುವ
ಕಾಲದ ಬಗ್ಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ನಾರೇಣಪ್ಪನವರ ಕಾಲಜ್ಞಾನವನ್ನು ನಾವು ನೊಡಬಹುದು.
ಮೊದಲಿಗೆ “ಕಾಲಜ್ಞಾನ ಸೂಕ್ಷ್ಮ ಭೀಮಲಿಂಗ
ಶತಕ”ದ ಎರಡನೇ ಸೀಸ ಪದ್ಯದಲ್ಲಿ ನಾರೇಣಪ್ಪನವರು “ಕುಂಟೇನ ಕಾಂಡ್ಲಕೂ – ಗುರ್ರಾಲು ಗೊಡುಗುಲು ,
ತೊತ್ತು ಕೊಡುಕುಲಕೆಲ್ಲಾ ದೊರತನಂಬು.........” ( ದಳ್ಳಾಳಿಗಳಿಗೂ ಕುದುರೆಗಳು ಕೊಡೆಗಳು, ಅಯೋಗ್ಯರಿಗೆಲ್ಲ
ದೋರೆತನವಾಗುವುದು...) ಎಂದು ಹೇಳುವರು. ದಳ್ಳಾಳಿಗಳು ಕೂಡಾ ರಾಜ ಲಾಂಛನಗಳಾದ ಕುದುರೆಗಳು ಮತ್ತು
ಕೊಡೆಗಳು ಪ್ರಾಪ್ತವಾಗಿ, ಅಯೋಗ್ಯರಾದ ಅವರುಗಳೇ ದೊರೆಗಳಾಗುವರು ಎಂದು ತಾತಯ್ಯನವರು ಹೇಳಿದ್ದಾರೆ.
ಬ್ರೀಟೀಷ್ ಆಡಳಿತವನ್ನು ಕಂಡಿದ್ದ ತಾತಯ್ಯನವರು ಮುಂದೆ ಇನ್ನು ಎಂತಹಾ ದೊರೆಗಳು
ಬರಬಹುದೆಂಬುದನ್ನು ಗ್ರಹಿಸಿ ಇಲ್ಲಿ ಹೇಳಿರುವರು, ಬ್ರೀಟೀಷರು ಸಹಾ ದಳ್ಳಾಳಿಗಳಾಗಿಯೇ ಭಾರತಕ್ಕೆ
ಬಂದವರೆಂಬುದನ್ನು ನಾವು ನೆನೆಯಬಹುದು.
ನಂತರದ ೩ ನೇ ಪದ್ಯದಲ್ಲಿ “ದೊಡ್ಡ
ದೊರಲಿಂಡ್ಲಲೋ – ದೋವತುಲ ಕೊಲುವುನ್ನ ವಾನಿ ಅಧಿಕಾರಮೆವ್ವರಿಕಿ ಲೇದು| ಗ್ರಾಮಧಿಪತಿ ಪಣತಿ – ಗೌಡಿ ಮಾಟಕು ವೆರಚು ದಾನಿ
ಅಧಿಕಾರಮೆವರಿಕಿ ಲೇದು | ಕ್ಷವರಿಕುಡು ಪುಲಿವಂಟಿ – ರಾಜು ಶಿಖ ಪಟ್ಟುಕೊನು ವಾನಿ
ಅಧೀಕಾರಮೆವ್ವರಿಕಿ ಲೇದು | ..............” ( ದೊಡ್ಡ ಅರಸರ ಮನೆಯಲ್ಲಿ ಕೆಲಸ ಮಾಡುವವರು, ಊರ
ಗೌಡನ ಹೆಂಡತಿ, ರಾಜನಿಗೆ ಕ್ಷೌರಮಾಡುವ ಕ್ಷೌರಿಕನು ಇವರಿಗಿರುವ ಅಧಿಕಾರ ಮತ್ತಾರಿಗೂ ಇಲ್ಲ) ಈ
ಸೀಸ ಪದ್ಯದಲ್ಲಿ ತಾತಯ್ಯನವರು ಮನೆಯಲ್ಲಿರುವ ಕೆಲಸದವರು ರಾಜನ ಅನುಪಸ್ಥಿತಿಯಲ್ಲಿ ತಾವೇ ದೊಡ್ಡ
ಅಧಿಕಾರಿಗಳೆಂದು ಭಾವಿಸಿಕೊಂಡು ಜನರೊಂದಿಗೆ ನಡೆದುಕೊಳ್ಳುವರು ಹಾಗೇ ಊರ ಗೌಡನು ತನ್ನ ಹೆಂಡತಿಯ ಮಾತಿಗೆ ಅಂಜುವನು. ಹಾಗೂ ರಾಜನು ಹುಲಿಯಂತಹ
ಪರಾಕ್ರಮಿಯಾದರೂ ಸಹಾ ಕ್ಷೌರಿಕನು ಅವನ ತಲೆಯನ್ನು ಹಿಡಿದುಕೊಂಡು ಕ್ಷೌರಮಾಡುವನೆಂದು ಹೇಳುವರು. ಈ
ಎರಡು ಸೀಸ ಪದ್ಯಗಳು ಸಹಾ ಆಗಿನ ಕಾಲದ ಹಾಗೂ ಈಗಿನ ಪರಿಸ್ಥತಿಗಳೆರಡಕ್ಕೂ ಹೊಂದಿಕೆ ಆಗುವ ಹಾಗೆ
ಇವೆ.
ಇಂದು ದಲ್ಲಾಳಿಗಳೇ ನಮ್ಮನ್ನು
ಆಳುತ್ತಿರುವವರು, ಎಂತಹಾ ರಾಜನಾದರೂ ಕೆಲವು ಸಂಧರ್ಭಗಳಲ್ಲಿ ಕೆಲವರ ಮಾತಿಗೆ ಅಂಜಲೇ ಬೇಕು
ಎಂಬುದನ್ನು ತಾತಯ್ಯನವರು ಈ ರೀತಿಯಾಗಿ ಹೇಳಿರುವರು. ಮುಂದುವರೆದು “ ಪಶುಲ ಮೇತ ಭೂಮಿ – ಪಚ್ಚಿಕೆ
ಕಡು ಗುತ್ತ ಚೆಡ್ಡ ಸ್ತ್ರೀಲು ಗುತ್ತ – ಚೆಟ್ಲು ಗುತ್ತ | ಫಲವೃಕ್ಷಮುಲು ಗುತ್ತ – ಪಂಡ್ಲು
ಗುತ್ತ ಭಿಕ್ಷಗಾಂಡ್ಲಕು ಗುತ್ತ – ಬೀಡು ಗುತ್ತ | ಚಾಕಿರಿವಾಂಡ್ಲಕು ಗುತ್ತ –ಸಾರಾಯಿ ವಕ ಗುತ್ತ
ಹರಿದಾಸುಲಕು ಗುತ್ತ –ಅಡವಿ ಗುತ್ತ | ಮಾಲ ಮಗ್ಗಮು ಗುತ್ತ – ಮಾನ್ಯಗಾಂಡ್ಲಕು ಗುತ್ತ ಚೌಟಮಂಟಕಿ
ಗುತ್ತ- ಚರಮು ಗುತ್ತ ಯೆನ್ನಟಕಿ ಲೇನಿ ಗುತ್ತಲು –ಯೇಲ ಕಲುಗು | ಪ್ರಜಲು ಚೇಸಿನ ಪಾಪಮುನ –ಪ್ರಬಲಮಾಯೇ|..............”(
ಪಶುಗಳ ಮೇವಿಗೂ ಗುತ್ತಿಗೆ ಕೆಟ್ಟಿರುವ ಹೆಣ್ಣು ಗುತ್ತಿಗೆ, ಫಲ ವೃಕ್ಷಗಳು ಗುತ್ತಿಗೆಗೆ , ಹಣ್ಣು
ಹಂಪಲು ಗುತ್ತಿಗೆಗೆ , ಬಿಕ್ಷಕರು , ಬೀಡುಗಳು ಸಹಾ ಗುತ್ತಿಗೆಗೆ, ಸೇವಕರು ಗುತ್ತಿಗೆಗೆ, ಸಾರಾಯಿ
ಮಾರಾಟ ಗುತ್ತಿಗೆಗೆ, ಹೀಗೆ ಕಾಡು, ಹರಿದಾಸರು, ನೇಕಾರರ ಮಗ್ಗ, ಹೀಗೆ ಹಲವಾರು ,ಎಂದಿಗೂ ಇಲ್ಲದ
ಗುತ್ತಿಗೆಗಳು ಏಕೆ ಬಂದವು ? ಇವೆಲ್ಲಾ ಜನರು ಮಾಡಿದ ಪಾಪದ ಫಲವೇ ಆಗಿವೆ ) ಇಲ್ಲಿ
ಗುತ್ತ\ಗುತ್ತಿಗೆ ಎಂಬ ಪದವನ್ನು ಸುಂಕ ತೆರಿಗೆ ಎಂಬ ಅರ್ಥದಲ್ಲಿಯೂ ಬಳಸಲಾಗಿದ್ದು, ಈ ಮಾತುಗಳ ನಮ್ಮ ಇಂದಿನ ಪರಿಸ್ಥಿತಿಗೆ ಹಿಡಿದ ಕನ್ನಡಿಯ
ಹಾಗೇ ಇವೆ.
ಜನರು ತಮ್ಮ ನಾಯಕನನ್ನ ಆರಿಸುವಲ್ಲಿ ತೋರುವ
ನಿರ್ಲಕ್ಷ್ಯ ವನ್ನೇ ಪಾಪ ವೆಂದು ಭಾವಿಸಿಕೊಂಡು ಈಗಿನ ವಾಸ್ತವ ಪರಿಸ್ಥಿತಿಯನ್ನು ಅವಲೋಕನ ಮಾಡಿಕೊಂಡರೇ,
ನಮ್ಮ ಹೊಸ ಹೊಸ ತೆರಿಗೆ ಪದ್ದತಿಗಳು, ಕೃಷಿಗೆ ಸಂಭಂಧಿಸಿದ ಹೊಸ ಹೊಸ ಮಸೂದೆಗಳು, ಕಾರ್ಪೂರೇಟ್
ಸಂಸ್ಥೆಗಳು ಕೃಷಿಯ ಮೇಲೆ ಹಿಡಿತ ಸಾಧಿಸಬೇಕೆಂದು ಪ್ರಯತ್ನಿಸುವುದು. ಇವೆಲ್ಲವನ್ನು ಕುರಿತಾಗಿಯೇ
ತಾತಯ್ಯನವರು ಎಚ್ಚರಿಸುತ್ತಾ ನಾವು ಜಾಗ್ರತೆಯಿಂದ ಇರಬೇಕೆಂದು ಹೇಳಿದಂತಿದೆ. ಅದೇ ರೀತಿ ಹೇಗೆ
ದಲ್ಲಾಳಿಗಳಾದ ಕಾರ್ಪೋರೇಟ್ ವ್ಯವಸ್ಥೆಯ ಕುಳಗಳು ಸರ್ಕಾರವನ್ನು ನಿಯಂತ್ರಿಸುವರು ಎಂಬುದನ್ನು
ಸಹಾ ತಾತಯ್ಯನವರ ಮಾತುಗಳಿಂದ ನಾವು ಗಮನಿಸಬಹುದು.
ಮುಂದುವರೆದು ತಾತಯ್ಯನವರು ಮುಂದೆ
ಸಂಭವಿಸಬಹುದಾದ ಬೀಕರವಾದ ಪ್ರಕೃತಿ ವಿಕೋಪಗಳ ಬಗ್ಗೆ ಬರೆಯುತ್ತಾರೆ. ”ಮುಂದರ ವಕ ಶತಕ
ವತ್ಸರಂಬುಲಲೋನ ವಕ ಮಾಸಮುನಕು ವಕ ಅಲ್ಪವಾನ |
ಕ್ಷಾಮಡಾಮಮು ಜಾತ –ಚೆಡುನು ರಾಜ್ಯಂಬೆಲ್ಲ ಆಮುಡಕು ವಕ ಪಲ್ಲೆ ಅರುದುಗಾನು | ನಾಲ್ಗು
ವಾರ್ಧುಲ ನಡುಮನು –ನರುಲಕೆಲ್ಲ , ಕರುವು ವಚ್ಚುನು ಕೈಲಾಸ ಪತಿ ಸಾಕ್ಷಿ”
(ಮುಂದೆ
ನೂರು ಸಂವತ್ಸರಗಳಲ್ಲಿ ಒಂದು ತಿಂಗಳಿಗೆ ಒಮ್ಮೆ
ಅಲ್ಪವಾಗಿ ಮಳೆಯಾಗುವುದು. ಮುಂದುವರೆದು ರಾಜ್ಯವು ಕ್ಷಾಮಡಾಮರಗಳಿಂದ ಕೆಟ್ಟು ಕಂಗೆಡುವುದು.
ಹಳ್ಳಿಗಳು ವಿರಳವಾಗುವವು. ಲೋಕದ ಪ್ರಜೆಗಳೆಲ್ಲಾ
ಕ್ಷಾಮಕ್ಕೆ ತುತ್ತಾಗುವರು) ಎಂದು ಹೇಳುವರು. ಈ
ರೀತಿಯ ಪರಿಸ್ಥಿತಿಯ ಅನುಭವವನ್ನು ನಾವು ಈಗಾಗಲೇ
ಅನುಭವಿಸಿದ್ದು ದಿನೇ ದಿನೇ ಅದು ಹೆಚ್ಚಾಗುತ್ತಿರುವುದನ್ನು ಸಹಾ ನೋಡುತ್ತಿದೇವೆ. ಹಾಗೇ
ಇವೆಲ್ಲವಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಾನವನೇ ಕಾರಣನಾಗಿದ್ದು ಇದನ್ನೇ ತಾತಯ್ಯನವರು
ನಮಗೆ ಕಾಲಜ್ಞಾನದ ರೂಪದಲ್ಲಿ ಎಚ್ಚರಿಸಿರುವುದನ್ನು ನೊಡಬಹುದು.
ಮುಂದುವರೆದು ಧನಕರುಗಳು ವಿಚಿತ್ರವಾದ
ರೋಗಗಳಿಗೆ ತುತ್ತಾಗುವುದನ್ನು ,ಹಾಗೂ ಉತ್ಪಾತ ಕಾಲದಲ್ಲಿ ಜನರು ತಮ್ಮ ಮಕ್ಕಳನ್ನು ಎತ್ತಿಕೊಂಡು
ಬೀದಿ ಬೀದಿಗಳಲ್ಲಿ ಓಡುವರು ಎಂದು ಮುಂದುವೆರೆದು ಜನರು ಪಡಬೇಕಾದ ಕಷ್ಟಗಳ ಬಗ್ಗೆ ನಂತರದಲ್ಲಿ ಬರುವ
ಒಳ್ಳೆಯ ಕಾಲದ ಬಗ್ಗೆ ತಾತಯ್ಯನವರು ವಿವರಿಸಿದರೇ, ಮುಂದೆ ತಮ್ಮ “ಪ್ರಚಂಡ ನಾರೇಯಣ ಕವಿ ಪದ್ಯಗಳು“
ಎಂಬ ಕೃತಿಯಲ್ಲಿಯೂ ಸಹಾ ತಾತಯ್ಯನವರು ಕಾಲಜ್ಞಾನವನ್ನು ಮುಂದುವರೆಸಿ ಹೇಳಿದ್ದಾರೆ.
ಪ್ರಚಂಡ ನಾರೇಯಣ ಕವಿ ಅಂಕಿತದಲ್ಲಿ
ತಾತಯ್ಯನವರು ಹದಿನೈದು ಪದ್ಯಗಳನ್ನು ರಚಿಸಿದ್ದು ಇವುಗಳಲ್ಲಿ ಬ್ರೀಟೀಷ್ ಆಳ್ವಿಕೆಯ ಕಾಲದ ಪರಸ್ಥಿತಿಯ ಬಗ್ಗೆ, ಬರೆಯುತ್ತಾ
ಅವರುಗಳು ಶೀಘ್ರವಾಗಿಯೇ ಭಾರತವನ್ನು ಬಿಟ್ಟು ಹೊಗಲಿರುವರೆಂದು ಹೇಳುವರು. ಹಾಗೇ ಅಯೋಗ್ಯನಾದ ರಾಜನ
ಆಳ್ವಿಕೆಯ ಕೇಡುಗಳನ್ನು ಈ ಭಾಗದಲ್ಲಿ ವಿವರಿಸುವರು. ಮೊದಲ ಪದ್ಯದಲ್ಲಿಯೇ “ಅಲ್ಪಾಯುಧಸ್ತುಲು –
ಅವನಿಕಿ ದೊರಲೈರಿ ಭೂದೇವತಕು – ಭಾರಮಾಯೇ|
ಅಲ್ಪವಾದ ಆಯುಧಗಳು ವುಳ್ಳವರು ಭೂಮಿಯ ಒಡೆಯರಾಗಿರುವರು, ಇವರಿಂದ ಭೂಮಿಗೆ ಭಾರವಾಗಿದೆ
ಎಂದು ಪ್ರಾರಂಭಿಸಿ ತಮ್ಮ ಮುಂದಿನ ಪದ್ಯಗಳಲ್ಲಿ “ವಾನರುಲ ವಸುಧ ಪಾಲನ ತೀರೆನು ಇಕಮೀದ ಲೇದು –
ವಚ್ಚೇನು ಅಂತ್ಯಂ | ಎಂದು ಪರಂಗಿಯವರನ್ನು ವಾನರರಿಗೆ ಹೊಲಿಸಿ ಅವರ ಪಾಲನೆಯು ತೀರಿದೆ ಇದಕ್ಕೆ
ಅಂತ್ಯ ಬರಲಿದೆ ಎಂದು ಹೇಳುವರು.
ಮುಂದುವರೆದು “ಪಂಟ ಪಂಡಿನ ಕರುವು – ಪಂಟ
ಯೆಂಡಿನ ಕರುವು ಪ್ರಜಲೆಟ್ಲು ಬ್ರದಿಕೇರು ಪ್ರಾಪಂಚಮಂದು |” ಇಲ್ಲಿ ಬೆಳೆ ಬೆಳೆದರೂ ಸಹಾ ಬೆಳೆ
ಆಗದೇ ಇದ್ದರೂ ಸಹಾ ಪ್ರಪಂಚದಲ್ಲಿ ಬರ ಅಥವಾ ರೈತರ ಕಷ್ಟಗಳು ಎಂದಿಗೂ ತೀರುವುದಿಲ್ಲ ಎಂದು
ತಾತಯ್ಯನವರು ಹೇಳಿವರು. ಮುಂದೆ “ಚೋರುಲ ಪಟ್ಟಂಬಾಯೆನು – ರಾಜೆವ್ವಡು ಲೇಕಪೋಯೆ .......”
ರಾಜನೆಂಬವನು ಇಲ್ಲದೇ ಹೋದರೆ ರಾಜ್ಯವು ಚೋರರ ಪಟ್ಟಣವಾಗುವುದು ಎಂದು ತಾತಯ್ಯನವರು ಹೇಳಿರುವ
ಮಾತನ್ನು ನಮ್ಮ ಇಂದಿನ ಪರಿಸ್ಥಿತಿಗೆ ಸೂಕ್ತವಾಗಿ ಅನ್ವಯಿಸಿಕೊಳ್ಳಬಹುದಾಗಿದೆ.
ಮುಂದಿನ ಮೂರು ಪದ್ಯಗಳಲ್ಲಿ ತಾತಯ್ಯನವರು “ಪಾಪಮು
ಹೆಚ್ಚಾಯ – ಪಟ್ಟಭದ್ರುಲು ದ್ರೋಹಿ ಪಾಡಾಯ ರಾಜ್ಯಮು – ಪ್ರಜಲು ಚೆಡಿರಿ ”ಅಲ್ಪಬುದ್ಧಿ ಪುಟ್ಟಿ –
ಅಂದರಿನಿ ವರುಸಗಾ ಕುಲಬ್ರಷ್ಟು ಚೇಯ – ಬೂನಿನಾಡು “ “ವಿಪ್ರುಲ ಪಾಲಾಯ – ಇರಸಾಲು ನಾಣ್ಯಾಲು
ನಾಲ್ಗಿಂಟ ವಕ ಪಾಲು ನಗರು ಚೇರು | ವ್ಯದವ ದೊರೆತನಮಾಯ – ಏಮನವಚ್ಚುರಾ .....” ಎಂದು ಹೇಳುವರು.
ಇದರ ಅರ್ಥ ರಾಜನು ಅಯೋಗ್ಯನಾದರೇ ಅವನಿಂದ ರಾಜ್ಯವೆಲ್ಲಾ ಹಾಳಾಗುವುದು, ರಾಜ್ಯವು ದ್ರೋಹಿಗಳ ಪಾಲಾಗುವುದು,
ಅವನ ಅಲ್ಪಬುದ್ಧಿಯ ಕಾರಣದಿಂದಾಗಿ ಪ್ರಜೆಗಳೆಲ್ಲರೂ ಕುಲಬ್ರಷ್ಟರಾಗುವರು, ಸರ್ಕಾರಕ್ಕೆ ಆ ಮೂಲಕ
ಜನರಿಗೆ ಸೇರಬೇಕಾದ ಕಂದಾಯದ ಹಣವೆಲ್ಲಾ ವಿಪ್ರರ ಬ್ರಾಹ್ಮಣರ /ಅಧಿಕಾರಿ ವರ್ಗದವರ ಪಾಲಾಗುವುದು, ಅಯೋಗ್ಯನ ಆಳ್ವಿಕೆಯಲ್ಲಿ ಇವೆಲ್ಲವೂ
ಜರುಗುವೆಂದು ತಾತಯ್ಯನವರು ವಿವರವಾಗಿ
ಹೇಳಿರುವರು. ಈ ಮಾತುಗಳು ಹಿಂದೆಂದಿಗಿಂತಲೂ ಈಗಿನ ಪರಿಸ್ಥಿತಿಗೆ ನಮಗೆ ಅತ್ಯಂತ ಸೂಕ್ತವಾಗಿ
ಹೊಂದಾಣಿಕೆಯಾಗುವುದನ್ನು ನಾವು ಗಮನಿಸಬಹುದಾಗಿದೆ.
ಹೀಗೆ ನಾರೇಯಣಪ್ಪನವರು ತಮ್ಮ ಎರಡು
ಕಾಲಜ್ಞಾನ ಕೃತಿಗಳಲ್ಲಿ ಮುಂದೆ ನಡೆಯುವ ವಿಚಾರಗಳನ್ನು ತಮ್ಮದೇ ಆದ ದೂರದೃಷ್ಠಿಯಲ್ಲಿ
ಹೇಳಿರುವರು. ಈಗಾಗಲೇ ತಿಳಿಸಿರುವಂತೆ ತಾತಯ್ಯನವರ ಕಾಲಜ್ಞಾನವನ್ನು ಯಾವುದೇ ಅಮೂರ್ತದ ಕಲ್ಪನೆಯ
ಹಿನ್ನೆಲೆಯಲ್ಲಿ ನೋಡುವುದಕ್ಕಿಂತಲೂ ಈ ರೀತಿಯಾಗಿ ಅರ್ಥಮಾಡಿಕೊಳ್ಳುವುದು ಸೂಕ್ತ ಹಾಗೂ ಈ ವಿಧಾನ
ಈಗಿನ ಕಾಲಕ್ಕೆ ಹೆಚ್ಚು ಪ್ರಸ್ತುತ. ನಾರೇಯಣಪ್ಪನವರು ತಮ್ಮ ಮುಂದಿನ ಜನಾಂಗಕ್ಕೆ ಬದುಕುವ
ಉಳಿದವರನ್ನು ಬದುಕಲು ಬಿಡುವ ಉದ್ದೇಶದ ಹಿನ್ನೆಲೆಯಲ್ಲಿ ಅವರನ್ನು ಎಚ್ಚರಿಸುವ ರೀತಿಯಲ್ಲಿ ಈ
ಕೃತಿಗಳನ್ನು ರಚಿಸಿರುವರೆಂದು ನಾವು ಭಾವಿಸುವುದು ಸೂಕ್ತ.
ನಾರೇಯಣಪ್ಪನವರು ರಚಿಸಿರುವ ಎಲ್ಲಾ
ಕಾಲಜ್ಞಾನದ ಪದ್ಯಗಳನ್ನು ಸಹಾ ಇದೇ ರೀತಿಯಲ್ಲಿಯೇ ಅರ್ಥೈಸಿಕೊಳ್ಳುವುದೇ ಸಾಧ್ಯವೇ ಎಂಬ
ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಈ ವಿಚಾರದಲ್ಲಿ ಹಲವು ಗೊಂದಲಗಳು ಸಹಾ ಇವೆ. ಸ್ವತಃ
ನಾರೇಣಪ್ಪನವರೇ ಇದು ದೈವವೇ ತನ್ನ ಭಾಯಿಂದ ನುಡಿಸಿದ ಕಾಲಜ್ಞಾನವೆಂದು ಹೇಳಿರುವುದು ಹಾಗೂ ಕೆಲವು
ಕಾಲಜ್ಞಾನದ ವಚನಗಳು ಕೆಲವು ರೀತಿಯ ಅಮೂರ್ತ ಹಾಗೂ ಆಶ್ಚರ್ಯಕ್ಕೆ ಕಾರಣವಾಗುವ ವಿಚಾರಗಳನ್ನು
ಹೇಳುವುದು ಈ ಗೊಂದಲಕ್ಕೆ ಕಾರಣ. ಬಹುಷಃ ಹಿಂದೆ
ಚರ್ಚಿಸಿದ ಹಾಗೇ ಈ ಕಾಲಜ್ಷಾನ ನಾರೇಣಪ್ಪನವರ
ತತ್ವಪದಗಳಷ್ಟು ಅವರ ಕಾಲಜ್ಞಾನ ಜನರಿಗೆ ಹತ್ತಿರವಾಗದಿರುವದಕ್ಕೆ ಕಾರಣವಿರಬಹುದು. ಹಾಗಾಗಿ ಇಲ್ಲಿ
ಚರ್ಚೆಗೆ ತೆಗೆದುಕೊಂಡಿರುವ ಎಲ್ಲಾ ವಿವರಗಳು ನಾರೇಣಪ್ಪನವರನ್ನು ಹಾಗೂ ಅವರ
ಕಾಲಜ್ಞಾನವನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು
ಕಂಡಿತಾ ಸಹಾಯಕವಾಗುವವೆಂದು ಹೇಳಬಹುದು.
ಕೈವಾರ ನಾರೇಣಪ್ಪನವರ ಕಾಲಜ್ಞಾನ ಕೃತಿಗಳ
ಮಾಡಿಕೊಂಡು ಕಾಲಜ್ಞಾನದ ಕುರಿತಾದ ಕೆಲವು ಅಪಕಲ್ಪನೆಗಳನ್ನು ದೂರಾಗಿಸಿಕೊಂಡು. ಅವುಗಳಲ್ಲಿ ಕೆಲವು
ವಿಚಾರಗಳನ್ನು ಈಗಿನ ಕಾಲಕ್ಕೆ ಅನ್ವಯಿಸಿಕೊಂಡು ಅರ್ಥಮಾಡಿಕೊಳ್ಖಲು ಆ ಮೂಲಕ ನಾರೇಣಪ್ಪನವರನ್ನು
ಹಾಗೂ ಅವರ ಕಾಲಜ್ಞಾನವನ್ನು ನಮ್ಮ ಹತ್ತಿರಕ್ಕೆ ತೆಗೆದುಕೊಂಡು ಅದರ ಪ್ರಸ್ತುತತೆಯನ್ನು
ಅರ್ಥಮಾಡಕೊಳ್ಳುವ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡಬಹುದು.
ಗ್ರಂಥಋಣ :
೧)
ಕಾಲಜ್ಞಾನ ಸೂಕ್ಷ್ಮ ಭೀಮಲಿಂಗ ಶತಕಮು ; ಕೈವಾರ ಯೋಗಿ ನಾರೇಣಪ್ಪ ; ಯೋಗಿ ನಾರೇಯಣ ಆಶ್ರಮ
ಟ್ರಸ್ಟ್ ಕೈವಾರ. - ೧೯೮೨
೨)ಪ್ರಚಂಡ
ನಾರೇಯಣ ಕವಿ ಪದ್ಯಮುಲು ; ಕೈವಾರ ಯೋಗಿ ನಾರೇಣಪ್ಪ ; ಯೋಗಿ ನಾರೇಯಣ ಆಶ್ರಮ
ಟ್ರಸ್ಟ್ ಕೈವಾರ. - ೧೯೮೨
೩) ಅಂತರ್ಜಾಲ ಮೂಲದ ಮಾಹಿತಿ.

Comments
Post a Comment