ಆಧುನಿಕ ಕಾವ್ಯ ಪರಂಪರೆಯಲ್ಲಿ ಭಾಷೆ ಹಾಗೂ ಛಂಧಸ್ಸು.

 


(ಚಿತ್ರ ಕೃಪೆ : ಅಂತರ್ಜಾಲ )


ಆಧುನಿಕ ಕಾವ್ಯ ಪರಂಪರೆಯಲ್ಲಿ ಭಾಷೆ ಹಾಗೂ ಛಂಧಸ್ಸು.

ಆಧುನಿಕ ಕಾವ್ಯ ಪರಂಪರೆ: ಆಧುನಿಕ ಕಾವ್ಯ ಪರಂಪರೆಯನ್ನು ಇಪ್ಪತ್ತನೇ ಶತಮಾನದಿಂದ ಗುರ್ತಿಸುತ್ತೇವೆ. ಇಂಗ್ಲೀಷ್‌ ಸಾಹಿತ್ಯದ ಪ್ರಭಾವದಿಂದ ಕನ್ನಡ ಸಾಹಿತ್ಯವು ಈ ಕಾಲಘಟ್ಟದಲ್ಲಿ ಹಿಂದಿನ ಸಾಹಿತ್ಯಕ್ಕಿಂತ ಭಿನ್ನವಾದ ಹೊಸ ಹುಟ್ಟನ್ನು ಪಡೆದು, ಅದರಲ್ಲಿ ಮುಖ್ಯವಾಗಿ ಕಾದಂಬರಿ, ನಾಟಕ, ಪ್ರಭಂಧ, ವಿಮರ್ಶೆ,ಕಾವ್ಯ, ಕವನ, ಭಾವಗೀತೆ ಮುಂತಾದವು ವಿಫುಲವಾಗಿ ಬೆಳೆದವು. ಅದರಲ್ಲಿಯೂ ಕಾವ್ಯ ಆಧುನಿಕ ಸಾಹಿತ್ಯದ  ಬಹುಮುಖ್ಯ ಅಭಿವ್ಯಕ್ತಿ ಮಾಧ್ಯಮವಾಗಿದೆ.

ಭಾರತೀಯ ಸಾಹಿತ್ಯದಲ್ಲಿ ಪ್ರಾಚೀನ ಕಾಲದಿಂದಲೂ  ಮಹಾಕಾವ್ಯಗಳ ಮಹೋನ್ನತವಾದ ಪರಂಪರೆ ಇದೆ. ಪ್ರಾಚೀನ ಕಾಲದಿಂದಲೂ ಜಾನಪದ ಹಾಗೂ ಶಿಷ್ಟಪದ ಎರಡೂ ರೂಪಗಳಲ್ಲಿಯೂ  ಕಾವ್ಯ ಪ್ರಕಾರ ಇದ್ದುದರಿಂದ ಆಧುನಿಕ ಸಾಹಿತ್ಯಕ್ಕೆ ಕಾವ್ಯ ಹೊಸದೇನು ಅಲ್ಲ. ಆದರೆ ಆಧುನಿಕ ಕಾಲಕ್ಕೆ ಹಾಗೂ ಸಾಹಿತ್ಯ ಘಟ್ಟಗಳ ಪರಿವರ್ತನೆಗೆ ಅನುಗುಣವಾಗಿ ಕಾವ್ಯ ತನ್ನ ಸ್ವರೂಪ ದಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಕೆಲವು ಕಡೆ ಹಾಗೆಯೇ ಉಳಿಸಿಕೊಂಡು ಬಂದಿರುವುದು ವಿಶೇಷ.

ಆಧುನಿಕ ಕಾವ್ಯ ಪರಂಪರೆ ಬೇರೆ ಬೇರೆ ಸಾಹಿತ್ಯ  ಘಟ್ಟಗಳಲ್ಲಿ ತನ್ನನ್ನು ತಾನು ಹೊಂದಿಸಿಕೊಳ್ಳುತ್ತಾ, ಪರಿವರ್ತನೆಗೊಳ್ಳುತ್ತಾ ಬಂದದನ್ನು, ಇಂತಹಾ ಬದಲಾವಣೆಯ ನಡುವೆಯೂ ಸಹಾ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡು ಬಂದಿರುವುದನ್ನು ಭಾಷೆ ಹಾಗೂ ಛಂದಸ್ಸುಗಳ ಹಿನ್ನೆಲೆಯಲ್ಲಿ ಈ ಲೇಖನದಲ್ಲಿ ಗಮನಿಸಬಹುದು.

 ಮೊದಲಿಗೆ ಕುವೆಂಪು ರವರ   ಮಹಾಕಾವ್ಯ ಶ್ರೀರಾಮಾಯಣ ದರ್ಶನಂ ನಲ್ಲಿ, ಹಳಗನ್ನಡ ಹೊಸಗನ್ನಡ ನಡುಗನ್ನಡ ಪದಗಳು ಹೆಚ್ಚಾಗಿ ಬಳಕೆ ಆಗಿವೆ. ಕುವೆಂಪುರವರ ಭಾಷೆ  ಶ್ರೀ ರಾಮಾಯಣ ದರ್ಶನಂನಲ್ಲಿ ಜನರ ಭಾಷೆಗಿಂತಲೂ ಬಿನ್ನವಾಗಿರುವುದನ್ನು ಗಮನಿಸಬಹುದಾಗಿದೆ. ಅದೇ ರೀತಿ ಹಳಗನ್ನಡ, ನಡುಗನ್ನಡ ಭಾಷಾ ಪ್ರಯೋಗಗಳ ಸಮಿಶ್ರಣ ರಾಮಾಯಣ ದರ್ಶನಂನಲ್ಲಿದೆ.

ಕೆಲವು ಕಡೆ ಹಳಗನ್ನಡ ಪ್ರಮುಖವಾಗಿರುವುದು, ಮತ್ತೆ ಕೆಲವು ಕಡೆ ಹಳಗನ್ನಡ ಶೈಲಿ ಮತ್ತೆ ಕೆಲವು ಕಡೆ ಸಂಸ್ಕೃತ ಭೂಯಿಶ್ಠ ಶೈಲಿ, ಇವುಗಳ ನಡುವೆ ಅಲಲ್ಲಿ ಆಡುಮಾತಿನ ಸೊಗಸುಗಳನ್ನು ಅವಶ್ಯಕತೆ ಹಾಗೂ ಕಾವ್ಯ ಸೌಂದರ್ಯದ ದೃಷ್ಟಿಯಲ್ಲಿ ಕಟ್ಟಿರುವುದನ್ನು ಶ್ರೀ ರಾಮಾಯಣ ದರ್ಶನಂ ನಲ್ಲಿ ನೊಡಬಹುದು,  ಕೆಲವು ಉದಾಹರಣೆಗಳನ್ನು ನೊಡುವುದಾದರೇ,  ʼಪಾಳ್‌ ಕಣ್ಗಳಿವೆ ಕಾರಣಂ, ನಿನ್ನ ರೂಪಲ್ತುʼ                       ʼಸಾಕೇತ ಜನಮನ ವನಧಿ ಪೆರ್ಚುವೋಲಂತೆʼ  ಈ ಉದಾಹರಣೆಗಳಲ್ಲಿ ಪಾಳ್‌ ,ಪೆರ್ಚು ಪದಗಳಲ್ಲಿ ʼಹʼ ಕಾರಕ್ಕೆ ಬದಲಾಗಿ ʼಪʼ ಕಾರವನ್ನು ಬಳಸಿರುವುದನ್ನು ಕಾಣಬಹುದು,  ಅದೇ ರೀತಿ ಕೆಲವು ಕಡೆ ʼಹಣ್ಣಿಗೆಳಸಿದ ಕಣ್ಗೆ ಹುಳಿಸಿಡಿದವೋಲಾಯ್ತುʼ  ʼಹಾಳು ಹಂಪೆಯ ಹೊಕ್ಕ ಕನ್ನಡಿಗರಂತಾದರೈ ಕುದಿವೆದೆಯ ಭರತನುಂʼ  ಹೀಗೆ ಹಲವು ಕಡೆ ʼಹʼ ಕಾರದ ಪ್ರಯೋಗವನ್ನೇ ಗುರುತಿಸಬಹುದು.

ಇನ್ನು ಮುಂದುವರೆದು ನೋಡುವುದಾದರೇ,  ʼತಾನ್ಮೊರೆ ತಿರುಗುತಿರಲರಮನೆಯ ಸಿರಿ ದೋಂಟದೊಳ್‌ʼ   ʼಗದ್ದೆ ತೋಟಗಳೆಡೆಯೆ ಹುಲ್ಲು ಸೋಗೆಯ ಹೊದೆದುʼ  ಇಲ್ಲಿನ ತೊಟ –ತೋಂಟ ಪದಗಳನ್ನು ಗಮನಿಸಬಹುದು, ಇದೇ ರೀತಿ ವ್ಯಂಜನಾಂತ ಶಬ್ದಗಳು, ಸ್ವರಾಂತ ಶಬ್ದಗಳ ಬಳಕೆ, ಹಾಗೇ ಹಳಗನ್ನಡ ವಿಭಕ್ತಿ ಪ್ರತ್ಯೆಯಗಳು ಹಾಗೂ ಹೊಸಗನ್ನಡ ವಿಭಕ್ತಿ ಪ್ರತ್ಯೆಯಗಳ ಬಳಕೆಗಳನ್ನು ಇಲ್ಲಿ ಗುರ್ತಿಸಬಹುದು. ಅದೇ ರೀತಿ  “ಮೆಯ್ ಸಿರಿಗೆ ಷೋಡಶ ವಸಂತ ವೀಚಿಯನೊತ್ತಿ ಪ್ರವಹಿಸಿತು ಕಾಲನದಿ ರಾಮಲಕ್ಷ್ಮಣ ಭರತ ಶತ್ರುಘ್ನ ಜೀವನದಿ,  “…… ಮೊಗ್ಗಿನಿಂದಿರಿಯುವರೇ ಕಗ್ಗಲಬಂಡೆಯಂ ?, ಕದಳಿಯೆಳೆಕಂದಿನಿಂ ಸಿಡಿಲ ತಡೆಯಲಹುದೆ ? “…..ಲೇಸಾಯ್ತು ನಿನ್ನ ಮತಿ ! ಬಹುಕಾಲಮರಮನೆಯ ಸುಖಸೋಮಪಾನಮಂ ಗೈದು ಪಲ್ಲಟವಾಯ್ತೆ ಸದ್ಭುದ್ಧಿ ? ……….. ನಿನ್ನ ಕಂದಗೆ ನೀನೆ ಮೀಳ್ತು. …. .. ವೈರಿ ಬೇರುಂಟೆ ಲೋಕದಿ ಸವತಿಮಗನಿಂ ? “

ಇವು ಕುವೆಂಪುರವರ ಭಾಷಾ ಬಳಕೆಯ ವೈಶಿಷ್ಟ್ಯತೆಯನ್ನು ತಿಳಿಸುವ ಒಂದೆರಡು ಉದಾಹರಣೆಗಳಾದರೇ , ಕುವೆಂಪು ರವರು ಕೆಲವು ಅಚ್ಚಗನ್ನಡ ಪ್ರಯೋಗಗಳನ್ನು ಸಹಾ ಬಳಸಿದ್ದು ಅದನ್ನು ಮುಂದಿನ ಉದಾಹರಣೆಯಲ್ಲಿ ಗಮನಿಸಬಹುದಾಗಿದೆ. “ ಬನ್ನಿಗಂಬವ ಹೂಡಿ, ಬಿದಿರ ತೊಲೆ ಮಾಡಿ, ಹುಲ್ಲೆಲೆಗಳಂ ಹೊದಿಸಿ, ಹೆಡಗೆವಳ್ಳಿಯಂ ಸೀಳಿ ಸಲಕಂ ಬಿಗಿದು ಕಟ್ಟಿ, ಹಂಬು ಬೆತ್ತವ ಕಡಿದು ಸಿಗಿದು, ತಟ್ಟಿಯ ಹಣೆದು, ತಡಿಕೆ ಗೋಡೆಯನಿಟ್ಟು, ಬಿಳಕಿಂಡಿಯಂ ಬಿಟ್ಟು  ಹುತ್ತದೆರೆಯಂ …..”

ಇನ್ನು ಈ ಕಾಲದ ಮತ್ತೊಂದು ಪ್ರಮುಖ ಕಾವ್ಯ ಮಾಸ್ತಿ ಯವರ ʼಶ್ರೀ ರಾಮ ಪಟ್ಟಾಭಿಷೇಕʼ ಕೃತಿಯು ಭಾಷಾ ದೃಷ್ಟಿಯಿಂದ ಶ್ರೀರಾಮ ಪಟ್ಟಾಭಿಷೇಕವು ಸಾಮಾನ್ಯರಿಗೆ ಸುಲಭವಾಗಿಯೇ ಅರ್ಥವಾಗುವಂತಹ ಸರಳ ಹಾಗೂ ಸುಂದರ ಕಾವ್ಯವಾಗಿದೆ. ಪದ್ಯದಲ್ಲಿ ಸಂಪೂರ್ಣ ರಾಮಾಯಣವನ್ನು ಸರಳ ರಗಳೆಯಲ್ಲಿ ೯ ಸಾವಿರಕ್ಕೂ ಹೆಚ್ಚು ಸಾಲುಗಳಲ್ಲಿ ತುಂಬಾ ಸೊಗಸಾಗಿ ಮೂಡಿಸಿದ್ದಾರೆ. ಮಾಸ್ತಿ ರವರ ಕಾವ್ಯಗಳಲ್ಲೇ ಇದು ಆಚಾರ್ಯ ಕೃತಿಯೆನಿಸಿದೆ. ಮಾಸ್ತಿರವರ ಸರಳ ಭಾಷಾ ಶೈಲಿಗೆ ಮುಂದಿನ ಪದ್ಯ ಉತ್ತಮ ಉದಾಹರಣೆಯಾಗಿದೆ. “ ಅರಮನೆಯ ಒಂದೊಂದು ತೊಟ್ಟಯಲು ನಾಲ್ದೆಸೆಗೆ ಪಡುಸಾಲೆ, ಮಧ್ಯೆ ಬಿಸಿಲಿಗೆ ತೆರೆದ ಅಂಗಳ, ವಿಸ್ತಾರವಾಗಿಹವು, ಅಂಗಳದಿ ತಿಳಿನೀರ ಕೊಳಗಳಿರುವುವು. ಕೊಳಗಳನು ಸುತ್ತಿ ಹುಲ್ಲು, ಹೂ ತುಂಬಿರುವ ಗಿಡಬಳ್ಳಿಗಳು ………..”  “ ಪಟ್ಟಾಭಿಷೇಕದುತ್ಸವ ಇಂತು ಮುಗಿದಿರಲು ಶ್ರೀ ರಾಮ ಚಂದ್ರ ಸೋದರರೊಡನೆ ರಾಜ್ಯವನು ಆಳತೊಡಗಿದರು.  ಪ್ರಭು ಧರ್ಮೀಷ್ಟ ಎಂಬುದೇ ನಾಡಲೆಲ್ಲಾ ತೆರನ ಸಿರಿಯ ನೆಲೆಮನೆಮಾಡಿ ಕಾಪಿಟ್ಟು ನೋಡಿಕೊಂಡಿತ್ತು. ರಾಮನಾಳುತಿರೆ ನಾಡಿನಲ್ಲಿ ವಿಧವೆಯರು ಅಳಲಿಲ್ಲ;  ವ್ಯಾಳಗಳ ಭಯವಿಲ್ಲ , ರೋಗರುಜಿನದ ಭೀತಿ ಇರಲಿಲ್ಲ “

ಇನ್ನು ಪು ತಿ ನ ರವರ ಶ್ರೀ ಹರಿ ಚರಿತೆ ಹಾಗೂ ಮಲೆದೇಗುಲ ಗಣೇಶ ದರ್ಶನ ಶಬರಿ  ಕಾವ್ಯಗಳನ್ನು ರಚಿಸಿದ್ದು, ಇವು ಈ ಹಿಂದೆ ಚರ್ಚಿಸಿದ ಎರಡೂ ಕೃತಿಗಳಿಗಿಂತ ಬಹಳ ಬಿನ್ನವಾದ ಕಾವ್ಯಗಳಾಗಿವೆ.  “……… ಗೋವಳರೆಳೆಯರಾಡುಂಬೊಲಂ ಸಂಹೃಷ್ಟ ಖಗಮೃಗ ಸ್ವನ ವನ ಸಮೃದ್ಧಮ್‌, ದುಷ್ಟಮದ ಮರ್ದನ ಚತುರ ಹರಿಚರಣ ಸಂಚರಣ ಸನ್ಮಾನಿತಮ್‌ ? ಸಾಧುಮನದೊಳಗಲ್ಲದಿನ್ನೆಲ್ಲಿಹುದು  ಬೃಂದಾವನಂ? ʼʼ ಶ್ರೀ ಹರಿ ಚರಿತೆಯ ಈ ಪದ್ಯವನ್ನು ಗಮನಿಸಿದಾಗ ಇದು ಸಂಸ್ಕೃತಮಯವಾಗಿರುವುದು ತಿಳಿಯುತ್ತೆ .

 “ ಅವ ಸವಿದಲ್ಲದೇ ಸವಿಯಾಗದ ಈ ಕಡುಸವಿ ಹಣ್ಗಳನೇಗೆಯ್ಯೆಂ ಮಧುಕರಗೀತದ ಮಧು ಊರಿರುವೀ ಮಧುಪರ್ಕವ ನಾನಾರ್ಗೀವೆಂ”  ಶಬರಿ ಕವ್ಯಾದ ಈ ಪದ್ಯವು ಸಹಾ ಸಂಸ್ಕೃತಮಯ. ಹಾಗೇ ಪುತಿನ ರವರು ತಮ್ಮ ಮಲೆದೇಗುಲದ  “ಗುಡಿಯಿದಿರ ಮಣಿಗೆಯೇ, ಭೂಮಾ ವಿನಮ್ರತೆಯೆ ದುರ್ಭರಾಹಂಕಾರ ದಮನ ವಿಧಿಯೇ ಆನಂದ ವರಣದೊಳು ಸುಖಯಜ್ಞ ಕಲ್ಪವೇ ತರ್ಕಧೀಧಿರಗರಳಶಮನ ಸುಧೆಯೇ “   ಈ ಪದ್ಯವು ಸಹಾ ಸಂಸ್ಕೃತಮಯವಾಗಿಯೇ ಇದ್ದು, ಅತ್ಯಂತ ಸುಂದರವಾದ ಶಬ್ದಶಕ್ತಿಯನ್ನು ಒಳಗೊಂಡಿದೆ.

ಇನ್ನು ಮುಂದೆ ಕಂಬಾರರ ಮಹಾಕಾವ್ಯವಾದ ಚಕೋರಿಯನ್ನು ನೋಡುವುದಾದರೆ,  “ಆಕಾಶ ನೀಲಿಮದ ಚಂದ್ರನೊಳಗಿಂದ ಚಂಗನೆ ಹೊರಕ್ಕೆ ನೆಗೆಯಿತು ಜಿಂಕೆಮರಿ. ಎಳೆಯ ಜಿಂಕೆಮರಿ ಹೊಳೆವ ಜಿಂಕೆಮರಿ ಕೆಳಕ್ಕಿಳಿದು ನೇರ ಕೆರೆಗೇ ಬಂತು ಬಾಯಾರಿಕೆಗೆ. ಬಾಯಿ ಹಾಕಿದ್ದೇ ನೀರಲ್ಲಿ ಕಂಡಿತು ಇನ್ನೊಂದು ಜಿಂಕೆಮರಿ ಗುರುತಿಲ್ಲದ ಮರಿಯೆಂದು ಸ್ನೇಹದಲ್ಲಿ ಮೂಸಿ ಮುದ್ದಾಡಿ ಕೊಂಬಿನಲ್ಲಿ ತಿವಿದಾಡಿದಾಗ“ ಇಲ್ಲಿಯ ಭಾಷೆ ಸರಳವಾಗಿದೆ. ಜಿಂಕೆಮರಿಯೊಂದು ತನ್ನ ನೆರಳನ್ನು ನೀರಿನಲ್ಲಿ ಕಂಡು ಅದನ್ನು ಮತ್ತೊಂದು ಜಿಂಕೆಯೆಂದು ಭಾವಿಸಿ ಮುದ್ದಾಡುವುದನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು.

 ಇನ್ನು ಖಂಡ ಕಾವ್ಯಗಳಿಗೆ ಪ್ರಸಿದ್ಧರಾದ ಕೆ ಬಿ ಸಿದ್ಧಯ್ಯ ನವರ ಬಕಾಲ, ಹಾಗೂ ಗಿಲ್ಲೇಭಾನಿ ಮುಂತಾದ ಕಾವ್ಯಗಳನ್ನು ನೊಡಿದರೇ, “ತಾಯಂದಿರೇ ನನ್ನ ಅಂಗೈಯಲ್ಲಾಡುವ ಮುಟ್ಟಬಾರದ ಕೂಸಿಗೊಂದು ಹೆಸರಕೊಡಿ, ಹೆಸರಕೊಡಿ ʼʼ     ʼʼತೀರಿ ಹೋಗಲೆಂದು ಸಾಲ ಇಡೀ ದೇಹ ಮಾರಿಬಿಟ್ಟೆ ಮೂರು ಕಾಸಿಗೆ ಕೊಲ್ಲುವವರೂ ಕೊಳ್ಳಲಿಲ್ಲ ಮಡಿಯುವವರೂ ಮುಟ್ಟಲಿಲ್ಲ ಇರಲಿ ಬಿಡು ದೇಹ ಹೋಗಲಿ ಬಿಡು ನನ್ನ ದೇಹ …… ಮೆಟ್ಟಿ ಮೆಟ್ಟೀ ಬಿಟ್ಟುಬಿಟ್ಟೆ ಮೆಟ್ಟು ಬಿಡುವ ಜಾಗದಲ್ಲಿ, ಹೀಗೆ ತುಂಬಾ ಸುಲಭ ಹಾಗೂ ಸುಂದರವಾಗಿ ಮುಂದುವರೆಯುತ್ತದೆ.

ಮತ್ತೊಂದು ಮಹಾಕಾವ್ಯ ಚೆನ್ನಣವಾಲೀಕಾರರ ವ್ಯೋಮಾ ವ್ಯೋಮ ವನ್ನು ಗಮನಿಸಿದರೆ , ಅದು ಉಳಿದ ಎಲ್ಲಾ ಕೃತಿಗಳಿಗಿಂತ ಭಿನ್ನವೂ ವಿಶಿಷ್ಟವೂ ಆಗಿದೆ. ಇದು ಎಲ್ಲಾ  ಸಂಪ್ರದಾಯಿಕ ಅಭಿವ್ಯಕ್ತಿ ಕ್ರಮಗಳನ್ನು ಅಲ್ಲಗೆಳೆದು ,ಲೋಕ ಗ್ರಹಿಕೆಯ ಚಲನಶೀಲ ಮಾದರಿಯೊಂದನ್ನು ಕಟ್ಟಿಕೊಡುತ್ತದೆ. ಒಂದೇ ಒಂದು ಪೂರ್ಣವುರಾಮ , ಅಲ್ಪವಿರಾಮವೂ ಇಲ್ಲದೇ , ಒಂದೇ ವಾಕ್ಯದಂತೆ ಅತ್ತ ಗದ್ಯವೆಂದು ಇತ್ತ ಪದ್ಯವೆಂದು ಹೇಳಲಾಗದ ಒಂದು ವಿಶಿಷ್ಟವಾದ ಲಯದಲ್ಲಿ ಕಾವ್ಯ ಸಾಗುವುದನ್ನು ನೊಡಬಹುದು.

 ಹೀಗೆ ಕಾಲದಿಂದ ಕಾಲಕ್ಕೆ ಆಧುನಿಕ ಕಾವ್ಯಗಳ  ಭಾಷಾ ಪ್ರಯೋಗ ಒಂದು ಕಡೆ ಬದಲಾದಂತೆ ಸುಲಭವಾದಂತೆ ಕಂಡರೆ, ಹಲವು ಕೆಡೆ ಕಾವ್ಯದ ಭಾಷಾ ಪ್ರಯೋಗ ಪಾಚೀನ ಕನ್ನಡ  ಕಾವ್ಯಗಳಂತೆಯೇ ತೊರುತ್ತದೆ.  ಕುವೆಂಪುರವರ ಕಾವ್ಯದ  ಬಾಷೆ ಸ್ವಲ್ಪ ಹೀಗೆಯೇ.

ಇನ್ನು ಪು ತಿ ನ ರವರ ಭಾಷೆ ಕವೆಂಪುರವರ ಭಾಷೆಗಿಂತ ಹೆಚ್ಚು ಸಂಸ್ಕೃತಮಯ ವಾಗಿದ್ದರೇ, ಮಾಸ್ತಿರವರ ಶ್ರೀ ರಾಮ ಪಟ್ಟಾಭಿಷೇಕದ ಭಾಷೆ ಸ್ವಲ್ಪ ಸರಳ ವಾಗಿದ್ದು ,ಸಿದ್ದಯ್ಯನವರ ಕಾವ್ಯದ ಭಾಷೆ ಆಡುಭಾಷೆಗೆ ಹತ್ತಿರವಾಗಿದ್ದರೆ, ಚೆನ್ನಣ ವಾಲೀಕಾರರ ಭಾಷೆ ಅತ್ತ ಸರಳವೆಂದು ಹೇಳಲಾಗದ ಇತ್ತ ಕಷ್ಟವೂ ಅಲ್ಲದ ಭಾಷೆಯನ್ನು ಒಳಗೊಂಡಿದೆ.

 ಹಾಗೆಂದು ಕಾವ್ಯಗಳ ಭಾಷೆಯನ್ನು ತೀರ ಸರಳಗೊಳಿಸಿ ,ಛಂದಸ್ಸು ಹಾಗೂ ಲಯಗಳ ಬಂಧದಿಂದ ಬಿಡಿಸಿದರೇ ಅದು ಕಾದಂಬರಿ ಅಥವಾ ಗದ್ಯವೆನಿಸುವುದೇ ವಿನಃ ಕಾವ್ಯ ಎನಿಸಲಾರದು. ಕಾವ್ಯಕ್ಕೆ ತನ್ನದೇ ಆದ ಲಯ ಛಂದಸ್ಸಿನ ವಿನ್ಯಾಸಗಳಿದ್ದು, ಅದನ್ನು ಓದಿ ಅರ್ಥೈಸಿಕೊಳ್ಳಬಲ್ಲವನಿಗೆ, ಬಲ್ಲವನೇ ಬಲ್ಲ, ಬೆಲ್ಲದ ರುಚಿಯ ಎಂಬಂತೆ, ಅರಿತವರಿಗೆ ಅತಿಸುಲಭವಾಗಿ, ಸುಲಿದ ಬಾಳೆಯ ಹಣ್ಣಿನಂತೆ ರುಚಿಕರವೂ ಸ್ವಾದವೂ ಆಗಿರುತ್ತದೆ ಕಾವ್ಯ .

ಕಾವ್ಯ ತನ್ನದೇ ಆದ ನಿರೂಪಣಾ ಶೈಲಿ, ನಾಟಕೀಯ ನಿರೂಪಣೆ, ವರ್ಣನೆಗಳು ,ಕಣ್ಣಿಗೆ ಕಟ್ಟುವಂತಹ ಚಿತ್ರಗಳನ್ನು ಹೊಂದಿರುತ್ತದೆ. ಆಯಾ ಕಾವ್ಯದ ಛಂದಸ್ಸಿನ ಲಯ, ಆ ಕಾವ್ಯದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಸಾಮಾನ್ಯವಾಗಿ ಆಧುನಿಕ ಕಾವ್ಯಗಳೆಲ್ಲವೂ ಒಂದು ಛಂದಸ್ಸನ್ನು ಅಳವಡಿಸಿಕೊಂಡಿರುವುದನ್ನು ನೊಡಬಹುದ. ಒಂದು ವೇಳೆ ಯಾವ ಛಂದಸ್ಸನು ಅನುಸರಿಸದ ಪಕ್ಷದಲ್ಲಿಯೂ ಅವು ತಮ್ಮದೇ ಆದ ಒಂದು ಮುಕ್ತ ಛಂದಸ್ಸಿನ  ಲಯದಲ್ಲಿ ಸಾಗುತ್ತವೆ, ಉದಾಹರಣೆಗೆ ಕಂಬಾರರ ಚಕೋರಿ ಹಾಗೂ ಕೆ ಬಿ ಸಿದ್ದಯ್ಯನವರ ಕಾವ್ಯಗಳು, ಇವು ತಮ್ಮದೇ ಆದ ಜನಪದ ಲಯ ವಿನ್ಯಾಸವನ್ನು ಹೊಂದಿವೆ.

ಕುವೆಂಪುರವರು ರಗಳೆಯ ಮುಂದುವರೆದ ರೂಪವಾದ ಸರಳ ರಗಳೆಯನ್ನು ಮತ್ತಷ್ಟು ಪರಿಷ್ಕರಿಸಿದ ಮಹಾಛಂದಸ್ಸಿನಲ್ಲಿ ತಮ್ಮ ಕಾವ್ಯವನ್ನು ರಚಿಸಿದ್ದಾರೆ. ಈ ಮಹಾಛಂದಸ್ಸಿನಲ್ಲಿ ಸರ್ವಛಂಧೋ ಸಮನ್ವಯ ಇದ್ದು, ಗಣಪರಿವೃತ್ತಿಯ ಪರಾಕಾಷ್ಠೆ ಇದೆ ಲಯದ ವೈವಿದ್ಯತೆ ಇದೆ. ಇನ್ನು ಪು ತಿ ನ ರವರ ಶ್ರೀ ಹರಿ ಚರಿತ್ರೆ ಯು ನೃತ್ಯ ನಾಟಕಕ್ಕೆ ಅತ್ಯಂತ ಸಮರ್ಥವಾದ ಭಾವ ಭಂಧಗಳು ತಾಳ ಲಯಗಳನ್ನು ಹೊಂದಿರುವ ಬ್ರಹ್ಮ ಛಂದಸಿನಲ್ಲಿ ರಚಿತವಾಗಿರುವುದು ವಿಶೇಷವಾಗಿದ್ದು ಇದು ಸಹಾ ಸರಳ ರಗಳೆಯ ರೂಪವೇ ಆಗಿದೆ. ಮಾಸ್ತಿಯವರ ಶ್ರೀರಾಮ ಪಟ್ಟಾಭಿಷೇಕಂ ಕೃತಿಯು  ಸರಳ ರಗಳೆಯಲ್ಲಿರಚಿತವಾಗಿದ್ದು, ಪುತಿನ ರವರ ಗಣೇಶ ದರ್ಶನ ಸೇರಿದಂತೆ ಹಲವು ಕೃತಿಗಳನ್ನು ಸಹಾ ಸರಳ ರಗಳೆಯಲ್ಲಿಯೇ ಇವೆ.

ಇನ್ನು ಮುಕ್ತ ಛಂದಸ್ಸಿನಲ್ಲಿ ಹಲವು ಕೃತಿಗಳು ರಚನೆ ಆಗಿದ್ದು, ಅವು ಅವುಗಳದ್ದೇ ಆದ ವಿಶಿಷ್ಟವಾದ ಲಯ ವಿನ್ಯಾಸವನ್ನು ಹೊಂದಿದ್ದು, ಇದು ಆ ಕಾವ್ಯಗಳ ಸೊಬಗನ್ನು, ನಾಟಕೀಯತೆಯನ್ನು ಹೆಚ್ಚಿಸುವ, ಏಕತಾನತೆಯನ್ನು ಮುರಿಯುವ ಕೆಲಸವನ್ನು ಮಾಡಿರುವುದನ್ನು ನಾವು ಚಕೋರಿ, ಬಕಾಲ, ದಕ್ಲಕಥಾ ಧೇವಿ ಕಾವ್ಯ ಮುಂತಾದ ಕಾವ್ಯಗಳಲ್ಲಿ ಕಾಣಬಹುದಾಗಿದ್ದು, ಮುಕ್ತ ಛಂದಸ್ಸಿನ ಜೊತೆಗೆ ಹೊಸಗನ್ನಡದ ಇತರೆ ಛಂಧೊರೂಪಗಳಾದ  ಸಾನೆಟ್‌ ಪ್ರಗಾಥಗಳನ್ನು,  ಅಲಲ್ಲಿ ಗದ್ಯವನ್ನು ಕಾವ್ಯಗಳಲ್ಲಿ  ಬಳಸಿದ್ದಾರೆ.  ಹೀಗೆ ಬಹು ವಿಸ್ತಾರವಾದ ಆಧುನಿಕ ಕಾವ್ಯ ಪರಂಪರೆಯ ವಿಶಿಷ್ಟತೆಯನ್ನು ಕೆಲವು ಆಯ್ದ ಕೃತಿಗಳ ಮೂಲಕ ಅವುಗಳ ಭಾಷೆ ಹಾಗೂ ಛಂದಸ್ಸಿನ ಹಿನ್ನೆಲೆಯನ್ನು ಅರಿಯುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ.

ಗ್ರಂಥಋಣ:

೧) ಶ್ರೀ ರಾಮಾಯಣ ದರ್ಶನಂ :ಕುವೆಂಪು: ಮೈಸೂರು ವಿ ವಿ -೨೦೧೭

೨)ಶ್ರೀ ರಾಮ ಪಟ್ಟಾಭಿಷೇಕ :ಮಾಸ್ತಿ ವೆಂಕಟೇಶ ಅಯ್ಯಾಂಗಾರ್‌ :ಎಂ ವಿ ಜಿ ಕೆ ಟ್ರಸ್ಪ್‌ -೧೯೯೨

೩)ಚಕೋರಿ ಮಹಾಕಾವ್ಯ : ಚಂದ್ರಶೇಖರ ಕಂಬಾರ : ಅಂಕಿತ ಪುಸ್ತಕ -೨೦೧೧

೪) ಸಹ್ಯಾದ್ರಿಯ ಸೂರ್ಯ: ಚಕ್ಕೆರೆ ಶಿವಶಂಕರ್(ಸಂ):ಕ ಸಾ ಪ -೨೦೧೦

೫) ಹೊಸಗನ್ನಡ ಸಾಹಿತ್ಯ ಚರಿತ್ರೆ : ಸಂಪುಟ-೧೯ : ಎಲ್‌ ಎಸ್‌ ಶೇಷಗಿರಿರಾವ್‌ : ಸಪ್ನ :೨೦೧೯

೬) ಕನ್ನಡ ಸಾಹಿತ್ಯ ಘಟ್ಟಗಳು :ಬಸವರಾಜ ಸಾದರ (ಸಂ):ಕ ವಿ ಸಂ ದಾರವಾಡ:೨೦೦೨

೭)ಬಕಾಲ: ಕೆ ಬಿ ಸಿದ್ದಯ್ಯ: ಶಿವಣ್ಣ ತಿಮಾಲಾಪುರ (ಸಂ) :೨೦೧೭

೮) ವ್ಯೋಮಾ ವ್ಯೋಮ ಮಹಾಕಾವ್ಯ ಸಂಗ್ರಹ : ಡಾ ವಿ ನಾಗರಾಜ :ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ           ಕಲ್ಬುರ್ಗಿ :೨೦೧೭

೯) ಅಂತರ್ಜಾಲ ಮಾಹಿತಿ .

 ವರುಣರಾಜ್‌ ಜಿ

ಪೋನ್‌: 9448241450

ಮಿಂಚಂಚೆ: MAHARISHIVARUNRAJJI@GMAIL.COM

 

 

Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.