ನಮ್ಮ ಪ್ರೀತಿಯ ಮೇಷ್ಟ್ರು ರಾಜಪ್ಪ ದಳವಾಯಿ
ನಮ್ಮ
ಪ್ರೀತಿಯ ಮೇಷ್ಟ್ರು ರಾಜಪ್ಪ ದಳವಾಯಿ
ನಾನು
೨೦೧೭-೧೮ ನೇ ಸಾಲಿನಲ್ಲಿ ಪ್ರಥಮ ಎಂ ಎ ಕನ್ನಡ ವ್ಯಾಸಂಗಕ್ಕಾಗಿ ಕೋಲಾರ ಪಿ ಜಿ ಸೆಂಟರ್ ಗೆ ಪ್ರವೇಶ
ಪಡೆದಿದ್ದೆ. ನಮ್ಮ ಕಾಲೇಜಿನ ಕನ್ನಡ ವಿಭಾಗದಲ್ಲಿ ೫ ಜನ ಪ್ರಾಧ್ಯಾಪಕರು ಇದ್ದರು ಅವರಲ್ಲಿ ರಾಜಪ್ಪ
ದಳವಾಯಿ ಸರ್ ಸಹಾ ಒಬ್ಬರಾಗಿದ್ದರು. ಪ್ರಥಮ ಸೆಮಿಸ್ಟರ್ ನಲ್ಲಿ ಪಂಪಭಾರತ, ರಾಮಚಂದ್ರ ಚರಿತ ಪುರಾಣದಂತಹಾ
ಕೃತಿಗಳನ್ನು ಸರ್ ಅವರಿಂದ ಪಾಠ ಕೇಳುವ ಸದಾವಕಾಶ ನಮ್ಮದಾಗಿತ್ತು. ಪಂಪಭಾರತದ ಪದ್ಯಗಳನ್ನು ಮೇಷ್ಟ್ರು
ಬಿಡಿಸಿ ರಾಗವಾಗಿ ಹಾಡುತ್ತಿದ್ದದ್ದು ನಮಗೆ ಬಹಳ ಇಷ್ಟವಾಗುತ್ತಿತ್ತು. ಇದು ನಮ್ಮ ಹಳಗನ್ನಡದ ಮೇಲಿನ
ಆಸಕ್ತಿಯನ್ನು ಬಹಳಷ್ಟು ಹೆಚ್ಚು ಮಾಡಿತು. ಅಲ್ಲಿಯವರೆಗೆ ನಾವು ಹಳಗನ್ನಡವನ್ನು ಬಹಳ ಕಷ್ಟವೆಂದು ತಿಳಿದು
ಗೈಡ್, ನೋಟ್ಸ ಗಳನ್ನೇ ಓದಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾ ಬಂದಿದ್ದೆವು. ಸರ್ ಅವರ ಪಾಠ ಕೇಳಿದ
ನಂತರ ಹಳಗನ್ನಡ ನಾವು ತಿಳಿದಿರುವಷ್ಟು ಕಷ್ಟವೇನು ಅಲ್ಲ ಎಂಬುದನ್ನು ಅರಿತುಕೊಂಡೆವು.
ದಳವಾಯಿ
ಸರ್ ಅವರು ಪದ್ಯಗಳನ್ನು ಬಿಡಿಸಿ ಓದುವಾಗಲೇ ನಮಗೆ ಪದ್ಯ ಅರ್ಥವಾಗಿ ಬಿಡುತ್ತಿತ್ತು. ಸರ್ ರವರು
ಓದುವುದನ್ನ ಕಂಡು ಅದರಿಂದ ಸ್ಪೂರ್ತಿ ಪಡೆದ ನಾನು ಹಾಗೂ ನನ್ನ ಕೆಲವು ಹಾಸ್ಟಲ್ ಸಹಪಾಠಿಗಳು ಪ್ರತಿದಿನ
ಸಂಜೆ ಪಂಪಭಾರತದ ಪಠ್ಯವನ್ನು ಹಿಡಿದು ಓದುವುದಕ್ಕೆ ಪ್ರಾರಂಭಿಸಿದ್ದೆವು. ಹೆಚ್ಚು ಹೆಚ್ಚು ಓದಿ ಅಭ್ಯಾಸ
ಮಾಡುವುದರಿಂದ ಚೆನ್ನಾಗಿ ಹಳಗನ್ನಡ ಓದುವುದನ್ನು ಕಲಿಯಬಹುದೆಂಬ ಕಾರಣದ ಜೊತೆಗೆ ನಮ್ಮ ಇತರೆ ಹಾಸ್ಟಲ್
ಮೇಟ್ಸ ನಮ್ಮ ಹಳಗನ್ನಡ ಪಾಂಡಿತ್ಯವನ್ನು ನೊಡಲಿ ಎಂಬ ಉದ್ದೇಶವೂ ನಮ್ಮದಾಗಿರುತ್ತಿತ್ತು. ಅದರ ಜೊತೆಗೆ
ʼಮುಂದೆ ನೀವು ಯಾವುದೇ ಕಾಲೇಜಿಗೆ ಹೋದರೂ ಸಹಾ ಹಳಗನ್ನಡದ ೧-೨ ಪದ್ಯಗಳನ್ನು ಓದಿ ಅರ್ಥೈಸಿದರೆ ಸಾಕು ನಿಮಗೆ ಅಲ್ಲಿ ಕೆಲಸ ಗ್ಯಾರಂಟಿ ʼ ಎಂದು ಹೇಳುತ್ತಿದ್ದ
ನಮ್ಮ ಸಿನಿಯರ್ ವಿದ್ಯಾರ್ಥಿಗಳ ಮಾತುಗಳು ಸಹಾ ನಮಗೆ ಸ್ಪೂರ್ತಿಯಾಗಿದ್ದವು.
ದಳವಾಯಿ
ಸರ್ ರವರು ಹಳಗನ್ನಡ ಪದ್ಯಗಳನ್ನು ಬಿಡಿಸಿ ಓದುವುದರ ಜೊತೆಗೆ ಅವುಗಳನ್ನು ರಾಗವಾಗಿ ಹಾಡುತ್ತಿದ್ದದ್ದು
ನಮಗೆ ಬಹಳ ಇಷ್ಟವಾಗುತ್ತತ್ತು, ಅಷ್ಟೇ ಅಲ್ಲದೇ ಪದ್ಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಇದರಿಂದ
ನಮಗೆ ಸುಲಭವಾಗುತ್ತಿತ್ತು. ಪಾಠ ಹೇಳುವುದರ ಜೊತೆಗೆ ಅಲ್ಲಿ ಉಲ್ಲೇಖಗೊಂಡಿರುವ ಕೆಲವು ಪದ/ವಾಕ್ಯ ಗಳಿಗೆ
ಸಂಭಂಧಿಸಿ ಸಾಕಷ್ಟು ಪರಾಮರ್ಶನ ಗ್ರಂಥಗಳನ್ನು ಹೇಳುತ್ತಿದ್ದರು. ಅದರ ಜೊತೆಗೆ ಒಂದು ಪದ್ಯ ವನ್ನು
ಬೇರೆ ಬೇರೆ ವಿದ್ವಾಂಸರು ಹೇಗೆಲ್ಲಾ ಚರ್ಚೆಗೆ ಒಳಪಡಿಸಿದ್ದಾರೆ ಎಂಬುದನ್ನು ಸಹಾ ವಿವರಿಸಿ ಹೇಳುತ್ತಿದ್ದರು.
ಇಷ್ಟೆಲ್ಲಾ ವಿಷಯಗಳು ಸರ್ ಅವರಿಗೆ ಹೇಗೆ ನೆನಪಿನಲ್ಲಿ ಇರುತ್ತವೆ ಎಂಬುದೇ ನಮಗೆ ಆಶ್ಷರ್ಯದ ಸಂಗತಿಯಾಗಿತ್ತು.
ನಮಗೆ
ತರಗತಿಗಳು ಪ್ರಾರಂಭವಾಗಿ ೧೫-೨೦ ದಿನ ಕಳೆದರೂ ಸಹಾ ನಾವು ತರಗತಿಯಿಂದ ಹೊರಗೆ ದಳವಾಯಿ ಸರ್ ಅವರನ್ನು
ಮಾತನಾಡಿಸುವ ದೈರ್ಯ ಮಾಡಿರಲಿಲ್ಲ. ಅದಕ್ಕೆ ಕಾರಣ ನಮ್ಮಗಿಂತ ಹಿರಿಯರಾದ ವಿದ್ಯಾರ್ಥಿಗಳು ಹಾಗೂ ಸಂಶೋಧನಾ
ವಿದ್ಯಾರ್ಥಿಗಳು ದಳವಾಯಿ ಸರ್ ಅವರ ಬಗ್ಗೆ , ಅವರ ಕನ್ನಡ ಸಾಹಿತ್ಯ ಕೋಶ ಪುಸ್ತಕದ ಬಗ್ಗೆ, ಅವರ ನಾಟಕಗಳು,
ಅವರ ಪಾಂಡಿತ್ಯದ ಬಗ್ಗೆ ನಮಗೆ ಹೇಳುತ್ತಿದ್ದ ವಿಚಾರಗಳನ್ನ ಕೇಳಿ ನಮ್ಮಲ್ಲಿ ಸರ್ ಬಗ್ಗೆ ಒಂದು ರೀತಿಯ
ಭಯ ಸೃಷ್ಠಿಯಾಗಿತ್ತು. ಅದರ ಜೊತೆಗೆ ತರಗತಿಯಲ್ಲಿ ನಮಗೆ ಓದುವುದಕ್ಕೆ ಹೇಳಿದ ಯಾವುದಾದರೂ ಪುಸ್ತಕದ
ಬಗ್ಗೆ ಕೇಳಿದರೆ ಏನು ಹೇಳುವುದು ಅನ್ನುವ ಭಯ ಬೇರೆ.
ಕೆಲವು
ದಿನಗಳ ನಂತರ ನನ್ನ ಸ್ನೇಹಿತನಾದ ಹರೀಶ ಪಿ ಎ ಹಾಗೂ ನಾನು ಇಬ್ಬರೂ ದೈರ್ಯ ಮಾಡಿ ಸರ್ ಅವರನ್ನು ಒಮ್ಮೆ
ಮಾತಾಡಿದೆವು. ನಮ್ಮ ಮುಜುಗರ ಭಯ ಎಲ್ಲ ಆಗಲೇ ಹೊರಟುಹೋಗಿ ನಾವು ಸರ್ ಕಂಡಾಗಲೆಲ್ಲಾ ಅವರನ್ನು ತಪ್ಪದೇ
ಮಾತಾಡುವಂತಾದೆವು. ಗದಾಯುದ್ಧ, ಶ್ರೀರಾಮಾಯಣ ದರ್ಶನಂ ಮುಂತಾದ ಕೃತಿಗಳನ್ನು ಸಹಾ ದಳವಾಯಿ ಸರ್ ಅವರಿಂದ
ಪಾಠ ಕೇಳುವ ಅವಕಾಶವನ್ನು ನಾವು ಪಡೆದುಕೊಂಡಿದ್ದೆವು. ಅದರ ಜೊತೆಗೆ ಭಾಷಾ ವಿಜ್ಞಾನ, ಕಾವ್ಯಮೀಮಾಂಸೆ
ಯನ್ನು ಸಹಾ ನಾನು ದಳವಾಯಿ ಸರ್ ಅವರ ಮೂಲಕ ಕಲಿತಿದ್ದೇವೆ. ಹಾಗೆ ಇದೇ ಕಾವ್ಯ ಮೀಮಾಂಸೆ ಪತ್ರಿಕೆಗೆ
ನನಗೆ ಚಿನ್ನದ ಪದಕ ಸಿಕ್ಕಿದ್ದು ಬಹಳಾ ಸಂತೋಷದ ವಿಷಯವಾಗಿದ್ದು ಅದಕ್ಕೆ ಕಾರಣ ದಳವಾಯಿ ಸರ್ ರವರ
ಪಾಠವೇ ಎಂದು ಹೆಮ್ಮೆಯಿಂದ ಹೇಳುತ್ತೇನೆ.
ದಳವಾಯಿ ಸರ್ ರವರು ನಮಗೆ ಪಾಠ ಹೇಳುತ್ತಿದ್ದುದರ ಜೊತೆ ಜೊತೆಗೆ ಯು ಜಿ
ಸಿ ನೆಟ್ ಪರೀಕ್ಷೆಗಳಿಗಾಗಿ ನಮಗೆ ಉಚಿತವಾಗಿ ತರಬೇತಿಯನ್ನು ನೀಡುತ್ತಿದ್ದರು. ದಳವಾಯಿ ಸರ್ ಅವರ
ಪುಸ್ತಕ ಎಂದೇ ಪ್ರಖ್ಯಾತವಾಗಿದ್ದ ಸರ್ ರವರ ʼಕನ್ನಡ ಸಾಹಿತ್ಯ ಕೋಶʼ ಪುಸ್ತಕ ಯು ಜಿ ಸಿ ನೆಟ್ ಹಾಗೂ
ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿಯೇ ತಯಾರಿಸಿದ್ದು ಆ ಪುಸ್ತಕ ಆಗ ನಮಗೆ ಲಭ್ಯವಿರಲಿಲ್ಲ. ಸರ್ ಅವರನ್ನು ಆಗಾಗ ʼಸರ್ ನಿಮ್ಮ ಪುಸ್ತಕ ಯಾವಾಗ ಪುನಃ
ಪ್ರಕಟಣೆ ಆಗುತ್ತದೆʼ ಎಂದು ವಿಚಾರಿಸುತ್ತಲೇ ಇರುತ್ತಿದ್ದೆವು. ಪುಸ್ತಕ ಸಿಗದಿದ್ದರೂ ಸಹಾ ದಳವಾಯಿ
ಸರ್ ಅವರು ತಯಾರಿಸಿದ್ದ ಪ್ರಶ್ನೆ ಪತ್ರಿಕೆಗಳು ನಮಗೆ ಹೇರಳವಾಗಿ ಲಭ್ಯವಿದ್ದವು. ಸರ್ ರವರು ತಮ್ಮ
ತರಗತಿ ಸಮಯದಲ್ಲಿಯೇ ನಮಗೆ ಯು ಜಿ ಸಿ ನೆಟ್ ಪರೀಕ್ಷೆಗೆ ಸಾಕಷ್ಟು ಮಾಹಿತಿಯನ್ನು ಒದಗಿಸುತ್ತಿದ್ದರು
ಅದರ ಜೊತೆಗೆ ಯು ಜಿ ಸಿ ನೆಟ್ ತರಬೇತಿ ತರಗತಿಗಳನ್ನು ಸಹಾ ತೆಗೆದುಕೊಳ್ಳುತ್ತಿದ್ದರು.
ಕಾಲೇಜು ಸೇರುವುದಕ್ಕೆ ಮೊದಲು ಇಂತಹದೊಂದು ಪರೀಕ್ಷೆ ಇದೆ ಎಂಬುದೇ ನಮಗೆ
ತಿಳಿದಿರಲಿಲ್ಲ. ಸರ್ ರವರು ನಮಗೆ ತರಗತಿಯಲ್ಲಿ ಪರೀಕ್ಷೆಯ ಬಗ್ಗೆ ಹಾಗೂ ಜೆ ಆರ್ ಎಪ್ ಪೆಲೋಶಿಪ್
ಬಗ್ಗೆ ಹೇಳುತ್ತಿದ್ದ ವಿವರಗಳನ್ನು ಕೇಳಿ ನಾವು ಸಹಾ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಯು ಜಿ ಸಿ ಜೆ
ಆರ್ ಎಫ್ ಅರ್ಹತೆ ಪಡೆಯಬೇಕೆಂದು ಪರೀಕ್ಷೆಗೆ ಸಿದ್ಧವಾಗುವುದಕ್ಕೆ ಪ್ರಾರಂಭಿಸಿದೆವು. ಹಾಗೂ ದಳವಾಯಿ
ಸರ್ ರವರ ತರಗತಿಗಳಿಗೆ ತಪ್ಪದೇ ಹಾಜರಾಗಿ ಅವರು ಹೇಳುವ ಎಲ್ಲಾ ಪುಸ್ತಕಗಳನ್ನು ಸಾಧ್ಯವಾದಷ್ಟು ನೋಡುವ
ಪ್ರಯತ್ನ ಮಾಡುತ್ತಿದ್ದೆವು. ಸ್ವಲ್ಪ ಕಾಲದಲ್ಲಿಯೇ ನಮ್ಮ ಉತ್ಸಾಹ ಕಡಿಮೆ ಆಗುತ್ತಾ ಬಂದಿತು, ಯು ಜಿ
ಸಿ ನೆಟ್ ಪರೀಕ್ಷೆಯ ಮೊದಲ ಪತ್ರಿಕೆ ಕೇವಲ ಇಂಗ್ಲೀಷ್ ಹಾಗೂ ಹಿಂದಿ ಭಾಷಗಳಲ್ಲಿ ಮಾತ್ರ ಇರುವುದು
ಹಾಗೂ ಈ ಪತ್ರಿಕೆಯಲ್ಲಿ ಕಡ್ಡಾಯವಾಗಿ ತೇರ್ಗಡೆ ಆಗಲೇ ಬೇಕಾಗಿದ್ದದ್ದು ನಮ್ಮ ಉತ್ಸಾಹ ಕಡಿಮೆ ಆಗಲು
ಕಾರಣವಾಗಿತ್ತು.
ಯು ಜಿ ಸಿ ನೆಟ್ ಪರೀಕ್ಷೆ
ಅದೇ ಸಮಯಕ್ಕೆ ಹತ್ತಿರವಾಗುತ್ತಿದ್ದುದರಿಂದ ನಮಗೆ ಮೊದಲ ಹಾಗೂ ಎರಡನೇ ಪತ್ರಿಕೆಗಳಿಗೆ ಸಹಾಯವಾಗಲಿ
ಎಂಬ ಉದ್ದೇಶದಿಂದ ತುಮಕೂರು ವಿಶ್ವವಿದ್ಯಾಲಯದವರು ಆಯೋಜಿಸುತ್ತಿದ್ದ ಯು ಜಿ ಸಿ ನೆಟ್ ತರಬೇತಿ ಕಾರ್ಯಾಗಾರದಲ್ಲಿ
ಪಾಲ್ಗೊಳ್ಳಲು ನಮಗೆ ದಳವಾಯಿ ಸರ್ ರವರು ಅವಕಾಶ ಕೊಡಿಸಿದರು. ೭ ದಿನಗಳ ಕಾಲ ನಡೆದ ಈ ತರಬೇತಿಯನ್ನು
ಮುಗಿಸಿದ ಮೇಲೆ ನಮಗೆ ಮೊದಲನೇ ಪತ್ರಿಕೆಯ ಬಗೆಗಿದ್ದ ಭಯ ಸಂಪೂರ್ಣವಾಗಿ ಇಲ್ಲದಾಯಿತು. ಮುಂದೆ ನಾನು
ಸೇರಿದಂತೆ ನಮ್ಮ ತರಗತಿಯವರು ೧೪-೧೫ ಜನ ಯು ಜಿ ಸಿ ಪರೀಕ್ಷೆ ತೆಗೆದುಕೊಂಡೆವು. ಆ ಭಾರಿ ನಾವು ಅರ್ಹತೆ
ಪಡೆಯುವುದು ಸಧ್ಯವಾಗದೇ ಇದ್ದರೂ ಸಹಾ ಕಟ್ ಆಫ್ ಗೆ ಬಹಳ ಕಡಿಮೆ ಅಂತರದಲ್ಲಿ ನಾವು ಅರ್ಹತೆ ಕಳೆದುಕೊಂಡಿದರಿಂದ
ಹಾಗೇ ನಮ್ಮಗಿಂತ ಹಿರಿಯರಾಗಿದ್ದ ೩ ಜನ ವಿದ್ಯಾರ್ಥಿಗಳು ನೆಟ್ ಹಾಗೂ ಜೆ ಆರ್ ಎಪ್ ಅರ್ಹತೆ ಪಡೆದದ್ದರಿಂದ
ನಮಗೆ ಓದುವ ಉತ್ಸಾಹ ಮತ್ತಷ್ಟು ಹೆಚ್ಚಾಯಿತು. ಕಾಲಕಾಲಕ್ಕೆ ದಳವಾಯಿ ಸರ್ ರವರು ನಮಗೆ ಎಲ್ಲಾ ರೀತಿಯ
ಮಾರ್ಗದರ್ಶನವನ್ನು ಮಾಡುತ್ತಾ ಬಂದು ಮುಂದಿನ ಸಲದ ಪರೀಕ್ಷೆಯ ವೇಳೆಗೆ ಪುಸ್ತಕವೂ ಪರಿಷ್ಜತವಾಗಿ ಮರು ಮುದ್ರಣಗೊಂಡು ನಮ್ಮ ಕೈ ಸೇರಿದರಿಂದ ಈ ಭಾರಿ ನೆಟ್
ಹಾಗೂ ಕೆ- ಸೆಟ್ ಎರಡೂ ಪರೀಕ್ಷೆಗಳಲ್ಲಿಯೂ ಅರ್ಹತೆ ಪಡೆಯುವುದು ನನಗೆ ಸಾಧ್ಯವಾಯಿತು.
ಮತ್ತೊಂದು ಸಲ ಪರೀಕ್ಷೆ ಬರೆದಾಗ ಜೆ ಆರ್ ಎಪ್ ಅರ್ಹತೆಯನ್ನು ಸಹಾ ಪಡೆದ್ದದ್ದು
ನನಗೆ ಬಹಳಾ ಸಂತೋಷದ ವಿಚಾರ. ದಳವಾಯಿ ಸರ್ ರವರು ತರಗತಿಯಲ್ಲಿ, ಯು ಜಿ ಸಿ ನೆಟ್ ತರಬೇತಿ ಕ್ಲಾಸ್
ನಲ್ಲಿ ನಮಗೆ ನಿರಂತರ ಮಾರ್ಗದರ್ಶನ ನೀಡಿದಲ್ಲದೇ ತುಮಕೂರು ವಿಶ್ವವಿದ್ಯಾಲಯದ ವತಿಯಿಂದ ಹಾಗೂ ನಮ್ಮ
ಕೆಲವು ಹಿರಿಯ ಜೆ ಆರ್ ಎಪ್ ಅರ್ಹತೆ ಪಡೆದಿದ್ದ ವಿದ್ಯಾರ್ಥಿಗಳಿಂದ ನಮಗೆ ತರಬೇತಿ ಕೊಡಿಸುವುದರ
ಮೂಲಕ ಈ ಪರೀಕ್ಷೆಗಳಲ್ಲಿ ಅರ್ಹತೆ ಪಡೆಯಲು ಮುಖ್ಯ ಕಾರಣರಾಗಿದ್ದಾರೆ. ಅದರ ಜೊತೆಗೆ ಹಳಗನ್ನಡ ಕೃತಿಗಳ
ಓದು ಮತ್ತು ಪರಿಚಯವೂ ಸಹಾ ನಮಗೆ ಈ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ಸಹಾಯಕವಾದವು.
ನಮ್ಮ ಕಾಲೇಜು ಕೋಲಾರದ ಹತ್ತಿರದ ಮಂಗಸಂದ್ರ ಎಂಬ ಹಳ್ಳಿಯಲ್ಲಿ ಇದ್ದದ್ದರಿಂದ ಬೇರೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ನಮ್ಮ ಕಾಲೇಜು
ತಿಳಿದಿರಲಿಲ್ಲ. ನಾವು ಪರೀಕ್ಷೆ ಬರೆಯಲು, ಯು ಜಿ ಸಿ ತರಬೇತಿಗೆ ಹಾಗೇ ಸಾಹಿತ್ಯ ಸಮ್ಮೇಳನ ಇತ್ಯಾದಿಗಳಿಗೆ
ಹೋದಾಗ ರಾಜಪ್ಪ ದಳವಾಯಿ ಅವರು ಕೆಲಸ ಮಾಡುವ ಕಾಲೇಜಿನಲ್ಲಿಯೇ
ನಾವು ಓದುತ್ತಿರುವುದು ನಾವು ಅವರ ವಿದ್ಯಾರ್ಥಿಗಳು ಅಂತ ಬಹಳ ಹೆಮ್ಮೆ ಯಿಂದ ಹೇಳಿಕೊಳ್ಳುತ್ತಿದ್ದೆವು.
ಇದು ನಮಗೆ ಬಹಳ ಗೌರವವನ್ನ ತರುವ ವಿಷಯ ಆಗಿತ್ತು. ಹಾಗೇ ನಾನು ಎಂ ಎ ನಂತರದಲ್ಲಿ ಕೆಲವು ಶಾಲೆಗಳಿಗೆ
ಸಂದರ್ಶನಕ್ಕೆ ಹೋದಾಗಲೂ ಸಹಾ ಕನ್ನಡ ಪಠ್ಯಪುಸ್ತಕಗಳನ್ನ ತೋರಿಸಿ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ
ರಾಜಪ್ಪ ದಳವಾಯಿ ಸರ್ ಅವರ ಹೆಸರನ್ನ ತೋರಿಸಿ ಇವರು ನಮ್ಮ ಮೇಷ್ಟ್ರು ಅಂತ ಹೆಮ್ಮೆ ಇಂದ ಹೇಳಿಕೊಂಡದ್ದು,
ಅಲ್ಲಿ ಉದ್ಯೋಗ ಪಡೆದೊಕೊಂಡದ್ದು ಇದೆ.
ಯಾವುದೇ ವಿಚಾರವನ್ನ ಕೇಳಿದರೂ ಸಹಾ ಅದಕ್ಕೆ ಸಂಭಂಧಿಸಿ ಒಂದಷ್ಟು ಮಾಹಿತಿ
ಹಾಗೇ ಒಂದಷ್ಟು ರೆಪರೆನ್ಸ ಪುಸ್ತಕಗಳ ಪಟ್ಟಿಯನ್ನ ನಾವು ಸರ್ ಅವರಿಂದ ಪಡೆಯಬಹುದು. ದಳವಾಯಿ ಸರ್
ಅವರ ನೆನಪಿನ ಶಕ್ತಿಗೆ ನಾವು ಬಹಳ ಆಶ್ಚರ್ಯ ಪಟ್ಟಿದ್ದೇವೆ. ವಿಶ್ವವಿದ್ಯಾಲಯದ ಪ್ರೋಪೇಸರ್ ಆಗಿದ್ದು ಇಷ್ಟೆಲ್ಲಾ ಜ್ಞಾನ
ಪಾಂಡಿತ್ಯ ಹೆಸರು ಇದ್ದರೂ ಸಹಾ ಎಂದಿಗೂ ಅದನ್ನು ತೊರ್ಪಡಿಸಿಕೊಂಡವರಲ್ಲ. ತಮಗೆ ಸಂಭಂಧ ಪಡದ ವಿಚಾರಗಳ
ಬಗ್ಗೆ ತಲೆಕೆಡಿಸಿಕೊಳ್ಳದೇ, ಚಾಡಿ ಮಾತುಗಳು, ರಾಜಕೀಯ, ದರ್ಪಗಳಿಂದ ಅಂತರ ಕಾಯ್ದುಕೊಂಡು ಸದಾ ಕಾಲ
ಅಧ್ಯಾಯನದ ಬಗ್ಗೆ ವಿದ್ಯಾರ್ಥಿಗಳ ಬಗ್ಗೆ ಚಿಂತಿಸುತ್ತಾ, ಎಲ್ಲರೊಂದಿಗೆ ಉತ್ತಮವಾದ ಸ್ನೇಹವನ್ನು ಇಟ್ಟುಕೊಂಡು,
ವಿದ್ಯಾರ್ಥಿಗಳೊಂದಿಗೆ ಬಹಳ ಆತ್ಮೀಯತೆಯನ್ನು ಇರಿಸಿಕೊಂಡು, ವಿದ್ಯಾರ್ಥಿಗಳು ಸಾಹಿತ್ಯ , ಸಂಶೋಧನೆಯಲ್ಲಿ
ಮುಂದೆ ಬರಬೇಕೆಂದು ಸದಾ ಕಾಲ ನಿಸ್ವಾರ್ಥವಾಗಿ ಚಿಂತಿಸುವ ಗುಣ ಸರ್ ಅವರನ್ನು ಉಳಿದ ಎಲ್ಲ ಪ್ರಾಧ್ಯಾಪಕರಿಗಿಂತ ಬಿನ್ನವಾಗಿ,
ವಿದ್ಯಾರ್ಥಿಗಳಿಗೆ ಹತ್ತಿರವಾಗಿರಿಸಲು ಕಾರಣವಾಗಿದೆ ಎಂದು ನಾನು ಪ್ರಾಮಾಣಿಕವಾಗಿ ನಂಬಿದ್ದೇನೆ.
ಇಂದಿಗೂ ಸಹಾ ನನ್ನ ಪಿ ಹೆಚ್ ಡಿ ವಿಚಾರಕ್ಕೆ ಸೇರಿದಂತೆ ಯಾವುದೇ ರೀತಿಯ
ಅನುಮಾನಗಳನ್ನು ಪರಿಹರಿಸುವ ಅದರ ಜೊತೆಗೆ ಕರೋನಾ ಕಾಲದಲ್ಲಿ ವಿವಿಧ ವೆಬಿನಾರ್ಗಳ ಮೂಲಕ ವಿದ್ಯಾರ್ಥಿಗಳಿಗೆ
ಮಾರ್ಗದರ್ಶನ ಮಾಡುವ ಕೆಲಸವನ್ನು ದಳವಾಯಿ ಸರ್ ಅವರು ನಿರಂತರವಾಗಿ ಮಾಡುತ್ತಾ ಬಂದಿದ್ದು, ಇತ್ತೀಚೆಗೆ
ಯು ಜಿ ಸಿ ನೆಟ್ ತರಗತಿಯನ್ನು ಸಹಾ ಆನ್ಲೈನ್ ನಲ್ಲಿ ನಡೆಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ದಳವಾಯಿ ಸರ್ ಅವರ ತರಬೇತಿಯ ಮೂಲಕ ಅನೇಕ ವಿದ್ಯಾರ್ಥಿಗಳು ಡಾಕ್ಟರೇಟ್ ಪಡೆದಿದ್ದಾರೆ, ಅನೇಕ ಮಂದಿ
ಯು ಜಿ ಸಿ ಪೆಲೋಶಿಪ್ ಪಡೆದಿದ್ದಾರೆ, ಅನೇಕ ಮಂದಿ ಸರ್ಕಾರಿ ಉದ್ಯೋಗಗಳನ್ನು ಪಡೆದಿದ್ದಾರೆ, ಇದು
ಹೀಗೆಯೇ ಮುಂದುವರೆಯಬೇಕೆಂದು ಆಶಿಸುತ್ತಾ. ಈ ಮೂಲಕ ರಾಜಪ್ಪ ದಳವಾಯಿ ಸರ್ ಅವರಿಗೆ ಪ್ರೀತಿಯ ಧನ್ಯವಾದಗಳನ್ನು
ಹೇಳುತ್ತಾ. ಯು ಜಿ ಸಿ ಪ್ರೋಪೇಸರ್ ಡಾ ರಾಜಪ್ಪ ದಳವಾಯಿ ಕೃತಿ ಸಂಪಾದಕರಾದ ಡಾ ಪ್ರದೀಪ್ ಮಾಲ್ಗುಡು
ಅವರಿಗೂ ಸಹಾ ಧನ್ಯವಾದಗಳನ್ನು ಸಲ್ಲಿಸುವೆ.
ನಮಸ್ಕಾರಗಳು - ವರುಣ್
ರಾಜ್ ಜೀ
ದಿನಾಂಕ : ೦೬/೧೨/೨೦೨೦ ಹಿರಿಯ ವಿದ್ಯಾರ್ಥಿ
ಸ್ಥಳ : ಕೋಲಾರ. ಪಿ ಜಿ
ಸೆಂಟರ್ ಕೋಲಾರ.
# ೯೪೪೮೨೪೧೪೫೦
ಮಿಂಚಂಚೆ : maharishivarunrajji@gmail.com
***********************************************************

Comments
Post a Comment