ಅಚಲ ಪರಂಪರೆಯ ಕಾಲಜ್ಞಾನಿ ಶ್ರೀ ಕೈವಾರ ನಾರೇಣಪ್ಪ : ಒಂದು ಅಧ್ಯಯನ. - ವರುಣ್ ರಾಜ್ ಜೀ
ಅಚಲ ಪರಂಪರೆಯ
ಕಾಲಜ್ಞಾನಿ ಶ್ರೀ ಕೈವಾರ ನಾರೇಣಪ್ಪ : ಒಂದು ಅಧ್ಯಯನ.
-
ವರುಣ್‌ರಾಜ್ ಜೀ
ಕೈವಾರ ಯೋಗಿನಾರೇಯಣಪ್ಪ(ತಾತಯ್ಯ)ನವರ ಪರಿಚಯ
೧೭೨೬ ರಲ್ಲಿ ಬಲಿಜ ಜನಾಂಗಕ್ಕೆ ಸೇರಿದ ಮುದ್ದಮ್ಮ ಕೊಂಡಪ್ಪ
ದಂಪತಿಗಳಿಗೆ ಹುಟ್ಟಿದ ಯೋಗಿನಾರೇಯಣರ ಜನ್ಮನಾಮ ನಾರಾಣಪ್ಪ. ತಂದೆ ತಾಯಿ ದೈವಭಕ್ತರು. ಕುಲದೇವರಾದ
ಅಮರನಾರಾಯಣನ ಕೃಪೆಯಿಂದ ಗರ್ಭವತಿಯಾದಳು ಮುದ್ದಮ್ಮ. ಸೋದರತ್ತೆ ಆಸ್ತಿಯ ದುರಾಸೆಯಿಂದ ಮುದ್ದಮ್ಮ
ಗರ್ಭವತಿ ಇದ್ದಾಗಲೇ ವಿಷಕೊಟ್ಟು ಗರ್ಭಪಾತ ಮಾಡಲೆತ್ನಿಸಿದಾಗ, ಸರ್ಪ ಆದಿಶೇಷನೇ ಬಂದು ಕಾಪಾಡುತ್ತಾನೆ.
ಹೀಗೆ ಜನ್ಮ ತಳೆದ ನಾರಾಣಪ್ಪನ ತಂದೆ ಬಳೆ ವ್ಯಾಪಾರಿಗಳು. ಅವರ ದುಡಿಮೆಯಲ್ಲೇ
ಸಂತೃಪ್ತ ಜೀವನ ಕಂಡವರು. ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡ ಹುಡುಗ ನಾರಾಣಪ್ಪ ಅಮರನಾರಾಯಣ ದೇವಸ್ಥಾನದ ಅರ್ಚಕರ ಆಶ್ರಯಲ್ಲಿ ಬೆಳೆದನು. ಓದಿನಲ್ಲಿ
ಅಷ್ಟೇನೂ ಆಸಕ್ತಿ ಇಲ್ಲದೇ ಯಾವಾಗಲೂ ಆಧ್ಯಾತ್ಮದಲ್ಲಿ ಚಿಂತನ ಮಂಥನ ನಡೆಸುವುದರಲ್ಲಿ
ಮಗ್ನನಾಗಿರುತ್ತಿದ್ದನು. ಸಾಕು ತಂದೆ ತಾಯಿಗಳು ಹೇಳುತ್ತಿದ್ದ ಪುರಾಣಗಳು,
ಪುಣ್ಯಪುರುಷರ ಕಥೆಗಳಿಂದ ಸ್ಫೂರ್ತಿಪಡೆದ ನಾರಾಣಪ್ಪನಿಗೆ ವಿಷಯೋಪ
ಭೋಗಗಳೆಂದರೆ ವಿರಕ್ತಭಾವವೇ.
ಊರಿನ ಕೂಲಿಮಠದಲ್ಲಿ ಸಂಸ್ಕೃತ, ಕನ್ನಡ, ತೆಲುಗು ಭಾಷೆಗಳನ್ನು ಕಲಿತು ಪಾರಂಗತನಾಗಿ ಪ್ರೌಢ ವಯಸ್ಕನಾದಾಗ,
ಹಿರಿಯರು ಮುಂದೆ ನಿಂತ ಸೋದರತ್ತೆಯ ಮಗಳು ಮುನಿಯಮ್ಮನನ್ನು ಕೊಟ್ಟು
ವಿವಾಹ ನೆರವೇರಿಸಿ ಗೃಹಸ್ಥಾಶ್ರಮ ಸ್ವೀಕಾರ ಮಾಡಿಸಿದ್ದರು. ಮುದ್ದಮ, ಪೆದ್ದಕೊಂಡಪ್ಪ, ಚಿಕ್ಕಕೊಂಡಪ್ಪ ಎಂಬ ಮೂವರು ಮಕ್ಕಳಾದರು. ಸಂಸಾರ ದೊಡ್ಡದಾಗಿತ್ತು.
ಜೀವನ ನಿರ್ವಹಣೆ ಕಷ್ಟವಾಗಿ ಗಂಡ ದುಡಿಮೆಯಲ್ಲಿ ಆಸಕ್ತನಲ್ಲ ಸದಾ ಮೂಗು ಹಿಡಿದು ದೇವರ ಧ್ಯಾನ ಮಾಡುತ್ತ ಕುಳಿತರೆ ಹೊಟ್ಟೆ ತುಂಬುವುದಾದರೂ ಹೇಗೆ..?
ಹೆಂಡತಿ ಮುನಿಯಮ್ಮನ ವರಾತ ಹೆಚ್ಚಿತ್ತು. ಬಳೆ ಮಲಾರ ಕೈಗಿತ್ತು
ವ್ಯಾಪಾರಕ್ಕೆ ಹೋಗಿ ದಿನಕ್ಕಿಷ್ಟು ತರಲೇ ಬೇಕೆಂದು ತಾಕೀತು ಮಾಡುತ್ತಿದ್ದಳು.
ಲೋಕದ ಸ್ತ್ರೀಯರೆಲ್ಲ ತಾಯಿ ಸಮಾನರೆಂದು ಭಾವಿಸತೊಡಗಿದ್ದ ನಾರಾಣಪ್ಪ
ಹೆಣ್ಣುಮಕ್ಕಳಿಗೆ, ಸುಮಂಗಲಿಯರಿಗೆಲ್ಲ
ಶುದ್ಧಭಾವದಿಂದ ಬಳೆತೊಡಿಸುತ್ತಿದ್ದರು. ಅವರು ಕಾಸುಕೊಟ್ಟಷ್ಟೇ.. ಕೊಡದೇ ತಾತಯ್ಯ
ಕಾಸಿಲ್ಲವೆಂದರೆ ಎಲ್ಲ ಅವನಿಚ್ಛೆ ಎಂದು ಮುನ್ನಡೆದು ಸಂಜೆ ವೇಳೆಗೆ ಬಳೆಯಲ್ಲ ಮಾರಿ ಬರಿಗೈಲಿ
ಮನೆಸೇರುತ್ತಿದ್ದರು. ಹೆಂಡತಿ ಮುನಿಯಮ್ಮ ಶುದ್ಧ ಮುಠ್ಠಾಳ ಗಂಡ ದೊರೆತನೆಂದು ಗೊಣಗುತ್ತ ಹೇಗೋ
ಸಂಸಾರ ಸಾಗಿಸುವುದಾಗಿತ್ತು.. ದಾಂಪತ್ಯದಲ್ಲಿ ವಿರಸವೇರ್ಪಟ್ಟಿತ್ತು.
-ಅದೊಂದು ದಿನ ನಾರಾಣಪ್ಪ ಬಳೆ ಮಲಾರ ಹೆಗಲಿಗೇರಿಸಿ ಮೂಗೊಳಿ
ವೆಂಕಟಗಿರಿ ಕಣಿವೆಯಲ್ಲಿ ಸಾಗುತ್ತಿರುವಾಗ ದಿವ್ಯ ತೇಜಸ್ಸಿನ ಪ್ರಖರತೆಯಲ್ಲಿ ಸ್ವಾಮಿಗಳೊಬ್ಬರಿಂದ
’ಓಂ ನಮೋ ನಾರಾಯಣಾಯ” ಎಂಬ
ಬೀಜಾಕ್ಷರಿ ಮಂತ್ರೋಪದೇಶ ಪಡೆದಿದ್ದರು. ಬಾಯಲ್ಲಿ ಬೆಣಚು ಕಲ್ಲು ಇಟ್ಟುಕೊಂಡು ಅದು ಕಲ್ಲು
ಸಕ್ಕರೆಯಾಗುವವರೆಗೂ ಈ ಮಂತ್ರವನ್ನು ಜಪಿಸು ನೀನು ಶ್ರೀಹರಿಯ ಕೃಪಾಕಟಾಕ್ಷದಿಂದ
ದೈವಾಂಶಸಂಭೂತನಾಗಿ ಯೋಗಸಿದ್ಧಿ ಹೊಂದುವೆ ಎಂದು ಹರಸಿದ್ದರು.
ಅನಂತರ, ತಪಸ್ಸಿಗೆ
ಪ್ರಶಸ್ತವೆನಿಸಿದ ನರಸಿಂಹ ಗುಹೆಯಲ್ಲಿ ಕುಳಿತು ಬೀಜಾಕ್ಷರಿ ಮಂತ್ರ ಜಪಿಸುವಾಗ ಅದು
ಬೆಣಚುಕಲ್ಲಿದ್ದ ಬಾಯಲ್ಲಿ “ಓಂ ನಮೋ ನಾರೇಯಣಾಯ” ಎಂಬ ಉಚ್ಛಾರವಾದಾಗ ಗಾಬರಿಯಿಂದ ಮತ್ತೆ ಧ್ಯಾನಮಗ್ನರಾಗುತ್ತಿದ್ದಂತೆ ಅದನ್ನೇ
ಮುಂದುವರೆಸು "ನೀನು ಯೋಗಿ ನಾರೇಯಣ" ಎಂದೇ ಹೆಸರಾಗುವೆ ಎಂಬ ಅಶರೀರವಾಣಿಯಾಯಿತು.
ಮೂರುವರುಷಗಳ ಕಠಿಣ ತಪದ ಫಲವಾಗಿ ಬೆಣಚು ಕಲ್ಲು ಸಕ್ಕರೆಯಾಗಿತ್ತು. ನಾರೇಣಪ್ಪ ಅಮರ ನಾರಾಯಣನ ಪರಮ ಭಕ್ತರಾದರು, ಯೋಗಿ ನಾರೇಯಣ
ತಾತಯ್ಯವನರೆಂದು ಹೆಸರಾದರು.
ಆಧ್ಯಾತ್ಮಿರಹಸ್ಯಗಳನ್ನು ಅನುಭವವೇದ್ಯ ಸತ್ಯಸಂಗತಿಗಳನ್ನು ಅರಿತು
ಜನತೆಗೆ ವೇದಾಂತದ ವಿಷಯಗಳನ್ನು ಬೋಧಿಸುತ್ತಾ ದೈವಿಕ ಪವಾಡಗಳನ್ನೆ ಮಾಡಿದರು. ಭಕ್ತಿಭಾವದ ಮೂಲಕ
ಜ್ಞಾನಮಾರ್ಗ ಎಂಬಂತೆ ಜನಮಾನಸದಲ್ಲಿ ಭಕ್ತಿಭಾವ ಬಿತ್ತುವಂಥ ಭಕ್ತಿಗೀತೆಗಳನ್ನು ರಚಿಸಿದರು.
ಸನ್ಮಾರ್ಗ ತೋರುತ್ತ
ಮಹಾನ್ ಭವಿಷ್ಯತ್ ಜ್ಞಾನಿಗಳಾಗಿ ಕಾಲಜ್ಞಾನವನ್ನು ರಚಿಸಿದರು. ಅದು ಇಂದಿನ ಕಾಲಕ್ಕೆ
ಪ್ರಸ್ತುತವೆನಿಸುತ್ತದೆ. ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರೆಂದೇ ಪ್ರಖ್ಯಾತರಾಗಿ
ತಾತಯ್ಯನವರು ೧೧೦ ವರುಷಗಳಷ್ಟು ಸುದೀರ್ಘ ಕಾಲ (೧೭೨೬-೧೮೩೬) ಇಲ್ಲಿ ನೆಲೆಸಿದ್ದರು.
ಶ್ರೀ ಕೈವಾರ ನಾರಾಣಪ್ಪ ನವರು ಕನ್ನಡ ದಲ್ಲಿ ೧೮ ಕೀರ್ತನೆಗಳನ್ನು
ರಚಿಸಿದ್ದಾರೆ ಅದರ ಜೊತೆ ಕಾಲಜ್ಞಾನ , ನಾದಬ್ರಹ್ಮಾ ನಂದ ನಾರಾಯಣ ಕವಿ ಶತಕ ,
ವೇದಾಂತ ಸಾರಾವಳೀ, ತಾರಕ ಬ್ರಹ್ಮಾನಂದ ದ್ವಯಕಂದ ಶತಕ ,
ಬ್ರಹ್ಮಾಂಡಪುರೀ ಶತಕ , ಅಮರ ನಾರೇಯಣ ಶತಕ , ವಿಮಲಾತ್ಮ ನಾರೇಯಣ ಕವಿ ಶತಕ, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಹಾಗೇ,ಶ್ರೀ
ಕೈವಾರ ಯೋಗಿ ನಾರೇಣಪ್ಪನವರು ನವರ ಹೆಸರಿನಲ್ಲಿ ಹಲವರು ಜೀವನ ಚರಿತ್ರೆ,
ಮಹಾತ್ಮೆ ಗಳನ್ನು ರಚಿಸಿ ಪ್ರಕಟಿಸಿದ್ದಾರೆ.
ಶ್ರೀ ಕೈವಾರ ನಾರಾಯಣಪ್ಪ ನವರು ಜೀವಂತ ಸಮಾಧಿಯ ನಂತರ ಅವರ ಶಿಷ್ಯನಾದ
ಮುತ್ತಯ್ಯನು ಮಠವನ್ನು ನಡೆಸಿಕೊಂಡು ಬಂದಿದ್ದು ,ಇಂದಿಗೂ ಸಹಾ ಕೈವಾರ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ.
ಅಚಲ ತತ್ವ ಚಿಂತನೆ : ಒಂದು ಪರಿಚಯ.
ಅಚಲರು ಭೂಮಿಗೆ ಭಾರವಾಗದಂತೆ
ಜೀವಿಸಿದವರು. ಸಮಾಜದಲ್ಲಿಂದು ಜಾತಿ, ಧರ್ಮ,ಅಸಮಾನತೆ, ಅಹಂಕಾರ ಇವೆಲ್ಲವೂ ಸ್ಮೃತಿ ಕಾರಣಕ್ಕೆ ಕಗ್ಗಂಟಾಗಿದ್ದು,
ಅಚಲ ಮಾರ್ಗದಲ್ಲಿ ಸರಿಪಡಿಸುವ ಕೆಲಸಗಳು ಆಗಬೇಕಿದೆ.
ಕಡಜ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿಗಳಿಗೆ ಗೂಡಿನಲ್ಲಿ ಆಹಾರ ಇಟ್ಟ
ನಂತರ ಬಾಗಿಲು ಮುಚ್ಚುತ್ತದೆ. ಅಲ್ಲಿಗೆ ಕಡಜದ ಆಯಸ್ಸು ಮುಗಿಯುತ್ತದೆ. ಹುಟ್ಟುವ ಮರಿಗಳು ತಾಯಿಯ
ಮುಖವನ್ನೇ ನೋಡುವುದಿಲ್ಲ. ಆದರೆ ಅವು ಕೂಡ ಎಂದೂ ಕಂಡರಿಯದ ಅಮ್ಮನನ್ನೇ ಅನುಸರಿಸುತ್ತವೆ.
ಕೀಟಗಳು ಪರಂಪರಾಕೋಶದಲ್ಲಿ ಬಚ್ಚಿಟ್ಟುಕೊಳ್ಳುವ ಸತ್ಯ ಕಂಡಾಗ ಅಚಲ ಮಾರ್ಗ ಶೂನ್ಯ ಒಂದು ಶೂನ್ಯ
ಎಂಬ ತತ್ವ ಅರ್ಥವಾದೀತು. ಪರಂಪರಾ
ಸ್ಮೃತಿ ಹುಟ್ಟಿನೊಡನೆ ಬರುವಂತಹದ್ದು.
ಕಾರುಣ್ಯ, ಮೈತ್ರಿ ಅಗತ್ಯವಿದೆ ಕಾರುಣ್ಯ ಮತ್ತು
ಮೈತ್ರಿಯನ್ನು ಅಚಲಮಾರ್ಗ ತನ್ನ ಉಸಿರಾಗಿಸಿಕೊಂಡಿದೆ. ಇದೊಂದು ಸಣ್ಣ ಝುರಿಯಂತೆ ಹರಿಯುತ್ತಿದೆ.
ಕಾರುಣ್ಯ ಮತ್ತು ಮೈತ್ರಿ ಜಗತ್ತಿನಲ್ಲಿ ಎಲ್ಲೆಲ್ಲೂ ಒದ್ದಾಟ, ಮಾರುವೇಷದಲ್ಲಿ,
ವೈದಿಕ, ಅವೈದ್ಯಿಕದೊಳಗೆ ಇರಬಹುದು, ಧರ್ಮ, ಆದಿವಾಸಿಗಳಲ್ಲಿ ಇರಬಹುದು. ಸಣ್ಣ ಸಣ್ಣ ಝುರಿ
ಕೂಡಿಸಿದರೆ ಅದು ನದಿಯಾಗಿ ಹರಿಯಬಹುದು. ಭೂಮಿಗೆ ಕಾರುಣ್ಯ ಮತ್ತು ಮೈತ್ರಿ ತುರ್ತಾಗಿ ಅಗತ್ಯವಿದೆ.
ಅಚಲ ಮಾರ್ಗದಲ್ಲಿ ಪರಿಪೂರ್ಣವಾಗಿ ಸತ್ಯ ಅರಿತಾಗ ಅಸತ್ಯದಿಂದ
ದೂರ ಉಳಿಯಲು ಸಾಧ್ಯ. ಮೊದಲು
ದೈವ, ಮಾನವ
ಮತ್ತು ರಾಕ್ಷಸ ಎಂಬ ಮೂರು ಮತಗಳಿದ್ದವು. ಆದರೆ, ದ್ವಾಪರ ಯುಗಕ್ಕೆ ರಾಕ್ಷಸ ಮತ ಅಂತ್ಯವಾಗಿದ್ದು,
ಮಾನವ ಮತವೇ ಅಂದಿನಿಂದ ಶ್ರೇಷ್ಠವಾಗಿ ಉಳಿದುಕೊಂಡು ಬಂದಿದೆ. ಇಂತಹ
ಸರ್ವ ಶ್ರೇಷ್ಠರಾದ ಮನುಷ್ಯರೇ ವಂಚನೆಯಂತಹ ಕೆಟ್ಟ ಕೆಲಸಗಳಿಗೆ ಮುಂದಾಗಿರುವುದು ನೋವಿನ ಸಂಗತಿ.
ಇದಕ್ಕೆಲ್ಲಾ ಅಚಲ ಮಾರ್ಗದಲ್ಲಿ ಪರಿಹಾರವಿದೆ’.
‘ಅಚಲ ಎನ್ನುವುದು ಹೊಸತೇನಲ್ಲ. ಭದ್ರಾಚಲ,
ಹಿಮಾಚಲ, ಅರುಣಾಚಲ ಹೀಗೆ ಹೆಸರುಗಳಲ್ಲೇ ಅಚಲ ಎನ್ನುವುದು ಸೇರಿಕೊಂಡಿದ್ದು,
ಹಿಂದಿನಿಂದಲೂ ಅಚಲ ಸಂಸ್ಕೃತಿ ಮುಂದುವರಿಯುತ್ತಾ ಬಂದಿದೆ. ಅಚಲ
ಮಾರ್ಗಕ್ಕೆ ಸಂಬಂಧಿಸಿದಂತೆ ತತ್ವಗಳಿದ್ದರೂ ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಲೋಕ ಕಲ್ಯಾಣಕ್ಕೆ
ಅಚಲ ಮಾರ್ಗ ಅನುಸರಿಸುವುದು ಸೂಕ್ತ.
ಕೂಡಿಬಾಳುವ ಸಂಸ್ಕೃತಿಯನ್ನು ಮೊದಲಿಗೆ ತಿಳಿಸಿಕೊಟ್ಟವರೇ ತತ್ವ
ಪದಕಾರರು. ಬೋಧಕರಿಗಿಂತ ತತ್ವ ಶಾಸ್ತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸುವ ಜ್ಞಾನ ತತ್ವ
ಪದಕಾರರಲ್ಲಿದೆ. ಇಂದಿನ ದ್ವೇಷ, ಅಸೂಯೆ, ವೈಷಮ್ಯ, ಕಲಹಗಳ ನಿವಾರಣೆಗೆ ಪರಿಹಾರ ನೀಡುವ ಶಕ್ತಿ ತತ್ವ
ಪದಗಳಲ್ಲಿ ಅಡಗಿದೆ .
ಸಮಾಜದ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಇಂದಿಗೂ ಬೆಳೆಯುತ್ತಿರುವ
ಪರಂಪರೆ ಎಂದರೆ ಗುರು ಪರಂಪರೆ. ಲೋಕದ ಹೊರಗೆ ಹೋಗದೆ ಗುರು ಮಾರ್ಗದಲ್ಲೇ ನಡೆದು ಮನುಷ್ಯನ
ಬದುಕಿಗೆ ಸರಿದಾರಿ ತೋರಿಸುತ್ತಾರೆ. ಅವರು ಹಾಡುವ ತತ್ವ ಪದಗಳಲ್ಲಿ ಸಾಂತ್ವನದ ಮಾರ್ಗವಿದೆ’ ಇಂಥಹಾ ಅಚಲ ತತ್ವಪದಕಾರರು ನಮ್ಮ ಕೋಲಾರ ಚಿಕ್ಕಬಳ್ಳಾಪುರ
ಪ್ರದೇಶದಲ್ಲಿ ಅತಿ ಹೆಚ್ಚು ಅಚಲ ಆಶ್ರಮಗಳನ್ನು ನಿರ್ಮಿಸಿಕೊಂಡು ಅಚಲ ತತ್ವ ಸಾಧನೆಯಲ್ಲಿ
ತೊಡಗಿಸಿಕೊಂಡಿದ್ದಾರೆ.
ಕನ್ನಡ ಮತ್ತು ತೆಲುಗು ಭಾಷೆಗಳನ್ನು ಬೇರೆ ಬೇರೆ
ಭಾಷೆಗಳೆಂದುಕ್ಕೊಳ್ಳದೇ ಅವು ಒಂದೇ ಭಾಷೆಯೆಂದು ಬದುಕುವ ವಿಸ್ತಾರವಾದ ಸಂಧಿ ಭೂಮಿ ಎನ್ನ
ಬಹುದಾದ ಅವಿಭಜಿತ ಕೋಲಾರ,
ತುಮಕೂರು, ಅನಂತಪುರಂ, ಮೊದಲಾದ ಪ್ರಾಂತ್ಯಗಳಲ್ಲಿ ಅಚಲಿಗರೆಂದು ಕರೆದುಕ್ಕೂಳ್ಳುವ ಒಂದು
ಪ್ರಾಚೀನ ಸಾಧಕರ ಪರಂಪರೆ ಇದೆ.
ಅಚಲವೆನ್ನುವುದು ಒಂದು ಜೀವನ ಕ್ರಮ. ಬೌದ್ಧ ಮಧ್ಯಮ ಮಾರ್ಗವಾದ
ಶೂನ್ಯತೆಯ ಅನುಸಂಧಾನವು ಅವರ ಮಾರ್ಗ. ಜಾತಿ, ಅಸ್ಪೃಶ್ಯತೆ, ಲಿಂಗತಾರತಮ್ಯ ದಂತಹಾ ಯಾವ ಕೇಡಿನ ಸಂರಚನೆಗಳೂ ಇವರ ಹತ್ತಿರ ಸುಳಿಯಲೂ
ಇವರು ಬಿಡುವುದಿಲ್ಲ. ಮನಸ್ಸಿನ ಮೂಲೆಯಲ್ಲಿ ಕೂಡ ಲೋಕಕ್ಕೇ ಮುಚಿಟ್ಟು ಬಾಳುವುದು ಏನೂ ಇರಕೂಡದು
ಎಂದು ನಂಬಿ ಬದುಕುವ ಇವರು ತಮ್ಮನ್ನು ಬಹಿರಂಗಿಗಳು ಎಂದು ಕರೆದುಕೊಳ್ಳುತ್ತಾರೆ.
ಆಂಧ್ರದ ನಾಗಾರ್ಜುನ ಕೊಂಡ, ಶ್ರೀ ಶೈಲಗಳಿಂದ ಕವಲೊಡೆದ ಈ ಮಾರ್ಗದ ತಾತ್ವಿಕ ಆಕರಮೂಲವೆಂದರೇ
ನಾಗಾರ್ಜುನನ ದಶಭೂಮಿಕಾ ಶಾಸ್ತ್ರ. ಲೋಕವನ್ನು ನಾವು ಗ್ರಹಿಸಬೇಕಾದ ಕ್ರಮ ಮತ್ತು ಸಾಧನೆಯ ವಿವಿಧ
ಹಂತಗಳನ್ನು ಹತ್ತು ಹಂತಗಳಾಗಿ ಬೌದ್ಧ ದರ್ಮದ ದಶಭೂಮಿಕಾ ಶಾಸ್ತ್ರವು ವಿವರಿಸುತ್ತದೆ.
ಪ್ರಮುದಿತ, ವಿಮಲ, ಪ್ರಭಾಕರಿ, ಅರ್ಚಿಷ್ಮತಿ, ಸುದುರ್ಜಯ, ಅಭಿಮುಖಿ, ದೂರಾಗಮ, ಅಚಲ, ಸಾಧುಮತಿ, ಮತ್ತು
ಧರ್ಮಮೇಘ. ಇವು ಹತ್ತು ಹಂತಗಳು. ಇದರಲ್ಲಿ, ಮನಸಿನ್ನಲ್ಲಿ ಸಂಗ್ರಹಗೊಂಡಿರುವ ಸಂರಚನೆಗಳಿಂದ ಮುಕ್ತನಾಗಿ ನಡೆದುಕ್ಕೂಳುವುದೇ ಅಚಲ. ಇದರ ಸಾಧಕರೇ ಅಚಲಿಗರು. ಮನೋಕೋಶದಲ್ಲಿ
ಸಂಗ್ರಹಗೊಳ್ಳುವ ಸಂರಚನೆಗಳೇ ನಮ್ಮ ತಪ್ಪು ಗ್ರಹಿಕೆಗೆ ಮತ್ತು ತಪ್ಪು ನಡೆಗೆ ಕಾರಣಗಳು. ಅವುಗಳ
ಪರಿಣಾಮಗಳಿಗೆ ಒಳಗಾಗದೆ, ಅಂದರೆ ನಮ್ಮ ಮನಸ್ಸು ನೀಡುವ ನಿರ್ದೇಶನಗಳನ್ನು ತಕ್ಷಣ ಒಪ್ಪಿಕೋಳ್ಳದೇ ಅವುಗಳನ್ನು
ಪಕ್ಕಕ್ಕೆ ಇಟ್ಟು ಒಳಿತು ಕೆಡಕುಗಳನ್ನು ಲೋಕಪರವಾಗಿ ಭಾವಿಸಿ ನಡೆದುಕೋಳ್ಳುವುದನ್ನು ‘ಅಚಲ’ ಎನ್ನುತ್ತಾರೆ.
“ಯಾರು ತನ್ನ ಮನೋಸಂರಚನೆಗಳಿಂದ ವಿಚಲಿತನಾಗುವುದಿಲ್ಲವೋ ಅವನು ಅಚಲ. ಮನೋಸಂರಚನೆಗಳಿಂದ
ಮುಕ್ತನಾಗಿ ನಡೆದುಕ್ಕೊಳ್ಳುವುದನ್ನು ಮನೋಲಯ, ಅಮನಸ್ಕ ಮುಂತಾದ ಹೆಸರುಗಳಿಂದ ಸೂಚಿಸುತ್ತಾರೆ. ನಾಗಾರ್ಜುನ ಹೇಳುವಂತೆ
ಅಚಲವು ಮಾನುಷಸಂರಚನೆಗಳನ್ನು ನಂಬದೇ ಇರುವ ಪ್ರೌಡ ಸಾಧಕ ಹಂತ. ಮನೋಸಂರಚನೆಗಳ ನಿಯಂತ್ರಣದಾಚಿನ
ಸ್ಥಿತಿಯಲ್ಲಿರುವಾತನೇ ಅಚಲಿಗ.
ಇವರು ತಮ್ಮ ಗುರುವಿನ ಉಪದೇಶದಿಂದ ಪಡೆದ ದಾಟುವಿಕೆಯಲ್ಲಿ
ಪಳಗಿರುವವರಾಗಿದ್ದು ಮನೋ ಸಂರಚನೆಗಳಿಂದ ಅವರ ಬುದ್ಧಿ ಚಂಚಲಗೋಳ್ಳುವುದಿಲ್ಲ.
ಶೂನ್ಯತೆಯನ್ನು ಇವರು ಆಲೋಚನೆಗಳಿಂದಾಗಲಿ ಅರಿವಿನಿಂದಾಗಲಿ,
ಪಡೆದುಕೊಂಡದಲ್ಲ ಅದು ಅವರ ಬದುಕಿನ ಕ್ರಮ. ಆಗುವಿಕೆಯ ಕ್ರಮ. ಆದ್ದರಿಂದ ಇವರು ಹಿಂದಿನ ಅಜ್ಞಾನ ಮತ್ತು ಸ್ವಾರ್ಥ
ರೂಪ ಪ್ರಪಂಚದ ಕಷ್ಟಗಳನ್ನು ದಾಟಿರುವದರಿಂದ ಸಹಜ ಶಾಂತರಾಗಿರುತ್ತಾರೆ. ಇವರಿಂದ ಆಗುವ
ಲೋಕೋಪಕಾರವೆಂದರೇ ಅವರು ತಮ್ಮದೆನ್ನುವ ಯಾವುದೇ ಕೇಡುಗಳನ್ನು ಇಲ್ಲಿ ಅಂಟಿಸುವುದಿಲ್ಲ. ಅನ್ಯರು
ಎಷ್ಟೇ ಜ್ಞಾನಿ ಗಳಾಗಿದ್ದರೂ ಈ ಸಾಧಕರನ್ನು ಯಾರೂ ಪ್ರಭಾವಿಸಲಾರರು ಮತ್ತು ಗೆಲ್ಲಲಾರರು. ಅವರ
ಪ್ರಜ್ಞೆ ಯಾವ ಹಂತದಲ್ಲಿರುತ್ತೆ ಎಂದರೆ ತನ್ನ ಎದುರಿಗೆ ಇರುವವರಿಗೆ ಸರಳವಾಗಿ ಅಚಲತ್ವವನ್ನು
ಹೇಳಬಲ್ಲರು. ಆದರಿಂದಲೇ ಅವರು ಇಡೀ ಜೀವಕುಲದೊಂದಿಗೆ ಸ್ನೇಹ ಜೀವಿಗಳಾಗಿರುತ್ತಾರೆ .
ವಸ್ತು ಸ್ಥಿತಿಯ ವಾಸ್ತವತೆ ಸದಾ ಅವರಿಗೆ ಹೊಸ ಬೆಳಕಿನಂತಾಗಿರುತ್ತದೆ
.ಇದು ಅವರು ಕಂಡುಕೊಂಡ ಪ್ರತ್ಯಕ್ಷ ಧ್ಯಾನ. ಇಂಥವರನ್ನು ಕನಸಿನಿಂದ ಎದ್ದವರಾಗಿರುತ್ತಾರೆ ಎಂದು
ಹೇಳಲಾಗುತ್ತದೆ. ಅಂದರೇ ಅವರು ಸದಾ ಎಚ್ಚೆತ್ತ ಸ್ಥಿತಿಯಲ್ಲಿರುತ್ತಾರೆ. ಆದ್ದರಿಂದ ಅವರಲ್ಲಿ
ಕಾರುಣ್ಯವು ಸಹಜ. ಈ ಕಾರಣವೇ ಅವರನ್ನು ಪರಿಣಾಮಗಳಿಂದಾಚೆ
ಕೊಂಡೊಯ್ಯಬಲ್ಲುದು ಹಾಗೂ ಎಲ್ಲಾ ಸನ್ನಿವೇಶಗಳಲ್ಲೂ ಇವರು ಸರಿಯಾದದನ್ನೇ ಮಾಡುವವರಾಗಿರುತ್ತಾರೆ.
ಅಚಲಿಗರು ಸುಮ್ಮನೇ ಬಾಳುತ್ತಿರುವುದರಿಂದ ಯಾರ ಅರಿವಿಗೂ ಬರುತ್ತಿಲ್ಲ.
ಈ ಅಚಲಮಾರ್ಗದ ಮಹಾಗುರುಗಳೆಂದು ಸರಹಪಾದ ಹಾಗೂ ಅಲ್ಲಮಪ್ರಭುವನ್ನು ಗುರ್ತಿಸುತ್ತಾರೆ ಹೀಗಾಗಲೇ
ಹೇಳಿದಂತೆ ಅಚಲಿಗರಿಗೆ ಸುಧೀರ್ಘವಾದ ಗುರುಪರಂಪರೆಯಿದೆ. ಅವರು ತಮ್ಮ ಗುರು ಪರಂಪರೆಯನ್ನು ಸದಾ
ಸ್ಮರಣೆಯಲ್ಲಿಟ್ಟುಕೊಂಡು ಸಾಗುತ್ತಾರೆ.
ಇದು ಅರಿವಿನ ಮಾರ್ಗವಾಗಿರುವುದರಿಂದ ಪರಿಪೂರ್ಣವನ್ನು ಸಾಧಿಸಿಕೊಂಡ
ಗುರುವನ್ನು ಅರಿವಿನ ರೂಪವೆಂದೇ ಗೌರವಿಸುತ್ತಾರೆ. ನಿರಂತರ ಸಮರಸವನ್ನು ಕಾಪಾಡಿಕೊಳ್ಳುವುದು ಅವರ
ಕ್ರಮ. ತಣ್ಣಗೆ
ಸಮಾನತೆಯನ್ನು ಅನ್ವಯಿಸಿಕೊಂಡು ಬಾಳುವುದು ಎಂತಹ ಇಕ್ಕಟ್ಟು ಎಂಬುದು ತಕ್ಷಣಕ್ಕೆ ಅರಿವಿಗೆ ಬರುವ
ಸಂಗತಿ.
ಪ್ರಕ್ಷುಬ್ಧಗೊಂಡಿರುವ ನಮ್ಮ ಆವರಣದ ಎಲ್ಲಾ ಪಂಥಗಳಿಂದ ಬಿಡಿಸಿಕೊಂಡು
ಸುಮ್ಮನೆ ಬಾಳುವ ಬಗೆಗೆ ಮಾತನಾಡುವುದು ಕೂಡ ಅಪರಾಧದಂತೆ ಕೇಳಿಸುತ್ತದೆ. ಮನೋಕೇಡುಗಳಿಂದ ಮುಕ್ತ
ನಾಗುವುದು ಸರಳ. ಸಂಗತಿಯಾಗಿ ಕಂಡರೂ ನಮ್ಮ ನಡುವೆ
ಇಡುಕಿರಿದಿರುವ ಬಿಕ್ಕಟ್ಟುಗಳ ನಿವಾರಣೆ ಸರಳ ಸಂಗತಿಯಲ್ಲ. ಅಚಲಿಗರು ಬೌದ್ಧ ಧರ್ಮ ಮಾರ್ಗಿಗಳು,
ನಮ್ಮ ನಡುವೆ ಅವರೂ ಬಾಳುತ್ತಿದ್ದಾರೆ. ಬೌದ್ಧ ಧರ್ಮವು ಈ ನೆಲದಿಂದಲೇ
ಕಣ್ಮರೆಯಾಗಿ ಹೋಯಿತು ಎಂದು ಹಲುಬಬೇಕಿಲ್ಲ. ಅವರು ಯಾವುದೇ ಧಾರ್ಮಿಕ ಸಂಕೇತಗಳ ಬಂಧನಕ್ಕೆ
ಒಳಗಾಗಲು ಬಯಸದ ಬಯಲಿನ ಸಾಧಕರು. ರೂಢಿಗೆ ಬಿದ್ದಿರುವ ನುಡಿಗಳ ಪುನರಾವೃತ್ತಿ ಚಲನೆಗಳ ಮೂಲಕ
ತತ್ವಪದಕಾರರು ಜಗತ್ತನ್ನು ಪರಿಗ್ರಹಿಸಲು ಹೋಗುವುದ್ದಿಲ್ಲ. ಅದಕ್ಕಾಗಿಯೇ ಅವರು ಅಚಲರು !
ತತ್ವಪದ, ತತ್ವಪದಕಾರರು : ಒಂದು ಪರಿಚಯ
ಮೌಖಿಕ ಪರಂಪರೆಯ ತತ್ತ್ವಪದ ಸಾಹಿತ್ಯವನ್ನು ಜನಸಮುದಾಯಗಳು ತಮ್ಮ ಒಡಲ ಕೂಸಿನಂತೆ
ಜತನ ಮಾಡಿಕೊಂಡು ಬಂದರು. ತತ್ತ್ವಪದಕಾರರಾಗಲಿ, ಸೂಫಿ ಸಂತರಾಗಲಿ, ಜನಸಾಮಾನ್ಯರ, ಕೆಳವರ್ಗದವರ ಜತೆ
ಬೆರತು ಜಾತಿ ಮತವನ್ನು ಮೀರಿ ನಿಲ್ಲುವ ಶಕ್ತಿಯನ್ನು ಸೃಷ್ಟಿಸಿದರು. ಎಚ್. ಎಸ್. ಶಿವಪ್ರಕಾಶ್ ಅವರು
ಇದನ್ನೇ ‘ಎಲ್ಲ ಜಾತಿಯ ಮರಗಳು ಕಾಡು’ ಎಂದು ಕರೆದು ಗ್ರಾಮೀಣ ಸೊಗಡಿನ ಬಂಧುತ್ವ, ಬಾಂಧವ್ಯಕ್ಕೆ ಈ
ಕಾವ್ಯದ ಅಪ್ಪಟ ದೇಸಿತನವನ್ನು ಪ್ರಕಟಿಸಿದರು.
ಭಜನೆಗಳ ಮೂಲಕ
ತತ್ತ್ವಪದಗಳು ಬಳಕೆಯಾಗುತ್ತ ಉಳಿದುಕೊಂಡು ಬಂದವು. ನಮ್ಮ ಗ್ರಾಮಗಳಲ್ಲಿ ‘ಭಜನೆ ಹಚ್ಚುವ’ ಸಂದರ್ಭಗಳಿಗೆ
ಇಂಥದೇ ಕಾರಣ ಎಂಬುದಿಲ್ಲ. ಅಮವಾಸ್ಯೆ, ಹಣ್ಣಿಮೆ, ಹಬ್ಬ ಹರಿದಿನ, ಸಾವು, ಸಂಭ್ರಮ ಕಾರ್ತಿಕ, ಕಾರಣಿಕ-
ಹೀಗೆ ಮನೆ, ಮಠ, ಗುಡಿ ಗುಂಡಾರವೆನ್ನದೆ ಎಲ್ಲಿ ಬೇಕಾದಲ್ಲಿ ಹಾಡುವುದು ಇದೆ.
ಬಹು ಭಾಷೆಯಲ್ಲಿ ತತ್ತ್ವಪದಗಳನ್ನು
ಕವಿಗಳೇ ಹಾಡಿರುವುದು ಸರಿಯಷ್ಟೇ. ಜನ ಸಮುದಾಯಗಳೂ ತತ್ತ್ವಪದಗಳನ್ನೂ ತಮಗೆ ಪ್ರಿಯವಾದ ಭಾಷೆಗೆ ಪರಿವರ್ತಿಸಿಕೊಂಡು
ಹಾಡಿದ್ದಾರೆ. ಬೇರೆ ಬೇರೆ ಪ್ರದೇಶದ ಭಜನಾ ಮೇಳಗಳು ತಮಗೆ ಹತ್ತಿರದ ಸ್ಥಳೀಯ ತತ್ತ್ವಪದಕಾರರ ಹಾಡುಗಳನ್ನು
ಬಳಸಿಕೊಂಡು ಹಾಡುತ್ತಿದ್ದವು.
ಇಂಥ ಭಜನಾ ಮೇಳಗಳು ಸೊಲ್ಲಾಪುರ, ಪಂಡರಾಪುರ, ಕಲಬುರ್ಗಿ, ಗಾಣಾಗಾಪುರ,
ಶ್ರೀಶೈಲ, ಹಂಪಿ, ಮಂತ್ರಾಲಯ, ಮುಂತಾದ ಪ್ರಸಿದ್ಧ ದೇವರ ದರ್ಶನಕ್ಕೆ ಪ್ರಯಾಣಿಸುತ್ತಿದ್ದವು. ಇಂಥ
ಸಂದರ್ಭದಲ್ಲಿ ಬೇರೆ ಭಾಷೆಯ ಹಾಡುಗಳು ಪ್ರಿಯವಾದರೆ ಅಂಥ ಹಾಡುಗಳನ್ನು ತಮ್ಮ ಭಾಷೆಗೆ ಪರಿವರ್ತಿಸಿಕೊಂಡು
ಹಾಡುತ್ತಿದ್ದವು” ಎಂಬುದನ್ನು ಡಾ.ಅಮರೇಶ ನುಗಡೋಣಿ ಗುರುತಿಸಿದ್ದಾರೆ. ತತ್ತ್ವಪದಗಳು ಕನ್ನಡದಲ್ಲಿ
ಬಗೆ ಬಗೆಯ ಹೆಸರುಗಳಿಂದ ಬೆಳೆದುಕೊಂಡು ಬಂದಿವೆ. ಪರಮಾತ್ಮನ ಬಗೆಗಿನ ಅನುಭಾವ ಈ ಪದಗಳಲ್ಲಿ ವ್ಯಕ್ತಗೊಂಡುದರಿಂದ ಇದಕ್ಕೆ ಅನುಭಾವ
ಪದಗಳೆಂದೂ, ಇವನ್ನು ಏಕತಾರಿಯಂತಹ ವಾದ್ಯದೊಂದಿಗೆ ಸ್ವರವೆತ್ತಿ ಹಾಡುವುದರಿಂದ ಇವಕ್ಕೆ ಸ್ವರ ವಚನಗಳೆಂದೂ,
ಅಂತರಂಗದ ಅರಿವಿನ ಮೂಲಭೂತ ತತ್ತ್ವಗಳನ್ನು, ಆಧ್ಯಾತ್ಮಿಕ ತತ್ತ್ವಗಳನ್ನು ಇವು ಒಳಗೊಂಡಿರುವುದರಿಂದ
ಇವಕ್ಕೆ ತತ್ತ್ವಪದಗಳೆಂದೂ, ಇವನ್ನು ಜನಸಾಮಾನ್ಯರು ಭಜನಾ ಸಂದರ್ಭದಲ್ಲಿ ಹಾಡುವುದರಿಂದ ಭಜನೆಯ ಪದಗಳೆಂದೂ
ಕರೆದುಕೊಂಡು ಬರಲಾಯಿತು. ಒಟ್ಟಿನಲ್ಲಿ ಇವು ಮೌಖಿಕ ಸಾಹಿತ್ಯದ ಗಮನಾರ್ಹ ಕಾವ್ಯ ಪ್ರಕಾರಗಳಗಿವೆ.
ತತ್ತ್ವಪದ ಪರಂಪರೆಯಲ್ಲಿ
ಮುಪ್ಪಿನ ಷಡಕ್ಷರಿ, ಚಿದಾನಂದ ಅವಧೂತರು ರಾಮಪುರದ ಬಕ್ಕಪ್ಪ, ಸಾರವಾಡ ಚಿಕ್ಕಪ್ಪಯ್ಯ, ಹಾಗಲವಾಡಿ ಮದ್ವೀರೆ
ಸ್ವಾಮಿಗಳು, ಮೈಲಾರದ ಬಸವಲಿಂಗ ಶರಣರು , ನಿಂಬರಗಿ ಮಹಾರಾಜರು , ಶಂಕರಾನಂದರು , ನೀರಲಕೇರಿ ಪಂಚಾಕ್ಷರಿ,
ಕೂಡಲೂರು ಬಸವಲಿಂಗ ಶರಣರು , ಸಾಅರ್ಪಭೂಷಣ ಶಿವಯೋಗಿ, ಬಾಲಲೀಲಾ ಮಹಾಂತ ಶರಣರು, ಶಿಶುನಾಳ ಶರೀಫ್ ಸಾಹೇಬ,
ಕಡಕೋಳ ಮಡಿವಾಳಪ್ಪ ಕೈವಾರ ಯೋಗಿನಾರೇಯಣ(ತಾತಯ್ಯ) ಯತೀಂದ್ರ, ಗಟ್ಟ ಹಳ್ಳಿ ಪರಮಹಂಸ ಆಂಜಿನಪ್ಪ ಸ್ವಾಮಿಗಳು ಮೊದಲಾದವರು ಪ್ರಮುಖರಾಗಿದ್ದಾರೆ.
ತತ್ವಪದ ಸಾಹಿತ್ಯ ನವೋದಯ ಕಾವ್ಯದ ಅಪ್ಪಟ ಮಾದರಿಗಳಿಗೆ ಪೂರಕವಾಗಿವೆ.
ಸೃಜನಶೀಲ ಕಾವ್ಯದ ಎಲ್ಲ ಬಗೆಯ ಲಕ್ಷ ಲಕ್ಷಣ ರೀತಿ ನೀತಿಗಳನ್ನು ಆಗಲೇ ಕಟ್ಟಿಕೊಂಡಿದ್ದ ಈ ರಚನಕಾರರು
ಎಲ್ಲ ಬಗೆಯ ವಸ್ತು ಸಂಗತಿಗಳಿಗೆ ಪ್ರತಿಸ್ಪಂದಿಸಿದರು. ಅವರ ಕವಿತೆಗಳು ಸಾಮಾಜಿಕ ಬದುಕನ್ನು, ಬದುಕಿನ
ಜಂಜಾಟ, ತಾಪತ್ರಯಗಳಿಗೆ ಉತ್ತರ ರೂಪವಾಗಿ ಉದಾಹರಣ ಸಂದರ್ಭಗಳನ್ನು ಬಳಸಿಕೊಂಡು ಹಾಡಿಕೊಂಡು ಬಂದರು.
ಪ್ರಕೃತಿ, ಪಕ್ಷಿ, ಪ್ರಾಣಿ, ಸೂರ್ಯ, ಚಂದ್ರ, ಹೊಳೆ ಹಳ್ಳ, ಸಾವು, ಬದುಕು
ಎಲ್ಲ ಎಲ್ಲಕ್ಕೂ ಪ್ರತೀಕ, ಹೋಲಿಕೆ, ಆಧ್ಯಾತ್ಮ, ಅನುಭಾವ ಬಳಸಿ ಸರಳ, ಸುಲಭವಾಗಿ ಯಾರೂ ಹಾಡಿಕೊಂಡು
ಆಡಿಕೊಂಡು ಸಂಭ್ರಮಿಸುವ ರೀತಿಯಲ್ಲಿ ಕಟ್ಟಿ ಹಾಡಿದರು. ಡಾ. ಕೆ. ಸಿ. ಶಿವಾರೆಡ್ಡಿ ಅವರ ಅಭಿಪ್ರಾಯದಂತೆ
“ತತ್ತ್ವಪದಕಾರರ ಪ್ರಧಾನ ಸಾಮಗ್ರಿ ಕನ್ನಡ ಸಾಹಿತ್ಯ ಪರಂಪರೆಯ ಪ್ರಮುಖ ಚಳವಳಿಯಾದ ವಚನ ಹಾಗೂ ದಾಸ
ಸಾಹಿತ್ಯದ ನೆಲೆಯಿಂದ ಬಂದದ್ದು. ಆದರೆ ಆ ಸಾಮಗ್ರಿಯನ್ನು ವರ್ತಮಾನದ ಸಂದರ್ಭವನ್ನು ಹೊರತುಪಡಿಸುವಂತೆ
ಅವರು ಪುನರ್ ನಿರ್ಮಾಣ ಮಾಡುತ್ತಾರೆ.
ಹೀಗಾಗಿ ತತ್ತ್ವಪದಕಾರರ ರಚನೆಗಳು ಪಾಂಡಿತ್ಯದ ಪ್ರಭಾವದಿಂದ ಪಾರಾಗಲು ಸಾಧ್ಯವಾಗದೆ
ಹೋಗಿವೆ. ಆದರೂ ತತ್ತ್ವಪದಕಾರರ ಒಟ್ಟು ಸೃಷ್ಟಿ ಕನ್ನಡ ಸಂಸ್ಕೃತಿಯ ಸಂದರ್ಭದಲ್ಲಿ ಗಂಭೀರವಾದ ಸೃಜನಶೀಲ
ದಾಖಲೆಯಾಗಿವೆ ಎಂದಿರುವುದು ತತ್ತ್ವಪದಕಾರರ ಹಿರಿಮೆಯನ್ನು
ಸಾರಲಾಗಿದೆ.
ಕೈವಾರ ನಾರೇಣಪ್ಪನವರ ಕಾಲಜ್ಞಾನ
ಒಂದು ವಿಶ್ಲೇಷಣೆ
ಕೈವಾರ ನಾರೇಣಪ್ಪನವರು
ರಚಿಸಿರುವ ಹಲವು ಕೀರ್ತನೆಗಳು ಹಾಗೂ ಪದ್ಯಗಳು ಜನಮಾನಸದಲ್ಲಿ ಹೆಚ್ಚು ಹೆಚ್ಚು ಪ್ರಚಲಿತವಾಗಿವೆ.
ಆದರೆ ಅವರ ಕಾಲಜ್ಞಾನ ಪದ್ಯಗಳು ಅವರ ಕೀರ್ತನೆಗಳಷ್ಟು ಪ್ರಚಲಿತವಾಗಿಲ್ಲ. ಅದಕ್ಕೆ ಕಾರಣಗಳೆಂದರೇ,
ಕಾಲಜ್ಞಾನ ದಂತಹಾ ವಿಚಾರಗಳಲ್ಲಿ ಆಸಕ್ತಿಯುಳ್ಳವರು ತೆಲುಗಿನ ವೀರಬ್ರಹ್ಮಯ್ಯವನರ ಕಾಲಜ್ಞಾನವನ್ನು
ಹೆಚ್ಚು ಗಮನಿಸುವರು. ನಾರೇಣಪ್ಪನವರ ಕಾಲಜ್ಞಾನಕ್ಕೆ ಹೊಲಿಸಿದರೇ ಬ್ರಹ್ಮಯ್ಯನವರು ಹೇಳಿರುವ ಕಾಲಜ್ಞಾನ ಹೆಚ್ಚು ಪ್ರಚಲಿತವಾಗಿದೆ. ಅದಕ್ಕೆ ಕಾರಣ
ವೀರ ಬ್ರಹ್ಮಯ್ಯನವರು ಹಲವು ರಾಜಕೀಯ ಹಾಗೂ ಸಾಮಾಜಿಕ ವಿಚಾರಗಳು ಸೇರಿದಂತೆ ಮುಂದೆ ನಡೆಯಬಹುದಾದ ಹಲವು ಮಹತ್ತರ ಘಟನೆಗಳನ್ನು
ಹೇಳಿರುವುದು. ಇನ್ನು ನಾರೇಣಪ್ಪನವರನ್ನು ಗುರ್ತಿಸಲಾಗುವ ಅಚಲ ಗುರು ಪರಂಪರೆಯಲ್ಲಿ ಇಂತಹಾ ಕಾಲಜ್ಞಾನಗಳ ಬಗ್ಗೆ ಜನ ಹೆಚ್ಚು
ಆಸಕ್ತರಾಗದಿರುವುದು ನಾರೇಣಪ್ಪವನರ ಕಾಲಜ್ಞಾನವು
ಹೆಚ್ಚು ಜನರಿಗೆ ಹತ್ತಿರವಾಗದಿರುವುಕ್ಕೆ
ಕಾರಣವಾಗಿರಬಹುದು.
ಕಾಲಜ್ಞಾನ ಎಂದ ಕೂಡಲೇ ಮೂಗು ಮುರಿಯುವ, ಕಾಲಜ್ಞಾನ ಎಂಬುದು ಮೌಡ್ಯ ಎಂಬ ಭಾವನೆಯನ್ನು ಹೊಂದಿರುವವರು ಹೆಚ್ಚು, ಆದರೇ ನಾರೇಣಪ್ಪನವರ ಕಾಲಜ್ಞಾನ ಪದ್ಯಗಳನ್ನು ಓದಿದರೇ, ಅಲ್ಲಿನ ವಿಚಾರಗಳು ಅಮೂರ್ತವಾದ ಯೋಗಿಕ ಶಕ್ತಿಗೆ ಬದಲಾಗಿ ಒಂದು ರೀತಿಯ ಗಾಢವಾದ ಸಾಮಾಜಿಕ ಅನುಭವದ ಫಲವಾಗಿ ಹೊರಹೊಮ್ಮಿದವೆಂಬುದು ನಮಗೆ ಸುಲಭವಾಗಿ ಅರ್ಥವಾಗುತ್ತವೆ. ಕಾಲಜ್ಞಾನವೆಂಬ ಪದದ ಹಿಂದಿನ ಪೂರ್ವಾಗ್ರಹಗಳನ್ನು ಬದಿಗಿಟ್ಟು ನಾರಾಣಪ್ಪನವರು ಚರ್ಚಿಸಿರುವ ವಿಚಾರಗಳನ್ನು ಸಮಾಜಿಕ ಅಧ್ಯಾಯನ, ರಾಜಕೀಯ ಹಾಗೂ ಸಾಮಾಜಿಕ ಸ್ಥಿತ್ಯಂತರಗಳು, ಭವಿಷ್ಯದ ದಿನಗಳ ಬಗ್ಗೆ ನಮ್ಮ ಪೂರ್ವಿಕರು ಹೊಂದಿದ್ದ ಕಳಕಳಿ ಅಥವಾ ಕಳವಳಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನಇಲ್ಲಿ ಮಾಡಲಾಗಿದೆ.
ಕೈವಾರ ನಾರೇಯಣಪ್ಪನವರು “ಕಾಲಜ್ಞಾನ ಸೂಕ್ಷ್ಮ ಭೀಮಲಿಂಗ ಶತಕ” ವನ್ನು ನಕ್ಷತ್ರಮಾಲಾ ಎಂಬ ಪ್ರಕಾರದ ೨೭ ಸೀಸ ಪದ್ಯಗಳಲ್ಲಿ ʼʼಅಮರ ನಾರೇಯಣುನಿ ಸಖ ಹರ ಮಹಾತ್ಮ ಅಧಿಕ ಭವಭಂಗ ಕೈವರಮು ಭೀಮಲಿಂಗʼʼ ಎಂಬ ಅಂಕಿತದಲ್ಲಿ ಹಾಗೂ “ಪ್ರಚಂಡ ನಾರೇಯಣಕವಿ ಪದ್ಯಮುಲು” ಎಂಬ ಹೆಸರಿನ ಕೃತಿಯನ್ನು “ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ” ಎಂಬ ಅಂಕಿತದಲ್ಲಿ ನಾಲ್ಕು ಸಾಲಿನ ಪದ್ಯಗಳಲ್ಲಿ ತೆಲುಗಿನಲ್ಲಿ ಕಾಲಜ್ಞಾನವನ್ನು ರಚಿಸಿದ್ದು, ಇದು ತನ್ನ ಸ್ವರೂಪದಲ್ಲಿ ಮೇಲೆ ಹೇಳಲಾದ ವಿವಿಧ ರೀತಿಯ ಕಾಲಜ್ಞಾನಗಳಿಗಿಂತ ಭಿನ್ನವಾಗಿದೆ. ಆಗಿನ ಕಾಲದ ಜನರ ಬದುಕುಗಳನ್ನು ಬಹಳ ಹತ್ತಿರದಿಂದ ಗಮನಿಸಿದ ನಾರೇಣಪ್ಪನವರು ಮುಂದೆ ಏನ್ನೆಲ್ಲಾ ಬದಲಾವಣೆಗಳಾಗಬಹುದು ಎಂಬುದನ್ನು ಊಹಿಸಿ ಅಥವಾ ಅವುಗಳನ್ನು ತಮ್ಮ ಅನುಭಾವದಿಂದ ಗ್ರಹಿಸಿ ಕಾಲಜ್ಞಾನ ರೂಪದಲ್ಲಿ ನೀಡಿರುವರು. ಯಾರೂ ನಮ್ಮ ಹಿರಿಯರೊಬ್ಬರು ನಮ್ಮ ನಡಾವಳಿಗಳನ್ನು ಕಂಡು ನಮಗೆ ಬುದ್ಧಿವಾದ ಹೇಳುವ ಅಥವಾ ಮುಂದೆ ಬರಲಿರುವ ಕಾಲದ ಬಗ್ಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ನಾರೇಣಪ್ಪನವರ ಕಾಲಜ್ಞಾನವನ್ನು ನಾವು ನೊಡಬಹುದು.
ಮೊದಲಿಗೆ “ಕಾಲಜ್ಞಾನ ಸೂಕ್ಷ್ಮ ಭೀಮಲಿಂಗ
ಶತಕ”ದ ಎರಡನೇ ಸೀಸ ಪದ್ಯದಲ್ಲಿ ನಾರೇಣಪ್ಪನವರು “ಕುಂಟೇನ ಕಾಂಡ್ಲಕೂ – ಗುರ್ರಾಲು ಗೊಡುಗುಲು ,
ತೊತ್ತು ಕೊಡುಕುಲಕೆಲ್ಲಾ ದೊರತನಂಬು.........” ( ದಳ್ಳಾಳಿಗಳಿಗೂ ಕುದುರೆಗಳು ಕೊಡೆಗಳು,
ಅಯೋಗ್ಯರಿಗೆಲ್ಲ ದೋರೆತನವಾಗುವುದು...) ಎಂದು ಹೇಳುವರು. ದಳ್ಳಾಳಿಗಳು ಕೂಡಾ ರಾಜ ಲಾಂಛನಗಳಾದ
ಕುದುರೆಗಳು ಮತ್ತು ಕೊಡೆಗಳು ಪ್ರಾಪ್ತವಾಗಿ, ಅಯೋಗ್ಯರಾದ ಅವರುಗಳೇ ದೊರೆಗಳಾಗುವರು ಎಂದು
ತಾತಯ್ಯನವರು ಹೇಳಿದ್ದಾರೆ. ಬ್ರೀಟೀಷ್ ಆಡಳಿತವನ್ನು ಕಂಡಿದ್ದ ತಾತಯ್ಯನವರು ಮುಂದೆ ಇನ್ನು
ಎಂತಹಾ ದೊರೆಗಳು ಬರಬಹುದೆಂಬುದನ್ನು ಗ್ರಹಿಸಿ ಇಲ್ಲಿ ಹೇಳಿರುವರು, ಬ್ರೀಟೀಷರು ಸಹಾ
ದಳ್ಳಾಳಿಗಳಾಗಿಯೇ ಭಾರತಕ್ಕೆ ಬಂದವರೆಂಬುದನ್ನು ನಾವು ನೆನೆಯಬಹುದು.
ನಂತರದ ೩ ನೇ ಪದ್ಯದಲ್ಲಿ “ದೊಡ್ಡ
ದೊರಲಿಂಡ್ಲಲೋ – ದೋವತುಲ ಕೊಲುವುನ್ನ ವಾನಿ ಅಧಿಕಾರಮೆವ್ವರಿಕಿ ಲೇದು| ಗ್ರಾಮಧಿಪತಿ ಪಣತಿ – ಗೌಡಿ ಮಾಟಕು ವೆರಚು ದಾನಿ
ಅಧಿಕಾರಮೆವರಿಕಿ ಲೇದು | ಕ್ಷವರಿಕುಡು ಪುಲಿವಂಟಿ – ರಾಜು ಶಿಖ ಪಟ್ಟುಕೊನು ವಾನಿ
ಅಧೀಕಾರಮೆವ್ವರಿಕಿ ಲೇದು | ..............” ( ದೊಡ್ಡ ಅರಸರ ಮನೆಯಲ್ಲಿ ಕೆಲಸ ಮಾಡುವವರು, ಊರ
ಗೌಡನ ಹೆಂಡತಿ, ರಾಜನಿಗೆ ಕ್ಷೌರಮಾಡುವ ಕ್ಷೌರಿಕನು ಇವರಿಗಿರುವ ಅಧಿಕಾರ ಮತ್ತಾರಿಗೂ ಇಲ್ಲ) ಈ
ಸೀಸ ಪದ್ಯದಲ್ಲಿ ತಾತಯ್ಯನವರು ಮನೆಯಲ್ಲಿರುವ ಕೆಲಸದವರು ರಾಜನ ಅನುಪಸ್ಥಿತಿಯಲ್ಲಿ ತಾವೇ ದೊಡ್ಡ
ಅಧಿಕಾರಿಗಳೆಂದು ಭಾವಿಸಿಕೊಂಡು ಜನರೊಂದಿಗೆ ನಡೆದುಕೊಳ್ಳುವರು ಹಾಗೇ ಊರ ಗೌಡನು ತನ್ನ ಹೆಂಡತಿಯ ಮಾತಿಗೆ ಅಂಜುವನು. ಹಾಗೂ ರಾಜನು ಹುಲಿಯಂತಹ
ಪರಾಕ್ರಮಿಯಾದರೂ ಸಹಾ ಕ್ಷೌರಿಕನು ಅವನ ತಲೆಯನ್ನು ಹಿಡಿದುಕೊಂಡು ಕ್ಷೌರಮಾಡುವನೆಂದು ಹೇಳುವರು. ಈ
ಎರಡು ಸೀಸ ಪದ್ಯಗಳು ಸಹಾ ಆಗಿನ ಕಾಲದ ಹಾಗೂ ಈಗಿನ ಪರಿಸ್ಥತಿಗಳೆರಡಕ್ಕೂ ಹೊಂದಿಕೆ ಆಗುವ ಹಾಗೆ
ಇವೆ.
ಇಂದು ದಲ್ಲಾಳಿಗಳೇ ನಮ್ಮನ್ನು
ಆಳುತ್ತಿರುವವರು, ಎಂತಹಾ ರಾಜನಾದರೂ ಕೆಲವು ಸಂಧರ್ಭಗಳಲ್ಲಿ ಕೆಲವರ ಮಾತಿಗೆ ಅಂಜಲೇ ಬೇಕು
ಎಂಬುದನ್ನು ತಾತಯ್ಯನವರು ಈ ರೀತಿಯಾಗಿ ಹೇಳಿರುವರು. ಮುಂದುವರೆದು “ ಪಶುಲ ಮೇತ ಭೂಮಿ – ಪಚ್ಚಿಕೆ
ಕಡು ಗುತ್ತ ಚೆಡ್ಡ ಸ್ತ್ರೀಲು ಗುತ್ತ – ಚೆಟ್ಲು ಗುತ್ತ | ಫಲವೃಕ್ಷಮುಲು ಗುತ್ತ – ಪಂಡ್ಲು
ಗುತ್ತ ಭಿಕ್ಷಗಾಂಡ್ಲಕು ಗುತ್ತ – ಬೀಡು ಗುತ್ತ | ಚಾಕಿರಿವಾಂಡ್ಲಕು ಗುತ್ತ –ಸಾರಾಯಿ ವಕ ಗುತ್ತ
ಹರಿದಾಸುಲಕು ಗುತ್ತ –ಅಡವಿ ಗುತ್ತ | ಮಾಲ ಮಗ್ಗಮು ಗುತ್ತ – ಮಾನ್ಯಗಾಂಡ್ಲಕು ಗುತ್ತ ಚೌಟಮಂಟಕಿ
ಗುತ್ತ- ಚರಮು ಗುತ್ತ ಯೆನ್ನಟಕಿ ಲೇನಿ ಗುತ್ತಲು –ಯೇಲ ಕಲುಗು | ಪ್ರಜಲು ಚೇಸಿನ ಪಾಪಮುನ
–ಪ್ರಬಲಮಾಯೇ|..............”( ಪಶುಗಳ ಮೇವಿಗೂ ಗುತ್ತಿಗೆ ಕೆಟ್ಟಿರುವ ಹೆಣ್ಣು ಗುತ್ತಿಗೆ, ಫಲ
ವೃಕ್ಷಗಳು ಗುತ್ತಿಗೆಗೆ , ಹಣ್ಣು ಹಂಪಲು ಗುತ್ತಿಗೆಗೆ , ಬಿಕ್ಷಕರು , ಬೀಡುಗಳು ಸಹಾ
ಗುತ್ತಿಗೆಗೆ, ಸೇವಕರು ಗುತ್ತಿಗೆಗೆ, ಸಾರಾಯಿ ಮಾರಾಟ ಗುತ್ತಿಗೆಗೆ, ಹೀಗೆ ಕಾಡು, ಹರಿದಾಸರು,
ನೇಕಾರರ ಮಗ್ಗ, ಹೀಗೆ ಹಲವಾರು ,ಎಂದಿಗೂ ಇಲ್ಲದ ಗುತ್ತಿಗೆಗಳು ಏಕೆ ಬಂದವು ? ಇವೆಲ್ಲಾ ಜನರು
ಮಾಡಿದ ಪಾಪದ ಫಲವೇ ಆಗಿವೆ ) ಇಲ್ಲಿ ಗುತ್ತ\ಗುತ್ತಿಗೆ ಎಂಬ ಪದವನ್ನು ಸುಂಕ ತೆರಿಗೆ ಎಂಬ
ಅರ್ಥದಲ್ಲಿಯೂ ಬಳಸಲಾಗಿದ್ದು, ಈ ಮಾತುಗಳ ನಮ್ಮ
ಇಂದಿನ ಪರಿಸ್ಥಿತಿಗೆ ಹಿಡಿದ ಕನ್ನಡಿಯ ಹಾಗೇ ಇವೆ.
ಜನರು ತಮ್ಮ ನಾಯಕನನ್ನ ಆರಿಸುವಲ್ಲಿ ತೋರುವ
ನಿರ್ಲಕ್ಷ್ಯ ವನ್ನೇ ಪಾಪ ವೆಂದು ಭಾವಿಸಿಕೊಂಡು ಈಗಿನ ವಾಸ್ತವ ಪರಿಸ್ಥಿತಿಯನ್ನು ಅವಲೋಕನ
ಮಾಡಿಕೊಂಡರೇ, ನಮ್ಮ ಹೊಸ ಹೊಸ ತೆರಿಗೆ ಪದ್ದತಿಗಳು, ಕೃಷಿಗೆ ಸಂಭಂಧಿಸಿದ ಹೊಸ ಹೊಸ ಮಸೂದೆಗಳು,
ಕಾರ್ಪೂರೇಟ್ ಸಂಸ್ಥೆಗಳು ಕೃಷಿಯ ಮೇಲೆ ಹಿಡಿತ ಸಾಧಿಸಬೇಕೆಂದು ಪ್ರಯತ್ನಿಸುವುದು. ಇವೆಲ್ಲವನ್ನು
ಕುರಿತಾಗಿಯೇ ತಾತಯ್ಯನವರು ಎಚ್ಚರಿಸುತ್ತಾ ನಾವು ಜಾಗ್ರತೆಯಿಂದ ಇರಬೇಕೆಂದು ಹೇಳಿದಂತಿದೆ. ಅದೇ
ರೀತಿ ಹೇಗೆ ದಲ್ಲಾಳಿಗಳಾದ ಕಾರ್ಪೋರೇಟ್ ವ್ಯವಸ್ಥೆಯ ಕುಳಗಳು ಸರ್ಕಾರವನ್ನು ನಿಯಂತ್ರಿಸುವರು
ಎಂಬುದನ್ನು ಸಹಾ ತಾತಯ್ಯನವರ ಮಾತುಗಳಿಂದ ನಾವು ಗಮನಿಸಬಹುದು.
ಮುಂದುವರೆದು ತಾತಯ್ಯನವರು ಮುಂದೆ
ಸಂಭವಿಸಬಹುದಾದ ಬೀಕರವಾದ ಪ್ರಕೃತಿ ವಿಕೋಪಗಳ ಬಗ್ಗೆ ಬರೆಯುತ್ತಾರೆ. ”ಮುಂದರ ವಕ ಶತಕ
ವತ್ಸರಂಬುಲಲೋನ ವಕ ಮಾಸಮುನಕು ವಕ ಅಲ್ಪವಾನ |
ಕ್ಷಾಮಡಾಮಮು ಜಾತ –ಚೆಡುನು ರಾಜ್ಯಂಬೆಲ್ಲ ಆಮುಡಕು ವಕ ಪಲ್ಲೆ ಅರುದುಗಾನು | ನಾಲ್ಗು
ವಾರ್ಧುಲ ನಡುಮನು –ನರುಲಕೆಲ್ಲ , ಕರುವು ವಚ್ಚುನು ಕೈಲಾಸ ಪತಿ ಸಾಕ್ಷಿ”
(ಮುಂದೆ
ನೂರು ಸಂವತ್ಸರಗಳಲ್ಲಿ ಒಂದು ತಿಂಗಳಿಗೆ ಒಮ್ಮೆ
ಅಲ್ಪವಾಗಿ ಮಳೆಯಾಗುವುದು. ಮುಂದುವರೆದು ರಾಜ್ಯವು ಕ್ಷಾಮಡಾಮರಗಳಿಂದ ಕೆಟ್ಟು ಕಂಗೆಡುವುದು.
ಹಳ್ಳಿಗಳು ವಿರಳವಾಗುವವು. ಲೋಕದ ಪ್ರಜೆಗಳೆಲ್ಲಾ
ಕ್ಷಾಮಕ್ಕೆ ತುತ್ತಾಗುವರು) ಎಂದು ಹೇಳುವರು. ಈ
ರೀತಿಯ ಪರಿಸ್ಥಿತಿಯ ಅನುಭವವನ್ನು ನಾವು ಈಗಾಗಲೇ
ಅನುಭವಿಸಿದ್ದು ದಿನೇ ದಿನೇ ಅದು ಹೆಚ್ಚಾಗುತ್ತಿರುವುದನ್ನು ಸಹಾ ನೋಡುತ್ತಿದೇವೆ. ಹಾಗೇ
ಇವೆಲ್ಲವಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಾನವನೇ ಕಾರಣನಾಗಿದ್ದು ಇದನ್ನೇ ತಾತಯ್ಯನವರು
ನಮಗೆ ಕಾಲಜ್ಞಾನದ ರೂಪದಲ್ಲಿ ಎಚ್ಚರಿಸಿರುವುದನ್ನು ನೊಡಬಹುದು.
ಮುಂದುವರೆದು ಧನಕರುಗಳು ವಿಚಿತ್ರವಾದ
ರೋಗಗಳಿಗೆ ತುತ್ತಾಗುವುದನ್ನು ,ಹಾಗೂ ಉತ್ಪಾತ ಕಾಲದಲ್ಲಿ ಜನರು ತಮ್ಮ ಮಕ್ಕಳನ್ನು ಎತ್ತಿಕೊಂಡು
ಬೀದಿ ಬೀದಿಗಳಲ್ಲಿ ಓಡುವರು ಎಂದು ಮುಂದುವೆರೆದು ಜನರು ಪಡಬೇಕಾದ ಕಷ್ಟಗಳ ಬಗ್ಗೆ ನಂತರದಲ್ಲಿ
ಬರುವ ಒಳ್ಳೆಯ ಕಾಲದ ಬಗ್ಗೆ ತಾತಯ್ಯನವರು ವಿವರಿಸಿದರೇ, ಮುಂದೆ ತಮ್ಮ “ಪ್ರಚಂಡ ನಾರೇಯಣ ಕವಿ
ಪದ್ಯಗಳು“ ಎಂಬ ಕೃತಿಯಲ್ಲಿಯೂ ಸಹಾ ತಾತಯ್ಯನವರು ಕಾಲಜ್ಞಾನವನ್ನು ಮುಂದುವರೆಸಿ ಹೇಳಿದ್ದಾರೆ.
ಪ್ರಚಂಡ ನಾರೇಯಣ ಕವಿ ಅಂಕಿತದಲ್ಲಿ
ತಾತಯ್ಯನವರು ಹದಿನೈದು ಪದ್ಯಗಳನ್ನು ರಚಿಸಿದ್ದು ಇವುಗಳಲ್ಲಿ ಬ್ರೀಟೀಷ್ ಆಳ್ವಿಕೆಯ ಕಾಲದ ಪರಸ್ಥಿತಿಯ ಬಗ್ಗೆ,
ಬರೆಯುತ್ತಾ ಅವರುಗಳು ಶೀಘ್ರವಾಗಿಯೇ ಭಾರತವನ್ನು ಬಿಟ್ಟು ಹೊಗಲಿರುವರೆಂದು ಹೇಳುವರು. ಹಾಗೇ
ಅಯೋಗ್ಯನಾದ ರಾಜನ ಆಳ್ವಿಕೆಯ ಕೇಡುಗಳನ್ನು ಈ ಭಾಗದಲ್ಲಿ ವಿವರಿಸುವರು. ಮೊದಲ ಪದ್ಯದಲ್ಲಿಯೇ
“ಅಲ್ಪಾಯುಧಸ್ತುಲು – ಅವನಿಕಿ ದೊರಲೈರಿ ಭೂದೇವತಕು – ಭಾರಮಾಯೇ| ಅಲ್ಪವಾದ ಆಯುಧಗಳು ವುಳ್ಳವರು ಭೂಮಿಯ ಒಡೆಯರಾಗಿರುವರು,
ಇವರಿಂದ ಭೂಮಿಗೆ ಭಾರವಾಗಿದೆ ಎಂದು ಪ್ರಾರಂಭಿಸಿ ತಮ್ಮ ಮುಂದಿನ ಪದ್ಯಗಳಲ್ಲಿ “ವಾನರುಲ ವಸುಧ
ಪಾಲನ ತೀರೆನು ಇಕಮೀದ ಲೇದು – ವಚ್ಚೇನು ಅಂತ್ಯಂ | ಎಂದು ಪರಂಗಿಯವರನ್ನು ವಾನರರಿಗೆ ಹೊಲಿಸಿ ಅವರ
ಪಾಲನೆಯು ತೀರಿದೆ ಇದಕ್ಕೆ ಅಂತ್ಯ ಬರಲಿದೆ ಎಂದು ಹೇಳುವರು.
ಮುಂದುವರೆದು “ಪಂಟ ಪಂಡಿನ ಕರುವು – ಪಂಟ
ಯೆಂಡಿನ ಕರುವು ಪ್ರಜಲೆಟ್ಲು ಬ್ರದಿಕೇರು ಪ್ರಾಪಂಚಮಂದು |” ಇಲ್ಲಿ ಬೆಳೆ ಬೆಳೆದರೂ ಸಹಾ ಬೆಳೆ
ಆಗದೇ ಇದ್ದರೂ ಸಹಾ ಪ್ರಪಂಚದಲ್ಲಿ ಬರ ಅಥವಾ ರೈತರ ಕಷ್ಟಗಳು ಎಂದಿಗೂ ತೀರುವುದಿಲ್ಲ ಎಂದು
ತಾತಯ್ಯನವರು ಹೇಳಿವರು. ಮುಂದೆ “ಚೋರುಲ ಪಟ್ಟಂಬಾಯೆನು – ರಾಜೆವ್ವಡು ಲೇಕಪೋಯೆ .......”
ರಾಜನೆಂಬವನು ಇಲ್ಲದೇ ಹೋದರೆ ರಾಜ್ಯವು ಚೋರರ ಪಟ್ಟಣವಾಗುವುದು ಎಂದು ತಾತಯ್ಯನವರು ಹೇಳಿರುವ
ಮಾತನ್ನು ನಮ್ಮ ಇಂದಿನ ಪರಿಸ್ಥಿತಿಗೆ ಸೂಕ್ತವಾಗಿ ಅನ್ವಯಿಸಿಕೊಳ್ಳಬಹುದಾಗಿದೆ.
ಮುಂದಿನ ಮೂರು ಪದ್ಯಗಳಲ್ಲಿ ತಾತಯ್ಯನವರು
“ಪಾಪಮು ಹೆಚ್ಚಾಯ – ಪಟ್ಟಭದ್ರುಲು ದ್ರೋಹಿ ಪಾಡಾಯ ರಾಜ್ಯಮು – ಪ್ರಜಲು ಚೆಡಿರಿ ”ಅಲ್ಪಬುದ್ಧಿ
ಪುಟ್ಟಿ – ಅಂದರಿನಿ ವರುಸಗಾ ಕುಲಬ್ರಷ್ಟು ಚೇಯ – ಬೂನಿನಾಡು “ “ವಿಪ್ರುಲ ಪಾಲಾಯ – ಇರಸಾಲು
ನಾಣ್ಯಾಲು ನಾಲ್ಗಿಂಟ ವಕ ಪಾಲು ನಗರು ಚೇರು | ವ್ಯದವ ದೊರೆತನಮಾಯ – ಏಮನವಚ್ಚುರಾ .....” ಎಂದು
ಹೇಳುವರು. ಇದರ ಅರ್ಥ ರಾಜನು ಅಯೋಗ್ಯನಾದರೇ
ಅವನಿಂದ ರಾಜ್ಯವೆಲ್ಲಾ ಹಾಳಾಗುವುದು, ರಾಜ್ಯವು
ದ್ರೋಹಿಗಳ ಪಾಲಾಗುವುದು, ಅವನ ಅಲ್ಪಬುದ್ಧಿಯ ಕಾರಣದಿಂದಾಗಿ ಪ್ರಜೆಗಳೆಲ್ಲರೂ
ಕುಲಬ್ರಷ್ಟರಾಗುವರು, ಸರ್ಕಾರಕ್ಕೆ ಆ ಮೂಲಕ ಜನರಿಗೆ ಸೇರಬೇಕಾದ ಕಂದಾಯದ ಹಣವೆಲ್ಲಾ ವಿಪ್ರರ
ಬ್ರಾಹ್ಮಣರ /ಅಧಿಕಾರಿ ವರ್ಗದವರ ಪಾಲಾಗುವುದು,
ಅಯೋಗ್ಯನ ಆಳ್ವಿಕೆಯಲ್ಲಿ ಇವೆಲ್ಲವೂ ಜರುಗುವೆಂದು ತಾತಯ್ಯನವರು ವಿವರವಾಗಿ ಹೇಳಿರುವರು. ಈ ಮಾತುಗಳು ಹಿಂದೆಂದಿಗಿಂತಲೂ
ಈಗಿನ ಪರಿಸ್ಥಿತಿಗೆ ನಮಗೆ ಅತ್ಯಂತ ಸೂಕ್ತವಾಗಿ ಹೊಂದಾಣಿಕೆಯಾಗುವುದನ್ನು ನಾವು
ಗಮನಿಸಬಹುದಾಗಿದೆ.
ಹೀಗೆ ನಾರೇಯಣಪ್ಪನವರು ತಮ್ಮ ಎರಡು ಕಾಲಜ್ಞಾನ
ಕೃತಿಗಳಲ್ಲಿ ಮುಂದೆ ನಡೆಯುವ ವಿಚಾರಗಳನ್ನು ತಮ್ಮದೇ ಆದ ದೂರದೃಷ್ಠಿಯಲ್ಲಿ ಹೇಳಿರುವರು. ಈಗಾಗಲೇ
ತಿಳಿಸಿರುವಂತೆ ತಾತಯ್ಯನವರ ಕಾಲಜ್ಞಾನವನ್ನು ಯಾವುದೇ ಅಮೂರ್ತದ ಕಲ್ಪನೆಯ ಹಿನ್ನೆಲೆಯಲ್ಲಿ
ನೋಡುವುದಕ್ಕಿಂತಲೂ ಈ ರೀತಿಯಾಗಿ ಅರ್ಥಮಾಡಿಕೊಳ್ಳುವುದು ಸೂಕ್ತ ಹಾಗೂ ಈ ವಿಧಾನ ಈಗಿನ ಕಾಲಕ್ಕೆ
ಹೆಚ್ಚು ಪ್ರಸ್ತುತ. ನಾರೇಯಣಪ್ಪನವರು ತಮ್ಮ ಮುಂದಿನ ಜನಾಂಗಕ್ಕೆ ಬದುಕುವ ಉಳಿದವರನ್ನು ಬದುಕಲು
ಬಿಡುವ ಉದ್ದೇಶದ ಹಿನ್ನೆಲೆಯಲ್ಲಿ ಅವರನ್ನು ಎಚ್ಚರಿಸುವ ರೀತಿಯಲ್ಲಿ ಈ ಕೃತಿಗಳನ್ನು
ರಚಿಸಿರುವರೆಂದು ನಾವು ಭಾವಿಸುವುದು ಸೂಕ್ತ.
ನಾರೇಯಣಪ್ಪನವರು ರಚಿಸಿರುವ ಎಲ್ಲಾ
ಕಾಲಜ್ಞಾನದ ಪದ್ಯಗಳನ್ನು ಸಹಾ ಇದೇ ರೀತಿಯಲ್ಲಿಯೇ ಅರ್ಥೈಸಿಕೊಳ್ಳುವುದೇ ಸಾಧ್ಯವೇ ಎಂಬ
ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಈ ವಿಚಾರದಲ್ಲಿ ಹಲವು ಗೊಂದಲಗಳು ಸಹಾ ಇವೆ. ಸ್ವತಃ
ನಾರೇಣಪ್ಪನವರೇ ಇದು ದೈವವೇ ತನ್ನ ಭಾಯಿಂದ ನುಡಿಸಿದ ಕಾಲಜ್ಞಾನವೆಂದು ಹೇಳಿರುವುದು ಹಾಗೂ ಕೆಲವು
ಕಾಲಜ್ಞಾನದ ವಚನಗಳು ಕೆಲವು ರೀತಿಯ ಅಮೂರ್ತ ಹಾಗೂ ಆಶ್ಚರ್ಯಕ್ಕೆ ಕಾರಣವಾಗುವ ವಿಚಾರಗಳನ್ನು
ಹೇಳುವುದು ಈ ಗೊಂದಲಕ್ಕೆ ಕಾರಣ. ಬಹುಷಃ ಹಿಂದೆ
ಚರ್ಚಿಸಿದ ಹಾಗೇ ಈ ಕಾಲಜ್ಷಾನ ನಾರೇಣಪ್ಪನವರ
ತತ್ವಪದಗಳಷ್ಟು ಅವರ ಕಾಲಜ್ಞಾನ ಜನರಿಗೆ ಹತ್ತಿರವಾಗದಿರುವದಕ್ಕೆ ಕಾರಣವಿರಬಹುದು. ಹಾಗಾಗಿ ಇಲ್ಲಿ
ಚರ್ಚೆಗೆ ತೆಗೆದುಕೊಂಡಿರುವ ಎಲ್ಲಾ ವಿವರಗಳು ನಾರೇಣಪ್ಪನವರನ್ನು ಹಾಗೂ ಅವರ ಕಾಲಜ್ಞಾನವನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಕಂಡಿತಾ ಸಹಾಯಕವಾಗುವವೆಂದು
ಹೇಳಬಹುದು.
ಕೈವಾರ ನಾರೇಣಪ್ಪನವರ ಕಾಲಜ್ಞಾನ ಕೃತಿಗಳ
ಮಾಡಿಕೊಂಡು ಕಾಲಜ್ಞಾನದ ಕುರಿತಾದ ಕೆಲವು ಅಪಕಲ್ಪನೆಗಳನ್ನು ದೂರಾಗಿಸಿಕೊಂಡು. ಅವುಗಳಲ್ಲಿ ಕೆಲವು
ವಿಚಾರಗಳನ್ನು ಈಗಿನ ಕಾಲಕ್ಕೆ ಅನ್ವಯಿಸಿಕೊಂಡು ಅರ್ಥಮಾಡಿಕೊಳ್ಖಲು ಆ ಮೂಲಕ ನಾರೇಣಪ್ಪನವರನ್ನು
ಹಾಗೂ ಅವರ ಕಾಲಜ್ಞಾನವನ್ನು ನಮ್ಮ ಹತ್ತಿರಕ್ಕೆ ತೆಗೆದುಕೊಂಡು ಅದರ ಪ್ರಸ್ತುತತೆಯನ್ನು
ಅರ್ಥಮಾಡಕೊಳ್ಳುವ ಪ್ರಯತ್ನವನ್ನು ಇಲ್ಲಿ ಮೂಲಕ
ಮಾಡಬಹುದು.
ನಾರೇಣಪ್ಪನವರ
ವಿಚಾರಗಳು :
ಸಾಮಾಜಿಕ ವಿಡಂಬನೆ:
ಶ್ರೀ ಕೈವಾರ ನಾರೇಣಪ್ಪನವರು
ತಮ್ಮ ಕೀರ್ತನೆಗಳಲ್ಲಿ
“ ಕಲ್ಲು ಕಡವ ವದ್ದ -ಸಂದಡಿಗ ವುಂಡು
ಚೆಲ್ಲ ಕಡವ ವದ್ದ – ಎವರು ಲೇರು
ಕಲ್ಲು ಮುಖ್ಯಮಾಯೆ -ಚೆಲ್ಲು ಚೆವುಕಾಯೆರಾ
ನಾದ ಬ್ರಹ್ಮಾನಂದ ನಾರಾಯಣ ಕವಿ “
ಎಂದು ಹೇಳಿದ್ದಾರೆ.
ಇದರ ಅರ್ಥ ಕಲ್ಲು ಎಂದರೇ ಮಧ್ಯದ ಮಡಿಕೆ ಇದ್ದಲಿ ಜನರು ಅದನ್ನು ಕೊಂಡುಕೊಳ್ಳಲು ಹೆಚ್ಚಾಗಿ
ಸೇರಿರುತ್ತಾರೆ, ಅದೇ ಮೊಸರಿನ
ಗಡಿಗೆ ಇದ್ದರೇ ಅದನ್ನು ಕೊಳ್ಳುವವರು ಯಾರೂ ಇರುವುದಿಲ್ಲ. ಅದೇ ರೀತಿ ಓಳ್ಳೆಯ ವಿಚಾರಗಳು ಹಾಗೂ
ಓಳ್ಳೆಯ ವ್ಯಕ್ತಿಗಳಿಗೆ ಜನರು ಹೆಚ್ಚು ಬೆಲೆ ನೀಡುವುದಿಲ್ಲ ಎಂಬುದನ್ನು ಈ ಕಂದ ವಿವರಿಸುತ್ತೆ. ಹಾಗೆಯೇ ಮೂರ್ತಿ
ಪೂಜೆಯನ್ನು ಹೇಳುತ್ತಾ
“ತ್ಸಚ್ಚಿನ ಪಶುವುಲ ಚರ್ಮಮು
ವಿಧ ವಿಧನಾದ ಧ್ವನುಲ ಪಲುಕುಲು ಪಲುಕುನ್
ಶಿಲವೇಲ್ಪುಲು ಪಲುಕವಯ್ಯ
ನಾದ ಬ್ರಹ್ಮಾನಂದ ನಾರಾಯಣ ಕವಿ “ ಎಂದಿದ್ದಾರೆ.
ಇದರ ಅರ್ಥ ಸತ್ತ ಪಶುಗಳ ಚರ್ಮವಾದರೂ ಸಹಾ ವಿವಿಧ ನಾದಗಳನ್ನು
ಮಾಡುತ್ತದೆ , ಆದರೇ
ದೇವರು ಎಂದು ಗುಡಿಯಲ್ಲಿ ಪೂಜಿಸುವ ಕಲ್ಲು ಒಂದು ಮಾತನ್ನು ಆಡುವುದಿಲ್ಲ ವೆಂದು ತಾತಯ್ಯನವರು
ಮೂರ್ತಿಪೂಜೆಯನ್ನು ನಿರಾಕರಿಸುವುದನ್ನು ಇಲ್ಲಿ ಕಾಣಬಹುದಾಗಿದೆ. ಮುಂದೆ ಬ್ರಹ್ಮನನ್ನು ಕುರಿತು ಹೇಳಲಾಗುವ, ಹಣೆಯ
ಬರಹವನ್ನು ವಿಮರ್ಶಿಸುತ್ತಾ,
ವಲ್ಲನಿ ಸತಿ ವಲ್ವನಿ ಪತಿ
ತಲವ್ರಾತಲು ವಕ್ಕಟಾಯೇ ತಪ್ಪದು ವೈರಂ /
ಅಜುಡೆಂತ ಅಲ್ಪುಡಾಯೆನು
ನಾದ ಬ್ರಹ್ಮಾನಂದ ನಾರಾಯಣ ಕವಿ .” ಎಂದಿದ್ದಾರೆ.
ಇದರ ಅರ್ಥ ಒಲ್ಲದ ಗಂಡನಿಗೆ ಒಲ್ಲದ ಹೆಂಡತಿ
ಅವರಿಬ್ಬರಿಗೂ ಗಲಾಟೆ ತಪ್ಪಲಿಲ್ಲ, ಇಂತಹಾ ಬರಹವನ್ನು ಬರೆದವನು ಬ್ರಹ್ಮನು ಅದೆಷ್ಟು ವಿವೇಚನೆಯಿಲ್ಲದೇ ಅಲ್ಪನು?
ಎಂದು ಹೇಳುವ ಮೂಲಕ ಪ್ರತಿ ವಿವಾಹವು ಸ್ವರ್ಗದಲ್ಲಿಯೇ
ನಿಶ್ಚಯಿಸಲ್ಪಟ್ಟಿರುತ್ತೆ ಎಂಬ ಬ್ರಾಹ್ಮಣವಾದಿ ಚಿಂತನೆಯನ್ನು ತಾತಯ್ಯ ನವರು ಅಂತಹಾ ಹಣೆಬರಹ
ಬರೆಯುವ ಬ್ರಹ್ಮ ನನ್ನು ನಿರಾಕರಿಸುವುದನ್ನು ಇಲ್ಲಿ ನಾವು ಗುರ್ತಿಸಬಹುದು.
ಮುಂದೆ ಮತ್ತೂಂದು ಕಂದ ದಲ್ಲಿ
“ ಮಾಲವಾಡನಿ ಜನಲು -ಯೇಲ ನಿಂದಿಂತುರು
ಮಾಲವಾನಿ ಆತ್ಮ – ಮಂದಿರಮುನ /
ಸಕಲ ದೇಹವಿಹಾರಿ ಸದ್ಗುರುಡು ವುಂಡುರಾ
ನಾದ ಬ್ರಹ್ಮಾನಂದ ನಾರಾಯಣ ಕವಿ //
ಎಂದು ಹೇಳಿದ್ದಾರೆ, ಇದರ ಅರ್ಥ ಹೊಲೆಯ ಹೊಲೆಯ ಎಂದು ಜನ ಹೊಲೆಯನನ್ನು ನಿಂದಿಸುತ್ತಾರೆ,
ಆದರೇ ಹೊಲೆಯನ ಹೃದಯ ಮಂದಿರದಲ್ಲಿಯೂ ಸಹಾ ಸಕಲ ದೇಹಸಂಚಾರಿ ಆದ ದೇವನು
ಗುರು ರೂಪನಾಗಿ ಇರುತ್ತಾನೆ. ಎಂದು
ತಾತಯ್ಯನವರು ಹೇಳುತ್ತಾರೆ.
“ಬಡವನ ದುರ್ಬಲನ ಹೃದಯದಲ್ಲಿರುವ ದೇವರನ್ನಲ್ಲದೇ ಬೇರೆ ದೈವವನ್ನು ನಾನು
ಮಾನ್ಯ ಮಾಡುವುದಿಲ್ಲ, ಇಂತಹಾ ಧೀನ ದುರ್ಬಲನ ಸೇವೆಯ ಮೂಲಕ ಸತ್ಯ ಸ್ವರೂಪನಾದ ದೇವರನ್ನು ಪೂಜಿಸುತ್ತೇನೆ “ ಎಂಬ
ಮಹಾತ್ಮ ಗಾಂಧಿರವರ ಮಾತು ಈ ಚರ್ಚೆಯಲ್ಲಿ ಪ್ರಸ್ತುತ ವೆನಿಸುತ್ತದೆ.
ಇದೇ ಚಿಂತನೇ ಕೈವಾರ ತಾತಯ್ಯನವರದ್ದು ಸಹಾ,
ಹಾಗೇ ಮುಂದೆ ತಾತಯ್ಯನವರು
ಮಾನವನ ಕೊನೆ ಕ್ಷಣಗಳ ಬಗ್ಗೆ ಹೇಳುತ್ತಾ,
“ ಕಾಟಕಿ ತ್ಸನುವೇಳ -ಕನಕಾಭರಣಮುಲು
ದೋಚುಕೊಂದುರು ಇಂಟಿ – ದೊಂಗಲಂತಾ /
ಕಟಕಟ ಇಟುವಂಟಿ- ವಿಶ್ವಾಸ ಘಾತಕುಲು
ನಾದ ಬ್ರಹ್ಮಾನಂದ ನಾರಾಯಣ ಕವಿ //
ಎಂದಿದ್ದಾರೆ.
ಇದರ ಅರ್ಥ ಮನುಷ್ಯ ಸತ್ತಮೇಲೆ ಅವನನ್ನು ಸ್ಮಶಾನಕ್ಕೆ ಒಯ್ಯುವ
ಸಮಯದಲ್ಲಿ ಅವನ ಮೈಮೇಲಿನ ವಸ್ತು ಒಡವೆಗಳನ್ನೆಲ್ಲಾ ಮನೆಯವರೇ ದೋಚಿಕೊಂಡು ಬಿಡುತ್ತಾರೆ. ಇಂತಹಾ
ವಿಶ್ವಾಸ ಘಾತಕರು ಬೇರೆಲ್ಲಿಯೂ ಸಿಗುವುದ್ದಿಲ್ಲ.
ಎಂದರೇ ಮನುಷ್ಯ ತನ್ನ ಜೀವನವನ್ನೆಲ್ಲಾ ಹಣಕ್ಕಾಗಿ ದುಡಿಯುತ್ತಾ ಕಳೆದು
ಒಂದು ದಿನ ಮರಣ ಹೊಂದಿದಾಗ ತನ್ನ ಸ್ವಂತ ಮಕ್ಕಳು ಅದೇ ಹಣಕ್ಕಾಗಿ ಶವದ ಮೇಲಿನ ಒಡವೆಗಳನ್ನು
ಕಿತ್ತುಕೊಂಡು, ಆಸ್ತಿಗಾಗಿ ಕಿತ್ತಾಡುವುದನ್ನು ನಾವು ನೋಡುತ್ತೇವೆ. ಇದಕ್ಕೆ ಕಾರಣ ಒಂದು ರೀತಿಯಲ್ಲಿ ಅವರನ್ನು
ಬೆಳೆಸಿದ ತಂದೆ ತಾಯಿಗಳೇ ಆಗಿರುತ್ತಾರೆ. ಮಕ್ಕಳನ್ನು ಚಿಕ್ಕಂದಿನಿಂದಲೇ ಪ್ರೀತಿ ವಿಶ್ವಾಸ ಹಾಗೂ
ಆದರ್ಶಗಳಿಂದ ಬೆಳೆಸಿದರೇ ಮುಂದೆ ಮಕ್ಕಳು ಒಳ್ಳೆಯವರಾಗಿ ಬಾಳುತ್ತಾರೆ.
ಎಂಬ ಸಂದೇಶದ ಜೊತೆ ಜೀವನವೆಲ್ಲಾ ಹಣಕ್ಕಾಗಿ ಜೀವಿಸುವವರು ಕಡೆಗೆ ಸತ್ತಾಗ ಏನನ್ನು ತೆಗೆದುಕೊಂಡು
ಹೊಗುವುದಿಲ್ಲ ಎಂಬ ಉಪದೇಶವವೂ ಇಲ್ಲಿ ಅಡಗಿದೆ.
ಹಾಗೇ ಮುಂದೇ ಮತ ಸಾಮರಸ್ಯದ ವಿಚಾರವನ್ನು ಹೇಳುತ್ತಾ ,
“ ವಿಷ್ಣು
ಮತಮುವಾರು – ಹೀನುಲೈಪೊಯಿರಿ
ಶಿವಮತಮುವಾರಿಕಿ – ಶಿಗ್ಗು ಲೇದು
ಯೋಗ ಮತಮುವಾರು – ಹೆಚ್ಚೈನ ವಾರಯಾ
ನಾದ ಬ್ರಹ್ಮಾನಂದ ನಾರಾಯಣ ಕವಿ “ ಎಂದಿದ್ದಾರೆ.
ಇದರ ಅರ್ಥ ವಿಷ್ಣು ಮತದವರು ವಿಷ್ಣುವಿನ ಸರ್ವೋತ್ತಮ ವಾದವನ್ನು
ಹಿಡಿದಿದ್ದರಿಂದ ತಾರತಮ್ಯದ ಅಲ್ಪತೆ ಉಂಟಾಗಿ ಕೆಟ್ಟರು,ಶಿವ ಮತ ದವರಿಗಾದರೂ ಶಿವನೋಬ್ಬನೇ ಇತರೆ ದೇವತೆಗಳಿಗಿಂತ ಹೆಚ್ಚಿನವನೆಂದು ವಾದಿಸುವಲ್ಲಿ
ನಾಚಿಕೆಯುಂಟಾಗಲಿಲ್ಲ ಇಂತಹಾ ಬಿನ್ನತೆಗಳಿಂದ ಮತಗಳವರು ತಮ್ಮ ಶ್ರೇಷ್ಟತೆಯನ್ನು ಪ್ರತಿಪಾದಿಸ ಕ್ಕೊಳ್ಳುತ್ತಲೇ
ತಾವು ಕಡಿಮೆಯವರಾದರೂ ಹಾಗೇ ಕಾಯಕ ಯೋಗಿಗಳು ತಮ್ಮಷ್ಟಕ್ಕೆ ತಾವಿದ್ದು ಶ್ರೇಷ್ಟರಾದರು ಎಂದು
ತಾತಯ್ಯನವರು ಹೇಳಿದ್ದಾರೆ. ಮುಂದುವರೆದು
ಮತ್ತೂಂದು ಪದ್ಯದಲ್ಲಿ ಮಾನವೀಯತೆಯ ಧರ್ಮವನ್ನು ಹೇಳುತ್ತಾ,
ಪುಟ್ಟಯೆಕ್ಕಿನವಾನಿ -ಪೂರಿ ಕರಿಚಿನ ವಾನಿ
ಪಾರಿ ಪೋಯೇವಾನಿ -ಚಂಪರಾದು
ತನಯುಲು ವೀರನಿ -ದಬ್ಬುಕೋವಲೆನಯ್ಯಾ
ನಾದ ಬ್ರಹ್ಮಾನಂದ- ನಾರೇಯಣ ಕವಿ.
ಇಲ್ಲಿ ತಾತಯ್ಯನವರು ಮಾನವ ಧರ್ಮ ಹಾಗೂ ದಯೆ ಕರುಣೆಗಳನ್ನು “ದಯವೇ ದರ್ಮದ ಮೂಲ“ ಎಂಬ ಬಸವಣ್ಣನ ನುಡಿಯಂತೆ ದಯೆ ಹಾಗೂ ಕರುಣೆಯ ಮಹತ್ವವನ್ನು ಇಲ್ಲಿ
ಹೇಳಿದ್ದಾರೆ. ಈ ಕಂದಪದ್ಯದ ಅರ್ಥ ಓಡಿ ಹೋಗುತ್ತಿರುವ, ಕಷ್ಟದಲ್ಲಿರುವ, ಸೋತು ಶರಣಾದ ಯಾರೇ ಆಗಿರಲೀ ಅವನನ್ನು ಮತಷ್ಟು ಭಾಧಿಸದೇ ಅವರನ್ನು
ಮಕ್ಕಳಂತೆ ಪ್ರೀತಿಯಿಂದ ಕಂಡು ಗೌರವಿಸಬೇಕೆಂದು ತಾತಯ್ಯನವರು ಹೇಳಿದ್ದಾರೆ. ಮುಂದೇ
ದೈವ ಹಾಗೂ ಪೂಜಾರಿಯ ಬಗ್ಗೆ ಹೇಳುತ್ತಾ ..
“ ತಬ್ಬಲಿ ದೇವರಕು -ದಬ್ಬರ ಪೂಜಾರಿ
ವರಮಿಚ್ಚೇ ದೇವುಡು – ವಕಡು ಲೇಡು
ತಮಲೋನಿ ದೇವರನು – ತಾಮು ಕನಲೇರಯ್ಯ
ನಾದ ಬ್ರಹ್ಮಾನಂದ- ನಾರಾಯಣ ಕವಿ “
ಎಂದರೇ, ಗೊತ್ತು ಗುರಿಯಿಲ್ಲದ ದೈವಕ್ಕೆ, ವೇಶದಾರಿಯಾದ ಸುಳ್ಳು ಪೂಜಾರಿಯೊಬ್ಬ,
ಇಂಥಹ ಎಷ್ಟೋ ದೇವರುಗಳು ಎಷ್ಟೋ ಮಂದಿ ಪೂಜಾರಿಗಳು ಕಂಡು ಬರುತ್ತಾರೆ,
ಲೋಕದಲ್ಲಿ, ಆದರೇ ಇವರಲ್ಲಿ ವರವನ್ನು ಕೊಡುವ ದೇವರು ಒಬ್ಬರೂ ಇಲ್ಲ,ಜನರು ತಮ್ಮಲೇ ಅಡಗಿರುವ ಆ ದೇವರನ್ನು ತಾವು ಕಾಣಲಾರದಾಗಿದ್ದಾರೆ. ಎಂದು
ಇಲ್ಲಿ ಹೇಗೆ ಪೂಜಾರಿಗಳು ದೇವರ ಹೆಸರಿನಲ್ಲಿ ಜನರನ್ನು ದಿಕ್ಕುತಪ್ಪಸುತ್ತಾರೆ ಎಂಬುದನ್ನು
ತಾತಯ್ಯನವರು ವಿವರಿಸಿದ್ದಾರೆ. ಮುಂದೆ
“ಮಾಯವಾದಿ ನರುಲು – ಮತಮುನಕು ಲೋನೈರಿ
ಮಾಯಗುರುನಿ ಭೋದ –
ಮಂಚಿದನುಚು
ಚೆಡಿರಿ ಯೇಡು ಚೇಟ್ಲು – ಚೆಪ್ಪೇದಿ ಯೇಲರಾ
ನಾದ ಬ್ರಹ್ಮಾನಂದ ನಾರಾಯಣ ಕವಿ “
ಮಾಯವಾದವನ್ನು ನಂಬುವ ನರರು ಮತಗಳಿಗೆ ಒಳಗಾದರು,
ಮಾಯವಾದಿ ಗುರುಗಳನ್ನು ನಂಬಿ ಕೊಂಡು ಅವರು ಕೆಟ್ಟರು,
ಇಂತಹವರ ಬಗ್ಗೆ ಏನು ಹೇಳಲಿ? ಎಂದು
ತಾತಯ್ಯನವರು ಮಾಯವಾದವನ್ನು ಖಂಡಿಸುವುದನ್ನು ಇಲ್ಲಿ ನೋಡಬಹುದು ಅಲ್ಲದೇ ಮತ ಎಂಬುದು ಒಂದು
ಮಾಯವಾದ ಎಂದು ಅದನ್ನು ಸಹಾ ತಾತಯ್ಯನವರು ತಿರಸ್ಕರಿಸಿದ್ದಾರೆ. ಮುಂದೆ,
“ವಿನ್ನವಾರಂದರೂ – ವೆರ್ರಿವಾಡಂದರು
ತಮಕು ಪಟ್ಟಿನ ವೆರ್ರಿ – ದೇವುಡೆರುಗು
ಮೂರ್ಖುಡಾ ವೆರ್ರಿ – ಮೂಲಮು ತೆಲುಸುನಾ ?
ನಾದ ಬ್ರಹ್ಮಾನಂದ ನಾರಾಯಣ ಕವಿ “
ಇಲ್ಲಿ, “ಹುಚ್ಚುತನವೇ ಅನುಗ್ರಹ“ ಎಂಬ ‘ನೀಷೆ’ಯವರ ಮಾತಿನಂತೆ
ತಾತಯ್ಯನವರು ಎಲ್ಲರೂ ನಮ್ಮನು ಹುಚ್ಚನೆಂದು ಕರೆಯುತ್ತಾರೆ. ಆದರೇ ಹುಚ್ಚುತನದ ಮೂಲ ಅಥವಾ ಅದರ
ಅನುಭವ ಮೂರ್ಖರಿಗೆ ಸಿಗುವುದೇ?
ಎಂದು ತಾತಯ್ಯನವರು
ಕೇಳುತ್ತಾರೆ. ಹಾಗೇ ಕಲ್ಲು ದೇವರುಗಳ ಬಗ್ಗೆ ಕುರಿತು ತಾತಯ್ಯನವರು ಮತ್ತೂಂದು ಕಡೆ,
“ ಉಂಡ ಚೂಚೇನಂಟೆ -ಉಚ್ವಾಸಮುಲು ಲೇವು
ಅನಮೈನನು – ಅರಗಿಂಚರಾದು
ಮಾಟಲಾಡನಿ ಮಂಕು -ಬೊಮ್ಮಲವಿ ಯೇಲರಾ
ನಾದ ಬ್ರಹ್ಮಾನಂದ ನಾರಾಯಣ ಕವಿ “
ಎಂದರೇ ಗುಡಿಯಲ್ಲಿರುವ ದೇವರುಗಳು ಉಚ್ವಾಸ ನಿಚ್ವಾಸ ಗಳ್ಳಿಲ್ಲದ
ಅನ್ನವನ್ನು ಉಣ್ಣದ ಮಂಕು ಬೊಂಬೆಗಳು ಏಕೆ ಬೇಕು ಎಂದು ತಾತಯ್ಯನವರು ಕೇಳುತ್ತಾರೆ. ಮತ್ತೊಂದು ಕಡೆ
ಮಹಾಭಾರತ ಕತೆಯನ್ನು.
“ಭಂಡ ಸಂಸಾರಮುನ – ಭಾರತ ಕಥಲಾಯೆರಾ“ ಎಂದು
ಹೇಳಿ,ಭಂಡ ಸಂಸಾರಿಗಳಿಂದ ಆದದ್ದು ಮಹಾ ಭಾರತ ಕತೆ ಎಂದು ಭಾರತ ಕತೆಯನ್ನು
ತಾತಯ್ಯನವರು ವಿಮರ್ಶಿಸಿದ್ದಾರೆ.
ಹಾಗೆಯೇ ಕೆಲವು ಭಂಡಾಯದ ಹೇಳಿಕೆಗಳನ್ನು ಇಲ್ಲಿ ವಿವೇಚನೆಗೆ
ತೆಗೆದುಕೊಳ್ಳುವುದಾದರೇ, ತತ್ವಪದಕಾರರು ಮೂಲತಃ ಭಂಡಾಯಗಾರರೇ ಆಗಿದ್ದಾರೆ, ಆಗಿನ ಕಾಲದ ಸಾಮಾಜಿಕ ಪಿಡುಗುಗಳನ್ನು,
ಬ್ರಾಹ್ಮಣವಾದಿ ಆಚರಣೆಗಳನ್ನು, ಶೋಷಣೆ, ಪ್ರಭುತ್ವ, ದುರಾಡಳಿತ, ವಸಾಹತುಶಾಹಿ ವ್ಯವಸ್ಥೆಗಳ ವಿರುದ್ಧ ತತ್ವಪದದಕಾರರು ಬಂಡಾಯವನ್ನು ವ್ಯಕ್ತಪಡಿಸಿದ್ದಾರೆ. ಆದರ ಕೆಲವು ಸುಳಿವುಗಳನ್ನು ಹಿಂದೆಯೇ
ಚರ್ಚಿಸಲಾಗಿದೆ.
ಇನ್ನು ಮುಂದುವರೆದು ನೋಡುವುದಾದರೇ,
ಮೊದಲನೆಯದಾಗಿ ಕೈವಾರ
ತಾತಯ್ಯನವರ ಒಂದು ಕೀರ್ತನೆಯನ್ನು ನೋಡುವುದಾದರೇ,
“ ಈ
ಊರವೂಳಗಿಷ್ಟು ಉತ್ಪಾತವೇನೋ
ದುರಿತ ಸಂಹರ ನಾರೇಯಣ ಹರಿಯೇ “
ವಿಶ್ವಾಸ ಘಾತಕನು ಇಲ್ಲಿರುವ ಶ್ಯಾನುಭೋಗ
ಕೆಟ್ಟ ಮುಂಡೆ ಗಂಡ ಗುರಿಕಾರನೊ “
ಎಂದು ಆ ಊರಿನ ಶ್ಯಾನುಭೋಗನನ್ನು ಅವನ್ನು ಮಾಡುತ್ತಿದ ಮೋಸದ
ಕೆಲಸಗಳನ್ನು ಇಲ್ಲಿ ಕೈವಾರ ತಾತಯ್ಯನವರು ವಿವರಿಸಿದ್ದು, ಈ ಕೀರ್ತನೆಯನ್ನು ತಾತಯ್ಯನವರು ಕನ್ನಡದಲ್ಲಿಯೇ ಹೇಳಿದ್ದಾರೆ.
ಇದು ಆ ಊರಿನ ಶಾನುಭೋಗನ ವಿರುದ್ಧ ಕೀರ್ತನೆ ರಚಿಸಿ ಅವನ ವಿರುದ್ಧ ತಮ್ಮ
ಬಂಡಾಯವನ್ನು ಈ ಕೀರ್ತನೆಯ ಮೂಲಕ ಪ್ರಕಟಿಸಿದ್ದಾರೆ. ಮುಂದೆ ವಸಾಹತುಶಾಹಿ ಆಡಳಿತ ಅವರ ಕುತಂತ್ರಗಳು ಮೊದಲಾದವನ್ನು
ಮತ್ತೂಂದು ಕೀರ್ತನೆಯಲ್ಲಿ,
“ ಕೋತ್ತಗಾ ಒಕ ಚೇಪವಚ್ಚಿ ನಿಂಡು ಚೆರುವು ನೀಳ್ಳು ಅನೀ ಮ್ರಿಂಗಿ
ಬಟ್ಟ ಬಯಲು ಜೇಸೇರಾ, ಓ ಶಿಷ್ಯಾಗ್ರಾತನಯಾ
ಮುತ್ಯಮಂತಾ ಚೇಪ ಚೂಡರಾ “
ಎಂದು ಹಾಡಿದ್ದಾರೇ.
ಇಲ್ಲಿ, ಬ್ರಿಟೀಷರನ್ನೇ ಗುರಿಯಾಗಿಟ್ಟಕೊಂಡು,
ಅವರನ್ನು ಮೀನಿಗೆ ಹೋಲಿಸಿರುವುದನ್ನು ಕಾಣಬಹುದಾಗಿದೆ. ಕೀರ್ತನೆಯ
ಅರ್ಥವನ್ನು ನೋಡುವುದಾದರೇ ,
“ಹೊಸದಾಗಿ ಬಂದ ಒಂದು ಮೀನು ತುಂಬಿದ ಕೆರೆಯ ನೀರನೆಲ್ಲಾ ನುಂಗಿ,
ಭಟಾಭಯಲು ಮಾಡಿತ್ತೋ , ಓ ಶಿಷ್ಯಾ
ಮುತ್ತಿನಷ್ಟು ಗಾತ್ರದ ಮೀನು ಅದು “ ಎಂದು
ಮುಂದೆ ಅದೇ ಪದ್ಯದ ಮುಂದಿನ ಸಾಲುಗಳಲ್ಲಿ
“ ಮಿಂಟಿಲೋನ ಮೆರಪು ಮೆರಸೆ – ಮಂಟಲೋನಾ ಮಲಕ ಮೋಲಿಚೆ
ಚೂಡಚೂಡ ಪೆರಿಗಿಪೋಯೆರಾ
ಓ ಶಿಷ್ಯಾಗ್ರಾತನಯಾ.
ಮಂಟಮಿಂಟಿಕಿ ಏಕಮಾಯೆರಾ “
ಎಂದು ಹಾಡಿದ್ದಾರೆ.
ಈ ಸಾಲುಗಳಲ್ಲಿ ಮೇಲಿನವು ಬ್ರೀಟೀಷರಿಗೆ ಹಾಗೇ ನೀರನ್ನು ಇಲ್ಲಿನ ವ್ಯಾಪಾರ ಹಾಗೂ ಸಂಪತ್ತಿಗೆ
ರೂಪಕವಾಗಿ ತೆಗೆದುಕೊಂಡು ಮುತ್ತಿನ ಬಣ್ಣದ ಬ್ರಿಟೀಷರು ಬಾರತ ಕೆರೆಗೆ ಬಂದು ಇಲ್ಲಿನ ಸಂಪತ್ತೆಂಬ
ನೀರನ್ನು ಎಲ್ಲಾ ಕುಡಿದು ಬಟ್ಟಾ ಬಯಲಾಗಿಸಿದರೆಂದು ಹೇಳಿದರೇ, ಮುಂದಿನ ಪದ್ಯ ಬ್ರಿಟೀಷ್ ಆಡಳಿತ ತೀವ್ರಗತಿಯಲ್ಲಿ ಬೆಳೆದುದರ ವಿಚಾರವನ್ನು ರೂಪಕವಾಗಿ
ಹೇಳಿದೆ. ಬಹಳಷ್ಟು ತತ್ವಪದಕಾರರ ರಚನೆಗಳು ವಸಾಹತುಶಾಹಿ ಆಗಮನದ ಬಗ್ಗೆ ದಿವ್ಯ
ಮೌನವನ್ನೇ ವಹಿಸಿವೆ. ಅವು ಕೈವಲ್ಯಾನುಭವವನ್ನೇ ಪುನರಾವರ್ತಿಸಿ ಹೇಳುವಷ್ಟಕ್ಕೇ ತೃಪ್ತಿ ಹೊಂದಿ, ಆ ಕಾಲದ ರಾಜಕೀಯ ಕ್ಷೋಭೆಗಳಿಗೆ ಕಿವಿಗೊಡದಾಗಿದೆ,
ನಾರಾಯಣ ತಾತನವರು ಕೂಡ ತಮ್ಮ ಶತಕತ್ರಯಗಳಲ್ಲಿ ಮತ್ತು ಕಾಲಜ್ಞಾನದಲ್ಲಿ ಇಂಥಹ ಕೈವಲ್ಯಾನುಭವವನ್ನೇ
ಹೇಳುತ್ತಾರಾದರೂ ವಸಾಹತುಶಾಹಿಯ ಬಗ್ಗೆಯೂ
ಕರಾರುವಾಕ್ಕಾದ ಅಭಿಪ್ರಾಯಗಳನ್ನು ನೀಡಿದ್ದಾರೆ, ಅವರು ವಸಾಹತುಶಾಹಿಯ
ಫಲವಾದ ಬಲತ್ಕಾರದ ಮತಾಂತರವನ್ನು ಖಂಡಿಸಿದ್ದಾರೆ.
ಯಾಕೆಂದರೆ ವಸಾಹತೋತ್ತರವಾದ ಆರ್ಥಿಕ ವ್ಯವಸ್ಥೆಯ ಬಗ್ಗೆ ವಸಾಹತುಶಾಹಿಯ ಆರಂಭಘಟ್ಟದಲ್ಲಿ ಜೀವಿಸಿದ್ದ
ನಾರಾಯಣ ತಾತನವರು ಇಷ್ಟು ಖಚಿತವಾಗಿ ಯೋಚಿಸಿದ್ಧಾದರೂ
ಹೇಗೆ ಸಾಧ್ಯವಾಯಿತೆಂದು
ಆಶ್ಚರ್ಯಪಡುವಂತಾಗುತ್ತದೆ. ಪ್ರಕೃತಿ ಸಂಸತ್ತಿನ ಹಾಗೂ ಸೌಂದರ್ಯತ್ಮಕ ಅಂಶಗಳ
ವಾಣಿಜೀಕರಣದ ಬಗ್ಗೆ ನಾರಾಯಣ ತಾತನವರ ಶತಕಗಳು ಎಷ್ಟು ಸೂಕ್ಷ್ಮ ಗ್ರಹಿಕೆಯದ್ದಾಗಿದೆ ಎಂದರೆ, ವಸಾಹತುಶಾಹಿ ಎಲ್ಲವನ್ನೂ -ಧರ್ಮ, ಪ್ರಕೃತಿಯಿಂದ ಮೊದಲ್ಗೊಂಡು ಮನುಷ್ಯ ಸಂಬಂದಗಳವರೆಗೂ – ಏನೆಲ್ಲವನ್ನೂ
ವಾಣಿಜೀಕರಣಗೊಳಿಸಬಲ್ಲದೆಂಬ ಅದರ ಒಳ ಉದ್ದೇಶವನ್ನುವರು ಅರಿತಿದ್ದಾರೆಯೇನೂ ಎನ್ನುವಷ್ಟು ವಸಾಹತು
ಶಾಹಿಯ ಪ್ರಧಾನ ಉದ್ದೇಶವೂ ವಸಾಹತು ಸಮಾಜವನ್ನಿಡೀ ವಾಣಿಜ್ಯ ದ ನೆಲೆಯಿಂದ ಪರಿಭಾವಿಸುವುದೇ
ಆಗಿದೆಯಷ್ಟೇ .
ಒಂದು ವಚನ ನೊಡುವುದಾದರೆ,
“ಪಶುಲಮೇತ ಭೂಮಿ ಗುತ್ತ-
ಅಡವಿ ಗುತ್ತ
ಚೆಡ್ಡ ಸ್ತ್ರೀಲು ಗುತ್ತ- ಚೆಟ್ಲು ಗುತ್ತ
ಪಲವೃಕ್ಷಮುಲು ಗುತ್ತ- ಪಂಡ್ಲು ಕಾಯಲು ಗುತ್ತ
ಬಿಕ್ಷಗಾಂಡ್ಲುಕು ಗುತ್ತ- ಬೀಡುಗುತ್ತ
ಚಾಕಿರಿವಿಂಡ್ಲಕು ಗುತ್ತ- ಸಾರಾಯಿ ವಕ ಗುತ್ತ
ಮಾಲಮಗ್ಗಮು ಗುತ್ತ – ಮಾನ್ಯಗಾಂಡ್ಲುಕು ಗುತ್ತ
ಚೌಟಮಂಟಿಕೆ ಗುತ್ತ – ಚಮರು ಗುತ್ತ “
ಗೋಮಾಳದಿಂದ ಮೊದಲುಗೊಂಡು ಕೆಟ್ಟ ಹೆಣ್ಣುಗಳು,
ಅರಣ್ಯಗಳು ಹಣ್ಣು ಕೊಡುವ ಮರಗಳು, ಹಣ್ಣುಕಾಯಿಗಳು, ಭಿಕ್ಷುಕರು, ಬಂಜರು ಭೂಮಿಗಳು, ಆಳು ನೌಕರರು, ಸಾರಾಯಿ, ಹೊಲೆಯರ ಮಗ್ಗಗಳು, ದತ್ತಿ ಮಾನ್ಯಗಳು, ಚೌಳು ಮಣ್ಣು ಮತ್ತು ಎಣ್ಣೆಯವರೆಗೂ ಎಲ್ಲವೂ ಗುತ್ತಿಗೆಗೆ ಓಳಪಟ್ಟು
ತೆರಿಗೆಯ ವ್ಯಾಪ್ತಿಗೆ ಬರುವುದೆಂಬುದು ಈ ಕಾಲಜ್ಞಾನ ಶತಕದ ಮುನ್ಸೂಚನೆಯಾಗಿದೆ. ವಸಾಹತುಶಾಹಿ
ಆಡಳಿತ ದಲ್ಲಿನ ಆರ್ಥಿಕ ಸೂಕ್ಷ್ಮಗಳನ್ನು ನಾರಾಯಣತಾತನವರು ಹಾಗೆ ಮತ್ತೂಬ್ಬ ತತ್ವಪದಕಾರರು
ದಾಖಲಿಸಿಲ್ಲ.ಇನ್ನು ಕೆಲವು ಶತಕಗಳನ್ನು ನೋಡುವುದಾದರೇ ,
ವಾನರುಲ ವಸುಧ – ಪಾರನ ತೀರೇನು
ಇಕಮೀದ ಲೇದು – ವಚ್ಚೇನು ಅಂತ್ಯಂ
ಪಲಾಯನಮೈಪೊದುರು //
ತಮಲೋನೆ ತಮಕು ಕಲಹಮು ಪಡಿ
ಚತ್ತರು ಪರಂಗಿವಾರು – ಪಟ್ಟಮು ಪಾಡೌನು //
ಪಂಟ ಟಂಡಿನ ಕರುವು – ಪಂಟ ಯೆಂಡಿನ ಕರುವು
ಪ್ರಜಲೆಟ್ಲ ಬ್ರದಿಕೇರು – ಪ್ರಾಪಂಚಮುಂದು
ಶರಣುಲ ವಾಕ್ಯಾಲು – ಚೇರ್ಚ ವಚ್ಚೆನು ಸುಮೀ //
ಚೋರುಲ ಪಟ್ಟಂಬಾಯೆನು – ರಾಜೆವ್ವಡು ಲೇಕಪೋಯ
ರಾಜ್ಯಮು ಚೆಡೆರಾ – ದೊಂಗಲ ದೋಪೈಯುನ್ಶದಿ //
ವಿಪ್ರುಲ ಪಾಲಾಯ – ಇರಸಾಲು ನ್ಯಾಣಾಲು
ನಾಲ್ಗಿಂಟಿ ವಕಪಾಲು – ನಗರು ಚೇರು
ವ್ಯದವ ದೊರೆತನಮಾಯೆ – ಯೇಮನವಚ್ಚುರಾ
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ //
ಎಂಬ ಈ ಶತಕಗಳು – ಪರಂಗಿ ಕೋತಿಗಳ ಆಳ್ವಿಕೆ ಮುಗಿದು ಅವರ,
ಪಲಾಯನ ಮಾಡುವುದರೊಂದಿಗೆ, ತಮ್ಮಲೇ ಕಲಹವುಂಟಾಗಿ ಸಾಯುವವರೆಂದು ಬ್ರಿಟೀಷ್ ವಸಾಹತುಶಾಹಿಯ
ಬಗ್ಗೆಯೇ ನೇರವಾಗಿ ಕ್ರೋಧಪೂರಿತ ಭವಿಷ್ಯ ನುಡಿದಂತಿದೆ. ಬೆಳೆ ಬೆಳೆದರೂ ಕೃತಕ ಅಭಾವ ತಲೆದೋರಿ
ಪ್ರಜೆಗಳು ಬದುಕುವುದು ಕಷ್ಟವಾಗಬಹುದೆಂಬ ಶರಣರ ಮಾತುಗಳು ನಿಜವಾಗುತ್ತದೆಂಬುದು
ಮತ್ತೂಂದು ವಚನದ ಸಾರಾಂಶವಾಗಿದೆ .
ಇನ್ನೂಂದು ವಚನ ಕಳ್ಳರ ಪಾಲಾದ ರಾಜ್ಯಾಧಿಕಾರದ ಬಗ್ಗೆ ಹೇಳಿದರೆ ಕೊನೆಯ
ವಚನ ಕಂದಾಯವಾಗಿ ವಸೂಲಾಗಬೇಕಿದ್ದ ಹಣವನ್ನು ಬ್ರಾಹ್ಮಣರೇ ಲಪಟಾಯಿಸಿ,
ನಾಲ್ಕನೇ ಒಂದು ಭಾಗ ಮಾತ್ರ ಸರಕಾರಕ್ಕೆ ಸಂದಾಯವಾಗುವುದರಿಂದ ಅದು
ಅಯೋಗ್ಯರ ದೊರೆತನವಾಗುತ್ತದೆಂದಿದೆ.
ಇಷ್ಟೂ ವಚನಗಳು ವಸಾಹತುಶಾಹಿಯ ವಿವಿಧ ಮುಖಗಳನ್ನು ಅನಾವರಣ
ಗೊಳಿಸುವಂತಿದೆ. ಬ್ರಿಟಿಷರು
ಬಿಟ್ಟುಹೋದ ನಂತರವೂ ಉಳಿದೆಲ್ಲಾ ಪರಿಸ್ಥಿತಿಯೂ ಹಾಗೇ ಇರುವುದರಿಂದಲೇ ಇರಬೇಕು ಜನಪದರು ನಾರಾಯಣ ತಾತನವರ
ಇಂತಹ ವಚನಗಳನ್ನು ಮುಂಜಾನೆ ಮುತ್ಸಂಜೆಗಳಲ್ಲಿ, ಭಜನೆ ಗಳಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಹಾಡಿಕೊಳ್ಳುತ್ತಲೇ
ಇದ್ದಾರೆ. ಅವರದೇ ಸರಳ ಆಡು ಭಾಷೆಯಲ್ಲಿ ಪದ್ಯಗಳಿರುವುದರಿಂದ ಅವು ಸುಲಭಗ್ರಾಹ್ಯವೂ ಆಗಿವೆ.
ಕೈವಾರ ನಾರಾಯಣ ತಾತಯ್ಯನವರು ರಾಜಕೀಯವಾಗಿ ಹೆಚ್ಚು
ಕ್ಷೋಭೆಗೊಳಪಟ್ಟಿಲ್ಲದಿದ್ದರೂ ವಸಾಹತುಶಾಹಿಯ ನೇರ ಸಂಪರ್ಕಕ್ಕೆ ಹೇಗೂ ಸಿಕ್ಕಿಲ್ಲ ದಿದ್ದಂತಹ ಗಡಿ
ಪ್ರದೇಶದಲ್ಲಿದ್ದವರು, ಆದರೂ
ವಸಾಹತುಶಾಹಿ ಮತ್ತದರ ಆರ್ಥಿಕ ಪರಿಣಾಮಗಳ ಬಗ್ಗೆ ಆಡಿರುವ ಮಾತುಗಳು ನೊರೈವತ್ತು ವರ್ಷಗಳ ಹಿಂದಿನ
ದೇಸೀ ನೆಲೆಯ ಅತ್ಯಂತ ಶ್ರೇಷ್ಟ ಆರ್ಥಕ ಚಿಂತನೆಗಳೆಂದು ಕರೆಯಬಹುದಾಗಿದೆ.
ಆರ್ಥಿಕ ಮತ್ತು ರಾಜಕೀಯ ಚಿಂತನೆಗಳು
:
ವಚನ ಸಾಹಿತ್ಯದ ಮುಂದುವರೆದ ಕಾಲಘಟ್ಟವಾಗಿ ನಾವು ತತ್ವಪದ ಸಾಹಿತ್ಯವನ್ನು
ಹಾಗೂ ಆ ಕಾಲದ ಅಮರ ಕಲ್ಯಾಣ ಕ್ರಾಂತಿಯನ್ನು ನೋಡುವುದಾದರೇ, ಹೇಗೆ ವಚನ ಸಾಹಿತ್ಯದಲ್ಲಿ ಆಗಿನ ಕಾಲದ ಸಾಮಾಜಿಕ ತಾರತಮ್ಯಗಳು ನಿರ್ಭಿಡೆಯಿಂದ ವ್ಯಕ್ತವಾದವೂ, ಹಾಗೂ ಸಾಮಾಜಿಕ ಬದಲಾವಣೆಗೆ ಆ ಮೂಲಕ ಸಮಾನತೆಯ
ಸ್ಥಾಪನೆಗೆ ಕಾರಣವಾಯಿತೋ, ಹಾಗೂ ಆಧ್ಯಾತ್ಮಿಕ ರಂಗ
ಹಾಗೂ ರಾಜಕೀಯ ರಂಗವನ್ನು ವಿಮರ್ಶಿಸುವ ಕೆಲಸ ನಡೆಯಿತೋ ಅದೇ ರೀತಿಯಲ್ಲಿ ತತ್ವಪದ ಸಾಹಿತ್ಯದಲ್ಲಿಯೂ ಕೂಡಾ ಆಧ್ಯಾತ್ಮ ತತ್ವ ಗಳ ಜೊತೆ ಜೊತೆಯಲ್ಲಿಯೇ ಆ ಕಾಲದ
ರಾಜಕೀಯ ಮತ್ತು ಆರ್ಥಿಕ ಸನ್ನಿವೇಷಗಳನ್ನು, ರಾಜಕೀಯ ಮತ್ತು ಆರ್ಥಿಕ ಕಾರಣಗಳಿಗಾಗಿ ನಡೆಯುತ್ತಿದ ಅರಾಜಕತೆಯನ್ನು,
ದಬ್ಬಾಳಿಕೆ ದೌರ್ಜನ್ಯಗಳನ್ನು ತಮ್ಮ ಕೃತಿಗಳ ಮೂಲಕ ತತ್ವಪದಕಾರರು ವ್ಯಕ್ತ ಮಾಡಿರುವರು.
ಕರ್ನಾಟಕದ ತತ್ವಪದಕಾರರ ಪರಂಪರೆ ಬಹಳ ದೀರ್ಘವಾದದ್ದು, ನೆರೆಯ ಆಂಧ್ರ ಪ್ರದೇಶ,
ತಮಿಳುನಾಡು ಹಾಗೂ ಮಹಾರಾಷ್ಟ್ರಗಳಿಗೂ ಸಹಾ ನಮ್ಮ ತತ್ವಪದಕಾರರ, ವ್ಯಾಪ್ತಿ ಅಥವಾ ಪ್ರಭಾವ ಹಬ್ಬಿದೆ.
ಈ ಪರಂಪರೆಯಲ್ಲಿ ಬಹಳ ಪ್ರಮುಖರಾದವರು, ಕೈವಾರ ತಾತಯ್ಯನೆಂದೇ ಪ್ರಸಿದ್ಧವಾಗಿರುವ ಶ್ರೀ ಕೈವಾರ ಯೋಗಿ
ನಾರೇಣಪ್ಪನವರು. ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮವೇ ಇವರ ಕಾರ್ಯಕ್ಷೇತ್ರ,
ಕೈವಾರ ಗ್ರಾಮವು ಹಿಂದೆ ಏಕಚಕ್ರಪುರ ವೆಂಬ ಹೆಸರಿನಿಂದ ಬಹು ಪ್ರಸಿದ್ಧವಾದ ಸ್ಥಳವಾಗಿತ್ತೆಂದು ಇಲ್ಲಿನ
ಸ್ಥಳ ಪುರಾಣ ಹೇಳುತ್ತದೆ. ಕೈವಾರದಲ್ಲಿ ಭೀಮನಿಂದ ಬಕಾಸುರನ ವಧೆಯಾಯಿತೆಂದು, ಭೀಮ ಇಲ್ಲಿ ಒಂದು ಶಿವಾಲಯವನ್ನು
ನಿರ್ಮಿಸಿರುವನೆಂದು ಸಹಾ ಹೇಳಲಾಗುವುದು. ಅದಕ್ಕೆ ನಿದರ್ಶನವಾಗಿ ಕೈವಾರದಲ್ಲಿ ಭೀಮಲಿಂಗೇಶ್ವರ ದೇವಾಲಯವೂ
ಇದೆ.
ಇಂತಹಾ ಕೈವಾರ ಗ್ರಾಮದಲ್ಲಿ ಕೈವಾರ ನಾರೇಣಪ್ಪನವರು ತಮ್ಮ ತಪಸಿದ್ಧಿಯಿಂದ
ಹಲವಾರು ಪವಾಡಗಳನ್ನು ಮಾಡಿರುವರೆಂದು ಹೇಳಲಾಗುತ್ತದೆ. ಪ್ರಸ್ತುತ ಕೈವಾರ ನಾರೇಣಪ್ಪನವರನ್ನು ಒಬ್ಭ
ಪವಾಡ ಪರುಷನಾಗಿ ನೊಡುವುದಕ್ಕೆ ಬದಲಾಗಿ, ಅಕಾಲದ ಒಬ್ಬ ಬುದ್ಧಿಜೀವಿಯಾಗಿ, ಸಮಾಜ ಸುಧಾರಕನಾಗಿ ನೋಡಬೇಕಾದ
ಅವಶ್ಯಕತೆ ಹೆಚ್ಚಾಗಿದೆ. ಇಂತಹಾ ಪ್ರಯತ್ನಗಳನ್ನು
ಈಗಾಗಲೇ ಹಲವಾರು ಮಂದಿ ಚಿಂತಕರು ಹಾಗೂ ಸಂಶೋಧಕರು ಮಾಡುತ್ತಿದ್ದಾರೆ, ಅದರ ಒಂದು ಸಣ್ಣ ಪ್ರಯತ್ನ ಅಥವಾ
ಭಾಗವಾಗಿ ,ಕೈವಾರ ನಾರೇಣಪ್ಪನವರ ಕಾಲದಲ್ಲಿ ಇದ್ದ ರಾಜಕೀಯ ಹಾಗೂ ಆರ್ಥಿಕ ಸ್ಥಿತಿಗಳ ಕುರಿತು ಹಾಗೂ
ಒಬ್ಬ ಸಮಾಜಿಕ ನಾಯಕನಾಗಿ ನಾರೇಣಪ್ಪನವರು ಅವುಗಳನ್ನ ಎದುರುಗೊಂಡ ವಿಧವನ್ನು, ಆಗಿನ ಪರಿಸ್ಥಿತಿ ಕುರಿತು
ನಾರೇಣಪ್ಪನವರ ಚಿಂತನೆ ಅಥವಾ ದೃಷ್ಠಿಕೋನ ಏನು ಎಂಬುದನ್ನು ನಾರೇಣಪ್ಪನವರ ಕೃತಿಗಳ ಮೂಲಕ ಅರಿಯುವ ಕೆಲಸ ಅಥವಾ ಒಂದು ಯತ್ನವಾಗಿ ಪ್ರಸ್ತುತ
ಲೇಖನವನ್ನು ನೋಡಬಹುದಾಗಿದೆ.
ಇವುಗಳಲ್ಲಿ ಮುಖ್ಯವಾಗಿ ʼವೇದಾಂತ ಸಾರಾವಳಿʼ ಹಾಗೂ ʼಭೀಮಲಿಂಗೇಶ್ವರ
ಶತಕʼ ಮತ್ತು ʼಪ್ರಚಂಡ ನಾರೇಯಣ ಕವಿ ಶತಕʼ ಗಳಲ್ಲಿ ತಾತಯ್ಯನವರು ಆಗಿನ ಕಾಲದ ರಾಜಕೀಯ ಹಾಗೂ ಆರ್ಥಿಕ
ವಿಚಾರಗಳನ್ನು ಬಹಳ ಚೆನ್ನಾಗಿ ವ್ಯಕ್ತಮಾಡಿರುವರು.
ಆಗಿನ ಕಾಲದ ಐತಿಹಾಸಿಕ ಮತ್ತು ಸಾಮಾಜಿಕ ಅಧ್ಯಾಯನಕ್ಕೆ ಈ ಭಾಗ ಅತ್ಯಂತ ಉಪಯುಕ್ತವಾದದ್ದಾಗಿದೆ. ಇಲ್ಲಿ
ಕೇವಲ ಆಗಿನ ಕಾಲದ ವಿವರಗಳನ್ನು ವ್ಯಕ್ತ ಮಾಡಿರುವುದು ಅಷ್ಟೇ ಅಲ್ಲದೇ ಅವುಗಳನ್ನು ವಿಢಂಬನಾತ್ಮಕವಾಗಿ
ವಿವರಿಸಿರುವುದು ವಿಶೇಷವಾಗಿದೆ.
ವೇದಾಂತ ಸಾರಾವಳಿ ಕೃತಿಯಲ್ಲಿ ನಾರೇಣಪ್ಪನವರು ʼಇಂತಗವೇಡಿನ ನೇರಮುಲೆಂಚಕ
ಮನ್ನಿಂಚಿ ನಾ ವಿನ್ನಪಂಬು ವಿನರಾದ…..ʼ ಎಂಬ ಒಂದು ತೆಲುಗು ಕೀರ್ತನೆಯಲ್ಲಿ ಸ್ವತಃ ತಮ್ಮ ಪರಿಸ್ಥಿತಿಯನ್ನು
ಲಕ್ಷ್ಮೀ ದೇವಿಗೆ ನಿವೇದಿಸುವ ಚಿತ್ರಣ ಇದೆ. ಇಲ್ಲಿ ʼಆದಾಯವು ಬರಲಿಲ್ಲ ,ಸಾಲ ತೀರಲಲ್ಲ. ……… ಎಲ್ಲಿ
ಹೊಗಲಿ ನಾನು ಯೋಚನೆ ತೀರಲು….. ಆದಾಯವನಾದರ ಕೊಡಬಾರದೇ ಎನಗ….ʼ ಎಂದು ಹೇಳುವರು. ಇಲ್ಲಿ ಒಬ್ಬ ಸಾಮಾನ್ಯ
ಮನುಷ್ಯನ ಪರಿಸ್ಥಿತಿ ಯಾವ ರೀತಿ ಇದ್ದಿತ್ತು, ಎಂಬುದನ್ನು ನಾವು ಗುರುತಿಸಬಹುದು. ಮುಂದೆ ʼಸದ್ಗುರುಡು
ಯಿಚ್ಚೆರಾ ಸಮನಿ ಧನಮುʼ ಎಂಬ ಮತ್ತೊಂದು ಕೀರ್ತನೆಯಲ್ಲಿ , ಹಣದ ಮಿತಿಗಳನ್ನು , ಹೇಳುತ್ತಾ… ನಾನು
ಅದಕ್ಕಿಂತ ಮೀರಿದ ಸವೆಯದ ಧನವನ್ನು ಸದ್ಗುರುವಿನಿಂದ ಪೆಡದೆನೆಂದು ನಾರೇಣಪ್ಪನವರು ಹೇಳುತ್ತಾರೆ. ಹಣದ ಮಿತಿಗಳ ಅರಿವಿದ್ದೂ ಸಹಾ ಅದಕ್ಕಾಗಿ ಹಾತೊರೆಯುವ, ಸಾಲಮಾಡಿ
ಅದರ ಸುಳಿಗೆ ಸಿಲುಕುತ್ತಿದ ಜನರ ಭಾವನೆಯನ್ನು ಹಿಡಿದಿಡಲುವಲ್ಲಿ ಈ ಸಾಲುಗಳು ಯಶಸ್ವಿಯಾಗಿವೆ.
ಮುಂದೆ ಮತ್ತೊಂದು ಸೀಸ ಪದ್ಯದಲ್ಲಿ ನಾರೇಣಪ್ಪನವರು , ಬರಗಾಲವನ್ನು , ಬರಗಾಲದಿಂದ
ಆಗುವ ಹಾನಿಗಳನ್ನು, ಕಷ್ಟ ನಷ್ಟಗಳನ್ನು ವಿವರಿಸಿದ್ದಾರೆ.
ʼಅಷ್ಟದಿಕ್ಪಾಲರು ನೀವೇಲ್ಲರೂ ಅಧ್ಯಕ್ಷರಾಗಿ, ಮಳೆಗೆ ಏಕೆ ವಕ್ಕರಿಸಿದಿರಿ, ತೃಣದಷ್ಟು ನೀರಿಲ್ಲದೇ
ಗೋವುಗಳು ಹಾಗೂ ಫಲವೃಕ್ಷಗಳೆಲ್ಲಾ ಬಳಲಿ ಒಣಗಿ ಹೋಗಿರುವವು,
ಕೆರೆ ಕುಂಟೆಗಳ ನೀರೆಲ್ಲಾ ಇಂಗಿಹೋಗಿ, ಜಲಚರ ಜೀವಿಗಳೆಲ್ಲಾ ಹೊರಗೆ ಬಂದಿರುವವು. ಬೆಟ್ಟಗುಟ್ಟಗಳು
ಬೇಗೆಯಿಂದ ಬಹು ಜೀವರಾಶಿಗಳಿಗೆ ಬಹಳಾ ತೊಂದರೆಯಾಗಿದೆ. ಮಳೆಬರದೇ ಇದ್ದರೇ ಈಗ ಬಹು ಕೇಡಾಗುವುದು ನಮಗೆ………ʼ ಈ ಪದ್ಯದಲ್ಲಿ ನಾರೇಣಪ್ಪನವರಂತಹಾ ಸಾಮಾಜಿಕ ನಾಯಕರು ಆಗಿನ
ಕಾಲದ ಬರಗಾಲವನ್ನು ಯಾವ ರೀತಿ ನೋಡುತ್ತಿದ್ದರು, ಪ್ರಾಣಿ ಪಕ್ಷಿಗಳು, ಗೋವುಗಳ ಬಗ್ಗೆ ಅವರಿಗಿದ್ದ
ಕಾಳಜಿ, ಮಳೆ ಇಲ್ಲದೇ ಅವು ಕಷ್ಟ ಪಡುತ್ತಿದ್ದಾಗ ನಾರೇಣಪ್ಪನವು ಅವುಗಳ ಬಗ್ಗೆ ಮರುಗುವುದು ಇಲ್ಲಿ
ನೋಡಬಹುದು.
ಮುಂದೆ ʼಕೈಯಲ್ಲಿ ಒಂದು ಕಾಸು ಕಟ್ಟಿರುವವನಲ್ಲ ಸತ್ಯ ಈ ಮಾತು ಸಂಶಯವೇನು
ಇಲ್ʼ ಮತ್ತು ʼಈ ಊರವೊಳಗಿಷ್ಟು ಉತ್ಪಾತವೇನೋ ದುರಿತ ಸಂಹರ ನಾರೇಯಣ ಹರಿಯೇ ʼ ಎಂಬ ಎರಡು ಕನ್ನಡದಲ್ಲಿಯೇ
ರಚಿತವಾಗಿರುವ ಕೀರ್ತನೆಗಳನ್ನು ನೋಡುವುದಾದರೇ, ʼಕೈಯಲ್ಲಿ ಒಂದು ಕಾಸು ಕಟ್ಟಿರುವವನಲ್ಲ ಸತ್ಯ ಈ ಮಾತು
ಸಂಶಯವೇನು ಇಲ್ಲ… ಹೊದ್ದಿರುವುದೇ ವಸ್ತ್ರ ವಮ್ಮಾನಕಾಳಿಲ್ಲ, ಮತ್ತೇನು ವ್ಯವಸಾಯ ಮಾಡಲಿಲ್ಲ, ಹಿಂದೆ ಮಾಡಿದ ಸಾಲ ಇನ್ನ ತೀರಿಸಲಿಲ್ಲ, ಬಹಳ ಲಾಭವು ಮುಂದೆ ಬರತಕ್ಕದಿಲ್ಲ.
ʼಎಂದು ಹೇಳುವರು, ಇಲ್ಲಿನ ಮನುಷ್ಯನ ಸ್ಥಿತಿ ಹೇಗಿದೆಯಂದರೇ, ಅವನು ಹೊದ್ದಿರುವುದು ಒಂದೇ ವಸ್ತ್ರ
ಅವನ ಬಳಿ ಇದೆ, ಕಾಳು ಕಡಿಗಳು ಇಲ್ಲ, ವ್ಯವಸಾಯವನ್ನು ಮಾಡುವ ಅವಕಾಶವಾಗಲಿಲ್ಲ. ಹಿಂದೆ ಪಡೆದ ಸಾಲವು ಇನ್ನಾ ತೀರಿಲ್ಲ, ಮುಂದೆ ಸಾಲ ತೀರಿಸಬಹುದು
ಎಂದುಕೊಂಡರೆ, ಬಹಳ ಲಾಭ ಯಾವುದು ಮುಂದೆ ಬರುವ ನಿರೀಕ್ಷೆ ಇಲ್ಲ. ಇಂತಹಾ ಪರಿಸ್ಥಿತಿಯಲ್ಲಿಯೇ ಆಗಿನ
ಬಡ ಜನರು ತಮ್ಮ ತಮ್ಮ ಜೀವನವನ್ನೆಲ್ಲಾ ಕಳೆಯುತ್ತಿದ್ದುದನ್ನು ಈ ಸಾಲುಗಳು ನಿರ್ದೇಶಿಸಿದರೆ ಮುಂದಿನ
ಕೀರ್ತನೆ ಇಂತಹಾ ಪರಿಸ್ಥತಿಗೆ ಏನು ಕಾರಣ ಎಂಬುದನ್ನು ವಿವರಿಸುವ ಪ್ರಯತ್ನ ಮಾಡುತ್ತದೆ.
ʼಈ ಊರವೊಳಗಿಷ್ಟು ಉತ್ಪಾತವೇನೋ ದುರಿತ ಸಂಹರ ನಾರೇಯಣ ಹರಿಯೇ, ವಿಶ್ವಾಸ
ಘಾತುಕನು ಇಲ್ಲಿರುವ ಶಾನುಭೋಗ ಕೆಟ್ಟಮುಂಡೇ ಗಂಡ ಗುರಿಕಾರನೋ ʼ ಎಂದು ಹೇಳುವರು ಈ ಕೀರ್ತನೆಯಲ್ಲಿ
ನಾರೇಣಪ್ಪನವರು ಆಗಿನ ಕಾಲದ ಶಾನುಭೋಗರು ಗ್ರಾಮದ ಜನರನ್ನು ವಂಚಿಸುತ್ತಾ ಆ ಮೂಲಕ ಅವರು ಬಡವರಾಗಿಯೇ
ಉಳಿಯಲು ಕಾರಣ ನಾಗಿದನೆಂದು ಗುರುತಿಸಿ ಅವನನ್ನು ವಿಶ್ವಾಸ ಘಾತುಕನೆಂದು ಕರೆದಿರುವರು.
ಮುಂದೆ ಮತ್ತೊಂದು ಕೀರ್ತನೆಯಲ್ಲಿ ನಾರೇಣಪ್ಪನವರು ಆ ಕಾಲದಲ್ಲಿ ಜನರು ಹಲವು
ರೋಗರುಜಿನಗಳಿಗೆ ತುತ್ತಾಗುತ್ತಿದ ಬಗ್ಗೆ ವಿವರಗಳನ್ನು ನೀಡಿರುವರು. ʼಈ ದೇಹದಲ್ಲಿ ವಿಪರೀತ ಜ್ವರ
ಹುಟ್ಟಿ, ಯಾವ ಔಷಧದಿಂದಲೂ ಗುಣವಾಗುತ್ತಿಲ್ಲ…. ಅಕ್ಕಿ ,ಬೇಳೆ, ಉಪ್ಪು ಹುಳಿ ಕಾರಗಳ ಕಡು ಪಥ್ಯದಿಂದಲೂ
ಈ ಜ್ವರವು ಹೊಗುತ್ತಿಲ್ಲ. ಬಾಯಲ್ಲವೂ ಹುಳಿ ಹುಳಿಯಾಗಿದೆ,
ಹುಳಿಯನ್ನು ಹೊಗಲಾಡಿಸಲು ಎಲೆ ಅಡಿಕೆ ಹೊಗೆಸೊಪ್ಪನ್ನು ಬಾಯಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಆದರೂ
ಜ್ವರವು ಹೋಗುತ್ತಿಲ್ಲ. ಜ್ವರದಿಂದ ಬಾಯಿ, ಕಣ್ಣು, ಮೂಗು ಎಲ್ಲವೂ ಕೆಟ್ಟಿವೆ…..ʼ ಇಲ್ಲಿ ನಾರೇಣಪ್ಪನವರ
ಕಾಲದಲ್ಲಿ ಉಂಟಾಗುತ್ತಿದ ರೋಗಗಳ ಬಗ್ಗೆಗಿನ ವಿವರ ಹಾಗೂ ಅದಕ್ಕೆ ಸಂಭಂಧಿಸಿ ಅವರು ಮಾಡುತ್ತಿದೆ ಪಥ್ಯ,
ಚಿಕಿತ್ಸೆಗಳ ವಿವರಗಳನ್ನು ನಾವು ನೋಡಬಹುದು.
ನಾರೇಣಪ್ಪನವರು ತಮ್ಮ ʼನಾದ ಬ್ರಹ್ಮಾನಂದ ನಾರೇಯಣ ಕವಿ ಶತಕದಲ್ಲಿ, ಹೇಗೆ
ಗುರುಗಳು ಮಂತ್ರಿಗಳು ಹಾಗೂ ಅಧಿಕಾರಿಗಳೂ ದುರಾಶೆಯಿಂದ ನಡೆದುಕೊಳ್ಳುವರು ಹಾಗೂ ಅದರಿಂದ ಹೇಗೆ ರಾಜವಂಶಗಳು
ನಿರ್ನಾಮವಾದವು ಎಂಬುದನ್ನು ಐತಿಹಾಸಿಕ ಉದಾಹರಣೆಗಳ ಮೂಲಕ ನಾರೇಣಪ್ಪನವರು ವಿವರಿಸಿದ್ದಾರೆ. ʼದುರ್ಭೋದೆಯ
ಗುರುಗಳನ್ನು ನಂಬಿ, ದೇವತೆಗಳು ಕೆಟ್ಟರು, ಕೋಲಾರದ ಶೆಟ್ಟರು, ಚಿಕ್ಕಬಳ್ಳಾಪುರದ ದೊರೆಗಳು ಅಷ್ಟೇ
ಅಲ್ಲದೇ, ಸುಲ್ತಾನ ವಂಶವೇ ಇಂತಹಾ ದುರ್ಭೋದೆಯ ಗುರುಗಳಿಂದ ಕೆಟ್ಟು ಹೋಯಿತುʼ ಎಂದು ನಾರೇಣಪ್ಪನವರು
ಹೇಳಿರುವರು. ಮುಂದೆ ಪ್ರಧಾನಿಗಳು, ಮುಖ್ಯ ಅಧಿಕಾರಿಗಳು, ದೊರೆಗಳ ಭಯವಿಲ್ಲದೇ, ಶಾನುಭೋಗರಾದಿಯಾಗಿ
ಎಲ್ಲಾ ಅಧಿಕಾರಿ ವರ್ಗದವರೂ ಸಹಾ ಲಂಚಕ್ಕೆ ಕೈ ಒಡ್ಡುವವರೇ ಆಗಿದ್ದಾರೆʼ ಮೇಲಿನ ಎರಡು ಪದ್ಯಗಳಲ್ಲಿ
ನಾರೇಣಪ್ಪ ನವರು ಆಗಿನ ಕಾಲದ ರಾಜಕೀಯ ಪಲ್ಲಟಗಳು, ಹಾಗೂ ಅವುಗಳಿಗೆ ಕಾರಣಗಳನ್ನು ಹಾಗೂ ಹೇಗೆ ರಾಜ
ಮಂತ್ರಿಗಳಿಂದ ಹಿಡಿದು, ಶಾನುಭೋಗರವರೆಗೆ ಎಲ್ಲರೂ ಲಂಚಕ್ಕೆ ಆಸೆ ಪಟ್ಟು ಜನರನ್ನು ಶೋಷಣೆಗೆ ಒಳಪಡಿಸುತ್ತಿದರೆಂಬುದನ್ನು
ಇಲ್ಲಿ ಕಾಣಬಹುದು.
ಮುಂದುವರೆದು ಆಗಿನ ಕಾಲದ ರೈತರ ಪರಿಸ್ಥಿತಿಯನ್ನು ವಿವರಿಸುವ ಒಂದು ಪದ್ಯದಲ್ಲಿ,
ನಾರೇಣಪ್ಪನವರು ʼಬೆಳೆ ಬೆಳೆದರೂ ಬರ, ಬೆಳೆ ಒಣಗಿದರೂ ಬರ, ಪ್ರಜೆಗಳು ಪ್ರಪಂಚದಲ್ಲಿ ಹೇಗೆ ಬದುಕುವರು…….ʼ
ಇಲ್ಲಿ ರೈತರು ಬೆಳೆಗಳನ್ನು ಬೆಳೆದರೆ ಅದಕ್ಕೆ ಆಸೆ ಪರರಾದ ರಾಜರು ವಿಧಿಸುವ ಸುಂಕ ಕಟ್ಟಲಾರದೇ ರೈತರೆಲ್ಲಾ
ಮತ್ತೆ ತಾವು ಬೆಳೆದ ಬೆಳೆಯನ್ನು ಕಳೆದುಕೊಂಡು ಏನು ಇಲ್ಲದೇ ಆಗುವರು. ಒಂದು ವೇಳೆ ಬೆಳೆ ಬೆಳೆಯದಿದ್ದರೇ
ಆಗಲೂ ಸಹಾ ರೈತರಿಗೆ ಕಷ್ಟ ತಪ್ಪಿದ್ದಲ್ಲ. ಹೀಗೆ ರೈತರು ಬೆಳೆ ಬೆಳೆದರೂ ಬೆಳೆಯದಿದ್ದರೂ ಅವರ ಕಷ್ಟ
ತಪ್ಪಿದಲ್ಲ ಎಂಬದನ್ನು ನಾರೇಣಪ್ಪನವರು ವಿವರಿಸುವರು.
ಮುಂದೆ ರಾಜರು ಅಥವಾ ಅಧಿಕಾರಿಗಳು ಹೇಗೆ ಬೇರೆ ಬೇರೆ ಸುಂಕಗಳನ್ನು ವಿಧಿಸಿ
,ಗುತ್ತಿಗೆ ಕ್ರಮಗಳನ್ನು ಜಾರಿಗೆ ತಂದು ಹೇಗೆ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಈಡು ಮಾಡುವೆರೆಂಬುದನ್ನು
ʼಪಶುಗಳ ಮೇವು ಗುತ್ತಿಗೆಗೆ, ಹಸಿರು ಹುಲ್ಲು ಗುತ್ತಿಗೆಗೆ, ಫಲವೃಕ್ಷಗಳು ಗುತ್ತಿಗೆಗೆ, ಹೀಗೆ ಭಕ್ಷಕರು, ಬೀಡು, ಹಣ್ಣುಗಳು, ಮಗ್ಗಗಳು, ಸೇವಕರು,
ಎಲ್ಲಕೂ ಹೊಸ ಹೊಸ ಸುಂಕಗಳು ಏರ್ಪಡುವವವೆಂದು ನಾರೇಣಪ್ಪನವರು ವಿವರಿಸುವರು.
ಮುಂದುವರೆದು ನಾರೇಣಪ್ಪನವರು ತಮ್ಮ ʼಕಾಲಜ್ಞಾನ ಸೂಕ್ಷ್ಮ ಭೀಮಲಿಂಗ ಶತಕʼದಲ್ಲಿ
ಕಾಲಜ್ಞಾನವನ್ನು ಹೇಳುತ್ತಾ, ಆ ಕಾಲದಲ್ಲಿ ಚಾಲ್ತಿಯಲ್ಲಿದ ವಿವಿಧ ರೀತಿಯ ನಾಣ್ಯಗಳು ಅವುಗಳ ಬೆಲೆ,
ಮಾರುಕಟ್ಟೆ ವಿಧಾನ, ಲೇವಾದೇವಿ ವ್ಯವಹಾರ, ಹಾಗೂ ಕೆಲವು ಅಳತೆ ಮಾಪನಗಳ ವಿವರಗಳನ್ನು ಉಲ್ಲೇಖಿಸಿರುವರು
ಇವು ಬಹಳ ಮಹತ್ವಪೂರ್ಣವಾದ ಉಲ್ಲೇಖಗಳಾಗಿದ್ದು, ಇವನ್ನು ಗಮನಿಸುವುದಾದರೇ, ʼಮುಂದೆ ಒಂದು ಖಂಡುಗಕ್ಕೆ
ಗುತ್ತಿಗೆಯು ನಾಲ್ಕನೇ ಒಂದು ಭಾಗವಾಗುವುದು, ರೈತರು ಕೊನೆಯ ನಾಲ್ಕನೇ ಒಂದು ಪಾಲನ್ನು ಗುತ್ತಿಗೆಗೆ
ನಿರ್ಣಯಿಸಿ ಪೂರ್ಣಫಲವನ್ನು ಅನುಭವಿಸುವರು. ʼಮುಂದೆ ಹೆಸರಿಗೆ ಬದಲಾಗಿ ಮುದ್ರೆಯ ಅಂಕಿತವುಳ್ಳ ಬಂಗಾರದ
ಹಾಗೂ ಬೆಳ್ಳಿಯ ನಾಣ್ಯಗಳು ಚಲಾವಣೆಗೆ ಬರುವವು, ರೂಪಾಯಿಯ ಕಾಲು ಬೆಲೆಯ ʼರೂಕʼ ಮತ್ತು ಪೂರ್ಣ ಬೆಲೆಯ
ʼವರಹʼ ಗಳು ಚಾಲ್ತಿಗೆ ಬರುವವು. ಚಕ್ರ ಸ್ಥಂಭ ದ ಚಿಹ್ನೆಯುಳ್ಳ ನಾಣ್ಯಗಳು ಚಲಾವಣೆಗೆ ಬರುವವು, ಹಾಗೂ
ʼರೂಕʼ ಆರಕ್ಕೆ ರೂಪಾಯಿ ಒಂದು ಆಗುತ್ತದೆʼ ಈ ಎರಡು ಹೇಳಿಕೆಗಳು ಆಗಿನ ಕಾಲದ ಸುಂಕದ ವಿವರಗಳನ್ನು ಹಾಗೂ
ನಾಣ್ಯಗಳು ಹಾಗೂ ಅವುಗಳ ಮೌಲ್ಯಗಳ ಬಗ್ಗೆ ವಿವರಿಸುವವು.
ಮುಂದಿನ ಪದ್ಯದಲ್ಲಿ ನಾರೇಣಪ್ಪನವರು ಲೇವಾದೇವಿ ಪದ್ಧತಿಗೆ ಸಂಬಂಧಿಸಿ ವಿವರಗಳನ್ನು
ಹೇಳುತ್ತಾ, ʼನೂರು ವರಹಗಳಿಗೆ ತಿಂಗಳ ಬಡ್ಡಿ (ಒಂದು ರೂಕ ವರಹದ ಕಾಲು ಬೆಲೆಯ ನಾಣ್ಯ) ,ಎಂದು ಹೇಳುವರು. ನಾರೇಣಪ್ಪನವರು ಈ ವಿವರಗಳನ್ನ ಕಾಲಜ್ಞಾನ
ಹೇಳುವ ಸಂಧರ್ಭದಲ್ಲಿ ಹೇಳಿದ್ದು, ಈ ವಿವರಗಳು ಹಿಂದೇ ಇದೇ ರೀತಿ ಇದ್ದವೆಂದು ಹೇಳಲು ಕಷ್ಟಸಾಧ್ಯ.
ಬಹುಷಃ ಮುಂದೆ ಇಂತಹಾ ಕಾಲ ಬರುವುದೆಂಬ ನಿರೀಕ್ಷೆಯಲ್ಲಿ ಹೇಳಿರಬಹುದು ಅಥವಾ ಅಂತಹಾ ಕಾಲ ಬಂದರೆ ಜನರು
ಸುಖ ನೆಮ್ಮದ್ಧಿಗಳಿಂದ ಇರುವರೆಂದು ನಾರೇಣಪ್ಪನವರು ಭಾವಿಸಿರಬಹುದು, ಅಥವಾ ಯಾವುದೋ ಒಂದು ಕಾಲಕ್ಕೆ
ಇಂತಹಾ ಪರಿಸ್ಥಿತಿ ಕೆಲವು ಕಾಲ ಬಂದು ಹೋಗಿರಲೂಬಹುದು, ಆದರೆ ಈ ಲೇಖನದಲ್ಲಿ ನಾವು ಆಗಿನ ಕಾಲದ ಅಳತೆ ಮಾಪನಗಳ ಉಲ್ಲೇಖಗಳನ್ನು
ಮಾತ್ರವೇ ಗಮನಿಸುತ್ತಿದ್ದೇವೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುಂದುವರೆಯಬೇಕಾಗಿದೆ.
ಮುಂದುವೆರೆದು ನಾರೇಣಪ್ಪನವರು ಆ ಕಾಲದಲ್ಲಿ ಸುಂಕ ವಸೂಲು ಮಾಡುತ್ತಿದ್ದ
ಗ್ರಾಮದ ರೆಡ್ಡಿ, ಪಟೇಲ, ಕರಣಿಕ, ತೋಟ ಮತ್ತು ತಳವಾರರು ಜನರಿಂದ ಸುಂಕ ವಸೂಲು ಮಾಡಿ ಅಧಿಕಾರಿಗಳಿಗೆ
ತಲುಪಿಸುತ್ತಿದ ವಿಚಾರವನ್ನು ಉಲ್ಲೇಖ ಮಾಡಿರುವರು, ,ಮುಂದು ವರೆದು ನಾರೇಯಣಪ್ಪ ಹೇಗೆ ರಾಜರು ಅಧಿಕಾರಿಗಳು
ರಾಜರನ್ನು ವಂಚಿಸುವರು ಮತ್ತು ರಾಜರಲ್ಲಿ ಧುರ್ಭುದ್ಧಿ ಹುಟ್ಟಿ ಅವರು ಅವಸಾನ ಹೊಂದುವರು ಎಂಬುದನ್ನು
ತಾತಯ್ಯನವರು ವಿವರಿಸುವರು.
ʼವಿಪ್ರರ ಪಾಲಾಯ್ತು, ಇರಸಾಲು ನಾಣ್ಯಗಳು, ಒಟ್ಟು ಶೇಖರಣೆಯಾದ ಸುಂಕದಲ್ಲಿ
ನಾಲ್ಕನೇ ಒಂದು ಪಾಲು ಮಾತ್ರ ಅರಮನೆಗೆ ಸೇರುವುದುʼ
ಇದನ್ನು ಕೇಳುವವರಿಲ್ಲದೇ ರಾಜರು ಸಹಾ ʼಕೇಡುಗಾಲಕ್ಕೆ
ಕೆಟ್ಟ ಯೋಚನೆಯೇ ಉಂಟಾಗುವುದು ಎಂಬಂತೆ ರಾಜರಿಗೂ ದುರ್ಭುದ್ಧಿ ಹುಟ್ಟಿ ಅವರೂ ಸಹಾ ಕೆಟ್ಟರು, ನಂತರದಲ್ಲಿ
ರಾಜ್ಯವು ʼಚೋರರ ಪಟ್ಟಣವಾಗುವುದು, ರಾಜನ್ಯಾರು ಇಲ್ಲದೇ ಹೊಯಿತು. ರಾಜ್ಯವು ಕೆಟ್ಟು ಕಳ್ಳರಿಂದ ಲೂಟಿಗೆ
ಒಳಗಾಯಿತುʼ ಎಂದು ನಾರೇಣಪ್ಪನವರು ಹೇಳಿರುವರು. ಈ
ಉಲ್ಲೇಖಗಳ್ಳೆಲ್ಲವೂ ಯಾವುದೋ ಒಂದು ರಾಜ ಮನೆತನದ ಅವಸಾನದ ಕತೆಯನ್ನು ಗಮನದಲ್ಲಿಟ್ಟುಕೊಂಡು ಹೇಳಿದಂತಿದೆ.
ಪ್ರಜೆಗಳ ಕಷ್ಟಗಳು, ರೈತ ಕಾರ್ಮಿಕರ ಕಷ್ಟಗಳು, ಹಾಗೂ ಆಗಿನ ಕಾಲದ ಆರ್ಥಿಕ
ಪದ್ಧತಿಗಳು, ಅಳತೆ ಮಾಪನ, ಸುಂಕ, ಇತ್ಯಾದಿ ಉಲ್ಲೇಖಗಳ ಜೊತೆಗೆ ನಾರೇಣಪ್ಪನವರು ಒಂದು ಆದರ್ಶ ರಾಜ್ಯದ
ಪರಿಕಲ್ಪನೆಯನ್ನು ತಮ್ಮ ಕಾಲಜ್ಞಾನ ಪದ್ಯಗಳ ಮೂಲಕ ನಮ್ಮ ಮುಂದಿಡುವ ಪ್ರಯತ್ನ ಮಾಡುವರು. ಒಟ್ಟು ಭೂಮಿಯ
ನಾಲ್ಕನೇ ಒಂದು ಪಾಲು ದನಗಳ ಮೇವಿಗೆ ಬಿಡುವ ಹುಲ್ಲುಗಾವಲಿಗೆ ಬಿಡುವುದು, ಅನ್ನ ಛತ್ರಗಳನ್ನು ಸ್ಥಾಪಿಸುವುದು
ಮುಂತಾದ ವಿವರಗಳನ್ನು ನಾರೇಣಪ್ಪನವರು ನೀಡುವರು.
ಮುಂದುವರೆದು, ಹತ್ತಿ, ಜವಳಿ, ಮತ್ತು ಒಡವೆಗಳ ಮೇಲೆ ಒಂದು ದುಡ್ಡು ಸುಂಕ
ಕೊಡಬೇಕು, ಅಡಕೆ ಒಂದು ಮೂಟೆಗೆ ಎಂಡನೇ ಒಂದು ಬೆಲೆಯ ನಾಣ್ಯ ʼಪರಕʼ ವನ್ನು ಸುಂಕವಾಗಿ ನೀಡಬೇಕು, ಉಪ್ಪಿನ
ಮೂಟೆಗೆ ಒಂದು ಶೇರು ಸುಂಕ ನೀಡಬೇಕು, ವೀಳ್ಯದೆಲೆಗೆ ಒಂದು ಮಕ್ಕರಿಗೆ ಅರ್ಧ ಕಟ್ಟಿನ ಸುಂಕ, ಇವನ್ನು
ಕೊಳ್ಳುವ ವರ್ತಕನು ಜನರಿಂದ ಪಡೆದು ನಗದನ್ನು ಸರ್ಕಾರಕ್ಕೆ ಸಲ್ಲಿಸುವುದು ಹಾಗೂ, ಧಾನ್ಯಗಳ ರೂಪದಲ್ಲಿ
ಬರುವ ಸುಂಕವನ್ನು ಸಂಪೂರ್ಣವಾಗಿ, ಧೀನ ದಲಿತರ, ಕಾರ್ಮಿಕರ, ರೈತರ, ಸೈನಿಕರ ಉಪಯೋಗಕ್ಕಾಗಿ ವಿನಿಯೋಗಿಸಬೇಕು.
ದಿಕ್ಕಿಲದೇ ತಿರುಗುವ ಧೀನ ದಲಿತರಿಗೆ ಅನ್ನ ಛತ್ರಗಳ ನಿರ್ಮಾಣ, ದೇವಾಲಯ,
ಮಸೀದಿ ಮುಂತಾದವುಗಳ ನಿರ್ಮಾಣ ಆ ಮೂಲಕ ಸರ್ವ ಧರ್ಮಗಳ ಪೋಷಣೆ ಮಾಡುವುದು, ಸಾರಾಯಿ ಹೆಂಡ ಭಂಗಿಗಳ ಮುಟ್ಟುಗೋಲು ಹಾಕಿಕೊಂಡು, ರಾಜ್ಯಪರಿಪಾಲನೆ
ಮಾಡಬೇಕೆಂದು ನಾರೇಣಪ್ಪನವರು ಹೇಳುವರು. ಮುಂದುವರೆದು ಒಬ್ಭ ಆದರ್ಶ ರಾಜನ ದಿನಚರಿ ಹೇಗಿರಬೇಕೆಂಬುದನ್ನು
ಸಹಾ ವಿವರಿಸಿದ್ದಾರೆ.
ಗ್ರಂಥ ಋಣ:
೧) ಶ್ರೀ ಯೋಗಿ ನಾರೇಯಣ ಯತೀಂದ್ರರು: ‘’ಕಾಲಜ್ಞಾನ ಮತ್ತು ನಾದ
ಬ್ರಹ್ಮಾನಂದ ನಾರೇಯಣ ಕವಿ ಶತಕ’’ ;ಶ್ರೀ ಯೋಗಿ ನಾರೇಯಣ ಯತೀಂದ್ರರ
ಆಶ್ರಮ ಟ್ರಸ್ಟ –ಕೈವಾರ: 1982.
೨) ಶ್ರೀ ಯೋಗಿ ನಾರೇಯಣ ಯತೀಂದ್ರರು: ‘’ಶ್ರೀ ಅಮರ ನಾರೇಯಣ
ವೇದಾಂತ ಸಾರಾವಳಿ’’ (ಕೀರ್ತನೆಗಳು) ; ಶ್ರಿ
ಯೋಗಿ ನಾರೇಯಣ ಯತೀಂದ್ರರ ಆಶ್ರಮ ಟ್ರಸ್ಟ- ಕೈವಾರ: 1998.
೩) ಶ್ರೀ ಯೋಗಿ ನಾರೇಯಣ ಯತೀಂದ್ರರು: ‘’ಕಾಲಜ್ಞಾನ – ಭವಿಷ್ಯವಾಣಿ’’ ;ಶ್ರೀ ಯೋಗಿ ನಾರೇಯಣ ಮಠ -ಕೈವಾರ :2013
೪) ಬಸವರಾಜ ಸಬರದ ‘ಹೈದರಾಬಾದ್ ಕರ್ನಾಟಕದ ತತ್ತ್ವಪದಗಳು’.
೫) ಎಚ್. ಎಸ್.
ಶಿವಪ್ರಕಾಶ್ ‘‘ಎಲ್ಲ ಜಾತಿಯ ಮರಗಳು ಕಾಡು’’ (ಲೇಖನ ಸಂಗ್ರಹ).
೬) ಎಂ.ಡಿ. ಒಕ್ಕುಂದ ‘’ತತ್ವಪದ ಸಾಹಿತ್ಯ ಸಂಪಾದನೆಯ ಪ್ರಸ್ತುತತೆ’’(ಲೇಖನ ಸಂಗ್ರಹ)
೭) ಡಾ.ಪ್ರಕಾಶ ಗ ಖಾಡೆ
‘’ಕನ್ನಡ ತತ್ತ್ವಪದ ಸಾಹಿತ್ಯ :ಜಾನಪದ,ಅನುಭಾವ ಮತ್ತು ಆಧ್ಯಾತ್ಮದ
ಮೇರುನಿಧಿ’’(ಲೇಖನ ಸಂಗ್ರಹ)
೮) ರಂಗನಾಥ ಕಂಟನಕುಂಟೆ ‘’ ‘ಕಗ್ಗತ್ತಲೆಯ ಕಾಲ’ದಲ್ಲಿ ಬೆಳಕಿಗಾಗಿ ಹಂಬಲಿಸಿದ ತತ್ವಪದ ಸಾಹಿತ್ಯ’’ (ಲೇಖನ ಸಂಗ್ರಹ)
೯) ಡಾ. ಶಶಿಕಾಂತ ಪಟ್ಟಣ
‘’ ವಚನಗಳು ಜಗತ್ತಿನ ಮೊದಲ ದೇಸಿ ಸಾಹಿತ್ಯ ‘’ (ಲೇಖನ
ಸಂಗ್ರಹ)
೧೦) ಎಚ್ . ತಿಪ್ಪೇರುದ್ರಸ್ವಾಮಿ ‘’ಕನ್ನಡದಲ್ಲಿ ಅನುಭಾವ ಸಾಹಿತ್ಯ’’ ಮೈಸೂರು ವಿಶ್ವವಿದ್ಯಾಲಯದ- ಮೈಸೂರು:1962.
೧೧) ಡಾ.ಎಸ್ .ತಿಪ್ಪೇರುದ್ರಸ್ವಾಮಿ ‘’ಕನ್ನಡದಲ್ಲಿ
ಕೈವಲ್ಯ ಸಾಹಿತ್ಯ’’ ;ಚಿತ್ತರಗಿ ಶ್ರೀ ವಿಜಯ ಮಹಂತೇಶ್ವರ ಧರ್ಮ
ಪ್ರಸಾರಕ ಮಂಡಳಿ- ಚಿತ್ತರಗಿ
೧೨) ಅಂತರ್ಜಾಲ ಮೂಲ.
---------------------------------------------------------------------------------------------------------------------------------------------------------------------------------------------
ಶ್ರೀ ಕೈವಾರ ನಾರೇಣಪ್ಪನವರು. ಚಿತ್ರ ಕೃಪೆ : ಅಂತರ್ಜಾಲ.
ವರುಣ್ ರಾಜ್ ಜೀ
#೯೪೪೮೨೪೧೪೫೦.

Comments
Post a Comment